‘ಮರೆಯಲಾಗದ ಮುಂಬೈ’ ಪುಸ್ತಕದ ಲೇಖನ

ಚಿದಂಬರ ಬೈಕಂಪಾಡಿ
ಮುಂಬೈ ಬಾಲ್ಯದ ದಿನಗಳಲ್ಲಿ ಅದೆಂಥಾ ಮೋಡಿ ಮಾಡಿತ್ತೆಂದರೆ ಜೀವನದಲ್ಲಿ ಒಮ್ಮೆಯಾದರೂ ಮುಂಬೈ ನೋಡದಿದ್ದರೆ ಬದುಕೇ ವ್ಯರ್ಥ ಎನ್ನುವಷ್ಟು. ಇದಕ್ಕೆ ಬಲವಾದ ಕಾರಣ ಅಲ್ಲಿಂದ ಬರುತ್ತಿದ್ದವರು ವಾರ, ಹದಿನೈದು ದಿನವಿದ್ದರೂ ಆ ದಿನಗಳೇ ವರ್ಷಪೂರ್ತಿ ಇರಬಾರದೇ ಎನ್ನುವ ಬಯಕೆ. ಅವರು ಗರಿ ಗರಿಯಾದ ನೋಟುಗಳನ್ನು ಕೈಗೆ ಕೊಟ್ಟು ಅಂಗಡಿಯಿಂದ ಏನನ್ನಾದರೂ ತರಲು ಹೇಳಿದರೆ ಆ ನೋಟನ್ನು ಅಂಗಡಿ ಸಿಗುವ ತನಕವೂ ತಿರುಗಿಸಿ ತಿರುಗಿಸಿ ನೋಡಿ ಸವರಿ ಖುಷಿಪಡುತ್ತಿದ್ದೆ.
ಒಂದು ರೂಪಾಯಿಯಿಂದ ಹಿಡಿದು ನೂರು ರೂಪಾಯಿ ತನಕ ಮುಂಬೈನಿಂದ ಬಂದವರಲ್ಲಿ ಗರಿ ಗರಿ ನೋಟುಗಳೇ ಇರುತ್ತಿದ್ದವು. ಆಗ ಹೆಚ್ಚೆಂದರೆ ಹತ್ತು ರೂಪಾಯಿ ಮಾತ್ರ ಕೈಗೆ ಕೊಡುತ್ತಿದ್ದರು ಸಾಮಾನು ತರಲು. ಹಾಗೆಂದು ನೂರರ ನೋಟುಗಳನ್ನು ಪ್ರತೀ ತಿಂಗಳೂ ಶಾಲೆಯಲ್ಲಿ ಟೀಚರ್ ಸಂಬಳವಾದ ದಿನ ಪೋಸ್ಟ್ ಆಫೀಸ್ ನಲ್ಲಿ ಪಾಸ್ ಪುಸ್ತಕಕ್ಕೆ ಹಾಕಲು ಕೊಡುತ್ತಿದ್ದ ಕಾರಣ ನೋಡಿದ್ದೆ. ಟೀಚರ್ ಮೂರು ನಾಲ್ಕೂ ನೂರರ ನೋಟುಗಳನ್ನು ಎಣಿಸಿ ಪರ್ಸ್ ನಲ್ಲಿ ಇಡುವಾಗ ನಾನು ಯಾವಾಗ ಅಂಥಾ ನೂರರ ನೋಟನ್ನು ನನ್ನ ಕಿಸೆಯಲ್ಲಿ ಇಟ್ಟುಕೊಳ್ಳುವೆನೋ ಅಂದುಕೊಳ್ಳುತಿದ್ದೆ.
ಚೆಡ್ಡಿಯ ಕಿಸೆ ತೂತಾಗಿ ಗೆಣಸು ತಿನ್ನಲು ಇಟ್ಟುಕೊಂಡಿದ್ದ ಒಂದಾಣೆ ಎಲ್ಲೋ ಬಿದ್ದು ಹೋಗಿದ್ದಾಗ ದಾರಿಯುದ್ದಕ್ಕೂ ಹುಡುಕಿ ಸುಸ್ತಾಗಿ ದೊಡ್ಡ ನೋಟು ಕಿಸೆಯಲ್ಲಿಡುವ ಹೊತ್ತಿಗೆ ಸುಂದರವಾದ ಪಾಕೆಟ್ ಇಟ್ಟುಕೊಳ್ಳಬೇಕೆನ್ನುವ ಆಸೆಯಾಗಿತ್ತು.
ನಾನು ಏಳನೇ ತರಗತಿಯಲ್ಲಿದ್ದಾಗ ಪಬ್ಲಿಕ್ ಪರೀಕ್ಷೆ ಸಮೀಪಿಸುತ್ತಿದ್ದಾಗ ಸೆಂಡ್ ಆಫ್ ಕಾರ್ಯಕ್ರಮ ಇಟ್ಟುಕೊಂಡಿದ್ದರು ಮುಖ್ಯೋಪಾಧ್ಯಾಯರು. ಆಗ ಗಂಗಾಧರ ಮೇಸ್ಟ್ರು ಎಲ್ಲರಿಗೆ ಒಂದೇ ಪ್ರಶ್ನೆ ಕೇಳಿದರು. ನೀನು ದೊಡ್ಡವನಾದ ಮೇಲೆ ಏನಾಗುತ್ತಿ?.
ಒಬ್ಬೊಬ್ಬನೇ ಎದ್ದು ನಿಂತು ಹೇಳಬೇಕು. ಆಗ ಎಲ್ಲರೂ ದೊಡ್ಡವನಾದ ಮೇಲೆ ಬೊಂಬಾಯಿಗೆ ಹೋಗುತ್ತೇನೆ ಎನ್ನುವುದನ್ನು ಬಿಟ್ಟರೆ ಒಂದಷ್ಟು ಜನಮಾತ್ರ ಡ್ರೈವರ್, ಆಫೀಸರ್ ಆಗುತ್ತೇನೆ ಎಂದಿದ್ದರು. ಆದರೆ ನಾನು ಮೇಸ್ಟ್ರು ಆಗುವಾಸೆ ಎಂದಿದ್ದೆ. ಆದರೆ ಅದು ಕೈಗೂಡಲಿಲ್ಲ ಎನ್ನುವುದು ಪ್ರತ್ಯೇಕ ವಿಚಾರ. ಯಾರನ್ನೇ ಕೇಳಿದರೂ ಮಾವ ಇದ್ದಾರೆ, ದೊಡ್ಡಪ್ಪ ಇದ್ದಾರೆ ಬೊಂಬಾಯಿಗೆ ಹೋಗುತ್ತೇನೆ ಎನ್ನುವುದೇ ಉತ್ತರವಾಗಿರುತ್ತಿತ್ತು. ಬೊಂಬಾಯಿಗೆ ಹೋಗುವುದೇ ಬದುಕಿನ ಬಹುದೊಡ್ಡ ಗುರಿಯಾಗಿತ್ತು ಆ ಕಾಲದಲ್ಲಿ.
ಬೊಂಬಾಯಿ ವ್ಯಾಮೋಹ ಕಡಿಮೆಯಾಗಲಿಲ್ಲ. ನಮಗಿಂತ ದೊಡ್ಡ ಕ್ಲಾಸ್ ನಲ್ಲಿದ್ದವರು ಬೊಂಬಾಯಿಗೆ ಹೋಗಿ ಒಂದೆರಡು ವರ್ಷ ಕಳೆದ ಮೇಲೆ ಊರಿಗೆ ಬಂದಾಗ ತಲೆಕೂದಲು ಬಾಚುವ ಸ್ಟೈಲೇ ಬದಲಾಗಿತ್ತು. ಪ್ಯಾಂಟಿನ ಬಾಟಮ್ ಒಂಥಾರ ಇತ್ತು. ಹೊಳೆಯುವ ಅಂಗಿ ಹಾಕಿಕೊಳ್ಳುತ್ತಿದ್ದರು. ಮೂರು ನಾಲ್ಕು ವರ್ಷಗಳ ಹಿಂದೆ ಜೊತೆಯಾಗಿ ಕ್ರಿಕೆಟ್ ಆಡುತ್ತಿದ್ದವನು ಬೊಂಬಾಯಿಗೆ ಹೋಗಿ ಬಂದ ಮೇಲೆ ಅವನೂ ಅಚ್ಛಾ.. ಅಚ್ಛಾ ಹೇಳತೊಡಗಿದ್ದ. ಶೆಟ್ರ ಗೂಡಂಗಡಿಯಲ್ಲಿ ಗರಿಗರಿಯಾದ ನೋಟು ಕೊಟ್ಟು ನಿನಗೇನು ಬೇಕು ತೆಗೆದುಕೋ ಎನ್ನುತ್ತಿದ್ದ. ಅಬ್ಬಾ ಬೊಂಬಾಯಿಗೆ ಹೋದರೆ ಸಾಕು ಅದೃಷ್ಟ ಖುಲಾಯಿಸುತ್ತೆ ಎನ್ನುವುದು ಅವನನ್ನು ನೋಡಿ ನನಗೆ ಖಾತ್ರಿಯಾಯಿತು.
ಬೊಂಬಾಯಿ ವ್ಯಾಮೋಹ ಕೇವಲ ಹುಡುಗರಿಗೆ ಮಾತ್ರ ಅಂದುಕೊಳ್ಳಬೇಡಿ ಹುಡುಗಿಯರೂ ಕೂಡಾ ಬೊಂಬಾಯಿ ಕನಸು ಕಾಣುತ್ತಿದ್ದರು. ಬೊಂಬಾಯಿ ಅದೆಷ್ಟು ಹುಡುಗಿಯರನ್ನು ಮೋಹಕ್ಕೊಳಪಡಿಸಿತ್ತೆಂದರೆ ತಾವು ಮದುವೆಯಾದರೆ ಬೊಂಬಾಯಿಯಲ್ಲಿರುವವನನ್ನೇ ಎನ್ನುವ ಮಟ್ಟಕ್ಕೆ. ಊರಲ್ಲೇ ಏನಾದರೊಂದು ಕಸಬು ಮಾಡಿಕೊಂಡ ವರನನ್ನು ಹುಡುಗಿಯರು ಕಣ್ಣೆತ್ತಿಯೂ ನೋಡಲು ಮನಸ್ಸು ಮಾಡುತ್ತಿರಲಿಲ್ಲ. ಬೊಂಬಾಯಿಯಲ್ಲಿ ಅವನು ಏನು ಕೆಲಸ ಮಾಡುತ್ತಿರಬೇಕು ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿರುತ್ತಿರಲಿಲ್ಲ. ಬೊಂಬಾಯಿ ಹುಡುಗನಾದರೆ ಸಾಕು ಎನ್ನುವುದಷ್ಟೇ ಗೊತ್ತಿತ್ತು.
ಕರಾವಳಿಯ ಮಟ್ಟಿಗೆ ಬೊಂಬಾಯಿ ಆಗ ಅನಿವಾರ್ಯ ಪಟ್ಟಣವಾಗಿತ್ತು. ಆ ಕಾಲದಲ್ಲಿ ಯಾರೇ ಬೊಂಬಾಯಿಗೆ ಹೋದರೂ ಬರಸೆಳೆದುಕೊಳ್ಳುತ್ತಿತ್ತು. ಆಗ ಅಲ್ಲಿಗೆ ಹೋದವರು ಮತ್ತೆ ಊರಿಗೆ ಬಂದು ನೆಲೆಸುವ ಮನಸ್ಸು ಮಾಡುತ್ತಿರಲಿಲ್ಲ. ಬೊಂಬಾಯಿಯಲ್ಲೇ ಫ್ಲ್ಯಾಟ್ ತೆಗೆದುಕೊಂಡು ಅಲ್ಲೇ ಮನೆ ಮಂದಿಯೊಂದಿಗೆ ನೆಲೆಸಿ, ಅಲ್ಲೆ ಮದುವೆಯಾಗಿ ಅಲ್ಲೇ ಕೊನೆಯುಸಿರೆಳೆಯುತ್ತಿದ್ದರು.
ಇದು ಅತಿಶಯೋಕ್ತಿಯಲ್ಲ ಬೊಂಬಾಯಿಯ ಬಗ್ಗೆ ಯುವಕರಿಗೂ ಯಾವ ರೀತಿ ವ್ಯಾಮೋಹವಿತ್ತೆನ್ನುವುದಕ್ಕೆ ಮಾತು. ನವಮಂಗಳೂರು ಬಂದರು ನಿರ್ಮಾಣವಾಗಿತ್ತು. 1974-75ರ ಸಂದರ್ಭ. ಬಂದರು ಕಚೇರಿಯಲ್ಲಿ ಬೇಕಾದಷ್ಟು ಉದ್ಯೋಗಾವಕಾಶಗಳು, ಕ್ಲಾರ್ಕ್, ಅಟೆಂಡರ್ ನಿಂದ ಹಿಡಿದು ಆಫೀಸರ್ ತನಕ ಅವಕಾಶ. ನಾನು ಹೈಸ್ಕೂಲ್ ಹತ್ತನೇ ತರಗತಿಯಲ್ಲಿದ್ದೆ. ಆಗ ಎಸ್ ಎಸ್ ಎಲ್ ಸಿ ಪಾಸಾಗಿದ್ದರೆ ಕ್ಲಾರ್ಕ್ ಕೆಲಸ ಬಂದರಿನಲ್ಲಿ. ಬನ್ನಿ ಬನ್ನಿ ಎಂದು ಗೋಗರೆಯುತ್ತಿದ್ದರು. ಪ್ರಭಾವ, ಲಂಚ ಕೊಡಬೇಕಾಗಿರಲಿಲ್ಲ. ಎಸ್ ಎಸ್ ಎಲ್ ಸಿ ಪಾಸಾದ ಸರ್ಟಿಫಿಕೇಟ್ ಹಿಡಿದುಕೊಂಡು ಹೋದರೆ ಸಾಕಾಗಿತ್ತು.
ಆಗ ಚೀಫ್ ಇಂಜಿನಿಯರ್ ಪಂಡಿತಾರಾಧ್ಯ. ಅವರ ಕೈಕೆಳಗಿನವರಲ್ಲಿ ನೇರವಾಗಿ ಹೋಗಿ ಕೆಲಸ ಕೇಳಬಹುದಿತ್ತು. ಆದರೆ ಸಂಬಳ ತಿಂಗಳಿಗೆ 300-400 ರೂಪಾಯಿ ಎನ್ನುವುದು ಗೊತ್ತಿತ್ತು. ಸಂಜೆ ಹೊತ್ತು ಸಮುದ್ರ ತೀರದಲ್ಲಿ ರಂಪೊಣಿ ಗುಜ್ಜಿ ಹಾಕಿದ್ದರೆ ಸೋರಿ ಹೋಗುವ ಮೀನಿಗೆ ಬಲೆ ಹಾಕಿದರೂ ದಿನಕ್ಕೆ 300-400 ಸಂಪಾದನೆಯ ಕಾಲ. ನವಮಂಗಳೂರು ಬಂದರಿನಲ್ಲಿ ಅದೇ ಸಂಬಳಕ್ಕೆ ಒಂದು ತಿಂಗಳು ಅರ್ಥಾತ್ 30 ದಿವಸ ದುಡಿಯಬೇಕು. ಈ ಕೆಲಸ ಯಾರಿಗೆ ಬೇಕು ಬೊಂಬಾಯಿಗೆ ಹೋಗುತ್ತೇವೆ ಎನ್ನುವವರೇ ಹೆಚ್ಚಾಗಿದ್ದರು.
ಆದ ಕಾರಣವೇ ನವಮಂಗಳೂರು ಬಂದರಿನಲ್ಲಿ ಈಗಲೂ ಸ್ಥಳೀಯರು ತೀರಾ ಕಡಿಮೆ ಎಸ್ ಎಸ್ ಎಲ್ ಸಿ ಪಾಸಾಗಲೀ, ಫೇಲ್ ಆಗಲಿ ಬೊಂಬಾಯಿ ಬಸ್ಸು ಹತ್ತುವುದು ಆ ದಿನಗಳಲ್ಲಿ ಗ್ಯಾರಂಟಿ. ಆದರೆ ಅಂದು ಸಿಕ್ಕಿದಷ್ಟು ಸಾಕೆಂದು ಕೆಲಸಕ್ಕೆ ಸೇರಿದವರು ಬಹಳ ಮಂದಿ ಈಗ ನಿವೃತ್ತರಾಗಿದ್ದಾರೆ, ನಿವೃತ್ತಿಯ ಅಂಚಿನಲ್ಲಿದ್ದಾರೆ, ಕೈತುಂಬಾ ಪೆನ್ಷನ್ ನಿವೃತ್ತರಾದವರಿಗೆ.
ಅಂದು ಕೆಲಸಕ್ಕೆ ಸೇರದವರು ಈಗ ಹಪಹಪಿಸುತ್ತಾರೆ ತಪ್ಪು ಮಾಡಿದೆವೆಂದು ಹೇಳಿಕೊಳ್ಳುತ್ತಾರೆ. ಆದರೆ ಈಗ ಹಾಗೆ ಹೇಳುವುದರಿಂದ ಏನೇನೂ ಪ್ರಯೋಜನವಿಲ್ಲ. ವ್ಯರ್ಥ ಪ್ರಲಾಪ ಅದು.
ನಾನು ಹತ್ತನೇ ತರಗತಿಯಲ್ಲಿದ್ದಾಗ ನಮ್ಮ ತರಗತಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಖಯಾಲಿ. ನನಗೆ ಕತೆ, ಕವನ ಬರೆಯುವ ಹವ್ಯಾಸವಾದರೆ ಲೀಲಾಧರ (ಕರ್ಕೇರ ಅಥವಾ ಕಾಂಚನ್ ಇರಬೇಕು ನೆನಪಾಗುತ್ತಿಲ್ಲ) ಎನ್ನುವವನಿಗೆ ನಾಟಕ ಬರೆಯುವ ಹವ್ಯಾಸ. ಯಾರೇ ತರಗತಿಯಲಿ ಪಾಠ ಮಾಡುತ್ತಿದ್ದರೂ ಈತ ಕೊನೆಯ ಬೆಂಚಿನಲ್ಲಿ ಕುಳಿತು ಡೆಸ್ಕ್ ನೊಳಕ್ಕೆ ತಲೆ ಹಾಕಿ ನಾಟಕ ಬರೆಯುತ್ತಿದ್ದ.
ಅದರಲ್ಲೂ ಹೆಜಮಾಡಿಯ ರಾಮಬೆಳ್ಚಡ ಎನ್ನುವ ಹಿಂದಿ ಪಂಡಿತರಿದ್ದರೆ ಇವನಿಗೆ ಇನ್ನೂ ಖುಷಿ. ಯಾಕೆಂದರೆ ಅವರು ಅನೇಕ ನಾಟಕ ಬರೆದು ಫೇಮಸ್ ಆಗಿದ್ದರು. ಇವನು ನಾಟಕ ಬರೆಯುತ್ತಿದ್ದರೆ ಅವರಿಂದ ಪ್ರೋತ್ಸಾಹವಿತ್ತು. ಅವನಿಗೆ ಆಗಲೇ ಬಹುದೊಡ್ಡ ಕನಸು ಬೊಂಬಾಯಿಯಲ್ಲಿ ತಾನು ಬರೆದ ನಾಟಕ ಪ್ರದರ್ಶನ ಮಾಡಬೇಕೆಂದು. ಹೇಳಿಕೇಳಿ ಈಗ ಅವನೂ ಬೊಂಬಾಯಿಯಲ್ಲೇ ನೆಲೆಸಿದ್ದಾನೆ, ಅಲ್ಲೂ ಒಂಜೇ ನೆತ್ತೆರ್ (ಒಂದೇ ರಕ್ತ) ತುಳು ನಾಟಕ ಪ್ರದರ್ಶನ ಮಾಡಿಸಿದ್ದನಂತೆ.
ಈ ಎಲ್ಲಾ ಕಾರಣಗಳಿಗಾಗಿ ಬೊಂಬಾಯಿಯನ್ನು ಕಾಣದಿದ್ದರೆ ನನ್ನ ಜೀವನವೇ ಸಾರ್ಥಕವಾಗದು ಎನ್ನುವ ತೀರ್ಮಾನಕ್ಕೆ ಬಂದು ಅಂಥ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ದಿನಗಳು ಬಂದದ್ದು ನಾನು ‘ಮುಂಗಾರು’ ಪತ್ರಿಕೆಯಲ್ಲಿ ಒಂದಷ್ಟು ವರ್ಷ ಕಸಬು ಮಾಡಿದ ಮೇಲೆ ಎರಡು ಕವನ ಸಂಕಲನಗಳು ಪ್ರಕಟವಾದ ಮೇಲೆ. ಬೊಂಬಾಯಿ ಗೆಳೆಯರು ಗೋರೆಗಾಂವ್ ಕನ್ನಡ ಸಂಘದ ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿದರು.





Wah… Soooper. ಈ ಪುಸ್ತಕ ಓದದಿದ್ದರೆ ಜೀವನವೇ ವ್ಯರ್ಥ ಅನ್ನೋ ಭಾವ ಹುಟ್ಟಿಸಿದೆ ಬರಹ. ಕರಾವಳಿಯ ನನಗೆ ಅಲ್ಲಿನವರಲ್ಲಿ ಈಗಲೂ ಇರುವ ಬೊಂಬಾಯಿ ಮೋಹದ ಸ್ಪಷ್ಟ ಚಿತ್ರಣ ಇದೆ.
ಅಂದ ಹಾಗೆ ಈ ವರೆಗೂ ಬೊಂಬಾಯಿ ನೋಡದ ನನಗೂ ಒಮ್ಮೆ ಹೋಗಬೇಂಬ ಕನಸು ಇನ್ನೂ ಜಾರಿಯಲ್ಲಿದೆ!!