– ಪ್ರದೀಪ್ ದಾನಿ

ಜೀವನದಲ್ಲಿ ಉಲ್ಲಾಸ ಉತ್ಸಾಹಗಳು ತುಂಬಿರಬೇಕಂತೆ, ಅದು ಬರ್ಬೇಕಾದ್ರೆ ಕೆಲವು ಘಟನೆಗಳು ಸಾಕ್ಷಿಯಾಗ್ತವೆ ಅಲ್ವಾ ಗೆಳೆಯರೇ…? ಈ ನನ್ನ ಬರಹ ಓದಿದಾಗ ನಾ ಹೇಳಬಯಸಿರುವ ಭಾವಾರ್ಥ ನಿಮಗೆ ಸಿಗಬಹುದು…
ಈ ಸಾಲುಗಳ ಜೊತೆಗೆ ನನ್ನ ಬಾಲ್ಯದ ದಿನಗಳ ನೆನಪುಗಳನ್ನ ಮೆಲಕು ಹಾಕಬೇಕೆನಿಸಿದೆ. ಆ ದಿನಗಳ ನೆನಪು, ಆ ವ್ಯಕ್ತಿಯ ನೆನಪು ಮತ್ತೆ ಮತ್ತೆ ಬರುತ್ತಿದೆ , ಒಂದು ಬಾರಿ ಎಲ್ರಿಗೂ ಹೇಳಬೇಕು ಅನಿಸಿದ ಆಶಯವೇ ಈ ಬರಹ.
ನನ್ನ ಹೈಸ್ಕೂಲ್ ದಿನಗಳ ಸನ್ನಿವೇಶಗಳು ಹಾಗೆ ಸರ್ರನೆ ಕಣ್ಮುಂದೆ ಬಂದು ಮಾಯವಾಗಿಬಿಡುತ್ತೆ. ಅಯ್ಯೋ ಅದು ಬರೋಬ್ಬರಿ 9,10 ವರ್ಷಗಳ ಹಿಂದಿನ ಮಾತು-ಕತೆಗಳು ನನ್ನ ಶಾಲೆಯ ದಿನಗಳು. ಆವಾಗ ನಮ್ ಶಾಲೆ ಇದ್ದಿದ್ದಕ್ಕೂ ಅದರ ಈಗಿನ ಬದಲಾವಣೆಗಳಿಗೂ ತುಂಬಾ ಅಂತರವಿದೆ ಬಿಡಿ!, ಅದಕ್ಕೆ ಅಂತ ಕಟ್ಟಡ ಇರ್ಲಿಲ್ಲ ಆವಾಗ, ಅದಕ್ಕೆ ಇರೋ ಒಂದು ಸರ್ಕಾರೀ ಕಟ್ಟಡದ ಕೊಣೆಗಳನ್ನ ಬೆಳಿಗ್ಗೆ 7-11 ಪದವಿ ಪೂರ್ವ(PUC) ಎಂದು ಮತ್ತು 11-5:30 ಹೈಸ್ಕೂಲ್ಗೆ ಬಳಸ್ತಿದ್ರು.
ನಮಗೆ ಬೆಳಿಗ್ಗೆ ಬಂದೊಡನೆ ಜಾಗ ಕಾಯ್ದಿರಿಸೋದೆ ದೊಡ್ಡ ಕಷ್ಟದ ಕಸರತ್ತೆ ಆಗಿರುತ್ತಿತ್ತು, ಜೊತೆಗೆ ಅದೊಂದು ಖುಷಿಯೂ ಕೂಡ, ಕಾಯ್ದಿರಿಸೋದು ಅಂದ್ರೆ ನನಗೂ ಮತ್ತು ನಮ್ ಸ್ನೇಹಿತರಿಗೆಂದು ಕ್ಲಾಸ್-ರೂಮಿನಲ್ಲಿ ಜಾಗ ಹಿಡಿಯುವದು. ಗುಂಪಲ್ಲಿ ಯಾರು ಬೇಗ ಬರ್ತಾರೋ ಅವರದೇ ಈ ಕೆಲಸ…
ಹೀಗೆ ನಮ್ ಬಾಲ್ಯದ ಜೀವನ ಹೇಗೋ ತಾಳ ಮೆಳಗಲಿಲ್ಲದೆ, ಜವಾಬ್ದಾರಿಯುತ ಪಾಠಗಲಿಲ್ಲದೆ, ಬೇಕು ಬೇಡವಾದ ಉಪಸ್ತಿತಿಗಳಲ್ಲಿ ನಾವಿರ್ತಿದ್ದೆವು. ಪ್ರತಿಯೊಂದು ವಿಷಯಕ್ಕೆ ಬೇರೆ ಬೇರೆ ಗುರುಗಳು ಪಾಠ ಮಾಡ್ತಿದ್ರು ಅದರಲ್ಲಿ ಗಣಿತ ವಿಷ್ಯಕ್ಕೆ ಪಾಠ ಹೇಳೋಕೆ ಬರ್ತಿದ್ರು ಮೇಟಿ ಮಾಸ್ಟರ್. ನಮ್ಗೆಲ್ಲಾ ಮೇಟಿ ಸರ್ ಎಂದೇ ನೆನಪು, ಈಗಲೂ ಅವ್ರನ್ನು ಭೇಟಿ ಮಾಡೋಕೆ ಭಯ ಬರುತ್ತೆ, ಯಾಕಂತೀರಾ? ಮುಂದೆ ನಿಮಗೂ ಗೊತ್ತಾಗುತ್ತೆ ಬನ್ನಿ ನಾನ್ ಯಾವ್ ವಿಷ್ಯಕ್ಕೆ ಹೀಗಂದೆ? ಏನು? ಅನ್ನೋದನ್ನ.
ಅವ್ರಂದ್ರೆ ಶಿಸ್ತು, ವಿದ್ಯಯ ಹಸಿವು. ಇಕಡೆ ಮೆಣಸು ಅಲ್ಲ ಆಕಡೆ ಬೆಲ್ಲವೂ ಅಲ್ಲ, ಒಟ್ನಲ್ಲಿ ಅವ್ರು ಅಂದ್ರೆ ಗೌರವಕ್ಕೇನು ಕಡಿಮೆಯಿಲ್ಲ, ಅವರೊಬ್ಬ ಉತ್ಸಾಹಿ ಶಿಕ್ಷಕ, ಚುರುಕತನ ಸ್ವಾರಸ್ಯ ಇರ್ತಿತ್ತು ಅವರ ಮಾತುಗಳಲ್ಲಿ, ನಮಗೆಟುಕುವ ನೈತಿಕ, ಸಾಮಾಜಿಕ ಆಲೋಚನೆಗಳು ಹೊತ್ತು ತರ್ತಿದ್ರೂ, ಅವ್ರು ಹೇಳಿದ ಮಾತುಗಳು ನನಗೆ ಈಗಲೂ ನಮಗೆ ನೆನಪಿವೆ ಮತ್ತೂ ಅಷ್ಟೇ ಹಸಿಯಾಗಿವೆ. ಇದೆಲ್ಲ ನಮಗೆ ಅ ದಿನಗಳಲ್ಲಿ ತಿಳಿದಿರಲಿಲ್ಲ ಆದರೆ ಈಗ ನೆನಪಿಸಿಕೊಂಡಾಗ ಹೌದಲ್ಲ ಎನ್ನುವ ಅಭಿಪ್ರಾಯ ಮೂಡುವುದು.
ತರಗತಿಗೆ ಅವರು ಬಂದ್ರೆ ಸೂಜಿ ಬಿದ್ದರೂ ಕೇಳಿಸುವ ಮೌನ, ಅವರ ಪಾಠಕ್ಕೆ ಏಕಾಗ್ರತೆಯ ಗೊಂದಲ ಆಗ್ಬಾರ್ದೂ, ಅಪ್ಪಿ ತಪ್ಪಿ ಹಾಗೇನಾದ್ರೂ ಆಯ್ತೋ ಅದಕ್ಕೆ ಕಾರಣವಾದವರ ಕಥೆ ಅಷ್ಟೇ!. ಅದಕ್ಕೆ ಈ ಸನ್ನಿವೇಶವೇ ಸಾಕ್ಷಿ.
ಒಂದಿನ ಹೀಗೆ ಪಾಠ ಶುರುವಾಗಿತ್ತು ಮಧ್ಯದಲ್ಲಿ ನಮ್ ಸಹಪಾಟಿ ಒಬ್ಬ ಹಿಂದೆ ಕೂತು ನಿದ್ದೆ ಮಾಡುತ್ತಿದ್ದ, ಅದು ಬೆಳಗಿನ ತರಗತಿ ಶುರುವಾದ ಸಂಧರ್ಬದಲ್ಲಿ, ಮೇಷ್ಟ್ರು ಇದ್ದಕಿದ್ದಂತೆ ತಿರುಗಿ ಕಯ್ಯಲ್ಲಿದ್ದ ಬಳಪದ ತುಣುಕನ್ನೂ ಸರಿಯಾಗಿ ಅವನ ತಲೆಗೆ ಟಣ್ ಅನ್ನೋ ಹಾಗೆ ಬಿಸಿ ಒಗೆದ್ಬಿಟ್ರು, ಪಾಪ ಮಾರಾಯಾ! ಅವನು ಎನ್ ಕೇಳ್ತೀರಾ ಘರ ಬಡಿದವರ ಹಾಗೆ ಎದ್ದು ಆಕಡೆ ಇಕಡೆ ನೊಡೊಕೆ ಶುರು ಮಾಡಿದ, ಮುಂದೆ ಗುರುಗಳೋ ವಕ್ರ ದೃಷ್ಟಿಯಿಂದ ಅವನನ್ನೆ ದಿಟ್ಟಿಸಿ ನೋಡ್ತಿದ್ದಾರೆ.
ಮೇಷ್ಟ್ರು: ಏನಪ್ಪಾ — ನಾನೇನ ಹೇಳ್ತಿದ್ದೆ ಹೇಳು?
ಅವನು: ಎರಡು ರೇಖೆಗಳ ವಿಲೀನ ಮತ್ತು ಅ.. ಅ.. ‘
ಮೇಷ್ಟ್ರು: ಹೌದಪ್ಪಾ ಎರ್ಡು ರೇಖೆ ಅವರ್ ಖಾ೦ದಾನಿ ಎಲ್ರೂ ಬಂದು ನಿಮ್ಮನ್ಯಾಗ್ ಮಕ್ಕೊಂಡ್ವು…. ,
ಎಲ್ಲೆರ ಹೋಗಿ ಸಾಯಿ! ನಿಮ್ಮಪ್ಪಮ್ಮಗ ನಿನ್ ಖರ್ಚ್ ಕಡಿಮೆಯಾಗತ್ತ, ಬಂದ್ಬಿಡ್ತಾವ್ ಉದ್ದಕ!
ಅವನು: ಇಲ್ರಿ ಸರ!
ಮೇಷ್ಟ್ರು: ನಾನಿಲ್ಲಿ ಲಬ್ ಲಬ್ ಹೊಯ್ಕೊಳ್ಳಾಕತ್ತೀನಿ! ನಿ೦ಗ್ ಅರುವು ಅಯ್ತ್ಯಾ?
ಅವನು: [ಸ್ಮಶಾನ ಮೌನ, ಉತ್ತರ ಇಲ್ಲ..]
ಮೇಷ್ಟ್ರು: ಬೆಳ್ ಬೆಳಿಗ್ಗೆ ನಿಮ್ಮವ್ವ ಹುಡ್ಗ ಸಾಲಿಗೆ ಹೋಗ್ತಾನ, ಸಾಲಿ ಕಲಿತಾನ ಅಂತ ಕಷ್ಟಾ ಪಟ್ಟು ತನ್ನ್ ಹೊರೇವ್[ಮನೆ ಕೆಲಸ] ಬಿಟ್ಟು ನಿಂಗ ಉಟ ಹಾಕಿ ಕಳಿಸಿರ್ತಾಳ,
ನೀನು ಸಿಕ್ಕಿದ್ದ ತಾಟು ಅಂತ ಕಿರ್ಬಳ್ಳಿ೦ದಾ ತುರ್ಕೊಂಡು ಟಿ೦ದ್ ಬಂದ್ಬಿಟ್ಟೀದಿ. ಇನ್ನೇನು ಮಾಸ್ಟರ್ ಆದ್ರೇನು ಅವರ್ ಅಪ್ಪ ಆದ್ರೇನು ನಿಂದ ಲೋಕದಾಗ್ ಕನಸ್ ಕಾಣಾಕತ್ತೀದಿ…!
ಬಾ ಇಲ್ಲಿ ಇದಕ್ಕ ಉತ್ತರ ಹೇಳ್ ಈಗ ?
ಅವನು: ಇಲ್ರಿ ಇನ್ನೊಮ್ಮೆ ಮಾಡಂಗಿಲ್ರಿ, ತಪ್ಪಾತ್ರಿ.
[ಕೋಪ ಈಗ ಮೆಲ್ಲಗೆ ಕನಿಕರದ ಭಾವ ಆವರಿಸಿಕೊಳ್ಳುವುದು ]
ಮೇಷ್ಟ್ರು: ಇಲ್ಲೊ ನಿನ್ ತಪ್ಪಲ್ಲಪ್ಪಾ, ನನ್ನ ನಿನ್ ಗೆಳೆಯ ಅಂತ ಅನ್ಕೊ, ನನ್ ಪ್ರಕಾರ ನೀನು ಹುಟ್ಟಿಸಿದವರಿಗೆ ಅವಮಾನ ಮಾಡಾಕತ್ತಿದಿ ಹೌದಲ್ಲೋ ?, ಇದನ್ನ ನಂಗ್ ಸಹಿಸಾಕ್ ಆಗಲ್ಲಪ್ಪಾ, ಇನ್ನೊಮ್ಮೆ ನೀನ್ ಹಿಂದ ಕು೦ತಿದ್ ನಾನ್ ನೋಡೀದ್ನಂದ್ರ ನಿಮ್ಮಪ್ಪಮ್ಮಗ ಭೆಟ್ಟಿ ಆಗ್ತೀನಿ.
ಅವನು: ಇನ್ನೊಮ್ಮೆ ಹಿಂಗ್ ಮಡಂಗಿಲ್ರಿ.
ಮೇಷ್ಟ್ರು: [ಕೋಪದಿಂದ] ಆಗ್ಲಿ ನಡಿ ಮುಂದ್ ಕೂಡು.
[ಹೌದು!! ಅವರು ಸ್ವಲ್ಪ ಕೋಪ ಸ್ವಭಾವದವರು, ಆದರೆ ಕೋಪವನ್ನ ಬೇಕಾದ ಪರಿಸ್ತಿತಿಯಲ್ಲಿ ಮಾತ್ರ ಉಪಯೋಗಿಸ್ತಿದ್ರು. ಹುಡುಗರೆಂದರೆ ತುಂಬಾ ಕಾಳಜಿ ಅವರ ಸ್ವಂತ ಮಗನು ನಮ್ಮ ಸಹಪಟಿಯಗಿದ್ದ, ಅವರೆಂದೂ ತರಗತಿಯಲ್ಲಿ ಮಗ ಎಂದು ನೋಡಿದ್ದಿಲ್ಲ, ಕೆಲ ಸಮಯದಲ್ಲಿ ಅವನು ಎಲ್ಲರ ಹಾಗೆ ತಪ್ಪು ಮಾಡಿದಾಗ ಮಾತುಗಳಿಂದ ಥಳಿಸಿ ಕೊಂಡಿದ್ದು ಉಂಟು, ತಾರತಮ್ಯವಿಲ್ಲದ ಕಾಳಜಿ ಅವರಲ್ಲಿ ಸೇರಿಕೊಂಡಿತ್ತು. ಇವತ್ತಿಗೂ ನಾವು ಭೇಧ ಭಾವಗಳ ಎಷ್ಟೋ ಉಧಾಹರಣೆಗಳನ್ನ ಕೇಳಿದ್ದೀವಿ, ಟಿ ವಿ ಅಲ್ಲಿ ನೋಡಿದ್ದೀವಿ. ಇವರೂ ಅವರೆಲ್ಲರಿಗೂ ಪಾಠ ಎಂದರೆ ತಪ್ಪಾಗಲಾರದು.]
ಈ ಥರಹದ ಘಟನೆಗಳಾದಮೇಲೆ ಸ್ವಲ್ಪ ಹೊತ್ತು ಯಾವ್ದಾದ್ರೂ ನಿಜ ಅನುಭವಗಳನ್ನ ಹಂಚೊಕೊಳ್ಳೋದು ಅವರ ಹವ್ಯಾಸವಾಗಿತ್ತು ಹಾಗೆಯೇ ಮತ್ತೆ ತರಗತಿಯ ಪಾಠದ ಕಡೆ ಗಮನ ಕೊಡ್ತಿದ್ರು. ನಾನ್ ಇವತ್ತಿಗೂ ಹೇಳ್ತೀನಿ ಅವರಷ್ಟು ವಿಷಯ ಜ್ಞಾನ ಭೋಧಿಸುವ ಶಕ್ತಿ ಅದು ನಮ್ಮ ಪ್ರೌಡಾವಸ್ತೆಯಲ್ಲಿ ನಮಗೆ ಕಾಣಲು ಸಿಗಲಿಲ್ಲ. ಬಲು ಅಪರೂಪದ ಮಾರ್ಗದರ್ಶಕ !!
ಅವ್ರಿಗೆ ಬಡ ವಿಧ್ಯಾರ್ಥಿಗಳು, ಆಸಕ್ತಿಯುಳ್ಳ ಓದುವ ವಿಧ್ಯಾರ್ಥಿಗಳು ಅಂದ್ರೆ ಅವರಿಗೆ ತುಂಬಾ ಅಭಿಮಾನ. ತುಂಬಾ ಸಹಾಯ ಮಾಡುವ, ಮಾಡಿದ ಕಾಯಿಗಳವು, ಅವರು ನನಗೆ ಮಾಡಿದ ಸಹಾಯವೋ ಏನೋ ನನ್ನಲ್ಲಿ ಓದಬೇಕೆಂಬ ಛಲ ಬಂದದ್ದೂ. ನಿಜಕ್ಕೂ ನಾನು ಅವರಿಗೆ ತಲೆಬಾಗುತ್ತೇನೆ.
ನಮ್ಮ ಅದೃಷ್ಟವೋ ಏನೋ ಗೊತ್ತಿಲ್ಲ ನಮಗೆ ಅವ್ರು ಗಣಿತವನ್ನ(ಕಬ್ಬಿಣದ ಕಡಲೆ ಎಂದೇ ಪರಿಚಿತವಾದ ವಿಷಯ) ಭೋಧಿಸುತ್ತಿದ್ದರು- ಅದು ಕೂಡ ನಾವೆಂದೂ ಉಹಿಸದ ಹಾಗೆ, ನನಗೂ ಗಣಿತದ ಮೇಲೆ ಪ್ರೀತಿ ಬರಲು ಮತ್ತು ಅದನ್ನ ಇಷ್ಟವಾಗಲು ಕಾರಣರು ಅವರು, ಅದೆಂತ ಗಣಿತದ ಯೋಚೆನೆಗಳನ್ನ ಮತ್ತು ಸ್ವಾರಸ್ಯವನ್ನ ನಮ್ಮದೇ ಆದ ದೃಷ್ಟಿಕೋನದಲ್ಲಿ ವಿವರಿಸುತ್ತಿದ್ದರು, ನಾನು ಮುಂಚೆ ಹೇಳಿದ ಹಾಗೆ ಬೇಕಾದ ಕಡೆಯಲ್ಲ ಅವರ ಸ್ವಂತದ ಸಾಕಸ್ಟು ಅನುಭವಗಳನ್ನು ವಿಷ್ಯಕ್ಕೆ ಮತ್ತು ನಮ್ಮ ಭವಿಷ್ಯಕ್ಕೆ ಅನುಕೂಲವಾಗುವ ಹಾಗೆ ಹೋಲಿಸಿ ಹೇಳುವತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಹೇಳುವಾದರೆ ಅವ್ರು ವಿಜ್ಞಾನ ಮತ್ತು ಗಣಿತ ಪಾಠಗಳನ್ನು ೮,೯ ಮತ್ತು ಹತ್ತನೇ ತರಗತಿಗಳಲ್ಲಿ ನಿಭಾಯಿಸುತ್ತಿದ್ದರು.
ನಮ್ಮಂಥ ಹುಡುಗ ಮನಸ್ಸಿನ ಪೀಳಿಗೆ, ಗುರಿಗಳಿಲ್ಲದ ನಮ್ಮ ಜೀವನಗಳಿಗೆ, ಆಶಾಕಿರಣಗಳನ್ನು ಹುಟ್ಟಿಸಿ ಅವುಗಳನ್ನು ಮುನ್ನೆಡೆಸಿ ಸಾಧಿಸಿ ಎಂದು ಹೇಳುವ ಆ ವೈಕರಿ, ಧೈರ್ಯ ತುಂಬುವ ಅವರ ಮನಸು ನಾ ಎಂದು ಮರೆಯಲಾಗದ ಅನುಭವ.
ಮುಂಚೆ ಹೇಳಿದಂತೆ ಅವ್ರು ಎಂದು ಭೇಧ ಭಾವನೆಗಳನ್ನ ತಂದಿದ್ದೆ ಇಲ್ಲ, ಯಾರಾದರೂ ಆಗಲಿ ಪಾಠ ಕಲಿಯೂವ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹುಡಗರಿಗೆ ತುಂಬಾ ಪ್ರೋತ್ಸಾಹ ನೀಡುವ ಏಕೈಕ ವ್ಯಕ್ತಿ ಅವರಾಗಿದ್ದರು.
ನನ್ನ ಅವರು ದಾನಿ, ಕಾಬಾ ಸಕಾಳಾ ಅಥವ ಸಾವಜಿ ಅಂತ ಕರೀತಿದ್ದರು.[ದಾನಿ ಎನ್ನುವದು ನನ್ನ ಮನೆಯ ಅಡ್ಡ ಹೆಸರು, ಕಾಬಾ ಸಕಾಳಾ ಎಂದರೆ ಯಾವುದೇ ಸಂಧರ್ಭಿತ ಅರ್ಥ ಇಲ್ಲ ಆದರೆ ಕಾಬಾ ಅಂದರೆ ಒಂದು ಹುಡುಗನಿಗೆ “ಏನಪ್ಪಾ” ಎನ್ನುವ ಮತ್ತು ಸಕಾಳಾ ಎಂದರೆ “ನಾಳೆ ” ಎನ್ನುವ, ಸಾವಜಿ ಎಂದರೆ ಮಡದಿಯ ಸಹೋದರ ಎಂದರ್ಥ ನಮ್ಮ ಕ್ಷತ್ರಿಯ ಬಾಷೆಯಲ್ಲಿ. ಈ ಪದಗಳು ಉತ್ತರ ಕರ್ನಾಟಕದಲ್ಲಿ ಜಾಸ್ತಿ ಕೆಳಿ ಬರುತ್ತದೆ ಹಾಗಾಗಿ ಕ್ಷತ್ರಿಯ/ಪಟೇಗಾರ್ ಗೆಳೆಯರಿಗೆ ಈ ಪದಗಳಿಂದ ಕರೆಯುವ ರೂಢಿ ].
ಅವರ ಪಾಠ ಆಂದ್ರೆ ನಂಗಂತೂ ಹಾಲು ಜೇನು ಮತ್ತು ಜೇನು ನೊಣ ಕಡಿದ ಅನುಭವ, ಒಂದಿನ ಯಥಾ ನಾನು ಮೊದಲನೇ ಬೆಂಚಿಗೆ ಜಾಗ ಹಿಡಿದು ಕೂತಿದ್ದೆ ಮೊದಲನೇ ಅವಧಿ ಅವರದ್ದೇ ಆಗಿತ್ತು. ಪಾಠ ನಡೆಯುತ್ತಿರುವ ಸಂಧರ್ಭ,
ಮೇಷ್ಟ್ರು: ದಾನಿ, ದಾನಿ ಅಂತಿದಾರೆ,
ನಾನು: ತರಗತಿಯ ಚಿತ್ತದಿಂದ ಕೂಡೋದ್ ಬಿಟ್ಟು ಬೇರೆ ಇನ್ನ್ಯಾವುದೋ ಜೋತ್ತಿರ್ವರ್ಷ ಜಿಗಿದು ದೂರದ ಲೋಕಕ್ಕೆ ರಾಕೆಟ್ನಲ್ಲಿ ಪ್ರಯಾಣ ಬೆಳೆಸಿ, ಪೆನ್ನು ತಿನ್ನುತ್ತ ಸಮೀಪವಿದ್ದ ಕಿಟಕಿಯನ್ನ ನೋಡ್ತಿದ್ದೆ..
[ಏನಾಗಿರಬಹುದು ಇಲ್ಲಿ ?]
[ಪಾಪ ಮೇಷ್ಟ್ರು ಸ್ವಲ್ಪ ಹೊತ್ತು ಕಾದಿದ್ದಾರೆ ನಾನು ಅವರ ಪಾಠಕ್ಕೆ ಗಮನ ಕೊಟ್ಟಿಲ್ಲ, ಅವ್ರಿಗೂ ರೇಗಿದೆ ಕಯ್ಯಲ್ಲಿರೋ ಬಳಪದ ತುಂಡನ್ನ, ನಂಗೆ ಅಂತ ಎಸೆದಿದ್ರೂ ಅದೂ ನನಗೆ ಈಗಲೂ ನೆನಪಿದೆ ಅದು ಸರಿಯಾಗಿ ಬಂದು ನನ್ನ ಹುಬ್ಬಂಚಿಗೆ ಹಣೆಯ ಮದ್ಯ ಬಾಗಕ್ಕೆ(ಕುಂಕುಮ ಇಟ್ಟೋಕೊಳ್ಳೋ ಜಾಗ) ಬಂದು ಪಟ್ ಅಂತ ಬಿದ್ದಿತ್ತು. ]
ನಾನು: ಅದೂ ನಂಗೆ ತಿಳಿತಿದ್ದ ಹಾಗೆ ಅದೆಲ್ಲಿಯೋ ಹೋಗಿದ್ದ ನನ್ನ ಚಿತ್ತವ ವಾಪಾಸ್ ಕ್ಲಾಸ್ ಗೆ ಹಿಡ್ಕೊಂಡು ಬಂದು , ಬಳಪವ ಹುಡುಕಿ ಗುರುಗಳಿಗೆ ಕೊಟ್ಟು ಕ್ಷಮೆ ಕೇಳಬೇಕೆಂದು, ಸಂಗಡಿಗರ ಸಲಹೆಯಿಂದ ಕಂಗಾಲಾಗಿ ಹುಡುಕುತ್ತಿದ್ದೇನೆ.
ಮೇಷ್ಟ್ರು: [ಅವರು ಹತ್ರ ಬಂದ್ರೂ, ನಂಗೆ ಭಯದ ಮನೆಬಾಗಿಲ ದಾರಿ ತುಂಬಾ ಸಮೀಪವಾಗಿದೆ..]
ನಾನು: ಇಲ್ಲ ಸರ್, ತಪ್ಪಾಯ್ತು ಸರ್, ಇನ್ನೊಮ್ಮೆ ಹೀಗ್ ಮಾಡಲ್ಲ ಅಂತ ಹೇಳೋಕ್ ಹೊರಟಿದ್ದೆ,
ಮೇಷ್ಟ್ರು: ತೋಳಿನ ಕೇಳಬದಿಗೆ ಅವರ ಕೈ ಬಂದಿತು, ಹೆಬ್ಬೆರಳು ಮತ್ತು ತೋರು ಬೆರಳು ಬಳಸಿ ಹಿಂಡಿದರು ನೋಡಿ, ಅಹಾ! ನಾನು ಅದ್ಯಾವ ಲೋಕಕ್ಕೆ ಹೋಗಿದ್ದೇನೋ ಅಲ್ಲಿಂದ ಜೇನು ನೊಣಗಳು ಅಟ್ಟಿಸಿ ಬಂದು ಕಾಡಿದಂತಾಯ್ತು,
[ಎಲ್ಲವೂ ನಿಚ್ಚಳ! ಧಿಗ್ ಭ್ರಮಣೆ ಆಗೋಯ್ತು.]
ಅವತ್ತಿಂದ ಅವರಿದ್ದಾರೆ ಅಂದರೆ ನನ್ನಲ್ಲಿ ಶಿಸ್ತು ತಾನಾಗಿಯೇ ಬರುತ್ತಿತ್ತು, ಒಂದೆರಡು ಸರಿ,ಬಳಪ ಕಯ್ಯಲ್ಲಿ ಕೊಟ್ಟು ಬೋರ್ಡ್ ಮೇಲಿನ ಲೆಕ್ಕ ಪೂರ್ತಿ ಮಾಡಲು ಹೇಳಿದ ಸಂಗತಿಗಳುಂಟು, ಮಾಡಿದ ಮೇಲೆ ತಪ್ಪಿದ್ದರೆ ಹೇಳಿಕೊಡುತ್ತಿದ್ದರು ಅದು ಆ ಕ್ಷಣದಲ್ಲೇ ಹೇಳಿ ಕೊಡೋರು, ಲೆಕ್ಕ ಸರಿಯಾಗಿದ್ದರೆ ಎಲ್ಲರಿಂದ ಚಪ್ಪಾಳೆಯ ಪ್ರೋತ್ಸಾಹ ಸಿಗೋದು ಅದೊಂಥರ ಹೆಮ್ಮೆ ನನ್ನಗೆ.
ಒಟ್ನಲ್ಲಿ ಅವರು ಮಾಡಿದ ಜಾದೂ ಏನು ಅನ್ನೋದು ತಿಳಿದಿಲ್ಲ, ಒಂದಂಗಡಿಯ ಕೆಲಸದಲ್ಲಿ ಇರಬೇಕಾದ ನಾನು ಇವತ್ತೂ ಒಂದು ಬಹುರಾಷ್ಟ್ರೀಯ ಉದ್ಯಮ ಒಂದರಲ್ಲಿ ತಂತ್ರಾಂಶಗಳ ಅಭಿಯಂತರನಾಗಿ ಮತ್ತು ಇಲ್ಲಿ ನಿಮ್ಮ ಮುಂದೆ ನನ್ನ ನೆನಪುಗಳನ್ನ ಹೇಳಿಕೊಳ್ಳುತ್ತಿದ್ದಿನಿ. ನನಗೆ ಜೀವನದಲ್ಲಿ ಓದಿನ ಕಡೆಗೆ ಹುರುಪು ಕೊಟ್ಟವರಲ್ಲಿ ಅವರೂ ಒಬ್ಬರೂ.
ಅವರ ಸಾಹಿತ್ಯ ಆಸಕ್ತಿ ಕಡಿಮೆ ಏನಲ್ಲ, ಅದಕ್ಕಾಗಿಯೇ ಇರಬಹುದು ಅವರಲ್ಲಿ ತುಂಬಾನೇ ಒಳ್ಳೆ ಆಶಯ, ಆದರ್ಶಗಳ ಪಾಲನೆ ಇದ್ದಿದ್ದೂ. ಅವರು ಬೆಂಗಳೂರಿಗೆ ಹೋಗಿ ಬಂದ ಅನುಭವಗಳಲ್ಲಿ ಸಪ್ನಾ ಬುಕ್ ಹೌಸ್ ಗೆ ಹೋದ ಸಂಧರ್ಭಗಳನ್ನೂ ಹಂಚಿಕೊಳ್ಳುತ್ತಿದ್ದರು. ಅದು ನಮಗೆ ವಿಚಿತ್ರವಾಗಿತ್ತು ಮತ್ತೂ ಅಪರೂಪವಾಗಿತ್ತು ಯಾಕೆಂದರೆ ಬೆಂಗಳೂರು ನಮಗೆ ಪುಸ್ತಕದಲ್ಲಿ ಓದಿದ ನೆನಪೇ ವಿನಃ ಅದರ ಯಾವ ಪರಿಕಲ್ಪನೆಗಳು ನಮಗೆ ಇರಲಿಲ್ಲ.
ಸಾಹಿತ್ಯ ಲೋಕದ ಅರಿವು ನಮಗೆ ಸರಿಯಾದ ಸಮಯದಲ್ಲಿ ದಕ್ಕಲಿಲ್ಲ ನಾನಾ ಕಾರಣಗಳಿಂದ. ಇವರು ನಮಗೆ ಸಾಹಿತ್ಯದ ಅರಿವನ್ನು ಪರಿಚಯಿಸಿದ್ದರು. ಅವರು ನಾವು ಹತ್ತನೇ ತರಗತಿಯ ಮಧ್ಯವಾರ್ಷಿಕ ಪರೀಕ್ಷೆಗೆ ಮುನ್ನವೇ ಅವರ ಪದೋನ್ನತಿ(ಪ್ರಮೋಶನ್) ಆದ ವಿಷಯ ತಿಳಿದು ಬಂತು, ಎಲ್ಲ ಶಿಕ್ಷಕರಿಗೂ ಮತ್ತು ಅವರಿಗೂ ಖುಷಿಯಾದರೆ ನಮಗೆ ಎಲ್ಲಿಲ್ಲದ ನೋವು, ಬೇಜಾರ್ ಆದ ಕ್ಷಣ…!
ಆವತ್ತಿನಿಂದ ಇವತ್ತಿನ ವರೆಗೂ ಅವರೆಂದರೆ ಮೈ ನಿಮಿರಿ ನಿಲ್ಲುತ್ತದೆ ಆತ್ಮ ವಿಶ್ವಾಸ ಉಕ್ಕಿ ಬರುತ್ತದೆ. ಮೇಸ್ಟ್ರು ಪಾಠ ಅಷ್ಟೇ ಅಲ್ಲ ಅವರು ಗಣಿತವನ್ನ ಆಟಗಳ ಮೂಲಕ ಪ್ರದರ್ಶಿಸುತ್ತಿದ್ದರು (ಅದು ಪ್ರೌಡ ಶಿಕ್ಷಣದಲ್ಲಿ), ಹಾಗೆ ಕಲಿಸುವ ಏಕೈಕ ಸಹೃದಯಿ ಅವರಾಗಿದ್ದರು[(a+b)^2 ಅನ್ನು ಪೇಪರ್ ಕಟಿಂಗ್ ಮೂಕಾಂತರ, ಪೈ(π) ಬೆಲೆಯನ್ನು ಬಳೆಗಳ ಸಹಾಯದಿಂದ.. ಹೀಗೆ ಕೆಲವೊಂದು ನೆನಪು ಇಗಲೂ ಇದೆ]
ಅವರು ಒಬ್ಬ ನೇಗಿಲ ಹಿಡಿಯುವ ರೈತನೂ ಕೂಡ. ಕೇಲ್ವೊಂದು ಬಾರಿ ಲೆಕ್ಕಗಳ ಉಧಾಹರಣೆಗಳಲ್ಲಿ ಅವರ ಕೃಷಿಯ ಅನುಭವಗಳನ್ನ ಹಂಚಿಕೊಂಡದ್ದು ನೆನಪಿದೆ, ‘ಹುದುವಿನ ಬದು’ ಇದರ ಬಗ್ಗೆ ನಮಗೆ ಮಾಹಿತಿ ಇರಲಿಲ್ಲ ಆದರೆ ಒಂದು ಸಮಯದಲ್ಲಿ ಇದನ್ನು ೧೦ ನಿಮಿಷದ ಚರ್ಚೆಯ ಮೂಲಕ ಅದನ್ನು ತಿಳಿ ಹೇಳಿದ್ದರು. ಅವರಿಗೆ ಪಂಚಾಂಗ(ಕ್ಯಾಲಂಡರ್) ಬಗ್ಗೆ ಅದೆಷ್ಟೋ ವಿಷಯಗಳು ಗೊತ್ತಿವೆ ಅವನ್ನ ನಮಗೂ ಹೇಳೋರು ಇವಾಗ ಈ ಹುಣ್ಣಿಮೆ, ಈ ನಕ್ಷತ್ರ ಇಲ್ಲಿ ಬರೋದು. ಅವರ ಖಗೋಳ ಶಾಸ್ತ್ರದ ಆ 2-3 ಘಂಟೆಯ ಅವಧಿ ನಮಗೆ ಇವತ್ತೂ ಆಕಾಶ ವೀಕ್ಷಣೆಯ ಅಭಿರುಚಿಗೆ ಕಾರಣ ಅವರು. ಮಹಾವ್ಯಾದ ಎಂಬುವ ಆಕಾಶ ನಕ್ಷತ್ರಗಳ ವೀಕ್ಷಣೆ, ರಾಶಿಗಳ ರಚನೆ, ಶುಕ್ರ ಗ್ರಹದ ಗೋಚರ, ಚಂದ್ರ, ಭೂಮಿಯಾ ಕಕ್ಷೆ ಸುತ್ತುವ ಮತ್ತು ಇನ್ನೂ ಹಲವಾರು ವಿಷಯಗಳನ್ನು ನಮಗೆ ಪರಿಚಯಿಸಿದರು.
ನಿಜವಾಗಿಯೂ ಅವರ ಮಾರ್ಗದರ್ಶನಕ್ಕೊಂದು ನಮನಗಳು ಈ ಸಾಲುಗಳಿಂದ.
ಸಟಸಟನೆ ಹೇಳಿಬಿಡೋರು ಅಚ್ಚರಿಯಾಗುತ್ತಿತ್ತು.. ಹಾಗೆ ಒಂದ್ ನೆನಪು ‘ಜೂನ್ ಸಾಥ್’ ಅಂತ…. ಆಂದ್ರೆ ಜೂನ್ 7 ದಿನಕ್ಕೆ ಹತ್ತಿರವಾಗಿ ಹವಾಮಾನ ತಿರುವು ಕಾಣುತ್ತೆ, ಆ ಸಮಯಕ್ಕೆ ಸರಿಯಾಗಿ ಉಷ್ಣಾಂಶ ತಿರುವು ಕಾಣುತ್ತೆ . ಈ ವೇಳೆಗೆ ಉಷ್ಣ ಹೆಚ್ಚಿರುವ ಅಡಿಗೆ(ಮಾಂಸಹಾರಿಗಳಾಗಿದ್ದರೆ ಕೋಳಿ ಅಥವಾ ಮೊಟ್ಟೆ ) ಸೇವಿಸಬೇಕು ಅನ್ನೋದರ ಬಗ್ಗೆ ಹೇಳಿದ್ದರು.
ಅವರೊಬ್ಬ ಸಾಮಾಜಿಕ ಜೀವಿ ಅಂದರೆ ತಪ್ಪಾಗಲಾರದು, ಅವರು ನೂರಾರು ವರ್ಷ ಬದುಕಿ ಬಳಲಿ ಇನ್ನೂ ಹೆಚ್ಚು ಹೆಚ್ಚು ವಿಧ್ಯಾರ್ಥಿಗಳು ಅವರ ಮಾರ್ಗದರ್ಶನ ಪಡೆಯಲಿ ಎನ್ನುವುದು ನನ್ನಾಸೆ.
ಹೀಗೊಂದು ಬಾಲ್ಯದ ಮಾರ್ಗದರ್ಶಕನ ನೆನಪು !





0 Comments