ಹುಚ್ರಾಯಪ್ಪನ 'ಸ್ಮಾಲ್ಟ್' ಸಿಟಿ

226350_201367516568520_4214094_n

ಎಚ್ ಜಿ ಮಳಗಿ

ಈ ಸಲ ಬೇಸಗೆ ಎಂಟು ತಿಂಗಳು ಎನ್ನುವಂತೆ ಮಳೆ ಇಳೆಯೊಂದಿಗೆ ಜಗಳಾಡಿ ಆಗದಸಲ್ಲಿಯೇ ಸಿಟ್ಟಿನಿಂದ ಮಡುಗಟ್ಟಿ ಕೂತು ಬಿಟ್ಟಿದೆ. ಏನೋ ಅಪರೂಪಕ್ಕೆಂಬಂತೆ ಮೊನ್ನೆ ಒಂದರ್ಧ ತಾಸು ಬಿದ್ದ ಮಳೆ ರಸ್ತೆಗಳನ್ನು ಅಕ್ಷರಶಃ ಕೆಸರು ಗದ್ದೆಗಳನ್ನಾಗಿಸಿದೆ. ಮೊದಲೇ ಕೆಟ್ಟು ಕೆರ ಹಿಡಿದ ರಸ್ತೆಗಳು, ಇಕ್ಕಟ್ಟಾದ ಓಣಿಗಳು 24*7 ನೀರು ಪೂರೈಕೆ ಕಾಮಗಾರಿಯಿಂದ ಮತ್ತಷ್ಟೂ ಇಕ್ಕಟ್ಟಾಗಿ ಪೈಪುಗಳಿಗಿಂತ ಚಿಕ್ಕವಾಗಿಬಿಟ್ಟಿವೆ. ಜೊತೆಗೇ ಇಲ್ಲದ ಫುಟ್ಪಾತ್ಗಳನ್ನು ಗೂಡಂಗಡಿಗಳು ಆಕ್ರಮಿಸಿವೆ. ಮುಚ್ಚಿ ಹೋಗಿರುವ ಗಟಾರುಗಳಲ್ಲಿ ಜಾಗ್ರತ ನಾಗರಿಕರು ಬೇಕಾ’ಬಿಟ್ಟಿ’ಯಾಗಿ ಎಸೆದಿರುವ ಕಸದ ರಾಶಿಯಲ್ಲಿ ಸ್ಪರ್ಧೆಗಿಳಿದಿರುವ ಹಂದಿ ನಾಯಿಗಳ ಹಿಂಡು. ಅಬ್ಬಾ ಹಾಸನದಿಂದ ಹಂದಿ ಹಿಡಿಯುವವರು ಯಾವಾಗ ಬರುತ್ತಾರಪ್ಪಾ ಎಂದು ಗೊಣಗಾಡುತ್ತ, ನಿಮಿಷಕ್ಕೆ ಹತ್ತು ಸಲ ಆಫ್ ಆಗುವ ನನ್ನ 47ರ ಮಾಡಲ್ ಸ್ಕೂಟರನ್ನು ಸರ್ಕಸ್ ಮಾಡಿಸುತ್ತ, ಸಮಾಧಾನ ಪಡಿಸುತ್ತ ಪಾಲಿಕೆಯನ್ನು ಬೈಯ್ಯುತ್ತ ಮನೆಗೆ ಬರುವಷ್ಟರಲ್ಲಿ ಮೂರು ಜನ್ಮ ಎತ್ತಿ ಬಂದಷ್ಟು ಶ್ರಮವಾಗಿತ್ತು. ಬರುವಾಗ ಒಂದೆರಡು ಕಡೆ ಸ್ಕೂಟರ್ ಸ್ಕಿಡ್ ಆಗಿ ಎಡಗಾಲಿನ ಆ್ಯಂಕಲ್ ಉಳುಕಿತ್ತು.

ರಸ್ತೆ ಬದಿಯ ಟಿವಿ ಅಂಗಡಿಯಲ್ಲಿ ಸ್ಮಾರ್ಟಸಿಟಿ ಬಗ್ಗೆ ಹಾಜಿ-ಮಾಲಿ ಮು.ಮಂಗಳ ನಡುವೆ ಬಿಸಿಬಿಸಿ ಚರ್ಚೆ ನಡೆದಿತ್ತು. ನಮ್ಮ ನಗರಕ್ಕೆ ಸ್ಮಾರ್ಟಸಿಟಿ ಬರಲು ತಾವೇ ಕಾರಣ ಅಂತ ಇಬ್ಬರೂ ವಾದಿಸುತ್ತಿದ್ದರು. ಇದ್ದಕಿದ್ದಂತೆ ಬೀಸಿದ ಗಾಳಿ ಧೂಳಿನ ಜೊತೆಗೆ ಪ್ಲಾಸ್ಟಿಕ್, ರದ್ದಿ, ಬಾಯ್ತೆರೆದು ತುಂಬಿ ತುಳುಕುತ್ತಿದ್ದ ಚರಂಡಿಯ ಘಮಘಮ ಮುಖಕ್ಕೆ ರಾಚಿ ತಾನೂ ಚರ್ಚೆಯಲ್ಲಿ ಪಾಲ್ಗೊಂಡಿತೋ ಎಂಬಂತೆ ಭಾಸವಾಯಿತು. ಮನಸು ಭಾರವಾಯಿತು.
ಗೇಟಿನಲ್ಲಿ ಇದ್ದ ಹರಿದು ಚಿಂದಿಯಾದ ಚಪ್ಪಲಿಗಳಿಂದಲೇ ನಮ್ಮ ಅಡ್ಡಮನೆ ಹುಚ್ರಾಯಪ್ಪ ಬಂದಿರುವುದನ್ನು ಅರಿತು ಮುಖದಲ್ಲಿ ಮಂದಹಾಸ ಸುಳಿದು ಮರೆಯಾಯಿತು. ನನ್ನ ಸ್ಕೂಟರಿನ ಬ್ರಹ್ಮಾಂಡ ಸದ್ದು ಕೇಳಿಯೇ ಬಾಗಿಲಿಗೆ ಬಂದು ನಿಂತಿದ್ದ ಮಡದಿ ಶಾರದೆಯ ಮುಖದಲ್ಲಿಯೂ ತುಂಟ ನಗೆ ಸುಳಿದಾಡುತ್ತಿತ್ತು. ಯಾಕೆ ಎನ್ನುವಂತೆ ಅವಳ ಮುಖವನ್ನು ನೋಡಿದೆ. ಅವಳು ನಗುವನ್ನು ನಿಯಂತ್ರಿಸಿಕೊಂಡು, ‘ಮತ್ತಿನ್ಯಾರು, ಅದ ನಿಮ್ಮ ಸಿಸ್ಯಾ ಉಚ್ರಾಯಪ್ಪ ಬಂದೌನೆ!’ ಅಂತ ಅವನ ನಕಲು ಮಾಡುತ್ತ ಹೇಳಿ ಕೈಯಲ್ಲಿಯ ಬ್ಯಾಗನ್ನು ತೆಗೆದುಕೊಂಡು ಒಳಗೆ ಹೋದಳು. ನಾನು ಕುಂಟುತ್ತ ಪಾಲಿಕೆಯವರನ್ನು ಬೈಯ್ಯುತ್ತ ಒಳಗೆ ಬಂದೆ.
‘ಸರಣು ಗುರುವೇ!’ ಅಂತ ಹುಚ್ರಾಯ ನನ್ನನ್ನು ನೋಡಿ ತನ್ನ ವಕ್ರದಂತ ಶ್ರೀಮಂತಿಕೆಯನ್ನು ಪ್ರದರ್ಶಿಸಿದ.
‘ಗುಡ್ ಇವನಿಂಗ್ ಹುಚ್ರಾಯಾ! ಹ್ಯಾಂಗ್ ಇದ್ದೀಯೋ ಔ ಆರ್ ಯು? ಭಾಳ್ ಅಪರೂಪ ಆಗೀ ನೋಡ ಇತ್ತಿತ್ಲಾಗ. ಏನ ಎಲ್ಲಾ ಓಕೆ ಆದ ಏನಪಾ?’ ಅಂತ ಗಂಭೀರ ವದನನಾಗಿ ಕೇಳಿದೆ. ನಡುನಡುವೆ ಇಂಗ್ಲಿಷ್ ಸೇರಿಸಿದ್ದು ಅವನ ಅತ್ಯದ್ಭುತ ‘ಇಂಗ್ನೀಸ್’ ಕೇಳುವ ಚಪಲತೆಯಿಂದ.
ನನ್ನ ಇಂಗ್ಲಿಷ್ ಕುಶಲೋಪರಿಯಿಂದ ಉತ್ತೇಜಿತನಾಗಿ ಅವನು ಮೇಕೆಯಂತೆ ಹೆ ಹೆ ಅಂತ ಕೆನೆಯುತ್ತ, ‘ಊಂ ಸಾ. ಪೈನಾಗದೀನಿ! ಏನೇನೋ ಪಾಲಿಟ್ರಿಕ್ಸು ಸಾ. ಅಂಗಾಗಿ ಇತ್ತಾಕಡೆ ಪೇಸ್ ಆಕ್ನಿಲ್ಲ ಸಾ! ಯಾಕ್ ಸಾ ಕುಂಟ್ತೀರಿ?’ ಅಂತ ಕೈ ಹೊಸೆಯುತ್ತ ಹೇಳಿ ಧೊಪ್ಪೆಂದು ಸೋಫಾದ ಮೇಲೆ ಚಕ್ಕಳಬಕ್ಕಳ ಹಾಕಿ ಕೂತು, ‘ಸಾರ್ದಕ್ಕೌರೆ ಸಾ ಬಂದಾರೆ. ಅಂಗೆ ಆಟ್ ಆಟ್ ಟೀ ತತನ್ನಿ!’ ಅಂತ ನನ್ನವಳಿಗೆ ಆದೇಶಿಸಿದ! ಅವನ ಧೈರ್ಯ, ಅವನು ಕೂತ ಸ್ಟೈಲ್ ನನ್ನವಳಿಗೆ ಕೋಪ ಉಕ್ಕಿಸಿತು. ಕಾರಣ ನಗರದ ಕೆಂಪು ಮಣ್ಣು ಮೆತ್ತಿಕೊಂಡಿದ್ದ ಅವನ ಚರಣಕಮಲಗಳಿಂದ ಅಂದೇ ಹಾಸಿದ್ದ ಸೋಫಾ ಕವರಿಗೆ ಮೆತ್ತಿಕೊಂಡಿದ್ದು! ಒಳಗಡೆ ಪಾತ್ರೆಗಳು ಠಣ್ ಠಣ್ ಅಂತ ಸದ್ದು ಮಾಡುತ್ತ ಬಿದ್ದವು. ಹುಚ್ರಾಯ ನನ್ನನ್ನು ತುಂಟ ನೋಟದಿಂದ ನೋಡುತ್ತ,
‘ಯಾಕ್ ಸಾ ಅಕ್ಕೌರು ರಾಂಗ್ ಆದಾಂಗೈತೆ? ಏನಾದ್ರೂ ಪೈಟಿಂಗೂ?’ ಅಂತ ನನಗೇ ತಿರುಗಿಸಿದ ಅವನ ಧಾಷ್ಟ್ರ್ಯಕ್ಕೆ ದಂಗಾದೆ! ‘ಸಾರ್ದಕ್ಕಾ ನೀವೇನೂ ಬಯಾ ಬೀಳ್ಬೇಡಿ! ಸಾ ಗೆ ನಾ ಅಡ್ನೈಸ್ ಮಾಡ್ತೀನಿ ಬಿಡಿ’ ಅಂತ ಮತ್ತೊಂದು ಡೈಲಾಗ್ ಎಸೆದ. ನನಗೆ ನಗು ಬಂತಾದರೂ ಸುಮ್ಮನಿದ್ದೆ. ಆದರೆ ಒಳಗಡೆಯಿಂದ ‘ಕಿಸಕ್’ ಅಂತ ಶಬ್ದ ಬಂದು, ಅವಳ ಕೋಪ ತಣಿದದ್ದು ತಿಳಿದು ನನಗೂ ನಗು ತಡೆಯಲಾಗಲಿಲ್ಲ. ‘ನೋಡದ್ರಾ ಸಾ ನಾ ಎಂಗೆ ಕಾಮಡಿ ಮಾಡಿ ಸಾರ್ದಕ್ಕನ್ನ ಲಾಪ್ ಮಾಡಸ್ದೇಂತ!’ ಅಂತ ತನ್ನ ಅಕ್ಷರಶಃ ಬೆನ್ನು ತಟ್ಟಿಕೊಂಡ.
images
‘ಯಾಕ್ ಸಾ ಕುಂಟ್ಕೊಂಡ್ ಬಂದ್ರಿ?’ ಅಂತ ಆತಂಕದಿಂದ ಮತ್ತೆ ಕೇಳಿದ. ಹುಚ್ರಾಯಪ್ಪನನ್ನು ಅಷ್ಟೊತ್ತು ಮರೆತಿದ್ದ ನನ್ನ ಕಾಲು ನೋವು ಹೆಚ್ಚಾದಂತೆನಿಸಿ ಅದಕ್ಕೆ ಕಾರಣವಾದ ಘಟನೆ ನೆನಪಾಗಿ ಪಾಲಿಕೆಯವರ ಮೇಲೆ ಸಿಟ್ಟು ಉಕ್ಕಿ ಬಂದು,
‘ಏನ್ ಪಾ ಹುಚ್ರಾಯಾ ಎಲ್ಲಿ ಹಾಳಾಗಿ ಹೋಗ್ಯಾರ ನಿಮ್ಮ ನರಕಪಾಲಿಕೆಯ ಮಂದಿ. ನೀವೆಲ್ಲ ಪೀಪಲ್ಸ್ ಸವರ್ೆಂಟ್ಸ್ ಅಂತ ಮಂದೀ ಟ್ಯಾಕ್ಸ್ ತಿಂದ್ಕೊಂಡ್ ಏನ್ ಮಾಡ್ತಿತರ್ೀರಿ. ಏನ ರಸ್ತೆನೋ ಅವು, ಏನ ಎಲ್ಲಾಕಡೆ ಮಣ್ಣ ಅಗದ ಹಾಕ್ಯಾರಪಾ. ಅಲ್ಲೇ ಕಸಾ ಏನು, ಅದರ ಮ್ಯಾಲ ಹಂದೇನು, ನಾಯೇನು, ಮುರದ ಬಿದ್ದ ಲೈಟ ಕಂಬಾ ಏನು, ರಸ್ತೆದಾಗ ಪೈಪ ಒಡದ ಹರ್ಯೋ ಆ ಹೊಲಸ ಚರಂಡೀ ನೀರೇನು, ಗೊಂಯ್ ಅನ್ನೋ ಸೊಳ್ಳೇನು? ಇದೇನ ಕಾಪರ್ೋರೇಶನ್ನೋ ಏನ ಕಸದ ಕ್ಯಾಪಟಲ್ ಸಿಟಿನೋ? ಮತ್ತ ಇದನ್ನ ಸ್ಮಾರ್ಟಸಿಟಿ ಮಾಡ್ಲಿಕ್ಕ ಹೊಂಟೀರಿ!’ ಅಂತ ಎಲ್ಲ ಸಿಟ್ಟನ್ನೂ ಒಮ್ಮೆಲೇ ಹುಚ್ರಾಯಪ್ಪನ ಮೇಲೆ ಹಾಕಿದೆ. ನಾನು ಎಂದೂ ಸಿಟ್ಟಿಗೆದ್ದವನಲ್ಲ. ಈ ಸಿಟ್ಟು ಸಹಜವೇ ಆಗಿದ್ದರೂ ಹುಚ್ರಾಯಪ್ಪನ ಮೇಲೆ ಹಾಕಿದ್ದು ಅವನನ್ನು ಚಕಿತಗೊಳಿಸಿತ್ತು.
‘ಊಂ ಸಾ ನಾನೂ ಅದೆ ಸ್ಮಾಲ್ಟಸಿಟಿ ಮ್ಯಾಟರ್ ಡಿಸ್ಗಸ್ ಮಾಡಾಮಾಂತ ಬಂದೆ ತಮ್ತಾವಾ. ಈ ಕಸಾ ತಗೆಯೋ ಕಾಂಟ್ರಾಟ್ಟ ವಯ್ಯಂಗೂ, ಸೊಳ್ಳೆ ಬತ್ತಿ ಮಾರೋಗರ್ೂ, ಈ ಅಂದೀ ಸಾಕೋಗರ್ೂ ಒಂತರಾ ಅಂಡಲ್ಸ್ಟ್ಯಾಂಡಿಂಗ್ ಇರೋಂಗೈತೆ. ಅಂಗೆ ಕರಂಟನೌಗರ್ೂ ಈ ಇನ್ವೆಂಟರ್ ವಯ್ಯಂಗೂ ಪ್ರೆಂಡ್ಸಿಪ್ ಇರಾಂಗೈತೆ. ರಸ್ತೆ ನಿಪೇರಿ ಮಾಡೋವಯ್ಯಂಗೂ ಇಂಜನಿಯ್ಯರ್ ವಯ್ಯಂಗೂ… ಇಂಗಾಗಿರಕ್ಕೇ ನಮ್ ಸಿಟಿ ಇಂಗೆ ಗಬ್ಬೆದೋಗೈತೆ. ಇದ್ಕೆಲ್ಲಾ ನಮ್ಮಂತಾ ಲೀಡರ್ಸ ಮೇನ್ ಲೀಜನ್ ಅಂತೌರೆ ಮಂದಿ!’ ಅಂತ ಅವನೂ ನನ್ನ ಮಾತಿಗೆ ಸಿಟ್ಟಿನಿಂದಲೇ ದನಿ ಕೂಡಿಸಿದ.
ನನಗೆ ಮೊದಲು ಹುಚ್ರಾಯ ಹೇಳಿದ್ದು ತಿಳೀಲಿಲ್ಲ. ಸೊಳ್ಳೆಬತ್ತಿಯವರಿಗೂ, ಇನ್ವರ್ಟರ್ ಕಂಪನಿಗಳಿಗೂ, ಕಸಾ ತೆಗೆಯೋ ಕಾಂಟ್ರಾಕ್ಟರಗೂ ಹಂದಿ ಸಾಕೋರಿಗೂ ಎಲ್ಲೀ ಸಂಬಂಧ?
‘ಅಲ್ಲಾ ಸಾ ಬೆಳಂಗೂರ ಕಾಪೋರೇಸನ್ನ ಅವೈಡ್ (ಡಿವೈಡ್) ಮಾಡಿ ಮೂರ್ ಪಾಲ್ಟ್ ಮಾಡ್ತಾರಂತಲ್ಲಾ ಸಾ. ಅದೇ ಇಸ್ಸೂ ಆಕ್ಕೊಂಡ್ ನಮ್ಮ ಪಾಲ್ಟಿ ಇನೆಕ್ಸೆನ್ ಪೈಟ್ ಮಾಡಿ ಇನ್ನೂ ಆಯ್ತಲ್ಲಾ ಸಾ. ನಿಜಲ್ಟ್ ಸೀ ಮಾಡ್ನಿಲ್ವರಾ ಸಾ ಟೀವ್ಯಾನಾಗೆ?’ಅಂತ ಸುದ್ದಿ ಬಿತ್ತರಿಸಿ,
‘ಸಾ ನಂಗೊಂದ್ ಐಡೀರಿಯಾ ಪ್ಲ್ಯಾಸ್ ಒಳ್ದೈತೆ ಸಾ!’ ಅಂತ ಉತ್ಸಾಹದಿಂದ ಧಿಗ್ಗನೆದ್ದು ಸೋಫಾದ ಮೇಲೆ ಕುಕ್ಕರಗಾಲಿನಲ್ಲಿ ಕೂತ.
‘ಏನೋ ಅದು?’ ನನಗೂ ಹುಚ್ರಾಯನ ಅನಿರೀಕ್ಷಿತ ಉತ್ಸಾಹವು ಕುತೂಹಲ ಕೆರಳಿಸಿತು.
‘ಸಾ ಸುಮ್ನೆ ಒಂದೆಲ್ಡು ಅವೈಡ್ ಮಾಡೋಕಿನ್ನಾ ಎಲ್ಲಾ ವಾಲ್ಡಗಳನ್ನ ಕಾಪೋರೇಸನ್ ಮಾಡ್ಬಿಟ್ರೆ ಎಂಗಾಗ್ತೈಲ್ಲವರಾ? ಎಲ್ಲಾ ಕಾಲ್ಪೋರೇಟರ್ ಮೇಯರ್ ಆಗ್ಬೌದಲ್ಲವರಾ? ವಸರ್ಾ ವಸರ್ಾ ಮೇಯರಗಳ್ನ ಇನೆಕ್ಟ್ ಮಾಡೋ ಪೀಕ್ಲಾಟಾ ಇರಾಂಗಿಲ್ಲ ಅಲ್ಲವರಾ? ಎಂಗೈತೆ ಸಾ ನನ್ ಐಡೀರಿಯಾ?’ ಅಂತ ಘನವಾದ ವಿಷಯವನ್ನು ಹೊರಹಾಕಿದ. ‘ಅಂತೂ ಮೇಯರ್ ಆಗೋ ಪ್ಲಾನ್ ಹಾಕೀ ಅನ್ನು’ ಅಂತ ಅವನ ಮಾತಿಗೆ ದಿಗಿಲುಗೊಂಡು ಕೇಳಿದೆ.
ಇಂತಹ ಪ್ರಳಯಾಂತಕ ‘ಐಡೀರಿಯಾ’ ಹುಚ್ರಾಯಪ್ಪನಿಗಲ್ಲದೆ ಇನ್ನಾರಿಗೆ ಬರತ್ವೆ ಅಂತ ಅಂದುಕೊಂಡು, ‘ಅದಿಲರ್ಿ ಹುಚ್ರಾಯಾ ಅದೇನೋ ಮೊಸ್ಕಿಟೋ ಡೀಲರ್ಸ, ಕರೆಂಟು ಇನ್ವರ್ಟರ್ ಡೀಲರ್ಸ ಡೀಲಿಂಗು ಅಂತಿದ್ದೆ. ಏನೋ ಅದು?’ ಮತ್ತೆ ನಾನವನನ್ನು ಮೊದಲಿನ ಮಾತಿನ ಹಳಿಗೆ ತಂದೆ. ನಂಗೊತ್ತು ಹುಚ್ರಾಯಾ ಏನಾದ್ರೂ ಚಕಿತಗೊಳಿಸುವ ವಿಷಯ ಹೇಳುತ್ತಾನೆಂದು.
‘ಊಂ ಸಾ ಎಲ್ಲಾ ಅಲ್ಕಾ ನನ್ಮಕ್ಳು, ಎಲ್ಲಾ ಸೇರ್ಕೊಂಡು ಅಂಡಲ್ಸ್ಟ್ಯಾಂಡಿಂಗ್ ಮಾಡ್ಕೊಂಡೌರೆ ಸಾ! ಈಗ್ನೋಡಿ ಸಾ ಎಲ್ಲಾ ಕಸಾ ಕಿಲೀನ್ ಮಾಡ್ಬಿಟ್ರೆ ಅಂದಿಗಳ್ಗೆ ಪುಡ್ ಎಲ್ಲುಳೀತೈತೆ ಸಾ. ಅದ್ಕೇ ಇವ್ರು ಇತ್ಲಾಗೆ ಇಂಗೆ ಕಿಲಿನ್ ಮಾಡ್ದಾಂಗೆ ಮಾಡಿ ಓಗ್ತಾರೆ. ಇದ್ರಿಂದ ಅಂದಿಗಳು ಬದ್ಕೋತಾವೆ. ಆ ಅಂದೀ ಕಾಂಟ್ರಾಟ್ಟರು ಅಣಾ ಮಾಡ್ಕೊಂಡ್ ದುಂಡಗಾಗ್ತಾನೆ. ಅಂಗೆ ಆಪ್ ಉಳ್ದ ಕಸ್ದಿಂದ ಸೊಳ್ಳೆ ಎಚ್ಚಾಗ್ತಾವೆ. ಇದು ಸೊಳ್ಳೆ ಬತ್ತಿ ಡೀಲರ್ಸ, ಗುಡ್ನೈಟ್ ಡೀಲರ್ಸ ಅಂಡಲ್ಸ್ಟ್ಯಾಂಗ್ ಸಾ. ಅವ್ರ ಒಟ್ಟೇನೂ ತುಂಬೇಕಲ್ಲವರಾ. ಇನ್ನಾ ಕಲೆಂಟ್ ಅಂಗೆ ಟ್ವೆಂಟೀಪೋರ್ ಹವರ್ಸ ಇದ್ರೆ ಈ ಇನ್ವೆಂಟರ್ಸ ಡೀಲರ್ಸ ಎಂಗ್ಸಾ ಲೈಪ್ಡೀಲ್ ಮಾಡೋದು. ಅದ್ಕೆ ದಿನದಾಗೆ ಅತ್ತಿಪ್ಪತ್ ಸತರ್ಿ ಕಲೆಂಟ್ ಓಗಾದು ಬರಾದು ಇದ್ರೆ ತಾನೆ ಸಾ ಇನ್ವೆಂಟರ್ಸ ಬಿಜಿನೆಸ್ ಇಂಪೂರ್ವ ಆಗಾದು? ಟೂಡೆಂಟ್ಗಳೆಲ್ಲಾ ಟೆಡೀ ಮಾಡೋದು, ನೀವೆಲ್ಲಾ ನೂಜು, ಕ್ರಿಕೆಟ್ಟು ನೋಡಾದು. ಇಂಗಿವ್ರೆಲ್ಲಾ ಸೇರ್ಕೋಂಡಿರಾಕ್ಕೇ ನಮ್ ಸಿಟಿ ಇಂಪ್ರೂ ಆಗ್ನಿಲ್ಲಾ ಸಾ!’ ಅವನ ಚಕಿತಗೊಳಿಸುವ ಆದ್ರೆ ಸತ್ಯಕ್ಕೆ ಹತ್ತಿರವಾದ ಲಾಜಿಕ್ ಕೇಳಿ ನಾನೂ ದಂಗಾದೆ. ಶಾರದಾ ಅಚ್ಚರಿಯಿಂದ ಗಲ್ಲಕ್ಕೆ ಕೈಕೊಟ್ಟು ಅವನ ಮಾತು ಕೇಳ್ತಾ ‘ಹೌದಲ್ಲವೇ’ ಅನ್ನುವಂತೆ ಕಿಚನ್ ಬಾಗಿಲಿಗೆ ಒರಗಿ ನಿಂತಿದ್ದಳು.
‘ನಾನೇರಾ ಮಿನಿಸ್ಟರ ಆಗಿದ್ರೆ ಅಂಗೆ ಪಿಎಂ ಸಾಹೇಬ್ರ ಪುಟ್ಗೆ ಡೈಲ್ ಒಡ್ದು ನಮ್ ಸಿಟೀನೂ ಸ್ಮಾಲ್ಟ ಸಿಟಿ ಮಾಡ್ತಿದ್ದೆ ಸಾ! ಈ ಎಲ್ಲಾ ಸೊಳ್ಳೆ ಡೀಲರ್ಸ, ಇನ್ವೆಂಟರ್ಸ ಡೀಲರ್ಸ, ಕಸಾ ಒಡ್ಯೋ ಕಂಟ್ರಾಟದಾರಗಳ್ನ ಎಂಗೆ ಕಂಟ್ರೋನ್ ಮಾಡ್ತಿದ್ದೆ ಅಂತ!’ ಅಂತ ವೀರಾವೇಶದ ಮಾತಾಡಿದ.
‘…ಆದ್ರೆ ಏನ್ಮಾಡೋದ ಸಾ ನಮ್ಮ ದೇಸ್ದಾಗೆ ನನ್ನಂತ ಬುದ್ದಿವಂತರ್ಗೇ ಎಲ್ಸಾ ವ್ಯಾಲೂ ಐತೆ?’ ಅಂತ ನಿಟ್ಟುಸಿರು ಬಿಟ್ಟ.
‘ಇರ್ಲಿ ಬಿಡು ಹುಚ್ರಾಯಾ. ನಮ್ ಜನಾ ಒಂದಿನಾ ನಿನ್ನ ಇಂಟೆಲ್ಜೆಂಟ್ ಗುರ್ತು ಹಿಡೀತಾರೆ. ಚಿಂತಿಸ್ಬೇಡಾ. ನಿನ್ನಾಂಘ ಎಲ್ಲಾ ಕಾಪರ್ೋರೇಟರ್ಸ ನಮ್ ಸಿಟಿ ಡೆವಲಪ್ಮೆಂಟ್ ಬಗ್ಗೆ ಥಿಂಕ್ ಮಾಡಿದ್ರೆ ನಾವು ಎಷ್ಟ ಮುಂದ ಹೋಗಿರ್ತದ್ವೆ. ನಂಗ ಗ್ಯಾರಂಟೀ ಅದ. ನೀ ನಮ್ ಸಿಟೀನ ಸ್ಮಾಲ್ಟ ಮಾಡ್ತೀಂತ. ನೋಡ್ದಿಲ್ಲೋ ಟೀವೀಯೊಳಗ ಈಗ ಹಾಜಿ ಮಾಲಿಗಳು ನಮ್ ಸಿಟಿ ಸ್ಮಾಲ್ಟ ಸಿಟಿ ಆಗ್ತದಂತ ಆರ್ಗ್ಯೂ ಮಾಡ್ತಿದ್ರು’ ಅಂದೆ.
‘ಆಂ! ಅಂಗಾ ಸಾ ಅಂಗಾರೆ ನಮ್ ಸಿಟಿ ಸ್ಮಾಲ್ಟ ಸಿಟಿ ಮಾಡ್ತಾರಂತಾ ಸಾ?’ ಅಂತ ಹುಚ್ರಾಯಾ ಆಶ್ಚರ್ಯದಿಂದ ಅಂದರೂ ಅವನ ಮುಖದಲ್ಲಿ ವಿಷಾದವಿತ್ತು. ಕೂತಲ್ಲೇ ಚಡಪಡಿಸಿದ್ದು ನನಗೆ ಕುತೂಹಲ ಮೂಡಿಸಿತು. ಅಷ್ಟರಲ್ಲಿ ಅವನ ಮೊಬೈಲ್ ರಿಂಗಣಿಸಿತು.
‘ಆಂ ಔದಾ? ಆಗಲ್ವಂತಾ? ಟೀವಿನ್ಯಾಗೆ ಬತರ್ಾ ಐತಾ?’ ಅಂತ ಸಂತೋಷ ಹಾಗೂ ಅಚ್ಚರಿಯಿಂದ ಆ ಕಡೆಯವನೊಂದಿಗೆ ಮಾತಾಡಿ, ‘ಸಾ ಸ್ವಲ್ಪ ಟಿವಿ ಆಕಿ. ಸ್ಮಾಲ್ಟ ಸಿಟಿ ಬಗ್ಗೆ ನೂಜ್ ಬತ್ತಾ ಐತಂತೆ?’ ಅಂತ ಗಡಬಡಿಸಿದ. ಅವನ ಉತ್ಸಾಹದ ನಿಯಂತ್ರಣಕ್ಕೊಳಗಾಗಿ ನಾನು ಟಿವಿ ಆನ್ ಮಾಡಿದೆ. ಹೌದು ಸ್ಮಾರ್ಟಸಿಟಿ ನಮ್ಮ ನಗರದ ಕೈತಪ್ಪಿ ಹೋದ ಕುರಿತು ಬ್ರೇಕಿಂಗ್ ನ್ಯೂಜ್ ಬರ್ತಿತ್ತು. ಅದನ್ನು ನೋಡುತ್ತಿದ್ದಂತೆ ಹುಚ್ರಾಯನ ಸಂತೋಷ ಇಮ್ಮಡಿಯಾಗಿ ಧಿಗ್ಗನೆದ್ದು ನನ್ನ ಕಾಲಿಗೆ ಸಾಷ್ಟಾಂಗ ಬಿದ್ದೆದ್ದ.
‘ಎಂತಾ ಲಕ್ಕಿ ಔಸ್ ಸಾ ನಿಮ್ದು! ನಿಮ್ಮನೆಗೆ ಬರ್ತಿದ್ದಂಗೆ ಎಂತಾ ಸುಬ ಸಮಾಚಾರ ಸಿಗ್ತು ಸಾ ನಂಗೆ!’ ಅಂತ ಬಡಬಡಿಸಿದ. ನನಗೆ ಅವನ ಉತ್ಸಾಹಕ್ಕೂ ನಮ್ಮ ನಗರಕ್ಕೆ ಸ್ಮಾರ್ಟಸಿಟಿ ಪ್ರೊಜೆಕ್ಟ ಕೈತಪ್ಪಿದ್ದಕ್ಕೂ ಇರುವ ಸಂಬಂಧ ಅರ್ಥ ಆಗಲಿಲ್ಲ. ನಿಂಗೇನಾದ್ರೂ ತಿಳೀತೇ ಅನ್ನುವಂತೆ ಶಾರದಾಳನ್ನೊಮ್ಮೆ ನೋಡಿದೆ. ಅವಳೂ ಶಾಕ್ನಲ್ಲಿದ್ದಳು. ಗೊತ್ತಾಗಲಿಲ್ಲವೆಂದು ತಲೆಯಲ್ಲಾಡಿಸಿದಳು. ನಂಗೆ ಖಾತ್ರಿ ಆಯಿತು ಇವನೇನೋ ಬಾಂಬ್ ಸಿಡಿಸುತ್ತಾನೆಂದು.
‘ಹಂಗಂದರೇನೋ ಹುಚ್ರಾಯಾ ನಮ್ ಸಿಟಿ ಸ್ಮಾರ್ಟಸಿಟಿ ಆಗಲಿಲ್ಲಂದ್ರ ನಿಂಗ್ಯಾಕೋ ಇಷ್ಟ ಖುಷಿ?’ ಅಂತ ಅನುಮಾನಿಸುತ್ತಾ ಕೇಳಿದೆ. ಅವನಿಗೆ ಉತ್ತರ ಕೊಡುವ ವ್ಯವಧಾನ ಇರಲಿಲ್ಲ. ಗಡಿಬಿಡಿ ಮಾಡಿಕೊಂಡು ಹೊರಡುತ್ತಾ,
‘ಮತ್ತೇನ್ಸಾ ಕುಸಿ ಆಗ್ದೇ ಇರ್ತದಾ? ಅಂದೀ ಸಾಕೋಗರ್ೆ, ಸೊಳ್ಳೆ ಬತ್ತೀನೌಗರ್ೆ, ಇನ್ವೆಂಟರ್ಸ ಡೀಲರ್ಸ ಜತೀಗೆ ಡೀಲಿಂಗ್ ಮಾಡ್ಕೊಂಡಿದ್ದೆ ಸಾ. ಎಲ್ಲಿ ಸ್ಮಾಲ್ಟಸಿಟಿ ಆಗಿ ಆ ಡೀಲಿಂಗು ಕೈ ತೆಪ್ತೈತೋ ಅಂತ ಪಿಯರ್ ಆಗಿತ್ತು ಸಾ! ಸದ್ಯ ಗಾಡು ದೊಡ್ಡೋನು ಸಾ. ಇಲ್ದಿದ್ರೆ ಅವ್ರೆಲ್ಲರ ತಾವ ಈಸ್ಗೊಂಡಿದ್ದ ಅಣಾ ನಿಟರ್ನ ಮಾಡೋ ಸಿಚೇಸನ್ ಬಂದಿತ್ತು! ನಾ ಆಮ್ಯಾಕೆ ನಿಮ್ತಾವಾ ಬತ್ತೀನಿ ಸಾ…!’ ಹೊರಗೋಡಿದ.
ಹುಚ್ರಾಯನ ಸ್ಮಾಲ್ಟಸಿಟಿ ಕನ್ಸರ್ನ ಹೀಗೆ ಬಯಲಾಗಿ, ಜನಸೇವೆ, ಲೀಡರ್ಸ, ಸಿಟಿ ಇಂಪ್ರೂವ್ಮೆಂಟ್, ನಿರಂತರ ಕರೆಂಟ್, ಹೇಮಾಮಾಲಿನಿಯ ಕೆನ್ನೆಯಂತಹ ರಸ್ತೆಗಳು ಎಲ್ಲ ಕಣ್ಣ ಮುಂದೆ ಕುಸಿದಂತಾಯಿತು. ಫಕ್ಕನೆ ಕರೆಂಟ್ ಹೋಯಿತು. ನಾನು ಶರದಾ ಪಿಕಿಪಿಕಿ ಕಣ್ಣು ಬಿಡುತ್ತಾ ಅವನು ಹೋದ ದಿಕ್ಕನ್ನೇ ನೋಡುತ್ತಾ ನಿಂತೆವು.

‍ಲೇಖಕರು G

September 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: