ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೃದಯಶಿವ ಮೆಚ್ಚಿದ ’ಬಂಡೆ’

ರಾಜಶೇಖರ ಬಂಡೆ ‘ಕಾವ್ಯ’

ಹೃದಯ ಶಿವ

ರಾಜಶೇಖರ ಬಂಡೆ ನಮ್ಮ ಉತ್ಸಾಹಿ ಯುವಕವಿಗಳಲ್ಲಿ ಒಬ್ಬರು; ಕನಕಪುರದ ರೂರಲ್ ಕಾಲೇಜಿನಲ್ಲಿ ಅಚ್ಚುಕಟ್ಟಾಗಿ ಪಿಯುಸಿ ಫೇಲು ಮಾಡಿಕೊಂಡು ಹಾರೋಹಳ್ಳಿ ಸಮೀಪದ ಫ್ಯಾಕ್ಟರಿಗೆ ಸೇರಿದವರು. ಅಲ್ಲಿ ಬಾಯ್ಲರ್ ಆಪರೇಟರಾಗಿದ್ದುಕೊಂಡು ತಮ್ಮ ಕವಿತೆಗಳನ್ನು ಬರೆಯುವವರು. ರಾಜಶೇಖರ ಬಂಡೆ ಕನಕಪುರ ಸಮೀಪದ ಪುಟ್ಟ ಹಳ್ಳಿಯವರು; ಕನ್ನಡ ಅವರ ಮಾತೃಭಾಷೆ. ಅಪ್ಪ ಕೃಷಿಕ. ಈ ದಿನಗಳಲ್ಲಿ ಸಾಂಪ್ರದಾಯಿಕ ಎನಿಸದ ಶೈಲಿ, ಭಾಷೆ ಬಳಸಿ ಕವಿತೆ ರಚನೆ ಮಾಡುವ ಬಂಡೆ ಇತರ ಕವಿಗಳಿಗಿಂತ ಭಿನ್ನ. ಆಡುಭಾಷೆ, ವಿನೂತನ ಬಂಧ, ವಿಶಿಷ್ಟ ಪದಬಳಕೆ, ದಿನನಿತ್ಯದ ಸೋಜಿಗವನ್ನು ಹಸಿಹಸಿಯಾಗಿಯೇ ಅಕ್ಷರಕ್ಕಿಳಿಸುವ ರಾಜಶೇಖರರ ಕವಿತೆಗಳಲ್ಲಿ ಎಂದಿನ ಶಾಸ್ತ್ರೀಯ ಶೈಲಿಯಾಗಲೀ, ಕೃತಕ ಶಿಷ್ಟತೆಯಾಗಲೀ ಇಲ್ಲ, ತನ್ನದೇ ವಿಚಿತ್ರ ಪ್ರಾಕಾರದಂಥ ಇವರ ಕವಿತೆಗಳು ಕೆಲವು ಮಡಿವಂತ ಹೆಂಗಸರಿಗೆ ಹಿಡಿಸುವುದಿಲ್ಲ. ಅಂಥವರಿಗೆ ಬಂಡೆ ಹೀಗೆ ಉತ್ತರಿಸುತ್ತಾರೆ, “ಮಾನವ, ವಿಕಾಸದ ಮೊದಲ ಹಂತದಲ್ಲಿ ಬೆತ್ತಲಿದ್ದ. ಅವಾಗಿನ ಮಾನವ ನನಗಿಷ್ಟ. ನೈಜತೆ ಪ್ರಕೃತಿದತ್ತವಾದುದು. ಹಾಗಾಗಿ ನನ್ನ ಕವಿತೆಗಳೂ ಬೆತ್ತಲಾಗಿರುತ್ತವೆ. ಒಪ್ಪಿಕೊಳ್ಳುವವರು ಒಪ್ಪಿಕೊಳ್ಳಲಿ, ಒಪ್ಪಿಕೊಳ್ಳದಿದ್ದರೆ ನನ್ನ ತಪ್ಪಲ್ಲ. ನಾನು ನನ್ನ ಕವಿತೆಗಳಿಗೆ ನಿಷ್ಟನಾಗಿದ್ದೇನೆ ಅಷ್ಟೇ”
“ಒಂದು ವರ್ಷ ನೀವು ಕವನ ಬರೆಯಲೇಬಾರದು ಅಂತ ಯಾರಾದರು ತಾಕೀತು ಮಾಡಿದರೆ ಏನು ಮಾಡುತ್ತೀರಿ?”
“ಹಾಗೆ ಹೇಳುವವರ ಬಗ್ಗೆ ಒಂದು ಕವನ ಬರೆಯುತ್ತೇನೆ”
“ನಿಮ್ಮ ಮೇಲೆ ಪ್ರಭಾವ ಬೀರಿರುವ ಕವಿಗಳು ಯಾರ್ಯಾರು?”
“ನಾನು ಹೆಚ್ಚಿಗೆ ಓದಿಕೊಂಡವನಲ್ಲ. ಓದಿಕೊಂಡವರ ಪೈಕಿ ಲಂಕೇಶ್ ನನ್ನ ಇಷ್ಟದ ಕವಿ. ಎಲ್ಲರೂ ಕಿಂಗ್ ಎನಿಸಿಕೊಳ್ಳಲು ಪ್ರಯತ್ನಿಸಿದರೆ ಲಂಕೇಶ್ ಕಿಂಗ್ ಮೇಕರ್. ನಲವತ್ತೈದು ವರ್ಷಗಳಲ್ಲಿ ಬೆರಳೆಣಿಕೆಯ ಪದ್ಯಗಳನ್ನು ಬರೆದಿದ್ದರೂ ಎಲ್ಲ ಪದ್ಯಗಳೂ ಸಾರ್ವಕಾಲಿಕ ಎನಿಸಿಕೊಳ್ಳುತ್ತವೆ. ಅವರ ನೀಲುಕಾವ್ಯವಂತೂ ಬೆರಗು ಮೂಡಿಸುವಂಥದ್ದು. ತನ್ಮೂಲಕ ನನ್ನನ್ನು ಹುಡುಕಲು ದಾರಿ ಮಾಡಿಕೊಡುವಂಥದ್ದು. ಉಳಿದಂತೆ ಬೋದಿಲೇರ್ ನನಗಿಷ್ಟ. ಆತನ ಒಂದಿಷ್ಟು ಕವಿತೆಗಳನ್ನು ಓದಿದ ಮೇಲೆಯೇ ನನ್ನ ಕವಿತೆಗಳು ಆದಷ್ಟು ಮುಕ್ತ ಮುಕ್ತ ಎನಿಸಿಕೊಳ್ಳಲು ಸಾಧ್ಯವಾಗಿದ್ದು”

-ರಾಜಶೇಖರ ಬಂಡೆ ಒಬ್ಬ ಸಾದಾ ಸೀದಾ ಸಹಜ ಕವಿ. ಅದ್ಭುತ ಸಂವೇದನೆಯ ಹಸಿಬಿಸಿ ಭಾವನೆಗಳನ್ನು ಉಳ್ಳ ತಾಜಾ ಕವಿ. ಅವರ ಕವನಗಳಲ್ಲಿ ಶೃಂಗಾರ ರಸ ತುಸು ಹೆಚ್ಚೇ ಚಿಮ್ಮಿದರೂ ಇತ್ತೀಚಿನ ದಿನದ ಆತನ ಕವಿತೆಗಳಲ್ಲಿ ತೀರಾ ಗಂಭೀರವೆನಿಸುವ, ಚಿಂತನೆಗೆ ಹಚ್ಚುವ, ಆಧ್ಯಾತ್ಮದ ಕುರುಹುಗಳು ಸುಳಿಯುತ್ತಿವೆ.
ಕವನ ಬರೆಯುವುದೇ ಉಸಿರಾಟವೆನ್ನುವಷ್ಟರ ಮಟ್ಟಿಗೆ ಅಚ್ಚಿಕೊಂಡಿರುವ ರಾಜಶೇಖರ ಬಂಡೆ ಬರೆದಿರುವ ಕೆಲವೊಂದು ಕವನಗಳನ್ನು ಇಲ್ಲಿ ನೀಡುತ್ತಿದ್ದೇನೆ. ಓದಿಕೊಳ್ಳಿ…
ಬಿಟ್ಟು ಹೋದವಳನ್ನು ಮರೆತು
ಬೀಡಿ ತುಂಡುಗಳ ಜೊತೆ
ಹೆಣವಾಗಿ, ನಿರುಮ್ಮಳ
ಮಲಗಿದ್ದವನ ಮಗ್ಗುಲಲ್ಲೇ
ಬೀರು ಬಾಟಲೊಂದು
ನೊರೆ ಕಕ್ಕಿ ಸತ್ತಿತ್ತು ಮತ್ತು
ಬೆಂಕಿ ಕಡ್ಡಿಗಳೆರಡು ತಲೆ ಸುಟ್ಟುಕೊಂಡಿದ್ದವು.
ಇನ್ನೊಂದು ಕವನ :
ಅವಳು ಮೈ ನೆರೆಯುತ್ತಾಳೆ
ಸಮಾಜ ಓ ಎನ್ನುತ್ತಾ ಸಾಗುತ್ತದೆ,
ಮಡಿ ನಗರಿಗೆ ದಾರಿಯಿಲ್ಲ
ಅಸಲಿಗೆ ಮೈಲಿಗೆಯೆಂಬ ಊರೇ ಇಲ್ಲ,
ಮುಟ್ಟಾದವಳು ಮೆತ್ತನೆಯ ತಬ್ಬು ಬಯಸಿ
ಹೊಸಲು ದಾಟಿ, ಸ್ರವಿದು, ಹೊಕ್ಕಳು ಊದಿ,
ಕಟ್ಟ ಕಡೆಗೆ ಗರ್ಭಪಾತ .
 
ಮತ್ತದೇ ಅಲ್ಲೇ ನವೆ, ತುರುಚಿದರೆ ರಕ್ತ,
ಸೋಕಿದರೆ ಶಾಪ, ನೆನೆದರೆ
ರಾತ್ರಿಗೆನ್ತೆನ್ತದೋ ಕನಸು,
ಹಗಲುಗಳು ತಬ್ಬಿಬ್ಬು, ಇರುಳು ಸಹಜ ಸುಖ,
ಜಗತ್ತು ಅಂಧಕಾರದಲ್ಲಿದೆಯೆ ಂದು
ಕಣ್ತೆರೆಯುತ್ತಾಳೆ,
ಇಲ್ಲಿ ಎಲ್ಲರೂ ಕಣ್ಮುಚ್ಚಿದ್ದಾರಷ್ಟೆ,
 
ಹುಚ್ಚೆಳ್ಳು ಅಮಾವಾಶ್ಯೆಯ ರಾತ್ರಿ
ಬೆದೆಗೆ ಬರುತ್ತವೆ ನಾಯಿಗಳ ಗುಂಪು
ಹುಣ್ಣಿಮೆಯ ರಾತ್ರಿ ಹೇಳಿಮಾಡಿಸಿದ ಘಳಿಗೆ
ಒಬ್ಬರೊಳಗೊಬ್ಬರು ಇಳಿದು ಹತ್ತಿದರಾಯ್ತು
ಪೇಟೆಯಲಿ ಗುಳಿಗೆಗೇನು ರೋಗ,
 
ಕಯ್ ಕಾಲು ಊನವಾದ ದಿನ
ಸತ್ತರಾಯ್ತು ಬದುಕಲಿಕ್ಕೆ
ಹೀಗೊಂದಷ್ಟು ದಿನ ಬದುಕೇ ಇರುವ
ಬದುಕಿದ್ದೆವೆಂದು ಹೇಳಲಿಕ್ಕೆ ,
 
ಕಂದೀಲು ಫಣಫಣ ಬೆಳಕು ಸುರಿಯುತ್ತಿದೆ
ಬೆತ್ತಲು ಮೈಗಳು ಕತ್ತಲು ಕೇಳಿ, ಕಯ್ ಬೀಸಿದರೆ
ನಲುಗಿ ಹೋಗುವ ದೀಪ ಪಕ್ಕಾ ನಿರ್ಭಾವುಕ,
 
ಬೆಸೆದ ಕಯ್ಕಾಲು ತೊಡೆಗಳ ನಡುವೆ
ಅದೂ ಇಲ್ಲ ಇದೂ ಇಲ್ಲ,ಹಾಗಿದ್ದರೇನಿದು,
ಮೈನೆರೆದು ಜಗದ ಬಾಯಿಗೆ ಸಲೀಸಾಗಿ ಸಿಕ್ಕ ಮೂಳೆಯೇ ,
ಕಬ್ಬಿಣದ ಕಾವೇ, ನೆತ್ತರ ಹೆಪ್ಪೇ,
ನಟ್ಟಿರುಳ ರಾತ್ರಿಯ ಬೆಳಕೆಂಬ ಸುಳ್ಳೇ…
 
ಮತ್ತೊಂದು ಕವನ :
 
ಮುರಿದ ಹೃದಯದ ಕವಿತೆ ಚಂದವಾಗುವುದುಂಟೆ
ರಕುತ ರಣಕಣಕಣವ ಹೊಗಳಬಹುದೆ
ಇರದೆ ಹೋದಳವನ್ನೆ ನೆನೆದು ಬೇಯುವ ಎದೆಗೆ
ನಿಮ್ಮ ನಲ್ಮೆಯ ಮಾತು ಹಿತವಾದಿತೆ
 
ಬರೆದು ಬಿಸುಟಿದ ಕವಿತೆ ತನ್ನ ಪ್ರಾಣದ ಪದಕೆ
ಸಾಂತ್ವನವನೆಂದಾರು ಹೇಳಬಹುದೆ
ಸಾವ ಗೆಲ್ಲುವ ಶಕುತಿ ಸತ್ತು ಹೋಗಿಹುದಲ್ಲ
ಬದುಕಿಕೊಂಡರೆ ಅವಳು ಮುನಿಸಬಹುದೆ
 
ನಿಮ್ಮ ಎದುರಲಿ ಕೂತು ಕವಿತೆಗಳ ಬರೆಯುವೆನು
ನೋವು ಮಾತ್ರವೆ ಅಲ್ಲಿ ನಗುತದಷ್ಟೆ
ಎಣಿಸಬೇಡಿರಿ ಕ್ಷಮಿಸಿ ಅಲ್ಲಿ ಮಲ್ಲಿಗೆಯಿಲ್ಲ
ಒಂಟಿ ಎಳೆ ಮಗುವಿನಳು ಬಿಕ್ಕುವಷ್ಟೆ
 
ನೋವು ನಾಚುವುದೆಂತು ಹಾದಿಬದಿ ಸೂಳೆಯದು
ಕರೆದು ಎದೆಗಪ್ಪುತಲಿ ಕನಲುತ್ತದೆ
ಬೇಗೆ ಬೇಯುತದಷ್ಟೆ ತಂಪ ಹರಡುವುದೆಂತು
ಬೋಗಣಿಯ ಬದುಕ ತಳ ಸೀಯುತ್ತದೆ
 
ನಾಳೆಗಳ ಬೆರಳೆಣಿಕೆ ಸತತ ಕಾಯುವ ತೀಟೆ
ಧೂಳು ದಾರಿಯ ಆಚೆ ನಗರವಿಲ್ಲ
ಕಾತುರದ ದಿನಕಳೆದು ಸಾವು ಅಪ್ಪುವ ದಿನಕೆ
ನಿಮ್ಮ ನೆಚ್ಚಿನ ಕವಿಗೆ ಉಸಿರೆ ಇಲ್ಲ.
 
ಮಗದೊಂದು ಕವನ :
 
ಬರೆಯುತ್ತೇನೆ ನಾನು
ಈ ಬಡಪಾಯಿ ಪೆನ್ನನು
ಮೇಲೆತ್ತಿ, ಕೆಳಗಿಳಿಸಿ, ತಲೆ ಸುತ್ತಿಸಿ
ಪೇಜಿನ ಕೊನೆಯಲ್ಲಿ ಮುಗ್ಗರಿಸಿ, ಬೀಳಿಸಿ
ಬಿಳಿ ಹಾಳೆಯ ಅಂದಗೆಡಿಸಿ
ಇಲ್ಲವೇ ಸಿಂಗರಿಸಿ, ನಾಜೂಕುಗೊಳಿಸಿ
 
ಬರೆಯುತ್ತೇನೆ ನಾನು
ಒಳಗು ಹೊರಗುಗಳನ್ನೆಲ್ಲ
ಕೆಲವೊಮ್ಮೆ ನಿಮ್ಮ ಎಲುಬುಗಳಿಗೆಲ್ಲ
ದುರ್ಬೀನಿಟ್ಟು, ಬೆಲ್ಲದುಂಡೆಗಳ ಸೋಸಿ
ಇಲ್ಲವೇ ತರಾವರಿ ವಿಷಗಳ ಕಕ್ಕಿಸಿ
ನಿಮ್ಮ ಕಣ್ಣು ಕೆಂಪಾಗಿಸಿ
 
ಬರೆಯುತ್ತೇನೆ ನಾನು
ಇರುವನ್ನು, ಇರುವೆಯನ್ನು
ಇಲ್ಲವೇ ಜಗದಗಲದ ಬಾನನ್ನು
ಕಾಮನಬಿಲ್ಲನು, ಅದರೊಳಗಿನ ಬಿಳಿಯನ್ನು
ಇಲ್ಲವೇ ಗಾಢ ಕಪ್ಪನು
 
ಬರೆಯುತ್ತೇನೆ ನಾನು
ಗೆದ್ದವರ ಸೋಲನ್ನು, ಉಂಡವರ ಹಸಿವನ್ನು
ಖಾಲಿಯುದರದೊಳಗಿನ ಅಧಮ್ಯ ನಗುವನ್ನು
ಸೆರಗನ್ನು, ಅದರ ಶಕ್ತಿಯನ್ನು, ಕುಯುಕ್ತಿಯನ್ನು
ಸೆರಗ ಮರೆಮಾಡಿ ಮೊಲೆಯುಂಡವರನ್ನು
ಉಂಡು ಮರೆತವರನ್ನು
 
ಬರೆಯುತ್ತೇನೆ ನಾನು
ಕಾಮವನ್ನು ಕರ್ಮವನ್ನು
ಅಡ್ಡಿಸಡ್ಡಿಯಿರದೇ ಹರಿದ
ವೀರ್ಯಗಳ ನಾತವನ್ನು,ದುರ್ನಾತವನ್ನು
 
ಬರೆಯುತ್ತೇನೆ ನಾನು
ಮೈ ಮಾರಿದವರನ್ನು, ಮಾರಿ ಮರುಗಿದವರನ್ನು
ಜೋರು ಲಿಪ್ಸ್ಟಿಕ್ಕು ಬಳಿದು
ಸೆರಗು ಜಾರಿಸಿದವರನ್ನು
ಇಲ್ಲವೇ ಹುಳಬಿದ್ದ ಮಗುವ ತಬ್ಬುವ ಮದರ್ ಥೆರೇಸಾರನ್ನು.
 

‍ಲೇಖಕರು G

10 June, 2014

6 Comments

  1. Siddalingamurthy BG

    ಬಂಡೆಯವರೇ, ದಿಟ್ಟತನದ ಕಾವ್ಯವನ್ನು ನಾನು ಲಂಕೇಶರ ನಂತರ ನಿಮ್ಮಲ್ಲಿ ನೋಡುತಿದ್ದೇನೆ. ನೀವು ರಚಿಸಿರುವ ಪುಸ್ತಕಗಳನ್ನು ಹೆಸರಿಸಿ

  2. vidyashankar

    ಬಂಡೆ ಒಳ್ಳೆ ಕವಿ, ಕನ್ನಡದ ತಾಜಾ ಪ್ರತಿಭೆ… ಹೃದಯ ಶಿವ ನಿಮ್ಮ ಲೇಖನ ಮತ್ತು ಪ್ರೀತಿಗೆ ನಾವೆಲ್ಲಾ ಅಭಾರಿ

  3. vageesha JM

    ಹೌದು ಬಂಡೆಯವರು ನನಗೆ ಭಯಂಕರ ಇಷ್ಟವಾಗುವ ಕವಿ.. ಅವರ ಕವಿತೆಗಳನ್ನು ಓದಲು ಗಟ್ಟಿತನ ಬೇಕು.. ಮತ್ತು ಅರಗಿಸಿಕೊಳ್ಳಲು ಮುಕ್ತ ಮನಸ್ಸಿರಬೇಕು.. ಹಾಗೆ ಒಳ್ಳೆಯ ಗೆಳೆಯ ಕೂಡ..

  4. mmshaik

    bharavaseya gatti kavi…shubhvaagali..

  5. ashadeepa

    ಬ೦ಡೆ
    ಬಗೆ ಅವನ ಕವನಗಳ ಬಗ್ಗೆ ತು೦ಬ ಚೇನಗಿ ಹೇಳಿದಿರಿ
    ತು೦ಬ ಅದ್ಭುತವಾದ ಬರಹಗಾರ

  6. amardeep.p.s.

    super.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading