’ಹೆಸರಿನ ಹಿಂದಿನ ಕತೆಗಳು’ – ಸ್ಮಿತಾ ಅಮೃತರಾಜ್

IMG-20150803-WA0033

– ಸ್ಮಿತಾ ಅಮೃತರಾಜ್

ಚರ,ಸ್ಥಿರ,ಜೀವ,ನಿರ್ಜೀವ ಹೀಗೆ ಯಾವುದೇ ವಸ್ತುಗಳು ಆಗಿರಲಿ ಅವುಗಳಿಗೊಂದು ಹೆಸರಿಟ್ಟು ಆ ಹೆಸರಿನ ಮೂಲಕ ಅವುಗಳನ್ನು ಗುರುತಿಸುವುದು ರೂಡಿಯಾಗಿ ಬೆಳೆದುಕೊಂಡು ಬಂದ ಪದ್ಧತಿ.ಆದರೆ ತಮಾಷೆಯ ಸಂಗತಿಯೆಂದರೆ ಕೆಲವೊಮ್ಮೆ ಪ್ರತಿಯೊಂದು ಹೆಸರಿನ ಹಿಂದೆ ಅದರದೇ ಆದ ಸ್ವಾರಸ್ಯಕರವಾದ ಕತೆಗಳಿರುತ್ತವೆ.ಒಕ್ಕುತ್ತಾ ಹೋದರೆ ಪುಂಖಾನುಪುಂಖ ಕತೆಗಳು ದಾರದಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ನಮ್ಮ ಅಜ್ಜಿಯ ಮನೆಯಲ್ಲೊಂದು ನಾಯಿ ಇತ್ತು.ಅದರ ಹೆಸರು ಸುಬ್ಬಯ್ಯ ಅಂತ. ನಾಯಿಗಳಿಗೆ ಟಾಮಿ,ಜಿಮ್ಮಿ,ಟೈಗರ್ ಹೀಗೆ ತರಾವರಿ ಹೆಸರಿಡುವುದನ್ನು ನಾವು ಕೇಳುತ್ತಾ ಬಂದಿದ್ದೇವೆ. ಆದರೆ ಮನುಷ್ಯನ ಹೆಸರಿರುವ ನಾಯಿಯ ಹೆಸರು ಕೇಳಿದ್ದು ನಾನು ಅದೇ ಮೊದಲು.ಮನೆಯವರೆಲ್ಲರೂ ಆ ನಾಯಿಯನ್ನ ಸುಬ್ಬಯ್ಯ ..ಸುಬ್ಬಯ್ಯ ಅಂತ ದಿನನಿತ್ಯ ಕರೆಯುವುದ ಕೇಳಿ ಕೇಳಿ ಅಭ್ಯಾಸವಾಗಿಬಿಟ್ಟಿತ್ತು.ಹಾಗಾಗಿ ಆ ಹೆಸರು ಅದಕ್ಕೆ ಅಸಂಬದ್ಧ ಅಥವ ಅಸಂಮಂಜಸ ಅಂತೇನು ಯಾರಿಗೂ ಅನ್ನಿಸುತ್ತಿರಲಿಲ್ಲ. ಅಭ್ಯಾಸವಾಗಿಬಿಟ್ಟರೆ ಅಸಹಜ ಅಂತನ್ನಿಸುವುದು ಕೂಡ ಸಹಜವಾಗಿ ಗೋಚರಿಸುವುದಕ್ಕೆ ಇದೊಂದು ಉದಾಹರಣೆಯೇನೋ.ಆದರೆ ಆ ನಾಯಿಯ ನಾಮದ ನಾಮಕರಣದ ಹಿಂದಿನ ಕತೆ ಮಾತ್ರ ತುಂಬಾ ರೋಚಕವಾದದ್ದು.
ಅಜ್ಜಿಯ ಮನೆಯಲ್ಲಿದ್ದ ಒಂದೇ ಒಂದು ಕೆಂಪು ಜಿಮ್ಮಿ ನಾಯಿ, ಅಜ್ಜ ಆಗಿ ಕಜ್ಜಿ ಹಿಡಿದು ತೀರಿ ಹೋದ ಮೇಲೆ ಮನೆಯಲ್ಲಿ ನಾಯಿಯೇ ಇರಲಿಲ್ಲವಂತೆ. ಮನೆ ಕಾವಲಿಗೊಂದು ಜಿಮ್ಮಿಯಂತದ್ದೇ ಕೆಂಚು ಬಣ್ಣದ ನಾಯಿ ಮರಿ ಬೇಕೆಂದು ಹಂಬಲಿಸಿ ಹುಡುಕಿದರೂ ಎಲ್ಲಾ ಕಡೆ ಬಿಳಿ ಕಪ್ಪು ಪಟ್ಟೆ ಪಟ್ಟೆ ನಾಯಿಗಳು ಸಿಗುತ್ತಿತ್ತೇ ವಿನ: ಜಿಮ್ಮಿಯಂತಹ ಮುದ್ದಾದ ಕೆಂಚು ಬಣ್ನದ ನಾಯಿ ಮರಿ ಸಿಗಲೇ ಇಲ್ಲವಂತೆ. ಕೊನೆಗೊಮ್ಮೆ ಅದೃಷ್ಟಕ್ಕೆ ಹೇಗೋ ಪರಿಚಯದವರ ಮನೆಯಲ್ಲಿ ಸಿಕ್ಕ ಕೆಂಚು ಕೂದಲಿನ ನಾಯಿಯನ್ನು ಪ್ರೀತಿಯಿಂದ ತಂದು ಅದಕ್ಕೆ ಅಪರೂಪವಾದ ಮತ್ತು ಅನುರೂಪವಾದ ಹೆಸರಿಡಬೇಕೆಂದು ತೀರ್ಮಾನಿಸಿ,ಹೆಸರು ಸೂಚಿಸುವುದರಲ್ಲೇ ಕಾಲ ಸರಿಯಿತೇ ವಿನ: ಅದಕ್ಕೊಂದು ಒಪ್ಪುವ ಹೆಸರು ನಿರ್ಣಯವಾಗಲೇ ಇಲ್ಲ. ಸುಬ್ಬಯ್ಯ ಅಂತ ಹೆಸರಿರುವವರ ಮನೆಯಿಂದ ಆ ನಾಯಿಮರಿಯನ್ನು ತಂದ ಕಾರಣ,ಅದಕ್ಕೊಂದು ಹೆಸರು ಆಯ್ಕೆ ಆಗುವಲ್ಲಿವರೆಗೆ ಸುಬ್ಬಯ್ಯನವರ ನಾಯಿಮರಿ,ಸುಬ್ಬಯ್ಯನವರ ನಾಯಿ ಮರಿ ಅಂತ ಹೇಳಿ ಕರೆದೂ ಅದೇ ಬಾಯಿ ಪಾಠವಾಗಿ ,ಕೊನೆಗೊಮ್ಮೆ ಹೆಸರಿಡುವ ಶಾಸ್ತ್ರ ಮರೆವಿಗೆ ಸಂದು ಕೊನೆಗೆ ಅದು ಸುಬ್ಬಯ್ಯ ನಾಯಿ ಅಂತ ಶಾಶ್ವತ ನಾಮಧಾರಿಯಾಗಿ ಉಳಿದುಕೊಂಡದ್ದಂತೂ ಹೌದು.
ಒಂದು ದಿನ ಹೀಗೇ ಉಭಯಕುಶಲೋಪರಿಗೆಂದು ನಾಯಿಮರಿ ಕೊಟ್ಟ ಸುಬ್ಬಯ್ಯನವರು ಮನೆಗೆ ಬಂದಾಗ,ಅವರು ಕೊಟ್ಟ ನಾಯಿ ಮರಿ ಎಷ್ಟು ಬೆಳೆದಿದೆ ಅಂತ ಹೆಮ್ಮೆಯಿಂದ ತೋರಿಸಲೋಸುಗ,ಮಾಮೂಲಿಯಂತೆ ಸುಬ್ಬಯ್ಯ,ಸುಬ್ಬಯ್ಯ..ಅಂತ ಕರೆಯುವಾಗ ನಾಯಿ ಮರಿ ಕುಂಯಿ ಕುಂಯಿ ಅಂತ ಬಾಲ ಅಲ್ಲಾಡಿಸಿಕೊಂಡು ಬರುವುದು…,ಸುಬ್ಬಯ್ಯನವರೋ, ನಾನು ಇದಿರು ಹೀಗೆ ನಿಂತಿರುವಾಗ ನನ್ನನ್ನು ಹೀಗೊಂದು ಹೆಸರಿಡಿದು ಯಾಕಾಗಿ ಕರೆಯುತ್ತಾರಪ್ಪ ಎಂದು ಆಶ್ಚರ್ಯ ಚಕಿತರಾಗಿ ಮಿಕಿ ಮಿಕಿ ನೋಡುವಾಗಲೇ ಮಾತಿನ ಅಚಾತುರ್ಯದ ಪ್ರಮಾದದ ಅರಿವಾಗಿದ್ದು.ಆಗ ಮನೆಯವರ ಪಾಡು ನಾಯಿಪಾಡಾದಂತೆ ಮನಸ್ಸಿನೊಳಗೆ ಕುಂಯಿ ಕುಂಯಿ ಅನ್ನುತ್ತಾ ,ನಾಚಿಕೆಯಿಂದ, ತಪ್ಪಿನಿಂದ ,ಅವಮಾನದಿಂದ ಮನಸ್ಸು ಮುದುರಿಹೋದದ್ದನ್ನು ಈಗ ನಗುತ್ತಾ ನೆನೆಯುತ್ತಾರೆ.ಇದು ನಾಯಿಯ ಹೆಸರಿನ ಹಿಂದಿನ ಕತೆಯಾದರೆ,ಮನುಷ್ಯನ ಹೆಸರಿಗಂಟಿದ ಕತೆ ಬೇರೆಯೇ ತೆರನಾಗಿದೆ.
ನಾವು ನಮ್ಮ ಮಕ್ಕಳಿಗೆ ಮುದ್ದಿನಿಂದ ಕರೆಯಲೋಸುಗ ಇಟ್ಟ ಹೆಸರುಗಳು, ಅಂದರೆ ಪೆಟ್ ನೇಮ್ಗಳು ಕೊನೇ ತನಕ ಹಾಗೇ ಉಳಿದು ಒಮ್ಮೊಮ್ಮೆ ಹಾಸ್ಯಾಸ್ಪದ ಅಂತನ್ನಿಸುವುದು ನಮಗೆಲ್ಲಾ ಗೊತ್ತೇ ಇದೆ.ಪುಟ್ಟ ಹೆಣ್ಣು ಪಾಪುವಿಗೆ ಪುಟ್ಟಿ,ಬೇಬಿ ಅಂತ ಕಕ್ಕುಲಾತಿಯಿಂದ ಕರೆಯಲು ಇಟ್ಟ ಹೆಸರುಗಳು,ಪುಟ್ಟಿ ಬೇಬಿಯರು ಹಣ್ಣು ಹಣ್ಣು ಮುದುಕಿಯರಾದ ಮೇಲೆ ಪುಟ್ಟಜ್ಜಿ,ಬೇಬಿಯಜ್ಜಿಯಂದಿರಾಗಿ ಬದಲಾಗಿ ಬಿಡುತ್ತಾರೆ.ಗಂಡು ಮಕ್ಕಳಿಗೆ ಅಕ್ಕರೆಯಿಂದ ಕಂದಯ್ಯ,ಪಾಪು ಅಂತ ಕರೆದದ್ದು,ತದನಂತರ ಮುದುಕರಾಗುವಾಗ ಕಂದಯ್ಯಜ್ಜ,ಪಾಪಜ್ಜಗಳಾಗಿ ಮಾಪರ್ಾಟು ಹೊಂದಿಕೊಳ್ಳುವುದ ನೆನೆದಾಗ ನಗು ಬಳ್ಳನೇ ಉಕ್ಕಿ ಬರದೇ ಇರಲಾರದು.ಈ ಸಂಗತಿಗಳೆಲ್ಲವನ್ನು ಮರೆತಂತೆ ನನ್ನ ಮಗಳಿಗೆ ಸಣ್ಣವಳಿರುವಾಗ ಪ್ರೀತಿಯಿಂದ ಪುಟ್ಟೀ..ಪುಟ್ಟಿ..ಅಂತಾನೇ ಕರೆಯುತ್ತಿದ್ದೆವು.ಅವಳು ಬೆಳೆದು ದೊಡ್ಡವಳಾದಂತೆ,ಇನ್ನು ಆ ಹೆಸರು ಸರಿ ಹೊಂದಲಾರದೆಂದೆಣಿಸಿ,ಪ್ರಜ್ನಾಪೂರ್ವಕವಾಗಿ ಅವಳ ನಿಜ ನಾಮಧೇಯದಲ್ಲಿ ಕರೆಯಲು ಶುರುವಿಟ್ಟೆವು.ಮುದ್ದಿನಿಂದ ಕರೆಯುತ್ತಿದ್ದ ಆ ಹೆಸರು ಅದೆಷ್ಟು ಆಪ್ತವಾಗಿತ್ತು ಮತ್ತು ಆ ಕರೆ ಹೃದಯದಿಂದ ಹೊಮ್ಮುತ್ತಿತ್ತು ಅಂದರೆ, ಈಗ ನಿಜದ ಹೆಸರಿನಲ್ಲಿ ಕರೆಯುವಾಗ ನಾಟಕೀಯವಾಗಿ ಸಂಭೋಧಿಸಿದಂತೆ ತೋರುತ್ತಿತ್ತು.ಕಾಲಕ್ರಮೇಣ ನಮಗೆಲ್ಲಾ ಮುದ್ದಿನಿಂದ ಕರೆಯಲು ಇಟ್ಟ ಹೆಸರು ಮರೆತು ಹೋದರೂ,ಬಾಲ್ಯದಲ್ಲಿ ಪುಟ್ಟಿಯನ್ನು ಬಲ್ಲವರೆಲ್ಲರೂಪುಟ್ಟಿ ಏನ್ಮಾಡ್ತಾಳೆ? ಪುಟ್ಟಿ ಯಾವ ಕ್ಲಾಸ್ನಲ್ಲಿ ಓದುತ್ತಿದ್ದಾಳೆ? ಅಂತೆಲ್ಲಾ ಪ್ರ್ರೀತಿಯಿಂದ ವಿಚಾರಿಸಿಕೊಳ್ಳುವಾಗ,ನಾವುಗಳು ತಬ್ಬಿಬ್ಬಾಗಿ,ಈಗ ನಾವುಗಳು ಆ ಹೆಸರಿನಲ್ಲಿ ಕರೆಯುತ್ತಿಲ್ಲ.ನೀವು ಕೂಡ ಇನ್ನು ಹಾಗೇ ಕರೆಯದಿರಿ.ಹಾಗೇ ಹೀಗೆ ಅಂತ ಅದರ ಸಾಧಕ,ಬಾಧಕಗಳನ್ನೆಲ್ಲಾ ಗುಡ್ಡೆ ಹಾಕಿ ಅವರ ಮುಂದೆ ಹರವುತ್ತಾ ಕೂತರೆ ಅದು ಮತ್ತಷ್ಟೂ ನಾಟಕೀಯವಾಗಿ ತೋರಗೊಡಬಹುದೆಂದು, ಅವರಿವರು ಕೇಳಿದ್ದಕ್ಕಷ್ಟೇ ಉತ್ತರ ಕೊಟ್ಟು ಸುಮ್ಮನಾಗಿಬಿಡುತ್ತೇವೆ.
images
ಕೆಲವೊಮ್ಮೆ ಅಡ್ಡ ಹೆಸರನ್ನು ಉಡಾಫೆ ಮಾಡಿ ಮಜಾ ಅನುಭವಿಸುವುದು,ದೈಹಿಕ ನ್ಯೂನತೆಗಳನ್ನು ಅವರುಗಳ ಹೆಸರಿನ ಜೊತೆಗೆ ತಳುಕು ಹಾಕಿ ಕರೆಯುವಂತಹ ಪ್ರಸಂಗಗಳೂ ಕೂಡ ಬೇಕಾದಷ್ಟಿವೆ.ಅಂಧರಾದರೆ,ಕುರುಡ ಕುರುಡಿ ಅಂತನೋ,ಕುಂಟುತನ ಇದ್ದರೆ ಚೊಟ್ಟ ಚೊಟ್ಟಿ ಅಂತಾನೋ ಸಂಭೋಧಿಸಿ ಲೇವಡಿ ಮಾಡುತ್ತಾ ಕೊನೆಗೊಮ್ಮೆ ಅವರಿಗೆ ಶಾಶ್ವತವಾಗಿ ಅದೇ ಹೆಸರಿನ ಪಟ್ಟ ಅಂಟಿಬಿಡುವುದುಂಟು.ಕೊನೆ ಕೊನೆಗೆ ಅದೇ ಅವರ ಮೂಲ ಹೆಸರೇನೋ ಅನ್ನುವಷ್ಟರಮಟ್ಟಿಗೆ, ಅವರುಗಳೂ ಕೂಡ ಸಾಮಾನ್ಯ ಸ್ಥಿತಿಯಂತೆ ಅದನ್ನು ಒಪ್ಪಿಕೊಳ್ಳುವುದ ಮನಗಂಡಾಗ ಖೇದವಾಗುತ್ತದೆ.ನಮ್ಮೂರಿನಲ್ಲಿ ಎರಡೂ ಕಣ್ಣುಗಳನ್ನು ಕಳೆದುಕೊಂಡ ದೃಷ್ಠಿಹೀನರಿದ್ದಾರೆ.ಅವರಿಗೆ ಸಂಪೂರ್ಣ ಅಂಧತ್ವ ಇದ್ದರೂ ಅವರ ಆಸಕ್ತಿಗಳು ಹತ್ತು ಹಲವು.ತುಂಬಾ ಪ್ರತಿಭಾನ್ವಿತರು.ತಮ್ಮ ನ್ಯೂನತೆಗೆ ಕೊರಗದೆ ಸದಾ ಚಟುವಟಿಕೆಯಿಂದ ಕ್ರೀಯಾಶೀಲರಾಗಿರುವ ಅವರನ್ನು ಅವರೊಳಗಿರುವ ಪ್ರತಿಭೆಯ ಮುಖಾಂತರ ಗುರುತಿಸದೆ, ಆ ಮೂಲಕ ಅವರಿಗೊಂದು ಅಸ್ಮಿತೆಯನ್ನು ಕೊಡದೆ,ಅವರ ಹೆಸರಿನ ಹಿಂದೆ ಕುರುಡ ಅಂತ ಸಂಭೋಧಿಸುವುದು ಲೇವಡಿಗೋ?ಹೀಯಾಳಿಕೆಗೋ?ಅಥವಾ ಅಚಾತುರ್ಯದಿಂದಲೋ?ಎಂಬುದು ಮಾತ್ರ ಇದುವರೆಗೂ ಗೊತ್ತಾಗುತ್ತಿಲ್ಲ.
ಆದರೆ ಕೆಲವೊಮ್ಮೆ ಹೆಸರಿಗಂಟಿದ ಅಡ್ಡ ಹೆಸರುಗಳು ಅವರುಗಳಿಗೆ ಗೌರವ ಸ್ಥಾನವನ್ನು ತಂದುಕೊಡುವುದನ್ನೂ ಅಲ್ಲಗಳೆಯುವಂತಿಲ್ಲ.ಹಳ್ಳಿಯ ಕೂಡು ಕುಟುಂಬದಲ್ಲಿ ಶಾಲೆಗೆ ಹೋಗುವ ತಂದೆಯ ಕಿರಿಯ ತಮ್ಮನ್ನನ್ನು ಮಕ್ಕಳೆಲ್ಲರೂ ಶಾಲೆಪ್ಪನೆಂದು ಕರೆಯುವುದು ವಾಡಿಕೆ.ಹಾಗಾಗಿ ಶಾಲೆಗೆ ಹೋಗುವ ಚಿಕ್ಕಪ್ಪನಿಗೆ ಮಹತ್ತರವಾದ ಸ್ಥಾನ ಲಭಿಸಿಬಿಡುತ್ತದೆ.ಇನ್ನು ಸಾಮಾನ್ಯವಾಗಿ ಹಳ್ಳಿಯಲ್ಲಿ ದನಗಳ ಅರೋಗ್ಯ ಪಾಲನೆಯ ವಿಚಾರಕ್ಕೆ ಬಂದಾಗ ಗೋ ವೈದ್ಯರಿಗಿಂತ ಹೆಚ್ಚಾಗಿ ಪಶು ಆಸ್ಪತ್ರೆಯ ಸಿಬ್ಬಂದಿಗಳು,ಕಾಂಪೋಡರ್ಗಳೇ ಬರುವುದು ಹೆಚ್ಚು.ನಮ್ಮ ಜನರು ಎಷ್ಟು ಮುಗ್ದರು ಮತ್ತು ಒಳ್ಳೆಯವರೂ ಅಂದರೆ ಅವರುಗಳಿಗೆಲ್ಲಾ ಡಾಕ್ಟರ್ ಪಟ್ಟ ಕೊಟ್ಟು ಗೋವು ಡಾಕ್ಟರ್ ಅಂತ ಸಂಭೋದಿಸುವುದೇ ಹೆಚ್ಚು.ಅವರ ಅರ್ಹತೆಗಿಂತ ಜಾಸ್ತಿಯೇ ಇರುವ ಉನ್ನತ ಹುದ್ದೆಯನ್ನು ಧಾರಾಳವಾಗಿ ಕೊಡುವಷ್ಟು ಉದಾರಿಗಳು ನಾವು.ಅವರುಗಳೂ ಕೂಡ ಅಷ್ಟೆ.ನಮ್ಮ ಹುದ್ದೆ ಡಾಕ್ಟರ್ ಅಲ್ಲ ಅಂತ ನಿರಾಕರಿಸದೆ,ನಾವುಗಳೆಲ್ಲ ಗೋವು ಡಾಕ್ಟ್ರೇ..ಅಂತ ಕರೆಯೋದನ್ನ ಪ್ರೀತಿಯಿಂದ,ಹೆಮ್ಮೆಯಿಂದ ಕೆಲವೊಮ್ಮೆ ಗತ್ತಿನಿಂದ ಸ್ವೀಕರಿಸುವುದನ್ನ ನಾವು ಕಾಣುತ್ತೇವೆ.ಮತ್ತಷ್ಟು ಮುಂದಕ್ಕೆ ಹೋಗಿ ಹೆಚ್ಚಿನ ಸರ್ತಿ ಅವರುಗಳೇ ಅವರನ್ನು ಗೋವು ಡಾಕ್ಟರ್ ಅಂತ ಯಾವುದೇ ಸಂಕೋಚಗಳಿಲ್ಲದೆ ಪರಿಚಯಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ.ನಿಜವಾದ ಗೋ ವೈದ್ಯರ ಜೊತೆಗೂಡಿ ಬಂದಾಗ ಅವರನ್ನು ಇದೇ ರೀತಿಯಲ್ಲಿ ಕರೆದರೆ ನಿಜಕ್ಕೂ ಅವರಿಗೆ ಕಸಿವಿಸಿಯಾಗುತ್ತದಾ..?ಇದನ್ನೆಲ್ಲಾ ಆವಾಗಲೂ ಹೇಗೆ ಸ್ವೀಕರಿಸುತ್ತಾರೆ?.ಅದನ್ನೆಲ್ಲಾ ಗಮನಿಸುವಷ್ಟು ಪುರುಸೊತ್ತು ಯಾರಿಗಿದೆ ಹೇಳಿ..?ಅಂತೂ ಹೆಸರಿನ ಮುಂದೆ ನಮ್ಮದಲ್ಲದ ಸ್ಥಾನವನ್ನು ಅಲಂಕರಿಸಿಕೊಳ್ಳುವುದಕ್ಕೆ ನಮ್ಮ ಜನಗಳಿಗೆ ಹಿಂಜರಿಕೆಯೇ ಇಲ್ಲ.ಈಗಲೂ ಅಷ್ಟೆ,ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆಗೆ ಬರುವ ನರ್ಸ್ ಗಳನ್ನು ನಮ್ಮ ಜನರು ಪ್ರೀತಿಯಿಂದ ಡಾಕ್ಟ್ರಮ್ಮ ಎಂದೇ ಕರೆಯುತ್ತಾರೆ.
ಇನ್ನು ಕೆಲವರು ತಮ್ಮ ಹೆಸರಿನ ಮುಂದೆ ತಮ್ಮ ಇನೀಷಿಯಲ್ ಜೊತೆಗೆ ತಾವು ಕಷ್ಟ ಪಟ್ಟು ಸಂಪಾದಿಸಿದ ಉದ್ದಾನುದ್ದ ಡಿಗ್ರಿಯನ್ನು ಅಂಟಿಸಿಬಿಟ್ಟಿರುತ್ತಾರೆ.ಡಿಗ್ರಿಗಳಿರುವುದು ತಮ್ಮ ಸ್ವಂತ ಜ್ನಾನಾರ್ಜನೆಯ ಸಂಕೇತವೋ?ಅಥವಾ ನಮ್ಮ ಅರ್ಹತೆಯನ್ನು ಇನ್ನೊಬ್ಬರಿಗೆ ತೋರಿಸುವ ಮಾನದಂಡವೋ..? ಮೋಹವೋ..?ಇದು ಸರಿಯೋ..ತಪ್ಪೋ? ಬೇಕೋ..ಬೇಡವೋ..ಎಂಬುದು ತರ್ಕಕ್ಕೆ ನಿಲುಕದ ವಿಷಯ.ಆದರೆ ಇದಕ್ಕೂ ಮೀರಿದ ಇನ್ನೊಂದು ವರ್ಗದವರಿದ್ದಾರೆ.ಅವರುಗಳು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರೂ,ಬ್ಯಾಂಕಿನಲ್ಲಿ ಉನ್ನತ ಅಧಿಕಾರಿಯಾಗಿದ್ದರೂ ಕೂಡ ತಮ್ಮನ್ನು ತಾವು ತಾನೊಬ್ಬ ಟೀಚರ್.ನಾನೊಬ್ಬ ಬ್ಯಾಂಕ್ ಉದ್ಯೋಗಿ ಎಂದಷ್ಟೇ ಪರಿಚಯಿಸಿಕೊಳ್ಳುವವರಿದ್ದಾರೆ.ಇದು ಅವರು ತಮ್ಮ ವೃತ್ತಿಗೆ ಕೊಡುವ ಗೌರವ ಅಂದರೂ ತಪ್ಪಲ್ಲ.
images (1)
ಇರಲಿ.ಹೀಗೆ ಕೆದಕುತ್ತಾ ಹೋದರೆ ಅಡ್ಡ ಹೆಸರು,ಉದ್ದ ಹೆಸರು,ಗಿಡ್ಡ ಹೆಸರು,ತಮ್ಮ ಕುಲಕ್ಕಂಟಿದ ಹೆಸರು,ತಮ್ಮ ಕಸುಬಿಗಂಟಿದ ಹೆಸರು ಹೀಗೆ ಉದ್ದಕ್ಕೆ,ಅಡ್ಡಕ್ಕೆ,ನೀಟಕ್ಕೆ ಕೊಯ್ದಷ್ಟೂ ಚಕ್ರಾಕಾರದಲ್ಲಿ ಹೆಸರುಗಳು,ಆ ಹೆಸರುಗಳ ಹಿಂದೆ ಅವಿತಿರುವ ಪುಟಗಟ್ಟಲೆ ಕತೆಗಳು ಸುರುಳಿಯಂತೆ ಬಿಚ್ಚಿಕೊಳ್ಳುತ್ತಾ ಹೋಗುವುದಕ್ಕೆ ನಮ್ಮಲ್ಲಿ ಕೊರತೆಯೇನಿಲ್ಲ.ಆದರೆ ಈಗ ಹೆಸರುಗಳೂ ಕೂಡ ಎಷ್ಟು ರೂಪಾಂತರಗೊಂಡಿವೆಯೆಂದರೆ,ರಾಮಪ್ಪ ಭೀಮಪ್ಪಗಳೆಲ್ಲಾ ರಾಮ್,ಭೀಮ್ಗಳಾಗಿ,ತಿಮ್ಮಪ್ಪ,ವೆಂಕಪ್ಪ ಮತ್ತು ಉದ್ದುದ್ದ ಹೆಸರಿನ ದೇವರ ನಾಮಗಳೆಲ್ಲಾ ಮೂಲೆ ಸೇರಿ ಈಗ ಏನಿದ್ದರೂ ಶಾಟರ್್ ಅಂಡ್ ಸ್ವೀಟ್ ಎಂಬಂತೆ ಎರಡೇ ಪದಗಳು.ಅವಕ್ಕೆ ಅರ್ಥ ಇದೆಯೋ ಇಲ್ಲವೋ ಗೊತ್ತಿಲ್ಲ.ಮಾರುದ್ದ ಹೆಸರುಗಳೆಲ್ಲಾ ಅಳಿಸುತ್ತಾ ಹೋಗಿ ಬರೇ ಎರಡೇ ಎರಡು ಪದಗಳಿಗಷ್ಟೇ ಬಂದು ನಿಂತದ್ದಂತು ನಿಖರವಾದ ಸತ್ಯ.ಆದರೆ ಇನ್ನು ಬರೇ ಒಂದೇ ಅಕ್ಷರದಿಂದ ಗುರುತಿಸಿಕೊಳ್ಳುವ ಅಥವಾ ಬರೇ ಅಂಕಿಯಿಂದ ಗುರುತಿಸಲ್ಪಡುವ ಪ್ರಮೇಯ ಒದಗಿ ಬರುತ್ತದೋ? ಇಲ್ಲವೇ ,ಓಲ್ಡ್ ಈಸ್ ಗೋಲ್ಡ್ ಅನ್ನೋ ತರ ಹಳೆಯದಕ್ಕೇ ಮತ್ತೆ ನಾವು ವಾಲಿಕೊಳ್ಳುತ್ತೇವೆಯೋ..?ಗೊತ್ತಿಲ್ಲ.ಭವಿಷ್ಯವನ್ನು ಹೀಗೇ ಅಂತ ಕಂಡವರಿಲ್ಲ ಹಾಗೂ ನಿರ್ಧರಿಸುವ ಹಾಗೂ ಇಲ್ಲ.ಅದರ ಜೊತೆಗೆ ಈವಾಗಲಂತೂ ಪ್ರಾಣಿಗಳಿಗೆ ಮನುಷ್ಯರ ಹೆಸರಿಡುವ,ಮನುಷ್ಯರಿಗೆ ಪ್ರಾಣಿ ಪಕ್ಷಿಗಳ ಹೆಸರಿಡುವ ಪರಂಪರೆ ಶುರುವಿಟ್ಟಿದೆ.ಹುಡುಗ ಮತ್ತು ಹುಡುಗಿಯರ ಹೆಸರುಗಳು ಯಾವುದೇ ಲಿಂಗ ಭೇದವಿಲ್ಲದೆ,ತರತಮಗಳಿಲ್ಲದೆ ಒಂದೇ ರೀತಿ ಆದದ್ದು ಕೂಡ ಬದಲಾದ ಕಾಲಘಟ್ಟದಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ಮತ್ತೊಂದು ಮಾರ್ಗೋಪಾಯವೇನೋ ಎಂಬಂತಿದೆ.ಆದರೆ ಹುಡುಗಿಯ ಹೆಸರು ನಿತಿನ್ ಆಗಿ,ಹುಡುಗನ ಹೆಸರು ಪವಿತ್ರ ಅಂದಾಗ ಕೊಂಚ ಗಲಿಬಿಲಿ ಆಗುವುದಂತೂ ಸುಳ್ಳಲ್ಲ.ಹೇಗಿದ್ದರೂ ,ಎಷ್ಟೆಂದರೂ ಇದು ಗಡಿಬಿಡಿಯ ಗಲಿಬಿಲಿ ಯುಗವೇ ಅಲ್ಲವೇ? ಅಂತ ಯೋಚಿಸುತ್ತಾ ನಮ್ಮನ್ನು ನಾವು ಕನ್ಪ್ಯೂಸ್ ಮಾಡಿಕೊಳ್ಳದಿದ್ದರಷ್ಟೇ ಸಾಕು.
ಅಂದ ಹಾಗೆ ನಾವುಗಳು ,ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಎಲ್ಲಾ ಪ್ರೈವೇಟ್ ಬಸ್ಸುಗಳಿಗೂ ರಾಮಾ ಬಸ್ಸು.ಭಗಂಡೇಶ್ವರ ಬಸ್ಸು,ವಿನಾಯಕ ಬಸ್ಸು,ಕಾವೇರಿ ಬಸ್ಸು ಅಂತ ದೇವರ ನಾಮ ಹೊಂದಿದ ಹೆಸರಿನ ಫಲಕಗಳನ್ನು ಅಂಟಿಸುತ್ತಿದ್ದರು.ದೇವರ ಹೆಸರಿನ ಬಸ್ಸು ನಮ್ಮನ್ನು ಹೊತ್ತು ತಿರುಗುವಾಗ, ಸುರಕ್ಷಿತವಾಗಿ ನಾವು ತಲುಪಬೇಕಾದ ಕಡೆ ತಲುಪುತ್ತೇವೆ ಅನ್ನೋ ಭಾವನೆ ನಮ್ಮಲ್ಲಿ ಅಚಲವಾಗಿ ಬೇರುಬಿಟ್ಟಿತ್ತು.ಇಂತಹ ನಂಬಿಕೆಗಳೇ ಅಲ್ಲವೇ ನಮ್ಮನ್ನು ಸೇರಬೇಕಾದ ಗಮ್ಯದೆಡೆಗೆ ತಲುಪಿಸುವುದು.ಈಗ ಆ ಹೆಸರಿನ ಬಸ್ಸುಗಳೆಲ್ಲಾ ಗುಜರಿಗೆ ಸೇರಿ, ಅವುಗಳ ಬದಲಾಗಿ ಶಮ ಟ್ರಾವೆಲ್ಸ್,ಶೃತಿ ಟ್ರಾವೆಲ್ಸ್ ಅಂತ ತಮ್ಮ ತಮ್ಮ ಮುದ್ದಿನ ಮಕ್ಕಳ ಹೆಸರು ಹೊತ್ತು ಚಲಿಸತೊಡಗಿವೆ.ದೇವರ ಹೆಸರುಗಳ ಕಾಪಿರೈಟ್ಗಳನ್ನೆಲ್ಲಾ ದೇವರಿಗಷ್ಟೇ ಬಿಟ್ಟು ಕೊಡುವಷ್ಟರಮಟ್ಟಿಗೆ ನಮ್ಮ ಜನಗಳು ವಿಶಾಲ ಹೃದಯಿಗಳಾಗಿದ್ದಾರೆ.ದೇವರು ಕೂಡ ಬೇಸರ ಪಡಬೇಕಾದ ಅಗತ್ಯವೇ ಇಲ್ಲ.ಯಾಕೆಂದರೆ ಮಕ್ಕಳೂ ಕೂಡ ದೇವರ ಮತ್ತೊಂದು ತದ್ರೂಪ ತಾನೇ? ಎಂಬುದು ಇವರ ಅಂಬೋಣ.
ಇನ್ನು ಅದೂ ಇದೂ ಅಂತ ಅವರವರಿಗೆ ಹೊಂದಿಕೆಯಾಗುವಂತಹ ಸೂಕ್ತ ಒಪ್ಪುವ ಹೆಸರಿಟ್ಟು ಚುಡಾಯಿಸುವ ವಿಷಯಕ್ಕೆ ಬಂದರೆ ಅಂದಿನಿಂದ ಇಂದಿನವರೆಗೂ ಮಕ್ಕಳ ಮನಸ್ಥಿತಿ ಬದಲಾಗಲಿಲ್ಲ ಎಂಬುದು ಮಾತ್ರ ನಂಬತಕ್ಕ ವಿಷಯವೇ.ಶಿಸ್ತಿನ ಲೆಕ್ಕ ಮಾಷ್ಟ್ರಿಗೆ ಹಿಟ್ಲರ್ ಅಂತ ಹೆಸರಿಡುವುದು,ಉದ್ದ ಜಡೆಯ ಟೀಚರ್ಗೆ ನಾಗವೇಣಿ ಅಂತ ನಾಮಕರಣ ಮಾಡಿ,ಹಿಂದಿನಿಂದ ಅದೇ ಹೆಸರಿನಿಂದ ಗುರುತಿಸುವುದಂತೂ ಇದ್ದೇ ಇದೆ.ಮಕ್ಕಳು ಎಷ್ಟೇ ಸಭ್ಯರಂತೆ ಗೋಚರಿಸಿದರೂ ಇಂತಹ ಕೀಟಲೆಗಳನ್ನು ಅವರುಗಳು ತಪ್ಪದೆ ಒಂದು ಪರಿಪಾಠದಂತೆ ಮುಂದುವರೆಸಿಕೊಂಡು ಬಂದೇ ಬರುತ್ತಾರೆ.
ಅಡ್ಡ ಹೆಸರುಗಳು,ಹಿಂದಿನ ಹೆಸರುಗಳು,ಮುಂದಿನ ಹೆಸರುಗಳು ಅದೇನೇ ಇರಲಿ.ಅದರಿಂದ ಬೇರೆಯವರಿಗೆ ನೋವಾಗುವ ಸಂದರ್ಭ ಬರದಂತೆ ಮಾಡುವ ಎಚ್ಚರ ಮತ್ತು ಅರಿವು ನಮ್ಮೊಳಗೆ ಇದ್ದರೆ ಒಳಿತು.ಒಳ್ಳೆಯದನ್ನೇ ಹುಡುಕಿ ಆ ಮೂಲಕ ಅವರಿಗೊಂದು ಅಸ್ಮಿತೆಯನ್ನು ಕೊಟ್ಟು ಹೆಸರಿಸುವುದು ಮತ್ತೂ ಒಳಿತು.ಚಿಕ್ಕಮ್ಮ ಅಂತ ಹೆಸರಿದ್ದ ನನ್ನ ಸಹಪಾಠಿಯೊಬ್ಬಳಿಗೆ ಚಿಕ್ಕಮ್ಮ, ದೊಡ್ಡಮ್ಮ..ಅಂತ ರೇಗಿಸುತ್ತಾ ತಮಾಷೆ ಮಾಡುವಾಗ ಚಿಕ್ಕಮ್ಮನ ಮುಖ ಮತ್ತಷ್ಟೂ ಚಿಕ್ಕದಾಗಿ ಅವಳು ಹನಿಗಣ್ಣಾಗುತ್ತಿದ್ದ ಚಿತ್ರ ನೆನಪಿಗೆ ಬಂದು ಆ ಎಳೆ ಹೃದಯವೆಷ್ಟು ನೊಂದಿರಬಹುದೆಂದು ನೆನೆದರೆ ಈಗ ನನಗೂ ದು:ಖ ಉಕ್ಕುತ್ತದೆ.ಯಾಕೋ ಹೆಸರಿನ ಅವಾಂತರಗಳನ್ನ,ಅದು ಕೊಟ್ಟ ಖುಷಿಯನ್ನ,ಬೇಸರವನ್ನ ನೆನೆಯುತ್ತಾ ಕುಳಿತಿರುವಾಗ,ನನ್ನ ಅಪ್ಪ ನನ್ನನು ಪ್ರೀತಿಯಿಂದ ಅಕ್ಕಾ..ಸ್ಮಿತಾ,ಅಕ್ಕಾ..ಸ್ಮಿತಾ ಅನ್ನುತ್ತಾ ಜೋರಾಗಿ ಆಕಸ್ಮಿಕ..ಅಂತ ಕರೆದು ರೇಗಿಸುತ್ತಿದ್ದದ್ದು ಈ ಹೊತ್ತಿನಲ್ಲಿ ನೆನಪಿಗೆ ಬಂದು,ಇನ್ನಿಲ್ಲವಾದ ಅಪ್ಪನ ನೆನಪುಗಳು ಮತ್ತೆ ತುಂಬಿಕೊಳ್ಳುತ್ತಾ ಕಣ್ಣಂಚು ತೇವಗೊಳ್ಳುತ್ತಿದೆ.

‍ಲೇಖಕರು G

August 19, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಅಕ್ಕಿಮಂಗಲ ಮಂಜುನಾಥ

    ಲೇಖನ ಚೆನ್ನಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: