ಎಚ್ ಜಿ ಮಳಗಿ
ಸಂಜೆ ಮನೆಯ ವರಾಂಡಾದಲ್ಲಿ ಅಪರೂಪಕ್ಕೆಂಬಂತೆ ನನ್ನ ಪತ್ನಿಯೊಂದಿಗೆ ಮಾತನಾಡುತ್ತ ಕೂತಿದ್ದೆ. ಇಂದಿನ ಪೇಪರಿನಲ್ಲಿ ಸ್ವಯಂಘೋಷಿತ ಜ್ಯೋತಿಷಿ ಹಾಗೂ ವಾಸ್ತು ಪಂಡಿತನೊಬ್ಬ ತನ್ನ ಶಿಷ್ಯೆಯ ಬೆಡ್ರೂಂನಲ್ಲಿ ಮಂಚದ ದಿಕ್ಕನ್ನು ಬದಲಿಸುವ ಸಲಹೆ ನೀಡುವ ನೆಪದಲ್ಲಿ ಅವಳನ್ನು ಮಂಚಕ್ಕೆಳೆದು, ಅವಳ ಪತಿಯ ಕೈಗೆ ‘ಬೆಡ್ಹ್ಯಾಂಡ್’ ಆಗಿ ಸಿಕ್ಕು ಬಿದ್ದು ಅಕ್ಕಪಕ್ಕದವರಿಂದ ಧರ್ಮದೇಟು ತಿಂದು ಠಾಣೆ ಸೇರಿದ ಸುದ್ದಿಯನ್ನು ನಾನು ಹೇಳುತ್ತಿದ್ದರೆ ನನ್ನ ಮಡದಿ, ‘ಅಕೀಗಾರ ಚೂರು ಬುದ್ಧಿಬ್ಯಾಡ! ಮಂಚಾ ಎತ್ಲಾಗಿದದ್ರೇನಂತ?’ ಅಂತ ಕಮೆಂಟ್ ಪಾಸ್ ಮಾಡಿದಳು.
ಆಗ ಕಂಪೌಂಡಿನ ಗೇಟ್ ‘ಕಿರ್ರೆಂದು’ ಸದ್ದು ಮಾಡಿತು. ‘ಈಗ ಯ್ಯಾರ್ ಬಂದ್ರು?’ ಅಂತ ತನ್ನ ಅಸಹನೆಯನ್ನು ಹೊರಹಾಕಿ ಎದ್ದು ನೋಡಿದ ನನ್ನ ಪತ್ನಿ, ‘ಮತ್ತಿನ್ಯಾರ್ ನಿಮ್ಮ ಖಾಸಾ ಸಿಸ್ಯಾ!’ ಅಂತ ಕೊಂಕಿಸಿ ಬಿರಬಿರನೇ ಒಳಗೆ ನಡೆದಳು. ನನ್ನ ಖಾಸಾ ಶಿಷ್ಯ ಯಾರು ಅಂತ ನಾನು ನೋಡುತ್ತಿದ್ದಂತೆಯೆ ಕಾಣಿಸಿಕೊಂಡ ವ್ಯಕ್ತಿಯನ್ನು ನೋಡಿದೆ.
ಅರೆ ನಮ್ಮ ಅಡ್ಡಮನಿ ಹುಚ್ರಾಯಾ!
ಅದೇ ಓಲ್ಡ್ ಗೆಟಪ್. ಕಿಲುಬಿನಿಂದ ಬಣ್ಣಗೆಟ್ಟ ತಾಮ್ರದ ಚೊಂಬಿನಂತಹ ಕೋಲುಮುಖದಲ್ಲಿ ಕಪ್ಪುಬಿಳಿ ಮಿಶ್ರಿತ ಗಡ್ಡಮೀಸೆಗಳು, ಕೆದರಿದ ಕೂದಲು, ಮಾಸಿ ಖಾಕಿ ಬಣ್ಣಕ್ಕೆ ತಿರುಗಿ ಸುಕ್ಕುಸಿಕ್ಕಾಗಿರುವ ಬಿಳಿ ಜುಬ್ಬ ಪಂಚೆ, ಹೆಗಲಮೇಲೊಂದು ಹಸಿರು ಟಾವೆಲ್ ಕಂಕುಳಲ್ಲಿ ತುಂಬು ಗಭರ್ಿಣಿ ಹೊಟ್ಟೆಯಂತೆ ಊದಿಕೊಂಡ ಮಾಸಲು ಲೆದರ್ ಬ್ಯಾಗ್. ಯಥಾಪ್ರಕಾರ ಎಲೆಯಡಿಕೆ ತಂಬಾಕಿನಿಂದ ಹಳದಿ ಕೆಂಪು ಮಿಶ್ರಿತ ಕಪ್ಪು ಬತ್ತೀಸಿಯನ್ನು ಬಿಟ್ಟು, ‘ಎಂಗ್ ಅದೀರಿ ಸಾ! ಅಕ್ಕೌರು ಯಾಕೋ ಒಳೀಕೆ ಓದ್ರು? ಓ ಓ ಈ ಉಚ್ರಯಾ ಬಂದ್ನಂತ ಟೀ ಕಾಪೀ ತರೊಕೋದ್ರೇನೋ?’ ಅಂತ ತನ್ನ ದೊಡ್ಡಸ್ತಿಕೆಗೆ ತಾನೇ ಆತಿಥ್ಯವನ್ನೂ ಮಾಡಿಕೊಂಡು ‘ಕಾಫೀ’ಗೆ ಇಂಡೆಂಟ್ ರವಾನಿಸಿದ. ನಾನೂ ಅವನನ್ನು ನೋಡಿ ಬಹಳ ದಿನಗಳಾಗಿತ್ತು. ಮೊದಲು ಮಂಗನಂತೆ ಅನೇಕ ಪಕ್ಷಗಳನ್ನು ಜಿಗಿದು ಮತ್ತೂ ಕೆಲವು ಪಕ್ಷಗಳಿಂದ ಅರ್ಧಚಂದ್ರ ಪ್ರಯೋಗಕ್ಕೊಳಗಾಗಿ, ಕಡೆಗೆ ಮಾನಮುಚ್ಚಿಕೊಳ್ಳಲು ‘ಹುಮಂದ’ (ಹುಂಬ ಮಂದಿಯ ದಬರ್ಾರ್) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ನಗರದ ಎಲ್ಲಾ ವಾರ್ಡಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಿ ಕಡೆಗೆ ಮಾತೃಪಕ್ಷದೊಂದಿಗೆ ಕಾಲುಕೆರೆದು ಜಗಳ ತೆಗೆದು ಕಾಲುಪಕ್ಷ ಸೇರಿದ್ದ. ಮಹಾನರಕಸಭೆ ಇಲೆಕ್ಷೆನ್ನಲ್ಲಿ ಇವನ ಬಲಗಾಲಿನ ಪಕ್ಷ (ಪಕ್ಷದ ಚಿಹ್ನೆ ಆನೇಕಾಲು ರೋಗ ಹತ್ತಿದಂತಿರುವ ಬಲಗಾಲು) ಗೆದ್ದು ಮೈಕಮಾಂಡ್ ಇವನನ್ನೇ ‘ಅನಿವಾರ್ಯ’ವಾಗಿ ‘ಮೇಯರ್’ ಮಾಡಿದ್ರು. ಇವನು ಈಗ ಚೆನ್ನಾಗಿ ‘ಮೇಯುತ್ತಲೇ’ ಇದ್ದಾನೆ. ಆಗ ತನ್ನ ಗೂಟದ ಕಾರಿನಲ್ಲಿ ಸೈರೆನ್ ಮೊಳಗಿಸುತ್ತಾ ಮನೆಗೆ ಬಂದು ‘ಅಸಿವರ್ಾದಾ ಮಾಡಿ ಸಾ!’ ಅಂತ ಕಾಲಿಗೆ ಬಿದ್ದು, ‘ಅಂಗೆ ನಿಂ ಕೆಲ್ಸಾ ಎನಾರಾ ಇದ್ರೆ ಏಳಿ ಸಾ ಮಾಡ್ಕೊಡೋವಾ!’ ಅಂತ ಸಿಎಂ ಸ್ಟೈಲ್ನಲ್ಲಿ ಡೈಲಾಗ್ ಹೊಡ್ದು ಹೋಗಿದ್ದ. ಅದಾದ ಮೇಲೆ ಇಂದೇ ನೋಡಿದ್ದು. ಮನೆಗೇ ಬಂದಿರ್ಬೇಕಾದ್ರೆ ಏನೋ ಭಾರೀ ಸುದ್ದಿನೇ ಇರಬೇಕು ಅಂತ ಅನ್ನಿಸಿ, ‘ಯಾಕೋ ಹುಚ್ಚಾ ಒಬ್ನ ಬಂದಿ? ಎಲ್ಲಿ ನಿನ್ನ ಕಾರು, ನಿನ್ನ ಸ್ಟಾಫ್?’ ಅಂತ ಸಹಜವಾಗಿ ಕೇಳಿದೆ.
‘ಕಾರ್ನ ನಿಪೇರಿಗಂತ ಗ್ಯಾರೇಜಿಗೆ ಅಚ್ಚಿದೀನಿ, ಟಾಪ್ ಎಲ್ಲಾ ಮನೇಗೋಗೌರೆ’ ಅಂತ ಮುಖ ಹುಳ್ಳಗೇ ಮಾಡಿಕೊಂಡು ಹೇಳಿದ.
‘ಹಂಗೇನು? ಬಾ ಬಾ! ಕೂತ್ಕೋ… ಏ ಏನ ಹುಚ್ರಾಯಾ ಬಂದಾನ. ಕುಡೀಲಿಕ್ಕ ಒಂದ್ ತಂಬ್ಗೀ ನೀರು ತಾ’ ಅಂತ ಆರ್ಡರ್ ಮಾಡಿ ಅವನ ಮುಖ ನೋಡಿದೆ.
‘ಸಾ ಯಾಕೋ ಬಾಯಿ ಒಣಗೋಗೈತಿ. ಅಕ್ಕಾವರು ಕಾಪಿ ಬಾಳ್ ಚೆಲೋ ಮಾಡ್ತಾರೆ. ಅಂಗೇ ಒಂದ್ಲೋಟಾ ಕಾಪೀ ತರಾಕೇಳಿ ಸಾ!’ ಅಂತ ನನ್ನವಳಿಗೆ ಕೇಳುವಂತೆ ನಿಭರ್ಿಡೆಯಿಂದ ಹೇಳಿ ಚೇರ್ ಮೇಲೆ ಕೂತ. ಅವನ ಮಾತು ನನ್ನವಳಿಗೆ ಕೇಳಿತೋ ಏನೋ. ‘ಹಾಳಾದ್ ಬಾವುಗ ಬೆಕ್ಕು, ಹಾಲೆಲ್ಲಾ ಬಕ್ಕರಿಸಿ ಹೋಗ್ಯದ!’ ಅಂತ ಸಿಡಿಸಿಡಿ ಮಾಡಿದಳು. ನಮ್ಮ ಹುಚ್ರಾಯನೋ ಬಲು ಭಂಡ. ‘ಆಲೇನ್ ಬ್ಯಾಡಾ ಅಕ್ಕೌರೆ! ಬ್ಯಾಕ್ ಕಾಪೀನೇ ತರ್ರಿ!’ ಅಂತ ಹೇಳಿ ನಮ್ಮ ಮುಖ ನೋಡಿ ‘ಕೆ ಕೆ’ ಅಂತ ಕೆನೆದ!
‘ಅಲ್ಲೋ ಹುಚ್ಚಾ ಮನ್ನೆ ಪಾಲಿಕೆ ಸಭೆಯೊಳಗ ನಿಂ ಪಾಲ್ಟೀ ಕಾಪರ್ೋರೇಟರ್ ಶಿಕ್ಷಣ ಸಮಿತಿಗೆ ಅಪಾಯಿಂಟ್ ಮಾಡಿದ್ದೆಲ್ಲ, ಔರು ವಿದ್ಯಾವಂತರಲ್ಲ ಅಂತ ನಿನ್ನ ವಿರೋಧಿಗಳು ಗದ್ಲಾ ಎಬ್ಸಿದ್ರಂತಲ್ಲಾ? ಮನ್ನೆ ನೋಡಿದ್ದಿಲ್ಲೋ ನಮ್ಮ ಕೇಂದ್ರದಲ್ಲೂ ಮಂತ್ರಿಯೊಬ್ಬರ ಬಗ್ಗೆ ಹಿಂತಾ ಕಮೆಂಟ್ ಬಂದಿದ್ದು ನಿಂಗೂ ಗೊತ್ತಿರಬೇಕಲ್ಲ’ ಅಂತ ಅವನನ್ನು ಚಚರ್ೆಗೆ ಎಳೆದೆ. ಅದಕ್ಕವನು ‘ಕೆ ಕೆ’ ಕುದುರೆಯಂತೆ ಕೆನೆದು,
‘ಏಯ್ ಬಿಡಿ ಸಾ! ಇದ್ಯಾವಂತರು ಮಾತ್ರ ಮಂತ್ರಿಗಳಾಗೋ ಅಂಗಿದ್ರೆ, ನೀವ್ಯಾಕ್ ಸಾ ಮಂತ್ರಿಗಳಾಗ್ನಿಲ್ಲಾ?’ ಅಂತ ನನ್ನನ್ನೇ ಕೆಣಕಿ,
‘ಬುದ್ದವಂತ್ಕೇಗೂ ಯ್ಯಾಲೂ ಐತೆಂತ್ಲೇ ಸಾ ನಾ ಈಗ್ ಮೇಯರ್ ಆಗಿರೋದು! ಇಲ್ದಿದ್ರೆ ನಾನೂ ನಿಮ್ಮಂಗೆ ಏಸ್ಟ್ಬಾಡಿ ಗುಮಾಸ್ತನೋ ಮೇಸ್ಟ್ರೋ ಆಗಿ ಆಯಾಗ್ ನಿಟೈರ್ ಆಗ್ತಿರ್ನಿಲ್ಲವರಾ?’
‘ಅದೆಲ್ಲಾ ಖರೆನಪಾ ಆದ್ರ ನೀ ಏನೋ ಮೇಯರ್ ಆಗ್ತಿದ್ದಾಂಘ ನಿನ್ನ ಚೆಂಬರ್ ಗ್ವಾಡೀ ಒಡ್ಸಿ, ಮೂರ್ ಮೂಲಿ ಟೇಬಲ್ನ ಹಾಕಿಸ್ಗೊಂಡೀಯಂತ? ಓಟ್ ಹಾಕ್ಲಿಕ್ಕ ಬೂತ್ನೊಳಗ ಹೋಗೂ ಮುಂದ ಕಿವ್ಯಾಗ ಕೆಂಪ್ ದಾಸವಾಳಾ, ಹಣೀಮ್ಯಾಲ ಮೂರು ಉದ್ದ ಎರಡ ಅಡ್ಡ ನಾಮಾ ಹಾಕ್ಕೊಂಡ್ ಎಡಗೈಯ್ಯಾಗ ಒಂದ್ ಹಸರ ಬಳೀ ಹಾಕ್ಕೊಂಡ್ ಹೋಗಿದ್ಯಂತ?’
ಅವನು ಮುಖ ಹಳ್ಳಗೇ ಮಾಡಿಕೊಂಡು, ‘ಅವೆಲ್ಲಾ ನನ್ನ ಲಕ್ಕೀ ಸಿಂಬಲ್ಲು ಸಾ! ಲಾಗಾಯ್ತನಿಂದ ನಾ ಇಂಗೇ ಓಟ್ ಮಾಡಿ ಆರಸಿ ಬತ್ತಿದಿನಿ ಸಾ!’ ಅಂತ ಅಂದ. ನನಗೂ ರೇಗಿ ಹೋಯಿತು,
‘ಮತ್ತ ಮ್ಯಾಲ ನೋಡಿದ್ರ ಕಡೇಪಕ್ಷ ಸಿಟಿ ಲಿಮಿಟ್ನ್ಯಾಗ ಮೂಢನಂಬ್ಕೆ ಬಿಲ್ಲ ತರೋನಿದ್ದೀಯಂತ? ಯಾಕ್ ನಾವ್ಯಾರೂ ಪೂಜಾ ಪುನಸ್ಕಾರ ಮಾಡಬಾರ್ದೋಹ್ಯಾಂಗ?’ ಅವನನ್ನು ಕೆಣಕಿದೆ. ನನ್ನ ಮಾತಿಗೆ ಅವನು ಮಂಕಾದ. ನನಗೆ ಗಾಬರಿ ಹಾಗೂ ಅಚ್ಚರಿ
‘ಎಲ್ಲಾ ಮೇಯರ್ಗಿರಿ ಎಕ್ಕುಟ್ಟೋಯ್ತು ಸಾ!’ ಅಂತ ವಿಷಣ್ಣವದನನಾಗಿ ಹೇಳಿದ. ನನಗೆ ಗಾಬರಿ.

‘ಯಾಕೋ ಮಾರಾಯಾ? ಮತ್ತೇನಾದ್ರೂ ಭಾನಗಡಿ ಗೀನಗಡಿ ಮಾಡ್ಕೊಂಡ್ಯೋ ಹ್ಯಾಂಗ?’
‘ಅಂಗಲ್ಲಾ ಸಾ! ಈ ಬಿಲ್ಲ ತರೂ ಇಸ್ಯಾದಾಗೆ ನಂಗೂ ಐ ಕಮಾಂಡಗೂ ಪೈಟ್ ಆಗಿ, ನಿನ್ನೆ ತಾನೆ ನನ್ನ ಮೇಯರ್ಗಿರಿಯಿಂದ ಎತ್ತಾಕಿದ್ರು ಸಾ!’ ಅಂತ ಬಾಂಬ್ ಸಿಡಿಸಿದ!
ನಾನೂ ‘ಹೋಗ್ಲಿ ಬಿಡು ಹುಚ್ರಾಯಾ! ಇತ್ತಿತ್ಲಾಗ ಪಾಲಿಟಿಕ್ಸ್ ಕೆಟ್ಟ ಕೆರಾ ಹಿಡ್ದದ. ನೀ ಏನೂ ಭಾನಗಡಿ ಇಲ್ದ ಪಾರಾದ್ಯಲ್ಲ ಅಷ್ಟ ಸಾಕು’ ಅಂತ ಸಮಾಧಾನ ಮಾಡಿದೆ.
ಈಗ ಇದ್ದಕ್ಕಿದ್ದಂತೆ ಹುಚ್ರಾಯ ಸಿಟ್ಟಿಗೆದ್ದ. ಮುಖ ಗಂಟುಹಾಕಿ ವೀರಾವೇಶದಿಂದ,
‘ಅಲ್ಲಾ ಸಾ ಈ ಮದ್ಮೆ ಕರ್ಚಗೂ ಟ್ಯಾಕ್ಸ್ ಆಗ್ತೀನಂತ ಒಂಟೌರಲ್ಲಾ ಸಾ ನಮ್ ಜನಾ, ಯಾಕ್ ಸಾ ನಾವೆಲ್ಲಾ ಸಾಮಾನು, ಗೋಲ್ಡೂ ಕರೂದಿ ಮಾಡೋವಾಗಲೇ ಟ್ಯಾಕ್ಸ್ ಕೊಟ್ತಾನೆ ತಂದೀರ್ತೀವಲ್ಲವರಾ ಸಾ? ಈಗ ಮತ್ತೆ ಮದ್ಮೆ ಕಚರ್ಿಗೆ ಟ್ಯಾಕ್ಸ್ ಆಕಾಗೆ ಒಂಟೋರಲ್ಲಾ, ಎಲ್ಡೆಲ್ಡ ಸಲಾ ಯಾಕ್ ಸಾ ಟ್ಯಾಕ್ಸ ಕಟ್ಟಾಕೆ ನಮ್ಗೇನ್ ಚೌಡಿ ಮೆಟ್ಗೊಂಡೈತ್ರಾ ಅತ್ವಾ ಉಚ್ನಾಯಿ ಕಚ್ಚೈತ್ರಾ. ಒಟ್ಟೆ ಉರ್ಯಾಕಿಲ್ಲವರಾ?’
‘ಅದು ಹಂಗಲ್ಲೋ ಹುಚ್ರಾಯಾ! ಈಗ್ ನೋಡು ಮನ್ನೆ ಮಿನಿಸ್ಟರಿಗೆ ಯಾರೋ ಲಗ್ನದ ಇನ್ವಿಟೇಶನ್ ಕಳಿಸಿದ್ರಂತ. ಅದರ ಕಾಸ್ಟ್ ಹತ್ಸಾವ್ರಾ ಅಂತಪಾ! ಹಿಂಗ ಅಂಧಾಧುಂದಿ ಖರ್ಚ ಮಾಡೋರು ಮಾಡ್ಲಿ. ಆದ್ರ ಅದಕ್ಕ ಟ್ಯಾಕ್ಸ ಕಟ್ಲಿ ಅಂತ ಔರ ಆಶ್ಯಾ ಏನಪಾ. ಅದ್ರಿಂದ ಬರೋ ರೊಕ್ಕದಾಗ ಬಡವರ ಮಕ್ಕಳ ಲಗ್ನಕ್ಕ ಸಹಾಯಾ ಮಾಡೂದು ಛೊಲೋ ಅಲ್ಲೇನ್ ಮತ್ತ?’ ನನ್ನ ಈ ವಾದಕ್ಕ ಅವನು ಏನಾದರೂ ಚಕಿತವಾದ ಉತ್ತರ ಕೊಡುವನು ಎನ್ನುವ ನಿರೀಕ್ಷೆಯಿಂದಲೇ ಹೇಳಿದೆ.
‘ಅಂಗಾರೆ ಈಗ ನನ್ನ ಮಗನ ಮದ್ಮೆ ಊಡ್ಕೊಂಡೀನಿ. ನಾನೂ ಅಂಗೆ ಬಾಳಾ ಜನಕ್ಕೇನೂ ಇನೈಟ್ ಮಾಡೋದಿಲ್ಲ. ಆದ್ರೆ ಮೇಸ್ಟ್ರೆ, ನಿಮ್ಗೂ ಗೊತ್ತೈತೆ, ನಾ ಎಂತಾ ಪೇಮಸ್ ಐದೀನಂತ. ನನ್ನ ಅಬಿಮಾನಿಗಳು ಸುತ್ತಾ ಅತ್ತಳ್ಳೀಲಿ ಅದಾರೆ. ನಾ ಔರನ್ನ ಇನೈಟ್ ಮಾಡ್ದಿದ್ರೂ ನ್ನ ಮ್ಯಾಗಿನ ಅಬಿಮಾನದಿಂದ ಅವರೆಲ್ಲಾ ಮದ್ಮೆಗೆ ಬರೌರೇ ಸೈ!’ ರೋಷಾವೇಶದಿಂದ ಧಿಗ್ಗನೇ ಚೇರ್ ಮೇಲಿಂದ ಎದ್ದು ನಿಂತು ಸೆಟೆದು ಎದೆ ಉಬ್ಬಿಸಿ ಗಜರ್ಿಸಿ ಮತ್ತೆ ಧೊಪ್ಪೆಂದು ಚೇರಿನಲ್ಲಿ ಕೂತು ಬಣ್ಣಗೆಟ್ಟ ಹಸಿರು ಟವೆಲಿನಿಂದ ಮುಖದಲ್ಲಿ ಸುರಿಯುತ್ತಿದ್ದ ಬೆವರು ಒರೆಸಿಕೊಂಡು ‘ಉಸ್ಸಪ್ಪಾ’ ಅಂದ.
‘ಎಷ್ಟ್ ಜನಾ ಬತರ್ಾರೋ ಹುಚ್ಚಾ?’ ತಮಾಷೆಗೆಂಬಂತೆ ಕೇಳಿದೆ.
‘ಅಂದಾಜು ಅತ್ಸಾವ್ರಾ ಸಾ!’ ಬಿಂದಾಸ್ ಆಗಿ ಹೇಳಿದ.
‘ಹತ್ಸಾವಿರ?!’ ನಾನು ಚಕಿತನಾಗಿ ಕೇಳಿದೆ.
‘ಮದ್ಮೆ ಕಚರ್ಿಗೆ ಕಂಟ್ರೋಲ್ ಮಾಡೋ ಏಚನೆ ಮಾಡೌರು ಆವಾಗ್ ಏನ್ಮಾಡ್ತಾರೆ ಸಾ?’
‘ಅಂದ್ರ?’
‘ಇಂಗಿಂಗೆ, ಮದ್ನೆ ಕಚರ್ಿಗೆ ಕಂಟ್ರೋಲ್ ಆಕೈತೆ, ಊಟಾ ಇಲ್ಲ ಅಂತ ಮದ್ಮೆಗೆ ಬಂದೌರನ್ನ ಊಟಾ ಆಕಸ್ದೆ ಅಂಗೆ ಕಳ್ಸಾಕಾತೈತ್ರಾ ಸಾ?’
‘ಹೌದೌದು. ಯಾವ್ದ ಲಗ್ನದಾಗ ಛೊಲೋ ಊಟಾನ ಮುಖ್ಯ!’
‘ಅಂಗೇಳಿ ಗುರುವೇ!’
‘ಅಂದ್ರ ಏನ್ಮಾಡ್ಬೇಕಂತೀ?’ ಅವನು ಸಿಡಿಸಲಿರುವ ಬಾಂಬ್ನ್ನು ಕಾತರದಿಂದ ಕಿವಿ ತೆರೆದು ಕೇಳಿದೆ.
‘ಕರ್ಚ ಕಂಟ್ರೋಲ್ ಮಾಡಾಕ್ ಒಲ್ಟಿರೋರು ಔರ್ತಾನೆ ಸಾ!?’
‘ಹೌದೂ!’
‘ಅಂಗಾರೆ ಬರೋ ಎಲ್ಲಾ ಜನಕ್ಕೂ ಔರೇ ಊಟಾ ಆಕಸ್ಲಿ ಬಿಡಿ ಸಾ!!’
ಅವನ ಮಾತು ಕೇಳಿದ ನಾನು ಯಥಾಪ್ರಕಾರ ಅವಾಕ್ಕಾದೆ!






ನಕ್ಕು ನಕ್ಕು ಬಿದ್ದೆ… ಬಿದ್ದು ಬಿದ್ದು ನಕ್ಕೆ… ಎಪ್ಪಾ, ಹುಚ್ಚರಾಯಪ್ಪಾ… !