ಸಹಜ ಸಾಗುವಳಿ ಹೊಸ ಆವೃತ್ತಿ ಮಾರುಕಟ್ಟೆಯಲ್ಲಿ!

ಸಹಜ ಸಾಗುವಳಿ ದ್ವೈ-ಮಾಸಿಕ
ಸಂಪಾದಕಿ: ವಿ. ಗಾಯತ್ರಿ
ವಿಳಾಸ: ನಂ. 22, ಮೈಕೆಲ್ ಪಾಳ್ಯ, ಹೊಸ ತಿಪ್ಪಸಂದ್ರ ಅಂಚೆ,
ಬೆಂಗಳೂರು- 560 075, ದೂರವಾಣಿ- 080-25283370
ಇ-ಮೇಲ್: icrablr@gmail.com
ಚಂದಾ ವಿವರ: ವಾರ್ಷಿಕ: ರೂ. 60/- ಹತ್ತು ವರ್ಷಕ್ಕೆ: ರೂ.600/-
ಈ ಸಂಚಿಕೆಯ ಒಂದು ಆಸಕ್ತಿದಾಯಕ ಲೇಖನ ನಿಮಗಾಗಿ :
ಹುಚ್ಚಳ್ಳು ಹಿಂಡಲಾಗದ ಪೈಲ್ವಾನರು
ಅ. ನ. ಯಲ್ಲಪ್ಪ ರೆಡ್ಡಿ
ನಾನು ಹುಣಸೂರಿನಲ್ಲಿ ಡಿಎಫ್ಒ ಆಗಿದ್ದಾಗ ಮಿತ್ರರಾದ ಪುಟ್ಟಣ್ಣ ಕಣಗಾಲ್ ಅವರು ನನ್ನನ್ನು ಬಹಳ ಪ್ರೀತಿಯಿಂದ ಅವರ ಊರಾದ ಕಣಗಾಲ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ರೈತರನ್ನೆಲ್ಲಾ ಪರಿಚಯ ಮಾಡಿಸಿದರು. ಹಾಗೆಯೇ ರೈತರೊಡನೆ ಮಾತನಾಡುತ್ತಾ ಪುಟ್ಟಣ್ಣನವರು ಒಂದು ಸ್ವಾರಸ್ಯವಾದ ಕತೆ ಹೇಳಿದರು.
ಸುಮಾರು 1940ರ ಆಸುಪಾಸಿರಬಹುದು. ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಮಹಾರಾಜರಾಗಿದ್ದರು. ಅಲ್ಲಿ ದಸರಾ ಸಮಯದಲ್ಲಿ ನಡೆಯುವ ಕುಸ್ತಿ ಪಂದ್ಯ ಬಹಳ ಹೆಸರುವಾಸಿ. ಹೀಗೆ ಒಮ್ಮೆ ಕಣಗಾಲ್ ಕಡೆಯಿಂದ ರೈತರು ಕುಸ್ತಿ ಪಂದ್ಯ ನೋಡಲು ಬಂದಿದರು. ಅವರಲ್ಲಿ ಒಬ್ಬ ಕಟ್ಟುಮಸ್ತಾದ ರೈತ ಪೈಲ್ವಾನರ ಪ್ರತಿ ಪಟ್ಟನ್ನೂ ಆನಂದಿಸುತ್ತಾ, ‘ಶಭಾಷ್, ಶಭಾಷ್’ ಎಂದು ಉದ್ಘಾರ ಮಾಡುತ್ತಲೇ ಇದ್ದ. ಫೈಲ್ವಾನರಿಗೆ ರೈತನ ಈ ವರ್ತನೆ ಕಿರಿಕಿರಿ ಅನ್ನಿಸಿತು. ಒಬ್ಬ ಪೈಲ್ವಾನ ರೈತನಿಗೆ, ‘ಏನು ಬಹಳ ಕುಸ್ತಿ ತಿಳಿದವನಂತೆ ಪಟ್ಟು ಪಟ್ಟಿಗೂ ‘ಶಭಾಷ್’ ಅನ್ನುತ್ತಿದ್ದೀಯ. ಬತರ್ಿಯೇನು ಅಖಾಡಕ್ಕೆ?’ ಎಂದು ರೇಗಿಸಿದ. ಆ ರೈತ ‘ಆಗಬಹುದು ಬತರ್ಿನಿ, ಆದರೆ ಒಂದು ಷರತ್ತು. ಮಾರಾಜರನ್ನ ಕರೆಸಬೇಕು, ಮಾರಾಜರು ಬಂದು ಕುಳಿತುಕೊಂಡ ಮೇಲೆ ನಿಮ್ಮಲ್ಲಿ ಯಾರಾದರೂ ಬನ್ನಿ, ಅವರ ಜೊತೆ ಕುಸ್ತಿ ಆಡ್ತೀನಿ’ ಎಂದ.
ಸುದ್ದಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಯಿತು. ಅವರು ಕುತೂಹಲದಿಂದ ಬಂದು ಕುಳಿತುಕೊಂಡರು. ಕುಸ್ತಿ ಪ್ರಾರಂಭವಾಯಿತು. ಪ್ರತಿಯೊಬ್ಬ ಪೈಲ್ವಾನನಿಗೂ ರೈತ ಪಟ್ಟು ಹಾಕಿ ತೋರಿಸಿದ. ಮಹಾರಾಜರು ಪೂತರ್ಿ ಕುಷಿಯಾದರು. ‘ಎಷ್ಟು ಚನ್ನಾಗಿ ಕುಸ್ತಿ ಮಾಡ್ತೀಯಾ, ನಿನಗೆ ಏನು ಬಹುಮಾನ ಬೇಕು, ಕೇಳು’ ಅಂದರು. ರೈತ, ‘ಬುದ್ದಿ, ಈ ಪೈಲ್ವಾನರಿಗೆಲ್ಲಾ ತಾವು ಒಳ್ಳೆ ಊಟ ಕೊಡುತ್ತೀರಿ, ನಾನು ರೈತ. ನಮ್ಮೂರು ಕಣಗಾಲ್ ಹತ್ರ ಹಳ್ಳಿ. ಇಲ್ಲಿಂದ ಒಟ್ಟು 28 ಮೈಲಿ ಆಗುತ್ತೆ. ನಡೆದುಕೊಂಡೆ ಹೋಗಬೇಕು. ಇವರೆಲ್ಲರನ್ನು ತಾವು ನಮ್ಮ ಮನೆಗೆ ಊಟಕ್ಕೆ ಕಳುಹಿಸಿಕೊಡಬೇಕು. ಪೈಲ್ವಾನರೆಲ್ಲ ನನ್ನ ಮನೆಯಲ್ಲೂ ಒಂದು ಸಲ ಊಟ ಮಾಡಬೇಕು, ಅಷ್ಟೆ ನನ್ನ ಆಸೆ’. ಎಂದ.
ಮಹಾರಾಜರು ಒಪ್ಪಿ ಅವರನ್ನೆಲ್ಲಾ ಕಳುಹಿಸಿಕೊಟ್ಟರು. ಎಲ್ಲರೂ ಕಾಲ್ನಡಗೆಯಲ್ಲಿ ಕಣಗಾಲ್ ಕಡೆಗೆ ಹೊರಟರು. ರೈತರ ಬಿರುಸು ಹೆಜ್ಜೆಗೆ ಪೈಲ್ವಾನರು ಸೋತು ಹಿಂದೆ ಉಳಿದರು. ರೈತ ಹೋಗಿ ಮನೆಯಲ್ಲಿ ಊಟಕ್ಕೆ ಸಿದ್ಧತೆ ಮಾಡಿಸಿದ. ‘ದೊಡ್ಡ ದೊಡ್ಡ ಪೈಲ್ವಾನರೆಲ್ಲಾ ಊಟಕ್ಕೆ ಬರುತ್ತಿದ್ದಾರೆ, ನಾವು ಒಳ್ಳೆ ಅಡುಗೆ ಬಡಿಸಬೇಕು’ ಎಂದು ಹೆಂಡತಿಗೆ ಹೇಳಿದ. ಊಟ ಸಿದ್ಧವಾಗುವ ವೇಳೆಗೆ ಪೈಲ್ವಾನರೆಲ್ಲಾ ಬಂದು ತಲುಪಿದರು.
ಎಲ್ಲರೂ ಊಟಕ್ಕೆ ಕುಳಿತರು. ರೈತನ ಹೆಂಡತಿ ಎಲೆ ತುಂಬಾ ಅನ್ನ, ಮೇಲೆ ಗಮಗಮ ಎನ್ನುವ ಮಜ್ಜಿಗೆ ಹುಳಿ ದಾರಾಳವಾಗಿ ಬಡಿಸಿದಳು. ಈಗ ರೈತ ಹೆಂಡತಿಗೆ, ‘ಎಲ್ಲರ ಕೈಗೂ ಒಂದೊಂದು ಹಿಡಿ ಉಚ್ಚೆಳ್ಳು ಕೊಡೇ, ಮರೆತುಬಿಟ್ಟೀಯಾ!’ ಅಂದ. ಆಕೆ ಉಚ್ಚಳ್ಳು ತಂದು ಎಲ್ಲರ ಕೈಗೂ ಕೊಟ್ಟಳು. ಪೈಲ್ವಾನರು ಮುಖ ಮುಖ ನೋಡಿಕೊಂಡರು. ಏನು ಮಾಡಬೇಕು ಗೊತ್ತಿಲ್ಲ ಫೈಲ್ವಾನರಿಗೆ. ರೈತನೇ ಹೇಳಿದ. ‘ಪೈಲ್ವಾನರೆ, ಹುಚ್ಚೆಳ್ಳನ್ನ ಚನ್ನಾಗಿ ಹಿಂಡಿ ಹತ್ತಿಪ್ಪತ್ತು ತೊಟ್ಟುಎಣ್ಣೆಯನ್ನು ಮಜ್ಜಿಗೆ ಹುಳಿ ಅನ್ನಕ್ಕೆ ಕಲೆಸಿಕೊಂಡು ಊಟ ಮಾಡಿ. ತುಪ್ಪಕ್ಕಿಂತ ರುಚಿಯಾಗಿರುತ್ತೆ’ ಎಂದ.
‘ಓ ಅಷ್ಟೇನಾ..’ ಎಂದ ಪೈಲ್ವಾನರು ಹುಚ್ಚೆಳ್ಳನ್ನು ಹಿಂಡತೊಡಗಿದರು. ಹಿಂಡಿಯೇ ಹಿಂಡುತ್ತಾರೆ ಒಂದು ತೊಟ್ಟು ಎಣ್ಣೆಯೂ ಬರಲೊಲ್ಲದು.
ಪೈಲ್ವಾನರ ಕಷ್ಟ ನೋಡಲಾರದೆ ರೈತ ಹೆಂಡತಿಯನ್ನು ಕರೆದು, ‘ಪೈಲ್ವಾನರಿಗೆ ಪಾಪ ಎಣ್ಣೆ ಹಿಂಡಲು ಆಗುತ್ತಿಲ್ಲ. ನೀನೆ ಹಿಂಡಿಕೊಡು’ ಎಂದ. ರೈತನ ಹೆಂಡತಿ ಹಿಡಿಯಲ್ಲಿ ಉಚ್ಚೆಳ್ಳು ತೆಗೆದುಕೊಂಡು ಪ್ರತಿಯೊಬ್ಬರ ಎಲೆಗೂ ಎಣ್ಣೆ ಹಿಂಡಿದಳು. ಸರಾಗವಾಗಿ ಹಿಂಡಿ ದಾರಾಳವಾಗಿ ಎಣ್ಣೆ ಬಡಿಸಿದಳು. ಪೈಲ್ವಾನರೆಲ್ಲಾ ತಲೆ ಬಗ್ಗಿಸಿಕೊಂಡು ಊಟ ಮಾಡತೊಡಗಿದರು. ‘ನೀವೆಲ್ಲಾ ಪೈಲ್ವಾನರು!’ ಎಂದು ರೈತ ಮೀಸೆಯಲ್ಲೇ ನಕ್ಕ. ಊಟ ಮುಗಿಸಿದ ಪೈಲ್ವಾನರು ಒಂದೂ ಮಾತನಾಡದೆ ತಲೆ ತಗ್ಗಿಸಿಕೊಂಡು ಮೈಸೂರಿನ ಹಾದಿ ಹಿಡಿದರು.
ಈ ಕತೆ ಹೇಳಿದ ಪುಟ್ಟಣ್ಣ ಕಣಗಾಲ್, ‘ಈ ಪ್ರದೇಶದಲ್ಲಿ ರೈತರು ಊಟಕ್ಕೆ ಗಾಣದ ಎಣ್ಣೆ ಬಡಿಸಿಕೊಳ್ಳುತ್ತಿರಲಿಲ್ಲ. ಅದರಲ್ಲಿ ಸತ್ವ ಇರುವುದಿಲ್ಲ ಎಂದು ಅನ್ನಕ್ಕೆ ಕೈಯಲ್ಲೇ ಹಿಂಡಿಕೊಳ್ಳುತ್ತಿದ್ದರು’ ಎಂದರು.
ನಾನು ಯೋಚಿಸುತ್ತಿದ್ದೆ, ಈ ರೈತನಿಗೆ ಆ ಪೈಲ್ವಾನರನ್ನು ಸೋಲಿಸುವ ಶಕ್ತಿ ಎಲ್ಲಿಂದ ಬಂತು? ಅವನ ಹೆಂಡತಿಗೆ ಹುಚ್ಚಳಲ್ಲಿ ಎಣ್ಣೆ ಹಿಂಡುವ ಶಕ್ತಿ ಎಲ್ಲಿಂದ ಬಂತು?
ಪೈಲ್ವಾನರು ದೇಹಶಕ್ತಿ ಬೆಳಸಲಿಕ್ಕಾಗಿಯೇ ತಿನ್ನುತ್ತಾರೆ. ಇಂದ್ರಿಯ ನಿಗ್ರಹ ಮಾಡಿ ಕಟ್ಟು ನಿಟ್ಟಿನ ಅಭ್ಯಾಸ ಮಾಡುತ್ತಾರೆ. ಅವರ ದೇಹದಲ್ಲಿ ಶಕ್ತಿ(ವೀರ್ಯ)ಯ ನಿರಾಳವಾದ ಹರಿವಿಗೆ ತಡೆಯೊಡ್ಡಿಕೊಂಡಿರುತ್ತಾರೆ. ಇದು ಅವರ ಇಡೀ ದೇಹ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ. ಸದಾಕಾಲ ಸ್ಪಧರ್ೆಯನ್ನೇ ಕುರಿತು ಯೋಚಿಸುವ ಅವರ ಮನಸ್ಸು ತೀವ್ರ ಒತ್ತಡಕ್ಕೆ ಒಳಗಾಗಿರುತ್ತದೆ. ರೈತನಾದರೋ ದೇಹದಂಡಿಸಿ ದುಡಿದು ತನಗಿಷ್ಟವಾದದ್ದನ್ನ ತೃಪ್ತಿಯಾಗುವಷ್ಟು ತಿನ್ನುತ್ತಾನೆ. ಯಾವ ಇಂದ್ರಿಯ ನಿರ್ಗಹ ಇಲ್ಲದೆ ಸ್ವಚ್ಛಂದವಾಗಿ ಬದುಕುತ್ತಾನೆ. ಎಲ್ಲ ಕ್ರಿಯೆಗಳನ್ನೂ ಪ್ರಕೃತಿ ಸಹಜವಾಗಿಯೇ ಕೈಗೊಳ್ಳುವ ಇವನ ದೇಹದಲ್ಲಿ ಶಕ್ತಿಯ ಹರಿವು ನಿರಾಳವಾಗಿ ನಡೆಯುತ್ತಾ ದೇಹ ಮನಸ್ಸುಗಳ ನಡುವೆ ಸಾಮರಸ್ಯ ಏರ್ಪಟ್ಟಿರುತ್ತದೆ. ಇದು ಜೀವಸೆಲೆಯಂತೆ ಹರಿಯುತ್ತಾ ಗಂಡ ಹೆಂಡತಿಯ ನಡುವಿನ ಸಂಬಂಧವನ್ನೂ ಬಂಧಿಸಿರುತ್ತದೆ. ಇವರಿಬ್ಬರ ಆರೋಗ್ಯದ ಗುಟ್ಟು, ಶಕ್ತಿಯ ಗುಟ್ಟು ಇರುವುದು ಇಲ್ಲಿಯೇ ಎಂದು ನಾನು ಯೋಚಿಸುತ್ತಿದ್ದೆ. ಶಕ್ತಿ ಅನ್ನುವುದು ಯಾಂತ್ರಿಕವಾದುದಲ್ಲ. ತಡೆಯಿಲ್ಲದ ಶಕ್ತಿಯ ಹರಿವಿನಿಂದ ಸಾಮರಸ್ಯ ಉಂಟಾಗುತ್ತದೆ. ಸಾಮರಸ್ಯ ಅನ್ನುವುದು ಒಂದು ಕಲೆ, ಒಂದು ಕೌಶಲ್ಯ. ಇದನ್ನು ರೈತ ಮತ್ತು ಅವನ ಹೆಂಡತಿ ತಮ್ಮ ದುಡಿಮೆಯಿಂದ, ತಮ್ಮ ಸ್ವಚ್ಛಂದವಾದ ಬದುಕಿನ ಕ್ರಮದಿಂದ ದಕ್ಕಿಸಿಕೊಂಡಿದ್ದಾರೆ. ಇದನ್ನೇ ‘ಕ್ವಾಲಿಟಿ ಆಫ್ ಲೈಫ್’ ಅಥವಾ ಉತ್ಕೃಷ್ಟವಾದ ಬದುಕು ಅನ್ನುವುದು. ಕ್ವಾಲಿಟಿ ಆಫ್ ಲೈಫ್ ಅನ್ನುವುದು ರೋಲ್ಸ್ರಾಯ್ ಕಾರುಗಳಲ್ಲಿ, ಹವಾನಿಯಂತ್ರಿತ ಬಂಗಲೆಗಳಲ್ಲಿ, ವಿಮಾನ ಪ್ರಯಾಣಗಳಲ್ಲಿ, ಕೋಟಿ ರೂಪಾಯಿಯ ವೈನ್ಗಳಲ್ಲಿ ಇದೆಯೆಂದು ಯಾರಾದರೂ ಅಂದುಕೊಂಡಿದ್ದರೆ ಅದು ಅವರ ದುರಾದೃಷ್ಟ.





ಸ್ವಾರಸ್ಯಕರವಾಗಿದೆ – ಪೂರ್ಣವಾಗಿ ಸತ್ಯವಾಗಿರಲಿ/ ಆಗದೆ ಇರಲಿ. ಹಿಂದೊಮ್ಮೆ ಈ ಕಥೆಯನ್ನು ಕೇಳಿದ್ದೆ (ಇವೇ ಶಬ್ದಗಳಲ್ಲಿ ಇರಲಿಕ್ಕಿಲ್ಲಾ ). ಪುನ್ಹ ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.