
ಕ್ಲಿಕ್ ಆಯ್ತು ಕವಿತೆ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ..
ನಂ ಪಾರ್ವತಿ
ಈ ಬಯಕೆ
ಇಂದು ನೆನ್ನೆಯದಲ್ಲ, ಮೊನ್ನೆಯದೂ ಅಲ್ಲ
ಹಿಂದಣ ಕಾಲದ್ದೋ, ಹಿಂದಣ ಜನ್ಮದ್ದೋ ಇರಬೇಕು
ಜೀವನ ಒಂದು ಚಕ್ರವಂತೆ,
ಪರೀಕ್ಷಿಸುವ ಬಯಕೆಯಂತೂ ಎಳ್ಳಷ್ಟೂ ಇಲ್ಲ
ಅದಕ್ಕೇ ಇರಬೇಕು ನನಗೆ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ….
ಕಣ್ಣೆದುರಿನ ಈ ತಿರುವು
ಮೊದಲನೆಯದಲ್ಲ, ಕೊನೆಯದೂ ಅಲ್ಲ..
ಗುಂಡನೆಯ ಭೂಮಿಯ ಸುತ್ತಿಸುತ್ತಿ ಮತ್ತೆ ಮರಳಲಿಕ್ಕೆ
ಎಲ್ಲೆಲ್ಲೋ ತಿರುಗಲೇಕೆ? ತಿರುತಿರುಗಿ ಬಳಲಲೇಕೆ?
ನನ್ನ ಸುತ್ತಾ ತಿರುಗುವ ಕಾಲದ ಚಂದವ ನೋಡುತ್ತಾ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ…..
ಕಿಟಕಿಯಲ್ಲಿ ಕದ್ದು ನೋಡಿ ನಗುವ ಆ ಕಣ್ಣು,
ಅದರ ಹಿಂದಿನ ನಗುಮೊಗವ ನೋಡುವ ,
ಹಾದಿಹೋಕರ ಅನುಭವದ ಜಾತ್ರೆಯ ಹೊಕ್ಕಿನೋಡುವ,
ಇಂದಿನ ನಾನು, ಇಲ್ಲಿ ನಾಳೆ ಹೇಗಿರುವೆನೆಂಬ
ಕುತೂಹಲ ತುಂಬಿ ತುಡಿಯುವ ನನ್ನ ಮನಕ್ಕೆ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ….
ಸುತ್ತಲ ಎಲ್ಲಾ ಗೋಡೆಗಳ ಪ್ರತಿ ಇಟ್ಟಿಗೆಗೂ
ತನ್ನ ಕಥೆಯನ್ನು ಹಂಚಿಕೊಳ್ಳುವ ಆಸೆಯಂತೆ
ತಣಿಯದ ನನ್ನ ಕುತೂಹಲಕ್ಕೆ
ಮುಗಿಯದ ಕಥೆಗಳು ಜೋಡಿಯಾಗಹೊರಟ
ಈ ಪಯಣದ ರಸವನ್ನೆಲ್ಲಾ ಹೀರುತ್ತಾ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ….
ಈ ಹಾದಿಯ ಕಲ್ಲುಗಳು, ಮಣ್ಣಿನ ಕಣಗಳು,
ನಿಂತ ನೀರ ಹನಿಗಳು, ಸುರಿವ ಮಳೆಯ ಹನಿಗಳು
ಗಾಳಿಯೊಡಗೂಡಿ ನಿತ್ಯನೂತನ ರಾಗದಿ
ಹಾಡುವ ಹಾಡುಗಳ ಇಂಪಿನ ಕಂಪಿಲ್ಲದೇ
ಸೊರಗಿಹೋಗುವ ಹೃದಯದ ಕೂಗಿಗಾಗಿ
ನಿಂತ ನೆಲದಲ್ಲೇ ನೆಲೆಯಾಗುವ ಬಯಕೆ….
ಈ ಘಳಿಗೆ, ಮುಂದಿನ ಘಳಿಗೆ, ಹಿಂದಿನ ಘಳಿಗೆ
ಒಂದಕ್ಕೊಂದು ಸಾಟಿಯಲ್ಲ,
ಲೆಕ್ಖ ಇಡಲಿಲ್ಲ, ಹೋಲಿಸಿ ನೋಡಲಿಲ್ಲ,
ಇನ್ನು ಬೆನ್ನು ಬಿದ್ದ ಕಾಲನ ಹಂಗಿಗೆ ಬಲಿಯಾಗಿ
ರೂಪವನ್ನೋ, ಅರ್ಥವನ್ನೋ ಕೊಡುವ
ಆತುರವಾಗಲಿ, ಅವಶ್ಯಕತೆಯಾಗಲಿ ಇಲ್ಲದ ನನಗೆ
ನಿಂತ ನೆಲದಲ್ಲೇ ನೆಲಯಾಗುವ ಬಯಕೆ…
ಹೆಮ್ಮರವಾಗುವ ಬಯಕೆ…





Very nice.
Thank you…
Thank you
ನಂ.ಪಾರ್ವತಿ
Bhavanegala jugal bandhiye sari…!!!!!!
Regards,
Chi na halli kirana
ಧನ್ಯವಾದಗಳು…. ನನ್ನ ಮೇಲೆ ನನಗೆ ನಂಬಿಕೆ ಹೆಚ್ಚಿಸಿದ್ದಕ್ಕೆ…
ಆಹಾ.. ಹೆಮ್ಮೆಯಿಂದ ಬೀಗಿಬಿಟ್ಟೆ…
ಧನ್ಯವಾದಗಳು
ನಂ.ಪಾರ್ವತಿ