ಹೆಣ್ಮಕ್ಕಳು ಬೆಂದ್ರ, ಹೆಂಗ ಬೇಕಾದಂಗ ‘ಅರಿಯ’ಬಹುದು

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ .

ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ.

ಅಷ್ಟೇ ಆಗಿದ್ದರೆ ಇದನ್ನು ಒಂದು ರಸ ರುಚಿಕಾಲಂ ಹೆಸರಿನಡಿ ಸೇರಿಸಿ ನಾವು ಕೈ ತೊಳೆದುಕೊಳ್ಳುತ್ತಿದ್ದೇವೇನೋ..!

ಆಕೆಗೆ ಒಳಗಣ್ಣಿದೆ. ಒಂದು ಆಹಾರ ಹೇಗೆ ಒಂದು ಸಂಸ್ಕೃತಿಯ ಭಾಗವಾಗಿ ಬರುತ್ತದೆ ಎನ್ನುವುದರ ಬಗ್ಗೆ ಹಾಗೂ ಹೇಗೆ ಆಹಾರ ಒಂದು ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದರ ಬಗ್ಗೆಯೂ

ಹಾಗಾಗಿಯೇ ಇದು ರಸದೂಟವೂ ಹೌದು ಸಮಾಜ ಶಾಸ್ತ್ರದ ಪಾಠವೂ ಹೌದು.

ಆಂಬುರ್‌ ಮಾಡ್ಯಾರ? ಅಂದ್ರ ಅವೊತ್ತು ಓಣಿ ತುಂಬಾ ಅದರ್ದ ವಾಸನಿ ಘಂ ಅಂತಿರ್ತದ. ಇದು ಕಲ್ಯಾಣ ಕರ್ನಾಟಕದಾಗ ಕಟ್ಟಿನ ಸಾರಿಗೆ ಆಂಬುರ್‌ ಅಂತಾರ. ವಿಜಯಪುರದಿಂದ ಹಾವೇರಿತನಾನೂ, ಕಟ್ಟಿನ ಸಾರು. ಹೋಳಗಿ ಜೊತಿಗೆ ಮಾಡುವ ಈ ಸಾರಿಗೆ ಮರುದಿನ ಅಷ್ಟೇ ಅಲ್ಲ, ಮಳ್ಳಾಮರುದಿನಾನೂ ಉಣ್ಣಾಕ ರುಚಿಮೊಗ್ಗುಗಳಿಂದ ಲಾಲಾರಸ ಸಿಡೀತಿರ್ತದ.

ಅದರ ಘಮನೆ ಅಂಥಾದ್ದು. ಒಲಿ ಇದ್ದಾಗ, ಕೆಂಡದೊಳಗ ಉಳ್ಳಾಗಡ್ಡಿ, ಬಳ್ಳೊಳ್ಳಿ, ಒಣಕೊಬ್ಬರಿ ಸುಡ್ತಾರ. ಅವು ಹೊರಮೈಯೆಲ್ಲ ಖರ್ರಗ ಮಾಡ್ಕೊಂಡು, ಒಂದೊಂದೇ ಪದರು ಬಿಚ್ಕೊತಿರ್ತಾವ. ಥೇಟ್‌ ನಮ್ಮ ಜೀವನ ಇದ್ದಂಗ.. ಬದುಕು ಬಿಸಿಲಿನಾಗ ಬೇಯೂಮುಂದನ ತೀರ ನಮ್ಮ ಸಂಯಮದ, ಸಹನೆಯ ಪದರು ಕೆತ್ತಿ ಹೋಗ್ತಿರ್ತದ. ಆದರೂ ಒಳಗ ಬೆಂದಷ್ಟು ಮನುಷಾ ಮೆತ್ಗ ಆಗ್ತಾನ.

ಆದ್ರ ನಾವು ಬೆಂಕಿಗೆ ಎಷ್ಟು ಹೊತ್ತು ಇರ್ತೀವಿ, ಬೆಂಕಿ ನಮ್ಮನ್ನ ಎಷ್ಟು ಸುಡ್ತದ ಅನ್ನೂದು ನಮ್ಮ ಹೊರಮೈ ಕವಚ ಎಷ್ಟು ಗಟ್ಟಿಯದ ಅನ್ನೂದ್ರ ಮ್ಯಾಲೆ ಹೋಗ್ತದ. ಬಳ್ಳೊಳ್ಳಿಯಹಂಗ ತಿಳುವಿದ್ರ, ಲಗೂನ ಸುಟ್ಟು ಬೂದಿ ಆಗ್ತೇವಿ. ಉಳ್ಳಾಗಡ್ಡಿ ಹಂಗಿದ್ರ, ಸುಲದಷ್ಟೂ ಬಯಲು. ಕೊನೀಗೆ ಏನೂ ಉಳಿಯೂದಿಲ್ಲ. ಆದ್ರ ಘಾಟು ಉಳಿಸಿರ್ತೇವಿ. ಒಣಕೊಬ್ಬರಿ, ಹೊರಮೈ ಸುಟ್ಕೊಂಡಷ್ಟು ಹೆಚ್ಗಿ ಎಣ್ಣಿಬಿಡ್ತದ. ಹೆಚ್ಚುಹೆಚ್ಚು ಬೆಂದಷ್ಟೂ ಜೀವದ್ರವ್ಯ ಹೆಚ್ಚಾಗಬೇಕು. ಜೀವನಪ್ರೀತಿ ಉಕ್ಕಿಹರೀಬೇಕು. ನಮಗ ಸಿಗೂದು ಇದೊಂದೆ ಜೀವನ. ಸ್ವಾದಿಷ್ಟ ಮಾಡ್ಕೊಂತೀವೊ.. ಇಲ್ವೊ ಅನ್ನೂದು ನಮ್ದೆ ಆಯ್ಕೆ. ನಾವು ಯಾವುದಕ್ಕ ಆದ್ಯತೆ ಕೊಡ್ತೇವಿ ಅನ್ನೂದರ ಮ್ಯಾಲೂ ಇದು ನಿರ್ಧಾರ ಆಗಿರ್ತದ.

ಈ ಆಂಬುರ್‌ ಮತ್ತು ಕಟ್ಟಿನ ಸಾರಿನ ಬಗ್ಗೆ ಹೇಳಾಕತ್ರ ಕಟ್ಟುಕಟ್ಟು ಕತಿಗಳು. ಆಂಬರದಷ್ಟು ವಿಷಯಗಳು. ಇವನ್ನಲ್ಲೆ ಬಿಡೂನಂತ ಸದ್ಯಕ್ಕ. ಈ ಮೂರು ಸುಟ್ಟ ಮ್ಯಾಲೆ, ಹಂಚಿನಾಗ ಹವೇಜು, ಜೀರಗಿ, ಶಾಜೀರಗಿ, ದಾಲ್ಚಿನ್ನಿ, ಯಾಲಕ್ಕಿ, ಲವಂಗ, ಒಣಮೆಣಸಿನಕಾಳು, ಕೆಂಪುಸಾರು ಬೇಕಾದ್ರ ಕೆಂಪುಮೆಣಸಿನಕಾಯಿ, ಹಸಿರು ಸಾರು ಬೇಕಾದ್ರ ಹಸಿಮೆಣಸಿನಕಾಯಿ ಹಾಕಬಹುದು. ಆದ್ರ ಇದು ಮಾತ್ರ ತನ್ನದೇ ಒಂದು ಕಂದು ಬಣ್ಣ ಮಿಶ್ರಣ ಮಾಡೇ ಬಿಡ್ತದ.

ಬ್ಯಾಳಿಕಟ್ಟಿಗೆ ನಾವು ಹುಣಶೀಹಣ್ಣು ನೆನಸಿಟ್ಟ ರಸಾನೂ ಬೆರಸ್ತೇವಿ. ಆಹಹಾ… ಈಗ ಒಂದು ಅಂದಾಜು ಬಂದಿರ್ತದ ನಿಮಗ. ಉಳ್ಳಾಗಡ್ಡಿ, ಬಳ್ಳೊಳ್ಳಿ, ಒಣಕೊಬ್ಬರಿಗಳ ಮಂದರುಚಿ, ಮಸಾಲಿಯ ಖಾರ, ಹುಣಸಿಹುಳಿ. ಜೊತಿಗೆ ಬ್ಯಾಳಿ ಕಟ್ಟಿನ ಮಂದ ರುಚಿ. ಅದರೊಳಗ ಹೂರ್ಣದ ಸಿಹಿ.. ಇವಿಷ್ಟು ಸೇರಿದ್ರ… ಆಹಹಾ… ಸೊರಕ್ಕ‌ಂತ ಸುರಕೊಂಡು ಉಣ್ಣುವ ಹದ, ಕಿವಿಯೊಳಗ ಕೇಳ್ತದ. ಆ ಹಿತಮಧುರ ಖಾರ ಮೂಗಿನಾಗ ಸಣ್ಣದೊಂದು ಝರಿ ಹುಟ್ಟಸ್ತದ.

ಆದ್ರೂ ತಿನ್ನೂದು ಬಿಡಾಕ ಆಗೂದಿಲ್ಲ. ಬಿಸಿಹೋಳಿಗಿ, ಈ ಸಾರಿನೊಳಗ ಎದ್ಕೊಂಡು ತಿಂತೇವಿ. ಭಾಳಷ್ಟು ಮಂದಿಗೆ ಇದೆಂಥ ಕಾಂಬಿನೇಷನ್ನು… ಸಿಹಿ ಮತ್ತು ಖಾರದ್ದು… ಹೋಳಿಗಿ ಶೀಕರಣಿ, ಹೋಳಿಗಿ ಶ್ಯಾವಿಗಿ, ಹೋಳಿಗಿ, ಬಾಳಿಹಣ್ಣಿನ ಶೀಕರಣಿ, ಹೋಳಿಗಿ ಸಕ್ಕರಿಪಾಕ, ಹಿಂಗ ಸೋನೆ ಪೆ ಸುಹಾಗ ಇದ್ದಂಗ ಡಬಲ್‌ ಧಮಾಕಾದ ಸಿಹಿ ಉಣ್ಣೂದು ಸಹಜದ. ಆದ್ರ ಹಿಂಗ.. ಖಾರ, ಹುಳಿ ಮತ್ತು ಬೆಲ್ಚದ ಹೋಳಿಗಿ…

ಹೇಳಿದ್ರ ತಿಳಿಯೂದಿಲ್ಲದು. ಬಿಸಿ ಹೋಳಿಗಿಗೆ ಮಿಳ್ಳಿಲೆ ತುಪ್ಪ ಸುರಕೊಂಡು, ಹೂಮೃದುಲ ಹೋಳಿಗಿಯನ್ನ ಈ ಕಟ್ಟಿನ ಸಾರಿನೊಳಗ ಎದ್ಕೊಂಡು ತಿಂದ್ರ… ಆಹಾ.. ಭ್ರೂಮಧ್ಯಕೇಂದ್ರಕ್ಕ ಆ ರುಚಿ ತಾಕ್ತದ. ಕಣ್ಣು ತಾನೇ ತಾನಾಗಿ ಚರಮಸುಖ ಅನುಭವಿಸಿದ್ಹಂಗ ಅರ್ಧ ನಿಮೀಲಿತವಾಗ್ತಾವ. ಹಿಂಗ ಉಣ್ಣುವ ಸುಖ ಆಸ್ವಾದಿಸವುದೂ ಒಂದು ಕಲೆ. ನೆತ್ತಿಗೆ ತಾಕುವ ಖಾರ, ತುಟಿ, ನಾಲಿಗೆ ಆವರಿಸುವ ಸವಿ.. ಮಧುರಾತಿಮಧುರ ನೋವು ಅನುಭವಿಸಿದಂಗ.. ಹೋಳಿಗಿ ಸಾರು ಉಣ್ಣೂದಂದ್ರ.

ಈ ಸಾರು ಮೊದಲನೆ ರುಚಿ ಹಿತವಾಗಿರ್ತದ. ಎರಡನೆಯ ರುಚಿ, ಅಗ್ದಿ ಸ್ಟ್ರಾಂಗ್‌ ಇರ್ತದ. ಮತ್ತ ಕುದಿಸಿದಂಗ, ಕುದಿಸಿದಂಗ, ಮಸಾಲಿ ತನ್ನ ಹಟ ಬಿಟ್ಟು, ಕಟ್ಟಿನೊಟ್ಟಿಗೆ ಬೆರೀತದ. ಈ ಬೆರತಂಗ, ಬೆರತಂಗ, ರುಚಿ ಮತ್ತೇರಿಸಾಕ ಶುರುವಾಗ್ತದ.

ಮೊದಲ ದಿನ ಹೋಳಗಿ ಜೊತಿಗೆ ಉಣ್ತಾರ. ಬಿಸಿಬಿಸಿ ಬಿಳೀ ಮಲ್ಲಿಗಿಯಂಥ ಅನ್ನದೊಳಗ ಕಟ್ಟಿಕಟ್ಟಿ, ತುಪ್ಪಾ ಹಾಕಿ, ಸಾರು ಸುರಕೊಂತಾರ. ಅದಕ್ಕ ಪುಠಾಣಿಪುಡಿ ಭಾರಿ ಚೊಲೊ ಕಾಂಬಿನೇಷನ್ನು. ಎರಡನೆಯ ದಿನ ಅನ್ನ, ತುಪ್ಪ ಸಾರು, ಹಪ್ಪಳ.. ಮೂರನೆಯ ದಿನ ಎಲ್ಲಾರೂ ಒಂದೀಟೀಟೆ, ವಾಟಗಾದಾಗ ಹಾಕ್ಕೊಂಡು ಸೂಪ್‌ ಕುಡದ್ಹಂಗ ಸವಿಯೋರೆ.

ಪ್ರತಿದಿನ ಕಾಯಿಸೂಮುಂದನೂ ಸಾರಿನ ವಾಸನಿ ಇಷ್ಟಿಷ್ಟೇ ಮನಿಯಿಂದ ಹೊರಗ ಹೋಗ್ತದ. ಘಮ ಎಲ್ಲಾ ಕಡೆ ಪಸರಿಸ್ತದ.

ಈ ಕಟ್ಟು ತೆಗಿಯಾಕ ಬ್ಯಾಳಿನೂ ಒಂದು ಹದದಾಗ ಬೆಂದಿರಬೇಕು. ಹೋಳಿಗಿ ಹೂರಣಕ್ಕ ಬ್ಯಾಳಿ ಬೇಯಿಸಿದ್ಹಂಗೆ ಬೇಯಿಸ್ಬೇಕು. ಕಟ್ಟು ಬರುವಷ್ಟು ನೀರು ಹಾಕಬೇಕು. ನನಗಿನ್ನಾ ನೆನಪದ. ನಮ್ಮಜ್ಜಿ ಬ್ಯಾಳಿ ಬೆಂದಾವೇನು ಅಂತ ನೋಡುಮುಂದ, ಸೌಟಿಲೆ ತಗದು ನೋಡ್ತಿದ್ರು. ಅವನ್ನು ಮುಟ್ಟಿ, ಇನ್ನಾ ಗಂಡದಾವ ಅಂತಿದ್ರು. ಅಂದ್ರ, ಬ್ಯಾಳಿ ಹದದೊಳಗ ಬೆಂದಿಲ್ಲ ಅಂತರ್ಥ. ನುಣ್ಣಗ ಬೇಯೂದಂದ್ರ ಹೆಣ್ಣು ಬೆಂದಂಗ ಅಂತ ಕೇಳಿದ್ದೆ. ಅದಕ್ಕವರು.. ಹೌದು. ಹೆಣ್ಮಕ್ಕಳು ಬೆಂದ್ರ, ಹೆಂಗ ಬೇಕಾದಂಗ ‘ಅರಿಯ’ಬಹುದು. ನುಣ್ಣಗಾದ್ರ, ಉಂಡಿನಾರು ಕಟ್ಟಬಹುದು, ಕಡುಬಿಗಾದರೂ ಹಾಕಬಹುದು. ಆದ್ರ, ಒಮ್ಮೆ ನುಣ್ಣಗೆ ಬೆಂದಮ್ಯಾಲೆ.. ನೀವೆಷ್ಟೆ ಬೆಲ್ಲ ಕೂಡಿಸಿದ್ರೂ, ಅದು ಹಿಡಿಯೂದಿಲ್ಲ. ಅದು ಆಣ ಆಗಿ ಹೊರಗ ಹೋಗ್ತದ. ಹಂಗಾಗಿ ಹೆಣ್ಣಿಗೆ ಭಾಳ ಬೇಯಾಕ ಬಿಡಬಾರದು. ಆಮೇಲೆ ಏನೇ ಮಾಡಿದ್ರೂ ಬೆಲ್ಲ ಅಷ್ಟೇ ಕರಗ್ತದ ಹೊರತಾಗಿ ಅಕಿ ಕರಗೂದಿಲ್ಲ.

ಗಂಡದಾವ ಅಂದ್ರ, ಮೇಲ್ನೋಟಕ್ಕ ಬೆಂದಂಗ ಕಾಣ್ತಾವ ಖರೆ, ಹೊಟ್ಟಿ ಒಡಿಯೂದಿಲ್ಲ. ಹೊಟ್ಟಿಯೊಳಗ ಬಿರಸ ಇರ್ತಾವ. ಅದು, ಗಂಡಿನ ಅಹಂಕಾರ. ಅದು ಚೂರಾದ್ರ ಬ್ಯಾಳಿ ಬರೋಬ್ಬರಿ ಉಳಿಯಾಂಗಿಲ್ಲ.. ಅದೂ ತನ್ನ ಸ್ವರೂಪ ಕಳ್ಕೊಂತದ.

ಹೂರ್ಣ ಮಾಡೂದು, ಅಗ್ದಿ ಹದದಾಗ ಬೇಯಿಸೂದು, ಜೀವನಕಲೆ ಇದ್ದಂಗ. ನಾವು ಎಷ್ಟು ಬೇಯ್ತೇವಿ, ಎಷ್ಟು ಬೇಯ್ಬೇಕು ಅಂತ ನಿರ್ಧಾರ ಮಾಡ್ಕೋತೇವಿ, ಅದರ ಮ್ಯಾಲೆ ನಮ್ಮ ಜೀವನದ ಹದ ನಿಂತದ. ಹೂರ್ಣ ಮಾಡ್ಕೊತೀರೊ, ಸಪ್ಪನ ತೊವ್ವಿ ಆಗ್ತೀರೊ.. ನಿಮ್ದ ಆಯ್ಕೆ.

‍ಲೇಖಕರು ಅನಾಮಿಕಾ

November 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shobha H S Kumaraswamy

    ಓಹ್ ಅಡುಗೆ ತಿಂಡಿ ಊಟದೊಳಗೆ ಎಷ್ಟೊಂದು ಜೀವನ ಪಾಠಗಳನ್ನು ತತ್ವ ಸಿದ್ಧಾಂತಗಳನ್ನು ತುಂಬಿಸಿಟ್ಟೀದ್ದೀರ ಮೇಡಂ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Shobha H S KumaraswamyCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: