ಕನಸುಗಳು ಅತೃಪ್ತರ ಸ್ವತ್ತು
ಪ್ರಸನ್ನ ಚಲಂ
ಅನಿಸಿದ್ದು ಹೇಳಬೇಕೆಂದರೆ ಒಂದೇ ಸಾಲಿನಲ್ಲಿ ಇತಿಹಾಸವನ್ನು ಬರೆಯುವಂತಿರಬೇಕು. ಹಿಂದಿನ ರಾಜಾರಾಣಿಯರ, ಮೆರೆದ ಸರ್ವಾಧಿಕಾರಿಗಳ, ಬದುಕಿನ ಬಗ್ಗೆ ಮಾತನಾಡಿದ ಮೇದಾವಿಗಳ, ಬೀದಿ ಬದಿಯಲ್ಲಿ ಚಿನ್ನವಜ್ರ ಮಾರುತ್ತಿದ್ದವರ, ಊರ ಕೊಳ್ಳೆ ಹೊಡೆದವರ ಬಗ್ಗೆ ಮಾತನಾಡಲೇಬಾರದು.

ಇತಿಹಾಸ ನನ್ನ ಹುಟ್ಟಿನಿಂದ ಶುರುವಾಗುತ್ತದೆ. ನಾನು ತುಂಬಾ ಅಳುತ್ತಿದ್ದೆ. ಅದನ್ನು ನೋಡಿ ದಾದಿ ತುಂಬಾ ಚುರುಕಾಗುತ್ತಾನೆ ಅಂದಳು. ಅಮ್ಮನ ಮೊಲೆಗೆ ಆತುಗೊಂಡು ಸಮೃದ್ದಿಯಾದ ತನುವು ನಿದ್ದೆಗೆ ಜಾರುತ್ತದೆ. ನಿದ್ದೆಯಲ್ಲಿ ಅಣ್ಣಗೆ ನಕ್ಕದ್ದನ್ನು ಅಮ್ಮನೋಡಿದ್ದಾಳೆ. ನಾ ಕಂಡ ಕನಸುಗಳಿಗೆ ಅವಳು ರೂಪಕೊಡುತ್ತಾಳೆ. ನನ್ನ ಪ್ರಕಾರ ಆಗ ನನಗೆ ಕನಸು ಬೀಳಲು ಸಾದ್ಯವೇ ಇಲ್ಲ.ಕನಸುಗಳು ಅತೃಪ್ತರ ಸ್ವತ್ತು. ಆಗ ತೃಪ್ತಿಯ ಮೊತ್ತವಾಗಿದ್ದ ನನಗೆ ಕನಸು ಬಿದ್ದಿರಲಿಕ್ಕಿಲ್ಲ. ಹಾಗಾದರೆ ನಕ್ಕಿದ್ದು ಯಾಕೆಂದು ಕೇಳಬೇಡಿ. ನನ್ನಇತಿಹಾಸದಲ್ಲಿ ವಿವರಣೆಗಳಿಲ್ಲ.
ನಾನು ಆಡಿ ಬೆಳೆದು ದೊಡ್ಡವನಾದೆ. ಅದರಲ್ಲಿ ಹಣ್ಣುಗಳನ್ನು ಕದ್ದು ಕೊಯ್ದು ತಿಂದದ್ದು, ಗೋಲಿ ಆಟದಲ್ಲಿ ಅಮೂಲ್ಯವಾದ ಬಿಳಿಗೋಲಿಯನ್ನು ಕಳೆದುಕೊಂಡದ್ದು, ಸೈಕಲನ್ನು ಕಲಿಯಲು ಯಾರೂ ಸೈಕಲ್ಲನ್ನೇ ಕೊಡದೇಹೋದದ್ದು, ಅದೆಷ್ಟೆ ಪ್ರಯತ್ನ ಮಾಡಿದರೂ ಹತ್ತನೇ ತರಗತಿಯಲ್ಲಿ ಕೇವಲ ನಾನೂರೇ ಅಂಕ ತೆಗೆಯಲುಸಾದ್ಯವಾಗಿದ್ದು ಇವೆಲ್ಲಾ ಇತಿಹಾಸವಾಗಬಾರದು. ಇತಿಹಾಸವೆಂದರೆ ನಾನು ದೊಡ್ಡವನಾಗಿದ್ದಷ್ಟೇ!
ಇತಿಹಾಸದಲ್ಲಿ ಅವಳನ್ನು ಮನಸ್ಸಿನಲ್ಲೇ ಆರಾದಿಸಿದ್ದು, ಒಂದೇ ಒಂದು ಸಾರಿ ನನ್ನನ್ನು ನೋಡಿ ನಕ್ಕಾಗ ನಾನು ಖಾಯಿಲೆ ಬಿದ್ದಂತಾಗಿದ್ದು, ಅವಳು ನಕ್ಕು ಒದು ವಾರಕ್ಕೇ ಅವನೊಂದಿಗೆ ಮದುವೆಯಾದ ಸುದ್ದಿ ಬಂದು ಎಲ್ಲವನ್ನು ಕಳೆದುಕೊಂಡಂತೆ ಎಲ್ಲರ ಅನುಕಂಪಕ್ಕಾಗಿ ಹಪಹಪಿಸಿದ್ದು ಯಾವುದೂ ಇರಬಾರದು. ಅವಳ ನವಿರಾದ ಬೆವರ ವಾಸನೆಯಲ್ಲಿ ಇತಿಹಾಸ ಮುಳುಗಬಾರದು. ಕೆಲಸ ಸಿಗಲಿಲ್ಲ ಅಂತಾ ಮನೆಯಲ್ಲೇ ಕುಳಿತವನಿಗೆ ಮನದಲ್ಲೊಂದು ಹುಣ್ಣಾಗಿ ಅದನ್ನುಕೆರೆದುಕೊಳ್ಳುತ್ತಲೇ ಅಪ್ಪನ ಎದುರಿಗೆ ಆಸ್ತಿಯಲ್ಲಿ ಪಾಲು ಕೇಳಿದ್ದು, ಪಾಲು ಕೇಳಿದ್ದೇ ನೆಪ ಮಾಡಿಕೊಂಡು ಮದುವೆ ಮಾಡಿದ್ದು, ಹೆಂಡತಿಯಾಗಿ ಬಂದವಳು ನನಗೂ ಕನಸುಗಳಿವೆ ಅಂದದ್ದು, ಅವಳ ಕನಸುಗಳನ್ನು ಹಾಗೇ ಪೋಷಿಸುತ್ತಾ ಅವಳ ನೆಕ್ಲೇಸನ್ನು ಅಡವಿಟ್ಟಿದ್ದು, ಅವಳು ಸಿಡುಕಿ ತವರಿಗೆ ಹೋದದ್ದು, ಆಸ್ತಿಯಲ್ಲಿ ಬಂದ ಪಾಲನ್ನು ಅಡವಿಟ್ಟು ಅವಳನ್ನು ಕರೆತಂದು ಮಕ್ಕಳು ಮಾಡಿದ್ದು,ಅವೂ ಕೂಡ ಅಳುತ್ತಲೇ ಹುಟ್ಟಿದ್ದು, ದಾದಿಯೊಬ್ಬಳು ಚುರುಕಾಗುತ್ತವೆ ಅಂದದ್ದು, ಹಾಗೇ ನಿದ್ದೆ ಮಾಡಿದ ಬಳಿಕ ನಾ ನೋಡಿದಾಗ ಅವು ನಕ್ಕಿದ್ದು, ನಾನು ಅವುಗಳಿಗೆ ರೂಪ ಕೊಡತೊಡಗಿದ್ದು ಇತಿಹಾಸವಾಗಬಾರದು.
ಇತಿಹಾಸವೆಂಬುದು ಒಂದೇ ಒಂದು ಸಾಲಿನಲ್ಲಿರಬೇಕು……ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ. ನನ್ನ ಮಾತು ನಿನ್ನ ತಲುಪದ ಹಾಗೆ.







…ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ. ನನ್ನ ಮಾತು ನಿನ್ನ ತಲುಪದ ಹಾಗೆ…..excellent…
ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ. ನನ್ನ ಮಾತು ನಿನ್ನ ತಲುಪದ ಹಾಗೆ ! what a thought !!!!!!! lovely !
ಹೇಗೆಂದರೆ ನಿನ್ನ ಮೌನ ನನಗೆ ಕೇಳಿಸದ ಹಾಗೆ. ನನ್ನ ಮಾತು ನಿನ್ನ ತಲುಪದ ಹಾಗೆ………….. really a touching line..
ಇತಿಹಾಸ ಯಾರಿಗೂ ಕೇಳದ ಹಾಗೆ ದಾಖಲಾಗದಂತೆ ಮಾತುಗಳಲ್ಲಿ ಹೂತಿದೆ, ಒಂದೇ ಸಾಲಿನಲ್ಲಿರಬೇಕಾದ ಇತಿಹಾಸ ಕಾಡುವಂತೆ ಬರೆದಿದ್ದೀರಿ, ಇಷ್ಟವಾಯಿತು.
ಕನಸುಗಳು ಅತೃಪ್ತರ ಸ್ವತ್ತು ..nice