ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೆಗಡೆ ಹೇಳಿದ ವಿಧವಾ ವೇತನ ಕಥೆ‌

ಶಿವಾಜಿ ಗಣೇಶನ್

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ಕೂಡಲೇ ವಿಧವಾ ವೇತನ ಮತ್ತು ವಿಕಲಾಂಗರ ವೇತನವನ್ನು ರೂ. ೬೦೦ ರಿಂದ ೮೦೦ಗೆ ಹೆಚ್ಚಿಸಿದ್ದಾರೆ. ಈ ದಿನಗಳಲ್ಲಿ ವೃದ್ಧಾಪ್ಯ ವೇತನ ಸೇರಿದಂತೆ ಈ ಹಣ ಯಾವ ಲೆಕ್ಕಕ್ಕೂ ಇಲ್ಲ ಎನ್ನುವುದು ವಾಸ್ತವ. ಈ ವರ್ಗಕ್ಕೆ ಕೊಡುತ್ತಿರುವ ಮಾಸಿಕ ವೇತನದ ಬಗೆಗೆ ಹಲವರಿಗೆ ವಿರೋಧ ಇದೆ. ಆದರೆ ಒಂದು ಆಡಳಿತ ಈ ಅಸಹಾಯಕರ ಬದುಕಿಗೆ ಆಸರೆಯಾಗಿ ನಿಲ್ಲುವುದು ಅದರ ಸಾಮಾಜಿಕ ಹೊಣೆಗಾರಿಕೆ ಎನ್ನುವುದರಲ್ಲಿ ಬೇರೆ ಮಾತಿಲ್ಲ. ಸಾಧ್ಯವಾದರೆ ಸರ್ಕಾರ ಈ ಜನರ ವೇತನವನ್ನು ಮತ್ತಷ್ಟು ಹೆಚ್ಚಿಸಿದರೆ ಒಳ್ಳೆಯದು.

೧೯೮೩ರ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಏರ್ಪಟ್ಟಾಗ ಜನತಾ ಪಕ್ಷದ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆದವರು ರಾಮಕೃಷ್ಣ ಹೆಗಡೆ ಅವರು ಎನ್ನುವುದು ಇತಿಹಾಸ.

ಈ ಸರ್ಕಾರ ಬರುವ ಮುನ್ನ ಆರ್. ಗುಂಡೂರಾವ್ ಸರ್ಕಾರವಿತ್ತು. ದೇವರಾಜ ಅರಸು ಅವರಿಂದ ಹಿಡಿದು ಗುಂಡೂರಾವ್ ಸರ್ಕಾರದಲ್ಲಿಯೂ ಬಡವರಿಗೆ ಹಲವಾರು ಕಾರ್ಯಕ್ರಮಗಳು ಮುಂದುವರಿದಿದ್ದವು. ಇದೇ ಜನತಾ ಪರಿವಾರ ಮತ್ತು ಬಿಜೆಪಿ ಈ ಕಾರ್ಯಕ್ರಮಗಳನ್ನು ಆ ದಿನಗಳಲ್ಲಿ ಅಗ್ಗದ ಜನಪ್ರಿಯತೆ ಗಳಿಸುವ ಕಾರ್ಯಕ್ರಮಗಳು ಎಂದು ಟೀಕೆ ಮತ್ತು ಗೇಲಿ ಮಾಡುತ್ತಿದ್ದದ್ದು ಉಂಟು.

ಆದರೆ ಇದರ ಮಹತ್ವವನ್ನು ಚುನಾವಣೆ ರಾಜಕೀಯ ರಂಗದಲ್ಲಿ ಮತಗಳಿಕೆಗಾಗಿ ಎಲ್ಲ ಸರ್ಕಾರಗಳೂ ಮಾಡುತ್ತಲೇ ಬರಬೇಕಾಯಿತು. ಏಕೆಂದರೆ ಇಂತಹ ಕಾರ್ಯಕ್ರಮಗಳ ಜಾರಿಯಲ್ಲಿ ಲೋಪಗಳೇ ಜಾಸ್ತಿ, ಅಧಿಕಾರಿಗಳು ಸ್ಥಳೀಯ ಪುಢಾರಿಗಳು ತಿಂದು ಹಾಕಿ ಅರ್ಹರಲ್ಲದವರಿಗೂ ಈ ಕಾರ್ಯಕ್ರಮದ ಲಾಭ ತಲುಪುವಂತೆ ಮಾಡುತ್ತಾ ಬಂದದ್ದು ಈಗಲೂ ನೂರಾರು ದೂರುಗಳಿವೆ. ಇರಲಿ, ಈ ವಿಧವಾ ವೇತನವನ್ನು ರಾಮಕೃಷ್ಣ ಹೆಗಡೆ ಅವರು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದರು. ಆಗ ಅವರ ಸಂಪುಟದಲ್ಲಿದ್ದ ಪ್ರಭಾವಿ ಸಚಿವರುಗಳೂ ಸಹಾ ಇದನ್ನು ವಿರೋಧ ಮಾಡಿದವರಿದ್ದರು.

ಬಹುಶಃ ೧೯೮೭ ಇರಬೇಕು. ನಾನು ತುಮಕೂರಿನಲ್ಲಿ ಪ್ರಜಾವಾಣಿಯ ವರದಿಗಾರನಾಗಿದ್ದಾಗ, ಮುಖ್ಯಮಂತ್ರಿ ಹೆಗಡೆ ಅವರು ಒಂದು ದಿನ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರವಾಸ ಮಾಡಿದರು. ಒಂದು ಬೃಹತ್ ಸಭೆಯಲ್ಲಿ ಅವರು ಈ ವಿಧವಾ ವೇತನ ಜಾರಿಯ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದು ನನಗಿನ್ನೂ ನೆನಪಿದೆ. ಆ ನೆನಪನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಹೆಗಡೆ ಅವರು ೧೯೮೩ರಲ್ಲಿ ಮುಖ್ಯಮಂತ್ರಿ ಆದಾಗ ಅವರು ವಿಧಾನಸಭೆಯ ಸದಸ್ಯರಾಗಿರಲಿಲ್ಲ. ಅಧಿಕಾರವಹಿಸಿಕೊಂಡ ಆರು ತಿಂಗಳ ಒಳಗೆ ಅವರು ವಿಧಾನಸಭೆ ಇಲ್ಲವೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಬೇಕಿತ್ತು. ಆಗ ಕನಕಪುರ ಕ್ಷೇತ್ರದಿಂದ ಪಿ.ಜಿ.ಆರ್. ಸಿಂಧ್ಯಾ ಗೆದ್ದಿದ್ದರು. ಸಿಂಧ್ಯಾ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೆಗಡೆ ಅವರು ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು.

ಉಪಚುನಾವಣೆಯಲ್ಲಿ ಹೆಗಡೆ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಆರಿಸಿ ಬಂದಿದ್ದರು. ಕಾಂಗ್ರೆಸ್ಸಿನಿಂದ ಲಿಂಗೇಗೌಡ ಅವರು ಸ್ಪರ್ಧಿಸಿ ೨೩ ಸಾವಿರಕ್ಕೂ ಹೆಚ್ಚು ಮತಗಳಿಂದ ಪರಾಭವಗೊಂಡಿದ್ದರು. ರಾಮಕೃಷ್ಣ ಹೆಗಡೆ ಅವರು ತುಮಕೂರಿನಲ್ಲಿ ಮಾತನಾಡುತ್ತಾ ತಾವು ಜಾರಿಗೆ ತಂದ ಹಲವು ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಾ ಬಂದರು.

ಕನಕಪುರ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಸಭೆ ಮುಗಿಸಿ ಸಂಜೆ ಬೆಂಗಳೂರಿಗೆ ಬರುತ್ತಿದ್ದಾಗ ಒಬ್ಬ ಮುಸ್ಲಿಂ ಮಹಿಳೆ ತನ್ನ ಮೂರ‍್ನಾಲ್ಕು ಮಕ್ಕಳನ್ನು ಕಟ್ಟಿಕೊಂಡು ಕಾರಿಗೆ ಅಡ್ಡ ಬಂದರು. ಚಾಲಕ ಕಾರನ್ನು ಪಕ್ಕಕ್ಕೆ ಸರಿಸಿ ಹೊರಡುವ ಪ್ರಯತ್ನ ಮಾಡಿದಾಗ ನಾನು ಕಾರು ನಿಲ್ಲಿಸಲು ಹೇಳಿದೆ. ನನ್ನ ಕಾರಿನ ಹಿಂದೆ ಇದ್ದ ಕಾರುಗಳು ನಿಲ್ಲುತ್ತವೆ. ಪೊಲೀಸರು ಮತ್ತು ಪಕ್ಷದ ನಾಯಕರು ಆ ಮಹಿಳೆಯನ್ನು ಎಬ್ಬಿಸಲು ಪ್ರಯತ್ನಿಸುತ್ತಾರೆ.

ಆಗ ಕಾರಿನಿಂದ ಇಳಿದು ಆ ಮಹಿಳೆಯನ್ನು ಕೇಳಿದೆ ‘ಏನು ಸಮಸ್ಯೆ; ಯಾಕೆ ಹೀಗೆ ಕಾರಿಗೆ ಅಡ್ಡ ಬಂದಿರಿ ಎಂದೆ’. ಆಗ ಆ ಮಹಿಳೆ ಅಳುತ್ತಾ, ನನ್ನ ಗಂಡ ಲಾರಿ ಡ್ರೈವರ್ ಆಗಿದ್ದರು. ಆಕ್ಸಿಡೆಂಟ್ ನಲ್ಲಿ ತೀರಿ ಹೋದರು. ನನಗೀಗ ದುಡಿಮೆ ಇಲ್ಲ. ಈ ಮಕ್ಕಳನ್ನು ಸಾಕುವುದು ಕಷ್ಟವಾಗಿದೆ. ನೀವು ಏನಾದರೂ ಸಹಾಯ ಮಾಡಿ ಎಂದು ಕಾಲು ಹಿಡಿಯಲು ಬಂದಳು. ನಾನಾಗ, ಆಯಿತಮ್ಮ ಖಂಡಿತಾ ನಿನಗೆ ಸಹಾಯ ಮಾಡುವೆ ಎಂದು ಭರವಸೆ ನೀಡಿ ಸಮಾಧಾನ ಮಾಡಿ ಹೊರಟೆ.

‘ಆ ದಿನ ರಾತ್ರಿ ನನಗೆ ಈ ಘಟನೆ ತುಂಬಾ ಕಾಡಿಸಿತು. ಇಂತಹ ಅಸಹಾಯಕ ವಿಧವೆಯರು ಸಾವಿರಾರು ಮಂದಿ ಇರಬಹುದು. ಇವರಿಗೆ ಏನಾದರೂ ಒಂದು ಕಾರ್ಯಕ್ರಮ ರೂಪಿಸಬೇಕು ಎಂದು ಯೋಚಿಸಿದೆ. ಅದರ ಪರಿಣಾಮವೇ ಈ ವಿಧವಾ ವೇತನ ಜಾರಿ’ ಎಂದು ಹೆಗಡೆ ಅವರು ತಮಗಾದ ಅನುಭವದ ಘಟನೆಯನ್ನು ಬಿಚ್ಚಿಟ್ಟರು.

‍ಲೇಖಕರು Admin

30 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading