ಸ್ವಾಭಿಮಾನದ ಕೋಟೆ
ಕೊಟ್ರೇಶ್ ಕೊಟ್ಟೂರು
ನನ್ನ ಜೀವನದ ಕೆಲ ಘಟನೆಗಳು ಕುವೆಂಪುರವರ ನುಡಿಯಾದ ಕೋಟಿ ಧನವಿದ್ದರೂ ಪಟ್ಟಣ ಗೋಳು, ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು ಯನ್ನು ಓದುವಾಗ ನೆನಪಿಗೆ ಬಂದದ್ದು. ಸುಮಾರು 6 ವರ್ಷಗಳ ಹಿಂದೆ ನಮ್ಮೂರಿನಲ್ಲಿ ಒಂದು ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದೆ. ಅದು ಮನೆಮನೆಗೆ ಕೋರಿಯರ್ ಕೊಡುವ ಕೆಲಸ. ಹೀಗೆ ಒಂದು ವರ್ಷ ಆ ಕೆಲಸ ಮಾಡುತ್ತಾ ಅಲ್ಲಿನ ಮ್ಯಾನೇಜರ್ ಮನಸ್ಸಿಗೆ ತುಂಬಾ ಹತ್ತಿರವನಾದೆ. ನನ್ನ ಪಿ.ಯು.ಸಿ ಓದು ಮುಗಿಯಿತು. ನನ್ನಗಿಂತಲೂ ಮುಂಚೆ ಈ ಕೆಲಸ ಮಾಡುವಾತ ಬೆಂಗಳೂರಿಗೆ ಹೋಗಿ ಇದೇ ಕೆಲಸವನ್ನು ಅಶೋಕನಗರದಲ್ಲಿ ನಿರ್ವಹಿಸುತ್ತಿದ್ದ. ಆವನಿಗೆ ಫೋನಿನ ಮೂಲಕ ನಾನು ಸಹ ಬೆಂಗಳೂರಿಗೆ ಬರಲು ಬಯಸುತ್ತೇನೆಂದು ಹೇಳಿದಾಗ, ಕೆಲವರನ್ನ ವಿಚಾರಿಸಿ ಕೆಲಸ ಪಕ್ಕ ಮಾಡಿಕೊಂಡು ತಿಳಿಸುವೆನು ಎಂದು ಹೇಳಿದ. ಸ್ವಲ್ಪ ದಿವಸ ಕಳೆದ ನಂತರ ನಮ್ಮೂರಿನ ಕೋರಿಯರ್ ಮ್ಯಾನೆಜರ್ ಗೆ ಈ ವಿಷಯ ತಿಳಿದು ನನ್ನ ಬೆಂಗಳೂರು ಕೆಲಸದ ಇಚ್ಛೆಗೆ ಹಸಿರು ನಿಶಾನೆ ತೋರಿಸಿದರು. ಅದು 6 ತಿಂಗಳ ಮುಖ್ಯ ಕಚೇರಿಯಲ್ಲಿ ಟೈನಿಂಗ್ ಪಿರಿಯಡ್ಗೆ ಎಂದು ಕಳುಹಿಸಲು ಸಿದ್ದರಿದ್ದರು. ನನಗೂ ಹೊಸ ಹುರುಪು ಸರಿ ಎಂದು ಒಪ್ಪಿದೆ. ಅಂದುಕೊಂಡಂತೆಯೇ ಬೆಂಗಳೂರಿನ ಮುಖ್ಯ ಕಚೇರಿಗೆ ಬಂದು ಕೆಲಸಕ್ಕೆ ಹಾಜರಾದೆ, ಕೆಲಸಕ್ಕೆ ತಕ್ಕ ಸಂಬಳವಿಲ್ಲದಿದ್ದರೂ ಸುಲಭವಾಗಿದ್ದರಿಂದ ನಂಗೆ ಭಾರ ಎನಿಸಲಿಲ್ಲ. ಆರು ತಿಂಗಳಲ್ಲಿ ಐದು ತಿಂಗಳನ್ನು ಹೇಗೋ ಬಂದ ಸಂಬಳ ಮತ್ತು ಓಟಿ ದುಡ್ಡಿನಲ್ಲಿ ನಿಬಾಯಿಸಿದೆ.
ನನ್ನ ನಿಷ್ಠೆಗೆ ಅಲ್ಲಿನ ಮುಖ್ಯ ಅಧಿಕಾರಿಗೆ ತಿಳಿಯದಂತೆ, ಮ್ಯಾನೆಜರ್ ಆಫೀಸ್ ಮೇಲಿನ ರೂಮ್ನಲ್ಲಿ ನನಗೆ ಇರಲು ಅನುಮತಿ ನೀಡಿದ್ದರು. ಕಾಡಿಸುವ ಕಾಲ ಬಹು ಚಿಕ್ಕದಾಗಿರುತ್ತಂತೆ, ಹಾಗೆಯೇ ಒಂದು ತಿಂಗಳು ಸುಮಾರು ಬುದ್ದಿಯನ್ನು ಕಲಿಸಿತು. ನನ್ನ ಲೆಕ್ಕಚಾರದ ಪ್ರಕಾರ ದುಡ್ಡು ಖರ್ಚು ಮಾಡುತ್ತಿದ್ದ ನನಗೆ ನನ್ನ ಸಹೋದ್ಯೋಗಿಯು 200 ರೂಪಾಯಿ ಹಣ ಕೇಳಿದ. ಅವ ಕೇಳಿದ್ದು ಬುದವಾರ, ಅಂದು ನನ್ನ ಹತ್ತಿರವಿದ್ದದು 500 ರೂಪಾಯಿ ಮಾತ್ರ. ಭಾನುವಾರದವರೆಗೆ ನಿಭಾಯಿಸಬಹುದು ಎಂದು ಉಳಿಸಿಕೊಂಡಿದ್ದೆ. ಒಬ್ಬರಿಗೊಬ್ಬರು ಸಹಾಯ ಮಾಡುವ ಬುದ್ಧಿ ಇರುವುದು ಮಾನವ ಧರ್ಮ. ಅವನು ಹಣ ಕೇಳಿದಾಗ ನನ್ನ ಪರಿಸ್ಥಿತಿ ತಿಳಿಸಿ ಶುಕ್ರವಾರ ಹಿಂದಿರುಗಿಸು ಎಂದೆ. ಸರಿ, ಎಂದು ಹೇಳಿದ ಆಸಾಮಿ ಶನಿವಾರ ಬಂದರು ಪತ್ತೇನೆ ಇಲ್ಲ. ಆ ದಿನ ನನ್ನ ಪರಿಸ್ಥಿತಿ ಎಂಗಾತು ಅಂದ್ರೆ ಮನೇಲ್ಲಿ ಇರೋ ದೇವ್ರುಗೆ ಪೂಜೆ ಮಾಡು ಸಾಕು, ಅಂದ್ರೆ ಊರಗಿರೋ ಎಲ್ಲ ದೇವ್ರುನ್ನೂ ಕರ್ದು ಮೈಮೇಲೆ ಹಾಕೊಂಡಂಗೆ ಆಯ್ತು ಅನ್ಸಿಬಿಡ್ತು. ಶನಿವಾರ ಹೊತ್ತು ಮುಳುಗೋ ಹೊತ್ತಿಗೆ ಬರೊಬ್ಬರಿ 50 ರೂಪಾಯಿ ಉಳಿಸಿಕೊಡಿದ್ದೆ. ಮರುದಿನ ರಜೆ ಯಾರು ಬರುವುದಿಲ್ಲ. ಸಹದ್ಯೋಗಿ ಫೋನ್ ಮಾಡಿದ್ರೆ ಸೋಮವಾರ ಬಂದು ಕೊಡುತ್ತೇನೆ ಅಂತ ಮಾತು ನಿಲ್ಸಿ ಪೋನ್ ಕಟ್ ಮಾಡ್ದ. ಏನ್ ಮಾಡ್ಲಿನಾ? ಸ್ವಾಭಿಮಾನದ ಭೂತ ನನ್ನೊಳಗೆ ಹೆಮ್ಮರವಾಗಿ ಸ್ವಲ್ಪ ಬುದ್ಧಿಗೆ ಮಂಕು ಬಡಿದ್ದಿತ್ತು.
ಆ ಭಾನುವಾರ ನನ್ನ ಜೀವನದ ಕರಾಳ ದಿನ. ಬೆಳಿಗ್ಗೆ ಬೇಗ ಏಳಬೇಕು ಎನಿಸಲಿಲ್ಲ. ಹೊರಗಡೆ ಹೋದರೆ ಇರುವ ದುಡ್ಡು ಖಾಲಿಯಾದರೆ. ಬೇರೆಯವರನ್ನು ಕೇಳಬೇಕು ಎಂದರೆ, ಅಂದು ರಜೆ ಕಚೇರಿಗೆ ಯಾರು ಬರುವುದಿಲ್ಲ. ಛೇ..! ಎಂತಹ ದುರ್ದೈವ ನನ್ನದು ಎಂದು ಸುಮ್ಮನಾಗಿದ್ದೆ. ನಂತರ ಮಧ್ಯಾಹ್ನದ ಸಮಯಕ್ಕೆ ಅರ್ದ ಅಡಿಯ ರಾಕ್ಷಸ (ಹೊಟ್ಟೆ) ಕುಣಿಯಲು, ಕಾಡಿಸಲು ಪ್ರಾರಂಭಿಸಿದ್ದ. ನನ್ನ ಕುತ್ತಿಗೆಯನ್ನು ಯಾರೋ ಇಸುಕಿದಂತಾಗಿತ್ತು. ನಿರುವಿಲ್ಲದೆ (ಬೇರೆ ದಾರಿ ಇಲ್ಲದೆ) ಮೆಲ್ಲಗೆ ಎದ್ದು ಹೊರಗೆ ಬಂದು ಅಲ್ಲಿಯೇ ಇದ್ದ ಒಂದು ಟೀ ಅಂಗಡಿಯಲ್ಲಿ ಮೂರು ಬ್ರೇಡು, ಟೀ ಕುಡಿದಾಗ ಸಮಯ 2 ಗಂಟೆ. ಆಗ ನನ್ನ ಹತ್ತಿರ ಉಳಿದ್ದದು ಕೇವಲ 30 ರೂಪಾಯಿ. ಮತ್ತೆ ಆಫೀಸಿನ ರೂಮ್ ಕಡೆಗೆ ಮುಖ ಮಾಡಿ ನಡೆದೆ. ದಾರಿಯಲ್ಲಿ ಏನನ್ನೂ ನೋಡುವಂತಿಲ್ಲ. ಯಾಕೆಂದರೆ ತುತ್ತಿನ ಚೀಲಕ್ಕೆ ಎಷ್ಟು ತುರುಕಿದರು ಸಾಲದು. ಇದ್ದ ಹಣವು ಎಲ್ಲಿ ಖರ್ಚಾಗಬಹುದೆಂದು ತಲೆಯನ್ನು ತಗ್ಗಿಸಿಕೊಂಡೆ ರೂಮಿಗೆ ಬಂದು ಸೇರಿದೆ. ಹಾಗೆ ಮಲಗಿ ಯೋಚಿಸಿದಾಗ ನನ್ನ ಊರು ನೆನಪಾಯಿತು. ಆದ್ರೆ ಏನು ಮಾಡೋದು ‘ಬಾರದ್ದು ಬಪ್ಪದು ಬಪ್ಪದು ತಪ್ಪದು’ ಬಂದಿದ್ದನ್ನ ಅನುಭವಿಸಬೇಕು ಎಂದುಕೊಂಡು ಸುಮ್ಮನಾದೆ. ಒಂದು ದಿನಕ್ಕೆ ಮೂರು ಊಟ ಯಾವನ್ ಕಂಡು ಹಿಡಿದನೋ ಎಂಬುದು ನನ್ನೊಳಗೆ ಸಿಟ್ಟು ಹುಟ್ಟಲು ರಕ್ತ ಕ್ವತ ಕ್ವತ ಕುದಿಯತ್ತಿದ್ದರೂ, ಶಕ್ತಿ ಇಲ್ಲದ ಕಾರಣ ದಿಢೀರ್ನೇ ತಣ್ಣಗಾಗುತ್ತಿತ್ತು.
ರಾತ್ರಿ ಭೋಜನ ಮಿಕ್ಕ ಹಣದಲ್ಲಿ ಮುಗಿಸಿದಾಗ ನಾ ಒಂಟಿಕೈಯ ನಾಯಕ. ನಾಳೆಯ ಪರಿವೇ ಇಲ್ಲ. ಹೊಟ್ಟೆ ಖಾಲಿ ಇದ್ದಾಗ ಯಾವ ಮುಂದಾಲೋಚನೆ ನಮ್ಮೊಳಗೆ ಬಾರವು. ಹೊಟ್ಟೆ ತುಂಬಿದ ಮೇಲೆಯೇ ಕೆಟ್ಟ ಮತ್ತು ಒಳ್ಳೆಯ ಯೊಚನೆ ಅವರವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಬರುವವು. ಭಾನುವಾರದ ಕಥೆ ಹೇಗೋ ಮುಗಿಯಿತು. ಸೋಮವಾರ ಬೆಳಿಗ್ಗೆ 9.30ಕ್ಕೆ ಸರಿಯಾಗಿ ನಾವು ಮಾಡಿದ ಒಂದು ವಾರದ ಓಟಿ ದುಡ್ಡನ್ನ ಕೊಡುತ್ತಿದ್ದರು. ಅದಕ್ಕೆ ಬೇಗ 6 ಗಂಟೆಗೆ ಎದ್ದು ಕೆಲಸಕ್ಕೆ ಸಿದ್ದನಾಗಿ ಬಂದು ನಿಂತಾಗ ಸರಿಸುಮಾರು 6:30! ಕಾಲ ಎಷ್ಟು ಕ್ರೂರಿ ಎಂದರೆ ಗಡಿಯಾರದ ಮುಳ್ಳು ಅಂದು ವೇಗವಾಗಿ ಚಲಿಸಲೇ ಇಲ್ಲ. ಆಗ ಒಂದೊಂದು ಕ್ಷಣವು ಒಂದೊಂದು ಯುಗವಾಗಿ ಕಾಣುತ್ತಿತು. ಅಂತೂ ಇಂತೂ ಕೆಲಸ ಮುಗಿಸಿದ ನನಗೆ ಓಟಿಯ ದುಡ್ಡು ಕೈಗೆ ಬಂದೇ ಬಿಡ್ತು. ಅದು 260 ರೂಪಾಯಿ. ದುಡ್ಡು ಇಸ್ಕೊಂಡವನೆ ಹೊಟ್ಟೆಯ ತಾಳಕ್ಕೆ ಕುಣಿಯಲು ಓಡಿದೆ. ಹೊಟೇಲ್ಗೆ ಹೋಗಿ ಸಂತೃಪ್ತಿಯಿಂದ ತಿಂದೇ ಬಿಡೋಣ ಅಂತಾ ಪೂರ್ತಿ ಊಟ ಮುಗಿಸಿದೆ.
ಸಮಯಕ್ಕಿಂತ ಲೇಟಾಗಿ ಬಂದ ಮಗನನ್ನ ತಂದೆ ಮನೆಗೆ ಸೇರಿಸಿಕೊಳ್ಳಬಹುದು. ಆದ್ರೆ, ಸಮಯಕ್ಕೆ ಸರಿಯಾಗಿ ಹೊಟ್ಟೆಗೆ ತನ್ನ ಪಾಲು ದಕ್ಕದೇ ಇದ್ರೆ ಯಾರು ಎಷ್ಟೇ ಪ್ರೀತಿಯಿಂದ ತುರುಕಿದರೂ ಅದು ಇಟ್ಕೊಳಲ್ಲ. ಹಿಂದಿನ ದಿನ ಊಟ ಮಾಡದೆ ಇದ್ದರಿಂದ ವಾಂತಿಯಾಗಿ ಹೋಯಿತು. ಎನು ಮಾಡೋದು ಎಂದು ತೋಚದೇ ನನ್ನೋಳಗೆ ದ್ವಂದ್ವ ಚರ್ಚೆ ಶುರುವಾಯಿತು. ನಾನು ಕೂಡ ಯಾರನ್ನಾದರು ಹಣ ಕೇಳಬಹುದಿತ್ತು. ಎಂದು ನನ್ನ ಸ್ವಾಭಿಮಾನದ ಕೋಟೆ ಒಂದೇ ಕ್ಷಣಕ್ಕೆ ಒಡೆದು ಹೊಯಿತು. ಕೊಡು-ಕೊಳ್ಳುವಿಕೆ ನಮ್ಮ ಸಮಾಜಕ್ಕೆ ಇನ್ನೂ ಸರಿಯಾಗಿ ರೂಢಿಯಾಗಿಲ್ಲ. ಅಂದು ನನಗೆ ಅನಿಸಿದ್ದು, ನದಿಯಲ್ಲಿ ಬಿದ್ದಾಗ ಈಜು ಬರದ್ದಿದ್ದರೆ ನಮ್ಮನ್ನು ನನ್ನ ಸ್ವಾಭಿಮಾನ ಕಾಪಾಡದು. ಸಾಮಾರ್ಥ್ಯಕ್ಕೂ ಮೀರಿದ ಕಷ್ಟಗಳು ಬಂದಾಗ ಸಹಾಯ ಕೇಳುವುದು. ಬೇರೆಯವರ ಹತ್ತಿರ ದುಃಖ ಹಂಚಿಕೊಳ್ಳುವುದು. ಸ್ವಾಭಿಮಾನವನ್ನು ಕಡಿಮೆ ಮಾಡುವಂತಹದ್ದಲ್ಲ. ಅದೇ ಸ್ವಾಭಿಮಾನಕ್ಕೊಂದು ಶೋಭೆ ತಂದು ಕೊಡುವಂತಹದು.







0 Comments