ತಲೆಗೊಂದು ಹೆಸರು
ಸೂರಿ
ಮಲಗಿದ್ದೆ. ರಾತ್ರಿ ಎಷ್ಟು ಹೊತ್ತಾಗಿತ್ತೋ ಏನೋ, ಗೊತ್ತಿಲ್ಲ. ನಮ್ಮ ತಂದೆ (ಇವರನ್ನು ಅಣ್ಣ ಅಂತಲೇ ಕರೆಯುವುದು ನಾವು) ಪಕ್ಕ ಬಂದು ಕೂತು ನನ್ನನ್ನು ತಟ್ಟಿ ಎಬ್ಬಿಸಿದರು. ಹಿಂದೆ ದೂರದರ್ಶನಕ್ಕೆ ಒಂದು ಕಿರುಚಿತ್ರ ಮಾಡಿದಾಗ ಒಂದು ದೃಶ್ಯ ಜೋಡಿಸಿದ್ದೆ. ನಾಲಾಯಕ್ ಮಗ ಮಲಗಿದ ಹೊತ್ತಿನಲ್ಲಿ ತಂದೆ ಬಂದು ಎಬ್ಬಿಸಿ ಯಾಕೋ ಹೀಗೆ ನಾಯೀಪಾಡಿನ ಜೀವನ ಮಾಡ್ತಾಯಿದ್ದೀಯಾ ಅಂತ ಕೇಳುತ್ತಾರೆ. ಅದು ಯಾಕೋ ನೆನಪಿಗೆ ಬಂದು ಧಡಕ್ಕನೆ ಎದ್ದು ಕೂತೆ. ಅಣ್ಣ ಕಳವಳದಲ್ಲಿದ್ದರು. ತೀರಾ ಮುದುಡಿ ಕೂತಿದ್ದರು. ‘ಯಾಕೋ ಕಿರಿಕಿರಯಾಗ್ತಾಯಿದೆ, ಯಾರು ಯಾರೋ ಕರೀತಾರೆ. ಎಲ್ಲೆಲ್ಲಿಂದನೋ ಕರೀತಾರೆ. ಅದೆಲ್ಲೋ ಪಾತಾಳದಿಂದ ಕರೀತಿರೋ ಹಾಗಿರಿತ್ತೆ. ಅದೆಲ್ಲೋ ಸಾವಿರಾರು ಮೈಲಿ ದೂರದಿಂದ ಕರೀತಿರೋ ಹಾಗಿರತ್ತೆ. ನಾನೇನು ತಪ್ಪು ಮಾಡಿದ್ದೀನಿ ಅಂತ ಗೊತ್ತಾಗ್ತಾಯಿಲ್ಲ’ ಅಂದರು. ಒಂದೈದು ನಿಮಿಷ ಇಬ್ಬರೂ ಮಾತಾಡಿದ ನೆನಪು. ಕೊನೆಗೆ ಅಣ್ಣ ಎದ್ದು ಹೋದರು. ಅಣ್ಣ ಮಾತನಾಡಿದ ಅ ರಾತ್ರಿಗೆ ಅವರು ತೀರಿ ಹೋಗಿ ಸುಮಾರು ಇಪ್ಪತ್ತನಾಲ್ಕು ವರ್ಷಗಳಾಗಿದ್ದವು. ಅವರು ಹೀಗೆ ಬಂದು ನನ್ನನ್ನು ಎಬ್ಬಿಸಿದ ಪರಿಯಿಂದ ನಾನೂ ತಬ್ಬಿಬ್ಬಾಗಿದ್ದೆ. ಇಹದ ವ್ಯಾಪಾರವನ್ನೇ ತೊರೆದು ಹೋದ ಅವರನ್ನೇ ಕರಿಯುವಂತಹವರು ಯಾರಿರಬಹುದು ಅಂತ ಯೋಚಿಸಿದೆ. ಸುಮಾರು ವರ್ಷಗಳು ಹೊಳೆಯಲೇ ಇಲ್ಲ. ನಿದ್ದೆಯಿಂದ ನಮ್ಮ ತಂದೆಯನ್ನು ಎಬ್ಬಿಸಿ ಕರೆಯುತ್ತಿರುವವರ ಪತ್ತೆ ಹತ್ತಲೇ ಇಲ್ಲ. ಇದರ ಗುಟ್ಟು ಒಡೆದದ್ದು ಮೊನ್ನೆ ಒಂದು ನಾಟಕ ಉತ್ಸವಕ್ಕೆ ಝೂರಿಕ್ಗೆ ಹೋದಾಗ.

ವಿವರಿಸಿ ಬಿಡುತ್ತೇನೆ. ಫ್ರಾಂಕ್ಫಟರ್್ನಲ್ಲಿ ವಿಮಾನ ಬದಲಿಸಬೇಕು. ಹೆಚ್ಚು ಸಮಯವಿಲ್ಲ. ಎಷ್ಟೇ ಜೋರಾಗಿ ಓಡಿದರೂ, ಒಂದು ಪುಟ್ಟ ನಗರದಂತಿರುವ ಆ ವಿಮಾನ ನಿಲ್ದಾಣದಲ್ಲಿ, ನನಗೆ ಬೇಕಾದ ವಿಮಾನದ್ವಾರವನ್ನು ಮುಟ್ಟುವ ಹೊತ್ತಿಗೆ ತಡವಾಗಿ ಬಿಟ್ಟಿತ್ತು. ಅಷ್ಟು ಹೊತ್ತಿಗಾಗಲೇ ನನ್ನ ಹಾಗೇ ತಡವಾದವರ ಹೆಸರುಗಳನ್ನು ಮತ್ತೆ ಮತ್ತೆ ಕರೆಯುತ್ತಿದ್ದರು. ಇದ್ದಕ್ಕಿದ್ದ ಹಾಗೇ ಸುಬ್ಬಣ್ಣಾ, ಸುಬ್ಬಣ್ಣಾ ಅಂತ ಕರೆಯುತ್ತಿದ್ದದ್ದು ಕೇಳಿತು. ತಡವಾಗಿ ಬಂದಿದ್ದು ನಾನು, ಆದರೆ ಕರೆಯುತ್ತಿರುವುದು ನನ್ನ ತಂದೆಯ ಹೆಸರನ್ನು. ಬಾಗಿಲ ಬಳಿ ಹೋಗುತ್ತಿದ್ದಂತೇ ‘ಆರ್ ಯೂ ಸುಬ್ಬಣ್ಣ’ ಅಂತ ಕೇಳಿದರು. ಇಲ್ಲಾಂತ ಹೇಗೆ ಹೇಳಲಿ. ಹೋಗಿ ನನ್ನ ಜಾಗದಲ್ಲಿ ಕೂತೆ. ಸೆಮಿನಾರಿನ ವಖ್ತಾರರಂತೂ ಸುಬ್ಬಣ್ಣ ಎಂದೇ ನನ್ನನ್ನು ಕರಿದಿದ್ದು. ಮೊದಲೇ ಪರಿಚಯವಿದ್ದ ಕೆಲವರು ನನ್ನನ್ನು ಸೂರಿ ಅಂತ ಕರೆದರು. ಅವತ್ತು ರಾತ್ರಿ ಮಲಗಿದ್ದೆ ನೋಡಿ, ಥಟ್ಟನೇ ಅಣ್ಣ ರಾತ್ರಿ ಬಂದು ಅಲವತ್ತು ಕೊಂಡಿದ್ದು ನೆನಪಾಗಿ ಎಲ್ಲ ಹೊಳೆಯಿತು. ಅದೆಲ್ಲೋ ಪಾತಾಳದಿಂದ ಕರೀತಾಯಿರೋ ಹಾಗಿರತ್ತೆ ಅಂತ ಯಾಕೆ ಹೇಳಿದರೂ ಅನ್ನೋದೂ ಅರ್ಥವಾಯಿತು. ಬಹುಷಃ ಬೆಂಗಳೂರಲ್ಲೋ, ದಾವಣಗೆರೆಯಲ್ಲೋ ಯಾರಾದರೂ ನನ್ನ ಸುಬ್ಬಣ್ಣ ಅಂತ ಕರೆದಿದ್ದಲ್ಲಿ ಪಕ್ಕದಲ್ಲಿ ಕೂತು ಕರೆದ ಹಾಗಿರುತ್ತಿತ್ತೇನೋ ಅವರಿಗೆ.
ಆದರೆ ಕರೆಯುತ್ತಿರುವುದು ಸಾವಿರಾರು ಮೈಲಿ ದೂರದಿಂದ. ಅವರು ಹೋಗಿದ್ದು ಮಂಗಳೂರಿನ ಸಮೀಪದ ಹಳ್ಳಿಯೊಂದರಲ್ಲಿ. ಹಾಗಾಗಿ ಅವರಿಗೆ ದಿಕ್ಕು ತಪ್ಪಿರಬೇಕು. ಪ್ರತಿ ಸಾರಿ ದೇಶ ಬಿಟ್ಟಾಗಲೂ ಇದೇ ಗೋಳು. ಇಜಿಪ್ಟ್ನಲ್ಲಂತೂ ಅದು ನನ್ನ ಹೆಸರೂ ಅಲ್ಲ ನಮ್ಮಪ್ಪನ ಹೆಸರೂ ಅಲ್ಲ ಅನ್ನುವಂತಿತ್ತು. ನನ್ನ ಹೆಗಲು ಮುಟ್ಟಿ ಮಾತನಾಡಿದರೇ ಮಾತ್ರ ಅದು ನನ್ನ ಹೆಸರೇ, ಅವರು ನನ್ನನ್ನು ಕುರಿತೇ ಮಾತನಾಡಿದ್ದು ಅಂತ ಅರ್ಥವಾಗುತ್ತಿತ್ತು. ಮೊದಲಿನಿಂದಲೂ ನಾನು ನನ್ನ ಹೆಸರನ್ನು ಎಸ್ ಸುರೇಂದ್ರನಾಥ್ ಎಂದೇ ಬರೆದುಕೊಳ್ಳುತ್ತಿದ್ದುದು. ಪಾಸ್ಪೋರ್ಟನಲ್ಲಿ ಎಸ್ ಎನ್ನುವುದಕ್ಕೆ ವಿವರಣೆ ಕೊಡಬೇಕಲ್ಲಾ, ಅದು ನನ್ನ ತಂದೆಯ ಹೆಸರಾದ್ದರಿಂದ ಅದೇ ಹೆಸರನ್ನೇ ಬರೆದೆ, sur name ಅನ್ನುವ ಜಾಗದಲ್ಲಿ. Given name ಜಾಗದಲ್ಲಿ ನನ್ನ ಹೆಸರು ಬರೆದು ಕೊಂಡೆ. ಅಷ್ಟೇ ನಾನು ಮಾಡಿದ್ದು. ಅವತ್ತಿಂದ ನನಗೆ ಬದಲಾಗಿ ಅಲ್ಲೆಲ್ಲೋ ಮಲಗಿರುವ ನನ್ನ ತಂದೆಯನ್ನು ಎಬ್ಬಿಸಿ ಕರೆಯುತ್ತಿದ್ದಾರೆ. ಅಮೇರಿಕಾದಲ್ಲೂ ಹೀಗೇ, ಜರ್ಮನಿಯಲ್ಲೂ ಹೀಗೇ. ಒಟ್ಟಿನಲ್ಲಿ ಹೋದ ಮೇಲೂ ನಮ್ಮ ತಂದೆಗೆ ಶಾಂತಿಯಿಲ್ಲ. ನೆಮ್ಮದಿಯ ನಿದ್ರೆಯಿಲ್ಲ.
ಈ ಅಡ್ಡ ಹೆಸರುಗಳ ಪರಂಪರೆ ನಮಗಿಲ್ಲ. ಅಥವಾ ನನಗೆ ಅರಿವಾಗಿಲ್ಲ. ಹೆಸರು ಇಡುವುದು ಅಪ್ಪ-ಅಮ್ಮ-ಅಜ್ಜ-ಅಜ್ಜಿಯರಿಗೆ ಬಿಟ್ಟಿದ್ದು. ಅದನ್ನು ಉಳಿಸಿಕೊಂಡು ಬರಬೇಕಾಗಿರುವುದು ನಮಗೆ ಬಿಟ್ಟಿದ್ದು. ನನ್ನ ಕುಲ-ಗೋತ್ರದ ಭಾರವನ್ನು ಹೊತ್ತು ಬದುಕುವುದು ನನ್ನಿಂದಾಗದ ಮಾತು. ಆದರೆ ನಮ್ಮ ಹೆಸರಿನಲ್ಲೇ ಬದುಕಲು ಈ ಪ್ರಪಂಚದ ರೀತಿ-ರಿವಾಜುಗಳು ಬಿಡುವುದಿಲ್ಲ. ಒಂದು ಅಡ್ಡಹೆಸರು ಇರಲೇಬೇಕು. ದಾವಣಗೆರೆಯಲ್ಲಿ ಈ ರೂಢಿ ಅಷ್ಟಿಲ್ಲ, ಆದರೆ ಉತ್ತರ ಕರ್ನಾಟಕದಲ್ಲಿ ಈ ಅಡ್ಡಹೆಸರುಗಳ ಪರಂಪರೆಗೆ ಬಹಳ ಮಹತ್ವವಿದೆ. ಅಲ್ಲಿ ಕೇವಲ ಉಮೇಶ ಅಂದರೆ ಓ ಅನ್ನುವುದಿಲ್ಲ, ಏನ್ರೀ ಕುಲಕರ್ಣಿಯವರೇ ಅಂದರೆ ಏನಪಾ ಅನ್ನುತ್ತಾರೆ. (ಮರಾಠಿಗರಲ್ಲಿ ಇದು ಬಹಳ ಮುಖ್ಯ. ನಿಮ್ಮ ಹೆಸರು ಹೇಳಿದ ಕೂಡಲೇ ಅಡ್ನಾಂವ್ ಕಾಯ್ ಅಂತ ಕೇಳುತ್ತಾರೆ. ನಮ್ಮ ಮೇಲೆ ಅಥವಾ ನಮ್ಮ ಹೆಸರಿನ ಮೇಲೆ ನಂಬಿಕೆಯೇ ಇಲ್ಲ ಅವರಿಗೆ. ನಿಮ್ಮ ಕುಟುಂಬದ ಹೆಸರು ಮುಖ್ಯ) ಒಂದು ರೀತಿಯಲ್ಲಿ ಅದೂ ಮುಖ್ಯ ಎನ್ನಿ. ಇಲ್ಲವಾದಲ್ಲಿ ಅದೆಷ್ಟು ಸುರೇಂದ್ರನಾಥ್ಗಳು ಒಂದು ಹೆಸರಿಗೆ ಓಗೊಡುತ್ತಾರೋ. ಬಂಗಾಳದಲ್ಲಂತೂ ಸಾವಿರಾರು ಜನ ಒಮ್ಮೆಲೇ ಓಗೊಡುತ್ತಾರೇನೋ. ಹೆಸರೇ ಇಲ್ಲದೇ ಇದ್ದಲ್ಲಿ? ಗೆಳೆಯ ನರಸಿಂಹನ್ ಒಂದು ನಾಟಕದಲ್ಲಿ ಬರೆದಿದ್ದ. ಹೆಸರಿಗೆ ಬದಲಾಗಿ ಒಂದು ನಂಬರ್ ಇದ್ದಿದ್ದರೇ ಚೆನ್ನಾಗಿತ್ತು, ಹೆಸರಿನ ಮೇಲೆ ಬದುಕುವ ಜವಾಬ್ದಾರಿ ಇರುತ್ತಿರಲಿಲ್ಲ ಅಂತ. ಒಮ್ಮೊಮ್ಮೆ ಹೆಸರೇ ಭಾರವಾಗಿ ಆ ಭಾರದಡಿ ಕುಸಿದವರಿದ್ದಾರೆ.
ಹೆಸರುಗಳ ಬಗ್ಗೆ ನನಗೊಂದು ವಿಚಿತ್ರ ಮೋಹವಿದೆ. ಹೆಸರು ಬದಲಿ ಮಾಡಿಕೊಳ್ಳುವುದು, ಪರಿಚಯವನ್ನೇ ಬದಲಿ ಮಾಡಿಕೊಳ್ಳುವುದು, ಬೇರೊಂದು ಪಾತ್ರವಾಗಿ ಬಿಡುವುದು ಇವೆಲ್ಲಾ ನನ್ನ ನಾಟಕಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ವಿಷಯ. ಆತಂಕವಾದಿಯ ಆಕಸ್ಮಿಕ ಸಾವು ಇರಬಹುದು, ನಾ ತುಕಾರಾಮ್ ಅಲ್ಲ ಇರಬಹುದು ಅಥವಾ ನೀನಾನಾದ್ರೆ ನಾನೀನೇನಾ ಇರಬಹುದು. ಪಿ ಜಿ ವುಡ್ಹೌಸನ ಕಾದಂಬರಿಯನ್ನು ಆಧರಿಸಿ ಒಂದು ಚಿತ್ರಕಥೆ ಮಾಡಿದ್ದೆ. (ಇದರ ಸೂಕ್ಷ್ಮ ತಮಾಷೆಗಳು ನಮ್ಮ ಗಾಂಧೀನಗರದ ನಿಮರ್ಾಪಕರ ದಪ್ಪ ಚರ್ಮದ ಅಡಿ ತೂರಲೇ ಇಲ್ಲ. ಹಾಗಾಗಿ ಇದು ಇನ್ನೂ ನನ್ನ ಬಳಿಯೇ ಇದೆ.) ಅದರ ಕೆಲವು ಸಾಲುಗಳನ್ನು ಉದಹರಿಸುತ್ತೇನೆ.
ಜಾಗಟೆ. (ಈತ ಸಿನೆಮಾದ ನಾಯಕ ಪ್ರೀತಿಸುತ್ತಿರುವ ನಾಯಕಿಯ ಅಪ್ಪ. ಅಸಾಧ್ಯ ಮರುಗುಳಿ. ಪಂಚಾಕ್ಷರಿ. ಸಣ್ಣದಾಗಿ ಕರೆಯೋದಾದರೆ ಪಂಚಿ. ನಾಯಕ.
ಇಬ್ಬರ ಭೇಟಿಯಾದ ನಂತರ ಇಬ್ಬರೂ ಒಂದು ಕೋಣೆಯಲ್ಲಿ ಕೂತು ಮಾತನಾಡುತ್ತಾರೆ. ಆ ಸಂಭಾಷಣೆ ಹೀಗಿದೆ.
ಜಾಗಟೆ: ಕೂತ್ಕೋ. (ಪಂಚಿ ಕೂಡುತ್ತಾನೆ.) ನಿನ್ನ ನೋಡಿದ್ರೆ ಯಾಕೋ ಇಷ್ಟವಾಗತ್ತೆ. (ಸಿಗರೇಟು ಹಚ್ಚಲು ಬೆಂಕಿಪೊಟ್ಟಣಕ್ಕಾಗಿ ಜೇಬುಗಳನ್ನು
ತಡಕಾಡುತ್ತಾ) ನಿಂಗೆ ಮದುವೆಯಾಗಿದೆಯಾ ಸಚ್ಚಿ?
ಪಂಚಿ ಪಂಚಿ.
ಜಾಗಟೆ ಏನು ಹಾಗಂದ್ರೆ?
ಪಂಚಿ ನನ್ನ ಹೆಸರು ಪಂಚಿ.
ಜಾಗಟೆ ಏನಾಯ್ತು ಈಗ?
ಪಂಚಿ ನೀವು ನನ್ನ ಸಚ್ಚಿ ಅಂದ್ರಿ.
ಜಾಗಟೆ ಯಾಕೆ?
ಪಂಚಿ ಅದೇ ನನ್ನ ಹೆಸರು ಇರಬಹುದೇನೋ ಅಂದ್ಕೊಂಡ್ರಿ.
ಜಾಗಟೆ ಯಾವುದು?
ಪಂಚಿ ಸಚ್ಚಿ.
ಜಾಗಟೆ ಮತ್ತೆ ನಿನ್ನ ಹೆಸರು ಪಂಚಿ ಅಂದೀ?
ಪಂಚಿ ಕರೆಕ್ಟೆ. ಅದೇ ನನ್ನ ಹೆಸರು.
ಜಾಗಟೆ (ಹುಡುಕಾಡುವುದನ್ನು ನಿಲ್ಲಿಸಿ) ನೋಡಯ್ಯಾ, ನಿನ್ನ ಹೆಸರು ಪಂಚೀ ಆಗಿದ್ರೆ ಸಚ್ಚೀ ಅಂತ ಯಾಕೆ ಕರುಸ್ಕೋತೀಯಾ? ಚಂಚಲ ಬುದ್ಧಿ ಅದು.
ನಮ್ಮೂರಿನೋರಿಗೆ ಸರಿಯಲ್ಲ ಅದು. ಗಟ್ಟಿಯಾಗಿರಬೇಕು ನೀನು. ನಿನ್ನ ಹೆಸರಲ್ಲೇ ನೀನು ಕರುಸ್ಕೋಬೇಕು. ನಿನ್ನ ಹೆಸರು ರಿಚೀ ಅಂತಿದ್ರೆ ಒಪ್ಕೋ ನನ್ನ ಹೆಸರು ರಿಚೀ ಅಂತ. (ಹುಡುಕಾಡುತ್ತಾ) ನನ್ನ ಮಾತು ಕೇಳು ನಚ್ಚೀ. (ಅಷ್ಟರಲ್ಲಿ ಬೆಂಕಿಪೊಟ್ಟಣ ಸಿಗತ್ತೆ. ಸಿಗರೇಟು ಹಚ್ಚಿಕೊಂಡು) ಒಂದು ಮಾತು ಹೇಳ್ತೀನಿ ಕೇಳು ವಿಶೀ…
ಹೀಗೇ ಮುಂದುವರಿಯತ್ತೆ.
___
ಹೆಸರಿನ ಬಗ್ಗೆ ಹೇಳುವಾಗ ಚಿತ್ತಾಲರ ಕಥೆ ಅಪಘಾತದ ಬಗ್ಗೆ ಹೇಳಲೇ ಬೇಕು. (ಕಥೆಯನ್ನು ಸ್ಥೂಲವಾಗಿ ಹೇಳಿಬಿಡುತ್ತೇನೆ. ಇದು ವಿಮರ್ಶೆಯಲ್ಲ) ಒಂದು ಮನೆಯ ಮೂರು ಮಕ್ಕಳು, ಎಲ್ಲರಿಗೂ ಕುಲಕರ್ಣಿ ಅಡ್ಡ ಹೆಸರು. ಬಾಂಬೆಯ ಲೋಕಲ್ ರೈಲೊಂದು ಭೀಕರ ಅಪಘಾತಕ್ಕೆ ಗುರಿಯಾಗಿದೆ. ಸುಮಾರು ಜನ ತೀರಿಕೊಂಡಿದ್ದಾರೆ. ತೀರಿಕೊಂಡವರಲ್ಲಿ ಒಂದು ಹೆಸರು ಕುಲಕರ್ಣಿ, ಇದೇ ವಿಳಾಸ. ಮೂವರು ಕುಲಕರ್ಣಿಗಳಲ್ಲಿ ಯಾರು ಸತ್ತಿರುವುದು() ಮೊದಲ ಕುಲಕರ್ಣಿ ಅಲ್ಲ ಎಂದಾದಾಗ ಅವನ ಹೆಂಡತಿಗೆ ಸಮಾಧಾನ. ಆದರೆ ಉಳಿದ ಇಬ್ಬರಲ್ಲಿ ಒಬ್ಬಳ ಗಂಡ ಹೋಗಿರುವುದು ಗ್ಯಾರಂಟಿ. ನಂತರದ ಸುದ್ದಿಯಲ್ಲಿ ಎರಡನೆಯವಳ ಗಂಡನೂ ಅಲ್ಲ ಎಂದಾದಾಗ ಹೋಗಿರುವುದು ಮೂರನೆಯವಳ ಗಂಡನೇ ಅಂತ ಖಾತ್ರಿಯಾಗುತ್ತದೆ. ನಂತರ ಏನು…ಚಿತ್ತಾಲರ ಕಥೆ ಓದಿಬಿಡಿ.






0 Comments