ಹೀಗ್ಯಾಕೆ ಕಾರ್ನಾಡ್?

gopala-vajapeyi2

ಗೋಪಾಲ ವಾಜಪೇಯಿ

ಮೊನ್ನೆ ಫೆಬ್ರವರಿ 24 (2013), ಆದಿತ್ಯವಾರ, ‘ಅವಧಿ‘ಯ ನನ್ನ ಅಂಕಣದಲ್ಲಿ ಪ್ರಕಟವಾದ ”...’ನಾಗಮಂಡಲ’ದ ಹಾಡು-ಪಾಡು!” ಲೇಖನಕ್ಕೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಆ ಪೈಕಿ ಸುನಿಲ್ ರಾವ್ ಪ್ರತಿಕ್ರಿಯೆಯ ಜೊತೆಗೆ, ಒಂದು ಪ್ರಶ್ನೆಯನ್ನೂ ಹಾಕಿದ್ದಾರೆ. ಮತ್ತು, ‘ದಯಮಾಡಿ ಇದಕ್ಕೊಂದು ಕ್ಲಾರಿಫಿಕೇಶನ್ ಕೊಡಿ,’ ಎಂದೂ ಕೇಳಿದ್ದಾರೆ.

ಸುನಿಲ್ ರಾವ್ ಅವರಲ್ಲಿ ಈ ಪ್ರಶ್ನೆ ಹುಟ್ಟಲು ಕಾರಣವಾದದ್ದು ಪ್ರಸ್ತುತ ಲೇಖನದಲ್ಲಿ ನಾನು ಉಲ್ಲೇಖಿಸಿರುವ ‘ಮಾಯಾದೋ ಮನದ ಭಾರ, ತಗಧಾಂಗ ಎಲ್ಲ ದ್ವಾರ…’ ಎಂಬ ಹಾಡು. ‘ಅವಧಿ’ಯಲ್ಲಿ ಈ ಪ್ರಶ್ನೆಯನ್ನು ಹಾಕುವುದರ ಜೊತೆ ಜೊತೆಗೇ ಸುನಿಲ್ ರಾವ್ ನನಗೆ ಫೋನ್ ಮೂಲಕವೂ ಈ ಪ್ರಶ್ನೆಯನ್ನು ಕೇಳಿ ಉತ್ತರ ಬಯಸಿದ್ದಾರೆ.

ಸುನಿಲ್ ಅವರ ಪ್ರಶ್ನೆ ಹೀಗಿದೆ : ”ಈ ಪ್ರಶ್ನೆ ಯಾಕೆ೦ದರೆ, ನಾನು ವ್ಯಾಸ೦ಗ ಮಾಡುತ್ತಿರುವ ಬಿ.ಎ ಪತ್ರಿಕೋದ್ಯಮ(ಅಟಾನಮಸ್)ಗೆ ‘ನಾಗಮಂಡಲ’ ನಾಟಕ ಪಠ್ಯದಲ್ಲಿದ್ದು, ಮೇಲಿನ ಈ ಪದ್ಯ ಅದರಲ್ಲಿ ಉ೦ಟು…ಈ ಹಾಡು ನಿಮ್ಮಿ೦ದ ರಚಿತವಾಗಿರುವುದಾ??!! ಇದು ಗಿರೀಶ ಕಾರ್ನಾಡರ ಹಾಡಲ್ಲವೇ?!! ಈ ಪದ್ಯ ನಿಮ್ಮಿ೦ದ ರಚಿತವಾಗಿದ್ದು ಎ೦ದು ಪುಸ್ತಕದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲವಲ್ಲ…”

ಈ ಪ್ರಶ್ನೆ ನಿಜಕ್ಕೂ ನನಗೆ ಆಘಾತವನ್ನುಂಟು ಮಾಡಿದೆ. ಜೊತೆಗೇ, ‘ಹಿರಿಯರಾದ ಕಾರ್ನಾಡರು ಹೀಗೆ ಮಾಡಿದರಲ್ಲ…’ ಎಂಬ ಖೇದವನ್ನೂ, ‘ಕಾರ್ನಾಡರಂಥವರು ಹೀಗೆ ಮಾಡಬಹುದೇ?!’ ಎಂಬ ಅಚ್ಚರಿಯನ್ನೂ ಏಕಕಾಲಕ್ಕೇ ಉಂಟು ಮಾಡಿದೆ.

ಸುನಿಲ್ ರಾವ್ ಅವರ ಪ್ರಶ್ನೆಗೆ ನಾನು ಉತ್ತರಿಸಲೇಬೇಕು. ಆದರೆ, ಅದಕ್ಕಿಂತ ಮೊದಲು ಕಾರ್ನಾಡರ ‘ನಾಗಮಂಡಲ’ ನಾಟಕದ ಪಠ್ಯದಲ್ಲಿ ಈ ಹಾಡು ಹೇಗೆ ಬಂತು ಎಂಬುದರ ಹಿನ್ನೆಲೆಯನ್ನು ಕುರಿತು ಒಂದಷ್ಟು ವಿವರಣೆ ನೀಡಬೇಕು.

ಈಗಾಗಲೇ ಬಹುತೇಕ ಓದುಗರಿಗೆ ಗೊತ್ತಿರುವ ಹಾಗೆ, ‘ಸಂಕೇತ್ ನಾಟಕ ತಂಡ’ದವರು ನಿರ್ಮಿಸಿದ್ದ ‘ನಾಗಮಂಡಲ’ ನಾಟಕದ ಪ್ರಯೋಗಗಳಿಗಾಗಿ ನಾನು ಒಟ್ಟು ಹತ್ತು ಹಾಡುಗಳನ್ನು ಬರೆದುಕೊಟ್ಟೆ. ಸಿ. ಅಶ್ವಥ್ ಅಪರೂಪದ ರಾಗಸಂಯೋಜನೆ ಮಾಡಿ, ಅವನ್ನೆಲ್ಲ ಅಪರೂಪದ ರಂಗಗೀತೆಗಳನ್ನಾಗಿಸಿಟ್ಟರು. ಇಂದಿಗೂ ಬೆಂಗಳೂರು ಮುಂತಾದೆಡೆ ರಂಗಗೀತೆಗಳ ಕಾರ್ಯಕ್ರಮ ಇದ್ದಲ್ಲೆಲ್ಲ ಈ ಹಾಡುಗಳನ್ನು ಪ್ರೀತಿಯಿಂದ ಹಾಡುವವರಿದ್ದಾರೆ.

ಹೌದು. ಸಂಕೇತ್ ತಂಡ ‘ನಾಗಮಂಡಲ’ವನ್ನು ಪ್ರಯೋಗಿಸಲು ಕೈಗೆತ್ತಿಕೊಂಡಾಗ ಈ ನಾಟಕ ಇನ್ನೂ ಹಸ್ತಪ್ರತಿಯ ರೂಪದಲ್ಲೇ ಇತ್ತು. ಇದಾದ ಮೇಲೆ, ಧಾರವಾಡದ ‘ಮನೋಹರ ಗ್ರಂಥ ಮಾಲಾ’ ಈ ನಾಟಕವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿತು. ‘ನಾಗಮಂಡಲ’ದ ಮೊದಲ ಆವೃತ್ತಿ ಪ್ರಕಟಗೊಂಡದ್ದು 1989ರಲ್ಲಿ. ಮೊದಲ ಆವೃತ್ತಿಯ ಆರಂಭಿಕ ಪುಟಗಳಲ್ಲಿ ಒಂದು ಕಡೆ ಸಂಕೇತ್ ನಾಟಕ ತಂಡದ ಪ್ರಥಮ ಪ್ರಯೋಗದಲ್ಲಿ ದುಡಿದ ನಟವರ್ಗ ಮತ್ತು ತಾಂತ್ರಿಕ ವರ್ಗದ ಪೂರ್ಣ ಪಟ್ಟಿಯನ್ನು ಕೊಡಲಾಗಿತ್ತು. ಆ ಪಟ್ಟಿಯಲ್ಲಿ ‘ಹೊಸ ಗೀತೆಗಳು’ ಎಂತಲೋ ಏನೋ ನನ್ನ ಹೆಸರೂ ನಮೂದಾಗಿತ್ತು. ನಂತರದ ಆವೃತ್ತಿಗಳಲ್ಲಿ ಕೇವಲ ನಟವರ್ಗದ ಹೆಸರುಗಳಷ್ಟೇ ಮುಂದುವರಿದವು. ಈ ವರೆಗೆ, ಅಂದರೆ 2012ರ ವರೆಗೆ ‘ನಾಗಮಂಡಲ’ ನಾಟಕದ ಒಟ್ಟು ಏಳು ಆವೃತ್ತಿಗಳು ಪ್ರಕಟವಾಗಿವೆ.

-೦-೦-೦-೦-೦-

2000ನೆಯ ಇಸವಿಯ ಹೊತ್ತಿಗಾಗಲೇ ನಾನು ಈಟೀವಿ ಕನ್ನಡ ವಾಹಿನಿಯನ್ನು ಸೇರಿ ಹೈದರಾಬಾದಿಗೆ ಸ್ಥಳಾಂತರಗೊಂಡಿದ್ದೆ. ಈಟೀವಿಯ ಕಚೇರಿಯಿದ್ದದ್ದು ಅಲ್ಲಿಯ ರಾಮೋಜಿ ಫಿಲಂ ಸಿಟಿಯಲ್ಲಿ. 2004ರ ಜನೆವರಿ ತಿಂಗಳಿನ ಮೂರನೆಯ ವಾರದ ಒಂದು ಮಧ್ಯಾಹ್ನ ಗೆಳೆಯ ಎಸ್. ಸುರೇಂದ್ರನಾಥ್ (ಆಗ ಆತ ಈಟೀವಿ ವಾಹಿನಿಯ ಹಿರಿಯ ನಿರ್ಮಾಪಕ) ಮೊಬೈಲಿನಲ್ಲಿ ಮಾತಾಡುತ್ತ ತನ್ನ ಚೇಂಬರಿನಿಂದ ನನ್ನ ಮೇಜಿನ ತನಕ ಬಂದರು. ”ಹಿಡಿ, ಕಾರ್ನಾಡರು… ಏನೋ ಮಾತಾಡಬೇಕಂತೆ…” ಅಂತ ಮೊಬೈಲನ್ನು ನನ್ನ ಕೈಗಿತ್ತರು. (ಆಗ ನಾನಿನ್ನೂ ಮೊಬೈಲ್ ಖರೀದಿಸಿರಲಿಲ್ಲ.)

ನಾನು ”ಹಲೋ, ನಮಸ್ಕಾರ,” ಅಂದೆ. ಕಾರ್ನಾಡರು ತುಂಬಾ ಪ್ರೀತಿಯಿಂದ ನನ್ನ ಕ್ಷೇಮಸಮಾಚಾರವನ್ನು ಕೇಳಿದರು. ನಂತರ, ‘ನಾಗಮಂಡಲ’ ನಾಟಕ ಪ್ರಯೋಗಕ್ಕಾಗಿ ನಾನು ಬರೆದಿದ್ದ ಹಾಡುಗಳನ್ನು ಒಂದಷ್ಟು ಪ್ರಶಂಸಿದರು. ಆ ಪೈಕಿ ‘ಮಾಯಾದೋ ಮನದ ಭಾರ…’ ಹಾಡನ್ನು ‘ನಾಗಮಂಡಲ’ದ ಮುಂದಿನ ಆವೃತ್ತಿಯಲ್ಲಿ ಬಳಸಿಕೊಳ್ಳಲು ಬಯಸಿರುವುದಾಗಿ ಹೇಳಿ, ನನ್ನ ಅನುಮತಿ ಬೇಕು ಅಂದರು. ಆಯಿತು ಅಂದೆ. ”ಆದ್ರ, ನನ್ಹತ್ರ ಆ ಹಾಡಿನ ಪ್ರತಿ ಇಲ್ಲ. ಬರದು ಕಳಸ್ರಿ,” ಅಂದರು. ಅದಕ್ಕೂ ಆಯಿತು ಅಂದೆ. ”ಎಷ್ಟು ಚೊಲೊ ಹಾಡು…! ಇದನ್ನ ಬಳಸಿಕೋಬೇಕು ಅನ್ನೋದು ಇಷ್ಟು ದಿನಾ ಯಾಕ ನನ್ನ ತಲೀ ಒಳಗ ಬರಲಿಲ್ಲೋ ಏನೋ…” ಎಂದೆಲ್ಲ ಹೇಳಿ ಹಾಡಿನ ಪ್ರತಿಯನ್ನೂ, ಅನುಮತಿಯನ್ನೂ ಬೇಗ ಕಳಿಸುವಂತೆ ಮತ್ತೊಮ್ಮೆ ಕೇಳಿ ಫೋನ್ ಇಟ್ಟರು.

ಅದಕ್ಕೂ ಮೊದಲೇ, ಅಂದರೆ 1992ರಷ್ಟು ಹಿಂದೆಯೇ, ಬೆಂಗಳೂರಿನ ಆಕಾಶ್ ಆಡಿಯೋದವರು ಈ ಹಾಡುಗಳ ಒಂದು ಧ್ವನಿಸುರುಳಿಯನ್ನು ತಂದ ವಿಚಾರ, ಮತ್ತು 1996-97ರಲ್ಲಿ ನಾಗಾಭರಣ ನಿರ್ದೇಶನದಲ್ಲಿ ತಯಾರಾದ ‘ನಾಗಮಂಡಲ’ ಚಿತ್ರದಲ್ಲಿಯೂ ‘ಮಾಯಾದೋ ಮನದ ಭಾರ…’ ಹಾಡನ್ನು ಬಳಸಿಕೊಂಡದ್ದು ಗಿರೀಶರಿಗೆ ಗೊತ್ತಿತ್ತು.

ಅಷ್ಟೇ ಅಲ್ಲ, ಆ ಧ್ವನಿಸುರುಳಿಯಲ್ಲಿ ಆರಂಭಕ್ಕೆ ”ನಾನು ಗಿರೀಶ ಕಾರ್ನಾಡ. ನಾಗಮಂಡಲ ನಾನು ಬರೆದ ನಾಟಕ…” ಅಂತೆಲ್ಲ ಹೇಳುತ್ತಾ ಸಂಕೇತ್ ನಾಟಕ ತಂಡ, ಅದರ ಪ್ರಯೋಗಗಳು, ಶಂಕರ್ ನಾಗ್ ಮತ್ತು ತಮ್ಮ ಬಾಂಧವ್ಯ ಇತ್ಯಾದಿ ಕುರಿತು ಹೇಳಿದ್ದರು. ಆ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದ ಸಿ. ಅಶ್ವಥ್ ಅವರ ಹೆಸರನ್ನೂ ಹೇಳಿದ್ದ ಗಿರೀಶರಿಗೆ ಅದು ‘ನಾಗಮಂಡಲ’ ಪ್ರಯೋಗಕ್ಕಾಗಿ ಬರೆದ ಹಾಡುಗಳ ಧ್ವನಿಸುರುಳಿ ಎಂಬ ವಿಷಯವೇ ಮರೆತಂತಿತ್ತು. ಹಾಡುಗಳ ರಚನೆ ಯಾರದೆಂಬ ಬಗ್ಗೆ ತಮ್ಮ ಮಾತಿನಲ್ಲಿ ಪ್ರಸ್ತಾಪಿಸುವ ಗೋಜಿಗೇ ಹೋಗಿರಲಿಲ್ಲ ಆ ಮಹಾರಾಯರು…

ಅಂಥ ಗಿರೀಶ ಕಾರ್ನಾಡ… ಜ್ಞಾನಪೀಠ ಪ್ರಶಸ್ತಿ ಪಡೆದ ‘ಧೀಮಂತ’ ನಾಟಕಕಾರ ಗಿರೀಶ ಕಾರ್ನಾಡ… ನನ್ನ ಒಂದು ಹಾಡನ್ನು ತಮ್ಮ ನಾಟಕದ ಪಠ್ಯದಲ್ಲಿ ಅಳವಡಿಸಿಕೊಳ್ಳಲು ಬಯಸಿದ್ದು ನನಗೆ ತಕ್ಷಣಕ್ಕೆ ಅಚ್ಚರಿಯುಂಟು ಮಾಡಿತಾದರೂ, ಎಲ್ಲೋ ಒಂದು ಕಡೆ ಹೆಮ್ಮೆಯೂ ಅನಿಸಿತು. ಅದೇ ಸಂತೋಷದಲ್ಲಿ ಹಾಡನ್ನು ಟೈಪ್ ಮಾಡಿ, ಹೈದರಾಬಾದಿನ ನನ್ನ ಮನೆಯ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಿದೆ. ಜೊತೆಗೆ, ‘ಇದಕ್ಕಾಗಿ ನೀವು ನನಗೆ ನೀಡಬಹುದಾದ ಗೌರವಧನ ಎಷ್ಟು ದಯವಿಟ್ಟು ತಿಳಿಸಿರಿ?’ ಎಂಬ ಸಾಲನ್ನೂ ಸೇರಿಸಿ, ಹಾಡನ್ನು ಅವರಿಗೆ ಫ್ಯಾಕ್ಸ್ ಮಾಡಿದೆ.

ಆ ಸಂಜೆಯೇ ನನ್ನ ಮನೆಗೆ ಕಾರ್ನಾಡರು ಫೋನ್ ಮಾಡಿದರು.

”ನಿಮ್ಮ ಫ್ಯಾಕ್ಸ್ ಬಂತ್ರೀ… ಥ್ಯಾಂಕ್ಸ್. ಅಂದಂಗ, ಅದರಾಗ ನೀವು ಗೌರವಧನ ಅಂತ ಬರದೀರೆಲs… ಆ ವಿಚಾರ ಮಾತಾಡೋದಿತ್ತು,” ಅಂದವರೇ, ”ನೀವು ಎಷ್ಟು ಕೇಳ್ತೀರಿ?” ಅಂತ ಮತ್ತೊಂದು ಪ್ರಶ್ನೆ ಎಸೆದರು.

”ನಾನು ‘ಇಷ್ಟು’ ಅಂತ ಹೇಳೂದಿಲ್ಲಾ… ನೀವs ತಿಳದು ಏನ್ ಕೊಡತೀರೋ ಕೊಡ್ರಿ,” ಅಂದೆ.

”ಆತು, ನಾಳೆ ಮತ್ತ ಮಾತಾಡ್ತೀನಿ,” ಅಂತ ಫೋನ್ ಇಟ್ಟರು.

ಗಿರೀಶ ಕಾರ್ನಾಡ ಯಾವುದೇ ಒಂದು ಕೆಲಸಕ್ಕೆ ನಿಂತರೆ, ಅದು ಮುಗಿಯುವ ತನಕ ಬಿಡುವಂಥವರಲ್ಲ ಎಂಬುದು ನನ್ನ ಅನುಭವಕ್ಕೆ ಬಂದದ್ದು ಆಗಲೇ.

ಮರುದಿನ ಮತ್ತೆ ಅವರ ಫೋನು. ”ರಾಮ ಬಂದಿದ್ದ… ಮಾತಾಡಿದೆ. ನಿಮಗ ದೀಡ ಸಾವಿರ ಕೊಡಲಿಕ್ಕೆ ಅಡ್ಡಿ ಇಲ್ಲಾ ಅಂತ ಹೇಳಿದಾ…” ಅಂದರು. (ರಾಮ ಅಂದರೆ ಮನೋಹರ ಗ್ರಂಥಮಾಲೆಯ ರಮಾಕಾಂತ ಜೋಶಿ. ದೀಡ ಸಾವಿರ ಅಂದರೆ ಒಂದೂವರೆ ಸಾವಿರ.)

”ಹಂಗs ಆಗ್ಲಿ,” ಅಂದೆ ನಾನು.

”ಅಂದಂಗ, ಇನ್ನೂ ಒಂದು ವಿಚಾರ…”

”ಹೇಳ್ರಿ…”

”ಈ ಹಾಡನ ‘ನಾಗಮಂಡಲ’ದ ಮುಂದಿನ ಎಲ್ಲಾ ಆವೃತ್ತಿಗಳ ಒಳಗೂ ಬಳಸಿಕೊಳ್ಳಿಕ್ಕೆ ಅಂತ ಈಗ ಈ ದೀಡ ಸಾವಿರ ರುಪಾಯಿ ನಾನು ಒಂದs ಮೊತ್ತದಾಗ ಕಳಸೂದು…”

”ಆಗ್ಲಿ…” ಅಂದೆ ನಾನು. ಅವರು ಥ್ಯಾಂಕ್ಸ್ ಹೇಳಿ ಫೋನಿಟ್ಟರು.

ಮರುದಿನ ಮತ್ತೆ ಅವರ ಫೋನು. ”ಕೊರಿಯರ್ ಮಾಡಿ ಡಿಡಿ ಕಳಿಸೀನಿ… ಮುಟ್ಟಿದ ಕೂಡ್ಲೇ ತಿಳಸ್ರಿ…”

ಅಂದಿನಿಂದ ಮುಂದೆ ಆರು ದಿನಗಳ ಕಾಲ ಎರಡೆರಡು ಸಲದಂತೆ ಫೋನ್ ಮಾಡಿ, ‘ಮುಟ್ಟಿತೇನು?’ ಅಂತ ಕೇಳುತ್ತಲೇ ಇದ್ದರು ಕಾರ್ನಾಡರು. ಅವರ ಅವಸರ ನೋಡಿ ಬಹುಶಃ ‘ನಾಗಮಂಡಲ’ದ ಐದನೆಯ ಆವೃತ್ತಿ ಮುದ್ರಣಕ್ಕೆ ಹೋಗುತ್ತಿರಬೇಕು ಎಂದುಕೊಂಡೆ.

ಅಂತೂ ಬಂತು ಅವರ ಕೊರಿಯರ್ರು. ತಲಪಿದೆ ಅಂತ ಅವರಿಗೆ ತಿಳಿಸಿಯೂ ಆಯಿತು.

ಆಗ ಅವರು ಬರೆದಿದ್ದ ಪತ್ರದ ಭಾಗಗಳ ಪ್ರತಿಯನ್ನು ನಿಮ್ಮ ಅವಗಾಹನೆಗಾಗಿ ಇಲ್ಲಿ ಕೊಡುತ್ತಿದ್ದೇನೆ.

vajapeyi-karnad1

ಇದಾದ ಮೇಲೆ ಅವರು ಗೌರವಧನದ ಡಿ.ಡಿ.ಯ ಸಂಖ್ಯೆ ಇತ್ಯಾದಿ ಬರೆದು, ‘ನಾಟಕದ ಮುಂದಿನ ಎಲ್ಲ ಪುನರ್ಮುದ್ರಣಗಳಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಲು ಈ ಗೌರವಧನವನ್ನು ಒಂದೇ ಮೊತ್ತವಾಗಿ ಕಳಿಸುತ್ತಿದ್ದೇನೆ’ ಎಂಬುದನ್ನು ಒತ್ತಿ ಒತ್ತಿ ಹೇಳಿದ್ದರು.

vajapeyi-karnad2

-೦-೦-೦-೦-೦-

ಮುಂದೆ ಸರಿಸುಮಾರು ನಾಲ್ಕು ವರ್ಷಗಳ ತನಕ ಅಂದರೆ, 2008ರ ವರೆಗೆ, ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲೇ ಇಲ್ಲ. ಹಾಕಿಕೊಂಡರೆ ತಿಳಿಸುತ್ತಾರೆ ಬಿಡು ಎಂದು ಸುಮ್ಮನುಳಿದುಬಿಟ್ಟೆ. ಒಮ್ಮೆ ಕಾರ್ಯನಿಮಿತ್ತ ಧಾರವಾಡದಿಂದ ಹೈದರಾಬಾದಿಗೆ ಬರುತ್ತಿದ್ದ ನನ್ನ ಸಂಬಂಧಿಯೊಬ್ಬರು, ‘ಇಲ್ಲಿಂದ ಏನಾದರೂ ತರೋದದ ಏನು?’ ಅಂತ ಕೇಳಿದರು. ‘ಫೇಡೆ ಅಂತೂ ತಂದs ತರ್ತಿ… ಅದರ ಜೊತೀಗೆ ‘ನಾಗಮಂಡಲ’ ನಾಟಕದ ಇತ್ತೀಚಿನ ಆವೃತ್ತಿ ಖರೀದಿ ಮಾಡಿಕೊಂಡು ಬಾ…’ ಅಂತ ಹೇಳಿದೆ.

‘ನಾಗಮಂಡಲ’ದ ಪ್ರತಿ ಅವರು ತಂದ ಫೇಡೆಯಷ್ಟೇ ಆಪ್ಯಾಯವೆನಿಸಿತು. 2005ರ ಆವೃತ್ತಿ ಅದು. ಬದಲಾದ ಆಕಾರ, ಸುಂದರ ರಕ್ಷಾಕವಚಗಳ ಜೊತೆ ಒಳಗೆ ಮೊದಲ ಪುಟದಲ್ಲಿ ನಾಟಕದ ಶೀರ್ಷಿಕೆಯ ಕೆಳಗೆ ಬ್ರಾಕೆಟ್ಟಿನಲ್ಲಿ ‘ಹೊಸ ಸಂಸ್ಕರಣ’ ಎಂಬ ಒಕ್ಕಣೆ ಇತ್ತು. ಹಾಗೆಯೇ ಪುಟ ತಿರುವಿದೆ.

ಮುಂದೆ ಎಲ್ಲ ಅದೇ ಸರಕು. ಸಂಪಾದಕರ ಮಾತು, ಕೃತಜ್ಞತೆಗಳು ಇತ್ಯಾದಿ ಎಲ್ಲ ಮೊದಲ ಆವೃತ್ತಿಗೆ ಬರೆದದ್ದೇ… ಬಹುಶಃ ನನ್ನ ಹಾಡನ್ನು ಹಾಕಿಕೊಂಡಿರಲಿಕ್ಕಿಲ್ಲ ಅಂದುಕೊಂಡೇ ಓದತೊಡಗಿದೆ.

ಏಳನೆಯ ಪುಟ ಬಂದಾಗ ತಡೆದು ನಿಂತೆ. ಅಲ್ಲಿ ‘ಕತೆ’ಯ (ಅದು ಪಾತ್ರ) ಮಾತು ಆರಂಭವಾಗುವುದೇ ‘ಮಾಯಾದೋ ಮನದ ಭಾರ… ತಗಧಾಂಗ ಎಲ್ಲ ದ್ವಾರ…’ ಎಂಬ ಸಾಲುಗಳಿಂದ !… (ಅದಕ್ಕೂ ಮೊದಲಿನ ಆವೃತ್ತಿಯಲ್ಲಿ ಅದು ಹೀಗೆ ಆರಂಭವಾಗಿರಲಿಲ್ಲ.) ಕೂಡಲೇ ನಾನು ಪೂರ್ವಾರ್ಧದ ಕೊನೆಯ ಪುಟ ತೆರೆದೆ. ಅದು ರಾಣಿ ಮತ್ತು ನಾಗಪ್ಪ ಇಬ್ಬರ ಸಮಾಗಮದ ಸನ್ನಿವೇಶ. ನಾನು ಪ್ರಯೋಗಕ್ಕಾಗಿ ಹಾಡನ್ನು ಬರೆದದ್ದೂ ಅದೇ ಸನ್ನಿವೇಶಕ್ಕಾಗಿ…

ಕಾರ್ನಾಡರು ನನ್ನ ‘ಮಾಯಾದೋ ಮನದ ಭಾರ…’ ಹಾಡನ್ನು ಅಲ್ಲಿ ಅಳವಡಿಸಿಕೊಂಡಿದ್ದರು.

ಮತ್ತೆ ನಾನು ಮೊದಲ ಪುಟಗಳಿಗೆ ಬಂದೆ. ಆ ಹಾಡಿನ ರಚನಕಾರನೆಂದು ಅಲ್ಲೆಲ್ಲಾದರೂ ನನ್ನ ಹೆಸರನ್ನು ಹಾಕಿದ್ದರೆಯೇ ಅಂತ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಹುಡುಕಿದೆ. ಊಹೂಂ… ಕಾರ್ನಾಡರು ಕೊಟ್ಟ ಮಾತಿಗೆ ತಪ್ಪಿದ್ದರು. ನನ್ನ ಹೆಸರನ್ನು ಅವರು ಕೃತಜ್ಞತೆಗಳಲ್ಲಿ ನಮೂದಿಸಿರಲೇ ಇಲ್ಲ.

ಆ ಬಗ್ಗೆ ಕಾರ್ನಾಡರಿಗೆ ಬರೆಯಲೇ ಅಂತ ಅನೇಕ ಸಲ ಅಂದುಕೊಂಡೆ. ಆದರೆ, ಒಂದಿಲ್ಲೊಂದು ಕೆಲಸ ಅಡ್ಡ ಬಂದು ಬರೆಯಲು ಆಗಿರಲೇ ಇಲ್ಲ…

-೦-೦-೦-೦-೦-

2008ರಲ್ಲಿ ಒಮ್ಮೆ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆಂದು ಧಾರವಾಡಕ್ಕೆ ಹೋಗಬೇಕಾಯಿತು. ಅವತ್ತೇ ಬೆಳಿಗ್ಗೆ ಅಲ್ಲಿಯ ಕರ್ನಾಟಕ ಕಾಲೇಜಿನಲ್ಲಿ ಗಿರೀಶ ಕಾರ್ನಾಡರ ‘ಸಮಗ್ರ ನಾಟಕ ಸಂಪುಟ’ದ ಬಿಡುಗಡೆ ಕಾರ್ಯಕ್ರಮ. ಹೋದರೆ ಕಾರ್ನಾಡರೊಂದಿಗೆ ಮುಖತಃ ಮಾತಾಡಬಹುದು ಅಂದುಕೊಂಡೆನಾದರೂ, ಅವರೊಂದಿಗೆ ಆಗ ಮಾತು ಸಾಧ್ಯವಾಗಲಿಕ್ಕಿಲ್ಲ, ‘ಈ ಎಲ್ಲ’ ಮಾತು ಅಲ್ಲಿ ಆಡುವುದೂ ಸಾಧುವಲ್ಲ ಅಂತ ಸುಮ್ಮನುಳಿದುಬಿಟ್ಟೆ. ಅಂದು ಮಧ್ಯಾಹ್ನ ಕಳೆದ ಮೇಲೆ, ಅವರು ಸಿಕ್ಕೇ ಸಿಗಬಹುದೆಂಬ ಭರವಸೆ ಇಟ್ಟುಕೊಂಡು ಮನೋಹರ ಗ್ರಂಥ ಮಾಲೆಯ ‘ಅಟ್ಟ’ಕ್ಕೆ ಹೋದೆ. ಗಿರೀಶರು ಅವತ್ತು ಕಾರ್ಯಕ್ರಮ ಮುಗಿದ ಕೂಡಲೇ ಮುಂಬಯಿಗೆ ಪ್ರಯಾಣ ಬೆಳೆಸಿದ್ದರು. ನನಗಲ್ಲಿ ಸಿಕ್ಕವರು ರಮಾಕಾಂತ ಜೋಶಿ. ಅವರು ‘ಸಮಗ್ರ ನಾಟಕ ಸಂಪುಟ’ ಬಿಡುಗಡೆ ಸಂಭ್ರಮದ ಗುಂಗಿನಲ್ಲಿಯೇ ಇದ್ದರು.

ನಾನು ಸುಮ್ಮನೇ ಆ ‘ಸಂಪುಟ’ದ ಪುಟಗಳನ್ನು ತಿರುವುತ್ತ ಕೂತೆ.

‘ಸಮಗ್ರ’ ಸಂಪುಟ ಅಂದ ಮೇಲೆ ಅದರಲ್ಲಿ ‘ನಾಗಮಂಡಲ’ ಇರಲೇಬೇಕಲ್ಲ… ಅಲ್ಲಿ ನನ್ನ ಹಾಡು ಮತ್ತು ಹೆಸರು ಇರಲೇಬೇಕಲ್ಲ…

ಹೌದು. ಅದರ 439ನೆಯ ಪುಟದಲ್ಲಿ ನನ್ನ ಹಾಡೂ ಇತ್ತು. ಮತ್ತೆ ಆ ನಾಟಕದ ಆರಂಭಿಕ ಪುಟಗಳಿಗೆ ಬಂದೆ. ಈ ‘ಸಮಗ್ರ’ದಲ್ಲಿಯೂ ಅದೇ ಕತೆ. ಕೃತಜ್ಞತೆಗಳು ಇತ್ಯಾದಿ ಎಲ್ಲ ಮೊದಲ ಆವೃತ್ತಿಗೆ ಬರೆದದ್ದೇ… ಹೊಸದಾಗಿ ಸೇರಿದ್ದೆಂದರೆ ‘ಸಮಗ್ರ ಸಂಪುಟ’ದ ಬಗ್ಗೆ ಸಂಪಾದಕರ ಮಾತುಗಳು, ಅಷ್ಟೇ.

ಊಹೂಂ… ಅಲ್ಲಿಯೂ ನನ್ನ ಹೆಸರು ಗಾಯಬ್…

ಅದು ‘ಸಮಗ್ರ ನಾಟಕ ಸಂಪುಟ’…! ಹಲವು ದಶಕಗಳಷ್ಟು ಕಾಲ ಆಕರ ಗ್ರಂಥವಾಗಿ ನಿಲ್ಲುವಂಥದ್ದು. ಅಂಥ ಗ್ರಂಥದಲ್ಲಿ ಏನೇ ತಪ್ಪು-ಒಪ್ಪುಗಳಿದ್ದರೂ ಅವು ಶಾಶ್ವತವಾಗಿ ಉಳಿಯುವಂಥವೆ… ಅಂದರೆ, ನಾನು ಬರೆದ ಹಾಡು ಅಲ್ಲಿ ಗಿರೀಶರ ನಾಟಕದ ಒಂದು ಭಾಗವಾಗಿ, ಅವರೇ ಬರೆದದ್ದು ಎಂಬ ಭಾವನೆ ಮೂಡಿಸುವಂತೆ, ರಾರಾಜಿಸುತ್ತಿದೆ….! ಬಿಡಿ ಪ್ರತಿಯಲ್ಲೂ ಅಷ್ಟೇ. (ಸುನಿಲ್ ರಾವ್ ಅವರಿಗೆ ಈ ಕಾರಣದಿಂದಲೇ ಆ ಪ್ರಶ್ನೆ ಎದುರಾದದ್ದು…)

ನಾನು ಸುಮ್ಮನೇ ‘ಸಂಪುಟ’ವನ್ನು ಮುಚ್ಚಿ ಬದಿಗಿರಿಸಿದೆ. ಅಲ್ಲಿಯೇ ಕೂತಿದ್ದ ರಮಾಕಾಂತರಿಗೆ ‘ನಾನೇನನ್ನು’ ನೋಡುತ್ತಿದ್ದೆ ಎಂಬುದು ಗೊತ್ತಾಗದೆ ಇದ್ದೀತೇ…? ಆದರೂ, ಅವರೊಡನೆ ಆ ಬಗ್ಗೆ ಏನೊಂದನ್ನೂ ಕೇಳಲಿಲ್ಲ. ಅವರೊಡನೆ ಬೇರೇನೋ ಮಾತುಗಳನ್ನಾಡಿ, ಒಂದೆರಡು ಪುಸ್ತಕಗಳನ್ನು ಖರೀದಿಸಿ, ಅಟ್ಟವನ್ನಿಳಿದು ಬಂದೆ.

ಹೈದರಾಬಾದಿಗೆ ವಾಪಸಾಗಿ ಕೆಲವು ದಿನಗಳಾದ ಮೇಲೆ, ದಿ. 18-04-2008ರಂದು, ಕಾರ್ನಾಡರಿಗೆ ಒಂದು ಕಾಗದ ಬರೆದೆ.

ಹಿರಿಯರಾದ ಶ್ರೀ ಗಿರೀಶ ಕಾರ್ನಾಡ ಅವರಿಗೆ, ವಂದನೆಗಳು.

ಮೊನ್ನೆ ಅಕಸ್ಮಾತ್ತಾಗಿ ‘ನಾಗಮಂಡಲ’ ನಾಟಕದ 2005ರ ಆವೃತ್ತಿ ಮತ್ತು ಗಿರೀಶ ಕಾರ್ನಾಡ : ಸಮಗ್ರ ನಾಟಕ ಸಂಪುಟಗಳು ನೋಡಲು ಸಿಕ್ಕವು. ಕುತೂಹಲದಿಂದ ಪುಟ ತಿರುವಿದೆ.

‘ನಾಗಮಂಡಲ’ ನಾಟಕದ 2005ರ ಆವೃತ್ತಿ ‘ಹೊಸ ಸಂಸ್ಕರಣ’ ಎಂಬ ಘೋಷಣೆ , ಸುಂದರ ಮುಖಪುಟ ಮತ್ತು ಆಕಾರ ಹೊತ್ತು ಹೊರಬಂದಿದೆ. ಅದರ 31ನೆಯ ಪುಟದಲ್ಲಿ ನನ್ನ ಹಾಡೂ (ಮಾಯಾದೋ ಮನದ ಭಾರ…) ಪ್ರಕಟವಾಗಿದೆ.

ಇನ್ನು ಗಿರೀಶ ಕಾರ್ನಾಡ : ಸಮಗ್ರ ನಾಟಕ ಸಂಪುಟದ 439ನೆಯ ಪುಟದಲ್ಲೂ ನನ್ನ ಹಾಡನ್ನು (ಮಾಯಾದೋ ಮನದ ಭಾರ…) ಹಾಕಿಕೊಂಡಿದ್ದೀರಿ.

ಆದರೆ, ಈ ಎರಡೂ ಕೃತಿಗಳಲ್ಲಿ ತಪ್ಪಿ ಕೂಡ ಎಲ್ಲಿಯೂ ನನ್ನ ಹೆಸರು ಕಾಣಿಸದಿದ್ದದ್ದು ಸಖೇದಾಶ್ಚರ್ಯಕರ ಸಂಗತಿ.

‘ಹೊಸ ಸಂಸ್ಕರಣ ‘ದಲ್ಲಿ ಮರೆತಿದ್ದರೂ, ಅದಾಗಿ ಮೂರು ವರ್ಷಗಳ ನಂತರದಲ್ಲಿ ಪ್ರಕಟವಾದ ಸಮಗ್ರ ನಾಟಕ ಸಂಪುಟದಲ್ಲಾದರೂ ನನ್ನ ಹೆಸರನ್ನು ನೀವು ಹಾಕಬಹುದಿತ್ತು. ಬಹುಶಃ ಈ ‘ಸಣ್ಣ ವಿಚಾರ’ತಮ್ಮ ಗಮನಕ್ಕೆ ಬಂದಿರಲಿಕ್ಕಿಲ್ಲ.

-ಎಂದು ಆರಂಭಿಸಿ, ಅವರು ನನ್ನಿಂದ ಅನುಮತಿ ಪಡೆಯುವಾಗ ತೋರಿಸಿದ್ದ ‘ಮುತುವರ್ಜಿ’, ನನ್ನಿಂದ ಅನುಮತಿ ಪಡೆದಾದ ಮೇಲೆ ‘ನಿಷ್ಕಾಳಜಿ’ಯಾಗಿ ಮಾರ್ಪಟ್ಟದ್ದರ ಬಗ್ಗೆ ಬರೆದಿದ್ದೆ. ಆ ನಂತರ –

ನನ್ನ ಹಾಡಿಗೆ ಮತ್ತೆಂದೂ ಇಂಥ ಪರದೇಶಿತನ ಮತ್ತು ಅನಾಥತೆಗಳು ಕಾಡದಿರಲಿ ; ಆ ಕೊರಗು ನನಗೆ ಉಂಟಾಗದೇ ಇರಲಿ ಎಂಬ ಕಾರಣದಿಂದ , ನನ್ನ ‘ಮಾಯಾದೋ ಮನದ ಭಾರ …’ ಹಾಡನ್ನು ‘ನಾಗಮಂಡಲ ‘ ನಾಟಕ ಕೃತಿಯ ಮುಂದಿನ ಎಲ್ಲ ಮರುಮುದ್ರಣಗಳಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಲು ನಾನು 2004ನೆಯ ವರ್ಷದಲ್ಲಿ ನೀಡಿದ್ದ ಕಾಯಂ ಅನುಮತಿಯನ್ನು ಈ ಮೂಲಕ ‘ಕಾಯಮ್ಮಾಗಿ ಹಿಂದಕ್ಕೆ’ ಪಡೆಯುತ್ತಿದ್ದೇನೆ .

-ಎಂದು ಬರೆದು, ಆಗಲೇ ಆಗಿಹೋದ ತಪ್ಪನ್ನು ಸರಿಪಡಿಸುವ ಹೊಣೆಯನ್ನು ಅವರ ಮೇಲೆಯೇ ಹೊರಿಸಿ, ಅವರು ನನಗೆ ಕಳಿಸಿದ್ದ ಗೌರವಧನದ ಹಣವನ್ನು ವಾಪಸ್ ಮಾಡುವ ಉದ್ದೇಶದಿಂದ, ಸಿಂಡಿಕೇಟ್ ಬ್ಯಾಂಕಿನ ಚೆಕ್ (ಸಂಖ್ಯೆ 487750) ಮತ್ತು ನನಗೆ ಅವರು ಹಿಂದೆ ಬರೆದಿದ್ದ ಪತ್ರದ ನಕಲನ್ನೂ ಒಳಗೊಂಡ ಪತ್ರವನ್ನು ಅವರಿಗೆ ರವಾನಿಸಿದೆ.

-0-0-0-0-0-

ಮುಂದೆ ಎರಡೇ ದಿನಗಳಲ್ಲಿ ಕಾರ್ನಾಡರಿಂದ ನನಗೊಂದು ಕುರಿಯರ್ ಬಂತು. ಅವರು ನನ್ನ ಪತ್ರವನ್ನು ಸರಿಯಾಗಿ ಓದಿರಲಿಲ್ಲವೆಂಬುದು ಮೇಲ್ನೋಟಕ್ಕೇ ಅರ್ಥವಾಗುತ್ತಿತ್ತು.

vajapeyi-karnad3

ಒಂದು ವೇಳೆ ಅವರು ಆವೃತ್ತಿಯಲ್ಲಿ ನನ್ನ ಹೆಸರನ್ನು ಸ್ಮರಿಸಿದ್ದಿದ್ದರೆ ಈ ಅಸಮಾಧಾನಕ್ಕೆ ಕಾರಣವೇ ಇರುತ್ತಿರಲಿಲ್ಲ. ಅವರಿಂದ ಎರಡೆರಡು ಸಲ ನಾನು ಉಪೇಕ್ಷಿಸಲ್ಪಟ್ಟೆ. ಹಾಗಾಗಿಯೇ ನಾನು ಅವರಿಗೆ ಕಾಗದ ಬರೆದು, ಕೊಟ್ಟಿದ್ದ ಅನುಮತಿಯನ್ನು ವಾಪಸ್ ಪಡೆಯಬೇಕಾಯಿತು. ಆದರೆ, ತಮ್ಮಿಂದ ‘ಏನೂ ಆಗಿಯೇ ಇಲ್ಲ’ವೆಂಬಂತೆ ತೋರಿಸಿಕೊಳ್ಳುವ ಭರದಲ್ಲಿ ಕಾರ್ನಾಡರು ಸಮಗ್ರ ಸಂಪುಟದಲ್ಲಾದ ತಪ್ಪಿನ ಹೊಣೆಯನ್ನು ಪ್ರಕಾಶಕರ ಮೇಲೆ ಹಾಕಿ ತಣ್ಣಗೆ ಕೂತುಬಿಟ್ಟರು. ಮತ್ತು, ಸಮಗ್ರ ಸಂಪುಟದ ಮುಂದಿನ ಆವೃತ್ತಿಯಲ್ಲಿ ಆ ತಪ್ಪನ್ನು ಸರಿಪಡಿಸುವುದಾಗಿ ಪ್ರಕಾಶಕರು ಹೇಳಿದ್ದಾರೆಂದೂ ಪತ್ರದಲ್ಲಿ ನಮೂದಿಸಿದರು. ಆ ಪತ್ರದ ಮುಂದಿನ ಭಾಗದಲ್ಲಿ ಕಾರ್ನಾಡರು ಬರೆದಿರುವುದನ್ನು ನೀವೇ ನೋಡಿ :

vajapeyi-karnad4

ಹೀಗೆ ‘ಅಭಿವಚನ’ ನೀಡಿದ್ದ ಮಾನ್ಯ ಗಿರೀಶ ಕಾರ್ನಾಡರು ಇದೀಗ ಮತ್ತೆ ‘ವಚನಭಂಗ’ ಮಾಡಿದ್ದಾರೆಂಬ ಅಂಶ ನನ್ನ ಗಮನಕ್ಕೆ ಬಂದದ್ದು ಸುನಿಲ್ ರಾವ್ ಅವರ ಪ್ರತಿಕ್ರಿಯೆಯ ಕಾರಣದಿಂದ.

ಕೂಡಲೇ ನಾನು ‘ನಾಗಮಂಡಲ’ ನಾಟಕದ ಇತ್ತೀಚಿನ ಆವೃತ್ತಿಯನ್ನು (2012) ಖರೀದಿಸಿ ನೋಡಿದೆ. ಇದಕ್ಕೂ ಹಿಂದಿನ ಆವೃತ್ತಿಯಲ್ಲೂ (2009) ನನ್ನ ಹಾಡು ಇರುವುದನ್ನು ಗೆಳೆಯರೊಬ್ಬರು ದೃಢಪಡಿಸಿದರು.

ಅಂದರೆ, ನಮ್ಮ ‘ಹೆಮ್ಮೆ’ಯ ನಾಟಕಕಾರ ಗಿರೀಶ ಕಾರ್ನಾಡರು, ಕೊಟ್ಟ ವಚನವನ್ನು ಮರೆತು, ಯಾವ ಎಗ್ಗೂ ಇಲ್ಲದೆ ನನ್ನ ಹಾಡನ್ನು ‘ನಾಗಮಂಡಲ’ ನಾಟಕದ ಪಠ್ಯದಲ್ಲಿ ಅಳವಡಿಸಿಕೊಳ್ಳುತ್ತಲೇ ಸಾಗಿದ್ದಾರೆ ಎಂದಾಯಿತು.

‘ಮಾಯಾದೋ ಮನದ ಭಾರ…’ ಹಾಡನ್ನು ಬಳಸಿಕೊಳ್ಳಲು ಅನುಮತಿ ಸಿಕ್ಕಾಗ ಕಾರ್ನಾಡರು ‘ಈ ಹಾಡಿನ ಬಳಕೆಯಿಂದ ನಾಟಕದ ಶೋಭೆ ಇಮ್ಮಡಿಸಿದೆ ಎಂಬುದರಲ್ಲಿ ಸಂದೇಹವಿಲ್ಲ,’ ಎಂದು ಬರೆದಿದ್ದರು.

ಆದರೆ, ಆ ಹಾಡನ್ನು ಬಳಸಿಕೊಳ್ಳಲು ಕಾರ್ನಾಡರಿಗೆ ಅನುಮತಿ ಇತ್ತ ಮೇಲೆ ನನ್ನ ಮನದ ಕ್ಷೋಭೆ ಹೆಚ್ಚಿರುವುದಂತೂ ನಿಜ.

‍ಲೇಖಕರು g

September 22, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

73 ಪ್ರತಿಕ್ರಿಯೆಗಳು

  1. Mohan V Kollegal

    ಆಶ್ಚರ್ಯ! ಆಗೇನೋ ಪ್ರಕಾಶಕರ ತಪ್ಪಿತ್ತು ಎಂದರು. ಆದರೆ, ಅದಾದಮೇಲೆ? ಮತ್ತೆ ಮತ್ತೆ?

    ಪ್ರತಿಕ್ರಿಯೆ
  2. M.S.Prasad

    ಬೆಳವಣಿಗೆ ಅನ್ನೋದು ಇಂತಹ ಸಣ್ಣತನಗಳಿಂದ ಕೂಡಿರುತ್ತದೆ ಎಂದು ಅರಿವು ಮಾಡಿಕೊಟ್ಟಿದಕ್ಕೆ ಧನ್ಯವಾದ…

    ಪ್ರತಿಕ್ರಿಯೆ
  3. umesh desai

    ಮನಿಶಾ ದೊಡ್ಡಾವ ಅಂತ ಈ ಪುಣ್ಯಭೂಮಿಯೊಳಗ ಅನಿಸಿಕೋಬೇಕಾದ್ರ
    ಇಂಥಾ ಸಣ್ಣ “ಸಣ್ಣತನ” ಮಾಡಬೇಕಾಗತದ ಕಾಣಸ್ತದ ಕಾರ್ನಾಡ್ರು ಇದಕ್ಕ
    ಹೊರತಲ್ಲ ತಗೀರಿ…!!

    ಪ್ರತಿಕ್ರಿಯೆ
  4. Ganesh Nempe

    ಜ್ಞಾನಪೀಠಿಗಳು ಕೂಡ ಅನ್ನ ತಿನ್ನುವ ಮನುಷ್ಯರಾಗಿರುವುದರಿಂದ ತಪ್ಪುಗಳಾಗುವುದು ಸಹಜ. ಆದರೆ ಗೌರವಧನವನ್ನ ಹಿಂಪಡೆದು ಕೂಡ ಹಾಡನ್ನು ಪ್ರಕಟಿಸಿರುವುದು ನಿಜವಾಗಲು ಅಸಹ್ಯಹುಟ್ಟಿಸುವಂತಹ ಕೆಲಸ. ಕಾರ್ನಾಡರು ಹೀಗ್ಯಾಕೋ ಅಥವಾ ಕಾರ್ನಾಡರು ಇರುವುದೇ ಹೀಗೆಯೋ ಎಂಬುದನ್ನು ಅವರ ನಿಕಟವರ್ತಿಗಳೇ ತಿಳಿಸಬೇಕು.

    ಪ್ರತಿಕ್ರಿಯೆ
  5. RENUKA NIDAGUNDI

    ದೊಡ್ಡವರ ಸಣ್ಣತನಗಳು ಬೂದಿ ಮುಚ್ಚಿದ ಕೆಂಡದಂತೆ ಮನಸ್ಸನ್ನು ಸುಡುತ್ತವೆ…!!

    ಪ್ರತಿಕ್ರಿಯೆ
  6. Harish Karkera

    “ನನ್ನ ಹಾಡಿಗೆ ಮತ್ತೆಂದೂ ಇಂಥ ಪರದೇಶಿತನ ಮತ್ತು ಅನಾಥತೆಗಳು ಕಾಡದಿರಲಿ…….”

    I appreciate your straight reply to a narrow minded gaint..

    ಪ್ರತಿಕ್ರಿಯೆ
  7. hipparagi Siddaram

    ಛೇ!….ದೊಡ್ಡವರು ಹೀಗೆಲ್ಲಾ ಮಾಡುವುದು ಉಚಿತವೇ? ಬೇಸರದ ಸಂಗತಿ !

    ಪ್ರತಿಕ್ರಿಯೆ
  8. chandra barkoor

    ನಾಗಮಂಡಲದ ಹಾಡುಗಳು ಸಾಹಿತ್ಯದ ರಸದೂಟ. ಮಾಯಾದೋ ಮನದ ಭಾರ… ಕಂಬದಾ ಮ್ಯಾಲಿನ ದೈವವೇ ನಂಬಲೇನ ನಿನ್ನ ನಗೆಯನ್ನ… ಇಂಥ ಸಾಹಿತ್ಯ ಮತ್ತು ಅರ್ಥ ಭಾವಪೂರ್ಣತೆಯ ಉತ್ತುಂಗ ತಲುಪುವುದು ತುಂಬ ಅಪರೂಪ. ಹಾಗಾಗಿ ಇದನ್ನು ರಚಿಸಿದ ಮನಸ್ಸಿಗೆ ಎಲ್ಲ ರೀತಿಯ ಗೌರವ ಸಿಗಲೇಬೇಕು. ಅದರಲ್ಲೂ ಅಭಿಮಾನಕ್ಕೆ ಕಿಂಚಿತ್ತೂ ಭಂಗವಾಗಬಾರದು. ಆದರೆ ಕಾರ್ನಾಡರು ಹೀಗೆ ಮಾಡಿದ್ದಾರೆ ಎನ್ನುವ ವಿಚಾರ ತುಂಬ ಆಶ್ಚರ್ಯ ಹುಟ್ಟಿಸಲಿಲ್ಲ. ಅವರು ಜ್ಞಾನಪೀಠ ಪಡೆದುಕೊಂಡಿರಬಹುದು. ಆದರೆ ಆ ಎತ್ತರದ ವ್ಯಕ್ತಿತ್ವ, ಪ್ರೀತಿ, ಕಾಳಜಿ ಯಾವೊತ್ತು ಜನಗಳಿಗೆ ತೋರಿಸಿಲ್ಲ. ಅವರು ಹೀಗೆ ಆಡಾಡ್ತಾ ಆಯಸ್ಸು ಕಳೆಯುವುದಕ್ಕಿಂತ ಜನಗಳಿಗೆ ಹತ್ತಿರವಾಗುವ ಪ್ರಯತ್ನ ಮಾಡಿದ್ದರೆ ಚೆನ್ನಾಗಿತ್ತು. ಮಧ್ಯರಾತ್ರಿಯ ತನಕ ಭಾರ್ ಗಳು ಓಪನ್ ಇರಬೇಕು ಎನ್ನುವ ಹೋರಾಟದ ಚುಕ್ಕಾಣಿ ಹಿಡಿಯುವುದಕ್ಕಿಂತ ಅಗತ್ಯವಾದ ಜವಾಬ್ದಾರಿ ತಮ್ಮ ಮೇಲಿದೆ ಅನ್ನೋದು ಅರ್ಥವಾಗದೆ ಇರೋದು ದುರಂತ… ಬೇರೇನೇ ಆಗಲಿ ಜ್ಞಾನಪೀಠದಂಥ ಹೊಳಪಿಗೆ ಕಳಂಕ ಬರಬಾರದಲ್ಲ… ವಾಜಪೇಯಿಯವರೇ, ನಿಮ್ಮ ಹಾಡಿಗೆ ನಮ್ಮಂಥ ಕೋಟಿ ಅಭಿಮಾನಿಗಳ ಪ್ರೀತಿ ಸಿಕ್ಕಿದೆ, ಅಕ್ಕರೆಯಿಂದ ಅದನ್ನು ಸವಿದ ಕೃತಜ್ಞತೆಯಿದೆ… ಧನ್ಯವಾದಗಳು

    ಪ್ರತಿಕ್ರಿಯೆ
  9. Kumudavalli Arun Murthy

    ಈ ದೊಡ್ಡವರು ಶ್ಯಾನೇ ಸಣ್ ತನ ಮಾಡೋದು ಖೇದ ತರೋಂಥ ವಿಚಾರ. ಕಾರ್ನಾಡರ ಮೇಲೆ ಈ ಥರಾ ಆರೋಪಗಳು ಇದೇ ಮೊದಲಲ್ಲ. ಆದ್ರೇ ಈ ವಿಚಾರ ಇಲ್ಲಿಗೇ ಬಿಡ್ ಬ್ಯಾಡ್ರೀ. ಒಪ್ಕೊಳೋ ತನಕ ಮುಂದುವರೀರಿ. ನಾವೂ ಇದ್ದೇವೆ ನಿಮ್ಮ ಸಹಕಾರಕ್ಕೆ.

    ಪ್ರತಿಕ್ರಿಯೆ
  10. pravara

    ಸರ್, ನಿಮ್ಮ ಹಾಡನ್ನು ನಿಮ್ಮ ಅಮಾಯಕತ್ವವನ್ನ, ನಂಬಿಕೆಯನ್ನ ದುರುಪಯೋಗ ಪಡಿಸಿಕೊಂಡ ಗಿರೀಶ್ ಕಾರ್ನಾಡರ ಬಗ್ಗೆ ಬೇಸರವಾಯ್ತು… ಅದು ದೊಡ್ಡವರೆನ್ನಿಸಿಕೊಂಡವರ ಸಣ್ಣತನವಾಗಿಬಿಡುತ್ತದೆ…

    ಪ್ರತಿಕ್ರಿಯೆ
  11. Rj

    ವಾಜಪೇಯಿ ಸರ್,ನಿಮ್ಮ ಸುಧೀರ್ಘ ವಿವರಣೆ ಓದಿದೆ. ನನಗನ್ನಿಸುವಂತೆ,ಕಾರ್ನಾಡರು ಶೇಕಡಾ 90 ರಷ್ಟು ಸರಿಯಾಗಿ ಯೋಚಿಸಿ ಉಳಿದ ಭಾಗದಲ್ಲಿ ಎಡವಿದಂತಿದೆ.ನಿಮ್ಮ ಕವನವನ್ನು ಬಳಸಿಕೊಳ್ಳುವದಕ್ಕೆಂದು ನಿಮ್ಮ ಅನುಮತಿಗಾಗಿ ನಿಮಗೆ ಪದೇ ಪದೇ ಫೋನು ಮಾಡಿದ್ದು,ಗೌರವಧನ ಕಳಿಸಿಕೊಟ್ಟಿದ್ದು,ಅದು ತಲುಪಿದೆಯೋ ಇಲ್ಲವೋ ಅಂತ ಖಾತ್ರಿಪಡಿಸಿಕೊಳ್ಳಲು ಮತ್ತೇ ಮತ್ತೇ ಫೋನಾಯಿಸಿದ್ದು-ಇವೆಲ್ಲ ಅವರ ನೈತಿಕತೆಯನ್ನು ಎತ್ತಿ ಹಿಡಿಯುತ್ತವಾದರೂ ಕೊನೆಗೆ ಸಂಪುಟದಲ್ಲಿ ನಿಮ್ಮ ಬಗ್ಗೆ ಸೌಜನ್ಯಕ್ಕೂ ಹೆಸರಿಸದಿರುವದು ಗೊತ್ತಿಲ್ಲದೇ ನಡೆದುಹೋದ ಸಂಗತಿ ಅಂತ ಭಾವಿಸಲಿಕ್ಕಾಗದು.ಈ ಶೇಕಡಾ ಹತ್ತರ ತಪ್ಪು,ಶೇಕಡಾ ತೊಂಭತ್ತರ ‘ಸರಿದಾರಿ’ಯನ್ನು ಅಡ್ಡದಾರಿಗೆಳೆದಂತಿದೆ..
    ಖಂಡಿತ ಇದು ಬೇಸರದ ಸಂಗತಿ ಮತ್ತು ಮೂಲಕೃತಿಕಾರನ ಪರಿಶ್ರಮವನ್ನು ನಾವು ಗೌರವಿಸಲೇಬೇಕು.
    -Rj

    ಪ್ರತಿಕ್ರಿಯೆ
  12. Sanjeev Wadeyar

    ಗೋಪಾಲ್ ಕಾಕಾ ನಿನ್ನ ನೆರ ಮಾತು ಭಾಳ ಹಿಡಿಸ್ತು ..! ದೊಡ್ಡಾವ್ರು ಹಿಂಗೆಲ್ಲಾ ಮಾಡುದು ಛೋಲೊ ಅಲ್ಲಾ.ನೀವ್ ಬಿಡಬ್ತಾಡ್ರಿ ನಾವಿ ಜೋಡಿ ಇದ್ದಿವಿ.!!

    ಪ್ರತಿಕ್ರಿಯೆ
  13. ಪ್ರಸನ್ನ ರೇವನ್

    “ಈ ಹಸಿರು ಸಿರಿಯಲಿ” ಹಾಡು ಆಕಾಶವಾಣಿಯ ಕಾಮನಬಿಲ್ಲಿನಲ್ಲಿ ಪ್ರಸಾರಗೊಂಡಾಗ, ರಚನೆ ಚಂದ್ರ ಶೇಖರ ಕಂಬಾರ ಅವರದೆಂದರು, ಆಶ್ಚರ್ಯವಾಯಿತು ಹಾಗೇ ಖೇದವಾಯಿತು. ಕೃತಿಗಳ ಹಕ್ಕುಸ್ವಾಮ್ಯ ಮತ್ತು ಕೃತೃತ್ವಗಳನ್ನು ರಕ್ಷಿಸುವುದು ಅತಿ ಮುಖ್ಯ. ಹಲವಾರು ಸಂಧರ್ಭಗಳಲ್ಲಿ ಅತ್ಯುತ್ತಮ ಕಲಾಕೃತಿಗಳು ಬೇರೆಯವರ ಪಾಲಾಗುವುದು ಹೀಗೆಯೇ, ಈ ವಿಚಾರಸರಣಿ ಕರ್ನಾಟಕದ ಮತ್ತು ದೇಶದ ಮಟ್ಟಿಗೆ ಕೃತಿರಚನಕಾರರ ನ್ಯಾಯಿಕ ಮಹತ್ವವನ್ನು ಎತ್ತಿ ಹಿಡಿಯುವಂತಾಗಲಿ.

    ಗಿರೀಶ ಕಾರ್ನಾಡರು ತಮ್ಮ ಪ್ರತಿಕ್ರಿಯೆ ಪ್ರಕಟಿಸಿ, ಎಲ್ಲ ಸಹೃದಯರ ಗೊಂದಲ ನಿವಾರಿಸಬೇಕು. ಇದು ಯಾಕೆ ಹಿಂಗೆ ಅಂಥಾ ತಿಳಿಸಬೇಕು.

    ಪ್ರತಿಕ್ರಿಯೆ
  14. Manju M Doddamani

    ಗಿರೀಶ್ ಕಾರ್ನಾಡ್ ಅವರು ಹೀಗೆ ಮಾಡಿದ್ದರೆ ಅಂದ್ರೆ ನಂಬಲಿಕ್ಕೆ ಆಗ್ತಾ ಇಲ್ಲ….
    ಗೌರವ ಧನ ಹಿಂಪಡೆದ ಮೇಲೆಯೂ ನಿಮ್ಮ ಹಾಡನ್ನು ಬಳಸಿಕೊಂಡಿರುವುದು ತಪ್ಪು….
    ಹಾಡು ಬರೆಯುವವರಿಗೆ ಬೆಲೆ ಇಲ್ಲದಂತಾಗಿದೆ….
    ಲೇಖನ ಓದಿ ತುಂಬಾ ಬೇಸರವಾಯಿತು….

    ಪ್ರತಿಕ್ರಿಯೆ
  15. hampi yaji

    ದೊಡ್ಡವರ ಸಣ್ಣತನ ಹೀಗೂ ಇರಲು ಸಾಧ್ಯವೇ ಅನಿಸಿತು… ವಾಜಪೇಯಿ ಸರ್ ನಿಮ್ಮನ್ನ ನಿಮ್ಮ ಹಾಡುಗಳನ್ನ ಮರೆಯಲು ಸಾಧ್ಯವಿಲ್ಲ…!!!!

    ಪ್ರತಿಕ್ರಿಯೆ
  16. ಮೂರ್ತಿ ದೇರಾಜೆ

    ಈ ರೀತಿಯ ಮನುಷ್ಯರ ಸಣ್ಣತನಗಳು ಗೊತ್ತಾಗುತ್ತ ಹೋದಂತೆ…..ಇಂತವರು ಬರೆಯುವ, ಭಾಷಣ ಬಿಗಿಯುವ,…..ವಿಷಯಗಳೇ ಪೊಳ್ಳು ಅನಿಸತೊಡಗುತ್ತದೆ….ಇವರು ಯಾವುದನ್ನು ವಿರೋದಿಸುತ್ತಾರೋ….ಅದೇ ಹೆಚ್ಚು ಸರಿ ಇರಬಹುದು ಎಂದು ಕಾಣಲು ಪ್ರಾರಂಭವಾಗುತ್ತದೆ…..ಎಷ್ಟಾದರೂ ದೊಡ್ಡಮನುಷ್ಯರಲ್ಲವೇ….!!! ಆ…ಏನದು…?? “ಆಡಾಡ್ತಾ…ಆಯುಷ್ಯ..”…..!!!!!!!

    ಪ್ರತಿಕ್ರಿಯೆ
  17. Gopaal Wajapeyi

    ಗಣೇಶ್ ನೆಂಪೆ ಮತ್ತು ಮಂಜು ಎಂ. ದೊಡ್ಡಮನಿ…
    ಗಿರೀಶರು ನಾನು ಹಿಂದಿರುಗಿಸಿದ್ದ ಗೌರವಧನದ ಚೆಕ್ಕನ್ನು Cancelled ಎಂದು ಬರೆದು ತಕ್ಷಣವೇ ನನಗೆ ವಾಪಸ್ ಮಾಡಿದ್ದಾರೆ.
    ಆ ಕುರಿತು ಅವರ ಕೊನೆಯ ಪತ್ರದ ಕೊನೆಯ ಸಾಲನ್ನು ನೀವು ಗಮನಿಸಿದಂತಿಲ್ಲ…
    ಆದರೆ, ಆ ಪತ್ರದಲ್ಲಿ ನೀಡಿದ ‘ಅಭಿವಚನ’ದಂತೆ ಅವರು ನಡೆದುಕೊಂಡಿಲ್ಲ ಎಂಬುದು ನನ್ನ ತಕರಾರಿಗೆ ಕಾರಣ.

    ಪ್ರತಿಕ್ರಿಯೆ
  18. bmbasheer

    ಗಿರೀಶ್ ಕಾರ್ನಾಡ್ ಬಹಳ ಲೆಕ್ಕಾಚಾರದ ಮನುಷ್ಯ…ಅವರ ನಾಟಕಗಳ ಪಾತ್ರಗಳು, ಸಂಭಾಷಣೆಗಳೇ ಅದಕ್ಕೆ ಅತ್ಯುತ್ತಮ ಉದಾಹರಣೆ…ಹಿರಿಯ ನಾಟಕಕಾರ ಎಂದು ಗುರುತಿಸಿಕೊಂಡ ಮನುಷ್ಯ ನಿಮ್ಮ ಹಾಡು ಇಲ್ಲದೆ ತನ್ನ ಆವೃತ್ತಿಯನ್ನು ಬಿಡುಗಡೆ ಮಾಡಲಾಗದ ಸ್ಥಿತಿಯಲ್ಲಿದ್ದಾನೆ ಎನ್ನೋದು ನಿಮ್ಮ ಹಾಡಿನ ಹೆಗ್ಗಳಿಕೆ….ಕೆಲವು ವಸ್ತುಗಳೇ ಹಾಗೆ…ನೋಡಿದ ಕೂಡಲೇ ಏನಾದರಾಗಲಿ ಕದ್ದು ಬಿಡೋಣಾ ಅನ್ನಿಸತ್ತೆ….ನಾ ಲಜ್ಜಾ…ನಾ ಭಯ…ಅದು ಕದಿಯುವವನ ತಪ್ಪಲ್ಲ…ನಿಮ್ಮ ಹಾಡಿಗೆ ನನ್ನ ಸಲಾಂ…

    ಪ್ರತಿಕ್ರಿಯೆ
  19. udaya puranik

    ಹಿರಿಯ ಕಲಾವಿದರಾದ ಗೋಪಾಲ್ ವಾಜಪೇಯಿಯವರಿಗಾಗಿರುವ ಅವಮಾನ,ದು:ಖ ಮತ್ತು ಅನ್ಯಾಯಕ್ಕಾಗಿ ಶ್ರೀ ಗಿರೀಶ ಕರ್ನಾಡ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಪ್ರಕಾಶಕರ ಮೇಲೆ ತಪ್ಪು ಹೊರಿಸಿ ಜಾರಿಕೊಳ್ಳುವುದು ಕಾರ್ನಾಡರ ಸಣ್ಣತನ.
    ಶ್ರೀ ಗೋಪಾಲ್ ವಾಜಪೇಯಿಯವರಂತೆ ಅನ್ಯಾಯ, ಅವಮಾನಗಳಿಗೆ ಒಳಗಾದವರು, ಧೈರ್ಯವಾಗಿ ಧ್ವನಿಯೆತ್ತಿದ್ದರೆ, ದೊಡ್ಡವರು-ಬುದ್ಧಿಜೀವಿಗಳು ಎಂದುಕೊಳ್ಳುವ ಜನರ ನಿಜಬಣ್ಣ ಬಯಲಾಗುತ್ತದೆ.

    ಪ್ರತಿಕ್ರಿಯೆ
  20. Naveen Sagar

    Hoping for the issue to be settled respectfully.. Ball is in Karnad court

    ಪ್ರತಿಕ್ರಿಯೆ
  21. Tejaswini Hegde

    ದೊಡ್ಡವರ(!!!) ದೊಡ್ಡ ದಡ್ಡ ತಪ್ಪು!! 🙁 ಆದಷ್ಟು ಬೇಗ ನಿಮ್ಮ ಮನದ ಕ್ಷೋಭೆ ಮಾಯವಾಗುವಂತಾಗಲಿ ಸರ್….

    ಪ್ರತಿಕ್ರಿಯೆ
  22. Srinidhi Rao

    ಜ್ಞಾನ ಪೀಠ ಪಡೆದ ಒಬ್ಬ ವ್ಯಕ್ತಿಯ ಕೊಳಕು ಪ್ರವೃತ್ತಿ ‘ಭಿತ್ತಿ ‘ಯಲ್ಲಿ ಭಿತ್ತರವಾದುದನ್ನು ಕಂಡಿದ್ದೆ . ೨ ನೆಯ “ಧೀಮಂತ” ವ್ಯಕ್ತಿಯ ಅಲ್ಪ ಗುಣ ಕಂಡು ಖೇದವಾಯಿತು. :'(

    ಪ್ರತಿಕ್ರಿಯೆ
  23. Rajendra

    hiriyarada karnad ravaru hege mathu tappiddu sariyalla.. doddavaru yavathu doddatana na bidabaradu.. nijakku besarada sangathi..

    ಪ್ರತಿಕ್ರಿಯೆ
  24. Apoorva

    I hope Karnad will respond regarding this issue atleast now.. Does this matter really reach him?? how will he give justice to the sorrows and disappointments which you undergo in these years? this is not an expected thing from a responsible writer 🙁

    ಪ್ರತಿಕ್ರಿಯೆ
  25. K.V.Tirumalesh

    ಸಿನೆಮಾ ಮತ್ತು ನಾಟಕ (ನಾಟಕಗಳಿಗಿಂತ ಸಿನೆಮಾ) ಪ್ರಕಾರಗಳಲ್ಲಿ ಹಾಡುಗಳನ್ನು ಇನ್ನೊಬ್ಬರಿಂದ ಬರೆಸಿಕೊಳ್ಳುವುದು ಸಾಮಾನ್ಯ.
    ಶೇಕ್ಸ್‍ಪಿಯರ್ ಸಮೇತ ಇಬ್ಬಿಬ್ಬರಾಗಿ ಒಂದು ನಾಟಕ ಬರೆಯುವುದರಲ್ಲಿ ಸಹಕರಿಸಿದ್ದಾರೆ. ಪುಸ್ತಕದಲ್ಲಿ ನಿಮ್ಮ ಹಾಡಿಗೆ ಕ್ರೆಡಿಟ್ ಸೂಚಿಸಲೇ ಬೇಕಿತ್ತು. ಇದರಲ್ಲಿ ಎರಡು ಮಾತಿಲ್ಲ. ಆದರೆ ಶ್ರೀ ಕಾರ್ನಾಡರಿಗೆ ಬೆನಿಫಿಟ್ ಆಫ್ ಡೌಟ್ ಕೊಡಬೇಕಾಗುತ್ತದೆ. ಯಾಕೆಂದರೆ ಇದು ಬಹುಶಃ ಶ್ರೀ ಗಿರೀಶ್ ಕಾರ್ನಾಡರಿಂದ / ಪ್ರಕಾಶಕರಿಂದ ನಿರುದ್ದಿಶ್ಯವಾಗಿ ಆದ ಅಚಾತುರ್ಯವಾಗಿರಬಹುದು. ಶ್ರೀ ಕಾರ್ನಾಡ್ ಅವರಾಗಿಯೇ ನಿಮಗೆ ಫೋನ್ ಮಾಡಿ ಹಾಡು ತರಿಸಿಕೊಂಡರು ಎನ್ನುವುದು ಇದನ್ನು ಸೂಚಿಸುತ್ತದೆ. ಅಲ್ಲದೆ ಒಂದು ಹಾಡಿನ ಕ್ರೆಡಿಟನ್ನ ಶ್ರೀ ವಾಜಪೇಯಿಯವರಿಗೆ ಕೊಡುವುದರಿಂದ ನಾಟಕ ಕರ್ತೃವಿಗೆ ಯಾವ ನಷ್ಟವೂ ಆಗುವುದಿಲ್ಲ. ಇನ್ನು ಮರುಮುದ್ರಣವನ್ನು ಹಾಳೆ ಬಿಡಿಸಿ ನೋಡುವ ಕೆಲಸವನ್ನು ಎಲ್ಲರೂ ಮಾಡುವುದಿಲ್ಲ. ಆದರೆ ನಿಮಗೆ ನೋವಾದಾಗ ಅದಕ್ಕೆ ಅವರು ಸ್ಪಂದಿಸಿ ಮುಂದಿನ ಮುದ್ರಣಗಳಲ್ಲಿ ನಿಮ್ಮ ಹೆಸರು ಪ್ರಕಟಿಸುವಂತೆ ನೋಡಿಕೊಳ್ಳಬೇಕಿತ್ತು. ನಿಮ್ಮ ಹಾಡೇ ಬೇಡ ಎಂದುದು ಡಬಲ್ ಹರ್ಟ್ ಆಗುತ್ತದೆ. ಈಗಲಾದರೂ ಶ್ರೀ ಕಾರ್ನಾಡ್ ನಿಮ್ಮ ಜತೆ ರಾಜಿ ಮಾಡಿಕೊಳ್ಳುವುದು ಉಚಿತವಾಗುತ್ತದೆ.
    ಕೆ.ವಿ. ತಿರುಮಲೇಶ್

    ಪ್ರತಿಕ್ರಿಯೆ
  26. Sumangala

    ವಾಜಪೇಯಿ ಸರಾ… ನಿಮ್ಮ ಲೇಖನ ಓದಿ ‘ಕಾರ್ನಾಡರು ಹೀಂಗ ಮಾಡ್ಯಾರ, ಶ್ಯೀ’ ಅಂತ ನನಗಂತೂ ಅನ್ನಿಸಲಿಲ್ಲ ಬಿಡ್ರಿ, ಯಾಕಂದ್ರ ‘ದೊಡ್ಡ ಮನಷ್ಯಾರು’ ಅಂದ್ ಮ್ಯಾಗ ಹಿಂತಾ ಸಣ್ಣತನಗೋಳೆಲ್ಲ ಅಗದಿ ಸಹಜ ಬಿಡ್ರಿ! ಅವ್ರ ಹಂಗ್ ಮಾಡಿರಲಿಲ್ಲ ಅಂದ್ರನ ನಮಗ ಅರೆ, ಇವ್ರು ಖರೇ ಖರೇ ದೊಡ್ಡ ಮನಷ್ಯಾರು ಆಗಿಬಿಟ್ಟಾರಲ್ಲ ಅನ್ನಿಸೂದ್ರಿ. ಹಿಂಗ “ದೊಡ್ಡ ಮಂದಿಯ” ಸಣ್ಣತನಗಳ ಬಗ್ಗೆ (ಅದರಲ್ಲೂ ನಮ್ಮ ಇಬ್ಬರು ಜ್ಞಾನಪೀಠಿಗಳ) ಪಂ. ರಾಜೀವಜೀಯವರು ನನಗ ರಗಡ ಹೇಳತಿದ್ರು…
    ಇಂತಹ ಹಲವು ಕಥೆಗಳನ್ನು ಕೇಳಿರುವ ನನಗೆ ನಮ್ಮ ನಡುವಿನ ನಿಜದ ದೊಡ್ಡತನದ ಮನುಷ್ಯ ಎಂದರೆ ಪಂಡಿತ್ ರಾಜೀವಜಿ ಎಂದು ಬಹಳಷ್ಟು ಸಲ ಅನ್ನಿಸಿದ್ದಿದೆ… ಇದೇ ಕಾರ್ನಾಡರು ಮೊನ್ನೆ ಮೊನ್ನೆ ಧಾರವಾಡದ ಸಾಹಿತ್ಯ ಸಂಭ್ರಮದಲ್ಲಿ ಮಾತನಾಡುತ್ತ, “ಮನೆಯ ಹೆಣ್ಣುಮಕ್ಕಳು, ಆಳುಗಳ ಮಾತು, ಅದರಲ್ಲೇ ಎಷ್ಟೊಂದು ಡ್ರಾಮಾ ಇರುತ್ತದೆ” ಎಂದಿದ್ದರು (ಪ್ರಜಾವಾಣಿ, ಜನವರಿ 27 ಪುಟ 5ಬಿ). ನನಗೆ ಯಾಕೋ ಅವರು ಕೂಡ ಹೀಗೆ ಮನೆಗೆಲಸದ ಸಹಾಯಕರನ್ನು “ಆಳುಗಳು” ಎಂದು ಕರೆಯುತ್ತಾರೆ ಎಂಬುದು ಒಂಥರದ ಕಸಿವಿಸಿ ಹುಟ್ಟಿಸಿತ್ತು…
    ಏನ ಮಾಡೂದ್ರಿ ಸರಾ… ದೊಡ್ಡವರು, ಏನು ಮಾಡಿದ್ರೂ ಅದು ಛಂದನ್ನಿಸ್ತದ, ಸರಿ ಅನ್ನಿಸ್ತದ… ಆ ಎಲ್ಲ ಪುರಾವೆಗಳನ್ನು ಇಟ್ಟುಕೊಂಡಿದ್ದಕ್ಕೆ ನಿಮಗ ಖರೇ ಥ್ಯಾಂಕ್ಸ್ ಹೇಳಬೇಕ್ರಿ
    – ಸುಮಂಗಲಾ

    ಪ್ರತಿಕ್ರಿಯೆ
  27. ಸತೀಶ್ ನಾಯ್ಕ್

    ಈಚೆಗೆ ಸ್ವಲ್ಪ ಬ್ಯುಸಿ ಇದ್ದೆ ಸಾರ್ ಅನಿವಾರ್ಯ ಕಾರಣಗಳಿಂದ ನಿಮ್ಮ ಕಳೆದ ಮೂರ್ನಾಲ್ಕು ಕಾಲಂ ಗಳನ್ನ ನಾನು ಓದಲಾಗಿಲ್ಲ ಕ್ಷಮೆ ಇರಲಿ..
    ಈ ಬರಹದಲ್ಲಿನ ವಿಚಾರ ಖಂಡಿತ ಬೇಸರ ತರಿಸುವಂಥದ್ದು ಸಾರ್.. ನಾಗಮಂಡಲ ಚಿತ್ರ ಬಂದ ಹೊತ್ತಿಗೆ ನನ್ನ ಶಾಲೆಯ ಯಾವ ಕಾರ್ಯಕ್ರಮವಾದರೂ ನಾನು ಹುಡುಗೀರು ಹಾಡಿಕೊಳ್ಳುವ ಹಾಡು ಅನ್ನೋ ಹಣೆ ಪಟ್ಟಿ ಇದ್ದರೂ.. ಯಾವ ಎಗ್ಗಿಲ್ಲದೆ ಅದೆಷ್ಟು ಬಾರಿ “ಈ ಹಸಿರು ಸಿರಿಯಲಿ” & “ಕಂಬದ ಮ್ಯಾಲಿನ ಬೊಂಬೆಯೇ” ಹಾಡುಗಳನ್ನ ಹಾಡಿ ನಂ ಗೆಳೆಯರ ಮತ್ತು ಶಿಕ್ಷಕರ ಪ್ರಶಂಸೆ ಪಡೆದಿದ್ದೇನೋ ಗೊತ್ತಿಲ್ಲ. ಆಗ ಅದರ ರಚನೆ ನಿಮ್ಮದೆಂಬ ವಿಚಾರ ನನಗೆ ಗೊತ್ತಿರಲಿಲ್ಲ. ಆ ವಯಸ್ಸಿಗೆ ಅದರ ಅವಶ್ಯಕತೆಯೂ ಅಷ್ಟಾಗಿ ಅನಿವಾರ್ಯತೆ ಅನ್ನಿಸಿರಲಿಲ್ಲ. ನೀವೇ ಅದರ ರಚನೆಕಾರರು ಅಂತ ಗೊತ್ತಾಗಿ ಆ ಹಾಡುಗಳ ಹಿಂದಿನ ಕಥೆ ಗೊತ್ತಾಗಿ ನಿಮ್ಮೇಲಿನ ಅಭಿಮಾನ ಹಿಗ್ಗಿದ್ದು ಬಂದು ಮಣಿಕಾಂತ್ ಸರ್ ರವರ ಹಾಡು ಹುಟ್ಟಿದ ಸಮಯ ಓದಿದ ನಂತರ. ಈಗಲೂ ಸ್ನಾನ ಮಾಡಿಕೊಳ್ಳುವಾಗಲೆಲ್ಲ ಶ್ರದ್ಧೆ ಇಂದ ಆ ಹಾಡುಗಳನ್ನ ಹಾಡಿ ಕೊಳ್ಳುವುದುಂಟು. ನೆಚ್ಚಿನ ಹಾಡುಗಳ ಪಟ್ಟಿಯಲ್ಲಿ ಟಾಪ್ ಟೆನ್ ಸ್ಥಾನ ಗಳಲ್ಲಿ ಇವೆರಡೂ ಹಾಡು ಈಗಲೂ ಉಂಟು. ಆ ಸಿನಿಮಾದ ಎಲ್ಲಾ ಹಾಡುಗಳು ಯಾವತ್ತಿಗೂ ಎವರ್ಗ್ರೀನ್ ಅನ್ನೋದು ಯಾವತ್ತಿಗೂ ಸುಳ್ಳಲ್ಲ.

    ಇನ್ನು ಕಾರ್ನಾಡ್ ಸಾರ್ ರವರ ಈ ಬಗೆಯ ವರ್ತನೆ ನಿಜಕ್ಕೂ ಬೇಸರ ತರಿಸುವಂಥದ್ದು ಸಾರ್.. ಹೆಸರಿಗಿಲ್ಲದ ನಮ್ಮಂತವರ ಸಣ್ಣ ಸಣ್ಣ ಹನಿಗಳನ್ನ.. ಹೆಸರಿಗಿಲ್ಲದ ಮತ್ತೊಬ್ಬರು ಬಳಸಿಕೊಳ್ಳುವಾಗಲೇ ಅಷ್ಟು ನೋಯುತ್ತದೆ.. ಇನ್ನು ಘನತೆವೆತ್ತವರು ಹಾಗೆ ಮತ್ತೊಬ್ಬ ಘನತೆವೆತ್ತವರ ಬರಹವನ್ನ ಯಾವ ಎಗ್ಗಿಲ್ಲದೆ ಬಳಸಿಕೊಳ್ಳುವುದೆಂದರೆ ಅದು ಉಂಟು ಮಾಡಬಲ್ಲ ಕ್ಷೋಭೆ ಯಾವ ಮಟ್ಟಿನದ್ದು ಅನ್ನೋದು ಊಹಿಸಲು ಕೂಡ ಕೊಂಚ ಕಷ್ಟವೇ. ಕನ್ನಡ ಸಾಹಿತ್ಯ ಲೋಕದ ಒಬ್ಬ ಧೀಮಂತ ಬರಹಗಾರ, ನಾಟಕಕಾರ, ಭಾರತೀಯ ಸಾಹಿತ್ಯ ಲೋಕದ ನೊಬೆಲ್ ಗೆ ಸರಿಸಮನಾದ ಜ್ಞಾನಪೀಠ ವಿಜೇತ ಮಹಾನ್ ವ್ಯಕ್ತಿಯೊಬ್ಬರ ಇಂಥಾ ಸಣ್ಣತನಗಳು ಯಾವತ್ತಿಗೂ ಮಾಮೂಲಿನದಕ್ಕಿಂಥ ಹೆಚ್ಚಿನ ಬೇಸರವನ್ನೇ ಉಂಟು ಮಾಡುತ್ತವೆ.

    ಸುನೀಲ್ ರಾವ್ ರವರ ಒಂದು ಪ್ರಶ್ನೆ.. ದೊಡ್ಡವರ ಸಣ್ಣತನದ ಬಗ್ಗೆ ಒಂದು ಒಳ್ಳೆ ಉದಾಹರಣೆಯಾಗಬಲ್ಲ ಬರಹವನ್ನ ಉಂಟು ಮಾಡಿಸಿದ್ದು ಸುಳ್ಳಲ್ಲ. ಮತ್ತು ಯಾವ ಮತ್ತು ಯಾರ ಭಯವಿಲ್ಲದೆ ಇದನ್ನು ಪ್ರಕಟಿಸಿದ ನಿಮ್ಮ ಖಂಡಿತವಾದಿತನದ ದಿಟ್ಟತೆ ಮತ್ತು ಆತ್ಮ ವಿಶ್ವಾಸ ನಿಮ್ಮೇಲಿನ ಅಭಿಮಾನವನ್ನ ಇನ್ನೂ ಹಿಗ್ಗಿಸಿದ್ದು ಸುಳ್ಳಲ್ಲ.

    ನೀವು ಮತ್ತು ನಿಮ್ಮ ಬರಹ ಮತ್ತಷ್ಟು ಇಷ್ಟವಾದ್ರಿ ಸಾರ್.. 🙂

    ಪ್ರತಿಕ್ರಿಯೆ
  28. -ರವಿ ಮೂರ್ನಾಡು,ಕ್ಯಾಮರೂನ್

    ಇಂತಹ ತಪ್ಪುಗಳಾಗುವುದು ಸಹಜ.ಖ್ಯಾತಿವೆತ್ತವರಾದರೂ ಸರಿ ಸಾಮಾನ್ಯರಾದರೂ ಸರಿ. ಎಲ್ಲರೂ ಮನಸ್ಸಿದ್ದವರು,ಹೊಂದಿಕೊಂಡು ಹೋಗುವ ಪ್ರಜ್ಞೆ ಉಳ್ಳವರು.ಮಾನವೀಯರಾದ ನಾವು ನಮ್ಮಲ್ಲೇ ದೊಡ್ಡದು ಮತ್ತು ಸಣ್ಣದನ್ನು ಸೃಷ್ಟಿಸಿಕೊಂಡಿದ್ದೇವೆ.
    ಗೌರವಾನ್ವಿತ ಗೋಪಾಲ ವಾಪಪೇಯಿ ಅವರಿಗೆ ಗೌರವ ಸಿಗಲಿಲ್ಲ ಅನ್ನುವ ದೊಡ್ಡ ವಿಚಾರ ಅವರನ್ನು ಅಷ್ಟಾಗಿ ಕಾಡಲಿಲ್ಲ.ತನ್ನ ಪದ್ಯದ ಪರದೇಶಿತನವನ್ನು ಅವರು ಒಪ್ಪಲಿಲ್ಲ.ನಾಡಿನಾದ್ಯಂತ ಅವರ ಪದ್ಯ ಕೇಳುವಾಗ ಹೃದಯ ಕಂಪಿಸಿದ ಅನಾಥತೆ ಸ್ಪಷ್ಟವಾಗುತ್ತಿದೆ. ಅವರ “ಮಗುವಿನ ಹಕ್ಕು” ಅವರಿಗೇ ಸಿಕ್ಕೇ ಸಿಗುತ್ತದೆ. ಅದನ್ನು ಗೌರಾವಾನ್ವಿತ ಕಾರ್ನಾಡರು ಪೂರೈಸುವರು ಅನ್ನುವ ನಂಬಿಕೆ ಇದೆ.
    ಈ ವಿಚಾರವನ್ನು ಖುದ್ದು ಕುಳಿತು ಸಮಾಧಾನ ಪಡಿಸಿಕೊಳ್ಳುವ ಅವಕಾಶಗಳು ಮುಕ್ತವಾಗಿವೆ. ತಾಯಿ ಸರಸ್ವತಿಯ ಮಕ್ಕಳು ಮುನಿಸು-ಮನಸ್ತಾಪ ಬೇಡ.

    ಪ್ರತಿಕ್ರಿಯೆ
  29. samyuktha

    ಮಾನ್ಯ ತಿರುಮಲೇಶ್ ಅವರು ತಿಳಿಸಿದಂತೆ, ಬಹುಷಃ ಇದು ಅಚಾತುರ್ಯದಿಂದ ನಡೆದ ಘಟನೆ ಇದ್ದಿರಬಹುದು. ಆದರೆ ಆ ವಿಚಾರ ತಿಳಿದ ತಕ್ಷಣ ಕಾರ್ನಾಡರು ಒಂದು ಕ್ಷಮೆಯಾಚನೆ ಪತ್ರವನ್ನು ಬಹಿರಂಗವಾಗಿ (ಪತ್ರಿಕೆಯಲ್ಲಿ ಇತ್ಯಾದಿ) ಸೂಚಿಸಬೇಕಿತ್ತು. ಅದರ ಹೊರತಾಗಿ, ಸದ್ದಿಲ್ಲದೇ ಒಂದು ಪತ್ರದ ಮೂಲಕ “ಇನ್ನು ನಿಮ್ಮ ಹಾಡು ಬೇಡ” ಎಂದು ಹೇಳುವುದು ಸೂಕ್ತವಲ್ಲದ ವಿಚಾರ!

    ಪ್ರತಿಕ್ರಿಯೆ
  30. Dr. Azad Ismail Saheb

    ನಲ್ಮೆಯ ವಾಜಪೇಯಿ ಸರ್
    ನನಗೆ ಮೊದಲಿಗೆ ಕಾಳಜಿ ಸದಾಚಾರ ತೋರಿದ ಕಾರ್ನಾಡರು ನಂತರ ಬಹಳ ಅಗ್ಗವಾಗಿ ನಡೆದುಕೊಂಡಿದ್ದು ಜೀರ್ಣವಾಗದ ವಿಷಯವಾಗಿದೆ. ಏಕೆ ಹೀಗೆ…?? ಉದಾಸೀನತೆಯೇ ಅಥವಾ… ಎಲ್ಲಾದರೂ ಹೆಸ್ರಾಂತರ ಕೃತಿ ಮತ್ತು ಪ್ರಕಾಶನ ಪ್ರಕ್ರಿಯೆ ಮಧ್ಯೆ ಎಡರು ತೊಡರುಗಳೇ…ಅಥವಾ ಮಾಹಿತಿ ಲೋಪಗಳೇ…ಅರ್ಥವಾಗುತ್ತಿಲ್ಲ. ಒಂದಂತೂ ನಿಜ ಬಹುಶಃ ನೀವಿಬ್ಬರೂ ಪರಸ್ಪರ ಮುಖಾಮುಖಿ ಕೂತು ಚರ್ಚಿಸಿದರೆ ವಿಷಯ ಬಹಳ ಸ್ಪಷ್ಟವಾಗಬಹುದು ಎನ್ನುವುದು. ಆದರೆ ತಪ್ಪು ಆಗಿರುವುದು ಪ್ರಕಾಶನದ (ಲೇಖಕ ಮತ್ತು ಮುದ್ರಕ ಇಬ್ಬರೂ ಜವಾಬ್ದಾರರು) ಪ್ರಕ್ರಿಯೆಯಿಂದ ಹಾಗಾಗಿ ನೇರ ಮುಖತಃ ಭೇಟಿಗೆ ಪ್ರಯತ್ನಿಸಿ, ಇದು ಖಂಡಿತಾ ಪರಿಹಾರವಾಗುವ ಸಮಸ್ಯೆ ಎನಿಸುತ್ತದೆ (ನನ್ನ ವೈಯಕ್ತಿಕ ಅನಿಸಿಕೆ).

    ಪ್ರತಿಕ್ರಿಯೆ
  31. renuka manjunath

    ವಾಜಪೇಯಿ ಅವರು ಬರೆದಂತೆ…. ಅವರ ಮನದ ಭಾರವನ್ನು ‘ಮಾಯ’ದಂತೆ ಕಾರ್ನಾಡರು ನೋಡಿಕೊಳ್ಳುತ್ತಿದ್ದಾರೆ!

    ಪ್ರತಿಕ್ರಿಯೆ
  32. hridayashiva

    ಇದೊಂದು ಯಕ್ಷಪ್ರಶ್ನೆ!
    ಇದಕ್ಕೆ ಗಿರೀಶ ಕಾರ್ನಾಡರೇ ಉತ್ತರಿಸಬೇಕು.ಹಾಗೊಂದು ವೇಳೆ ಜಾಣಮರೆವಿನಿಂದ ಈ ತಪ್ಪಿನಲ್ಲಿ ಕಾರ್ನಾಡರೂ ಭಾಗಿಯಾಗಿದ್ದಲ್ಲಿ ಅದು ಕನ್ನಡ ಸಾಹಿತ್ಯ ಲೋಕದ ದುರ್ದೈವ.ಸಾಹಿತ್ಯದ ಮಹತ್ವ ಹಾಗು ಸಾಹಿತಿಗಿರಬೇಕಾದ ಸೂಕ್ಷ್ಮ ಬದ್ದತೆಗೆ ಭಂಗ ಉಂಟಾಗುತ್ತದೆ.ಹಾಗಾಗದಿರಲಿ ಅಂತ ಬಯಸುತ್ತೇನೆ.ಕಾರ್ನಾಡರ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
    -ಹೃದಯಶಿವ

    ಪ್ರತಿಕ್ರಿಯೆ
  33. ಸವಿತ ಇನಾಮದಾರ್

    ಛೇ..ಛೇ…ನಿಮ್ಮ ಹಾಡನ್ನ ಬಳಸಿ, ಪ್ರಸಿಧ್ಧಿಗಳಿಸಿ, ನಿಮ್ಮನ್ನ ಮರತಾಗ ನೀವು ಹ್ಯಾಂಗ ಒದ್ದಾಡಿರಬೇಕಂತ ಅರ್ಥ ಆಗ್ತದರೀ ಕಾಕಾ.. ‘ಮಾಯಾದೋ ಮನದ ಭಾರ’ ಇದು ನಿಮ್ಮ ಮನದ ಭಾರವನ್ನ ಹೆಚ್ಚಿಸಿದ್ದು ಮತ್ತ ಕಾರ್ನಾಡರಂಥವರಿಂದ ಈ ರೀತಿಯ ವಚನಭಂಗವಾದದ್ದನ್ನು ನೋಡಿ ಖರೇನ ಕೆಟ್ಟನಸ್ತದ. ಕೃತಿ ಚೌರ್ಯದ ಬಗ್ಗೆ ಕೇಳಿದ್ದೆ… ಇದಂತೂ ಅದಕ್ಕೂ ಮುಂದ ಹೋತಲ್ಲಾ?? ಛೇ..ಛೇ.. ಇನ್ನೊಮ್ಮೆ ಅವರ ಜೋಡಿ ಮಾತಾಡಿ ನೋಡ್ರಿ..ನಮ್ಮೆಲ್ಲರೊಂದಿಗೆ ನಿಮ್ಮ ನೋವನ್ನ ಹಂಚಿಕೊಂಡಿದ್ದಕ್ಕ ಧನ್ಯವಾದಗಳು..

    ಪ್ರತಿಕ್ರಿಯೆ
  34. ಶ್ರೀವತ್ಸ ಜೋಶಿ

    ಕಾರ್ನಾಡರು ದೀಡ ಸಾವಿರ ರೂಪಾಯಿಗಳನ್ನು ನಿಮಗೆ ಪಾವತಿಸಿದಾಗ ಆ ಹಾಡುಗಳೆಲ್ಲ ತಮ್ಮವೇ ಆಗಿಹೋದವು ಎಂದು (ತಪ್ಪಾಗಿ) ತಿಳಿದುಕೊಂಡಿದ್ದಾರೆ. “ಗೌರವ ಧನವಿದು ಎಂದರು ಒಂದೆ ಮೆಚ್ಚಿಗೆಗಾಗಿ ಎಂದರು ಒಂದೆ ವಿಶ್ವಾಸಕೆ ಕಿರುಗಾಣಿಕೆ ಎಂದರು ಎಲ್ಲ ಒಂದೆ ಲಂಚದ ಕಂತೆ” ಎಂಬ ಚಿತ್ರಗೀತೆಯ ಸಾಲಿನಂತೆ ಒಂಥರದಲ್ಲಿ ಆ ದೀಡ ಸಾವಿರ ರೂಪಾಯಿ ಅವರು ನಿಮಗೆ ಕೊಟ್ಟ ಲಂಚ (ತಪ್ಪು ತಿಳಿಯಬೇಡಿ, ನಿಮ್ಮ ದೃಷ್ಟಿಕೋನದಿಂದ ಅಲ್ಲ ಆ ಪದವನ್ನು ನಾನಿಲ್ಲಿ ಬಳಸುತ್ತಿರುವುದು). ಹಾಗಾಗಿಯೇ ನಿಮ್ಮ ಅನುಮತಿ ಸಿಗುವವರೆಗೆ ಅತಿವಿನಯ ತೋರಿಸಿ ಆಮೇಲೆ “… ಧೂರ್ತಲಕ್ಷಣಂ” ಗಾದೆಮಾತಿನ ಉತ್ತರಾರ್ಧವನ್ನು ನಿಜಗೊಳಿಸಿದರು.

    ಕಾರ್ನಾಡರು ಇದನ್ನು ಅರ್ಥಮಾಡಿಕೊಳ್ಳಬೇಕು. ಗೋಪಾಲವಾಜpayee ಹೆಸರೇ ಸೂಚಿಸುವಂತೆ [ಮತ್ತೊಮ್ಮೆ ಕ್ಷಮೆಯಿರಲಿ. ವಿಷಯವನ್ನು ಹಗುರವಾಗಿಸುವುದಕ್ಕಲ್ಲ. ಸಂದರ್ಭಕ್ಕೆ ಹೊಂದಿಕೊಳ್ಳುತ್ತದೆ ಎಂಬ ಕಾರಣದಿಂದ ಹೆಸರಿನ ಅಕ್ಷರಗಳಿಂದ ಪದವಿನೋದ ಮಾಡಿದ್ದೇನೆ] ಹಾಡುಗಳನ್ನು ಬರೆದ ಗೋಪಾಲ ವಾಜಪೇಯಿಯವರು ಬರೀ ದೀಡ ಸಾವಿರ ರೂಪಾಯಿಗಳಿಗಷ್ಟೇ payee ಅಲ್ಲ. ಆ ಹಾಡುಗಳಿಗೆ ನೀವು ಗೌರವಧನ ಸಲ್ಲಿಸಿದ್ದರೂ ಅವು ಗೋಪಾಲವಾಜಪೇಯಿಯವರ intellectual property ಆಗಿಯೇ ಉಳಿಯುತ್ತವೆ.

    ಈ ವಿಚಾರ ಇಲ್ಲಿ ಮಂಥನವಾಗುವುದಕ್ಕೆ ಕಾರಣರಾದ ಗೋಪಾಲ ವಾಜಪೇಯಿ, ಸುನೀಲ್ ರಾವ್ ಮತ್ತು ಅವಧಿ ಸಂಪಾದಕವರ್ಗ, ಕಾರ್ನಾಡರ ನಡವಳಿಕೆಯನ್ನು ಸಂಸ್ಕಾರವಂತ ಪ್ರಜ್ಞೆಯಿಂದ ಒಳ್ಳೆಯಮಾತುಗಳಲ್ಲಿ ಖಂಡಿಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಸ್ನೇಹಿತರು – ಎಲ್ಲರಿಗೂ ನನ್ನ ಥ್ಯಾಂಕ್ಸ್ ಸಲ್ಲುತ್ತದೆ.

    ಪ್ರತಿಕ್ರಿಯೆ
  35. harish shetty,shirva

    ವಾಜಪೇಯಿ ಸರ್, ಇದು ಅಚಾತುರ್ಯದಿಂದ ನಡೆದ ಘಟನೆ ಇದ್ದಿರಬಹುದು. ಯಾಕೆಂದರೆ ನೀವು ತಿಳಿಸಿದ ಹಾಗೆ ಇದು ನಿಮ್ಮ ಗೀತೆಯೆಂದು ಆ ತನಕ ತುಂಬಾ ಜನರು ತಿಳಿದಿದ್ದರು. ಕಾರ್ನಾಡ್ ರವರಿಗೆ ಈ ವಿಷಯ ತಿಳಿದ ನಂತರ ಅವರು ಹೀಗೆ ಏಕೆ ಮಾಡುವರು , ಇದು ಅರ್ಥವಾಗದ ವಿಷಯ. ಇದು ಯಾರಿಗೂ ತಿಳಿಯದು ಎಂದು ಅವರು ಎನಿಸುವುದು ಸಹ ಹೇಗೆ, ನೀವು ಹೇಳಿದ ಪ್ರಕಾರ ನಾಗಮಂಡಲ’ ನಾಟಕದ (ನಾಟಕ ತಂಡದ ಪ್ರಥಮ ಪ್ರಯೋಗದಲ್ಲಿ ದುಡಿದ ನಟವರ್ಗ ಮತ್ತು ತಾಂತ್ರಿಕ ವರ್ಗದ ಪೂರ್ಣ ಪಟ್ಟಿಯನ್ನು ಕೊಡಲಾಗಿತ್ತು. ಆ ಪಟ್ಟಿಯಲ್ಲಿ ‘ಹೊಸ ಗೀತೆಗಳು’ ಎಂತಲೋ ಏನೋ ನನ್ನ ಹೆಸರೂ ನಮೂದಾಗಿತ್ತು) , ಕಾರ್ನಾಡ್ ರವರಿಗೆ ಇಲ್ಲಿಂದಲೇ ಇದು ನೀವು ಬರೆದ ಗೀತೆಯೆಂದು ತಿಳಿದಿರಬೇಕಲ್ಲವೇ. ಆ ನಂತರ ಒಬ್ಬ ಸುಸಂಸ್ಕೃತ ಮನುಷ್ಯ ಹೀಗೆ ಮಾಡಲಾರ.
    ನನ್ನ ವಿಚಾರದಲ್ಲಿ ಇದರ ಬಗ್ಗೆ ನೀವೇ ನೇರ ಅವರ ಒಟ್ಟಿಗೆ ಚರ್ಚೆ ಮಾಡಿದರೆ ಒಳಿತು .

    ಪ್ರತಿಕ್ರಿಯೆ
  36. ಮಂಜುನಾಥ ಕೊಳ್ಳೇಗಾಲ

    ಇದು ನಿಜಕ್ಕೂ ನೋವಿನ ವಿಚಾರ. ತಿರುಮಲೇಶರು ಊಹಿಸಿದಂತೆ ಇದು ಕಣ್ತಪ್ಪಿನ ದೋಷವಿರಬಹುದು ಏಕೆಂದರೆ ಸ್ವತಃ ಪ್ರತಿಭಾವಂತನಾದ ನಾಟಕಕಾರನಿಗೆ ಮತ್ತೊಬ್ಬರ ಹಾಡನ್ನು ಕದ್ದು ತನ್ನದೆಂದುಕೊಳ್ಳುವ ಅಗತ್ಯ ತೋರುವುದಿಲ್ಲ; ಆದ್ದರಿಂದ ತಾನು ಬಳಸಿಕೊಳ್ಳುವ ಹಾಡಿಗಾಗಿ ಸಹ ಲೇಖಕನೊಬ್ಬನಿಗೆ ಕ್ರೆಡಿಟ್ ಕೊಡುವುದರಿಂದ ಕಾರ್ನಾಡರಿಗೆ ನಷ್ಟವೇನು ಇಲ್ಲ. ಆದರೆ ಅದು ಕೇವಲ ಕಣ್ತಪ್ಪೆಂದುಕೊಂಡರೂ, ಅದರಿಂದ ನೋವಿಗೊಳಗಾದ ಲೇಖಕರೇ ಖುದ್ದು ಈ ವಿಷಯವನ್ನು ತಮ್ಮ ಗಮನಕ್ಕೆ ತಂದಾಗಲಾದರೂ ಆದ ತಪ್ಪನ್ನು ತಿದ್ದಿಕೊಂಡು ಕ್ಷಮೆ ಯಾಚಿಸುವ ಕೆಲಸ ಆಗಬೇಕಿತ್ತು. ಅದು ಆಗದಿರುವುದು ಕಾರ್ನಾಡರ ದುರಹಂಕಾರವನ್ನೂ, egoವನ್ನೂ, ಸಣ್ಣತನವನ್ನೂ ಸೂಚಿಸುತ್ತದೆ. ಕೇವಲ ತಪ್ಪನ್ನು ತಿದ್ದಿಕೊಳ್ಳಲು ಹೇಸಿ ಸುಮ್ಮನಿದ್ದರೆ, ಅಕ್ಷರಗಳ್ಳತನದ ಅಪವಾದವೇ ಮೆಟ್ಟಿಕೊಳ್ಳುತ್ತದೆಯಲ್ಲವೇ? ಈ ಅಪವಾದ ಕೇವಲ ತಪ್ಪು ತಿದ್ದಿಕೊಂಡು ಕ್ಷಮೆ ಯಾಚಿಸುವ ’ಅವಮಾನ’ಕ್ಕಿಂತ ಚಿಕ್ಕದೇ? ಸೂಕ್ಷ್ಮಮನಸ್ಸಿನವನೆಂದುಕೊಳ್ಳುವ ಪ್ರತಿಭಾವಂತ ವ್ಯಕ್ತಿಯೊಬ್ಬ ಇದನ್ನು ಯೋಚಿಸಲಾಗದ್ದು ಅಶ್ಚರ್ಯ!

    ಪ್ರತಿಕ್ರಿಯೆ
  37. Triveni

    ಕಾಕಾ, ನಿಮ್ಮಂಥಾ ದೊಡ್ಡೋರಿಗೆ ಈ ಗತಿ ಆದರೆ ಸಣ್ಣಪುಟ್ಟೋರ ಪಾಡೇನು ಹೇಳ್ರಿ!!

    ಸುನೀಲ, ಕೇಳಿದರೆ ಇಂಥಾ ಪ್ರಶ್ನೆ ಕೇಳಬೇಕು! ಒಂದು ಪ್ರಶ್ನೆಯಿಂದ ಇಡೀ ಇತಿಹಾಸ ಹೊರಬರಬೇಕು! ಪತ್ರಿಕೋದ್ಯಮಕ್ಕೆ ಹೇಳಿಮಾಡಿಸಿದ ವ್ಯಕ್ತಿ! 🙂

    ಪ್ರತಿಕ್ರಿಯೆ
  38. prasad raxidi

    “ಬಡವ ‘…’ ತಿಂದ್ರೆ ಹೊಟ್ಟೆಗಿಲ್ಲದೆ, ಬಲ್ಲಿದ ತಿಂದ್ರೆ ಮದ್ದಿಗೆ'” ಗಾದೆ ಮಾತು….

    ಪ್ರತಿಕ್ರಿಯೆ
  39. prakash hegde

    ಅಚಾತುರ್ಯ ಆಗಿರಬಹುದು….

    ಸರಿ.. ಒಪ್ಪೋಣ…

    ಅದನ್ನು ತಿದ್ದಿಕೊಳ್ಳಬಹುದಲ್ಲವೆ ?

    ಈಗಲಾದರೂ ಕಾಲ ಮಿಂಚಿಲ್ಲ…

    ಈ ಘಟನೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ…
    ಹೇಗೆ ಸ್ಪಂದಿಸುತ್ತಾರೆ ಎನ್ನುವದೂ ಕೂಡ ಬಹಳ ಮಹತ್ವ…..

    ಇಲ್ಲವಾದಲ್ಲಿ ….
    ಸಾಹಿತ್ಯದ ಇತಿಹಾಸದಲ್ಲಿ ಇದು ಕಪ್ಪುಚುಕ್ಕೆಯಾಗಿ ಉಳಿದು ಬಿಡುತ್ತದೆ ಅಲ್ಲವೆ ?

    ಪ್ರತಿಕ್ರಿಯೆ
  40. Balasubrahmanya Nimmolagobba Balu

    ಜ್ಞಾನ ಪೀಟ ಪಡೆದ ಗಿರೀಶ್ ಕಾರ್ನಾಡರು ಇಷ್ಟು ಸಣ್ಣತನ ತೋರಿದ್ದು, ಅಕ್ಷರಗಳಿಗೆ ತೋರಿದ ಅನಾದರ , ಖಂಡಿತ ಖಂಡನೀಯ. ಇದನ್ನು ನಾವೆಲ್ಲಾ ವಿರೋಧಿಸೋಣ. ತನ್ನ ತಪ್ಪನ್ನು ತಿದ್ದಿಕೊಳ್ಳದ ಇವರು ಎಲ್ಲರ ಗೌರವ ಪಡೆಯಲು ಅನರ್ಹರು .

    ಪ್ರತಿಕ್ರಿಯೆ
  41. ನಾಗೇಂದ್ರ ಶಾ

    ವೈ.ಎನ್ಕೆ. ಹೇಳ್ತದ್ರು. ” ಜ್ಞಾನಪೀಠಿಗಳಿಗೆಲ್ಲಾ ಜ್ಞಾನ ತಲೆಲಿರಲ್ಲ. ಪೀಠ (ಹಿಂಬದುಯದ್ದು) ದಲ್ಲಿರತ್ತೆ” ಅಂತ.

    ಪ್ರತಿಕ್ರಿಯೆ
  42. Badarinath Palavalli

    ಮನುಜ ಬೆಳೆದಂತೆಲ್ಲ ಅವನ ಮನಸೂ ವಿಶಾಲವಾಗಬೇಕು. ಆದರೆ ಕೆಲವರು ಸಂಕುಕಿತಗೊಳ್ಳುತ್ತಾ ಕಿಪ್ಪೊಳಗೆ ತೂರಿಕೊಳ್ಳುತ್ತಾರೆ. ನಕ್ಷತ್ರ ಸ್ಪೋಟಕ್ಕೆ ಇದು ಕ್ಷಣ ಗಣನೆ! 🙁

    ಪ್ರತಿಕ್ರಿಯೆ
  43. Ananda Prasad

    ಸಾಹಿತಿಗಳು ಹೆಚ್ಚು ಸಂವೇದನಾಶೀಲರಾಗಿರಬೇಕು ಹಾಗೂ ಸಮಾಜಕ್ಕೆ ಮಾರ್ಗದರ್ಶಕರಾಗಿರಬೇಕು. ಇಲ್ಲದಿದ್ದರೆ ಸಾಹಿತಿಗಳಿಗೂ ನಿರ್ಲಜ್ಜ ವ್ಯಕ್ತಿತ್ವ ಹೊಂದಿರುವ (ಹೆಚ್ಚಿನ) ರಾಜಕಾರಣಿಗಳಿಗೂ ವ್ಯೆತ್ಯಾಸವೇ ಇರುವುದಿಲ್ಲ. ಗೋಪಾಲ ವಾಜಪೇಯಿಯವರ ಕವನದ ವಿಷಯದಲ್ಲಿ ಕಾರ್ನಾಡರು ನಡೆದುಕೊಂಡ ಪರಿ ನಿಜಕ್ಕೂ ನಾಚಿಕೆಗೇಡಿನದು. ಇದು ಅಚಾತುರ್ಯದಿಂದ ನಡೆದಿರುವಂತೆ ಕಂಡುಬರುವುದಿಲ್ಲ. ಇಲ್ಲಿ ತಮ್ಮ ನಡವಳಿಕೆಯಿಂದ ಕಾರ್ನಾಡರು ತಮ್ಮನ್ನು ತಾವೇ ಸಣ್ಣವನನ್ನಾಗಿ ಮಾಡಿಕೊಂಡಿದ್ದಾರೆ. ಒಬ್ಬ ಬರಹಗಾರ ಇನ್ನೊಬ್ಬ ಬರಹಗಾರನನ್ನು ಗೌರವದಿಂದ ನಡೆಸಿಕೊಳ್ಳುವ ಪರಿ ಇದಲ್ಲ.

    ಪ್ರತಿಕ್ರಿಯೆ
  44. Roopa Satish

    Gopal Sir,
    Doddavaru, tilidavaru, the so called Intellectuals!
    Heegella yecchara tappi nadedare
    avarannu paalisuva kiriyarige Enanannu bodhisuttaare?

    ಪ್ರತಿಕ್ರಿಯೆ
  45. Ravi Tirumalai

    ನಾ ಅವರನ್ನು ಅವ್ರು ಬೆಂಗಳೂರಿನಲ್ಲಿ ಇದ್ದಾಗ ಪ್ರತಿನಿತ್ಯ ನೋಡುತ್ತೇನೆ. ಅವ್ರು ಸಮಾಜಮುಖಿಯಲ್ಲ ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತೆ. ತಮ್ಮನ್ನು ತಾವು ಬಹಳ ದೊಡ್ಡವರೆಂದು ತಿಳಿದುಕೊಂಡಿರುವವರೆಲ್ಲ, ದೊಡ್ದವರಾಗಲು ಸಾಧ್ಯವಿಲ್ಲ. ವಾಜಪೇಯಿಯವರೇ ಅವರು ತಮ್ಮ ಸಣ್ಣತನ ತೋರಿಸಲಿ. ಹಾಗಾದಾಗ ನೀವು ಉನ್ನತ ಸ್ಥಾನದಲ್ಲಿ ನಿಲ್ಲುತ್ತೀರಿ. ಚಿಂತೆ ಮಾಡ ಬೇಡಿ.

    ಪ್ರತಿಕ್ರಿಯೆ
  46. Ahalya Ballal

    ವಾಜಪೇಯಿ ಸರ್, ನಿಮ್ಮ ಹಾಡು ಬಳಕೆಯಾಗಿರುವ ರೀತಿ ಉಚಿತವಲ್ಲ, ಅದು ಸ್ಪಷ್ಟ. ಇಂತಹ ಸನ್ನಿವೇಶಗಳಲ್ಲಿ ಸಂಬಂಧಪಟ್ಟವರ ಜೊತೆ ನೇರ ಮುಖತಃ ಭೇಟಿಯಿಂದ ವಾತಾವರಣ ಬಹಳಷ್ಟು ತಿಳಿಯಾಗಬಲ್ಲದಲ್ಲವೆ? ಇನ್ನು ಮುಂದೆ ಇಂತಹ ದುರದೃಷ್ಟಕರ ಲೋಪಗಳು ಯಾರ ಜೊತೆಯೂ ಆಗದಿರಲಿ.

    ಪ್ರತಿಕ್ರಿಯೆ
  47. Prasad V Murthy

    ನಿಮ್ಮ ಮನದ ದುಗುಡ ಅರ್ಥವಾಗುತ್ತದೆ ಗೋವಾ ಸರ್, ಹಿರಿಯರೆನ್ನಿಸಿಕೊಂಡವರ ಸಣ್ಣತನಗಳು ಹೇಗೆ ಬೇರೆಯವರ ದುಗುಡ ಹೆಚ್ಚಿಸುತ್ತದೆಂಬುದಕ್ಕೊಂದು ಉದಾಹರಣೆ ಈ ಘಟನೆ. ಖಾಯಂ ಆಗಿ ನಿಮ್ಮ ಅನುಮತಿಯನ್ನು ಹಿಂಪಡೆದ ನಂತರವೂ ನಿಮ್ಮ ‘ಮಾಯಾದೋ ಮನದ ಭಾರ…’ ಹಾಡನ್ನು ಬಳಸಿಕೊಂಡಿದ್ದು ಜ್ಞಾನಪೀಠಾ ಪುರಸ್ಕೃತರಿಗೆ ತಕ್ಕುದಾದ ಕೆಲಸವಲ್ಲ. ತಾವೇ ಒಬ್ಬ ಹೆಸರಾಂತ ನಾಟಕಕಾರರಾಗಿ ಮತ್ತೊಬ್ಬ ಕವಿ ಮತ್ತು ನಾಟಕಕಾರನ ಚಡಪಡಿಕೆಯನ್ನು ಅರಿಯದಿದ್ದುದು ಸಾಹಿತ್ಯ ಕ್ಷೇತ್ರದ ದುರಂತವೇ ಸರಿ. “ನನ್ನ ಹಾಡಿಗೆ ಮತ್ತೆಂದೂ ಇಂಥ ಪರದೇಶಿತನ ಮತ್ತು ಅನಾಥತೆಗಳು ಕಾಡದಿರಲಿ” ಎನ್ನುವಾಗಿನ ನಿಮ್ಮ ದುಗುಡವನ್ನು ಅರಿಯುವ ಕೆಲಸ ಕಾರ್ನಾಡರು ಮಾಡಬೇಕಿತ್ತು. ಈಗಲಾದರೂ ಹಿರಿಯರೆನ್ನಿಸಿಕೊಂಡವರು ಈ ಬಗ್ಗೆ ಸ್ಪಷ್ಠೀಕರಣ ಕೊಟ್ಟು, ಆದ ತಪ್ಪನ್ನು ಜವಾಬ್ದಾರಿಯುತವಾಗಿ ಸರಿಪಡಿಸಬೇಕು. ಅದು ಅವರ ಕರ್ತವ್ಯವೂ ಹೌದು!

    – ಪ್ರಸಾದ್.ಡಿ.ವಿ.

    ಪ್ರತಿಕ್ರಿಯೆ
  48. Rekha Nataraj

    ದೊಡ್ಡವರ ಸಣ್ಣ ತನಗಳು ಅರ್ಥವೇ ಆಗುವುದಿಲ್ಲ !! ಇದರಿಂದ ಬೇರೆಯವರಿಗೆ ಆಗುವ ನೋವು ಅವರಿಗೆ ತಿಳಿಯುವುದು ಯಾವಾಗ ? ನೀವು ಮನಸಿಗೆ ಹಚ್ಚಿಕೊಳ್ಳಬೇಡಿ ಸರ್ ! ಇದೇ ಕನ್ನಡ ನಾಡಿಗೆ ನಿಮ್ಮ ಬಗ್ಗೆ ಗೊತ್ತಿದೆ …. ಕರ್ನಾಡರಿಗೂ ತಮ್ಮ ತಪ್ಪಿನ ಅರಿವು ಬೇಗ ಆಗಲಿ ಎಂದು ಆಶಿಸೋಣ …:(

    ಪ್ರತಿಕ್ರಿಯೆ
  49. Sunaath

    Shocking! ನ್ಯಾಯಾಲಯದಿಂದ ನ್ಯಾಯ ಪಡೆಯಬಹುದೆ ಎನ್ನುವುದನ್ನು ಪರಿಶೀಲಿಸುವಿರಾ!

    ಪ್ರತಿಕ್ರಿಯೆ
  50. Lakshminarayana Bhatta

    ಕಾರ್ನಾಡರು ತಮ್ಮ ಸಣ್ಣತನ-ತಿಕ್ಕಲುತನಗಳಿಂದ ಹಲವು ಸಂದರ್ಭಗಳಲ್ಲಿ ( ಎಸ್‌ ಎಲ್‌ ಭೈರಪ್ಪನವರ ವಿಷಯವೂ ಸೇರಿದಂತೆ) ಪ್ರಾಙ್ಞ ಕನ್ನಡಿಗರ ಮುಂದೆ ಬೆತ್ತಲಾಗಿದ್ದಾರೆ. ಆದರೆ ಅವರೊಳಗಿರುವ ಸಾಹಿತಿ-ಕಲಾವಿದನ ಬಗ್ಗೆ ಗೌರವವಿತ್ತು. ನಿಮ್ಮ ಲೇಖನವನ್ನು ಓದಿದ ಮೇಲೆ, ಕೃತಿಚೌರ್ಯದ ಹಿನ್ನಲೆಯಲ್ಲಿ ಅವರ ಸಮಗ್ರ ಕೃತಿಗಳ ಪುನರಾವಲೋಕನದ ಅಗತ್ಯವಿದೆಯೆಂದೆನಿಸುತ್ತಿದೆ.

    ಪ್ರತಿಕ್ರಿಯೆ
  51. Dhananjaya Kulkarni

    ಇದು ಕಣ್ತಪ್ಪಿನಿಂದ ಆಗಿರುವ ಕೆಲಸ ಎಂದು ಅನೇಕರು ವಾದಿಸುತ್ತಿದ್ದಾರೆ. ನನ್ನದೊಂದು ಪ್ರಶ್ನೆ..2208 ರಲ್ಲಿ ಕಾರ್ನಾಡರು ಗೋವಾ ಅವರಿಗೆ ಬರೆದ ಪತ್ರದಂತೆ ಇನ್ನುಮುಂದೆ ಅವರ ಹಾಡನ್ನು ಮರುಮುದ್ರಣದಲ್ಲಿ ಪ್ರಕಟಿಸುವುದಿಲ್ಲ ಎಂದಿದ್ದಾರೆ. ಆದರೆ 2009, 2010, 2011 ರ ಆವ್ಱುತ್ತಿಗಳಲ್ಲಿ ಸಹ ಇದೇ ಪುನರಾವರ್ತನೆ ಆಗಿದೆ. ಇದೂ ಸಹ ಕಣ್ತಪ್ಪಿನಿಂದ ಆಗಿರುವುದೇ? ಇದು ಕಾರ್ನಾಡಾರ ನೈತಿಕ ಅಧಃ ಪತನಕ್ಕೆ, ನೈತಿಕ ಭ್ಱುಷ್ಟಾಚಾರಕ್ಕೆ ಸಾಕ್ಷಿ.

    ಪ್ರತಿಕ್ರಿಯೆ
  52. VG

    ಇನ್ನೊಂದು ಕಾರ್ನಾಡ್ controversy. ಇವತ್ತಿನ ‘ದ ಹಿಂದೂ’ನಲ್ಲಿ ಎಸ್. ಬಾಗೇಶ್ರೀ ಲೇಖನ ಓದಿ

    ಪ್ರತಿಕ್ರಿಯೆ
  53. Dhananjaya Kulkarni

    ಒಂದು ಸಣ್ಣ ತಿದ್ದು ಪಡಿ… ಗೋವಾ ಮತ್ತು ಕಾರ್ನಾಡಾರ ಮಧ್ಯೆ ಕವನವನ್ನು ಬಳಸದಿರುವಂತೆ ಆದ ಒಪ್ಪಂದ 2008 ರಲ್ಲಿ ಮತ್ತು ಅವರ ಕವನವನ್ನಿಟ್ಟುಕೊಂಡು ನಾಗಮಂಡಲ ಪುನರ್ ಮುದ್ರಣಗೊಂಡಿದ್ದು 2009 ಮತ್ತು 2012 ರಲ್ಲಿ.

    ಪ್ರತಿಕ್ರಿಯೆ
  54. prasad raxidi

    ಕಾರ್ನಾಡರ ಈ ರೀತಿಯ ನಡವಳಿಕೆ ಹೊಸತೇನಲ್ಲ, ಕುದುರೆಮುಖ ಉಳಿಸಿ (ಅದೇ ಸಮಯದಲ್ಲಿ ದತ್ತ ಪೀಠ ವಿವಾದವೂ ಇತ್ತು) ಹೋರಾಟ ನಡೆಯುತ್ತಿದ್ದಾಗ ಹಾಸನದವರೆಗೆ ಬಂದು ನಾನು ಮುಂದೆ ಬರುವುದಿಲ್ಲ, ಎಸ್.ಎಂ.ಕೃಷ್ಣ ಅವರಿಗೆ ಮುಜುಗರ ಉಂಟುಮಾಡಲು( ಆಗ ಕೃಷ್ಣ ಸರ್ಕಾರವಿತ್ತು) ನಾನು ಬಯಸುವದಿಲ್ಲ ಎಂದಿದ್ದರು….! (ಅಧಿಕಾರದಲ್ಲಿರುವವರ ಕೃಪೆ ಬೇಕಲ್ಲವೇ..?) ಇಂತವರ ಮಧ್ಯೆ ಲಂಕೇಶ್ ಮತ್ತೆ ಮತ್ತೆ ನೆನಪಾಗುತ್ತಾರೆ.
    ಇವರೊಬ್ಬರೇ ಅಲ್ಲ ಕನ್ನಡ ಅನೇಕ ಹಿರಿಯ ಲೇಖಕರೂ ಹೀಗೆ “ಸಣ್ಣವರೇ…

    ಪ್ರತಿಕ್ರಿಯೆ
  55. Aditya

    ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
    ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
    ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
    ತಿನ್ನುವುದದಾತ್ಮವನೆ ಮಂಕುತಿಮ್ಮ ।।

    ಪ್ರತಿಕ್ರಿಯೆ
  56. arathi ghatikaar

    ಗೋಪಾಲ ಕಾಕಾ , ನಿಜಕೂ ಈ ಲೇಖನ ಓದಿ ಆಶ್ಚರ್ಯವಾಯಿತು . ಜ್ಞ್ಯಾನ ಪೀಟ ಪ್ರಶಸ್ತಿ ವಿಜೇತ ಕಾರ್ನಾಡ ಅವರ ಈ ವರ್ತನೆ ಸಾಹಿತ್ಯ ಪ್ರೇಮಿಗಳಿಗೆ ನಿಜಕ್ಕೋ ಬೇಸರವನ್ನುಂಟು ಮಾಡಿದೆ . ನಿಮ್ಮ ಕೃತಿ ಗೆ ತಕ್ಕ ಮನ್ನಣೆ /ಗೌರವ ಸಿಗಲೇಬೇಕು , ಇದು ನಮೆಲ್ಲರ ಅಭಿಮತ .

    ಪ್ರತಿಕ್ರಿಯೆ
  57. Adithya

    ಇದು ಕಣ್ತಪ್ಪಿನಿಂದ ಆದದ್ದಲ್ಲ. ಇದು ಮಾತುತಪ್ಪಿದ ವರ್ತನೆ, ಮತ್ತೆ ಮತ್ತದೇ ತಪ್ಪು. ಕಳೆದ ಭಾನುವಾರ “ಕನ್ನಡಿಗರೆಲ್ಲ ನೋಡಲೇಬೇಕಾದ … ” ಚಿತ್ರದ ನಿರ್ದೇಶಕ ಬೆಳಂಬೆಳಗ್ಗೆ ವೀಕೆಂಡ್ ಕೊಳೆ ತೊಳೆಯದ ಮುಖ ಹೊತ್ತು ಟಿವಿಯಲ್ಲಿ ಬಂದು ” ಈ ಹಾಡು ಬಿಡಲ್ಲ ಆದರೆ ಆಡಿಯೋ ಕಂಪನಿಗೆ ೫ ಲಕ್ಷ ಕೊಡಲ್ಲ ” ಎಂದು ಚೀರುತ್ತಿದ್ದವ ಕೋರ್ಟ್ ಗದರಿದ ಮೇಲೆಯೇ ಹೆದರಿದ್ದು.
    ದತ್ತಪೀಠ ಅಭಿಯಾನ ಎಂದು ಪುಂಡರು ನಡೆಸುವ ಚಳುವಳಿಯಿಂದಾಗಿ ಗೀರೀಶ್ ಮತ್ತೊಂದು ಚಳುವಳಿಯಿಂದ ಹಿಂದೆ ಸರಿದಿರಬಹುದು ಆದರೆ ಅಂಕಣಕಾರರು ಕಾರ್ನಾಡರ ವಿಳಾಸ ಮತ್ತು ಫೋನ್ ನಂಬರ್ ಜಾಹೀರು ಮಾಡಬಾರದಿತ್ತು! ಕಣ್ತಪ್ಪು ಬಿಡಿ.
    ರೇಡಿಯೋ ಮತ್ತು ಅತಿಕಡಿಮೆ ಖರ್ಚಿನಲ್ಲಿ ಟಿವಿ ನಡೆಸುವ ಸಂಗೀತ ವಾಹಿನಿಗಳಾದರು ಗೀತ ರಚನೆಕಾರರ ಹೆಸರನ್ನು ಪ್ರತಿ ಪ್ರಸಾರದಲ್ಲ್ಲಿ ಭಿತ್ತರಿಸಬೇಕು.
    ‘ಮಾಯಾದೋ ಮನದ ಭಾರ… ತಗಧಾಂಗ ಎಲ್ಲ ದ್ವಾರ…’ ತುಂಬಾ ಒಳ್ಳೆಯ ಹಾಡು ಈ ಬಾರಿಯ ಗಾಯನ ಮತ್ತು ಗೀತ ರಚನೆಗೆ ಆಸ್ಕರ್ ಪಡೆದ ಅಡೆಲ್ ಆಡ್ಕಿನ್ಸ್ ಳ ಒಂದು ಗೀತೆ ಕೂಡ ಹೀಗೆ ಇದೆ “throw yourself through every open door, count your blessings to find what you look for turn my sorrow into treasure gold you will pay me back in kind and reap what you just sow” ನಿನ್ನೆ ರಾತ್ರಿ ಉದಯ ದಲ್ಲಿ ನಾಗಮಂಡಲ ಚಿತ್ರ ನೋಡಿದಾಗ ಅನಿಸಿದ್ದು ಇದು ಖಂಡಿತ ಆಸ್ಕರ್ ಜ್ಯೂರಿ ಭಾರತದಿಂದ ಭಯಸುವಂತಃ ಚಿತ್ರ ಆದರೆ 1998 ರ ಆಸ್ಕರ್ ಗೆ ಭಾರತ ಕಳುಹಿಸಿದ್ದು ಮಾತ್ರ ಕಳಪೆ ಮಟ್ಟದ ತಮಿಳು ಚಿತ್ರ ಜೀನ್ಸ್ ಯಾವ ಪುಣ್ಯಾತ್ಮ ಯಾರಿಗೆ ಮಾತು ಕೊಟಿದ್ದನೋ.

    ಪ್ರತಿಕ್ರಿಯೆ
  58. jayashankarbelagumba

    ita gireesh karnadtara tumba jana iddre sir bejar madkobedi nimma kavana galannu illi prakatisi antavrigella soppu hakabedi karnadara natakagalu aste bere kade inda kaddau irbahudu

    ಪ್ರತಿಕ್ರಿಯೆ
  59. gurunath boragi

    ಕಾರ್ನಾಡ್ ಅವರು ‘ನಾಗ ಮಂಡಲ’ ಕೃತಿಯ ಮೂಲಕ ಏರಿದ ಎತ್ತರದಲ್ಲಿ ನಿಮ್ಮದೂ ಪಾಲಿತ್ತು,ಅವರು ಅದನ್ನು ಜಾಣತನದಿಂದ ಮುಚ್ಚಿಡುತ್ತ ಹೋದರು ಎನ್ನುವುದು ಗೊತ್ತಾದ ಮೇಲೆ ಗೌರವವೇ ಹೊರಟು ಹೋಯಿತು.

    ಪ್ರತಿಕ್ರಿಯೆ
  60. B.A.Hunasikatti

    ನನಗೆ ಈ ವಿಷಯ ಗೊತ್ತಿರಲಿಲ್ಲ ಗೋಪಾಲ ಸರ್. ಒಂದು ಸ್ವಾರಸ್ಯ ಹೇಳ್ತೀನಿ..ಯಾವಾಗಲೂ ನನ್ನ ಸ್ನೇಹಿತರ ಮುಂದೆ ಈ ಜ್ಞಾನಪೀಠಿಗಳ (ಕಾರ್ನಾಡ/ಅನಂತ ಮೂ)ಬಗ್ಗೆ ಚಾಷ್ಠೀ ಮಾಡಕೊಂತ ಕನ್ನಡಕ್ಕ ಸಿಕ್ಕಿದ್ದು 5 ಜ್ಞಾನಪೀಠ ಪ್ರಶಸ್ತಿ ಮಾತ್ರ ಅಂತ ನಾನು, ಗೆಳೆಯರು 7 ಜ್ಞಾನಪೀಠ ಪ್ರಶಸ್ತಿ ಅಂತ ವಾದಮಾಡ್ತೀವಿ..ನಾನು ಅದಕ್ಕೆ” ಹಂಗಲ್ಲ 5 ಜ್ಞಾನಪೀಠ ಪ್ರಶಸ್ತಿ ಪಡಕೊಂಡಿದ್ದಕ್ಕ 2 ಬೋನಸ್ ಕೊಟ್ಟಾರ ಅಂತ ಹೇಳ್ತಿರಿತೀನಿ.. ನಿಮ್ಮ ಪ್ರಕರಣ ನೋಡಿದ ಮ್ಯಾಲ ಻ದು ಖರೇನ ಅನಸತೈತಿ..(ಇದು ಕಂಬಾರರಿಗೆ ಪ್ರಶಸ್ತಿ ಬರೂಕ ಮೊದಲ)

    ಪ್ರತಿಕ್ರಿಯೆ
  61. srinivas deshpande

    Doddavaru dodda gunagalinda doddavaraagutthare, chilllare gunagalinda alla.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: