ಎಚ್ ಎಸ್ ರೇಣುಕಾರಾಧ್ಯ
ಮೌಲ್ಯಮಾಪನ ಮಾಡುವಾಗ ಉತ್ತರಗಳ ನೋಡಿ ಅನ್ನಿಸಿದ್ದು…
ಕವಿತೆ, ಪ್ರಶ್ನೆ ಮತ್ತದರ ಅರ್ಥದ ಸಮಸ್ಯೆ
————
ಈ ಸಲದ ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ, ಒಂದು ಅಂಕದ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಯಿದೆ. ಆ ಪ್ರಶ್ನೆ ಜಿ.ಎಸ್ ಶಿವರುದ್ರಪ್ಪನವರ ‘ಮುಂಬೈ ಜಾತಕ’ ಕವಿತೆಗೆ ಸಂಬಂಧಿಸಿದ್ದು.
(ಈ ಕವಿತೆ ಕನ್ನಡದ ಉತ್ತಮ ಕವಿತೆ ಹಾಗೂ ನವ್ಯ ಸಾಹಿತ್ಯ ಸಂದರ್ಭದ ಮುಖ್ಯ ಕವಿತೆಗಳಲ್ಲಿ ಒಂದು. ನಗರೀಕರಣ ಹೇಗೆ ಮಾನವನ ಬದುಕನ್ನು ದುರಂತವಾಗಿಸಿದೆ ಎಂಬುದನ್ನು ಚರ್ಚೆಗೆ ಇಡುವ ಕವಿತೆಯಿದು.)
ಪ್ರಶ್ನೆ ಹೀಗಿದೆ.
1) ‘ಮುಂಬೈ ಜಾತಕ’ದಲ್ಲಿ ಮಗು ತಾನಾಗಿ ಕಲಿತದ್ದು ಏನನ್ನು?
ಅದಕ್ಕೆ scheme of evaluation ನ ಉತ್ತರ ಹೀಗಿದೆ.
ಉತ್ತರ: ಮಗು ತಾನಾಗಿ ಕಲಿತದ್ದು ಬಸ್ ಸ್ಟಾಪಿನಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದನ್ನು.
ಮೌಲ್ಯಮಾಪನ ಮಾಡುವಾಗ ಸಾಕಷ್ಟು ವಿದ್ಯಾರ್ಥಿಗಳು ಮೇಲಿನ ಉತ್ತರವನ್ನು ಬರೆದಿದ್ದರೆ, ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಬರೆದಿದ್ದ ಉತ್ತರ ಹೀಗಿತ್ತು.
“ಬಸ್ ಸ್ಟಾಪಿನಲಿ ನಿಂತ ಹುಡುಗಿಯರನ್ನು ನೋಡುವುದು, ಕಾಳ್ಹಾಕುವುದು, ಕಣ್ಣು ಹೊಡೆಯುವುದು…ಇತ್ಯಾದಿ.”
ಒಟ್ಟಿನಲ್ಲಿ ಕೆಲವಷ್ಟು ವಿದ್ಯಾರ್ಥಿಗಳು “ಬಸ್ ಸ್ಟಾಪಿನಲಿ ನಿಂತ ಬಣ್ಣಗಳ ಕಡೆ ಕಣ್ಣಾಯಿಸುವುದು” ಎನ್ನುವುದಕ್ಕೆ ‘ಬಸ್ ಸ್ಟಾಪಿನಲಿ ನಿಂತ ಹೆಣ್ಣು ಮಕ್ಕಳನ್ನ ಗಂಡು ಮಕ್ಕಳು ನೋಡುವುದು, ಅಂತ ಅರ್ಥೈಸಿಕೊಂಡು ಉತ್ತರ ಬರೆದಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಇಂತಹ ಉತ್ತರವನ್ನು 17 ವರ್ಷದ ದ್ವಿತೀಯ ಪಿ.ಯು ವಿದ್ಯಾರ್ಥಿ ಬರೆದಿರುವುದು ಸಹಜವೂ ಅನ್ನಿಸಬಹುದೇನೋ, ಆದರೆ ವಿದ್ಯಾರ್ಥಿ ಆ ರೀತಿ ಉತ್ತರ ಬರೆದಿರುವುದಕ್ಕೆ ಪರೋಕ್ಷ ಕಾರಣ ಪಾಠ ಮಾಡಿರುವ ಉಪನ್ಯಾಸಕರೇ ಹೊರತು ವಿದ್ಯಾರ್ಥಿಗಳಲ್ಲ.
ಕವಿತೆಯನ್ನು ವಿವರಿಸುವಾಗ ಇಂಥ ಪದಗಳನ್ನ, ನುಡಿಗಟ್ಟುಗಳನ್ನ ವಾಚ್ಯಗೊಳಿಸಿದರೆ, ಇಲ್ಲವೆ, ಅರ್ಥವನ್ನು ಅಪಾರ್ಥ, ಇಲ್ಲವೆ ಮಿತಿಗೊಳಿಸದರೆ ಇಂತಹ ಎಡವಟ್ಟುಗಳಾಗುತ್ತವೆ.
ಇಂತಹ ಎಡವಟ್ಟುಗಳಿಗೆ ನಮ್ಮ ಭಾಷಾ ಉಪನ್ಯಾಸಕರು ಮತ್ತು ನಮ್ಮ ಶಿಕ್ಷಣ ಕ್ರಮವೂ ಕಾರಣವಾಗಿದೆ.
ಕವಿತೆಯೊಂದನ್ನು ಪಾಠ ಮಾಡುವುದು ಅಷ್ಟು ಸುಲಭವೂ ಅಲ್ಲ, ಮತ್ತೆ ಕಷ್ಟವೂ ಅಲ್ಲ. ಆದರೆ ಅದೇ ಸಮಸ್ಯೆ ಇರುವುದು.
ಕವಿತೆ ಎಂದರೆ ಪದಕ್ಕೆ ಅರ್ಥವೊಂದನ್ನು ಇಡುವುದು, ಇಲ್ಲವೇ ಒಂದು ಅರ್ಥವನ್ನು ಹುಡುಕುವುದು, ಇಲ್ಲ ಕೊಟ್ಟು ಬಿಡುವುದಲ್ಲ. ಹಾಗೆ ಮಾಡುವುದು ಕವಿತೆಯನ್ನು ವಿವರಿಸಿದ ಹಾಗೆ ಅಲ್ಲ.
ಮೇಲಿನ ‘ಬಸ್ ಸ್ಟಾಪಿನಲಿ ನಿಂತ ಬಣ್ಣಗಳ ಕಡೆ’ ಎಂಬ ಸಾಲಿನಲ್ಲಿ ದೊಡ್ಡ ನಗರವೊಂದರ ಬಸ್ ಸ್ಟಾಪ್ ನ ಚಿತ್ರವಿದೆ. ಅದರಲ್ಲಿ “ಬಣ್ಣಗಳು” ಎಂಬ ಪದ ಅಲ್ಲಿನ (ಬಸ್ ಸ್ಟಾಪಿನ) ಮಾನವ ಜಗತ್ತಿನ ಅನೇಕ ಜೀವಂತ ಚಟುವಟಿಕೆಗಳನ್ನ ಕುರಿತದ್ದಾಗಿದೆಯೇ ಹೊರತು, ಯಾವುದೋ ಒಂದನ್ನು ಕುರಿತದ್ದದಲ್ಲ.
ಇಂತಹ ಸಾಲುಗಳನ್ನು ವಿವರಿಸುವಾಗ ಉಪನ್ಯಾಸಕನೊಬ್ಬ ವಿದ್ಯಾರ್ಥಿಗಳನ್ನು ಆ ಕ್ಷಣಕ್ಕೆ ಖುಷಿಪಡಿಸಲು ಇಲ್ಲವೆ ತನ್ನತ್ತ ಸೆಳೆಯಲು, ಮೇಲಿನ ( ಹುಡುಗಿಯರ ನೋಡುವುದು) ಸೀಮಿತಾರ್ಥ ಇಲ್ಲವೇ ಅಪಾರ್ಥವನ್ನು ಕೊಟ್ಟುಬಿಟ್ಟರೆ ಸಹಜವಾಗಿ ವಿದ್ಯಾರ್ಥಿಗಳು ಅಂಥ ಅರ್ಥಗಳ ಕಡೆಯಷ್ಟೇ ತಮ್ಮ ಗಮನಕೊಡುತ್ತಾರೆಯೇ ಹೊರತು, ಆ ಪದ್ಯದ ಆ ಸಾಲುಗಳು ಮತ್ತು ಕವಿತೆ ಉಂಟು ಮಾಡುವ ಒಟ್ಟಾರೆ ಪರಿಣಾಮದ ಬಗೆಗೆ ಗಮನ ಕೊಡುವುದಿಲ್ಲ.
ಇದಕ್ಕೆ ಮುಖ್ಯ ಕಾರಣ ನಮ್ಮ ಶಿಕ್ಷಣ ಕ್ರಮ ಮತ್ತು ಅದರಲ್ಲಿನ ಭಾಷಾಬೋದನೆಯ ಪಠ್ಯಕ್ರಮ.
ಪಾಶ್ಚಾತ್ಯ ದೇಶಗಳಲ್ಲಿ ಭಾಷಾ ವಿಷಯಗಳನ್ನು ಕಲಿಸುವ ಕ್ರಮಕ್ಕೂ, ನಮ್ಮಲ್ಲಿ ಭಾಷಾ ವಿಷಯಗಳನ್ನ ಕಲಿಸುವ ಪಠ್ಯಕ್ರಮವಿದೆಯಲ್ಲ ಅದು 50 ವರ್ಷಗಳ ಹಿಂದಿದೆ ಅನ್ನಿಸುತ್ತೆ. ದುರಂತವೆಂದರೆ ಪಿಯುಸಿ, ಅಷ್ಟೇ ಅಲ್ಲ, ಪದವಿ ಹಂತದ ವಿದ್ಯಾರ್ಥಿಗಳಿಗೂ ಕೂಡ ಕವಿತೆಯನ್ನು ಅರ್ಥಮಾಡಿಕೊಳ್ಳುವ, (understanding poetry) ಮಾಡಿಸುವ, ಸರಿಯಾದ ಕ್ರಮವೇ ನಮ್ಮಲ್ಲಿನ್ನೂ ಬೆಳೆದಿಲ್ಲದಿರುವುದೇ ಇಂತಹ ಎಡವಟ್ಟುಗಳಿಗೆ ಕಾರಣವಾಗಿವೆ ಅನ್ನಿಸುತ್ತೆ.
ಇಂತಹ ಸಮಸ್ಯೆಗಳನ್ನ ಕೊಂಚ ಮಟ್ಟಿಗೆ ದೂರಮಾಡಲು ಹೀಗೊಂದು ಪ್ರಯತ್ನವನ್ನು ಮಾಡಬಹುದೇನೋ, ಕೆಲ ಭಾಷಾ ಬೋಧನೆಯ ಮೇಷ್ಟ್ರುಗಳು, ಶಾಲೆಗಳಲ್ಲಿಯೇ, ಇನ್ನೂ ಕೆಲ ಉಪನ್ಯಾಸಕರು, ತಾವು ಸ್ನಾತಕೋತ್ತರ ಪದವಿಯಲ್ಲಿ ಕಲಿತಿರುವ, ಕಾವ್ಯವನ್ನು ಅರ್ಥಮಾಡಿಕೊಳ್ಳುವ, ಅರ್ಥೈಸುವ ಪಾಠಗಳನ್ನು, ತಾವು ಈಗ ಕವಿತೆಯ ಪಾಠ ಮಾಡುವಾಗ ಆರಂಭದ ಕೆಲ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳುವುದು ಸೂಕ್ತವೇನೋ ?
ಇಂಥ ಪ್ರಯತ್ನಗಳನ್ನು ಕೆಲವರು ಖಂಡಿತಾ ಮಾಡುತ್ತಿದ್ದಾರೆ ಕೂಡ, ಆದರೆ ಅದು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲವೆನಿಸುತ್ತೆ. ಇದಕ್ಕೆ ಮುಖ್ಯ ಕಾರಣ ಇವತ್ತಿನ, ಸೆಮಿಸ್ಟರ್, ಟ್ರೈಮಿಸ್ಟರ್, ಸಿಲಬಸ್ ಕಂಪ್ಲೀಟ್ ಶಿಕ್ಷಣವಿಧಾನ.
ಈ ಶಿಕ್ಷಣ ಕ್ರಮದಲ್ಲಿ ಇಂತಹವುಗಳಿಗೆ ಸ್ಥಾನವಿಲ್ಲದಿರುವುದಾಗಿದೆ.






0 Comments