ನಾನು ಕಡಲೆ, 7500ವರ್ಷಗಳ ಇತಿಹಾಸ ಹೊಂದಿರುವ, ಭೂಮಿಯಲ್ಲಿ ಮೊದಲು ಬೇಸಾಯ ಮಾಡಲ್ಪಟ್ಟ ಸಸ್ಯಗಳ ಪೈಕಿ ಹೆಚ್ಚಿನ ಪ್ರೋಟೀನ್ ಹೊಂದಿರುವ ದ್ವಿದಳ ಧಾನ್ಯ. ಜನ್ಮದಾರಾಭ್ಯದಿಂದ ಎಲ್ಲರೂ ನನ್ನನ್ನು ಪ್ರೀತಿಸುವವರೆ! ನಾನು ಬೆಳೆಯಲು ಮಳೆ ಹೆಚ್ಚು ಬೇಕಿಲ್ಲ. ತಂಪಿನ ಒಡಲಿದ್ದರೆ ಸಾಕು. ರೈತರಿಗೆ ನಗುತರಿಸುವ ವಾಣಿಜ್ಯ ಬೆಳೆ. ಚಿಕ್ಕನಿರುವಾಗಲು ನನ್ನ ಎಲೆ ಎಲ್ಲರಿಗೂ ಪ್ರೀತಿ. ನನ್ನ ಎಲೆಗಳನ್ನು ಚಿವುಟಿಕೊಂಡು ಹೋಗಿ ತರಾವರಿ ಚಟ್ನಿ, ಪಲ್ಯ ಮಾಡಿ ತಿನ್ನತ್ತಾರೆ. ಮುಂದೆ ಎಳೆಯ ಕಾಯಿಗಳನ್ನು ಬಿಡುವಾಗ ಎಲ್ಲರ ಆಕರ್ಷಣೆಯ ಬಿಂದು. ಹೊಲದಲ್ಲಿ ನನ್ನನ್ನು ಬೆಳೆಸಿದವರು ‘ನನ್ನ ಹೊಲದಾಗ ಕಡ್ಲಿಕಾಯಿ ಆಗ್ಯಾವ ಬರ್ರಿ’ ಎಂದು ಹೆಮ್ಮೆಯಿಂದ ಬಂಧು ಬಳಗ ಸ್ನೇಹಿತರನ್ನು ಕರೆದುಕೊಂಡು ಬಂದು ಉತ್ಸಾಹದಿಂದ ಕಿತ್ತಿ ಎಳಕಾಯಿಯ ಸ್ವಾದವನ್ನು ಸವಿಸಿ ಸಂಬ್ರಮಿಸುತ್ತಾರೆ. ಕೆಲವರು ಅಲ್ಲೆ ಸುಟ್ಟು, ಅರಬೆಂದ ನನ್ನ ಕವಚ ಸುಲಿದು ತಿನ್ನುತ್ತಾರೆ. ದಾರಿಯಲ್ಲಿ ಹೋಗುವವರಿಗೆ ಆಯಸ್ಕಾಂತ ನಾನು. ಹೊಲದಲ್ಲಿ ಏನೆ ಬೇಳೆ ಇರಲಿ ಮುಟ್ಟರು. ಕಡ್ಲಿ ಗಿಡ ಅವ ಅಂದ್ರ ಸಾಕು ಎಂತವರೆ ಇರಲಿ ದಾರಿಯಲ್ಲಿ ಕಂಡಾಗ ನನ್ನನ್ನು ಹೇಗಾದರೂ ಕಿಡ್ನಾಪ ಮಾಡುವದಂತೂ ಸತ್ಯ. ದಾರಿ ಹೋಕರಿಗೆ ಹಸಿದವರಿಗೆ ಖಂಡಿತವಾಗಿ ನಾನು ಸಹಾಯವಂತೂ ಮಾಡುವೆ. ಕೆಲವರದು ನನ್ನ ಬಗ್ಗೆ ಕಂಪ್ಲೇಂಟು. ಹುಳುಚಿ ಇರುತ್ತೇ ಎಂದು. ಹೌದು ಚೆನ್ನಾಗಿದಿದ್ರೆ ಬದುಕಲು ಬಿಡುತ್ತಿದ್ದಿರಾ? ಪಾಪ ಬಿತ್ತಿದ ರೈತನಿಗೆ, ಮಾಲಿಕನಿಗೆ ಬೇಡವೇ. ನನನ್ನು ಮುಟ್ಟಲು ಹಲವಾರು ಕ್ರಿಮಿಗಳು ಬರುವುದರಿಂದ ನನ್ನ ದೇಹ ರಕ್ಷಣೆಗಾಗಿ ನಾನು ಹುಳುಚಿಟ್ಟುಕೊಂಡಿರುವುದು ಸತ್ಯ.
ನನ್ನ ಅವಧಿ ಮುಗಿದ ಮೆಲೆ ಬಲಿತ ಕಾಳಾಗಿ ವಯಸ್ಸಿಗೆ ಬಂದ ಮಗನಾಗಿ ಬೆಳೆಸಿದವರಿಗೆ ಇದುವರೆಗೂ ಖಂಡಿತ ನೋವುಂಟು ಮಾಡಿಲ್ಲ. ನನ್ನ ಯೋಗ್ಯತೆಗೆ ತಕ್ಕಂತೆ ಮಾರಿಕೊಂಡಿದ್ದೇನೆ. ಎಲ್ಲರೂ ನನ್ನನ್ನು ಮಾರುವುದಿಲ್ಲ. ಕೆಲವರು ಮನೆಯಲ್ಲಿ ಇರಿಸಿ ಉಪಚರಿಸುವವರು, ಕೆಲವರು ಗೋಡೌನನಲ್ಲಿ ಸಂಗ್ರಹಿಸುವವರು. ಅಲ್ಲಿಂದ ಮಿಲ್ಲಿಗೆ ಹೋಗಿ ನಾನು ನಯನಾಜೂಕಾದ ದ್ರವ್ಯವಾಗಿ ಹೊರಬರುವ.ೆ ನನ್ನ ಬೆಳಿಸಿದವರು ಮಾರಿದ್ದಕಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುವವ ನಾನು. ಅದಕ್ಕೆ ನನ್ನನ್ನು ಸುಂದರ ಯುವತಿಯಂತೆ ಕಾಣುವ ಹಾಗೆ ಪಾಲಿಶು ಮಾಡಿರುವುದೆ ಕಾರಣ.
ನಂತರದಲ್ಲಿ ಪ್ರತಿ ಮನೆ ಮನೆಗೂ ನನ್ನ ಸವಾರಿ. ನಾನಿಲ್ಲದ ಅಡುಗೆ ಮನೆನೇ ಶೂನ್ಯ, ನಾನಿಲ್ಲದ ಸಿಹಿ, ಖಾರ, ಕರಿದತಿಂಡಿಯೇ ಇಲ್ಲ. ಇದು ನನ್ನ ಸೊಕ್ಕಿನ ಮಾತಲ್ಲ. ನನ್ನ ಬಗ್ಗೆ ಹೆಮ್ಮೆಯಿಂದ ಹೇಳುವ ಮಾತು. ನಾನು ಒಂದರ್ಥರದಲ್ಲಿ ಧಾನ್ಯಗಳಿಗೆ ರಾಜ. ಪ್ರತಿ ವಿಶೇಷ ಸಂದರ್ಭಕ್ಕೂ ನನ್ನ ಉಪಸ್ಥಿತಿ ಅನಿವಾರ್ಯ. ನೀವು ಯೋಚಿಸುವ ಮೊದಲೇ ಹೇಳಿಬಿಡುವೆ. ಮದುವೆ ಮುಂಜವಿ ಕುಬಸ ಏನೇ ಇರಲಿ ಅಲ್ಲಿ ಸಿಹಿ ಊಟ ಬೇಕೆ ಬೇಕು. ಅಲ್ಲಿ ಮೆರೆಯುವವನು ನಾನೆ. ‘ಹೋಳಿಗೆ’ ಎಂದರೆ ಯಾರಿಗೆ ಬಾಯಲ್ಲಿ ನೀರೂರಿಯಲ್ಲ ಹೇಳಿ? ನಾನಿಲ್ಲದೇ ಹೋಳಿಗೆಗೆ ಭವಿಷ್ಯ ಇದೆಯೇ, ‘ಹರಕು ಹೋಳಿಗೆ ಲೇಸು, ಮುರುಕು ಸೊಂಡಿಗೆ ಲೇಸು’ ಎಂದು ಸರ್ವಜ್ಞ ಹೇಳಿಲ್ಲವೇ? ಹೋಳಿಗೆ ಮಾಡೋದು ಕಲೆ. ಸೂಕ್ಷ್ಮ, ಹೈಫೈ ಮಂದಿಗೆ ನನ್ನ ಒಲಿಸಿಕೊಳ್ಳುವ ತಾಕತ್ತಿಲ್ಲ. ನನ್ನನ್ನು ಚೆನ್ನಾಗಿ ಕುಚ್ಚಿ ರುಬ್ಬಿ ಹದ ಮಾಡಿ ಕಣಕದೊಳಗೆ ಸೇರಿಸಿ ಅಡಗಿಸಿ ನಾದುವ ಪರಿ ಇದೆಯಲ್ಲ ಸಾಮಾನ್ಯರಿಗೆ ಅಸಾಧ್ಯ. ಒಮ್ಮೆ ಹೈದ್ರಾಬಾದ ನವಾಬನ ಮಂತ್ರಿ ಸಂಚಾರ ನಿಮಿತ್ಯ ಗ್ರಾಮವೊಂದರಲ್ಲಿ ತಂಗಿದ್ದ. ಎಲ್ಲರೂ ವೈವಿದ್ಯಮಯ ಖಾದ್ಯ ತಂದು ಸಂತೃಷ್ಟಗೊಳಿಸಿದರು. ಆದರೆ ಒಬ್ಬ ಬಡವ ತನಗೆ ಏನೂ ಕೊಡಕಾಗದೆ ತನ್ನ ಮನೆಯಲ್ಲಿ ಮಾಡಿದ್ದ ಹೋಳಿಗೆಯನ್ನು ತಂದು ಅಪರ್ಿಸಿದ.
ಹೋಳಿಗೆ ಜೊತೆ ತುಪ್ಪ ಹಾಕಿಕೊಂಡು ತಿಂದ ಆ ಮಂತ್ರಿ ‘ಏ ಕೌನ್ಸಾ ಖಾನ ಹೈ? ಕೈಸಾ ಬನಾತಾ ಹೈ?’ ಎಂದಾಗ ‘ಸಾಬ್, ಏ ಪೂರಣ ಭರಿತ ಪೂರಿಯಾ, ಗೇರು ಕಾ ಆಟಾ ಕೆ ಅಂದರ್ ಪೂರಣ ಭರತೆ ಸಾಬ’ ಎಂದುತ್ತರಿಸಿದ. ಮ್ಯಾಲ ಕಣಕದ ಹಾಳಿ ಒಳಗ ಹೂರಣ ಅದ, ಒಳಗ ಯಾವ ತೂತು ಇಲ್ಲ ಹಾಂಗಾದ್ರ ಈ ಕಣಕದೊಳಗ ಹೂರಣ ಇಟ್ಟದ್ದು ಹ್ಯಾಂಗ! ಅಂದ ಅಚ್ಚರಿಗೊಂಡು ‘ಹಮ್ ಖುಷ್ ಹೈ ಇಸ್ ಹೋಳಿಗೆ ಖಾಕೆ’ ಎಂದು ಇದ್ದಕ್ಕಿಂದಂತೆ ಅವನನ್ನು ಗ್ರಾಮಕ್ಕ ಕುಲಕಣರ್ಿಯನ್ನಾಗಿ ಹಾಗೂ ಅವನ ಮಾಡಿದ ಹೋಳಿಗೆಗೆ ಮೆಚ್ಚಿ ಹತ್ತು ಎಕರೆ ಭೂಮಿಯನ್ನು ದಾನವಾಗಿ ಆ ಬಡವನಿಗೆ ನೀಡಿದರಂತೆ! ಹೇಗಿದೆ ಹೇಳಿ ನನ್ನ ಕೈಚಳಕಾ? ಹೋಳಿಗೆ ಪ್ರಿಯರು ಯಾರಿಲ್ಲಾ ಹೇಳಿ. ಒಂದು ಕಾಲಕ್ಕ ನಾನಿರುವ ಹೋಳಿಗೆಗೆ ಬಾಳ ಬೇಡಿಕೆ ಇತ್ತು. ದೇವರು-ದಿಂಡ್ರು, ಹಬ್ಬ-ಗಿಬ್ಬ ಅಂತ ಮಾಡಿದ್ರ ಹತ್ತು ಇಪ್ಪತ್ತು ಸೇರು ಗಟ್ಟಲೇ ನನ್ನ ಹೂರಣ ಮಾಡತಿದ್ರು. ರುಬ್ಬುಗುಂಡಿಲೇ ರುಬ್ಬತಿದ್ರು.. ಹೆಣ್ಮಕ್ಕಳು ಹಾಡಾಡಿಕೊಂತ ಲಟ್ಟಸ್ಥಿದ್ದರು. ಆದರ ಅಷ್ಟು ಶಕ್ತಿ, ಪುರುಸತ್ತು ಈಗಿನವರಿಗಿಲ್ಲ. ಹಾಗಂತ ನನ್ನ ಕಿಮ್ಮತ್ತೇನು ಕಮ್ಮಿ ಆಗಿಲ್ಲ. ‘ಇವತ್ತು ಏನಾಯ್ತು?’ ಅಂದ್ರ ಎಲ್ಲಾ ಖಾದ್ಯನ ಮರೆತು ‘ಹೋಳಿಗೆ ಊಟಾ ಆತು?’ ಅನ್ನುವಷ್ಟರ ಮಟ್ಟಿಗೆ ನನ್ನ ಪ್ರಬುತ್ವ ಅದ. ಅದ ಜಾಮೂನಾ ಊಟಾ ಆತು, ಜಿಲೇಬಿ ಊಟಾತು ಅಂತರೇನು? ಇಲ್ಲಲ! ನೀವ ಅಂತಿರೇನೂ…….? ಸಾಧ್ಯನ ಇಲ್ಲ. ಇವತ್ತು ಲಿಂಗಾಯತ ಖಾನಾವಳಿಯ ಮಾಲಿಕರನ್ನ ಸ್ಮರಿಸಲೇ ಬೇಕಾಗುತ್ತ. ಪ್ರತಿ ಸೋಮವಾರ ತಮ್ಮಲ್ಲಿ ಬರುವ ಗ್ರಾಹಕರಿಗೆ ಹೋಳಿಗೆ ಮಾಡಿ ಊಣ್ಣಿಸಿ ಸಂಭ್ರಮ ಪಡತಾರ. ಇವತ್ತು ಮನೆ ಮನೆಗಳಿಗೆ ಹೋಗುವ ಪಾರ್ಸಲ್ ವಸ್ತು ನಾನಾಗಿನಿ. ಹೋಳಿಗೆ ಮಾಡಕ ಬರದವರ ಕೈಲಿ ನಾನು ಆಗೋದು ಕಡಬು. ಕಡುಬಿನ್ಯಾಗ ತೂತು ಹಾಕಿ ತುಪ್ಪ ಸುರುದುಕೊಂಡು ತಿನ್ನುವ ರುಚಿ ಹ್ಯಾಂಗ್ರಿರತ್ರಿ?
ನೆಕ್ಟ ನನ್ನ ರೂಪಾನ ಲಡ್ಡು. ಲಡ್ಡಿಲ್ಲದ ಮದುವೆ ಮನೆ ಏನೋ ಕಳಕೊಂಡಂತೆ. ದೊಡ್ಡ ದೊಡ್ಡ ಲಗ್ನದಲ್ಲಿ ನನ್ನದೇ ಪಾರುಪತ್ಯ. ಕ್ವಿಂಟಲ್ ಗಟ್ಟಲೇ ಮಾಡಿ ಹಾಕ್ತಾರಾ. ಕನ್ಯಾ/ವರಾ ನೋಡಿ ಹೋದಕೂಡಲೇ ಹೋಳಿಗಿ ಊಟಾ ಯಾವಾಗಾ? ಎಂಗೇಜ ಮೆಂಟ ಆದ ಕೂಡಲೇ ಲಡ್ಡು ಯಾವಗ? ಅಂತಾರಲ, ಅಂದ್ರ ಎಂಗೇಜ ಮೆಂಟಗೆ ನನ್ನ ಮಾಡದೆ ಬಿಡುಗಡೆ ಇಲ್ಲವೋ ಹಾಗೆ ಮದುವೆಗೂ ನಾನು ಇಲ್ಲದ ಇಲ್ಲ. ಲಡ್ಡುನೂ ಮಾಡದು ಸರಳಲ್ಲ. ಸ್ವಲ್ಪ ಪಾಕ ಏರು ಪೇರಾದ್ರೂ ಇಡಿ ಖಾದ್ಯನ ಕೆಟ್ಟುಹೋಗುತ್ತ. ಬಹುದಿನಗಳವರೆಗೆ ಉಳಿಯುವ ಖಾದ್ಯ ಕೂಡಾ. ಜೊತೆಗೆ ಕಡಿಮೆ ಖಚರ್ಿನಲ್ಲಿ ಗಿಟ್ಟುವ ಬಡವರ ಬಂಧು ನಾನು. ಮದುವೆಗೆ ಮುಂಚೆನೆ ಸಿದ್ಧವಾಗುವ ಫಲಹಾರದಲ್ಲೂ ನಾನ ಇರತಿನಿ. ಮನಿಗೆ ಬಂದಾಗ ಹೋಗುವವರಿಗೆ ಕೊಡುವ ಅವಲಕ್ಕಿ ಪಾಕೇಟಿನೊಳಗೆ ಇರುವ ಬೇಸನ್ ಉಂಡಿ ನಾನಾ. ತಿಂಡಿಗಾಗಿ ಮೈಸೂರು ಪಾಕ, ಬೇಸನ್ ಚಕ್ಕಿ ಅಂತ ಏನು ಮಾಡತಾರಾ. ಅದು ನಾನಾ. ಬ್ರಾಹ್ಮಣರ ಮನೆಯಲ್ಲಿ, ಆರಾಧನಗಳಲ್ಲಿ ಹೈಗ್ರೀವ ಅಂತ ಪದಾರ್ಥ ಮಾಡತಾರಲ್ಲ ಕಡಿಮೆ ಖಚರ್ಿನ ಮೂಲವಾಗಿ ಅಲ್ಲಿಯೂ ಹಾಂಗ, ಗೋದಿ ಹುಗ್ಗಿಯಲ್ಲಿಯೂ ಅಲ್ಪ ಪ್ರಮಾಣದಾಗ ನಾನಾ ಇರುತಿನಿ.
ಇದು ನನ್ನ ಸಿಹಿ ಅವತಾರ ಆಯ್ತು ನನ್ನ ಖಾರದ ಅವತಾರ ಹೇಳಬೇಕಲ್ಲ. ‘ತೃಣಮಪಿ ನ ಚಲತಿ’ ಇದು ನನಗ ಒಗ್ಗತ್ತ ಅಂತ ನಾನು ಅಭಿಮಾನದಿಂದ ಹೇಳಿಕೊಳ್ಳತಿನಿ. ಬುರಬುರಿ, ಭಜಿ, ಮಿಚರ್ಿ, ಉಳ್ಳಾಗಡ್ಡಿ, ಮಸಾಲಿ ಒಡೆ, ಆಲು ಬೊಂಡಾ, ಬೋಂಡಾ ಸೂಪು, ಚಕ್ಕೋಲಿ, ಖಾರ ಬೂಂದಿ, ಡಾಣಿ, ಖಾರಾ, ವಡಾ ಪಾವ್, ಪಕೋಡಾ ಅದರಲ್ಲಿ ನಾನಾ ನಮೂನಿ ವೆರ್ಯಾಟಿದು. ಹೈದ್ರಾಬಾದ ಕನರ್ಾಟಕದ ಕೆಲವು ಭಾಗಗಳು ಫೇಮಸ್ಸು ಆಗಿರೋದು ಈ ಕರಿದ ಖಾದ್ಯದ ಕಾರಣಕ್ಕ. ಒಂದ ಎರಡ ನಾನಿರದ ಖಾರದ ಭಾಗವೇ ಇಲ್ಲ. ಮಿಚರ್ಿ ಹಾಕಿಕೊತ್ತ ಎಷ್ಟು ಕುಟುಂಬಗಳು ಬದುಕು ಕಟ್ಟಿಕೊಂಡಿಲ್ಲ. ಜಾತ್ರೆಗೆ ಫಳಾರದ ಅಂಗಡಿಯಲ್ಲಿ ನಾನಾ ಹೈಲೈಟು. ಯಾವದರ ವ್ಯಾಪಾರ ಮಾಡಿ ಕೆಟ್ಟಿರಬಹುದು ಮಿಚರ್ಿ ಭಜಿ ಮಾಡಿ ಹಾಳಾದರು ಇದ್ದರ ಅಂದ್ರ ಕರಕೊಂಡು ಬಂದು ತೋರಸ್ರಿ. ಮದುವೆ ಮುಂಜುವಿ, ಸಂಭ್ರಮದ ಸಮಾರಂಭ, ಹಬ್ಬ ಹರಿದಿನ ಇರಲಿ ನನ್ನ ಎಣ್ಣೆಯಲ್ಲಿ ಕರಿಯದ ಹೊರತು ಆ ದಿನದ ಊಟಕ್ಕೆ ತೃಪ್ತಿನೇ ಇರದು. ನನ್ನ ಒಲ್ಲೆ ಅಂತಾ ದೂಡಾ ನರಪ್ರಾಣಿ ಯಾವುದರ ಅದನೂ….? ರಸ್ತೆಯಲ್ಲಿ ಹೋಗತಿರತಿರಿ ಕಾದ ಎಣ್ಣೆಯಲ್ಲಿ ನನ್ನ ಕರಿತಿರೋದನ್ನ ನೋಡಿ ಹಾಗ ಹೋಗ್ತಿರನೂ. ನನ್ನ ಕರಿಯುವಿಕೆಗೆ ನೀವು ಕರಗುತಿರೋ ಇಲ್ಲೋ? ಒಗ್ಗರಣಿಗೆ ಅಥವಾ ಚೂಡಾಕ್ಕ ನಾನು ಇದ್ರ ಅದರ ಖದರ್.
ಕೋಸಂಬರಿ ಅನ್ನೋ ಖಾದ್ಯ ಸವೆದ ಅನುಭವಿಸಬೇಕು. ವಿಶೇಷವಾಗಿ ಬ್ರಾಹ್ಮಣ ಹೆಣ್ಣುಮಕ್ಕಳು ಗೌರಿ ಕೂಡಿಸಿದಾಗ, ರಾಮನವಮಿಯಾಗ ಕೋಸಂಬ್ರಿ ಅಂತ ಮಾಡಿರತಾರ. ಹೆಸರು ಬೇಳೆದು ಹಾಗೂ ಕಡಲೇ ಬೇಳೆದು. ನನ್ನನ್ನು ನೀರಲ್ಲಿ ನೆನೆ ಹಾಕಿ ಅರ್ದಮರ್ಧ ರುಬ್ಬಿ ಅದಕ್ಕೆ ಕೊಬ್ಬರಿ ಮಾವಿನಕಾಯಿ ಸೌತೆ ಕಾಯಿ ಹಾಕಿ ಒಗ್ಗರಣಿ ಕೊಟ್ಟ ಕೋಸಂಬ್ರಿನ ತಿಂದೆ ಸವಿಬೇಕು. ಇನ್ನೂ ಅಡಿಗಿ ಮಾಡಕ ಬ್ಯಾಸರಾಗಿದ್ದಾಗ ಬೇಗನೆ ಅನ್ನಕ್ಕ ರೊಟ್ಟಿಗೆ ಸಾಧನಿ ಮಾಡಾಕ ಝುಣಕ ಪೊಳಜ ಅಂತ ನನ್ನಿಂದ ತಯಾರಾಗತ್ತ. ಹೂರಣ ಮಾಡಿದ ದಿನ ನನ್ನ ಕಟ್ಟು ಇಳಿಸಿದ ನೀರಿನಿಂದನ ಸಾರು ಮಾಡಿರೋದು ಅದರ ಟೇಸ್ಟ ಬೇರೆ.
ಇನ್ನೂ ನನ್ನ ಬೈಪ್ರೊಡಕ್ಟಗಳು. ನನ್ನ ನೆನಸಿದರ ಹುಸಳಿ ಕಾಳ ಆಗತಿನಿ, ದಾಲ ಆಗತಿನಿ ನೆನೆಸಿ ತಿಂದ್ರ ಬಾಡಿ ಮೆಂಟನೆ ಮಾಡಕ ಒಳ್ಳೆ ಶಕ್ತಿ ಒದಗಸ್ತಿನಿ. ಹುರದರ ಹುರಕಡ್ಲಿ, ಪುಟಾಣಿ ಆಗತಿನಿ. ಮಕ್ಕಳು ನನ್ನ ಮುಕ್ಕೆ ಬಿಡತಾವ. ಪುಟಾಣಿ ಎಲ್ಲದಕ್ಕೂ ಬೇಕೆ ಬೇಕು, ಮಂಡಾಳು ಕಲಿಸಿದ್ರ ಅವಲಕ್ಕಿ ಕಲಿಸಿದ್ರರ ರುಚಿ ಹೆಚ್ಚಳಕ್ಕ ನಾನ ಬೇಕು, ಇನ್ನೂ ನನ್ನ ಹುರದು ತಿಂದ ಒಳ್ಳೆ ಸ್ನ್ಯಾಕ್ಸು. ಇನ್ನೂ ಪುಡಿ ಮಾಡಿದರ ಅಲ್ಲಿ ಆಗುವ ಅವತಾರನ ಬೇರೆ. ಗಿಲಗಂಚಿಗೆ ನಾನ ಬೇಕು. ಏನೆ ದೋಸೆ, ಉತ್ತಪ್ಪ, ಇಡ್ಲಿ, ವಡಾ ಮಾಡಿದರೆ ಅದಕ್ಕೆ ಚಟ್ನಿ ಬೇಕೇ ಬೇಕು. ಆ ಚಟ್ನಿಗೆ ನಾನಿದ್ರೆ ಟೇಸ್ಟು.. ವಗ್ಗರಣಿ ಹಾಕ್ತಿರಿ ನಾನಾ ನಮೂನಿ ಅದಕ್ಕೂ ಕಲಸಾಕ ಹಿಟ್ಟು ನಾನಾ ಬೇಕು. ಹುರಕಡ್ಲಿ ಹಿಟ್ಟಾಕಿ ಕಲಸದ ವಗ್ಗರಣಿನ ಯಾರಾದರೂ ಮುಟ್ಟತಿರೇನ್ರೀ? ಗಿರಮಿಟ್ಟ ಮಾಡಿದ್ರೂ ಬೇಕು. ಖಾರಾ ಆದ್ರೂ ಕಳಿಲಿಕ್ಕೆ ಬೇಕು ಉಪ್ಪು ಆದ್ರೂ ಮರಸಲಿಕ್ಕೆ ಬೇಕು.
ನನ್ನ ಚರ್ಮ ಅಥರ್ಾತ್ ಹೊಟ್ಟು ಕೂಡಾ ಪಶುಗಳಿಗೆ ಪೌಷ್ಠಿಕ ಆಹಾರ. ನನ್ನ ಹೊಲದಲ್ಲಿ ಹಾಗ ಒಗೆದರು ಒಳ್ಳೆ ಗೊಬ್ಬರ. ನಾನು ಒಳ್ಳೆ ಔಷಧಿ ಕಣ್ರೀ. ಮುಳ್ಳು ನಟ್ಟಾಗ ಅದೂ ಹೊರಗೆ ಬರದೆ ಹೋದಾಗ ತೆಗೆಯಲು ನನ್ನನ್ನು ಬಾಯಲ್ಲಿ ಅಗೆದು ಕಡಿದು ನಟ್ಟ ಜಾಗಕ್ಕೆ ಹಚ್ಚಿದರೆ ಮುಳ್ಳು ಹೊರಗೆ ಬರಲು ಕಾರಣನಾಗುವವನು ನಾನೇ. ತೂಕ ಹೆಚ್ಚು ಮಾಡಿಕೊಳ್ಳಲಿಕ್ಕೆ, ಬಿಕ್ಕಳಿಕೆಗೆ ಕಡಿವಾಣ ಹಾಕಲಿಕ್ಕೆ, ನಿಶ್ಯಕ್ತಿಗೆ, ನಗಡಿಗೆ, ಮುಖದ ಸೌಂಧರ್ಯ ಹೆಚ್ಚಲಿಕ್ಕೆ ಬೇಕರಿ ನಾನ. ಅಲ್ಲದ ಹುಟ್ಟಿದ ಕೂಸಿಗೆ ಸ್ನಾನ ಮಾಡಸೋದು ಯಾವುದರಿಂದರಿ? ಇವತ್ತಿಗೂ ಸಾಬೂನು ಬಳಸದ ಹಿರಿಯರು ಬಳಸುತ್ತಿರೋದು ಏನನ್ನ!
ಇಂತ್ತಿಪ್ಪ ಶ್ರೇಷ್ಠತೆಯನ್ನು ಮೆರೆಯುತ್ತಿರುವ ನನಗೆ ಪಾಪಿ ಮಾನವರು ದೂರುತ್ತಿರುವ ಪರಿ ಎಂತಹದು. ನನ್ನ ಅನಿವಾರ್ಯತೆ ಎಷ್ಟಿದೆ ಅಂತ ಗೊತ್ತಿದ್ದರೂ ಮಾಡುತ್ತಿರುವ ದೂಷಣೆ ಎಂತಹದು? ನಾನು ನಂಜು ವಿಷಕಾರಿ ಎಂದು ಜನ ಬಗೆಯುತ್ತಲ್ಲ. ನನ್ನಿಂದ ವಾತಾ ಬೊಜ್ಜು ಬರುತ್ತೆ ಎನ್ನುತ್ತಾರಲ್ಲ. ಗಾಯಗೊಂಡವರು, ಆಪರೇಷನ್ಗೆ ಒಳಗಾಗದವರಿಗೆ ತಿನ್ನಲೇ ಬಾರದೆಂದು ನನ್ನನ್ನು ದೂಷಿಸಿ ಹೇಳುತ್ತಾರಲ್ಲ. ಇದು ನ್ಯಾಯವೇ.
ನಾನಿಲ್ಲದೆ ನಿಮ್ಮ ಊಟಕ್ಕೆ ರುಚಿನೇ ಇಲ್ಲ ಎಂದು ಗೊತ್ತಿದ್ದರೂ ಆ ಒಂದು ಮುಲಾಜಿಗಾದರೂ ನನಗೆ ಗೌರವಿಸುದು ಬೇಡ, ಹಾಗೆ ತೆಪ್ಪಗಿದ್ದರೆ ಸಾಕಲ್ಲವೇ. ನನ್ನನ್ನ ಈ ಪರಿಯಿಂದ ಬೈಯುವ ಮಾನವರನ್ನು ಕಂಡರೆ ಮನಸ್ಸು ಹತಾಶೆಗೊಳ್ಳುತ್ತೆ. ಆದರೆ ಏನು ಮಾಡಲಿ ಸುಮ್ಮನಿದ್ದೇನೆ. ನನ್ನ ಬಗ್ಗೆ ಅರಿಯುತ್ತಾರೆ ಎನ್ನುವ ಆಶಾಭಾವದಲ್ಲಿ. ಏನೇ ಇರಲಿ ನಿಮ್ಮಂತ ಕ್ರೂರಿ ನಾನಾಲ್ಲ. ನನ್ನನ್ನು ಅತಿಯಾಗಿ ಸೇವಿಸಿದಾಗಲೇ ನಿಮಗೆ ತೊಂದರೆ ಹಾಗೆ ತಿನ್ನಿರೆಂದುಂದು ಹೇಳಿರುವೆನಾ? ಅತಿಯಾದರೆ ಅಮೃತ ಕೂಡ ವಿಷವಂತೆ. ನಿಮ್ಮ ತಪ್ಪನ್ನು ನನ್ನ ಮೇಲೆ ಹೋರಿಸದಿರಿ. ನಾನು ಮಾನವ ಕುಲಕ್ಕೆ ಸಂತಸವನ್ನು ನೀಡುವ ಖಾಧ್ಯವಾಗಿಯೇ ಉಳಿಯುತ್ತೇನೆ. ಆದರೆ ನಿಮ್ಮಿಂದ ಗೌರವದ ಎರಡು ಮಾತುಗಳನ್ನು ನೀರಿಕ್ಷಿಸುತ್ತೇನೆ. ಬರಲಾ? ಮನೆಯವರು ಹೋಳಿಗೆ ಮಾಡಲಿಕ್ಕೆ ನನ್ನನ್ನು ಎತ್ತಿಕೊಳ್ಳುತ್ತಿದ್ದಾರೆ. ನನ್ನ ಖಾದ್ಯವನ್ನು ತಿನ್ನುವಾಗ ನನ್ನ ಬಗ್ಗೆ ಕರುಣೆ ಅಭಿಮಾನ ಇರಲಿ ಎಂದಷ್ಟ ಬೇಡಿಕೊಳ್ಳುವೆ.






0 Comments