ಶಿವು ಮೊರಿಗೇರಿ
( ಪ್ರಜಾವಾಣಿ ಪ್ರೇಮ ಪತ್ರ ಸ್ಪರ್ಧೆಗೆ ಕಳಿಸಿದ್ದ ಪತ್ರ )

ಯಾಕೋ ನೆನಪಾದೆ ಅದ್ಕೆ ಈ ಪತ್ರ ಬರೆದು ಮೇಲ್ ಮಾಡಿರುವೆ…
ಎಲ್ಲಿದೀಯಾ ?
ಅನುಮಾನವೇ ಬೇಡ ಕಣೋ ಧೈರ್ಯವಾಗಿ ಹೇಳುತ್ತೇನೆ ನಾನೊಬ್ಬ ವೇಶ್ಯೆ. ಜಗತ್ತಿನ ನಿಯಮಗಳ ವಿರುದ್ಧ ಚಲಿಸುವ ಅಪಶಕುನ ಕಾಲಚಕ್ರ ನಾನು. ವೇಶ್ಯವಾಟಿಕೆ ಅಂದ್ರೆ ತಮಾಷೆ ಅಂದ್ಕೊಂಡಿದಿಯೇನೋ ? ಸಾಮಾನ್ಯ ಜನರೆಲ್ಲ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ಮರಳುತ್ತಿದ್ದರೆ ನಾನು ನನ್ನ ದುಡುಮೆಗೆಂದು ರೆಡಿಯಾಗಬೇಕು. ಹೊತ್ತು ಮುಳುಗುವುದನ್ನು ಮನೆಯ ಕಿಟಕಿಯಿಂದನೇ ಗಮನಿಸಿ ಉಗುರು ಬೆಚ್ಚಗಿನ ನೀರಿನಿಂದ ಬೆನ್ನ ಹುರಿ ಹಿತವೆನ್ನಿಸುವಂತೆ ಮಜ್ಜನ ಮಾಡುವಾಗ, ನೆನ್ನೆಯ ಯಾವ ಬೆವರ ವಾಸನೆಯೂ ಸುಳಿಯಕೂಡದು. ತರೇವಾರಿ ಶಾಂಪುಗಳಿಂದ ತಲೆಗೂದಲುಗಳನ್ನು ರೇಷ್ಮೆ ನೂಲಿನ ಹದಕ್ಕೆ ತರುವಾಗ ಯಾರ ಬೆರಳಗುರುತೂ ಕಾಣಕೂಡದು. ಹಬೆನೀರು ಜಾರುವಾಗ ಮೈಮೇಲೆ ಯಾರದ್ದಾದರೂ ಕಚ್ಚಿದ ಹಸಿಗುರುತುಗಳಿವೆಯಾ, ಎಂದೊಮ್ಮೆ ನೋಡಿಕೊಂಡು ಸ್ನಾನ ಮುಗಿಸಿ ಕನ್ನಡಿಯೆದಿರು ನಿಂತು, ತಲೆಗೂದಲನ್ನು ಒಣಗಿಸಿಕೊಂಡು ನೆಮ್ಮದಿಯಿಂದೊಂದು ನಾಗರ ಜಡೆಯೆಣೆದುಕೊಂಡು, ಬೆಳಗ್ಗೆಯೇ ಖರೀದಿಸಿರಿಸಿದ್ದ ಮಲ್ಲೆಕನಕಾಂಬರಿ ಮುಡಿಗೇರಿಸಿ, ಮುಖಕ್ಕೆ ಪೇಸ್ ಕ್ರೀಮ್ ಬಳಸಿ ಮಿಂಚಿಸಿ, ಕಾಡಿಗೆಯ ಕಾಲಿಗೆ ಬಿದ್ದು ಕಣ್ಣ ಹುಬ್ಬುಗಳನ್ನು ತಿದ್ದಿಕೊಂಡು, ತುಟಿಗೊಪ್ಪುವ ಲಿಪ್ಟಿಕ್ ಹಾಕಿ, ಇದ್ದುದರಲ್ಲೇ ಮಿಂಚುವ ಸೀರೆಯೊಂದನ್ನು ಆಯ್ದು ಉಟ್ಟು, ಮತ್ತೊಮ್ಮೆ ಕನ್ನಡಿಗೆ ಪ್ರೀತಿಯ ಮುತ್ತನ್ನಿಟ್ಟು, ಇಂದಾದರೂ ದಯಾಮಯಿ ಗಿರಾಕಿ ಸಿಗಲೆಂದು ದೇವರಲ್ಲಿ ಬೇಡಿಕೊಂಡು, ಹಾಸಿಗೆಯಲ್ಲಿ ಮಲಗಿದ ಅಮ್ಮನ ಮಾತ್ರೆಗಳ ಚೀಟಿಯನ್ನು ನನ್ನ ಬ್ಯಾಗಿಗಿಳಿಸಿ, ಪ್ರೀತಿಯಿಂದ ಅಮ್ಮನಿಗೊಂದು ವಿದಾಯ ತಿಳಿಸಿ, ಮನೆಯ ಬಾಗಿಲು ಭದ್ರಪಡಿಸಿ ಮನೆಯಿಂದ ಹೊರಬೀಳಬೇಕು.
ಹೀಗೆ ಇಷ್ಟೆಲ್ಲಾ ತಯಾರಿಗಳ ನಂತರವೇ ಅಂದು ನಾನು ಆ ಬೀದಿ ಬದಿಯ ಮರದ ಕೆಳಗಿನ ಮಂಕು ಬೆಳಕಲ್ಲಿ ನಿಂತಿದ್ದೆ. ಅಷ್ಟೊತ್ತಿಗೆಲ್ಲಾ ಹೊತ್ತು ಮುಳುಗಿ ಕತ್ತಲಾವರಿಸುತ್ತಿತ್ತು. ನನ್ನ ಅನತಿ ದೂರದಲ್ಲಿ ನಿಂತಿದ್ದ ನನ್ನಂಥಹದ್ದೇ ಅತೃಪ್ತ ಆತ್ಮಗಳನ್ನು, ಅದಾರೋ ಬಂದು ಕೊಂಡೊಯ್ದರು. ಹೊತ್ತು ಕಳೆಯುತ್ತಲೇ ಇತ್ತು, ನನ್ನೊಳಗಿನ ದುಗುಡ ಜಾಸ್ತಿಯಾಗುತ್ತಲೇ ಇತ್ತು. ಆಗಲೇ ಅಲ್ವೇನೋ ನೀನು ನನ್ನ ಬಳಿ ನಿಂತದ್ದು. ಅಬ್ಬಾ! ಅಂತೂ ಇಂದಿನ ದುಡುಮೆ ಸಿಕ್ಕಿತು ದೊರೆಯೇ ಎಂದುಕೊಂಡು, ಮಾದಕವಾಗಿ ಕಣ್ಣ ಹುಬ್ಬುಗಳನ್ನು ಏರಿಸಿದರೆ, ‘ಬಾ ಕೂತ್ಕೋ ಹೋಗೋಣ’ ಎಂದ ಗಂಡೆದೆಯ ಧೀರ ನೀನಲ್ಲವೇನೋ ? ‘ಎಷ್ಟು ಕೊಡ್ತಿಯಾ ?’ ಅಂತ ನೇರವಾಗಿ ನಿನ್ನನ್ನು ಕೇಳುತ್ತೇನೆಂದರೆ, ನನ್ನೊಳಗಿನ ಮಾನವೀಯತೆ ಅದೆಲ್ಲಿ ಮಣ್ಣಾಗಿ ಹೋಗಿರಬಹುದು ಹುಡುಕಬಲ್ಲೆಯಾ ? ನನ್ನ ಪ್ರಶ್ನೆ ಮುಗಿಯುತಿದ್ದಂತೆಯೇ ‘ದುಡ್ಡಿನ ಬಗ್ಗೆ ಚಿಂತಿಸದಿರು, ಬಾ ಕೂರು’ ಎಂದು ಬೈಕಿನ ಸೀಟನ್ನು ತೋರಿಸಿದಾಗ ತುಸು ಅನುಮಾನದ ನೋಟ ಬೀರಿದ್ದೆ ನಿನ್ನತ್ತ ನಾನಾಗ. ನನ್ನ ಅನುಮಾನದ ಛಾಯೆ ಗುರುತಿಸಿದ ನೀನು ತಕ್ಷಣ ಹೆಲ್ಮೆಟ್ ತೆಗೆದು ನಿನ್ನ ಮುಖವನ್ನು ತೋರಿಸಿ ಪರ್ಸ್ನಿಂದ 1000 ರೂಗಳನ್ನು ನೀಡಿ ‘ನೀನೇನು ತಪ್ಪು ತಿಳ್ಕೋಬೇಡ, ನಮ್ಮ ಮನೇಲಿ ನಾನೊಬ್ಬನೇ ಇರೋದು. ಸುಮ್ನೆ ಹೋಟೆಲ್ಲು ರೂಮು ಅಂತೆಲ್ಲಾ ದುಡ್ಡ್ಯಾಕೆ ವೇಸ್ಟು ?’ ಎನ್ನುತ್ತಾ ಮೊಗ್ಗುಬಿರಿದ ನಗೆ ಚೆಲ್ಲಿದೆಯಲ್ಲಾ ! ಆಗಲೇ ನಿಂಗೆ ಮನಸೋತಿದ್ದೆ. ತಕ್ಷಣ ನಾನು ಬೈಕನ್ನು ಏರುತ್ತಲೇ ಶರವೇಗ ಕಂಡ ನೀನು ದಾರಿಯ ಮದ್ಯದ ಹೋಟೆಲ್ನಲ್ಲಿ, ಊಟಕ್ಕಿಷ್ಟು ಕಟ್ಟಿಸಿಕೊಂಡು ಬಂದು ಅಂತು ಮನೆ ಸೇರುವ ಹೊತ್ತಿಗೆ ನಿನ್ನ ಮನೆಯ ಅಕ್ಕಪಕ್ಕದ ಮನೆಗಳ ದೀಪಗಳು ತಣ್ಣಗಾಗಿದ್ದವು.
ಸರಿ, ನಿನ್ನ ಮನೆಯೊಳಗೆ ನಡೆದದ್ದೂ ನಿನ್ನ ಪುಟ್ಟ ಅರಮನೆಯನ್ನು ನೋಡಿದ್ದೂ ಆಯ್ತು. ತಕ್ಷಣ ನೀನು ಪ್ರೆಷಾಗಿ ಬಂದು ನನಗೂ ಬಿಸಿನೀರ ತೋರಿಸಿ ನಿರುಮ್ಮಳಾಗಲು ಹೇಳಿದ ಮೊದಲ ಅಪ್ಪನಂಥೋನು ನೀನು. ಆಚೆ ಬಂದ ತಕ್ಷಣ ಕನ್ನಡಿಮುಂದೆ ನಿಂತು ಮತ್ತೆ ರೆಡಿಯಾದಾಗ ಚಾಪೆಯನ್ನು ಹಾಸಿ ಎರೆಡು ತಟ್ಟೆ ರೆಡಿಮಾಡಿ ಊಟಕ್ಕೆ ಕರೆದ ಮೊದಲ ಅಮ್ಮನಂಥೋನು ನೀನು. ನಾನು ನೋಡೋಣ ಹುಡುಗ ಇನ್ನೆಷ್ಟು ಒಳ್ಳೆಯವನು ? ಎಂಬ ಅನುಮಾನದಿಂದಲೇ ಮಾದಕವಾಗಿ ನಕ್ಕಾಗ ಅಕ್ಕರೆಯಿಂದ ನಂಗೆ ತುತ್ತು ನೀಡಿದ ಮತ್ತೊಬ್ಬ ತಾಯಿ ನೀನು. ತಕ್ಷಣವೇ ಕಣ್ಣಿರ ಹನಿಯೊಂದು ಕೆನ್ನೆ ಜಾರಿತು. ನಿನ್ನ ನಿಷ್ಕಲ್ಮಶ ಹೃದಯದ ಪಾದಕ್ಕೆ ನನ್ನ ಹಣೆಯು ತಾಕಿತ್ತು. ಊಟದ ಉಪಚಾರವೂ ಮುಗಿದ ಮೇಲೆ ‘ಎಲ್ಲಿ ಮಲಗೋಣ’ ಎಂದು ನಾನು ಮತ್ತೊಮ್ಮೆ ನಿನ್ನ ಕೇಳಿದ್ದೆ. ಎಷ್ಟೇ ಆಗಲಿ ನಾನು ವೇಶ್ಯೆ ಅಲ್ವೇನೋ ದೇವರಂಥವನೇ…
ಅಲ್ಲಿಯವರೆಗೂ ಒಂದೇ ಒಂದು ಗಂಭೀರವಾಡದ ನೀನು ಮೊದಲಬಾರಿಗೆ ಹೇಳಿದ ಮಾತಿಗೆ ನನ್ನ ಮೈಯೊಳಗೊಂದು ಸಿಡಿಲು ಬಡಿದಂತಾಗಿತ್ತು. ಹಾಗೆ ತುಟಿತೆರೆದ ನೀನು ‘ನೋಡು ಸಿಂಚನಾ, ನಿಂಗೆ ನಾನಾರು ಅಂತ ಗೊತ್ತೂ ಇಲ್ಲ. ಆದರೆ ನೀನಾರು, ನಿನ್ನ ಗುಣ ಎಂಥಹದ್ದು, ನಿನ್ನ ಜೀವನದಲ್ಲಿ ನೀ ಕಂಡ ಕನಸುಗಳೇನು, ನಿನ್ನ ಓದ್ಯಾಕೆ ಅರ್ಧಕ್ಕೆ ನಿಂತಿತು, ನೀನು ಈ ದ್ವಂದ್ವ ದಾರಿಗೆ ಬಂದು ಎಷ್ಟು ದಿನಗಳಾಯ್ತು, ಪ್ರಜ್ಞಾವಂತಳಾದ ನೀನೇ ಯಾಕೆ ಬಯಸಿ ಈ ದಾರಿಯನ್ನು ಆಯ್ಕೆ ಮಾಡಿಕೊಂಡೆ, ಈಗ ನಿನ್ನೆದಿರು ಇರುವ ಸವಾಲುಗಳೇನು, ಎಲ್ಲಾ ನಂಗೆ ಗೊತ್ತಿದೆ. ನೋಡು ಸಿಂಚು, ಈ ಕ್ಷಣದವರೆಗೆ ನೀನು ಏನಾಗಿದ್ದೆಯೋ, ಯಾರಾಗಿದ್ದೆಯೋ, ಅದಾವುದೂ ನಿಂಗೂ ಬೇಡ, ನಂಗೂ ಬೇಕಿಲ್ಲ. ಆ ಕಡೆ ಇರೋ ರೂಮಲ್ಲಿ ಹೋಗಿ ಮಲಗಿಕೋ, ಇದೇ ವಾರವೇ ನಿನ್ನ ಮದ್ವೆಯಾಗ್ತಿನಿ’ ಎಂದೆಯಲ್ಲಾ ! ನಿನ್ನ ಉದಾರ ಗುಣಕ್ಕೆ, ಮಗುವಿನ ಮುಗ್ದತೆಗೆ, ಏನೋ ಹೇಳಲಿ ನಾ ನಿಂಗೆ ? ನೀನು ನೀಡಿದ ಆಘಾತದಿಂದ ಚೇತರಿಸಿಕೊಂಡು ಇಷ್ಟು ಸಮಯದ ಬಳಿಕ ಈಗ ಕೇಳಿದ್ದೆ,
‘ನನ್ನ ಮೇಲೆ ಇಷ್ಟೊಂದು ಅಕ್ಕರೆಯಿದೆಯಲ್ಲಾ ಯಾರೋ ನೀನು ?’
‘ನಾನು ಶಿವು ಅಂತ ಮೊದಲು ನಿನ್ನ ಮನೆಯ ಆಚೆ ಬೀದಿಯ ಕೊನೆಯ ಮನೆಯಲ್ಲಿ ಬಾಡಿಗೆಗಿದ್ದೆ. ಕಳೆದ ಏಳೆಂಟು ತಿಂಗಳಿಂದಲೂ ನಿನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವೆ. ಇನ್ನೇನು ನಿನ್ನೆದಿರು ವಿಷಯ ಪ್ರಸ್ತಾಪಿಸಬೇಕೆನ್ನುವಷ್ಟರಲ್ಲಿ ನೀನೀ ದಂಧೆಗಿಳಿದಿದ್ದೆ. ಈ ವಿಷಯವನ್ನು ಮೊದಲು ನನ್ನ ಗೆಳೆಯರೆದಿರು ಹೇಳಿದಾಗ ನಂಗೆ ಹುಚ್ಚು ಎಂದರು. ಮನೆಯವರು, ನೀನು ಮದ್ವೆಯಾಗದೇ ಸಾಯೋದು ಒಳ್ಳೇದು ಎಂದರು. ಅವರೆಲ್ಲರಿಗೂ ನಾನು ಸವಾಲು ಹಾಕಿರುವೆ. ನೋಡ್ತಾಯಿರಿ ನಾವು ನಿಮ್ಮೆಲ್ಲಾ ಆಪಾದನೆಗಳನ್ನು ತುಳಿದು, ನಿಮ್ಮೆದುರೇ ಈ ಸಮಾಜದ ಆದರ್ಶ ದಂಪತಿಗಳಾಗ್ತಿವಿ ಎಂದೇಳಿ, ಇಂದು ಈ ತೀರ್ಮಾನವನ್ನು ನಿಂಗೆ ಹೇಳಿದಿನಿ.’ ಪ್ರಶ್ನೆ ಮುಗಿಯುವುದರೊಳಗೆ ಉತ್ತರಿಸಿದ್ದೆ ನೀನು. ತಕ್ಷಣ ಅಲ್ಲಿ ನೀ ನೀಡಿದ್ದ ದುಡ್ಡನ್ನು ನಿನ್ನ ಪಾದಕ್ಕಿಟ್ಟು ನನ್ನ ಹಣೆಯನ್ನು ನಿನ್ನ ಪಾದಕ್ಕಚ್ಚಿ ದುಃಖ ತಾಳಲಾರದೆ ರೂಮಿನೊಳ ಹೋಗಿ ಬಿಕ್ಕಿ ಬಿಕ್ಕಿ ಬೆಳಕು ಕಂಡಿದ್ದೆ.
ಈ ಘಟನೆ ನಡೆದು ಒಂದೇ ವಾರದೊಳಗೆ ನಾವು ಪತಿ ಪತ್ನಿಯರಾದೆವು. ಮನೇಲಿ ಒಬ್ಬಳೇ ಕೂತಿದ್ದೆ. ಯಾಕೋ ನೆನಪಾದೆ ಅದ್ಕೆ ಈ ಪತ್ರ ಬರೆದು ಮೇಲ್ ಮಾಡಿರುವೆ. ಆಗಲೇ ಹೊತ್ತು ಮುಳುಗಿ ಕತ್ತಲಾಗ್ತಾಯಿದೆ. ಆಫೀಸ್ನಿಂದ ಬೇಗ ಬಾ ಮಾರಾಯ; ನನ್ನೊಟ್ಟೆಯೊಳಗಿನ ನಿನ್ನ ಮಗನ ಕಾಟ ತಾಳಲಾಗ್ತಿಲ್ಲ. ಬಂದು ಒಂದಷ್ಟು ಮುದ್ದಾಡಿ ಸುಧಾರಿಸು.
ಇಂತಿ ನಿನ್ನ
ಸಿಂಚನಾ







ಅಬ್ಬಾ…ಎಂತಹ ಕರುಳುಕಿವುಚುವ ಮಾನವೀಯತೆ….ಯ ವಿಚಾರಗಳು….ಚೆನ್ನಾಗಿದೆ…
Super sir……..
nice
nijawadha preeti andhre idheri…… nim jeevana yawagalu superag irli
Pavitra preetige hosa baduku kottidira