'ಹುರಿಗೆಜ್ಜಿ'ಯ ನೆವದಲ್ಲಿ..

“ಹುರಿಗೆಜ್ಜಿ” ಬಿಡುಗಡೆಯಾದ ಸಮಯಕ್ಕೆ..

rajani garuda

ಕೆರೇಕೈ  ರಜನಿ

 

ಬೇಂದ್ರೆ ನೆಲದಲ್ಲಿರುವುದಕ್ಕೆ ಬರೆದೇ ಸಾರ್ಥಕವಾಗಬೇಕೆನ್ನುವಂತೆ ಬರೆಯುತ್ತಲೇ ಇರುವ ರಾಜಕುಮಾರ ಮಡಿವಾಳರ ಕೆಲವರ್ಷಗಳಿಂದ ನನ್ನ ಫೇಸ್ ಬುಕ್ ಗೆಳೆಯ.

ಇಷ್ಟು ವರ್ಷಗಳಲ್ಲಿ ನಾವು 3-4ಬಾರಿ ಭೇಟಿಯಾಗಿರಬಹುದು. ನಾನು ಆತನ ಬಳಿ ಯಾವುದೊ ಪುಸ್ತಕವನ್ನೊ, ಸಿಡಿಯನ್ನೊ ಇದೆಯೇ ಎಂದು ಕೇಳಿದರೆ “ ತೊಗೊಳ್ರೀ” ಎಂದು ಅದನ್ನು ತಂದೊಪ್ಪಿಸುವಾತ. ಗಾಢ ಸಾಹಿತ್ಯದ ಒಲವನ್ನು ತನ್ನ ಯಾವುದೇ ಪರಿಸ್ಥಿತಿಯಲ್ಲೂ ಜತನದಲ್ಲಿ ಕಾಯ್ದುಕೊಂಡಾತ. ದಟ್ಟ ಜೀವನಪ್ರೀತಿ ಇರಿಸಿಕೊಂಡಾತ. ಇಂಥವನ “ ಹುರಿಗೆಜ್ಜಿ” ಎಂಬ ಎರಡನೆಯ ಕವನಸಂಕಲನ ‘ಕನಸು ಪ್ರಕಾಶನ ರಟ್ಟೀಹಳ್ಳಿ‘ ತಂದ ಸಂಕಲನ,  ಧಾರವಾಡದಲ್ಲಿ ಬೆಳಕು ಕಂಡಿತು.

hurigejji-coverಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವಿತೆಗಳ ವಿಶ್ಲೇಷಣೆಯ ಸುದೀರ್ಘವಾದ ಮುನ್ನುಡಿ ಇದೆ. ಗೋಪಾಲ ವಾಜಪೇಯಿಯವರು ಹರಸಿದ ಹಿನ್ನುಡಿಯಿದೆ. ಡಾ. ಹಾ. ವೆಂ. ಕಾಕಣಕಿಯವರು ಬಿಡುಗಡೆ ಮಾಡಿದರು. ಪ್ರಕಾಶಕ ರಟ್ಟೀಹಳ್ಳಿ ರಾಘವಾಂಕುರ ಕೂಡ ಇದ್ದರು. ಐವತ್ತೇಳು ಕವಿತೆಗಳ ಈ ಪುಟ್ಟ ಪುಸ್ತಕ ಅಚ್ಚುಕಟ್ಟಾಗಿ ಮುದ್ರಣವಾಗಿದೆ. ಇದರ ನಂತರ ಗೋಮಾರದಹಳ್ಳಿ ಮಂಜುನಾಥ ಮಾಸ್ತಿ ಅವರ ಎರಡು ಕಥೆಯಾಧಾರಿತ “ ಜೋಗಿ ಪ್ರಣಯ” ಏಕವ್ಯಕ್ತಿ ಪ್ರದರ್ಶನ ನೀಡಿದರು.

ಇದರಲ್ಲಿಯ ಬಹುಪಾಲು ಕವಿತೆಗಳನ್ನು ನಾನು ಫೇಸ್ ಬುಕ್ ನಲ್ಲಿ ಓದಿ ಲೈಕಿಸಿದ್ದೇನೆ, ಕಮೆಂಟಿಸಿದ್ದೇನೆ. ಈಗ  ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಹಲವರ ಕಥೆಗಳು, ಕವನಗಳು, ಲೇಖನಗಳು ಪುಸ್ತಕ ರೂಪದಲ್ಲಿ ಬರುತ್ತಿದೆ. ಇವುಗಳ ಗುಣಮಟ್ಟದ ಬಗೆಗೆ ಹಲವಾರು ತಕರಾರುಗಳಿವೆ. “ಪುಸ್ತಕ ರೂಪದಲ್ಲಿ ಅಥವಾ ಪೇಪರಿನಲ್ಲಿ ಬಂದಿದ್ದು ಶ್ರೇಷ್ಟ, ಫೇಸ್ ಬುಕ್ ನಲ್ಲಿ ಬರೆದಿದ್ದಕ್ಕೆಲ್ಲ ಗುಣಮಟ್ಟ ಇರುವುದಿಲ್ಲ ಅಂತಾ ಯಾಕೆ ಅಂದ್ಕೋಬೇಕು. ಕೆಟ್ಟ ಕವಿತೆ ಅಂತಾ ಇರೋದಿಲ್ಲಾ. ಬಾಳಿಕೆ ಬರುವವು-ಬರಲಾರದವು ಅಂತಾ ಮಾತ್ರ ಇರ್ತದೆ. ಅದು ನಿರ್ಧಾರ ಆಗ್ಲಿಕ್ಕೆ ಸಮಯ ಬೇಕು. ನನ್ನ ಬಹಳಷ್ಟು ಜನ ಸ್ನೇಹಿತರು ಫೇಸ್ ಬುಕ್ ನಲ್ಲಿ ಬರೀತಾರೆ. ಅದರಿಂದ ಹೊಸದೊಂದು ಸ್ನೇಹಿತರ ವರ್ಗ ಸಿಗ್ತದೆ”. ಎಂಬುದು ರಾಜ್ಕುಕುಮಾರ ಮಾತು. ಬರೆಹಗಾರರ ಮತ್ತು ಓದುಗರ ದೊಡ್ಡ ದಂಡೇ ಇಂದು ಅಂತರ್ ಜಾಲದಲ್ಲಿ ಇರುವುದು ಹಳೆಯ ಮಾತು. ಬ್ಲಾಗ್ ಗಳಿಗಿಂತ ಹೆಚ್ಚು ಅಂತರ್ಜಾಲ ಪತ್ರಿಕೆಗಳ ಪ್ರಸರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅಲ್ಲದೆ ಸಂವಹನೆಯ ಕ್ರಮ ಮತ್ತು ಮಾಧ್ಯಮ ಕ್ಷಿಪ್ರವಾಗಿ ಬದಲಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ.

ನನಗಿಂತ ಬಹಳ ಹಿರಿತಲೆಮಾರಿನಿಂದ ಹಿಡಿದು ಈಗಿನ್ನೂ ನರ್ಸರಿಗೆ ಹೋಗುವ ಕಿರಿತಲೆಮಾರಿನವರೊಡನೆಯೂ ಸಂವಹಿಸಬೇಕಾದ ಅಗತ್ಯ ನನ್ನ ವೃತ್ತಿಬದುಕಿಗಿದೆ. ಇದರಲ್ಲಿ ನನ್ನದೇ ತಲೆಮಾರಿನವರನ್ನು ಬಿಟ್ಟು ಉಳಿದೆಲ್ಲರೊಡನೆ ಸಲೀಸಾಗಿ ಇರಬಹುದು. ಹಿರಿಯರೊಡನೆ ಕಿರಿಯಳಾಗಿ, ಕಿರಿಯರೊಡನೆ ಹಿರಿಯಳಾಗಿ ಇದ್ದುಬಿಡಬಹುದು. ಆದರೆ ನನ್ನದೇ ತಲೆಮಾರಿನವರೊಡನೆ ಸ್ನೇಹ, ಆತ್ಮೀಯತೆ ಇದ್ದರೂ ಗೊತ್ತಿಲ್ಲದಂತೆ ಪರಸ್ಪರ ಸ್ಪರ್ಧೆ, ಪರಸ್ಪರ ತುಲನೆ, ಮುಜುಗರ ಮುಂತಾದವೆಲ್ಲ ಒಳಗೊಳಗೆ ಇದ್ದೇಇರುತ್ತವೆ.  ನನಗಿಂತ ಕಿರಿಯರೊಡನೆ ಸಂವಹಿಸಬೇಕಾದಾಗೆಲ್ಲ ನನ್ನ ಹೆಗಲಿಗೊಂದು ಜವಾಬ್ದಾರಿ ಇದೆ ಎನಿಸುತ್ತದೆ.

ಅಂತಹ ಸಂದರ್ಭದಲ್ಲಿ ಪ್ರತಿಬಾರಿಯೂ ಹೊಸಪಾಠಗಳನ್ನು ನಾನು ಕಲಿಯುವುದರ ಜೊತೆಗೆ ಹೊಸ ಸವಾಲೂ ಎದುರಾಗಿರುತ್ತದೆ. ಅದರ ತಾಂತ್ರಿಕ ಸಾಧ್ಯತೆ ಒಂದಾದರೆ ಇನ್ನೊಂದು ಸಂವಹಿಸುವಾಗಿನ ಆವರಣ ಬಹಳ ಮುಖ್ಯವೆನಿಸುತ್ತದೆ. ಮೊದಲನೆಯದು ನನ್ನ ಕುಶಲತೆಯನ್ನು ಬೇಡುವಂತಹದ್ದು. ಇನ್ನೊಂದು ನನ್ನನ್ನೂ ಒಳಗೊಂಡಿರುವ ಆ ಆವರಣ ಇತಿಹಾಸ, ವರ್ತಮಾನ, ಭವಿಷ್ಯವನ್ನೂ ಗರ್ಭದಲ್ಲಿ ಇರಿಸಿಕೊಂಡಿರುವಂತಹದ್ದು. ಆ ಕ್ಷಣದ ವರ್ತಮಾನಕ್ಕೆ ನಾನು ಸ್ಪಂದಿಸುತ್ತಿದ್ದರೂ ಅವೆಲ್ಲವೂ ನನ್ನ ಅನುಭವ, ನನ್ನ ಹಿನ್ನೆಲೆ, ನನ್ನ ಯೋಚನಾಕ್ರಮ ಇವುಗಳೆಲ್ಲದರ ಮೊತ್ತವಾಗಿರುತ್ತದೆ.

ಅಲ್ಲದೆ ಅದು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಿಂತನೆಯ ಜೊತೆಗೆ ವ್ಯಕ್ತಿಯೊಬ್ಬನ ಬದುಕಿನ ಕ್ರಮವನ್ನು ಕಟ್ಟಿಕೊಡುತ್ತಾ ಹೋಗುತ್ತದೆ.  ನನ್ನ ಕಿರಿತಲೆಮಾರು ಅಂತಹ ಚಿಂತನೆಯನ್ನು ಮತ್ತು ಬದುಕಿನ ಕ್ರಮವನ್ನು ರೂಪಿಸಿಕೊಳ್ಳಲು ಗಟ್ಟಿಯಾದ ತಾತ್ವಿಕತೆಯೊಂದನ್ನು ಈಗ ಗಳಿಸುತ್ತಿದೆಯೆ? ಅವರು ಅನುಕರಿಸಬಹುದಾದ ಮಾದರಿಗಳಿವೆಯೆ? ವರ್ತಮಾನವನ್ನು ಅದು ಹೇಗೆ ಎದುರಿಸುತ್ತಿದೆ? ಅವರನ್ನು ಯುವಜನತೆ ಎಂದು ಕರೆಯುವುದಾದರೆ ಅದೆಲ್ಲಿದೆ? ಏನಾಗಿದೆ ? ಯುವಜನತೆ ಸಂಘಟಿತವಾಗುತ್ತಿದೆಯೆ? ಎಲ್ಲಿದೆ ಅದರ ಧ್ವನಿ? ಯೋಚಿಸುತ್ತ ನಡೆದರೆ ನಮ್ಮ ಮುಂದೆ ಪ್ರಶ್ನಾರ್ಥಕ ಚಿಹ್ನೆ ಬಿಟ್ಟರೆ ಮತ್ತೇನೂ ಕಾಣುವುದಿಲ್ಲ.

15232167_1178552615561073_6809659044870489762_nದಮನಿತರು ಎಂದು ಯಾರನ್ನೆಲ್ಲ ಸೇರಿಸಿ ನಾವು ಪಟ್ಟಿ ಮಾಡುತ್ತೇವೆಯೊ ಅದರಲ್ಲೀಗ ಯುವಜನತೆಯನ್ನೂ ಸೇರಿಸಲಡ್ಡಿಯಿಲ್ಲ. ಮೊದಲನೆಯದಾಗಿ ಅವರಿಗೆ ಅತ್ತ-ಇತ್ತ ನೋಡಲು ಸಮಯವೇ ಇಲ್ಲ. ಅಷ್ಟು ಓದಿನ ಹೊರೆಯನ್ನು ನಿಭಾಯಿಸಬೇಕು. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಅವರಿಗಾಗಿ ಎಲ್ಲಿಯೂ ಅವಕಾಶವೇ ಇಲ್ಲ. ಸಾಂಸ್ಕೃತಿಕ ವಲಯದಲ್ಲಿ ಸ್ವಲ್ಪ ಅವಕಾಶವಿದ್ದರೂ ಅವೆಲ್ಲ ಯಾವುದೇ ಜವಾಬ್ದಾರಿಗಳಿಲ್ಲದ ರಾಜಕಾರಣಿಗಳ ಕೈಗೂಸುಗಳಾಗಿವೆ. ಮಾಲ್ ಗಳಲ್ಲಿ, ಡಿಸ್ಕೋ ಜಾಕಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಮೊಬೈಲ್ ಗಳಲ್ಲಿ… ಇಂತಹವುಗಳಲ್ಲೆಲ್ಲ ಅವರು ತಮ್ಮ ಅಮೂಲ್ಯ ಧ್ವನಿ ಎತ್ತುತ್ತಿದ್ದಾರೆ.

ವಿಶ್ವವಿದ್ಯಾನಿಲಯಗಳಲ್ಲಿಯ ವಿದ್ಯಾರ್ಥಿ ಸಂಘಟನೆಗಳು ಸ್ಥಳೀಯ ರಾಜಕಾರಣಿಗಳ ಕೈಯಲ್ಲಿರುತ್ತವೆ. ಅವರ ಸಾಂಸ್ಕೃತಿಕ ಸಂಘಟನೆಗಳು ಕಾಟಾಚಾರದ ಕಾರ್ಯಕ್ರಮ ಮಾಡುತ್ತಿರುತ್ತವೆ. ಎಲ್ಲೆಲ್ಲಿಯೂ ತನ್ನ ಕಬಂಧ ಬಾಹುವನ್ನು ಚಾಚಿರುವ ಕಾರ್ಪೊರೇಟ್ ಸಂಸ್ಥೆಗಳ ಪ್ರಚಾರ ರಾಯಭಾರಿಗಳಂತಾಗಿದ್ದಾರೆ. ಅವರು ಸಂಘಟಿತರಾಗದಂತೆ ಬಹಳ ಎಚ್ಚರಿಕೆಯಿಂದ ಗಮನವನ್ನು ಬೇರೆಡೆಗೆ ಹರಿಸಿ ಇಂದಿನ ಮಾರ್ಕೇಟ್ ಸಂಸ್ಕೃತಿಗೆ ಬೇಕಾದಂತೆ ಅವರನ್ನು ರೂಪಿಸಲಾಗುತ್ತಿದೆ. ಇವೆಲ್ಲ ಕೆಳಮಧ್ಯಮವರ್ಗ ಮತ್ತು  ಕೆಳವರ್ಗದ ಯುವಜನತೆಯ ಕತೆಯಾದರೆ, ಇದಕ್ಕೂ ಮೇಲಿನವರನ್ನು ಕಣ್ಣೆದುರಿನಲ್ಲೆಲ್ಲೂ ನಾವು ಕಾಣುವುದೇ ಇಲ್ಲ. ಇನ್ನು ಭವ್ಯಭಾರತದ ನಿರ್ಮಾಣಕ್ಕೆ ಅವರ ಮುಂದಿರುವುದು ಕಾರ್ಪೋರೇಟ್ ಮಾದರಿ ಮಾತ್ರ !!

ಮತ್ತೀಗ… ರಾಜಕುಮಾರ ಮತ್ತು ಅವನ ಗೆಳೆಯರು ಸಂಘಟಿತರಾಗಿ ಒಂದು ಕವನ ಸಂಕಲನ ಪ್ರಕಟಿಸುತ್ತಿರುವುದು ಈ ಊರಿನ ಬಹುಮುಖ್ಯವಾದ ಯುವಜನರ ಸಂಘಟಿತ ಕೆಲಸ. ಇದು ನಾಂದಿಯೆಂದು ಯುವಜನತೆಯ ಸಂಘಟಿತ ಹೊಸ ಕೆಲಸಗಳು ಹೆಚ್ಚಾಗಬೇಕು. ತಾರಸಪ್ತಕದಲ್ಲಿ ಇಂದು ಎಲ್ಲರೂ ಕಿರುಚುತ್ತಿರುವಾಗ ಗಟ್ಟಿಯಾದ ಮಂದ್ರ ಸ್ವರದಲ್ಲಿ ಮಾತನಾಡುತ್ತಿರುವ ರಾಜಕುಮಾರ ಮಡಿವಾಳರ ಧ್ವನಿ ನನಗೆ ಹಿತವೆನ್ನಿಸುತ್ತಿದೆ.

‍ಲೇಖಕರು admin

December 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: