ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡವೋ ಸಂಸ್ಕೃತವೋ ಇಂಗ್ಲಿಶೋ..

ಆರ್ ಚಲಪತಿ

ಈವರೆಗೆ ಹೇರಿಕೆಯ ಇಂಗ್ಲಿಶ್ ಬಗೆಗೆ ಮಾತನಾಡುತ್ತಿದ್ದೆವು, ಈಗ ಬೇಡಿಕೆಯ ಇಂಗ್ಲಿಶ್ ಬಗೆಗೆ ಮಾತನಾಡುವಂತಾಗಿದೆ ಎನ್ನುವ ಮಾತೊಂದು, ಚರ್ಚೆಯೊಂದರ ಸನ್ನಿವೇಶದಲ್ಲಿ ಬಂತು. ಇಂಗ್ಲಿಶನ್ನು ಬೀದಿಬೀದಿಗಳಲ್ಲಿ ಕೊಂಡುಕೊಳ್ಳುವ ಸರಕಾಗಿ ತಿಳಿಯುತ್ತಿದ್ದು, ಆ ಸರಕನ್ನು ನಮ್ಮ ಜೊತೆಗೆ ಇರಿಸಿಕೊಳ್ಳಲೇಬೇಕಾಗಿರುವ ಸರಕು ಎನ್ನುವಂತೆ ನೋಡುತ್ತಿದ್ದೇವೆ. ಜಾಗತೀಕರಣ ಎನ್ನುವ ಮಾರುಕಟ್ಟೆಯು ಇದನ್ನು ಆಗುಮಾಡುತ್ತಿದೆ. ಈ ಮಾರುಕಟ್ಟೆಯ ಸನ್ನಿವೇಶದಲ್ಲಿ ನಮ್ಮ ನುಡಿಯ ಬಿಕ್ಕಟ್ಟುಗಳು ಬೇರೆಯೇ ಆಗುತ್ತಿವೆ. ನಾವಾಡುವ ನುಡಿಯನ್ನೆ ಇಲ್ಲವಾಗಿಸುವ ಪ್ರಯತ್ನವಾಗಿದೆ ಇದು ಎನ್ನುವ ಚರ್ಚೆಯು ಅದಾಗಿತ್ತು. ಕಳೆದ ಹದಿನೈದು-ಇಪ್ಪತ್ತು ವರುಶಗಳಿಂದಲೂ ಇಂತಹ ಆತಂಕಗಳನ್ನು ಬೇರೆಬೇರೆ ಬಗೆಯಲ್ಲಿ ನೋಡುತ್ತಿದ್ದೇವೆ.

ನಮ್ಮ ಸಾಮಾಜಿಕ ವಾತಾವರಣವು ಕನ್ನಡ ಮಾತಿನ ನಡುವೆ ಯಾವಾಗಲೂ ಇಂಗ್ಲಿಶ್ ಪದಗಳನ್ನು ಬಳಕೆಯಲ್ಲಿ ಇರಿಸಿಕೊಳ್ಳುವಂತೆ ರೂಡಿಮಾಡಿಕೊಂಡಿದೆ. ಕಳೆದ ನೂರು ನೂರಯ್ವತ್ತು ವರುಶಗಳಿಂದ ಇಂತಹ ಪ್ರಾಕ್ಟಿಸ್‌ನ ಕಡೆಗೆಯೇ ಹೆಚ್ಚೆಚ್ಚು ತೊಡಗುವಂತೆ ಮಾಡಿದೆ. ಇಂಗ್ಲಿಶ್ ಪದಗಳನ್ನು ಬೇರೆ ದಾರಿಯಿಲ್ಲದೆ ಬಳಸುವುದು ಒಂದು ಬಗೆಯದಾದರೆ, ಬೇಕಾಗಿಯೇ ಇಂಗ್ಲಿಶ್ ಪದಗಳನ್ನು ಬಳಸುವಂತೆ ಆಗಿರುವುದು ಮತ್ತೊಂದು ಬಗೆ. ಇವೆರಡೂ ಹೇಗೆ ಬೇರೆಬೇರೆಯೆಂದು ತಿಳಿಯಲಾಗದಂತೆ ಬಂತೆಯಾಗಿದೆ ಇಡೀ ಕನ್ನಡ ಸನ್ನಿವೇಶ. ಇದನ್ನು ಎದುರಿಸುವ ದಾರಿಯೇ ಕಾಣದಂತೆ ಇಂಗ್ಲಿಶನ್ನು ತನ್ನದನ್ನಾಗಿ ಮಾಡಿಕೊಳ್ಳಲು ಹವಣಿಸುವುದೇ ಸರಿ ಎನ್ನುವ ದಾವಂತದ ಕಡೆಗೆ ನಡೆಯುತ್ತಿದೆಯೇ ಎನ್ನುವ ಅನುಮಾನವೂ ಹುಟ್ಟುತ್ತದೆ. ಇದನ್ನು ಏನೆಂದು ನೋಡೋಣ. ಕನ್ನಡ ಬಳಕೆಯ ನಡುವೆ ಇಂಗ್ಲಿಶ್ ಪದಗಳನ್ನು ಬಳಸುವವರ ಎದುರಲ್ಲಿ ಯಾವಾಗಲೂ ಒಂದು ಕೇಳ್ವಿ ಇರುತ್ತದೆ. ಇಂಗ್ಲಿಶ್ ಪದಗಳಿಗೆ ಬದಲಿಯಾಗಿ ಹೇಳಲು ಬೇಕಾದ ಕನ್ನಡ ಪದಗಳು ಕನ್ನಡಲ್ಲಿ ಇಲ್ಲ. ಕನ್ನಡದಲ್ಲಿ ಅಂತಹ ಪದಗಳು ಇದ್ದರೂ ಆ ಪದಗಳು ಬೇಗ ತಿಳಿಯುವುದಿಲ್ಲ. ಅದಕ್ಕಾಗಿ ಇಂಗ್ಲಿಶ್ ಪದಗಳನ್ನು ಬಳಸಬೇಕಾಗುತ್ತದೆ ಎನ್ನುವ ಸಮಜಾಯಿಸಿ ಅಂತವರಲ್ಲಿ ಕಾಣುತ್ತದೆ. ಇದು ದಿಟವೇ ಅಗಿದ್ದರೆ;

ಯಾಕೆ ಕನ್ನಡದ ಸನ್ನಿವೇಶವು ಹೀಗಿದೆ?

ಕನ್ನಡ ಬಳಕೆಯ ಬಗೆಗಿನ ಯಾವ ಅಸಡ್ಡೆಗಳು ಇಲ್ಲದಾಗಲೂ ಕನ್ನಡವನ್ನು ಬಳಕೆಗೆ ತಂದುಕೊಳ್ಳದಂತೆ ಯಾಕಾಗಿದೆ? ಹಾಗೆ, ಬಳಕೆಗೆ ತಂದುಕೊಳ್ಳುವಾಗಲೂ ‘ತಿಳಿಯದಿರುವ ಕನ್ನಡ’ ಯಾವುದದು? ಇಂಗ್ಲಿಶ್ ಪದಗಳಿಗೆ ಬದಲಿಯಾಗಿ ಬಳಸಲುಬೇಕಾದ ಕನ್ನಡ ಪದಗಳು ಎಂದರೆ ಏನು? ನಮ್ಮದಲ್ಲದ ಒಂದು ನುಡಿಯಲ್ಲಿರುವ ಎಲ್ಲಾ ಪದಗಳಿಗೂ ಬದಲಿ ಪದಗಳು ನಾವಾಡುವ ನುಡಿಯಲ್ಲಿ ಇರುತ್ತವೆ, ಇರಬೇಕು ಎಂದು ನಂಬಿಸಿದವರು ಯಾರು? ಕನ್ನಡ ಬಳಕೆಯನ್ನು ಕುರಿತ ಈ ದಾವಂತದಲ್ಲಿ ಕನ್ನಡವನ್ನು ನಿಬಾಯಿಸುವ ಹಕ್ಕು ಕನ್ನಡ ನುಡಿಯಾಡುಗರ ಕಯ್ಯಲ್ಲಿದೆಯೇ? ಇಲ್ಲವೆನ್ನುವುದಾದರೆ, ಕನ್ನಡಿಗರ ಕಯ್ಯಿಂದ ಆ ಹಕ್ಕನ್ನು ಕಸಿದುಕೊಂಡಿರುವುದಾದರೂ ಯಾರು? ಅದು ಹೇಗೆ? ನುಡಿಬಳಕೆಯ ಹಕ್ಕನ್ನು ಹಾಗೆ ಒಂದು ನುಡಿಯಾಡುಗ ಸಮುದಾಯದಿಂದ ಕಸಿದುಕೊಳ್ಳಲು ಆಗುತ್ತದೆಯೇ? ಅನ್ನುವಂತ ಕೇಳ್ವಿಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಕೇಳ್ವಿಗಳು ಕೆಲವೊಮ್ಮೆ ಹುಚ್ಚುಚ್ಚು ಅಂತಲೂ ಅನಿಸಬಹುದು. ಇದನ್ನು ಒಂದೊಂದಾಗಿ ಬಿಡಿಸಿ ತಿಳಿಯೋಣ;

ಇಂಗ್ಲಿಶ್ ಪದಗಳನ್ನು ಬೇರೆ ದಾರಿಯಿಲ್ಲದೆ ಬಳಸುವ ಬಗೆಯೊಂದಿದೆ ಅಂದೆ. ಹೊಸಕಾಲದ ಟೆಕ್ನಾಲಜಿಯಿಂದಾಗಿ ಹೊಸಹೊಸ ಸವಲತ್ತುಗಳು ದಿನದಿನದ ಬಳಕೆಯಲ್ಲಿ ಆಗಿಬರುತ್ತಿವೆ. ಇದು ನಮ್ಮ ನಮ್ಮ ಮನೆಗಳಲ್ಲಿಯೂ, ಕೆಲಸದ ಸನ್ನಿವೇಶಗಳಲ್ಲಿಯೂ, ಓದು ಬರೆಹಗಳಲ್ಲಿಯೂ, ಕುಡಿದು ತಿನ್ನುವಲ್ಲಿಯೂ, ಆಟ ನೋಟಗಳಲ್ಲಿಯೂ ಈ ಸವಲತ್ತುಗಳು ಬಳಕೆಯಾಗುತ್ತಿವೆ. ಮತ್ತೂ ಹೊಸಹೊಸದಾಗಿ ಬಳಕೆಗೆ ಬರುತ್ತಿವೆ. ಇದನ್ನು ನಾವು ಹೊಸಕಾಲದ ಬೆಳವಣಿಗೆ ಅಂತಲೂ ಕರೆಯುತ್ತಿದ್ದೇವೆ. ಈ ಸವಲತ್ತುಗಳಿಗೆ ಬಳಸುವ ಉಪಕರಣಗಳನ್ನು ಜಗತ್ತಿನ ಯಾವಯಾವ ದೇಶಗಳವರೋ, ಯಾವಯಾವುದೋ ನುಡಿಯ ಸನ್ನಿವೇಶದವರೋ ತಯಾರು ಮಾಡುವುದರಿಂದಾಗಿ ಆಯಾ ಸನ್ನಿವೇಶದ ಹೆಸರುಗಳೇ ಅಂತಹ ಉಪಕರಣಗಳಿಗಿರುತ್ತದೆ. ಈ ಉಪಕರಣಗಳು ಜಗತ್ತಿನ ಮಾರುಕಟ್ಟೆಯ ಇವತ್ತಿನ ಸನ್ನಿವೇಶದಲ್ಲಿ ಯಾವ ನುಡಿಯಾಡುಗ ಸನ್ನಿವೇಶಕ್ಕೆ ಹೋದರೂ ಅದದೇ ಹೆಸರುಗಳನ್ನು ಉಳಿಸಿಕೊಂಡಿರುತ್ತವೆ. ಹೆಚ್ಚೆಂದರೆ ಅದೇ ಹೆಸರನ್ನು ಹೇಳುವ ಬಗೆಯಲ್ಲಿ ಸ್ಥಳೀಯತೆಗೆ ಒಳಗಾಗುತ್ತಿರುತ್ತವೆ. ಆದರೆ ಅದರ ಮೂಲ ಹೆಸರಿನಲ್ಲಿ ಬದಲಾವಣೆಗಳು ಆಗುವುದು ತೀರಾತೀರಾ ಕಡಿಮೆಯೇ. ಹೀಗಾಗಿ ಕನ್ನಡ ಬದುಕುಗಳೊಳಕ್ಕೆ ಸೇರಿಬಿಡುವ ಈ ಸವಲತ್ತುಗಳ ಮೂಲಕ ಕನ್ನಡ ನುಡಿಯಾಡುಗ ಸನ್ನಿವೇಶದಿಂದ ಬೇರೆಯೇ ಆಗಿರುವ ಇಂತಹ ಪದಗಳು ಬಲುಬೇಗನೆ ಕನ್ನಡ ಮಾತಿನ ಒಂದಂಗವಾಗಿ ಬಿಡುತ್ತವೆ. ಓದು ಬರೆಹ ಬಲ್ಲವರು ಮಾತ್ರವಲ್ಲದೆ ಎಲ್ಲರೂ ತಡೆಯಿಲ್ಲದಂತೆ ಇಂತಹ ಪದಗಳನ್ನು ಬಳಸಬಲ್ಲವರಾಗುತ್ತಾರೆ. ಎತ್ತುಗೆಗೆ;

ಪ್ಯಾಂಟು, ಶರ್ಟು, ಬಯ್ಕು, ಸ್ಕೂಟ್ರು, ಕಾರು, ಚೇರು, ಬಲ್ಪು, ಲಯ್ಟು, ವಯ್ರು, ಸುಚ್ಚು, ಪೇಪ್ರು, ಪೆನ್ನು, ಬುಕ್ಕು, ಚಾರ್ಜರ್ರು, ಕ್ಯಾಲೆಂಡ್ರು, ಸ್ಪೀಕರ್ರು, ಪೋನು, ಬ್ಯಾಗು, ಜರಾಕ್ಸು, ಪ್ರಿಡ್ಜು, ಟೀವಿ, ಪ್ರಿಂಟ್ರು, ಮವ್ಸು, ಕಂಪ್ಯೂಟ್ರು, ಮಾನೀಟ್ರು, ಕಟರ್ರು, ಮೊಬಯ್ಲು, ಇಂಟರ‍್ನೆಟ್ಟು, ಜಾಕೆಟ್ಟು, ಗವ್ನು, ಪ್ಯಾಕೆಟ್ಟು, ಇತ್ಯಾದಿಗಳ ದೊಡ್ಡ ಪಟ್ಟಿಯನ್ನೆ ಮಾಡಿ ಹೇಳಬಹುದು. ಸಮಾಜದ ಆಗುವಿಕೆ(ಸಾಮಾಜಿಕರಣ)ಯ ಬೆಳವಣಿಗೆಯಲ್ಲಿ ಇವನ್ನು ಯಾರಿಗೆ ಬಳಸಲು ಮೊದಲಿಗೆ ಅವಕಾಶವು ಒದಗಿ ಬರುತ್ತದೋ ಅವರಿಂದಲೇ ಇಂತಹ ಪದಗಳ ಬಳಕೆಯು ಶುರುವಾಗುತ್ತದೆ.

ಯಾವುದೇ ಕಾಲದ ಎಂತಹುದೇ ಸವಲತ್ತುಗಳ ಬಳಕೆಯಿಂದ ವಂಚಿತವಾಗುವ ಜನಸಮುದಾಯಕ್ಕೆ ಅವನ್ನು ಪಡೆದುಕೊಳ್ಳುವ ದಾರಿಗಳು ಇದ್ದಕ್ಕಿದ್ದಂತೆ ತೆರೆದುಕೊಂಡಿರುವುದಿಲ್ಲ. ಹೀಗಾಗಿ ಅಂತಹ ಸವಲತ್ತುಗಳನ್ನು ಪಡೆದುಕೊಳ್ಳುವ ಪ್ರಯತ್ನಕ್ಕೆ ಬೀಳುವಂತೆ ನಮ್ಮ ಸಾಮಾಜಿಕ ಸನ್ನಿವೇಶಗಳು ಬೇಡಿಕೆ ಇಡುತ್ತವೆ. ಒಂದು ಸಮಾಜವೇ ಇಂತಹ ಬೇಡಿಕೆಗೆ ಬೀಳುವಂತೆಯೂ ಬಿಂಬಿಸಲಾಗುತ್ತದೆ. ಆದರೆ ದಿಟವಾಗಿಯೂ ಕೇಳ್ವಿಯಿರುವುದು, ಬಳಸಲು ಆಗುಮಾಡಿಕೊಳ್ಳುವ ಕಸುವಿಲ್ಲದವರು ಇದನ್ನು ಆಗುಮಾಡಿಕೊಳ್ಳಬೇಕೆಂಬ ‘ನಕಲಿ’ನಲ್ಲಿ ತೊಡಗುವ ಪರಿಯೊಂದು ಹುಟ್ಟಿಕೊಳ್ಳುತ್ತದೆಯಲ್ಲ ಅಲ್ಲಿ. ಯಾಕೆಂದರೆ ಇದು ಸಾಮಾಜಿಕವಾಗಿ ತಮ್ಮನ್ನು ಮೇಲುಮೇಲಿನ ಹಂತಗಳಲ್ಲಿ ಕಂಡುಕೊಳ್ಳುವ ಬಗೆಯೂ ಆಗಿರುತ್ತದೆ. ಹೀಗಾಗಿ ಸವಲತ್ತುಗಳನ್ನು ಪಡೆಯದವರೂ ಕೂಡ ತಮ್ಮ ಬೇಡಿಕೆಗಳಲ್ಲಿ ಅಂತಹವನ್ನು ಹೇಳುವವರಾಗುತ್ತಾರೆ. ಆದ್ದರಿಂದಾಗಿ ಹೊಸಹೊಸದಾಗಿ ಕೆಲವರಿಗೇ ಸಿಗುವ ಸವಲತ್ತುಗಳಿಂದಾಗಿ ಹುಟ್ಟಿಕೊಳ್ಳುವ ಹೊಸ ಅರಿವಿನ ‘ನುಡಿದಂದುಗ’ವೊಂದು ಮೊದಲಿಗೆ ಸಮಾಜದ ನಡುವೆ ಶುರುವಾಗತೊಡಗುತ್ತದೆ. ಹೊಸಹೊಸ ಅನುಕೂಲಗಳನ್ನು ಪಡೆದುಕೊಂಡ ಕೆಲವರಿಂದಾಗಿ ಹುಟ್ಟು ಪಡೆಯುವ ಈ ಹೊಸ ‘ನುಡಿದಂದುಗ’ದಲ್ಲಿ ಉಳಿದವರೂ ಪಾಲು ಪಡೆಯುವಂತಾಗುತ್ತದೆ. ಹೊಸಹೊಸ ಅನುಕೂಲಗಳನ್ನು ಆಗುಮಾಡಿಕೊಳ್ಳುವ ಕೆಲವರೇ ಸಮಾಜದ ನಡೆಗಳನ್ನು ನಿರ್ಧರಿಸುವ ಯಜಮಾನಿಕೆಯಲ್ಲಿ ಇರುತ್ತಾರೆಯಾದ್ದರಿಂದ ತಮಗೆ ಬೇಕಾದದ್ದನ್ನೆ ಇಡೀ ಸಮಾಜದ ಗುರಿಯೆಂಬಂತೆ ಬಿಂಬಿಸಲು, ನಂಬಿಸಲು ಹಲವು ಬಗೆಗಳಲ್ಲಿ ಪ್ರಯತ್ನಿಸುತ್ತಲೂ ಇರುತ್ತಾರೆ. ಇದೊಂದು ವಹಿವಾಟೇ ಆಗಿಬಿಡುತ್ತದೆ. ಎತ್ತುಗೆಗೆ ಟೆಕ್ನಾಲಜಿ ಬಗೆಗಿನ ಕೇಳ್ವಿಯನ್ನು ನೋಡೋಣ;

ಮನೆಮನೆಗಳಲ್ಲೂ ಟೆಕ್ನಾಲಜಿ ಇದೆ ಎನ್ನುವ ಮಾತೊಂದನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಅಂದರೆ, ಟೆಕ್ನಾಲಜಿ ದಿನದಿನದ ಬದುಕಿನಲ್ಲಿ ಬೇಕಾದುದು ಎಂದು ಹೇಳಲೋಸುಗವೋ, ಟೆಕ್ನಾಲಜಿಯಿಂದ ಯಾರೂ ದೂರವುಳಿಯಲು ಬರುವುದಿಲ್ಲ ಎನ್ನುವ ಒತ್ತಾಸೆಯಿಂದಲೋ ಈ ಮಾತು ಕೇಳಿಬರುತ್ತಿರುತ್ತದೆ. ಪ್ರಿಡ್ಜು, ಟೀವಿ, ವಾಶಿಂಗ್ ಮಿಶನ್ನು, ಸಯ್ಕಲ್ಲು, ಬಯ್ಕು, ಪೆನ್ನು, ಪೆನ್ಸಿಲ್ಲುಗಳವರೆಗೂ ಟೆಕ್ನಾಲಜಿಯಲ್ಲದೆ ಇನ್ನೇನು ಎಂದು ಮಾತನಾಡುವ ಪ್ರಸಂಗ ಇದು ಎಂದುಕೊಳ್ಳೋಣ. ಇಂತಹ ಪ್ರಸಂಗವು ಕೇವಲ ಉಪಕರಣಗಳ ಬಳಕೆಯದೆಂಬಂತೆ ಮೇಲ್ನೋಟಕ್ಕೆ ಕಾಣುತ್ತಿರುತ್ತದೆಯಾದರೂ ಅದರ ಗುರುತು(ಹೆಸರು)ಗಳಲ್ಲಿ ಆ ಟೆಕ್ನಾಲಜಿಯೇ ‘ಇಂಗ್ಲಿಶ್’ ಆಗುತ್ತಿರುತ್ತದೆ. ಉಳ್ಳವರ ಮನೆಗಳಲ್ಲಿನ ಮಕ್ಕಳ ಓದು ಬರೆಹದ ಇಂಗ್ಲಿಶ್ ಸ್ಕೂಲಿನ ಅವಕಾಶಗಳು, ಅವರು ಬಳಸುವ ಮತ್ತಿತರೆ ವಸ್ತುಗಳು, ಸವಲತ್ತುಗಳು, ಟಯ್ಯಿ, ಬೂಟುಗಳಿಂದ ಶುರುವಾಗಿ ಅವರ ಉಡುಗೆ ತೊಡುಗೆಗಳು, ಟಿಪನ್ನು ಲಂಚು ಸ್ನ್ಯಾಕ್ಸುಗಳ ರೂಪದ ಊಟ ತಿಂಡಿಯ ಉಪಚಾರಗಳು, ಮಮ್ಮಿ, ಡ್ಯಾಡಿ, ಅಂಕಲ್ಲು, ಆಂಟಿ ಎಂಬ ಹೊಸಹೊಸ ಕರೆಮಾತುಗಳು ಇವೆಲ್ಲವೂ ಈ ಇಂಗ್ಲಿಶೆಂಬ ಟೆಕ್ನಾಲಜಿಯನ್ನು ಬೆಂಬಲಿಸುತ್ತಿರುತ್ತವೆ. ಅಂದರೆ, ಟೆಕ್ನಾಲಜಿ ಮತ್ತು ಸವಲತ್ತುಗಳು ಒಂದಿನ್ನೊಂದರ ನಡುವಿನ ಒಡಂಬಡಿಕೆಯ ಚಹರೆಗಳನ್ನು ಪಡೆದುಕೊಂಡುಬಿಡುತ್ತದೆ. ಇದು ಒಂದುಕಡೆ ಉಳ್ಳವರಿಗೆ ಸಿಗುವ ಸಾಮಾಜಿಕ ಸವಲತ್ತುಗಳಾಗಿ ಮಯ್ಪಡೆಯುತ್ತಿರುವಂತೆ, ಇನ್ನೊಂದು ಕಡೆ ಇಲ್ಲದವರ ನಡುವೆ ಒಂದು ಬಗೆಯ ‘ನುಡಿದಂದುಗ’ವನ್ನೇ ಹುಟ್ಟು ಹಾಕುತ್ತಿರುತ್ತ್ತದೆ. ಈ ನುಡಿದಂದುಗದಲ್ಲಿ ‘ಇಂಗ್ಲಿಶ್’ ಎಂಬುದೇ ಒಂದು ಮ್ಯಾಜಿಕ್ ಆಗಿ ಕಾಣತೊಡಗುತ್ತದೆ. ಆ ಮ್ಯಾಜಿಕ್ಕನ್ನು ಕಲಿಯದೆ ಹೋದರೆ ಉಳ್ಳವರಂತೆ ಬದುಕನ್ನು ಪಡೆಯಲಾಗದು, ಅಂತಹ ಸವಲತ್ತುಗಳ ಜೊತೆ ಮಾತುಕತೆ ಮಾಡಲಾಗದು ಎನ್ನುವ ನಿಲುವಿಗೆ ತಲುಪಿಸಿಬಿಟ್ಟಿದೆ. ಬದುಕುಗಳನ್ನು ಬದಲಾಯಿಕೊಳ್ಳುವ ‘ಟೆಕ್ನಾಲಜಿ’ ಮತ್ತು ‘ಟೆಕ್ನಿಕ್’ಗಳನ್ನು ಪಡೆಯುವ ಈ ಬಯಕೆಯೇ ಆಟವಾಗಿ, ಈ ಆಟದ ಬಯಲು ‘ನುಡಿದಂದುಗ’ವೇ ಆಗಿಬಿಡುತ್ತದೆ. ಕನ್ನಡದ ಸನ್ನಿವೇಶದಲ್ಲಿ ಇಂಗ್ಲಿಶನ್ನು ಕಾಣುತ್ತಿರುವುದು ಹಾಗೆಯೇ.

ಇದು ಜನಬದುಕಿನ ಬಳಕೆಯ ನುಡಿಯಿಂದ ತಪ್ಪಿಸಿ ‘ನಮ್ಮದಲ್ಲದ ನುಡಿಯೊಂದನ್ನು ಕಲಿತರೆ ಮಾತ್ರವೇ ಬದುಕನ್ನು ಕಟ್ಟಿಕೊಳ್ಳಲು ಬರುತ್ತದೆ’ ಎನ್ನುವವರೆಗೂ ತಲುಪಿಬಿಟ್ಟಿದೆ. ಕನ್ನಡದ ಸನ್ನಿವೇಶದಲ್ಲಿ ಉಳ್ಳವರು ಇಲ್ಲದವರ ನಡುವಿನ ಈ ನುಡಿದಂದುಗದ ತಾಕಲಾಟವು ಹುಟ್ಟಿಕೊಂಡಿರುವುದೇ ಹೀಗೆ. ಇಂಗ್ಲಿಶ್ ಒಂದು ವಹಿವಾಟಿನ ಸರಕಾಗಿ ಬದಲಾಗಿರುವುದೂ ಇದರಿಂದಲೇ. ಸವಲತ್ತುಗಳನ್ನು ಬಯಸುವವರನ್ನು, ಕೇಳುವವರನ್ನು ದಾರಿ ತಪ್ಪಿಸಲೆಂದೇ ಈ ಸರಕನ್ನು ಬಳಸಲಾಗುತ್ತಿದೆಯೇ? ಎನ್ನುವ ಅನುಮಾನಗಳು ಹುಟ್ಟುವುದೂ ಇಲ್ಲಿಂದಲೇ. ಪ್ರಪಂಚ ಮಾರುಕಟ್ಟೆಯ ಕಾರಣವನ್ನು ಮುಂದುಮಾಡಿಕೊಂಡು ಬೆಳೆದಿರುವ ‘ಎಜುಕೇಶನ್ ಇಂಡಸ್ಟ್ರಿ’ಯು ಸರಕಾರದ ಕಯ್ತಪ್ಪಿ ಉಳ್ಳವರ ಕಯ್ ಸೇರಿದೆ ಈಗ. ಅದಕ್ಕೆ ಬೇಕಾದ ಮಾರುಕಟ್ಟೆಯೊಳಗೆ ‘ಕೊಂಡುಕೊಳ್ಳುವವರನ್ನಾಗಿ’ ಎಲ್ಲಾ ಜಾತಿ, ಜನಾಂಗಗಳನ್ನೂ ಒಳಗು ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಈ ನಡೆಯು ಸರಾಗವಾಗಿ ನಡೆಯುವಂತೆಯೇ ಹುನ್ನಾರುಗಳನ್ನು ಹೆಣೆಯಲಾಗುತ್ತಿದೆ. ಹೊಸ ಮಾರುಕಟ್ಟೆಯು ಹೊಸ ಅವಕಾಶಗಳನ್ನು ತೆರೆಯುತ್ತದೆ ಅಂತಾ ಹೇಳುವ ಮಾತೇ ಆ ಬಗೆಯದು. ಅಂದರೆ, ಅಲ್ಲಿಂದ ಹುಟ್ಟಿದ ಉತ್ಪನ್ನವನ್ನು ಅದಕ್ಕೇ ಇನ್ವೆಸ್ಟ್ ಮಾಡಿದರೆ ಮಾತ್ರವೇ ಬದುಕಲು ಆಗುತ್ತದೆ, ಇಲ್ಲವಾದರೆ ಇಲ್ಲ, ಎನ್ನುವುದೇ ಇದರ ಹಿಂದಿನ ಬಹುದೊಡ್ಡ ಅಜೆಂಡಾ. ಕಲಿಕೆಯೊಳಕ್ಕೆ ಬಂದಿರುವ ಈ ಹೊಸ ಹುನ್ನಾರವು, ಏನನ್ನು ಕಲಿಯುತ್ತೇವೆಯೋ ಅದಕ್ಕಾಗಿಯೇ ದುಡಿಯುವಂತೆ ಮಾಡುತ್ತದೆ. ಅದನ್ನೇ ಬದುಕುವಂತೆಯೂ ಮಾಡುತ್ತದೆ. ಅದಕ್ಕಾಗಿ ಹಪಾಹಪಿಸುವಂತೆಯೂ ಮಾಡುತ್ತದೆ. ಈ ಹಪಾಹಪಿಯಲ್ಲಿ ಮೊದಲು ಜರುಗುವುದು ಕೇವಲ ‘ನುಡಿದಂದುಗ’ ಮಾತ್ರವೇ.

ಸವಲತ್ತುಗಳನ್ನು ಪಡೆಯುವ ಹಕ್ಕಿಗಾಗಿ ನಡೆಯಬೇಕಾದ ಹೋರಾಟವು ಗುರಿ ತಪ್ಪುವುದು ಇಲ್ಲಿಯೇ. ಈ ನುಡಿದಂದುಗವೇ ಅದರ ದಿಟವನ್ನು ಆಗುಮಾಡಿಕೊಳ್ಳುವುದರ ಕಡೆಗೆ ಕರೆದೊಯ್ಯುತ್ತದೆ. ಈ ಹೊಸ ನುಡಿದಂದುಗಕ್ಕೆ ಬಿದ್ದವರನ್ನು ಅದನ್ನು ಹುಟ್ಟುಹಾಕಿರುವ ಮಾರುಕಟ್ಟೆಯು ತನ್ನತ್ತ ಎಳೆಯುತ್ತಿರುತ್ತದೆ. ಆದರೆ, ಅದು ಎಂದಿಗೂ ತನ್ನ ನೆಲೆ ‘ಇದೇ, ಇಂತಹುದೇ’ ಎಂದು ತೋರಿಸಿಕೊಳ್ಳುವುದಿಲ್ಲ. ಇಲ್ಲವೇ ಇದು ತನ್ನ ಗುರಿಗಳನ್ನು ಬದಲಾಯಿಸಿಕೊಳ್ಳುತ್ತಲೇ ಇರುತ್ತದೆ. ದೊರೆಯಬೇಕಾದ ಸವಲತ್ತುಗಳು ದೊರೆಯದಿರಲು ತಾನು ಈ ಗುರಿಯನ್ನು ಮುಟ್ಟದಿರುವುದೇ ಆಗಿದೆ ಎನ್ನುವ ‘ಅಪನಂಬಿಕೆ’ಯ ಹಳ್ಳಕ್ಕೆ ಇಲ್ಲದವರನ್ನು ನೂಕುತ್ತಲೂ ಇರುತ್ತದೆ. ಇದು ಹೇಗಿದೆಯೆಂದರೆ, ಕೆಳಜಾತಿಗಳವರು ಮೇಲುಜಾತಿಗಳ ನಡೆಯಲ್ಲಿಯೇ ನಡೆಯಬೇಕಾಗಿದೆ ಎನ್ನುವುದನ್ನು ಮೇಲುಜಾತಿಗಳ ‘ಬುದ್ದಿ’ವಂತರು ಹೇಳಿಕೊಳ್ಳುತ್ತಿದ್ದರೆ, ಅದನ್ನೇ ನಾವು ಮಾಡಬೇಕಾಗಿರುವ ಕೆಲಸವೆಂದು ಕೆಳಜಾತಿಗಳವರು ನಂಬುವಂತೆಯೂ ಆಗುತ್ತದಲ್ಲ ಹಾಗೆ. ಇದರಿಂದಾಗಿ, ಉಳ್ಳವರು ಕಲಿತ ತಿಳಿವನ್ನು, ಕಲಿತ ನುಡಿಯನ್ನು, ಉಳಿದವರೂ ಕಲಿತರೆ ಮಾತ್ರವೇ ಉಳ್ಳವರಾಗುತ್ತಾರೆ ಅನ್ನುವ ಮರುಳುತನವೊಂದು ಬೆಳೆಯುತ್ತಾ ಹೋಗುತ್ತದೆ. ಸವಲತ್ತುಗಳು ಕೆಲವರ ಕಯ್ಯಲ್ಲೇ ಉಳಿಯುವಂತಾಗಿ ಆ ಸವಲತ್ತುಗಳ ‘ನುಡಿದಂದುಗ’ವನ್ನು ಮಾತ್ರವೇ ಉಳಿದವರು ಹಪಾಹಪಿಸುತ್ತಾ ಮಾರುಕಟ್ಟೆಯನ್ನು ಗಟ್ಟಿಗೊಳಿಸುವಂತೆಯೂ ಆಗುತ್ತದೆ. ಕನ್ನಡ ಬದುಕಿನ ತಳಜಾತಿಗಳ ಸನ್ನಿವೇಶದಲ್ಲಿ ‘ಇಂಗ್ಲಿಶ್’ ಮಯ್ಪಡೆಯುತ್ತಿರುವುದು ಹೀಗೆಯೇ. ಈ ಎತ್ತುಗೆಗಳನ್ನು ನೋಡಿ;

ಎತ್ತುಗೆ-೧

೧. “ಕುವೆಂಪು ಇಂಗ್ಲಿಷ್ ಭಾಷೆಯನ್ನು ತಮ್ಮದಾಗಿಸಿಕೊಂಡರು, ಬಹುಶಃ ಏಕೆಂದರೆ ಇಂಗ್ಲಿಷ್ ಬಿಡುಗಡೆಯ ಭಾಷೆಯಾಗಿತ್ತು. ನಿನ್ನ ಜಾತಿಯಿಂದ ದೊರಕುವ ಬಿಡುಗಡೆ ಅದು, ಉದಾಹರಣೆಗೆ, ಒಮ್ಮೆ ನೀನು ಇಂಗ್ಲಿಷ್‌ನಲ್ಲಿ ಬರೆಯಲಾರಂಭಿಸಿದರೆ ನೀನೊಬ್ಬ ಕುರುಬನಾಗಿಯೋ, ಗೌಡನಾಗಿಯೋ ಅಥವಾ ಬ್ರಾಹ್ಮಣನಾಗಿಯೋ, ಅಥವಾ ದಲಿತನಾಗಿಯೋ ಉಳಿದಿರುವುದಿಲ್ಲ. ನಿನ್ನ ಮಾತಿನ ಕನ್ನಡ ನಿನ್ನ ಜಾತಿಯನ್ನು ಹೇಳುತ್ತದೆಯೇ ಹೊರತು ಅಪರಿಚಿತ ಇಂಗ್ಲಿಷ್ ನಿನ್ನ ಜಾತಿಯನ್ನು ತೋರ್ಪಡಿಸುವುದಿಲ್ಲ. (ಸಂಸ್ಕೃತ ಕೂಡ ನಿನ್ನ ಮೂಲವನ್ನು ಎತ್ತಿ ತೋರುವುದಿಲ್ಲ. ನಾರಾಯಣ ಗುರು ಎಂಬ ಈಡವ ಜಾತಿಯ ಸಂತ ಕೆಲವು ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಸಂಸ್ಕೃತವನ್ನು ಕಲಿಯುವಂತೆ ಗಾಂಧೀಜಿಯವರಿಗೆ ಹೇಳಿದವರೂ ಅವರೆ.)” – ಅಚೀಚೆ: ಯು.ಆರ್.ಅನಂತಮೂರ್ತಿ, ೨೦೧೧, ಅಭಿನವ, ಬೆಂಗಳೂರು

೨. “ಅಮೇರಿಕದ ಕರಿಯರು ಕ್ರಮೇಣ ಬಿಳಿಯರಂತೆಯೇ ಆಗುತ್ತಿದ್ದಾರೆ. ಹಿಂದಿನ ಹಲವು ‘ಶೂದ್ರ’ರು ಇಂದಿನ ಬ್ರಾಹ್ಮಣರು; ‘ಸತ್ಯನಾರಾಯಣ ವ್ರತ’ ಪ್ರಿಯರು. ಹಿಂದಿನ ಹಲವು ಮಡಿವಂತ ಬ್ರಾಹ್ಮಣ ಕುಟುಂಬದ ಸದಸ್ಯರು ಇಂದಿನ ಎನ್.ಆರ್.ಐ ಭಾಗ್ಯವಂತ ಕೂಲಿಗಳು. ಹೀಗಾಗಲು ದಲಿತರೂ ಯಾಕೆ ಹಾತೊರೆಯಬಾರದು?” – ಅದೇ: ಯು.ಆರ್.ಅನಂತಮೂರ್ತಿ ೨೦೧೧

೩. “ಕನ್ನಡಿಗನಿಗೆ ಜ್ಞಾನದ ಸೃಷ್ಟಿಯ ಭಾಷೆ ಕನ್ನಡವಾಗಿರಬೇಕು. ಅನಿವಾರ್ಯವಾಗಿ ಈ ಕಾಲದಲ್ಲಿ ಅದರ ಅಭಿವೃದ್ಧಿಯ ಭಾಷೆ ಇಂಗ್ಲಿಷ್ ಆಗಿರಬೇಕು. ಆಗ ಪ್ರಾಯಶಃ ಬುದ್ಧಿವಂತನಾದವನು ಕೇವಲ ಬುದ್ಧಿವಂತನಾಗಿರುವುದಿಲ್ಲ, ಜ್ಞಾನವನ್ನೂ ಸೃಷ್ಟಿಸಬಲ್ಲವನಾಗಿರುತ್ತಾನೆ… ಕೊನೆಯದಾಗಿ ಒಂದು ಗುಟ್ಟಿದೆ, ಅದನ್ನು ನಾವು ತಿಳಿಯಬೇಕು ಎಂದು ಕೇಳುತ್ತಿರುವುದು-ನಮ್ಮ ಮಾರುಕಟ್ಟೆಯ ವಿಸ್ತರಣೆಗೆ ಮಾತ್ರ ನಾವು ಇಂಗ್ಲಿಷ್ ಬೇಕು ಎಂದು ಕೇಳುತ್ತಿರುವುದು.” – ಅದೇ: ಯು.ಆರ್.ಅನಂತಮೂರ್ತಿ ೨೦೧೧

೪. ಹಿಂದೆ ಅಲ್ಲಮ, ಬಸವ, ತುಕಾರಾಂ, ತುಳಸೀದಾಸ, ಪಂಪ, ಕುಮಾರವ್ಯಾಸರಂಥವರು ಸಂಸ್ಕೃತವನ್ನು ಜೀರ್ಣಿಸಿಕೊಂಡರೆ ಈಗ ನಾವು ಯೋರೋಪನ್ನು ಅರಗಿಸಿಕೊಳ್ಳುತ್ತಲಿದ್ದೇವೆ. – ವಾಲ್ಮೀಕಿಯ ನೆವದಲ್ಲಿ: ಯು.ಆರ್.ಅನಂತಮೂರ್ತಿ ೨೦೦೬, ಅಭಿನವ ಬೆಂಗಳೂರು

ಎತ್ತುಗೆ-೨

೧. ಕನ್ನಡವನ್ನು ಅಮೃತವಾಗಿಸಿದ ದಲಿತ ಸಮುದಾಯಗಳು ಇಪ್ಪತ್ತೊಂದನೇ ಶತಮಾನದ ಮುಂಜಾವಿನಲ್ಲಿ ದಿಕ್ಕೆಟ್ಟು ನಿಂತಿವೆ. ಅಂಬೇಡ್ಕರ್ ಅವರು ದಲಿತರನ್ನು ಎಚ್ಚರಿಸಿ ಈ ಹಂತಕ್ಕೆ ಬಿಟ್ಟಿದ್ದಾರೆ. ಇನ್ನು ಮುಂದೆ ದಲಿತರೇ ತಮ್ಮ ನಾಳೆಗಳನ್ನು ನಿರ್ಧರಿಸಿಕೊಳ್ಳಬೇಕಾಗಿದೆ. ಆಧುನಿಕೋತ್ತರ ಜಗತ್ತು ಕಠಿಣವಾದ ಪೈಪೋಟಿಯನ್ನು ಒಬ್ಬರ ವಿರುದ್ಧ ಇನ್ನೊಬ್ಬರನ್ನು ಸಮರ್ಥವಾಗಿಯೆ ಇಬ್ಬರನ್ನು ಬೆಳೆಸಿ ಮುಖಾಮುಖಿಯಾಗಿಸುತ್ತಿರುತ್ತದೆ. ಅಸಂಖ್ಯ ಪೈಪೋಟಿಯಲ್ಲಿ ಕೆಲವೇ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತಿರುತ್ತದೆ. ಹೊಂದಾಣಿಕೆ ಮಾಡಿಕೊಂಡು ಅಳವಡಿಸಿಕೊಳ್ಳುವ ಕೌಶಲ್ಯದಿಂದ ಮಾತ್ರ ಹೊಸಪೀಳಿಗೆ ಬದುಕಬಲ್ಲುದೇ ಹೊರತು ಅಂತಹ ಕೌಶಲ್ಯ ಹಾಗೂ ಹೊಂದಾಣಿಕೆ ಇಲ್ಲದೆ ಹೋದರೆ ಅವರಿಗೆ ಜಾಗವೇ ಇರುವುದಿಲ್ಲ. ಇಂತಹ ಶಕ್ತಿಯನ್ನು ಇಂಗ್ಲಿಷ್ ಭಾಷೆ ರೂಪಿಸಬಲ್ಲದು. – ದಲಿತ ಕಥನ: ಮೊಗಳ್ಳಿ ಗಣೇಶ್, ೨೦೦೬, ಕನ್ನಡ.ವಿ.ವಿ, ಹಂಪಿ

೨. ‘ಇಂಗ್ಲಿಷ್’ ಭಾಷೆ ಇವತ್ತು ಕೇವಲ ಭಾಷೆ ಮಾತ್ರವಾಗಿ ಉಳಿದಿಲ್ಲ. ಅದೊಂದು ‘ಉಪಕರಣ’. ಈ ಉಪಕರಣ ಅನೇಕ ಗ್ರಾಮೀಣ ಪ್ರತಿಭೆಗಳಿಗೆ ಸನ್ನೆಗೋಲು ಕೂಡ ಆಗಬಲ್ಲುದು. ನಮ್ಮ ಮಾತೃಭಾಷೆಗೆ ಇರುವ ಮಿತಿಯ ಬಗ್ಗೆಯೂ ನಮಗೆ ಎಚ್ಚರವಿರಬೇಕು. ನಿಸ್ಸಂದೇಹವಾಗಿ ಕನ್ನಡ ನಮ್ಮ ಉಸಿರು ನಿಜ. ಆದರೆ ಉಸಿರಾಟದ ಒಟ್ಟು ಪರಿಸರವೇ ಕೆಟ್ಟು ಹೋಗಿರುವಾಗ ಅಖಂಡವಾಗಿ ಮಾತ್ರ ಪರ್ಯಾಯಗಳನ್ನು ಹುಡುಕಬೇಕಾಗುತ್ತದೆ. ಇಂಗ್ಲಿಷ್ ಜಗತ್ತಿನ ಆರ್ಥಿಕ ರಾಜಕಾರಣವನ್ನು ರೂಪಿಸುವ ಭಾಷೆ ಅಷ್ಟೇ ಅಲ್ಲ, ಅದು ಜಗತ್ತಿನ ಪ್ರಭುತ್ವವನ್ನು ನಿಯಂತ್ರಿಸುವ ಭಾಷೆ ಕೂಡ ಹೌದು. – ಅದೇ: ಮೊಗಳ್ಳಿ ಗಣೇಶ್, ೨೦೦೬,

೩. ಇಂಗ್ಲಿಷ್ ಭಾಷೆಯನ್ನು ನಿರಾಕರಿಸಿದರೆ ಅದು ಸಫಲವಾದ ಪ್ರತಿರೋಧವಾಗಲಾರದು. ಅಂಬೇಡ್ಕರ್ ಒಂದು ವೇಳೆ ಇಂಗ್ಲಿಷ್ ಶಿಕ್ಷಣದಿಂದ ದೂರವಾಗಿದ್ದರೆ ಅಷ್ಟರ ಮಟ್ಟಿಗೆ ದಲಿತರ ಬಿಡುಗಡೆಯೂ ದೂರವಾಗುತ್ತಿತ್ತು. – ಅದೇ: ಮೊಗಳ್ಳಿ ಗಣೇಶ್, ೨೦೦೬,

೪. ಇಂಗ್ಲಿಷ್ ಭಾಷೆಯು ತನ್ನ ಆರಂಭದ ಕಾಲದಿಂದಲೂ ಉತ್ಪಾದನಾ ವ್ಯವಸ್ಥೆಯ ಜೊತೆ ಬೆಳೆದುಕೊಂಡು ಬಂದಿದೆ. ಇಂತಹ ಇಂಗ್ಲಿಷ್ ಭಾಷೆಯನ್ನು ವಸಾಹತುಶಾಹಿ ವ್ಯವಸ್ಥೇಯು ಬಳಸಿಕೊಂಡದ್ದು ನಿಜವಿದ್ದರೂ ಸ್ವತ: ಆ ಭಾಷೆಯೆ ಸಾಮ್ರಾಜ್ಯಶಾಹಿ ಅಲ್ಲ. – ಅದೇ: ಮೊಗಳ್ಳಿ ಗಣೇಶ್, ೨೦೦೬,

೫. ಸಾಮ್ರಾಜ್ಯಗಳು ಬಳಸಿದ ಭಾಷೆಯನ್ನು ಕಲಿತು ನಾವು ಮತ್ಯಾವ ಸಾಮ್ರಾಜ್ಯ ಕಟ್ಟಬೇಕಾಗಿದೆ ಎಂಬ ಉಡಾಫೆಯು ತರವಲ್ಲ. ಇವತ್ತಿನ ಇಂಗ್ಲಿಷ್ ಏಕಕಾಲಕ್ಕೆ ಸದ್ಯದ ಜಗತ್ತಿನ ಆರ್ಥಿಕ ಸಾಮಾಜಿಕ ರಾಜಕೀಯ ಹಾಗೂ ತಂತ್ರಜ್ಞಾನಗಳ ಎಲ್ಲ ತಂತ್ರಗಳನ್ನು ತನ್ನೊಳಗೆ ಅರಗಿಸಿಕೊಂಡಿದೆ. ಒಂದು ಭಾಷೆಯು ಹೀಗೆ ತನ್ನ ಕಾಲದ ಜಗತ್ತಿನ ಎಲ್ಲ ವಿದ್ಯಮಾನಗಳನ್ನು ಅಳವಡಿಸಿಕೊಂಡು ಸಂಪರ್ಕ ಸಾಧಿಸಿಕೊಂಡಿರುವುದು ಮನುಷ್ಯನ ಭಾಷೆಯ ವಿಕಾಸದಲ್ಲೇ ಮಹತ್ವದ ಹಂತ. – ಅದೇ: ಮೊಗಳ್ಳಿ ಗಣೇಶ್, ೨೦೦೬,

೬. ಇಂಗ್ಲಿಷ್ ಮಾದ್ಯಮಕ್ಕಿಂತಲೂ ಮೊದಲಿಗೆ ಸ್ವತಃ ಇಂಗ್ಲಿಷ್ ಭಾಷೆಯನ್ನೇ ಶಿಕ್ಷಣದ ಕಡ್ಡಾಯ ಪಠ್ಯವಾಗಿ ಅಳವಡಿಸಿದರೆ ಯಾವ ಗೊಂದಲವೂ ಉಂಟಾಗುವುದಿಲ್ಲ. ಹುಸಿ ಬಂಡಾಯದ ಕನ್ನಡದ ಕಹಳೆಯು ಕನ್ನಡಕ್ಕೇ ಆಪತ್ತು ತರುವಂತದ್ದು. – ಅದೇ: ಮೊಗಳ್ಳಿ ಗಣೇಶ್, ೨೦೦೬,

೭. ಇಂಗ್ಲಿಷ್ ಭಾಷೆ ಸಂಪೂರ್ಣವಾಗಿ ಮಾನವೀಯ ಭಾಷೆ ಅಲ್ಲ ಎಂಬುದು ನಿಜವಿದ್ದರೂ ಆ ಭಾಷೆಗೆ ಬ್ರಾಹ್ಮಣ್ಯದ ರೂಪವಿಲ್ಲ. ವರ್ಣದ್ವೇಶದ ಲೋಪವನ್ನು ವಸಾಹತುಶಾಹಿ ಕಾಲದಲ್ಲೆ ಅದು ಕಳೆದುಕೊಂಡು ಆಫ್ರಿಕಾದ ಕಪ್ಪು ಸಮುದಾಯಗಳಿಂದಲೇ ತನಗೆ ಬೇಕಾದ ಬಹುರೂಪವನ್ನು ಪಡೆದಿದೆ.. ಇಂಗ್ಲಿಷ್ ಹೊಂದಾಣಿಕೆಯ ಭಾಷೆಯಾಗಿ ಜಗತ್ತಿನ ಎಲ್ಲರ ಜೊತೆ ಮಾತಾಡುವುದನ್ನು ಕಲಿತಿದೆ. – ಅದೇ: ಮೊಗಳ್ಳಿ ಗಣೇಶ್, ೨೦೦೬,

ಕನ್ನಡವನ್ನು ಬಳಕೆಗೆ ತಂದುಕೊಳ್ಳದಂತೆ ಯಾಕಾಗಿದೆ?

ಉಳ್ಳವರು ಮತ್ತು ಇಲ್ಲದವರು ಎಂದು ಮಾತ್ರವೇ ಇದರ ಚಹರೆಗಳಿಲ್ಲ. ಈ ನುಡಿದಂದುಗವು ಜಾತಿ ಕುಲಗಳ ನಡುವಿನ ಮುಟ್ಟು ಮಯ್ಲಿಗೆಯ ಹಳೆಯ ಚಾಳಿಯ ರೂಪದಲ್ಲಿಯೇ ನಡೆಯುತ್ತಿದೆ ಎನ್ನುವುದನ್ನು ಅರಿಯಬೇಕಾಗಿದೆ. ಕನ್ನಡ ಸನ್ನಿವೇಶದಲ್ಲಿ ಇಂತಹ ನುಡಿದಂದುಗದ ಶಾಲೆಗಳನ್ನು ನಡೆಸುತ್ತಿರುವ ‘ಎಜುಕೇಶನ್ ಇಂಡಸ್ಟ್ರಿ’ಯು ಕನ್ನಡದ ಜಾಗದಲ್ಲಿ ಇಂಗ್ಲಿಶನ್ನು ಹೇಳಿಕೊಡುವ ಕೆಲಸದಲ್ಲಿ ತೊಡಗಿದೆ. ಮಕ್ಕಳು ಕಲಿಯುತ್ತಿರುವ ಜಾಗದಲ್ಲಿ ಕನ್ನಡವನ್ನು ಬಳಸಿದರೆ ‘ದಂಡ’ವನ್ನು ಕಟ್ಟಬೇಕೆಂಬ ಕಟ್ಟುಕಟ್ಟಳೆಗಳನ್ನು ಆಗುಮಾಡಿದ್ದಾರೆ. ಕಾನೂನಿನ ಕಣ್ಣಿಗೆ ಮಣ್ಣೆರಚುವ ಈ ಒಳ ಒಪ್ಪಂದದಲ್ಲಿ ಇದನ್ನು ಆಗುಮಾಡುತ್ತಿರುವ ‘ಎಜುಕೇಶನ್ ಇಂಡಸ್ಟ್ರಿ’ ಮತ್ತು ಅದರೊಳಕ್ಕೆ ಮಕ್ಕಳನ್ನು ತಳ್ಳುತ್ತಿರುವ ಜನಸಮುದಾಯ ಇವೆರಡೂ ಕಣ್ಕಟ್ಟಿನ ಆಟ ಆಡುತ್ತಿದ್ದಾರೆ. ಕನ್ನಡವು ಅಡಿಗೆಮನೆಯಲ್ಲಿ ಮಾತ್ರವೇ ಉಳಿಯುತ್ತದೆ ಎಂದು ಹೆದರಿಸುತ್ತಾ ಎಲ್ಲರಿಗೂ ಸಮಾನವಾಗಿ ಇಂಗ್ಲಿಷನ್ನು ಕಲಿಸಬೇಕು ಎಂದು ಬೊಬ್ಬೆ ಹೊಡೆಯುವ ಹಲವು ಕನ್ನಡ ಬುದ್ದಿಜೀವಿಗಳು(ಇವರು ಕನ್ನಡಿಗರೇ?) ಬೆಂಬಲವಾಗಿಯೂ ನಿಂತಿದ್ದಾರೆ. ಚರಿತ್ರೆಯುದ್ದಕ್ಕೂ ಕನ್ನಡಮಾತಿನ ಕಸುವನ್ನು ಉಳಿಸಿಕೊಂಡು ಬಂದವರು ಓದಲಾರದ ಹಳ್ಳಿಯ ಹಿಂದುಳಿದವರು ಮತ್ತು ಬಡವರು ಎಂದು ಹೇಳಿ ಅದು ಅಲ್ಲಿ ಮಾತ್ರವೇ ಉಳಿದಿರಲಿ ಎನ್ನುವ ನಿಲುವಿನವರು ಇವರು. ಆದರೆ ಇಂತಹ ಬುದ್ದಿಜೀವಿಗಳ ಒಳಸಂಚು ಕೂಡ ಬೇರೆಯೇ ಇದೆಯೆಂದು ಕಾಣುತ್ತದೆ. ಅನಂತಮೂರ್ತಿಯವರ ಈ ನೆನಪನ್ನು ನೋಡಿ;

“ಕನ್ನಡದ ಸಂಪ್ರದಾಯಸ್ಥ ಬರಹಗಾರರಂತೆ ಕಾಣಿಸುವ , ಬಹುದೊಡ್ಡ ಗಾಂಧಿವಾದಿಯಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಒಮ್ಮೆ ನನ್ನೊಡನೆ ಮಾತನಾಡುತ್ತಾ ಹೇಳಿದ್ದರು;‘ನಾನು ಇಂಗ್ಲಿಷ್ ಓದಿದ ವಿದ್ಯಾವಂತನನ್ನು ಬೇಟಿಯಾದಾಗಲೆಲ್ಲ ಇಂಗ್ಲಿಷಿನಲ್ಲಿ ಏನಿದೆ ಮಣ್ಣು? ನೀನು ಕಾಳಿದಾಸನನ್ನು, ಭಾಸನನ್ನು, ಭವಭೂತಿಯನ್ನು ಮತ್ತು ಭಾಗವತವನ್ನು ಓದಬೇಕು ಎನ್ನುತ್ತೇನೆ; ಅದೇ ವೇಳೆ ಒಬ್ಬ ಸಂಸ್ಕೃತ ವಿದ್ವಾಂಸನನ್ನು ಬೇಟಿಯಾದರೆ ನೀನು ಸಂಸ್ಕೃತವನ್ನಷ್ಟೇ ಓದಿದರೆ ಸಾಕಾಗುವುದಿಲ್ಲ. ಶೇಕ್ಸ್‌ಪಿಯರ್ ಮತ್ತು ಐರೋಪ್ಯ ಬರಹಗಾರರನ್ನು ಓದು ಎನ್ನುತ್ತೇನೆ’ ಎಂದು” ಹಾಗಾಗಿಯೇ, “ಎಲ್ಲೆಲ್ಲೂ ಇಂಗ್ಲಿಷ್ ಮಾದ್ಯಮದ ಮೋಹ ಹರಡುತ್ತಿರುವ ಈ ವಿಕಾರಗೊಂಡ ಆಧುನಿಕತೆಯ ಕಾಲದಲ್ಲಿ ‘ಆಂಗ್ಲ’ಗೊಳ್ಳುವ ಈ ಪ್ರಯತ್ನ ಹಾಸ್ಯಾಸ್ಪದ ಎನ್ನುವಂತಿಲ್ಲ”. “ಏಕಕಾಲದಲ್ಲಿ ಇಂಗ್ಲಿಷ್‌ವಾದಿಯೂ, ಪುನರುತ್ಥಾನವಾದಿಯೂ, ಸಂಸ್ಕೃತವಾದಿಯೂ ಆಗಿಬಿಡುವುದು ಸಾದ್ಯವಿದ್ದಾಗ ಕುವೆಂಪು, ಬಿ.ಎಂ.ಶ್ರೀ, ಕಾರಂತ, ಮಾಸ್ತಿ-ಎಲ್ಲರೂ ಕನ್ನಡದ ಪರ ನಿಂತರು” ಎನ್ನುವ ನಿಲುವುಗಳು ಇಂತಹ ಬುದ್ದಿಜೀವಿಗಳು ಹಿಡಿದ ಯೂರೋಪಿನ ಗುರುತುಗಳಲ್ಲಿ ಹಿಡಿದ ‘ಸಂಸ್ಕೃತ’ದ ಬಾವುಟಗಳಾಗುತ್ತಿವೆ. ಆದ್ದರಿಂದಾಗಿಯೇ ಇದನ್ನು ದಲಿತ ಚಿಂತಕರು ‘ದಲಿತರಿಗೆ ಕನ್ನಡವು ಅಮೃತ ಇಂಗ್ಲಿಷು ವರ’ ಎಂದು ಬೆನ್ನು ಬೀಳುವಂತಾಗಿದೆಯೇ ಎಂದು ದಿಗಿಲಾಗುತ್ತದೆ. ನೋಡಿ ಮೊಗಳ್ಳಿಯವರ ಈ ನುಡಿಬಳಕೆಯನ್ನು;

“ಸೃಜನಶೀಲ ಬೌದ್ದಿಕ ಸ್ವಗತ, ದಲಿತ ಮೀಮಾಂಸೆಯ ವೈಚಾರಿಕ ಸ್ವರೂಪ, ದಲಿತ ಸಂಸ್ಕೃತಿಯ ಜಲತತ್ವ, ವರ್ಣಬೇಧ ಮತ್ತು ಅಸ್ಪೃಷ್ಯತೆ, ಭಗ್ನತೆಯಿಂದ ಭದ್ರತೆಯ ಕಡೆಗೆ, ವೈಚಾರಿಕ ಆತ್ಮಕಥನ, ಲೋಕಾಂತವನ್ನು ಏಕಾಂತ ಭಾವದಲ್ಲಿ ಧ್ಯಾನಿಸುವ ಸ್ಥಿತಿ, ತರ್ಕಾತೀತವಾದ ಲೋಕಾಂತಗಳ ಭಾವನೆ, ಪ್ರತಿಸೃಷ್ಟಿ, ಬೌದ್ದಿಕ ಲಹರಿಯಲ್ಲಿ ಸ್ವೋಪಜ್ಞ, ಬೌದ್ದಕವಾದ ಲಹರಿ ವಿಹಾರ, ವಸ್ತು ನಿಷ್ಟತೆಗಿಂತ ಅಂತರ್ ದೃಷ್ಟಿ, ಸಮಷ್ಟಿ ಪ್ರಜ್ಞೆ, ಸಮಷ್ಟಿ ಅಂತರ್‌ದೃಷ್ಟಿ, ಅಂತರ್‌ದೃಷ್ಟಿಯ ಗ್ರಹಿಕೆ, ವೈರುಧ್ಯ, ಅಪರಿಮಿತ ಸ್ವಾತಂತ್ರ್ಯ, ಮುಕ್ತ ವೈಚಾರಿಕತೆ, ಸುಪ್ತಪ್ರಜ್ಞೆಯ ಅಂತರಾಳ, ಸಮಾಜವಿಜ್ಞಾನಗಳ ಶ್ರೇಷ್ಠ ಚಿಂತನೆ, ಉನ್ನತೀಕರಿಸುವ ಜಿಜ್ಞಾಸೆ, ಅಂತಃಸಾಕ್ಷಿ, ಸುಪ್ತ ವ್ಯವಸ್ಥೆ, ಸುಪ್ತಪ್ರಜ್ಞೆಯ ವಿವೇಕ, ಸ್ವಗತವು ಸುಪ್ತಪ್ರಜ್ಞೆಯ ರಂಗಶಾಲೆ, ಏಕಾಕೃತಿಯ ಒಳಬಿಂಬ, ಲೋಕಾಂತ ಸೃಷ್ಟಿ, ಬೌದ್ದಿಕವಾದ ವಿಕಾಸ”

‘ದಲಿತ ಕಥನ’ವನ್ನು ಹೇಳಹೊರಟಿರುವ ಮೊಗಳ್ಳಿಯವರ ಬರೆಹದ ಮೊದಲೆರಡು ಪುಟಗಳಲ್ಲಿಯೇ ಕಾಣಿಸಿಕೊಳ್ಳುವ ನುಡಿಬಳಕೆಯಿದು. ‘ಈ ದಾರಿಯಲ್ಲಿ ಅಂಬೇಡ್ಕರೋತ್ತರ ದಲಿತ ಕಥನವನ್ನು ನಿರೂಪಿಸ’ಲು ಹೊರಟಿದ್ದಾರೆ. ಇದನ್ನು ‘ಬೌದ್ದಿಕವಾದ ಸ್ವಾತಂತ್ರ್ಯಕ್ಕಾಗಿ ರೂಪಿಸಿಕೊಂಡ ನಿರೂಪಣೆ’ ಎಂದಿದ್ದಾರೆ. ‘ಪಶ್ಚಿಮದ ಅಧ್ಯಯನವಾಗಲೀ ಭಾರತೀಯ ಸಮಾಜ ವಿಜ್ಞಾನಿಗಳ ಸಾಂಪ್ರದಾಯಿಕ ಕ್ರಮವಾಗಲೀ ಎರಡೂ ನನ್ನ ಅಭಿವ್ಯಕ್ತಿಗೆ ಪೂರಕವಾದವಲ್ಲ’ ಎನ್ನುತ್ತಲೇ ‘ದಲಿತ ಸಮುದಾಯಗಳ ವೈಚಾರಿಕ ಆತ್ಮಕಥನವನ್ನು ನಿರೂಪಿಸಲು ಸ್ವಗತದ ಸ್ವೋಪಜ್ಞ ಗ್ರಹಿಕೆಗಳು, ರೂಪಕ ನಿರೂಪಣೆಗಳು, ವರ್ತಮಾನದ ಸಂಬಂಧಗಳು ಬಹಳ ಮುಖ್ಯ’ ಎಂದು, ‘ಹೀಗಾಗಿ ಬೌದ್ದಿಕವಾದ ವಿನ್ಯಾಸಗಳನ್ನು ಹೊಸಕಾಲದ ಭಾಷಿಕ ರಚನೆಗಳಲ್ಲಿ ದಾಖಲಿಸಬೇಕಾಗುತ್ತದೆ’ ಎನ್ನುವ ನಿಲುವು ಮೊಗಳ್ಳಿಯವರದು. ಕನ್ನಡ ಸನ್ನಿವೇಶದ ಇಂತಹ ನಿಲುವುಗಳು ಇನ್ನೆಲ್ಲಿಯೋ ಇಂಗ್ಲಿಶನ್ನು ಕನೆಕ್ಟ್ ಮಾಡಿಕೊಳ್ಳುತ್ತವೆ. ಕನ್ನಡದ ನೆಪದಲ್ಲಿ ಮೋಸ ಹೋಗುತ್ತಿರುವ ಇಂತಹ ಸಂಸ್ಕ್ರುತ ನುಡಿಗಟ್ಟುಗಳಿಂದ ಬಿಡುಗಡೆಯನ್ನು ಕೊಡುವ ಸರಕಾಗಿ ಇಂಗ್ಲಿಶ್ ಕಾಣತೊಡಗುತ್ತದೆ. ಆದರೆ ಕನ್ನಡದ ಸನ್ನಿವೇಶವು ಇಂಗ್ಲಿಶಿನಿಂದ ಬಿಡುಗಡೆಯನ್ನು ಪಡೆಯುವ ದಾರಿಯಲ್ಲಿ ‘ಸಂಸ್ಕ್ರುತ’ವೆಂಬ ಸರಕು ಬಂದು ತುಂಬಿಕೊಳ್ಳುತ್ತಿದೆ. ಕನ್ನಡದ ಬಹುಪಾಲು ಬರಹಗಾರರು ಈ ಸರಕನ್ನು ತಂದವರು, ತರುತ್ತಿರುವವರು, ಬಳಸುತ್ತಿರುವವರೇ ಆಗಿದ್ದಾರೆ.

ಸಂಸ್ಕ್ರುತ ಮತ್ತು ಇಂಗ್ಲಿಶ್ ಇವರೆಡರಲ್ಲಿ ಯಾವುದರ ಬದಲಿಯಾಗಿ ಯಾವುದನ್ನೇ ನೆಮ್ಮಿದರೂ ಕನ್ನಡದ ಪಾಲಿಗೆ ಇವೆರಡೂ ನಡೆಯಬುದಾದ ದಾರಿಗಳಲ್ಲ. ತಡೆಯುವ ಗೋಡೆಗಳೇ ಆಗಿವೆ. ಇವು ಸನ್ನಿವೇಶಕ್ಕನುಗುಣವಾಗಿ ಕನ್ನಡಕ್ಕೆ ಬೆಂಬಲವಾಗಿ ಎಂಬಂತೆ ಬಣ್ಣಿಸಿಕೊಳ್ಳುತ್ತಾ ಬೇರೆಬೇರೆ ಚಹರೆಗಳಲ್ಲಿ ಕನ್ನಡ ಬದುಕುಗಳನ್ನು ತಡೆಯುತ್ತಿವೆ. ಆದ್ದರಿಂದಾಗಿ, ಮೊಗಳ್ಳಿಯವರ ಇಲ್ಲಿನ ನಿರೂಪಣೆಗಳಲ್ಲಿ ಯಾವ ಕನ್ನಡವಿದೆ? ಯಾರ ಕನ್ನಡವಿದೆ? ಇದು ಕನ್ನಡವೇ ದಿಟವೆನ್ನುವುದಾದರೆ ಯಾರನ್ನು ಮುಟ್ಟಲೆಂದು ಈ ಕನ್ನಡವನ್ನು ಬಳಸಲಾಗಿದೆ? ಎನ್ನುವ ಸವಾಲು ದೊಡ್ಡದಾಗಿ ಕಾಣುತ್ತದೆ.

ಮೊಗಳ್ಳಿಯವರೊಬ್ಬರ ತೊಡಕಲ್ಲ ಇದು. ಕನ್ನಡದಲ್ಲಿ ಇಂತಹ ತಿಳಿಯದ ನುಡಿಬಳಕೆಯನ್ನು ಅನೇಕರು ಬಳಸುತ್ತಿದ್ದಾರೆ. ಹೀಗೆ ಬಳಸುವವರಿಗೆಲ್ಲ ಇಂತಹ ಪದಗಳ ಮೂಲಕ ನಾವು ದೊಡ್ಡದಾದ ಏನನ್ನೋ ಹೇಳುತ್ತಾ ಇದ್ದೇವೆ ಎನ್ನುವ ಮರುಳು ಹಿಡಿದಿದೆ. ಹಾಗೆ ಬರೆಯುವವರನ್ನೇ, ಇಲ್ಲಿ ಬಳಸಿರುವ ಒಂದೊಂದು ಪದಕ್ಕೂ ಇರುವ ತಿರುಳೇನು ಎಂದು ಕೇಳಿದರೂ ಅವರು ಅದೇನೆಂದು ತಟ್ಟಂತ ಹೇಳಲಾರರು. ಅವರಿಗೂ ‘ಸಂಸ್ಕೃತ ನಿಘಂಟು’ಗಳು ಬೇಕಾಗಿದೆ. ಯಾರ ಕುರಿತಾಗಿ ಚಿಂತಿಸುತ್ತಿದ್ದಾರೋ, ಬರೆಯುತ್ತಿದ್ದಾರೋ, ಅವರನ್ನು, ಆ ಸಮುದಾಯಗಳಿಂದ ಹೊಸಹೊಸ ತಿಳಿವಿಗೆ ತೆರೆದುಕೊಳ್ಳುವವರನ್ನು ಈ ಚಿಂತನೆ ಮುಟ್ಟುವುದೇ ಇಲ್ಲ. ಹಾಗಿದ್ದರೆ, ಇಂತಹ ಕೆಲಸಗಳ ಉಪಯೋಗವಾದರೂ ಏನು ಎಂದು ಕೇಳಿಕೊಂಡರೆ, ನಾವು, ನಾವಾಡುವ ನುಡಿಯಲ್ಲಿ ಹೇಳಬೇಕಾದುದನ್ನು ಹೇಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದೇವೆಯೇ ಎನ್ನುವ ಅನುಮಾನ ಮಾತ್ರವೇ ಉಳಿಯುತ್ತದೆ. ಕನ್ನಡ ಚಿಂತನೆಗಳು ಕನ್ನಡ ಬದುಕುಗಳಿಗೆ ತಲುಪದೆ, ಇನ್ನಾರ ಮುಂದೆಯೋ ಇಟ್ಟಿರುವ ‘ನೈವೇದ್ಯ’ದಂತೆ ಕಾಣುತ್ತದೆ. ಹೀಗಾಗಿ, ‘ಕನ್ನಡದ ಜೀರ್ಣಾಗ್ನಿ ಹಿಂದೆ ಸಂಸ್ಕೃತವನ್ನೂ, ನಮ್ಮ ಕಾಲದಲ್ಲಿ ಯೂರೋಪನ್ನೂ ಮೈಗೂಡಿಸಿಕೊಂಡ ಪರಿ’(ಅನಂತಮೂರ್ತಿ)ಯೇ ಸರಿಯೆನಿಸುವಂತೆ ಕಾಣುತ್ತದೆ. ‘ಅತ್ಯಾಧುನಿಕ ಪ್ರಜ್ಞೆಗೆ ಕನ್ನಡದ ಮನಸ್ಸು ವಿಕಾಸವಾಗಲು ಇಂಗ್ಲಿಷ್ ಭಾಷೆ ಆಪ್ತಬಂಧು’(ಮೊಗಳ್ಳಿ) ಅನಿಸುತ್ತದೆ. ಇದರಿಂದ ‘ಕೃತಕ ತರ್ಕದ ಗಡಿಗಳು ಬಿದ್ದು ಹೋಗುತ್ತವೆ’ ಎನ್ನುವ ಹುಚ್ಚುತನಗಳು ಮಯ್ಪಡೆಯುತ್ತವೆ.

ಇದು ‘ಸಂಸ್ಕೃತ ಪರಂಪರೆ’ಯಿಂದ ಬಂದವರಿಂದ ಹುಟ್ಟಿದ ತೊಡಕಾದರೂ, ಅದು ಮಾತ್ರವೇ ಆಗಿ ಈಗ ಕಾಣುತ್ತಿಲ್ಲ. ‘ಕುವೆಂಪು ಅವರೇ ಇಂಗ್ಲಿಷ್ ವಿದ್ಯಾಭ್ಯಾಸದಿಂದ ತಾನು ಬ್ರಾಹ್ಮಣವರ್ಗದವರ ಕೊಟ್ಟಿಗೆಯಲ್ಲಿ ಗೊಬ್ಬರ ಹೊರುವುದು ತಪ್ಪಿತೆಂದು ಹೇಳುತ್ತಾರೆಂಬುದನ್ನೂ-ಇವೆಲ್ಲವೂ ಪ್ರಾಮಾಣಿಕವಾದ ಪ್ರತಿಕ್ರಿಯೆಗಳೆಂಬುದನ್ನೂ-ನಾವು ತಿಳಿದಿರಬೇಕು’(ಅನಂತಮೂರ್ತಿ) ಎಂದು, ಶೂದ್ರರ ಬಿಡುಗಡೆಯ ದಾರಿಯೂ ಇದಾಗಿತ್ತು, ಈಗ ದಲಿತರ ಬಿಡುಗಡೆಯ ದಾರಿಯೂ ಇದಲ್ಲದೆ ಬೇರೆಯಲ್ಲ ಎಂದು ಪಟ್ಟು ಹಿಡಿದು ಒಪ್ಪಿಸುವವರೆಗೂ ಮುಂದುವರೆದಿದೆ. ತಳಜಾತಿಗಳು-ದಲಿತರು ಬ್ರಾಹ್ಮಣರ ದಾರಿಯಲ್ಲಿ ನಡೆದಲ್ಲದೆ ಬೇರೆ ಅವಕಾಶಗಳೇ ಇಲ್ಲ ಬಿಡುಗಡೆಗೆ ಎನ್ನುವಂತೆ ಅನಂತಮೂರ್ತಿಯಂತವರು ಪಟ್ಟು ಹಿಡಿದಿದ್ದಾರೆ.

‘ತಿಳಿಯದಿರುವ ಕನ್ನಡ’ ಯಾವುದದು?

ಬ್ರಾಹ್ಮಣ-ಶೂದ್ರ ಎನ್ನುವ ಕಾನ್ಸೆಪ್ಟುಗಳು ಒಂದನ್ನು ಇನ್ನೊಂದು ತಪ್ಪಿತಸ್ತರನ್ನಾಗಿ ಕನ್ನಡದ ಕಟಕಟೆಯಲ್ಲಿ ನಿಲ್ಲಿಸುತ್ತಾ ಬಂದಿರುವ ಚಿಂತನೆಗಳಿಂದಲೇ ಸಂಸ್ಕೃತ ಮತ್ತು ಯೂರೋಪುಗಳು ಮತ್ತೂ ಗಟ್ಟಿಯಾಗಿವೆಯೇ ಕನ್ನಡದಲ್ಲಿ? ಎನ್ನುವ ಅನುಮಾನಗಳು ಹುಟ್ಟುತ್ತವೆ. ಯಾವ ಮೇಲುಕೀಳುಗಳನ್ನು ಸಾಮಾಜಿಕ ಬದುಕಿನಲ್ಲಿ ಇರಕೂಡದೆಂದು ಕನ್ನಡ ಜಗತ್ತು ಬಯಸುತ್ತಾ ಬಂದಿದೆಯೋ, ದಲಿತ-ಬಂಡಾಯ ಚಳುವಳಿಗಳು, ತಳಜಾತಿ ಬದುಕು ಮತ್ತು ಹೆಂಗಸಿನ ಅಯ್ಡೆಂಟಿಟಿಯ ದರ್ದನ್ನು ಬಯಸಿ ಯಾವ ಹಿಂಸೆಗಳನ್ನು ಬೇಡವೆಂದು ಹೋರಾಟಗಳನ್ನು ನಡೆಸಲಾಗುತ್ತಿದೆಯೋ, ಆ ಬೇಡವಾದದ್ದೇ ನುಡಿಯ ರೂಪ ಹೊತ್ತು ಕನ್ನಡದ ನೆಪದಲ್ಲಿ ಹೇಗೆ ಉಳಿಯಿತು? ಕನ್ನಡ ಬದುಕುಗಳು ಅರಿಗಿಸಿಕೊಳ್ಳಲಾಗದಂತೆ ಬೆಳೆಯಿತು? ಹೊಸಕಾಲದ ಚಿಂತನೆಗಳ ಬರೆಹಗಾರರಿಂದಲೇ ಬೆಳೆಯುವಂತೆಯೂ ಆಯಿತು? ಕನ್ನಡ ಜನಕ್ಕೆ ಮುಟ್ಟಬೇಕಾದ, ತಟ್ಟಬೇಕಾದ ಕನ್ನಡದಲ್ಲಿ ಬರೆಯುವುದನ್ನೇಕೆ ಈ ಚಿಂತಕರು ಮಾಡಲಿಲ್ಲ? ‘ಕನ್ನಡ-ಕನ್ನಡ ನಿಘಂಟು’ಗಳನ್ನಿರಿಸಿಕೊಂಡು, ‘ಸಂಸ್ಕೃತ’ ಪದಗಳಿಗೆ ಕನ್ನಡದ ತಿರುಳನ್ನು ಹುಡುಕಿ ಕನ್ನಡವನ್ನು ಕಲಿಯಬೇಕಾದ ಸನ್ನಿವೇಶ ಯಾಕೆ ಎದುರಾಯಿತು ಕನ್ನಡ ಮಕ್ಕಳಿಗೆ? ಹಾಗಾಗಿಯೇ ಕಲಿತರೂ ನುಡಿಯ ಕೀಳರಿಮೆ ನಮ್ಮನ್ನು ಕಾಡುವುದು ತಪ್ಪಿಲ್ಲ. ಇವತ್ತು ಈ ಸಂಚು ಹೇಗಿದೆಯೆಂದರೆ, ಕಲಿತು ಸಾಮಾಜಿಕ ಸವಲತ್ತುಗಳನ್ನು ಪಡೆಯುವ ತಳಜಾತಿಗಳ ಸಾಮಾಜಿಕ ನ್ಯಾಯದ ಕಡೆಗಿನ ನಡಿಗೆಯನ್ನು ಈಗ ಇಂಗ್ಲಿಶಿನತ್ತ ತಿರುಗಿಸಲಾಗುತ್ತಿದೆಯೇ? ಎಂದು ಗುಮಾನಿ ಹುಟ್ಟುವಷ್ಟು. ಸಾಹಿತ್ಯದ ಚಿಂತನೆಯೂ ಸೇರಿದಂತೆ ಸಯಿನ್ಸು, ಸೋಸಿಯಲ್ ಸಯಿನ್ಸು, ಎಕೊನೊಮಿಕ್ಸು, ಕಾಮರ್ಸು ಎಲ್ಲಾ ತಿಳಿವಿನ ದಾರಿಗಳೂ ಕಲಿಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಡೆಯಲು ಬೇಕಾದ ನುಡಿಯ ರೂಪವನ್ನು ಇರಿಸಿಕೊಂಡಿಲ್ಲವಾದ್ದರಿಂದಲೇ ಇಂಗ್ಲಿಶಿನ ಕಡೆಗೆ ತಿರುಗುವಂತಾಗಿಲ್ಲವೇ? ಅನ್ನುವಷ್ಟು.

‘ಸಿಮಾಂತ ತುಷ್ಟಿಗಣ ರೇಖೆ’ ಎನ್ನುವ ನುಡಿಗಟ್ಟೊಂದನ್ನು ಎಕನೊಮಿಕ್ಸಿನ ಕನ್ನಡ ಪುಸ್ತಕಗಳಲ್ಲಿ ಬಳಸಲಾಗಿದೆ. ಇದನ್ನು ಇಂಗ್ಲಿಶಿನ ‘ಡಿಮಿನಿಶಿಂಗ್ ಮಾರ್ಜಿನಲ್ ಯುಟಿಲಿಟಿ ಕರ್ವ್’ ನುಡಿಗಟ್ಟಿಗೆ ಬದಲಿಯಾಗಿ ಬಳಸಲಾಗಿದೆ. ಇದು ಕನ್ನಡ ಬದುಕುಗಳ ಎಕನೊಮಿಕ್ಸಿನ ತೊಡಕಲ್ಲ ಎನ್ನುವುದು ಮೇಲುನೋಟಕ್ಕೇ ಗೊತ್ತಾಗುವಂತಿದೆ. ‘ಸಂಸ್ಕ್ರತ’ ಇವತ್ತು ಜನಬಳಕೆಯ ನುಡಿಯಲ್ಲದಿರುವಾಗಲೂ ಬಳಸುವ ಚಾಳಿಯಿಂದ ಆಗಿರುವ ತೊಡಕು ಇದೆಂದು ಯಾರಿಗಾದರೂ ತಿಳಿಯುತ್ತದೆ.

ಹಾಗೆಯೇ ‘ಸೋಶಿಯಲ್ ವರ್ಕ್ಸ್-ಸಮಾಜ ಕಾರ್ಯ’ ಕಲಿಸುವವರು, ಕಲಿಯುವವರು ತಪ್ಪದೇ ಬಳಸುವ ಪುಸ್ತಕದ ಈ ನುಡಿಬಳಕೆಯನ್ನು ನೋಡಿ; ಅಸ್ಥಿಶಾಸ್ತ್ರ-ಅನಾಟಮಿ, ಕರಣಿಕಪ್ರಭುತ್ವ-ಬ್ಯೂರೋಕ್ರಸಿ, ಆಧ್ಯಾತ್ಮ-ಸ್ಪಿರುಚಲಿಸಮ್, ಅನಮ್ಯತೆ-ರಿಜಿಡಿಟಿ, ಅನುಗತ-ಕಾನ್ಸಿಕ್ವೆನ್ಸಿಯಲ್, ಅನುಮಿತ್ಯರ್ಥ-ಇಂಪ್ಲಿಕೇಶನ್, ಅನುಲೋಮ-ಹಯರ್‌ಗೆಮಿ, ಅನುಷ್ಠಾನ-ಇಂಪ್ಲಿಮೆಂಟೇಶನ್, ಅಭಿವೃದ್ಧಿಶೀಲ-ಡೆವಲಪಿಂಗ್, ಆಷಾಡಭೂತಿತನ-ಸ್ಯಾಂಕ್ಟಿಮೊನಿಯಸ್ನೆಸ್, ಅನುಷಂಗಿಕ-ಇನ್ಸಿಡೆಂಟಲ್/ಸೆಕೆಂಡರಿ, ಇತ್ಯಾತ್ಮಕ-ಪಾಸಿಟಿವ್, ಕ್ರಮಶೀಲತೆ-ಆರ್ಡರ್ಲಿನೆಸ್, ಗುಪ್ತನ್ಯಾಯ ಪ್ರಧಾನ ತಾಂತ್ರಿಕತೆ-ಕ್ಯಾಮರಲಿಸ್ಟಿಕ್ ಟೆಕ್ನಾಲಜಿ, ಘಟಕಾಂಶಗಳು-ಎಲಿಮೆಂಟ್ಸ್, ತಂತ್ರೋಪಾಯ-ಸ್ಟ್ರ್ಯಾಟಜಿ, ತತ್ವಾದರ್ಶ-ಅಯ್ಡಿಯಾಲಜಿ, ನಿಗಮನತರ್ಕ-ಸಿಲ್ಲೋಗಿಸಮ್, ನೇತ್ಯಾತ್ಮಕ-ನೆಗೆಟಿವ್, ನೈತಿಕಸ್ಥೈರ್ಯ-ಮೋರಲ್, ಪಂಥ-ಸೆಕ್ಟ್, ಸಂವೃತ-ನ್ಯಾರೋ, ಪ್ರಕೃತ್ಯತೀತ-ಸೂಪರ್‌ನ್ಯಾಚುರಲ್, ಪ್ರವಣತೆ-ಟೆಂಡೆನ್ಸಿ, ಬಹಿಷ್ಕಾರ-ಟಬೂ, ಬಾಹ್ಯವಿವಾಹ-ಎಕ್ಸೊಗೆಮಿ, ಬಹುಪತಿತ್ವ-ಪಾಲಿಗ್ಯಾಂಡ್ರಿ, ಮಾತೃಕೆ-ಮ್ಯಾಟ್ರಿಕ್ಸ್, ಮಿತವ್ಯಯ-ಫ್ರೂಗೆಲಿಟಿ, ರಾಷ್ಟ್ರಕತ್ವ-ಸಿಟಿಜೆನ್‌ಶಿಪ್, ರಿಕ್ತತೆ-ಪ್ರಯ್ವೇಶನ್, ವಿಧಿರಾಹಿತ್ಯ-ಅನೋಮಿ, ವಿಪತ್ಕಾರಕ-ಡಿಸ್ಯಾಸ್ಟ್ರಸ್, ವಿಪ್ಲವ-ಅಪ್‌ಹೀವಲ್, ಶಕ್ತ್ಯಂಶಗಳು-ಫೋರ‍್ಸಸ್, ಸಂಘಾತಗಳು-ಕಾನ್ಸೋಸಿಯೇಶನ್ಸ್, ಸಂಪ್ರಬಂಧ-ಪೇಪರ್, ಸಂಪೋಷಣೆ-ಕನ್ಸರ್ವೇಶನ್, ಸಂಭಾವ್ಯ ಪರಿಗಣನೆ-ಕಂಟೆಂಪ್ಲೇಶನ್, ಸಂಯೋಜಿತ-ಇಂಟೆಗ್ರೇಟೆಡ್, ಸಾಂಸ್ಥಿಕ ಮಾರ್ಗದೃಷ್ಟಿ-ಇನ್‌ಸ್ಸ್ಟಿಟ್ಯೂಶನಲ್ ಅಪ್ರೋಚ್, ಸಂವರ್ಧನೆ-ಕನ್ಸಾಲಿಡೇಶನ್, ಸ್ವಯಾಜಮಾನ್ಯ-ಅಟೋಸೆಫಲಿ, ಸಮತಾವಾದ-ಕಮ್ಯುನಿಸಮ್, ಸರ್ವಚೇತನವಾದ-ಅನಿಮಿಸ್ಟಿಸಿಸಮ್, ಸಶಕ್ತ ಉದ್ಯಮಶೀಲತೆ-ಎನೆರ್ಜೆಟಿಕ್ ಎಂಟರ್‌ಪ್ರಯ್ಸ್, ಸಾಪೇಕ್ಷ ಸ್ವಾಂತಿಕ ಮತ್ತು ಪ್ರಾಕೃತಿಕ ಸಿದ್ಧಾಂತಗಳು-ರಿಲೆಟೀವ್ ಸಬ್ಜೆಕ್ಟೀವ್ ಅಂಡ್ ನ್ಯಾಚುರಲಿಸ್ಟಿಕ್ ತಿಯರೀಸ್, ಸ್ಪೈರಭೋಗ-ಆರ‍್ಗಿಯಾಸ್ಟಿಕ್(ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ-ಜಿ.ಆರ್.ಮದನ್/ಅನು:ಎಚ್.ಎಂ.ಮರುಳಸಿದ್ಧಯ್ಯ, ೨೦೧೦, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು)

ಇಂತಹ ನುಡಿಗಟ್ಟುಗಳನ್ನು ಕನ್ನಡದವೆಂದು ನಂಬಿಸಿ ಕನ್ನಡ ಬದುಕುಗಳನ್ನು ಕೊಲ್ಲುತ್ತಿಲ್ಲವೇ? ಕನ್ನಡ ಬದುಕುಗಳ ವಹಿವಾಟುಗಳು ಮತ್ತು ಸನ್ನಿವೇಶಗಳ ಮೂಲಕ ಎಲ್ಲಿಯವರೆಗೆ ಇದನ್ನು ನೋಡಲು ಬರುವುದಿಲ್ಲವೆಂದು ಕುಳಿತುಬಿಡುತ್ತೇವೆಯೋ ಅಲ್ಲಿಯವರೆಗೂ ಇದೇನೆಂದು ತಿಳಿಯುವುದಿಲ್ಲ. ಇದು ತಿಳಿಯುವವರೆಗೂ ಸಾಮಾಜಿಕ ಸವಲತ್ತುಗಳನ್ನು ಪಡೆದುಕೊಳ್ಳುವುದೆಂದರೆ ಏನು? ಆ ಹಕ್ಕು ನಮ್ಮದೂ ಹೇಗೆ ಆಗಿದೆ ಎನ್ನುವುದೂ ತಿಳಿಯುವುದಿಲ್ಲ. ಹೀಗಾಗಿ ಇಂಗ್ಲಿಶ್ ‘ನನ್ನದಾದ’ ಕೂಡಲೇ ಬಿಡುಗಡೆಯಿದೆಯೆಂದು ತಿಳಿಯುವುದಾದರೂ ಹೇಗೆ?. ಕನ್ನಡಿಗರಿಗೆ ತಿಳಿಯದ ಕನ್ನಡವಿಲ್ಲ, ಆದರೆ ಕನ್ನಡಿಗರು ತಿಳಿಯಲಾಗದ ‘ಸಂಸ್ಕೃತ’ವಿದೆ ಕನ್ನಡದಲ್ಲಿ ಎನ್ನುವುದನ್ನು ಮೊದಲಿಗೆ ತಿಳಿಯಬೇಕಿದೆ ಕನ್ನಡ ಚಿಂತಕರು. ಕನ್ನಡದ ಒಳಗೆ ನಿಂತ ಈ ಸಂಸ್ಕೃತವೇ ಕಲಿಕೆಯಿಂದ ಮಕ್ಕಳನ್ನು ಹೊರದಬ್ಬುತ್ತಿದೆ. ತಿಳಿವಿನ ದಾರಿಗಳಿಂದ ಚಿಂತಕರನ್ನು ಹೊರಕ್ಕೆ ದಬ್ಬುತ್ತಿದೆ, ಕನ್ನಡದ ಬದುಕುಗಳಿಂದ ಕನ್ನಡಿಗರನ್ನು ಹೊರಕ್ಕೆ ನೂಕುತ್ತಿದೆ. ಈ ಅವಲಕ್ಕಿ-ಬುವಲಕ್ಕಿ ಆಟದಲ್ಲಿ ಇಂಗ್ಲಿಶ್ ನಮ್ಮೆದುರಿಗೆ ನಿಂತಿರುವ ಮಾಂತ್ರಿಕನಂತೆ ಕಾಣುತ್ತಿದೆ. ಇಂತಹ ‘ಸಂಸ್ಕೃತ ಎಂಬೋ ಕನ್ನಡ’ದ ಮೂಲಕ ಇಂಗ್ಲಿಶನ್ನು ತಿಳಿಯುವುದಕ್ಕಿಂತ ಇಂಗ್ಲಿಶನ್ನೇ ಕಲಿತರೆ ಆಯಿತಲ್ಲ ಎನ್ನುವ ನಿಲುವಿಗೆ ತಳಜಾತಿಗಳನ್ನೂ ಎಳೆದು ತಂದಿದೆ. ‘ಕನ್ನಡವನ್ನು ಅಮೃತ’ ಎಂದು ಕರೆದು ಇಂಗ್ಲಿಶನ್ನು ‘ವರ’ವಾಗಿಸಿಕೊಳ್ಳುವ ಹಪಾಹಪಿಗೆ ಬೀಳುವ ಮೊದಲು ನಾವು ಈ ನುಡಿದಂದುಗದ ರಾಜಕಾರಣವನ್ನು ತಿಳಿಯಬೇಕಾಗಿದೆ.

ಬಳಸಲುಬೇಕಾದ ಕನ್ನಡ ಪದಗಳು ಎಂದರೆ ಏನು?

‘ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಅನ್ನುವ ಪುಸ್ತಕವೊಂದನ್ನು ಡಿ.ಎನ್.ಶಂಕರಬಟ್ ಬರೆದಿದ್ದಾರೆ. ಅವರೆನ್ನುವುದೇನೆಂದರೆ, ‘ಸಾಮಾನ್ಯವಾಗಿ ಇಂಗ್ಲಿಶ್-ಕನ್ನಡ ಪದಕೋಶಗಳನ್ನು ಇಂಗ್ಲಿಶ್ ಬಾರದವರಿಗಾಗಿ ತಯಾರಿಸಿರುತ್ತಾರೆ; ಯಾವುದಾದರೊಂದು ಇಂಗ್ಲಿಶ್ ಪದದ ಅರ್ಥ, ಉಚ್ಚಾರಣೆ ಇಲ್ಲವೇ ಬಳಕೆ ಹೇಗೆಂಬುದನ್ನು ತಿಳಿಯದವರಿಗೆ ತಿಳಿಸಿ ಹೇಳುವುದೇ ಅವುಗಳ ಗುರಿಯಾಗಿರುತ್ತದೆ’ ‘ಆದರೆ ಈ ಪದಕೋಶದ ಗುರಿಯೇ ಬೇರೆ. ಇಂಗ್ಲಿಶ್ ನುಡಿಯನ್ನು ಸಾಕಷ್ಟು ತಿಳಿದಿದ್ದು, ಅದರಲ್ಲಿ ಬರುವ ಪದಗಳಿಗೆ ಸಮನವಾಗಿರುವ ಕನ್ನಡದವೇ ಆದ ಪದಗಳು ಯಾವುವಿವೆ ಎಂಬುದನ್ನು ಮತ್ತು ಅಂತಹ ಪದಗಳನ್ನು ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು ತಿಳಿಯಬೇಕೆಂದಿರುವವರಿಗಾಗಿ ಈ ಪದಕೋಶವನ್ನು ತಯಾರಿಸಿದ್ದೇನೆ’ ಎಂದು ಇದರ ಗುರಿಯನ್ನು ಹೇಳಿಕೊಂಡಿದ್ದಾರೆ. ಕನ್ನಡ ಬರೆಹಗಳಲ್ಲಿರುವ ತೊಡಕೊಂದರ ಕಡೆಗೆ ನಮ್ಮನ್ನು ಸೆಳೆದು ಅದನ್ನು ಪರಿಹರಿಸಿಕೊಳ್ಳುವುದಕ್ಕೆ ಇರುವ ದಾರಿಯು ಹೇಗಿದೆಯೆಂಬುದನ್ನೂ ಹೇಳಿದ್ದಾರೆ; ‘ಹಲವು ಮಂದಿ ಕನ್ನಡಿಗರಿಗೆ ಇವತ್ತು ಕನ್ನಡದ್ದೇ ಆದ ಪದ ಯಾವುದು ಮತ್ತು ಸಂಸ್ಕ್ರುತದಿಂದ ಎರವಲು ಪಡೆದ ಪದ ಯಾವುದು ಎಂಬುದು ತಿಳಿದಿರುವುದಿಲ್ಲ. ಬೇರೆ ಹಲವರಿಗೆ ಪದಕೋಶಗಳಲ್ಲಿರುವ ಪದಗಳೆಲ್ಲವೂ ಕನ್ನಡದವೇ ಎಂಬ ಬ್ರಮೆಯಿರುವಂತಿದೆ. ಅವನ್ನು ಕನ್ನಡದ ಲಿಪಿಯಲ್ಲಿ ಬರೆದೊಡನೆ ಅವು ಕನ್ನಡದವಾಗಿಬಿಡುತ್ತವೆ ಎಂಬುದು ಅವರ ಅನಿಸಿಕೆಯಾಗಿರಬೇಕು. ಕನ್ನಡಕ್ಕೆ ಹೊಸಪದಗಳು ಬೇಕಾದಾಗಲೆಲ್ಲ ಅವನ್ನು ಸಂಸ್ಕ್ರುತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಉಂಟುಮಾಡಿಕೊಳ್ಳುವ ಇನ್ನೊಂದು ಕೆಟ್ಟ ಚಾಳಿಯೂ ಕನ್ನಡದ ಬರಹಗಾರರಲ್ಲಿ ಮತ್ತು ಪಂಡಿತರಲ್ಲಿ ಹಲವಾರು ವರ್ಷಗಳಿಂದ ಬೆಳೆದು ಬಂದಿದೆ. ಅವರ ಮಟ್ಟಿಗೆ ಕನ್ನಡ ಪದಗಳು ಮುಟ್ಟಬಾರದ(ಅಸ್ಪ್ರುಶ್ಯ) ಪದಗಳು’. ‘ಹೊಸ ಪದಗಳನ್ನುಂಟುಮಾಡಲು ಬೇಕಾಗುವ ಪದಗಳು ಮತ್ತು ಒಟ್ಟುಗಳು ಕನ್ನಡದಲ್ಲಿಲ್ಲ ಎನ್ನುವ ಅನಿಸಿಕೆ ಹಲವು ಪಂಡಿತರಲ್ಲಿರುವುದು’ ಮತ್ತು ‘ಸಂಸ್ಕ್ರುತ ಪದಗಳಿಗಿರುವ ಮರ್ಯಾದೆ ಕನ್ನಡ ಪದಗಳಿಗಿಲ್ಲ ಎನ್ನುವಂತಹ ಕನ್ನಡದ ಮೇಲಿನ ಕೀಳರಿಮೆ’ ಇದಕ್ಕೆ ಕಾರಣವೆಂಬುದನ್ನು ಗುರುತಿಸಿದ್ದಾರೆ. ಇದರಿಂದಾಗಿ, ‘ಕನ್ನಡದ ಮೇಲೆ ಸಂಸ್ಕ್ರತುದ ಹೊರೆ ಹೆಚ್ಚುತ್ತಿದ್ದು, ಕನ್ನಡದ ಬರಹಗಳು ಹೆಚ್ಚಿನ ಕನ್ನಡಿಗರಿಗೂ ಅರ್ಥವಾಗದ ಕಗ್ಗಂಟುಗಳಾಗುತ್ತಿವೆ’. ‘ತಮ್ಮ ಓದುಗರನ್ನು ಬರೇ ‘ಮಂತ್ರಮುಗ್ದ’ರನ್ನಾಗಿ ಮಾಡುತ್ತವಲ್ಲದೆ ಅವರಲ್ಲಿ ಹೊಸ ಅರಿವನ್ನೇನೂ ಹುಟ್ಟಿಸುವುದಿಲ್ಲ. ಅಂತಹ ಬರಹಗಳು ತಮ್ಮ ಮೂಲ ಗುರಿಯನ್ನು ತಲುಪುವುದೇ ಇಲ್ಲ’. ಇದು ಕನ್ನಡಕ್ಕೆ ಮಾಡುವ ‘ದೊಡ್ಡ ಅನ್ಯಾಯ’. ‘ಎಂತಹ ಪದಗಳು ಬೇಕಿದ್ದರೂ ಸಂಸ್ಕ್ರುತದ ಸಹಾಯವಿಲ್ಲದೆ ಕನ್ನಡದಲ್ಲೇನೆ ಉಂಟುಮಾಡಬಲ್ಲೆವು. ಅಂತಹ ಕಸುವು ಕನ್ನಡಕ್ಕಿದೆ. ಹಾಗೆ ಉಂಟುಮಾಡಲು ಬೇಕಾಗುವ ಸಲಕರಣೆಗಳೆಲ್ಲವೂ ಕನ್ನಡದಲ್ಲಿವೆ. ಇದನ್ನು ತೋರಿಸಿಕೊಡುವುದಕ್ಕಾಗಿಯೇ’ ಈ ಪದಕೋಶವನ್ನು ತಯಾರಿಸಲು ಹೊರಟಿದ್ದೇನೆಂಬುದು ಶಂಕರಬಟ್ಟರ ನಿಲುವು.

ಈ ಗುರಿಯಿರಿಸಿಕೊಂಡ ಶಂಕರಬಟ್ಟರು, ಬೇಕಾಗುವಂತಹ ಎಲ್ಲ ಪದಗಳಿಗೂ ಸಮನಾದ ಕನ್ನಡ ಪದಗಳೂ ಈ ‘ಪದಕೋಶ’ದಲ್ಲಿ ಇದೆಯೆಂದೇನೂ ಹೇಳುತ್ತಿಲ್ಲ. ಜೊತೆಗೆ ಈ ಪದನೆರಿಕೆಯನ್ನು ತಯಾರಿಸಲು ಕಿಟ್ಟೆಲ್‌ನಿಂದ ವೆಂಕಟಸುಬ್ಬಯ್ಯನವರೆಗಿನ ‘ನಿಘಂಟು’ಗಳನ್ನು, ಕೊಳಂಬೆ ಪುಟ್ಟಣ್ಣಗವ್ಡರ ಅಚ್ಚಗನ್ನಡ ನುಡಿಕೋಶ, ಬರೋ ಮತ್ತು ಎಮೆನೋ ಅವರ ದ್ರವಿಡಿಯನ್ ಎಟಿಮೋಲಾಜಿಕಲ್ ಡಿಕ್‌ಶ್ನರಿ ಮೊದಲಾದವನ್ನು ಬಳಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಜೊತೆಗೆ ‘ಈ ಯಾವ ಪದಕೋಶದಲ್ಲೂ ಕಾಣಸಿಗದಿರುವ ಹಲವು ಹೊಸ ಪದಗಳನ್ನೂ ನಾನು ಕನ್ನಡ ಪದರಚನೆಯ ಒಲವನ್ನು ಬಳಸಿ ಉಂಟುಮಾಡಿಕೊಂಡಿದ್ದೇನೆ’ ‘ಹಳೆಗನ್ನಡದಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಕನ್ನಡ ಪದಗಳನ್ನೂ ಹೊಸಗನ್ನಡದಲ್ಲಿ ಬಳಸುವ ಬಗೆ ಹೇಗೆ ಎಂಬುದನ್ನು’ ತೋರಿಸಿದ್ದೇನೆ ಎಂದಿರುವುದಲ್ಲದೆ, ‘ಕನ್ನಡದ ಒಳನುಡಿಗಳಲ್ಲಿ ಒಂದು ದೊಡ್ಡ ಪದಬಂಡಾರವೇ ಇದೆ. ಅದನ್ನು ತೆರೆದು ಇಂತಹ ಪದಕೋಶದಲ್ಲಿ ತುಂಬಿಕೊಳ್ಳುವ ಕೆಲಸ ಇನ್ನೂ ನಡೆಯಬೇಕಿದೆ’ ಎನ್ನುವುದು ಶಂಕರಬಟ್ಟರ ಮಾತು.

ಅಲ್ಲದೆ ‘ಕನ್ನಡದ್ದೇ ಪದಗಳು’ ಎಂದು ಕರೆದಿರುವ ಪದಗಳಲ್ಲಿ ಕೆಲವು ‘ಕನ್ನಡ ನುಡಿ ತನ್ನತನವನ್ನು ಪಡೆದ ಸಮಯದಿಂದಲೂ’ ಬೇರೆ ನುಡಿಗಳಿಂದ ಬಂದವುಗಳೂ ಇವೆ. ಇವು ಕನ್ನಡಕ್ಕೆ ಹೊಂದಿಕೊಂಡಂತವುಗಳು. ಆದರೆ, ‘ಕನ್ನಡ ಪದಸ್ವರೂಪಕ್ಕೆ ಹೊಂದಿಕೆಯಾಗದ ಪದಗಳನ್ನು ಆದಶ್ಟು ಮಟ್ಟಿಗೆ ಕನ್ನಡ ಬರಹಗಳಿಂದ ಹೊರಗಿಡಬೇಕು’, ‘ಸಾಮಾನ್ಯ ಜನರಿಗೆ ತಿಳಿದಿಲ್ಲದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟೂ ನಮ್ಮ ಬರಹ ಅವರಿಂದ ದೂರ ಹೋಗುತ್ತದೆ’ ಎನ್ನುವ ಎಚ್ಚರದಿಂದ, ಕಾಳಜಿಯಿಂದ ಈ ಕೆಲಸ ಮಾಡಿದ್ದಾರೆ. ಇಂತಹ ಪದನೆರಿಕೆಗಳು ದಿಟವಾಗಿಯೂ ಕನ್ನಡವನ್ನು ಕನ್ನಡಕ್ಕೆ ಹೊಂದಿಕೆಯಾಗದ ‘ಸಂಸ್ಕ್ರುತ ಪದ’ಗಳಿಂದ ಬಿಡಿಸಬಲ್ಲವೇ ಎನ್ನುವ ಕೇಳ್ವಿಯನ್ನು ಯಾರು ಬೇಕಾದರೂ ಕೇಳಿಕೊಳ್ಳುವ ಅಗತ್ಯವೂ ಇದೆ. ‘ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು’ ಎಂಬ ಈ ಪದನೆರಿಕೆಯಲ್ಲಿ ಸರಿಸುಮಾರು ಹನ್ನೆರಡೂವರೆ ಸಾವಿರಕ್ಕೂ ಹೆಚ್ಚು ಇಂಗ್ಲಿಶ್ ಪದಗಳಿಗೆ ಕನ್ನಡ ಪದಗಳನ್ನು ಹುಡುಕಿ ಕೊಡುವ, ಕಟ್ಟಿ ಕೊಡುವ ಪ್ರಯತ್ನವಿದೆ. ಕೆಲವನ್ನು ನೋಡುವುದಾದರೆ;

ಅನಾಟಮಿ-ಒಡಲರಿಮೆ, ಇಂಪ್ಲಿಮೆಂಟೇಶನ್-ನಡೆಸು/ನೆರವೇರಿಸು, ಆರ‍್ಡೆರ‍್ಲಿನೆಸ್-ಓರಣಗೊಂಡ, ಎಫಿಸಿಯೆನ್ಸಿ-ಅಳವು, ಪ್ರೋಗ್ರಾಮ್-ಹಮ್ಮುಗೆ, ಪ್ರೊಗ್ರೆಸ್-ಮುನ್ನಡೆ, ಮೋರಲ್-ಅದಟು, ನ್ಯಾರೋ-ಇಕ್ಕಟ್ಟಾದ, ಟೆಂಡೆನ್ಸಿ-ಒಲವು, ಪಾಲಿಗಾಂಡ್ರಿ-ಹಲಗಂಡರಿರುವಿಕೆ, ಪಾಲಿಗಿನಿ-ಹಲಹೆಂಡರಿರುವಿಕೆ, ಸಿಟಿಜನ್-ನಾಡಿಗ, ಪ್ರಯ್ವೇಶನ್-ಬಡತನ/ಇಲ್ಲದಿಕೆ, ಆರ‍್ಕಿಟೆಕ್ಚರ್-ಕಟ್ಟಡದರಿಮೆ, ಡಿಸಾಸ್ಟ್ರೊಸ್-ಕೇಡುಗಾಲ, ಅಪ್‌ಹೀವಲ್-ದೊಡ್ಡ ಮಾರ್ಪಾಡು, ಫೋರ್ಸ್ಸ್-ಸೆಳೆತಗಳು/ಒತ್ತಾಯಗಳು, ಕನ್ಸರ್ವೇಟ್-ಕಾಪಾಡು/ಉಳಿಸು, ಕನ್ಸಾಲಿಡೇಟ್-ಒಂದಾಗು/ಗಟ್ಟಿಯಾಗು, ಸಬ್ಜೆಕ್ಟೀವ್-ಅನಿಸಿಕೆಯ/ನನಸಲ್ಲದ, ಆಬ್ಜೆಕ್ಟೀವ್-ಇರುವ/ನನಸಾದ, ಅಟಾನಮಿ-ತಮ್ಮಾಳ್ವಿಕೆ, ಡೆವಲಪಿಂಗ್-ಬೆಳೆಯುತ್ತಿರುವ, ಇನ್ಸಿಡೆಂಟಲ್-ಇದ್ದಕ್ಕಿದ್ದಂತೆ, ಆಕ್ಯುರೆಸಿ-ಸರಿಮೆ, ಅಕ್ನಾಲೆಡ್ಜ್‌ಮೆಂಟ್-ತಲುಪರಿತ, ಆಂತ್ರೊಪಾಲಜಿ-ಮಂದಿಯರಿಮೆ, ಅತೆಂಟಿಕ್-ನಂಬಬಲ್ಲ/ನನ್ನಿಯ,

ಹೀಗೆ ಸಾವಿರಾರು ಕನ್ನಡ ಪದಗಳನ್ನು, ಸಂಸ್ಕ್ರುತ ಪದಗಳನ್ನು ಬಳಸುತ್ತಿರುವ ಜಾಗದಲ್ಲಿ ಬಳಸಲು ಅವಕಾಶವಿರುವುದನ್ನು ತೋರಿಸಿಕೊಡಲಾಗಿದೆ. ಇದು ಕನ್ನಡವನ್ನು ಉಳಿಸುವಲ್ಲಿ, ಬೆಳೆಸುವಲ್ಲಿ ಉಪಯೋಗಕ್ಕೆ ಬರದ ಕೆಲಸ ಎಂದು ಯಾರೂ ಹೇಳಲಾರರು. ಆದರೆ, ಇಲ್ಲೊಂದು ತೊಡಕೂ ಕೂಡ ಇದೆ ಎನ್ನುವುದನ್ನು ಮರೆತರೆ ಕನ್ನಡವನ್ನು ಇನ್ನೊಂದು ಇಕ್ಕಟ್ಟಿಗೆ ತಳ್ಳಿದಂತೆಯೂ ಆಗಿಬಿಡಬಹುದು. ಇಲ್ಲಿ ಇಂಗ್ಲಿಶ್ ಪದಗಳಿಗೆ ಕನ್ನಡ ಪದಗಳನ್ನು ಕಟ್ಟುವ ಹುಮ್ಮಸ್ಸಿನಲ್ಲಿ ಕನ್ನಡ ಓದುಗರಿಗೇ ಕಲ್ಲಿನ ಅರಳಾಗಿಬಿಡುವ ಸನ್ನಿವೇಶಗಳು ಎದುರಾಗಬಾರದು ತಾನೆ.. ಈ ಎಚ್ಚರ ಇಲ್ಲದಲ್ಲಿ ಸಂಸ್ಕ್ರುತ ಮತ್ತು ಇಂಗ್ಲಿಶ್ ನುಡಿದಂದುಗದಲ್ಲಿ ತೊಡಗಿದವರಿಗೆ ಇನ್ನೊಂದು ಬಗೆಯ ಅಣಕಕ್ಕೂ ಅವಕಾಶವೇ ಮಾಡಿಕೊಟ್ಟಂತಾಗುತ್ತದೆ. ಅಂತವೂ ಇವೆ ಇಲ್ಲಿ;

ಅಬ್ಯೂಸ್-ಕೊಂಡೆ, ಅಡ್ಮಿಶನ್-ಪೂಣ್ಕೆ, ಅಡ್ವೆಂಚರ್-ಕುತ್ತದ ಕೆಲಸ, ಏರೋಪ್ಲೇನ್-ನಡೆಮಾಡ/ಗಾಳಿತೇರು/ಬಾನೋಡ/ಹಾರ‍್ಕೆ/ಪಾರು, ಅಡಾಪ್ಟೆಡ್-ಕೊಳ್ಮಗ/ಕೊಳ್ಮಗಳು, ಅಡ್ವಂಟೇಜ್-ಸಲೆ/ಅಕ್ಕು, ಆಲ್ಬಮ್-ತಿಟ್ಟಕಡತ, ಏನ್ಸಿಯೆಂಟ್-ಕಿಗ್ಗಳ, ಅಂಬಾಸೆಡರ್-ಮಾರಳವಿಗ, ಆರ‍್ಕಿಯಾಲಜಿ-ಪಳಮೆಯರಿಮೆ, ಆರ‍್ಟಿಫಿಶಿಯಲ್-ತನ್ಪರಿಜಲ್ಲದ/ಮಾಳ್ಕೆಯಾದ, ಅಸೋಶಿಯೇಟ್-ಪತ್ತಿಗ/ಅಡಸು, ಅಸಮ್‌ಶನ್-ತೆಗಹು, ಸೆಲ್ಪ್ ಡಿಸೆಪ್ಶನ್-ತನ್ನುಕ್ಕಿವ/ತನ್ತೋಹು, ಸೆಲ್ಪ್ ಇಂಪೋಸ್ಡ್-ತನ್ಪೇರಿಕೆಯ, ಸೆಲ್ಪ್ ಇಂಟರೆಸ್ಟ್-ತನ್ಪಡಪು, ಸೆಲ್ಪಿಶ್-ತನ್ನಲ್ಮೆಯ, ಸೆಲ್ಪ್ ರೆಸ್ಪೆಕ್ಟ್-ತನ್ಮದಿಪು/ತನ್ತಕ್ಕಮೆ, ಸೆಲ್ಪ್ ಸ್ಯಾಕ್ರಿಪಯ್ಸ್-ತನ್ಮದಿಪುಕಳಿತ,

ಹೀಗೆ ತಟ್ಟಂತ ತಿಳಿಯದ ನೂರಾರು ತೊಡಕುಗಳೂ ಈ ಪದನೆರಿಕೆಯಲ್ಲಿವೆ. ಎಲ್ಲಾ ಇಂಗ್ಲಿಶ್ ಪದಗಳಿಗೂ ಕನ್ನಡ ಪದಗಳಿವೆ, ಇರಬೇಕು, ಇಲ್ಲದೆ ಹೋದರೆ ಹೊಸ ಪದಗಳನ್ನು ಹುಟ್ಟುಹಾಕಲೇ ಬೇಕು ಎಂದು ಚಂಡಿ ಹಿಡಿದು ಹೊರಟಾಗ ಇಂತಹ ತೊಡಕುಗಳು ಹೆಚ್ಚಾಗಿ ಬಳಕೆಯ ಕನ್ನಡ ಇನ್ನಶ್ಟು ಕಗ್ಗಂಟಾಗುವ ಸನ್ನಿವೇಶವೇ ಹೆಚ್ಚು. ಆದರೆ, ಸಂಸ್ಕ್ರುತ ಪದಗಳಿಂದಾಗಿ ಕನ್ನಡ ಬರೆಹವು ಇಕ್ಕಟ್ಟಿಗೆ ಸಿಲುಕಿರುವಂತೆ ಇಂಗ್ಲಿಶ್ ಪದಗಳಿಂದಾಗಿಯೂ ಹಾಗೆ ಆಗಕೂಡದೆನ್ನುವ ಸೆಳೆತ ಮತ್ತು ಒತ್ತಡಗಳು ಇದರ ಹಿಂದೆ ಕೆಲಸ ಮಾಡಿದೆ ಎನ್ನುವುದನ್ನೂ ನಾವು ತಿಳಿಯಬೇಕಾಗುತ್ತದೆ. ಯಾಕೆಂದರೆ, ಡಿ.ಎನ್.ಶಂಕರಭಟ್ ಇಂಗ್ಲಿಶ್ ಪದಗಳನ್ನು ಕನ್ನಡ ಪದಗಳನ್ನಾಗಿ ಹೇಗೆ ಬಳಸಬೇಕೆಂಬುದನ್ನು ಹೇಳಿಕೊಟ್ಟವರೇ ಆಗಿದ್ದಾರೆ. ಇದಲ್ಲದೆ ಇಲ್ಲಿನ ಇನ್ನೊಂದು ಬಗೆಯ ತೊಡಕಾಗಿ ಇಲ್ಲಿ ಗ್ರಹಿಸಬಹುದಾದ ಮತ್ತೊಂದು ಸಂಗತಿಯೆಂದರೆ ಹಳೆಗನ್ನಡ ಪದರೂಪಗಳನ್ನು ಯಾಕೆ ಅವಿರುವಂತೆಯೇ ಬಳಸಲಾಗಿದೆ, ಇಲ್ಲವೇ ಆ ಸ್ಟಯ್ಲಿನಲ್ಲಿ ಬಳಸಲಾಗಿದೆ ಅನ್ನುವುದು. ಈಗಾಗಲೇ ಬಳಕೆಗೆ ಬರುವಾಗ ಅವು ಹೊಸರೂಪವನ್ನು ಪಡೆದುಕೊಂಡಿರುವಾಗಲೂ ಅವು ಹಳೆಯ ರೂಪದ ಜಾಡಿಗೆ ಯಾಕೆ ಹೋಗಬೇಕು ಎನ್ನುವುದು. ಪಳಮೆ, ಪೊತ್ತು, ಪಾಳು, ಪಾಳ್ಮನೆ, ಪಾಳ್ವೊಲ, ಮೊದಲಾದ ಪದಗಳನ್ನು ಈ ಕಾರಣವಾಗಿ ಎತ್ತಿ ತೋರಿಸಬಹುದು.

ಕನ್ನಡದ ಇನ್ನೊಬ್ಬ ನುಡಿಯರಿಗರಾದ ಕೆ.ವಿ.ನಾರಾಯಣ ಅವರು ಸಂಸ್ಕ್ರುತ ಪದಗಳಿಗೆ ಬದಲಿಯಾಗಿ ಕನ್ನಡದ್ದೇ ಪದಗಳನ್ನು ಬಳಸುವ ಪದನೆರಿಕೆಯೊಂದನ್ನು ತಯಾರು ಮಾಡಿದ್ದಾರೆ(ಇದಿನ್ನೂ ಅಚ್ಚಾಗಿಲ್ಲ). ಈ ಪದನೆರಿಕೆಯಲ್ಲಿರುವ ಕೆಲವು ಪದಗಳಿವು;

ಅಧಿಕೃತ/ಅಂಗೀಕೃತ-ಒಪ್ಪಿದ, ಅಂತರ್ಗತ-ಒಳಗಿರುವ, ಅಂತಶ್ಯಕ್ತಿ-ಒಳಕಸುವು, ಅಂತಾರಾಷ್ಟ್ರೀಯ-ನಾಡುಗಳ ನಡುವಣ, ಅಂಶ-ಹನಿ, ಅದ್ಯಾದೇಶ-ಮೇಲಪ್ಪಣೆ/ಕಟ್ಟಪ್ಪಣೆ, ಅತ್ಯಾಧುನಿಕ-ಹೊಚ್ಚಹೊಸ, ಅಧಿಕಾರ-ಮೇಲ್ಮೆ, ಅಧೀನ-ಕಯ್ಕೆಳಗಿನ/ಒಳಪಟ್ಟ, ಅಧಕ್ಷ-ಹಿಡಿತವಿಲ್ಲದ/ಸಡಿಲ, ಅಧ್ಯಯನ-ಓದು, ಅಧ್ಯಾಪನ-ಕಲಿಸುವಿಕೆ, ಅನಕ್ಷರತೆ-ಓದುಬರೆಹ ಬಾರದ, ಆಂತರಿಕ ಭಿನ್ನಮತ-ಒಳಗಿನ ಮೇಲಾಟ, ಅನನ್ಯತೆ-ತನ್ನತನ/ಬೇರೆತನ, ಅರ್ಥಪೂರ್ಣ-ಹುರುಳಿರುವ, ಅರಾಜಕತೆ-ಹಿಡಿತವಿಲ್ಲದಿರುವಿಕೆ, ಅರ್ವಾಚೀನ-ಇತ್ತೀಚಿನ, ಅಸಮಧಾನ-ಒಳಗುದಿ, ಅಸಂಗತ-ಹೊಂದದ, ಆಕ್ರಮಣ-ಮೇಲೆಬಿದ್ದು, ಅವಕಾಶವಂಚಿತ-ಅನುವುಸಿಗದ/ಜಾಗಸಿಗದ, ಅಸಮರ್ಥ-ಅಳವಿಲ್ಲದ, ಅನುಬಂಧ-ಸೇರ‍್ಪಡೆ, ಅನುಕರಣ-ನಕಲು, ಅಭಿವೃದ್ಧಿಶೀಲ-ಮುನ್ನಡೆಯಲ್ಲಿರುವ, ಅಲಕ್ಷಿತ-ಕಡೆಗಣನೆಗೊಳಗಾದ, ಮುಕ್ತ ಸಂವಾದ-ತೆರೆದ ಮಾತುಕತೆ, ಕ್ರಮಬಾಹಿರ-ಕಟ್ಟುಮೀರಿದ, ಭವಿಷ್ಯದರ್ಶನ-ಮುಂಗಾಣ್ಕೆ, ಕೇಂದ್ರೀಕೃತ-ಒಗ್ಗೂಡಿದ, ಉದ್ದೇಶ-ಗುರಿ, ದೃಷ್ಟಿಕೋನ-ನೋಡುವ ಬಗೆ/ನೋಟ, ಧನಾತ್ಮಕ-ಇದೆಯೆನ್ನುವ, ದ್ಯೇಯೋದ್ದೇಶಗಳು-ಗುರಿದಾರಿಗಳು, ಪಕ್ಷ-ಬಣ, ಪರಾಮರ್ಶೆ-ಬಗೆದು ನೋಡುವಿಕೆ, ಪರಂಪರಾಗತ-ಹಿಂದಿನಿಂದ, ಪ್ರತಿಷ್ಟೆ-ಹೆಮ್ಮೆ/ಹಮ್ಮು, ನಿರಪರಾಧಿ-ತಪ್ಪು ಮಾಡದವ, ಪಶ್ಚಾತ್ತಾಪ-ಕೊರಗು, ಪ್ರಭುತ್ವ-ಆಳ್ವಿಕೆ, ನಿರ್ಲಕ್ಷಿತ-ಕಡೆಗಣಿತವಾದ, ಪರಿಷ್ಕಾರ-ತಿದ್ದುವಿಕೆ, ನಿಷೇದ-ತಡೆಮಾಡುವುದು, ಯೋಜಿತ ಅಭಿವೃದ್ಧಿ-ಅಮದುಕೊಂಡ ಬೆಳವಣಿಗೆ, ರಾಷ್ಟ್ರ-ನಾಡು, ರಚನಾತ್ಮಕ ಕಾರ್ಯ-ಕಟ್ಟುವ ಕೆಲಸ, ಶೀತಲಸಮರ-ಸದ್ದಿಲ್ಲದ ಜಗಳ, ಶೋಚನೀಯ-ನೋವು ತರುವ, ಸಂವಹನ-ತಿಳಿಸುವಿಕೆ, ಸಂವರ್ಧನೆ-ಬೆಳೆಸುವಿಕೆ, ಶಿಕ್ಷಣ-ಕಲಿಕೆ, ಸಂಕೀರ್ಣ-ಗೋಜಲು, ಸಂಕ್ರಮಣ-ಬೆರೆಯುವ ಹೊತ್ತು, ಸಮಾರೋಪ-ಮುಗಿತಾಯ/ಕೊನೆ, ಸಾಧ್ಯ-ಆಗುವ, ಸ್ವಘೋಷಿತ-ತಾನೇ ಹೇಳಿಕೊಂಡ, ಹಿತಾಸಕ್ತಿ-ಓಲುವೆ, ಸಮರ್ಥಿಸು-ಬೆಂಬಲಿಸು, ಸರ್ವತೋಮುಖ ಅಭಿವೃದ್ಧಿ-ಎಲ್ಲೆಡೆಯೂ ಬೆಳೆಯುವಿಕೆ, ಸ್ವೋಪಜ್ಞ-ತನ್ನತನ/ಬೇರೆತನ, ವ್ಯತ್ಯಯ-ಏರುಪೇರು, ಶ್ರೇಣೀಕೃತ-ಏರುಪೇರಿನ/ಮೇಲುಕೀಳಿರುವ ವೈಶಿಷ್ಟ್ಯ-ಹೆಚ್ಚಳ…

ಕೆ.ವಿ.ನಾರಾಯಣ ಅವರು, ಈ ‘ಸಂಸ್ಕ್ರುತ-ಕನ್ನಡ’ ಪದನೆರಿಕೆಯಲ್ಲಿ ಸರಿಸುಮಾರು ಅಯ್ದೂವರೆ ಸಾವಿರ ಸಂಸ್ಕ್ರುತ ಪದಗಳಿಗೆ, ಬದಲಿಯಾಗಿ ಬಳಸಬಹುದಾದ ಕನ್ನಡ ಪದಗಳನ್ನು, ಮತ್ತು ಅವನ್ನು ಹೇಗೆಲ್ಲಾ ಬಳಸಲು ಅವಕಾಶವಿದೆಯೆಂಬುದನ್ನೂ ತೋರಿಸಿಕೊಟ್ಟಿದ್ದಾರೆ. ಕನ್ನಡ ಬರೆಹದಲ್ಲಿ ಸಂಸ್ಕ್ರುತ ಪದಗಳನ್ನು ಕಡಿಮೆ ಮಾಡಬೇಕೆನ್ನುವ ದಾರಿಯಲ್ಲಿ ಇದೂ ಕೂಡ ಇನ್ನೊಂದು ಪ್ರಯತ್ನ.

ಬದಲಿ ಪದಗಳು ಮಾತ್ರವೇ ನಾವಾಡುವ ನುಡಿಯಲ್ಲಿ ಇರುತ್ತವೆಯೇ?

ಕನ್ನಡ ಬಳಸಲು ಹಿಂಜರಿಯುವವರಿಗೆ ಯಾವಾಗಲೂ ಕಾಡುವ ಒಂದು ಅನುಮಾನವೆಂದರೆ ತಮ್ಮ ತಿಳಿವಿಗೆ ಬೇಕಾಗುವಶ್ಟು ಪದಗಳು ಕನ್ನಡದಲ್ಲಿ ಇಲ್ಲ ಎನ್ನುವುದು. ಹೀಗೆ ಅಂದುಕೊಳ್ಳುವಾಗ ಅವರು ನಂಬಿರುವುದು ಲೋಕದ ಅರಿವಿನ ನುಡಿಯೆಂದರೆ ಅದು ಇಂಗ್ಲಿಶ್ ಮಾತ್ರ ಎಂದು. ಇಂಗ್ಲಿಶಿನಲ್ಲೆ ಕಲಿತು, ಇಂಗ್ಲಿಶನ್ನೆ ಬರೆದು ವ್ಯವಹರಿಸುವ ಇವರಿಗೆ ಕನ್ನಡ ಬರೆವಣಿಗೆಯ ಚಳಕಗಳನ್ನು ಕಲಿಸಿದ್ದೂ ಇಲ್ಲ. ಕಲಿಯುವಾಗ ಇಂಗ್ಲಿಶಿನ ಮೇಲೆ ಇದ್ದಶ್ಟು ಸೆಳೆತ ಮತ್ತು ಒತ್ತಾಯಗಳೆರಡೂ ಕನ್ನಡದ ಮೇಲೆ ಇರಲಿಲ್ಲ. ಹೀಗಾಗಿ ತಾವು ಕಲಿಯುವ ಮಟ್ಟಿಗಿನ ಕನ್ನಡದಲ್ಲಿ ‘ಕನ್ನಡವೇ ಇದೆಯೇ’ ಎನ್ನುವುದನ್ನು ತಿಳಿಯದೆ ಕನ್ನಡದ ದಾರಿಯಲ್ಲಿ ಸಂಸ್ಕ್ರುತವನ್ನೂ, ಸಂಸ್ಕ್ರುತದ ದಾರಿಯಿಡಿದು ಕನ್ನಡವನ್ನೂ ಓದಿದವರಾಗಿದ್ದಾರೆ. ‘ಸ್ವರಗಳು ಎಂದರೇನು? ವ್ಯಂಜನಗಳು ಎಂದರೇನು? ‘ಹ್ರಸ್ವಸ್ವರ ಎಂದರೇನು?, ಧೀರ್ಘಸ್ವರ ಎಂದರೇನು? ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಎನ್ನುವ ಕೇಳ್ವಿಗಳಿಗೆ ಕನ್ನಡದಲ್ಲಿ ಬಣ್ಣಿಸಿದ್ದನ್ನೇ ಯಾಕೆ ‘ಉತ್ತರ’ಗಳು ಎಂದು ತಿಳಿಯಬೇಕಾಯಿತು, ಕಲಿಯಬೇಕಾಯಿತು ಎನ್ನುವುದು ಇಂತವರಿಗೆ ಈಗಲೂ ತಿಳಿಯಲು ಆಗಿಲ್ಲ. ಕನ್ನಡ ಬರೆಯಲೆಂದು ಕಲಿಯಬೇಕಾದ ಬರಿಗೆಗಳನ್ನು ‘ಕನ್ನಡ ಬರಿಗೆಗಳ ಗುಂಪು’ ಎಂದು ಕರೆಯದೆ ‘ಅಕ್ಷರ ಮಾಲೆ, ವರ್ಣಮಾಲೆ’ ಎಂದು ಯಾಕೆ ಹೇಳಿಕೊಟ್ಟಿದ್ದಾರೆ ಎಂದು ಕೇಳಿಕೊಳ್ಳುವ ಪ್ರಸಂಗವೇ ಒದಗದಂತೆ ನಮ್ಮ ಕಲಿಕೆಯಿದೆ.

ನಾವು ಕಲಿಕೆಯ ಈ ದಾರಿಯಲ್ಲಿ ಬಿದ್ದವರಾದ್ದರಿಂದ ಕನ್ನಡ ಕಲಿಕೆ ಎಂದರೇನು? ಕನ್ನಡದ ಸೊಲ್ಲು ಎಂದರೇನು? ಸೊಲ್ಲರಿಮೆ ಎಂದರೇನು? ಕನ್ನಡ ಬಳಕೆ ಎಂದರೇನು? ಕನ್ನಡ ಚಳಕ ಎಂದರೇನು? ಅನ್ನುವ ಕೇಳ್ವಿಗಳನ್ನು ಯಾವ ಮಕ್ಕಳೂ ಎದುರಾಗುವ ಪ್ರಸಂಗ ಕಲಿಕೆಯ ಸನ್ನಿವೇಶದಲ್ಲಿ ಬರುವುದೇ ಇಲ್ಲ. ಇದ್ದರೂ ಈ ಕೇಳ್ವಿಗಳಿಗಿರುವ ಮರುನುಡಿಯೆಲ್ಲವೂ ನುಡಿಯ ಕಲಿಕೆಯ ಚಹರೆಗಳನ್ನು ಒಳಗೊಂಡಿರದೆ, ಸಾಹಿತ್ಯ, ಸಂಸ್ಕ್ರುತಿ, ಪರಂಪರೆ ಅಂತಾ ಬೇರೆಯೇ ದಿಕ್ಕುಗಳಿಗೆ ಚಾಚಿಕೊಂಡಿದೆ. ಹೀಗಾಗಿ ಕನ್ನಡ ಬದುಕುಗಳ ಸನ್ನಿವೇಶದಲ್ಲಿ ಮಯ್ಮೇಲೆ ಹಾಕಿಕೊಂಡಿರುವ ‘ಸಂಸ್ಕ್ರುತ ಪದಗಳು ಮತ್ತು ಇಂಗ್ಲಿಶ್ ಪದಗಳು’ ಇವೆರಡಕ್ಕೂ ಬದಲಿಯಾದ ಕನ್ನಡ ಪದಗಳು ಇಲ್ಲ, ಕನ್ನಡದಲ್ಲಿ ಆ ಕಸುವು ಇಲ್ಲ, ಎನ್ನುವ ನಿರ್ಣಯಕ್ಕೆ ತಲುಪುವಂತೆ ಕಲಿಕೆಗೆ ಎದುರಾಗುವ ಎಲ್ಲರೂ ದಬ್ಬಿಸಿಕೊಳ್ಳುವ ಸನ್ನಿವೇಶವೇ ದೊಡ್ಡದಾಗುತ್ತಿದೆ. ಹೀಗಾಗಿ ನಮಗೆ ಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳಲು ಬೇಕಾದ ತಿಳಿವಿಗೆ ಕನ್ನಡವು ನ್ಯಾಯ ಒದಗಿಸದ ದಾರಿಯೆಂದು ತಿಳಿದು ಇಂಗ್ಲಿಶಿನ ಬೆನ್ನು ಹತ್ತುವ ಕಾಯಕಕ್ಕೆ ದುಂಬಾಲು ಬೀಳುವಂತಾಗಿದೆಯೇ?

ಉಳ್ಳವರು ನಡೆಸುವ ಶಾಲಾ ಕಾಲೇಜುಗಳು, ಅಟಾನಮಸ್ ಯೂನಿವರ್ಸಿಟಿಗಳ ಬೆಳವಣಿಗೆಯಲ್ಲಿ ಮಾತ್ರವೇ ಅಲ್ಲದೆ, ಕನ್ನಡ ಶಾಲೆಗಳನ್ನು ಸರಕಾರವು ಮುಚ್ಚುತ್ತಿರುವುದರ ಕಾರಣಗಳಿಂದಲೂ ಇದನ್ನು ಗ್ರಹಿಸಬೇಕು. ಅಂದರೆ, ಈ ಎಲ್ಲಾ ಒತ್ತಾಯಗಳೂ ಕನ್ನಡವನ್ನು ಕೊರಳಿಡಿದು ದಬ್ಬುತ್ತಿವೆ. ಹಾಗೆ ಕನ್ನಡ ಹೊರಗೆ ಬೀಳದಂತೆ ತಡೆದು ಉಸಿರು ತುಂಬುತ್ತಿರುವ ಕೆಲಸದಂತೆಯೂ, ಇಂತಹ ಕೆಲಸವನ್ನೇ ಅಣಕಿಸುವಂತೆಯೂ ಕನ್ನಡ ನುಡಿಯರಿಗರ ಇಂತಹ ಪ್ರಯತ್ನಗಳನ್ನು ನೋಡಲಾಗುತ್ತಿದೆ. ಆದರೆ ಇದರ ಹಿಂದಿರುವ ಒತ್ತಾಯದ ಚಹರೆಗಳಿಗೆ ಸಾವಿರ ಮೋರೆಗಳಿವೆ, ಆ ಮೋರೆಗಳಲ್ಲಿ ಕೋರೆಗಳೂ ಇವೆ. ಅದ್ದರಿಂದಾಗಿ, ಕನ್ನಡದ ಮೂಲಕ ಸಂಸ್ಕ್ರುತವನ್ನು ಮಾತ್ರವೇ, ಸಂಸ್ಕ್ರುತ ನುಡಿಕಲಿಕೆಯ ಅರಿಮೆಯನ್ನು ಮಾತ್ರವೇ ಕನ್ನಡ ನುಡಿ ಕಲಿಕೆಯ ನೆಪದಲ್ಲಿ ‘ಇವತ್ತಿಗೂ ಕಲಿಸಲಾಗುತ್ತಿದೆ’ ಎನ್ನುವುದನ್ನು ಕನ್ನಡ ಬದುಕುಗಳಿಗೆ ತಿಳಿಯಪಡಿಸುತ್ತಲೇ ಈ ಕುರಿತು ಕೆಲಸ ಮಾಡುವವರು ಸವಾಲನ್ನು ಎದುರಿಸಲು ಹೊರಟಿದ್ದಾರೆ. ಕನ್ನಡ ನುಡಿಯರಿಮೆಯ ದಾರಿಯಲ್ಲಿ ಬದಲಿ ಪದಗಳನ್ನು ಹುಡುಕುತ್ತಾ, ಕಟ್ಟುತ್ತ, ಜನಬಳಕೆಯಲ್ಲಿ ಇರುವ ಪದಗಳನ್ನು ಹೊರಕ್ಕೆ ಎಳೆಯುತ್ತಲೂ ಮುನ್ನಡೆಯಬೇಕಾದ ಸವಾಲು ಇದು.

ಕನ್ನಡವನ್ನು ನಿಬಾಯಿಸುವ ಹಕ್ಕು ಕನ್ನಡ ನುಡಿಯಾಡುಗರ ಕಯ್ಯಲ್ಲಿದೆಯೇ?

ಹೊಸಕಾಲದ ಇಂತಹ ಬರೆಹಗಳನ್ನು ಆಗುಮಾಡಿರುವ ಹಿರಿಯರ ಗುಂಪು, ಅದರ ಜಾಡನ್ನು ನಂಬಿ ಈಗ ಬರೆಯುತ್ತಿರುವ ಬಲುದೊಡ್ಡ ಗುಂಪು ಕನ್ನಡದಲ್ಲಿ ಇದೆ. ಇದನ್ನೇ ಶಾಲೆ ಕಾಲೇಜುಗಳಲ್ಲಿ ನಕಲು ಮಾಡುತ್ತಿರುವ ಸಾವಿರಾರು ಮಂದಿ ಕಲಿಸುವವರು ಇದ್ದಾರೆ. ಇಂತಹ ಬದಲಾವಣೆಯನ್ನು ಬಯಸಿ ನಡೆಸಬಲ್ಲರೇ? ಅಂತಾ ಕೇಳಿಕೊಂಡರೇ ದಿಗಿಲಾಗುತ್ತದೆ. ಹೀಗೆ ಬರೆದವರು, ಬರೆಯುತ್ತಿರುವವರು ಮತ್ತು ಅದನ್ನು ನಕಲು ಮಾಡುತ್ತಿರುವವರು ಇಂತಹ ನುಡಿದಂದುಗಕ್ಕೆ ಬೇಕೆಂದೇ ಬಿದ್ದವರೇನೂ ಅಲ್ಲ. ಕನ್ನಡನುಡಿ ಮತ್ತು ಕನ್ನಡ ತಿಳಿವಿನ ಕಲಿಕೆಯ ದಾರಿಗಳು ಕಳೆದ ನೂರಕ್ಕೂ ಹೆಚ್ಚು ವರುಶಗಳಿಂದ ಈ ನುಡಿದಂದುಗದೊಳಗೆ ಬೀಳುವಂತೆ ಮಾಡಿವೆ. ಕಲಿಕೆಗೆ ಎದುರಾದವರೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಈ ನುಡಿದಂದುಗದ ಸರಪಳಿಯಿಂದ ಬಿಗಿಯಲ್ಪಟ್ಟಿದ್ದಾರೆ. ಕನ್ನಡದ್ದೇ ತಿಳಿವಿನ ಮೂಲಕ ಕನ್ನಡ ಬದುಕಿನ ಗುರುತುಗಳನ್ನು ಆಗುಮಾಡಿಕೊಳ್ಳಲಾಗದಂತೆ, ಅಂತಹ ಹೋರಾಟಗಳು ಒಂದು ಮಟ್ಟಕ್ಕೆ ತಲುಪುವ ಹೊತ್ತಿಗೆ ಮುರಿದುಬೀಳುವಂತೆ, ಅವುಗಳು ಹೊರಟ ಗುರಿಯೇ ಅವಕ್ಕೆ ಮುಳುವಾಗುವಂತೆ ಈ ನುಡಿದಂದುಗವು ಕನ್ನಡ ಬದುಕುಗಳನ್ನು ಹಿಡಿದಿಟ್ಟುಕೊಂಡಿದೆ. ಕನ್ನಡದೊಳಗಿನ ಈ ನುಡಿದಂದುಗದ ಅರಿವಿಲ್ಲದೆ ನಡೆದಿರುವ, ನಡೆಯುತ್ತಿರುವ ನಾಡು-ನುಡಿಯ ಹೋರಾಟಗಳು, ಕೀಳುಗಳೆಯಲ್ಪಟ್ಟ ಜಾತಿಗಳ ಹೋರಾಟಗಳು, ರಯ್ತ ಹೋರಾಟಗಳು, ಹೆಂಗಸರ ಹೋರಾಟಗಳು, ನಮ್ಮ ಸುತ್ತಮುತ್ತಲನ್ನು ಉಳಿಸಲೆಂದು ಮಾಡಿದ ಹೋರಾಟಗಳು, ಅಂಚಿಗೆ ನೂಕಲ್ಪಟ್ಟವರ ಹೋರಾಟಗಳು ಯಾಕೆಂದು ಅರಿವಿಗೆ ಬರದಂತೆ ಸುಸ್ತು ಹೊಡೆದಿವೆ. ಈ ಯಾವ ಹೋರಾಟಗಳೂ ತಮ್ಮ ಗುರಿಯನ್ನು ಆಗುಮಾಡಿಕೊಂಡು ನಿಂತು ಹೋಗಿವೆ ಎಂದು ಯಾರೂ ಹೇಳಲಾರರು. ಈ ಎಲ್ಲಾ ಬಗೆಯ ಸಾಮಾಜಿಕ ಬದುಕಿನ ಹೋರಾಟಗಳೂ ತಮ್ಮ ಹೋರಾಟದ ಗುರಿಯನ್ನು ಅದರೊಳಗೆ ಪಾಲ್ಗೊಳ್ಳಬೇಕಾದವರನ್ನೇ ಮುಟ್ಟಲಾಗದೆ ಬಿದ್ದಿವೆ. ಸಾಮಾಜಿಕ ಬದುಕಿನಲ್ಲಿ ತಮಗೇನು ಬೇಕಾಗಿದೆ? ಯಾಕೆ ಬೇಕಾಗಿದೆ? ಹೇಗೆ ಬೇಕಾಗಿದೆ? ಬೇಕಾದುದನ್ನು ಸಿಗದಂತೆ ತಡೆದಿರುವುದು ಯಾವುದು? ಅದರ ಚಹರೆಗಳೇನು? ನಮ್ಮ ನಡುವೆಯೇ ಅದು ಬೆಳೆದದ್ದು ಹೇಗೆ? ಅಂತಹ ನಡೆ-ನುಡಿಗಳು ಯಾಕೆ ಬೆಳೆದವು? ಅದು ಹೇಗೆ ಮುಂದುವರೆದಿದೆ? ಇದರಿಂದ ಬಿಡುಗಡೆ ಆಗುವುದೆಂತು? ಅಂತಹ ಬಿಡುಗಡೆಗೆ ಬೇಕಾದ ಹೊರಾಟದ ನಡೆ-ನುಡಿ ಯಾವುದಾಗಿರಬೇಕು? ಹೇಗೆ ನಡೆಯಬೇಕು? ಎನ್ನುವ ಕೇಳ್ವಿಗಳನ್ನು ಕನ್ನಡ ಬದುಕುಗಳು ಮಂಡಿಸಿವೆ, ಎದುರಾಗಿವೆ ದಿಟ. ಆದರೆ, ಅಂತಹ ತಿಳಿವೆಲ್ಲವೂ ಈ ಬಗೆಯ ನುಡಿದಂದುಗಕ್ಕೆ ಬಿದ್ದು ನಡೆಯಬೇಕಾದ ದಾರಿಗಳಲ್ಲಿ ಮೂಡಿರುವ ಒಡಕೇ ದೊಡ್ಡದಾಗಿ ಕಾಣುತ್ತಿದೆ.

ಇನ್ನೊಂದು ಸಂಗತಿಯೆಂದರೆ; ಇಂತಹ ಹೋರಾಟಗಳಲ್ಲಿ ಪಾಲ್ಗೊಂಡವರ ನಡುವೆ ಮೇಲಾಟ ಕೀಳಾಟಗಳು ನಡೆದಿರುವುದು ಅವರ ಸಾಮಾಜಿಕ ಬಯಕೆ ಮತ್ತು ಗುರಿಗಳ ಬೇರೆತನಗಳಿಂದ ಅಲ್ಲ. ಅವರಿಗಿರುವ ಕಾಳಜಿಗಳಿಂದಲಂತೂ ಅಲ್ಲವೇ ಅಲ್ಲ. ಒಬ್ಬರಿಗೆ ಇನ್ನೊಬ್ಬರನ್ನು ಮುಟ್ಟಿಸಲಾಗದ ಈ ನುಡಿದಂದುಗವೇ ಅವರನ್ನು ಒಬ್ಬರಿಂದ ಇನ್ನೊಬ್ಬರನ್ನು ದೂರ ಮಾಡಿದೆ ಅನಿಸುತ್ತದೆ. ಒಟ್ಟಾಗಬೇಕಾದವರನ್ನು ಒಡೆಯುವುದು ಹೇಗೆಂಬ ಚಳಕಗಳೆಲ್ಲವೂ ಈ ನುಡಿದಂದುಗದೊಳಗೇ ಅಡಗಿವೆ. ಈ ನುಡಿದಂದುಗದ ಹಾವಸೆಯ ಮೇಲೆ ಹೆಜ್ಜೆ ಇರಿಸುವ ಎಲ್ಲ ಸಾಮಾಜಿಕ ಹೋರಾಟಗಳೂ ಜಾರಿ ಬೀಳುತ್ತವೆ. ಬೀಳಲೇಬೇಕಾಗುತ್ತದೆ. ‘ಇಲ್ಲ, ಇದು ಹಾಗೆ ಅಲ್ಲ’ ಎಂದು ನಂಬಿಸಲು ಹೊರಡುವ ಅಳವುಗಳೆಲ್ಲವೂ ಈ ನುಡಿದಂದುಗವು ಆಗುಮಾಡಿರುವ ಒಡಕುಗಳೇ ಆಗಿರುತ್ತವೆ. ಹೀಗಾಗಿ ಈಗಾಗಲೇ ಈ ನುಡಿದಂದುಗವನ್ನೇ ದಿಟವೆಂದು ನೆಮ್ಮಿ ಬದುಕುತ್ತಿರುವ ಬಲುದೊಡ್ಡ ಸಮುದಾಯವು ಹೇಗೆ ಬಿಡಿಸಿಕೊಳ್ಳಬಲ್ಲುದೆಂಬುದು ಸುಳುವಾದ ದಾರಿಯಲ್ಲ.

ಬದಲಾವಣೆಗೆ ಸಜ್ಜಾಗುವುದಾದರೆ, ಈವರೆಗೆ ತಮ್ಮ ಆಲೋಚನೆಗಳನ್ನು ಕಟ್ಟಿದ ದೊಡ್ಡಸ್ತಿಕೆಯನ್ನು ಈ ನುಡಿದಂದುಗದೊಳಗೆ ತೊಡಗಿರುವವರು ಬಿಟ್ಟುಕೊಡಬೇಕಾಗುತ್ತದೆ. ತಿಳಿವನ್ನು ಕಟ್ಟಿಕೊಡಲು ಬಳಸಿಕೊಂಡ ಇಂತಹ ದೊಡ್ಡಸ್ತಿಕೆಯ ನುಡಿಗಟ್ಟುಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಅಂತಹ ನುಡಿಗಟ್ಟುಗಳನ್ನು ಬಳಸಿ ದಾರಿ ತಪ್ಪುವಂತೆ ಮಾಡಿರುವ ಹಿರಿಯರನ್ನು ಕನ್ನಡ ಸಮಾಜದ ಕಟಕಟೆಯಲ್ಲಿ ನಿಲ್ಲಿಸಬೇಕಾಗುತ್ತದೆ. ತಾವೂ ನಿಲ್ಲಬೇಕಾಗುತ್ತದೆ. ಯಾವ ಬದುಕುಗಳ ಬಗೆಗೆ ಚಿಂತನೆಯನ್ನು ನಡೆಸಿ, ಅಂತಹ ಬದುಕುಗಳು ನೇರ್ಪುಗೊಳ್ಳಲೆಂದು ತಮ್ಮ ಬರೆಹಗಳ ಮೂಲಕ ದುಡಿಯುತ್ತಿದ್ದಾರೋ ಆ ಬದುಕುಗಳನ್ನು ಈವರೆಗೂ ಯಾಕೆ ಮುಟ್ಟಲಾಗಲಿಲ್ಲ ಅಂತಲೂ ಕೇಳಬೇಕಾಗುತ್ತದೆ. ಕೇಳಿಕೊಳ್ಳಲೂ ಬೇಕಾಗುತ್ತದೆ. ಇದೆಲ್ಲವನ್ನೂ ಎದುರಾಗುವ ಹೊಸದಾರಿಗೆ ಬೇಕಾದ ನುಡಿಯ ಪರಿಕರಗಳನ್ನು ಹೊಂದಿಸಿಕೊಳ್ಳಬೇಕಾಗುವ ಸವಾಲುಗಳೂ ದೊಡ್ಡದಾಗಿವೆ. ಅದಕ್ಕೆ ಬೇಕಾದ ನುಡಿಬಳಕೆಯ ಹಕ್ಕನ್ನು ‘ಇದು ನನ್ನದು, ನಮ್ಮದು’ ಎಂದು ಕಂಡುಕೊಳ್ಳುವ ದರ್ದಿಗೆ ಮೊದಲು ಬೀಳಬೇಕಾಗುತ್ತದೆ.

ಕನ್ನಡಬಳಕೆಯ ಹಕ್ಕನ್ನು ಪಡಕೊಳ್ಳುವುದು ಹೇಗೆ?

ಕಸಿದುಕೊಂಡವರು ಯಾರು ಎನ್ನುವುದನ್ನು ತಿಳಿದರೆ ಪಡಕೊಳ್ಳುವುದು ಹೇಗೆ ಎನ್ನುವುದು ಸುಳುವಾಗುತ್ತದೆ ಎಂದು ಯಾರಾದರೂ ಹೇಳಬಹುದಾದ ಸಂಗತಿ. ಅದರೆ, ಹೊಸಕಾಲದಲ್ಲಿ ಬೆಳೆಸಿಕೊಂಡಿರುವ ಕನ್ನಡ ಸನ್ನಿವೇಶದ ಇಬ್ಬಂದಿತನಗಳು ಇನ್ನಾವುದೋ ಬಂದು ಮೇಲೆ ಬಿದ್ದಿದ್ದರಿಂದಾಗಿಯೇ ಹುಟ್ಟಿಕೊಂಡವುಗಳಲ್ಲ. ಇಂತಹ ಇಬ್ಬಂದಿತನಗಳು ಕೆಲವಕ್ಕೆ ಕಾರಣಗಳು ಸಾವಿರಾರು ವರುಶಗಳ ಹಿಂದೆ ಕನ್ನಡ ನುಡಿಬೆಳವಣಿಗೆಯನ್ನು ನೋಡಿದ ನೋಟಗಳಲ್ಲಿವೆ. ಇನ್ನಲವಕ್ಕೆ ಕಾರಣಗಳು ಕನ್ನಡದ ಕಸುವನ್ನು ಹೆಚ್ಚಿಸಲೆಂದೇ ಹೊರಗಿನಿಂದ ತಂದುಕೊಂಡ ಹೊಸಕಾಲದ ತಿಳಿವಿನ ದಾರಿಗಳಲ್ಲಿವೆ. ಮತ್ತಲವು ಇಲ್ಲೇ ಇರುವ ‘ಹಲವು ಕನ್ನಡ ಬದುಕುಗಳಲ್ಲ, ಒಂದೇ ಕನ್ನಡ ಬದುಕು’ ಎಂದು ಮೇಲೆಳೆದುಕೊಂಡಿರುವ ಒತ್ತಾಯಗಳ ಮೂಲಕವೂ ಬೆಳೆದಿವೆ. ಕನ್ನಡ ಬದುಕುಗಳು ಅರಳುವಂತೆ ಕನ್ನಡವನ್ನು ಆಗುಮಾಡಿಕೊಳ್ಳದ ಆಳ್ವಿಕೆಗಳ ಹೊಣೆಗೇಡಿತನಗಳಿಂದ ಬೆಳೆದ ಇಬ್ಬಂದಿತನಗಳಿವೆ. ಜಾತಿ, ಕುಲಗಳ ಹೆಸರಲ್ಲಿ ಗುಂಪುಗೊಂಡ ರಾಜಕೀಯ ಬಲಗಳಲ್ಲಿ, ನಂಬಿದ ದಯ್ವ, ನಡೆದುಕೊಳ್ಳುವ ನಡಾವಳಿಗಳ ಮೂಲಕ ಮೇಲುಗಯ್ ಮಾಡಿಕೊಂಡ ಬಗೆಗಳಲ್ಲಿಯೂ ಬೆಳೆದಿದೆ ಇದು. ಕನ್ನಡವನ್ನು ಕನ್ನಡಿಗರ ಕಯ್ಯಲ್ಲಿ ‘ಇರದಂತೆ ಮಾಡುತ್ತಿರುವುದು ಇದು’ ಅಂತಾ ಯಾವುದನ್ನೇ ಗುರಿಮಾಡಿ ನಿಲ್ಲಿಸಿಕೊಂಡರೂ ‘ಅದಲ್ಲ, ಅದು ಮಾತ್ರವೇ ಅಲ್ಲ’ ಅನ್ನುವ ಅರಿವೇ ನಮ್ಮನ್ನು ಸುಮ್ಮನಿರುವಂತೆ ಮಾಡುತ್ತದೆ. ಯಾವುದನ್ನು ಬೇಡವೆಂದು ಹೊರಡುತ್ತೇವೆಯೋ ಅದೇ ಕನ್ನಡವನ್ನು ಬೆಳೆಸಿದಂತೆಯೂ ಕಾಣುತ್ತದೆ. ಅದರೊಂದಿಗೇ ನಮ್ಮನ್ನು ನಿಲ್ಲುವಂತೆ ಮಾಡುವ ಹಲವು ಸಂಗತಿಗಳೂ ಇರುತ್ತವೆ, ಇಲ್ಲವಾದರೆ ಹುಟ್ಟುತ್ತವೆ, ಹುಟ್ಟಿಸಿಕೊಳ್ಳುತ್ತೇವೆ ಅಲ್ಲಿ. ಹಾಗೆ ಹುಟ್ಟಿಸಿಕೊಂಡದ್ದನ್ನು ದಿಟವಲ್ಲವೆಂದೂ ನಿಕ್ಕಿಯಾಗಿ ಹೇಳಲು ಬರದಂತ ಸನ್ನಿವೇಶವೇ ನಮ್ಮದಾಗಿಬಿಡುತ್ತದೆ, ಕನ್ನಡಿಗರದಾಗಿಬಿಟ್ಟಿದೆ. ಆದ್ದರಿಂದಾಗಿ ನಾವು ಎದುರುಗೊಳ್ಳಬೇಕಾದ ಗುರಿಯು ನಮ್ಮ ಹೊರಗಿನದಲ್ಲ. ನಮ್ಮ ಒಳಗೇ, ಕನ್ನಡದ ಒಳಗೇ ಬಂದು ಬೆಳೆದಿರುವ ಹೊರಗಿನದು. ನಮ್ಮದು ಎನ್ನುವಂತೆಯೇ ಆಗಿರುವ, ನಮ್ಮೊಂದಿಗೇ, ನಮ್ಮೊಳಗೇ ಬದುಕಿರುವ ಹೊರಗಿನದು ಅದು. ಅದನ್ನು, ಈ ಮೊದಲಲ್ಲಿ ಎತ್ತಿ ತೋರಿಸಿಕೊಡಲೆಂದು ನೀಡಿರುವ ಎತ್ತುಗೆಗಳೇ ಸೂಚಿಸುತ್ತಿವೆ.

ಹೀಗಿರುವಾಗಲೂ ಹಕ್ಕನ್ನು ಪಡೆದುಕೊಳ್ಳುವ ಬಗೆ ಹೇಗೆ ಎನ್ನುವ ಕೇಳ್ವಿಗೆ ಬರೋಣ. ‘ಕನ್ನಡ ಬರಹವನ್ನು ಸರಿಪಡಿಸೋಣ’ ಎನ್ನುವ ಗುರಿಯತ್ತ ಕರೆದವರು ಡಿ.ಎನ್.ಶಂಕರಭಟ್. ಕನ್ನಡವನ್ನು ‘ಓದಲು ಬರೆಯಲು ಕಲಿತರೆ ಮಾತ್ರ ಸಾಲದು, ಆಮೇಲಿನ ತಮ್ಮ ಜೀವನದಲ್ಲಿ ಈ ಕಲಿಕೆಯ ಮೂಲಕ ಎಂತಹ ಪ್ರಯೋಜನಗಳನ್ನೆಲ್ಲ ಪಡೆಯಲು ಸಾದ್ಯ ಎಂಬುದನ್ನು ಎಲ್ಲಾ ಕನ್ನಡಿಗರೂ ತಿಳಿದುಕೊಳ್ಳಬೇಕು ಮತ್ತು ಅಂತಹ ಪ್ರಯೋಜನಗಳನ್ನು ಅವರು ದಿನನಿತ್ಯವೂ ಪಡೆಯುವಂತಾಗಬೇಕು’ ಎನ್ನುವ ನಿಲುವಿನಿಂದ ಈ ಕೆಲಸದಲ್ಲಿ ತೊಡಗಿದ್ದಾರೆ. ಅವರು, ಇವತ್ತಿನ ಕನ್ನಡ ಬರೆಹದಲ್ಲಿರುವ ತೊಡಕುಗಳನ್ನು ಹೀಗೆ ಗುರುತಿಸಿ ಹೇಳಿದ್ದಾರೆ;

ಇರುವ ಸಾಮಾಜಿಕ ತೊಡಕುಗಳು ಮಾತ್ರವಲ್ಲದೆ, ಇವತ್ತು ನಾವು ಬಳಸುತ್ತಿರುವ ಕನ್ನಡ ಬರಹದ ಸ್ವರೂಪವೂ ಕೆಳವರ್ಗದ ಜನರನ್ನು ಬರಹದ ಕಲಿಕೆಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜಟಿಲವಾಗುತ್ತಾ ಹೋಗುತ್ತಿದೆ. ಬೇಕಿದ್ದರೂ ಬೇಡದಿದ್ದರೂ ಕನ್ನಡ ಬರಹಗಳಲ್ಲಿ ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುವಂತಹ ಕೆಟ್ಟ ಚಾಳಿ ನಮ್ಮ ಬರಹಗಾರರಲ್ಲಿ ಕಾಣಿಸುತ್ತಿದೆ. ಇದಲ್ಲದೆ, ಈ ಪದಗಳನ್ನು ಆದಶ್ಟು ಮಟ್ಟಿಗೆ ಸಂಸ್ಕ್ರುತದಲ್ಲಿರುವ ಹಾಗೆಯೇ ಉಳಿಸಿಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಸಂಸ್ಕ್ರುತದ ಪದಕೋಶದಲ್ಲಿರುವ ಪದಗಳನ್ನು ಕನ್ನಡದಲ್ಲಿ ಬಳಸಿದರೆ ಸಾಕು ಕನ್ನಡದವಾಗಿ ಬಿಡುತ್ತವೆ ಎಂಬ ಅನಿಸಿಕೆಯಿದೆ. ಹೊಸ ಪದಗಳನ್ನು ಉಂಟುಮಾಡಬೇಕಾದಗಲೂ ಕನ್ನಡದ ಬರಹಗಾರರು ಸಂಸ್ಕ್ರುತದ ಮೊರೆ ಹೋಗುತ್ತಾರೆ. ತಮಗೆ ಬೇಕಾಗುವಂತಹ ಪದಗಳು ಸಮಸ್ಕ್ರುತದಲ್ಲಿ ಇಲ್ಲದಿದ್ದರೂ, ಇವರು ಅಂತಹವನ್ನು ಅದರಲ್ಲಿ ಉಂಟುಮಾಡಿ ಕನ್ನಡದಲ್ಲಿ ಬಳಸುತ್ತಾರೆ. ಕಲಿಕೆಯ ಕುರಿತಾದ ಪುಸ್ತಕಗಳನ್ನು ಬರೆಯುವ ಕನ್ನಡ ಬರಹಗಾರರು ಹೆಚ್ಚು ಹೆಚ್ಚು ಸಂಸ್ಕ್ರುತ ಪದಗಳನ್ನು ಬಳಸುತ್ತಿದ್ದಾರೆ. ಕನ್ನಡ ಬರಹ ಎಲ್ಲರ ಸೊತ್ತಾಗುವಂತೆ ಮಾಡಲು ಅವರು ಮುಂದಿಟ್ಟಿರುವ ‘ಹೊಸ ಬರಹ’ದ ಸಲಹೆಗಳು ಹೀಗಿವೆ; ಜನರಿಗೆ ತಿಳುವಳಿಕೆಯನ್ನು ಕೊಡುವಂತಹ ಬರಹಗಳಲ್ಲಿ ಬಳಕೆಯಾಗುವ ಎಲ್ಲರ ಕನ್ನಡ ಆದಶ್ಟು ಮಟ್ಟಿಗೆ ಅವರ ಆಡುನುಡಿಗೆ ಹತ್ತಿರವಿರಬೇಕು. ಆಡುನುಡಿಗೆ ಹತ್ತಿರವಾಗಬೇಕಾದರೆ ಮಹಾಪ್ರಾಣಗಳನ್ನು ಬಿಡಬೇಕು. ಉಚ್ಚಾರಣೆಯಲ್ಲಿ ನೂರಕ್ಕೆ ತೊಂಬತ್ತಯ್ದರಶ್ಟು ‘ಮಹಾಪ್ರಾಣ’ಗಳೂ ‘ಅಲ್ಪಪ್ರಾಣ’ಗಳೇ ಆಗುವುದರಿಂದ ‘ಮಹಾಪ್ರಾಣ’ಗಳನ್ನು ಉಚ್ಚರಿಸುವಂತೆಯೇ ಬರೆಯಬೇಕು. ಆಗ ಕನ್ನಡ ಬರವಣಿಗೆಗೆ ಬೇಕಾಗಿರುವುದು ೩೧ ಬರಿಗೆಗಳು ಮಾತ್ರ. ೧೭ ಬರಿಗೆಗಳನ್ನು ಕಯ್ಬಿಡಬೇಕು. ಕನ್ನಡ ಪದಗಳ ಹಾಗೆ, ಇಂಗ್ಲಿಶ್ ಮತ್ತು ಹಿಂದಿಯಿಂದ ಬಂದ ಪದಗಳನ್ನು ಬರೆಯುವಂತೆಯೇ ಸಂಸ್ಕ್ರುತದಿಂದ ತಂದುಕೊಂಡಿರುವ ಪದಗಳನ್ನೂ ಬರೆಯಬೇಕು. ಕನ್ನಡ ಬರಹವನ್ನು ಕಲಿಯಲು ಸುಳುವಾಗುವಂತೆ ಹೆಚ್ಚು ಹೆಚ್ಚು ಕನ್ನಡದವೇ ಆದ ಪದಗಳನ್ನು ಬಳಸತೊಡಗಬೇಕು.

ಬರಹವನ್ನು ಯಾರಾದರೂ ಬರಹಗಾರರು ಬದಲಾಯಿಸಿದಲ್ಲಿ ಮಾತ್ರ ಅದು ಬದಲಾಗಬಲ್ಲುದು ಎನ್ನುವ ಡಿ.ಎನ್.ಎಸ್. ಹೀಗೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ; ಚಿಕ್ಕ ಮಕ್ಕಳಿಗೆ, ಅದರಲ್ಲೂ ಕೆಳವರ್ಗದ ಮಕ್ಕಳಿಗೆ, ಬರಹ ಬಾರದ ದೊಡ್ಡವರಿಗೆ ಕನ್ನಡ ಬರಹವನ್ನು ಕಲಿಸುವ ಕೆಲಸ ಸುಳುವಾಗುತ್ತದೆ. ಎಲ್ಲಾ ಪದಗಳನ್ನು ಓದುವಂತೆಯೇ ಬರೆಯುವ ಕಾರಣ ಇವತ್ತು ಕನ್ನಡದಲ್ಲಿರುವ ಸ್ಪೆಲ್ಲಿಂಗ್ ತೊಡಕು ಪೂರ್ತಿ ಇಲ್ಲವಾಗುತ್ತದೆ. ಬರಹಗಾರರಿಗೆ ಎಲ್ಲಿ ಯಾವ ಅಕ್ಶರಗಳನ್ನು ಬಳಸಬೇಕು ಅನ್ನುವ ವಿಶಯದಲ್ಲಿ ಇರುವ ಸಂಶಯ ಇಲ್ಲವಾಗುತ್ತದೆ. ಕೆಳವರ್ಗದ ಮಕ್ಕಳಿಗೆ ಉಚ್ಚಾರಣೆಯಲ್ಲಿಲ್ಲದ ಹೆಚ್ಚು ಅಕ್ಶರಗಳನ್ನು ಕಲಿಯುವಲ್ಲಿನ ಕೀಳರಿಮೆ ಬರುವುದಿಲ್ಲ. ಈ ಹೊಸ ಬರಹದಲ್ಲಿ ಬೆರಳಚ್ಚು ಮಾಡುವುದು, ಕಂಪ್ಯೂಟರಿನಲ್ಲಿ ಬರೆಯುವುದು ಸುಲಬ ಪದಗಳನ್ನು ಓದುವ ಹಾಗೆಯೇ ಬರೆಯುವ ಕಾರಣ ಬರಹಕ್ಕೂ ಆಡುಮಾತಿಗೂ ನಡುವಿರುವ ಅಂತರ ಕಡಿಮೆಯಾಗುತ್ತದೆ. ಬರಹದ ಕ್ಲಿಶ್ಟತೆ, ಕ್ರುತಕತೆಗಳು ಕಡಿಮೆಯಾಗುತ್ತವೆ. ಓದಲು ಕಲಿಯುವ ಕೆಲಸ ಮತ್ತು ಬಳಸುವ ಕೆಲಸ ಹೆಚ್ಚು ಸುಳುವಾಗುತ್ತದೆ. ಈ ದಾರಿಯಲ್ಲಿ, ಎಲ್ಲರ ಕನ್ನಡ(ಬರಹ ಕನ್ನಡ) ಎಲ್ಲರನ್ನೂ ತಲುಪುವ ಮೂಲಕ ನಿಜಕ್ಕೂ ಎಲ್ಲರದಾಗಬೇಕಿದ್ದಲ್ಲಿ, ಅದರಲ್ಲಿ ಕಾಣಿಸಿಕೊಳ್ಳುವ ಇತರೆ ನುಡಿಗಳಿಂದ ಪಡೆದ ಪದಗಳ ಎಣಿಕೆ ನೂರಕ್ಕೆ ೧೦ ಇಲ್ಲವೇ ೧೫ಕ್ಕಿಂತ ಹೆಚ್ಚಾಗಬಾರದು ಎನ್ನುವುದು ಶಂಕರಬಟ್ಟರ ಸಲಹೆ.

‘ಕನ್ನಡ ಆಡುನುಡಿಯ ಸೊಲ್ಲರಿಮೆ’ಯನ್ನು ಬರೆಯಲು ಹೊರಟಿರುವ ನುಡಿಯರಿಗರಾದ ಕೆ.ವಿ.ನಾರಾಯಣ ಅವರು ‘ಈ ಬರೆವಣಿಗೆಯಲ್ಲಿ ಹೆಚ್ಚಾಗಿ ಕನ್ನಡ ಪದಗಳನ್ನೇ ಬಳಸಲಾಗಿದೆ. ಅರಿಮೆಯ ಪದಗಳಿಗೂ ಹೊಸದಾಗಿ ಕನ್ನಡ ಪದಗಳನ್ನು ಆಯ್ದುಕೊಳ್ಳಲಾಗಿದೆ’ ಎಂದು ಹೇಳುತ್ತಾ ‘ಈ ನಡೆ ಸಂಸ್ಕೃತ ನುಡಿಯೊಡನೆ ಪೋಟಿ ಮಾಡಲೆಂದು ಆದುದಲ್ಲ. ನಮ್ಮಲ್ಲಿ ಬಳಕೆಯಾದ ಹತ್ತಾರು ನುಡಿಯರಿಮೆಯ ಪದಗಳು ಸಂಸ್ಕೃತದಿಂದ ಬಂದ ಇಲ್ಲವೇ ಸಂಸ್ಕೃತದ ಪದಗಳ ನೆರವಿನಿಂದ ಕಟ್ಟಿಕೊಂಡ ಪದಗಳೇ ಆಗಿವೆ. ಹಿಂದಿನ ಸೊಲ್ಲರಿಮೆಗಳೂ ಇದೇ ಹಾದಿಯನ್ನು ತುಳಿದಿದ್ದವು. ಈಗಲೂ ಅದನ್ನೇ ಮುಂದುವರಿಸುತ್ತಿದ್ದೇವೆ. ಅದರೆ ಕನ್ನಡದ ತಿಳುವಳಿಕೆ ಕನ್ನಡದಲ್ಲೇ ಮೈದಳೆಯಬೇಕಾದರೆ ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ತಿಳಿವನ್ನು ಕನ್ನಡ ಪದಗಳಲ್ಲೇ ಕಟ್ಟಲು ಮೊದಲು ಮಾಡಬೇಕು’ ಎಂದಿದ್ದಾರೆ.

ನಮ್ಮ ತಿಳಿವನ್ನು ಕನ್ನಡ ಪದಗಳಲ್ಲೇ ಕಟ್ಟಲು ಮೊದಲು ಮಾಡಬೇಕು ಎನ್ನುವ ನಿಲುವನ್ನು ಮಂಡಿಸಿರುವ ಕೆ.ವಿ.ಎನ್ ಇಂತಹ ದುಡಿಮೆಯ ಇನ್ನೊಂದು ತೊಡಕನ್ನೂ ಗುರುತಿಸಿದ್ದಾರೆ. ಅದೆಂದರೆ, ‘ಕನ್ನಡ ಬರೆಹವನ್ನು ಸರಿಪಡಿಸಬೇಕು ಎಂಬ ಇರಾದೆಯಿಂದ ಶಂಕರಬಟ್ ಅವರು ‘ಮಹಾಪ್ರಾಣ’ಗಳ ಬದಲಿಗೆ ‘ಅಲ್ಪಪ್ರಾಣ’ಗಳನ್ನು ಬರೆಯಲು ಹೇಳುತ್ತಿರುವುದರ ಬಗ್ಗೆ. ಇದನ್ನು ಒಪ್ಪದೇ ಇರುವವರು ಹೆಚ್ಚು ಜನರಿದ್ದಾರೆ. ಅದ್ದರಿಂದಾಗಿ, ಈ ಗೋಜಲಿನಿಂದ ಹೊರಬರಲು ‘ಮಹಾಪ್ರಾಣಗಳಿರುವ ಪದಗಳನ್ನೇ ದೂರವಿಡುವುದ’ನ್ನು ಮುಂದಿಡುತ್ತಿದ್ದಾರೆ. ಯಾಕೆಂದರೆ, ಸಾಮಾನ್ಯವಾಗಿ ‘ಮಹಾಪ್ರಾಣ’ಗಳಿರುವ ಪದಗಳು ಸಂಸ್ಕ್ರುತದಿಂದ ಬಂದ, ಇಲ್ಲವೇ ಸಂಸ್ಕ್ರುತದ ನೆರವಿನಿಂದ ಕಟ್ಟಿಕೊಂಡ ಪದಗಳೇ ಆಗಿವೆ. ಆದ್ದರಿಂದಾಗಿ ಮಹಾಪ್ರಾಣಗಳು ಬರದಿರುವ ಪದಗಳನ್ನು ಬಳಸುವ ಹೊಣೆಯನ್ನು ಹೊತ್ತರೆ ಓದುವವರು ಮುಜುಗರಕ್ಕೆ ಒಳಗಾಗುವ ಗೋಜೂ ಇರುವುದಿಲ್ಲ. ಹೀಗೆ ಮಾಡುತ್ತಿರುವುದೇಕೆ ಎಂದು ಒಪ್ಪಿದರೆ ಈ ಬರೆವಣಿಗೆಯನ್ನು ಓದಲು ಸುಳುವಾದೀತು ಎನ್ನುವುದು ಅವರ ನಿಲುವು.

ಕನ್ನಡ ನುಡಿಯಾಡುಗರಿಂದ ಕಸಿದುಕೊಳ್ಳಲು ಆಗದ ಹಕ್ಕು ಇದು

ಬೆಂಬಲವಾಗಿ ಇರಬೇಕಾಗಿದ್ದ ಸಂಸ್ಕ್ರುತ ಮತ್ತು ಇಂಗ್ಲಿಶುಗಳು ಕನ್ನಡದ ಪಾಲಿಗೆ ಗೋಡೆಗಳಾಗಿವೆ ಎಂದೆ. ಅವನ್ನು ಹಾಗೆ ಮಾಡಿಕೊಂಡವರು ಕನ್ನಡ ಬದುಕಿನವರಾದ ನಾವೇ ಅನ್ನುವ ದಿಟವನ್ನೂ ಒಪ್ಪುವುದು ನಮ್ಮ ಹೊಣೆಯೇ. ಇವೆರಡೂ ನುಡಿಗಳು ಬೆಂಬಲವಾಗಿಯೇ ಇರುವ ಗಡಿಗಳನ್ನು ಮೀರಿರುವುದರಿಂದಾಗಿಯೇ ಕನ್ನಡನುಡಿ ಬಳಕೆಯನ್ನು, ಕನ್ನಡ ತಿಳಿವನ್ನು ಗೋಡೆಗಳಾಗಿ ತಡೆಯುತ್ತಿವೆ. ಆದರೆ, ಅವು ಕನ್ನಡದ ತಿಳಿವು ಕನ್ನಡದಲ್ಲಿ ನಡೆಯದಂತೆ, ಕನ್ನಡ ಬದುಕುಗಳು ಬಳಸಲಾಗದಂತೆ ಗೋಡೆಗಳಾಗಿ ಉಳಿಯಬೇಕೆ ಬೇಡವೇ ಎನ್ನುವ ನಿಲುವನ್ನು ತಳೆಯುವ ಮೇಲ್ಮೆಯು ನಮ್ಮ ಕಯ್ಯಲ್ಲಿಯೇ ಇದೆ. ಕನ್ನಡ ಬರಹಗಾರರ ಕಯ್ಯಲ್ಲಿಯೇ ಇದೆ. ಕನ್ನಡದಲ್ಲಿ ಅರಿಮೆಗಳನ್ನು ಕಟ್ಟುತ್ತಿರುವ ಬರೆಹಗಾರರ ಹೊಣೆಯೇ ಇದರಲ್ಲಿ ಹೆಚ್ಚಾಗಿದೆ. ಇಂತಹ ಹೊಣೆಯನ್ನು ಕಸಿದುಕೊಳ್ಳಲು ಯಾರಿಗೂ ಆಗುವುದಿಲ್ಲ ಎನ್ನುವುದು ಕನ್ನಡ ಬರವಣಿಗೆಯ ಚರಿತ್ರೆಯ ಉದ್ದಕ್ಕೂ ಕಾಣುತ್ತದೆ. ಕಾಲಕಾಲಕ್ಕೆ ಅಂತಹ ಹೊಣೆಯನ್ನು ಹೊತ್ತು ಕನ್ನಡ ಬದುಕುಗಳ ಒಡನಾಟದಲ್ಲಿಯೇ ಬರವಣಿಗೆಯನ್ನು ಕಟ್ಟಿದ, ಬದಲಿಸಿದ ಹಿರಿಯರನ್ನು ಓದುತ್ತಿದ್ದೇವೆ. ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳಿಗೆ ಬದಲಾಗಿರುವ ಸನ್ನಿವೇಶದ ಅರಿವುಗಳ ಜೊತೆಗೆ ಮಾತುಕತೆಯನ್ನೂ ನಡೆಸುತ್ತಿದ್ದೇವೆ ಇನ್ನೂ. ಆ ಮಾತುಕತೆಗಳಲ್ಲಿಯೇ ಹೊಸಗನ್ನಡವನ್ನು ಕನ್ನಡ ಬದುಕುಗಳಿಗೆ ಆಗುಮಾಡುವ ಅರಿವಿನ ದಾರಿಗಳೂ ಒಡನಾಡುತ್ತಿವೆ. ಆದರೆ, ಕಳೆದ ಒಂದೂವರೆ ಸಾವಿರ ವರುಶಗಳಲ್ಲಿ ಉಂಟಾಗಿದ್ದ ನುಡಿಯ ಇಕ್ಕಟ್ಟುಗಳನ್ನು ಬಿಡಿಸಿಕೊಳ್ಳಲು ಕಟ್ಟಿಕೊಂಡ ಅರಿಮೆಯು ಕಾಣುವಶ್ಟು ಸುಳುವಾಗಿ ಕಾಣುವುದಿಲ್ಲ ಇವತ್ತಿನ ನಮ್ಮ ನುಡಿಯ ಬಿಕ್ಕಟ್ಟುಗಳು. ನಮ್ಮ ಹಿಂದಿರುವ ದೂರವನ್ನು ಗ್ರಹಿಸಲು ದಾರಿಗಳನ್ನು ಮಾಡಿಕೊಂಡಂತೆ, ಹೊಸಕಾಲದ ತಿಳಿವಿನ ಬೆಳವಣಿಗೆಯನ್ನು ವಿಂಗಡಿಸಿಕೊಳ್ಳಲಾರೆವು. ಆದರೂ ನಮ್ಮೆದುರಿನಲ್ಲಿ ಜನಬದುಕುಗಳನ್ನು ಹೇಳುತ್ತಿರುವ ಕತೆಗಳಿವೆ, ಕಾದಂಬರಿಗಳಿವೆ, ಕವಿತೆಗಳಿವೆ, ನಾಟಕ, ಹರಟೆ ಮತ್ತಿನ್ನೇನೇನೋ ಬರಹಗಳಿವೆ. ಇಂತಹ ಬರಹಗಳ ನಡುವೆ ಕನ್ನಡ ಜನಬದುಕುಗಳು ಒಡನಾಟವನ್ನಿರಿಸಿಕೊಂಡಿವೆ. ಇವೆಲ್ಲವನ್ನೂ ಜನಕ್ಕೆ ಮುಟ್ಟಲೆಂದೇ ಬರೆಯಲಾಗಿದೆ. ಬರೆಯುತ್ತಿರುವವರು ಜನರಾಡುವ ನುಡಿಯಲ್ಲೇ ಕನ್ನಡಿಗರನ್ನು ಮುಟ್ಟುವ ದುಡಿಮೆಯಲ್ಲಿ ತೊಡಗಿದ್ದಾರೆ. ಕಳೆದ ಮೂವತ್ತು ನಲವತ್ತು ವರುಶಗಳಲ್ಲಿ ಇದು ಹೆಚ್ಚೆಚ್ಚಾಗಿಯೇ ನಡೆದಿದೆ. ಬರೆಯುವವರೆಲ್ಲರೂ ಕನ್ನಡ ಬದುಕುಗಳ ಜೊತೆ ಬದುಕುತ್ತಿರುವವರೇ ಆಗಿದ್ದಾರೆ. ಅವರ‍್ಯಾರೂ ಸಾವಿರಾರು ವರುಶಗಳ ಹಿಂದಿನವರಿಗಾಗಿ ಬರೆಯುವುದಾಗಲೀ, ದೂರದ ಯೂರೋಪಿನಂತಹ ದೇಶಗಳಿಗಾಗಿ ಬರೆಯುವವರಾಗಲಿ ಆಗಿಲ್ಲ. ಬರೆಯುವವರ ಜೊತೆಯಲ್ಲಿ ಜನರಾಡುವ ಕನ್ನಡಗಳಿವೆ. ಕನ್ನಡವನ್ನಾಡುವ ಜನರಿದ್ದಾರೆ. ಕನ್ನಡವೇ ಬರೆಯುವವರ ಜೊತೆಯಲ್ಲಿದೆ. ಬರೆಯುವವರ ಒಳಗೂ ಇದೆ ಹೊರಗೂ ಅದೇ ಇದೆ.

ಕನ್ನಡವೋ ಸಂಸ್ಕ್ರುತವೋ ಇಂಗ್ಲಿಶೋ ಎನ್ನುವುದು ತಿಳಿವನ್ನು ಕಟ್ಟಲು ಹೊರಡುವವರ ನಿಲುವಾಗಬೇಕಿದೆ.

ಹೆಚ್ಚಿನ ಮಾತಿಗೆ

೧. ಕನ್ನಡ ಬರಹವನ್ನು ಸರಿಪಡಿಸೋಣ: ಡಿ.ಎನ್.ಶಂಕರಬಟ್, ೨೦೦೯, ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ.

೨. ಕನ್ನಡ ಬರಹದ ಸೊಲ್ಲರಿಮೆ-೧: ಡಿ.ಎನ್.ಶಂಕರಬಟ್, ೨೦೦೯, ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ

೩. ಕನ್ನಡದ ಉಲಿಕಂತೆಗಳು: ಕನ್ನಡ ಆಡುನುಡಿಯ ಸೊಲ್ಲರಿಮೆ-೧: ಕೆ.ವಿ.ನಾರಾಯಣ, ೨೦೧೧, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.

೪. ತೊಂಡುಮೇವು: ಕೆ.ವಿ.ನಾರಾಯಣ, ೨೦೧೦, ಬರಹ ಪಬ್ಲಿಶಿಂಗ್ ಹೌಸ್, ಬೆಂಗಳೂರು

೫. ವಾಲ್ಮೀಕಿಯ ನೆಪದಲ್ಲಿ:ಯು.ಆರ್.ಅನಂತಮೂರ‍್ತಿ, ೨೦೦೬, ಅಭಿನವ ಬೆಂಗಳೂರು.

೬. ಅಚೀಚೆ: ಯು.ಆರ್.ಅನಂತಮೂರ‍್ತಿ, ೨೦೧೧, ಅಭಿನವ ಬೆಂಗಳೂರು.

೭. ದಲಿತ ಕಥನ: ಮೊಗಳ್ಳಿ ಗಣೇಶ್, ೨೦೦೬, ಕನ್ನಡ ವಿ.ವಿ. ಹಂಪಿ

೮. ಕನ್ನಡ ಬರವಣಿಗೆ:ದೋಷಗಳು ದೌರ್ಬಲ್ಯಗಳು: ಟಿ.ವಿ.ವೆಂಕಟಾಚಲಶಾಸ್ತ್ರಿ/ಜೆ.ಆರ್.ಲಕ್ಷ್ಮಣರಾವ್, ೨೦೧೦, ತ.ವೆಂ.ಸ್ಮಾರಕ ಗ್ರಂಥಮಾಲೆ, ಮೈಸೂರು

 

‍ಲೇಖಕರು avadhi

4 May, 2013

9 Comments

  1. arun joladkudligi

    ಒಟ್ಟು ಆಲೋಚನೆಯಲ್ಲಿ ಕೆ.ವಿ.ಎನ್ ದಟ್ಟ ಪ್ರಭಾವವಿದೆ.ಚಲಪತಿ ಅವರು ಮುಂದಾದರೂ ಬಿಡಿಸಿಕೊಳ್ಳಲಿ. ಚಲಪತಿ ಅವರದ್ದೇ ಬರಹ ಹೊಮ್ಮಲಿ

    • chalapthy

      ಗೆಳೆಯ ಅರುಣ್ ನಮಸ್ಕಾರ
      ನನ್ನ ಬರೆಹವನ್ನು ಓದಿದ್ದಕ್ಕೆ ನನ್ನಿಗಳು ನಿಮಗೆ. ನಿಮ್ಮ ಓದಿನ ಗ್ರಹಿಕೆಯಲ್ಲಿ ಕನ್ನಡ ಬದುಕುಗಳಿಗೆ ಬೇಕಾದ ದಾರಿಯಿದೆ ಎನ್ನುವುದಾದರೆ, ನನ್ನ ದಾರಿ ಅದೇ.

  2. Meti Mallikarjun

    ಪ್ರಭಾವ ಎಂದರೇನು? ಎಂಬುದನ್ನು ಮೊದಲು ವಿವರಿಸಿಕೊಳ್ಳಬೇಕಿದೆ. ಸುಮ್ಮನೆ ಇಂತಹವೊಂದು ಬ್ಲ್ಯಾಂಕೇಟ್ ಟರ್ಮ್ಅನ್ನು ಬಳಸುವುದರಿಂದ ಏನು ಪ್ರಯೋಜನವಿಲ್ಲ.

  3. jaykumar

    ಒಳ್ಳೆಯ ಲೇಖನಕ್ಕಾಗಿ ಧನ್ಯವಾದಗಳು . ಜೈಕುಮಾರ್

  4. ಪ್ರದೀಪ್ ಬೆಳಗಲ್

    ಚಲಪತಿಯವರೇ,
    ನಿಮ್ಮ ಕನ್ನಡದ ಬಗೆಗಿನ ಚಿಂತನೆಯ ಉದ್ಧೇಶ ಸರಿ. ಆದರೆ, ಗ್ರಹಿಕೆ? ಈ ಬಗೆಗೆ ನನ್ನ ಕೆಲವು ಅನುಮಾನಗಳನ್ನು ಪಟ್ಟಿ ಮಾಡಿದ್ದೇನೆ.
    ಕನ್ನಡದ ಸಂದರ್ಭದಲ್ಲಿ ಶಂಕರ್‌ ಬಟ್ಟ್ ಅಥವಾ/ಮತ್ತು ಕೆ ವಿ ನಾರಾಯಣ ಪ್ರಮೇಯ (ಅವರ ಲಿಪಿ, ಭಾಶೆ ಸುಧಾರಣೆ ಬಗೆಗಿನ ಸಲಹೆಗಳನ್ನು ಹೀಗೆ ಕರೆಯ ಬಯಸುತ್ತೇನೆ) ನೆಲೆ ಸರಿಯಾಗಿಯೇ ಇದೆ. ಆದರೆ ಇದಕ್ಕೆ ಇರುವ ವಿರೋಧಿ ನೆಲೆ ನೀವು ಭಾವಿಸದಷ್ಟು ಸರಳವಲ್ಲ. ಹೀಗಾಗಿಯೇ ಈ ಪ್ರಮೇಯಕ್ಕೆ ತೀವ್ರವಿರೋಧ ತೋರಿಸಿದ ಐಜಕ್ಕಳ ಗಿರೀಶ್ ಭಟ್‌ರ ″ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ?″ಯ ನಿಲುವುಗಳು ನಿಮ್ಮ ಗಮನಕ್ಕೆ ಬಂದಿಲ್ಲ. ಗೀರಿಶ್ ಅವರಿಗೆ ಶಂಕರ್ ಬಟ್ಟರು ′ಕನ್ನಡ ಮೇಲ್ವರ್ಗದ ಸೊತ್ತಾಗಿ ಮಾತ್ರ ಉಳಿಯದೆ ಎಲ್ಲರ ಸ್ವತ್ತಾಗ ಬೇಕು′ ಎಂಬ ವಾದವೂ ಸಹ ದೊಡ್ಡದೊಂದು ಅಪಾಯವಾಗಿ ಕಾಣತೊಡಗುತ್ತದೆ. ಶಂಕರ್ ಬಟ್ಟರು ಸರಿಯಾಗಿಯೇ ಸೂಚಿಸಿದಂತೆ ಕನ್ನಡ ಭಾಶೆಯಶ್ಟೇ ಅಲ್ಲ ಹಲವು ′ಮೈಸೂರು ಬ್ರಾಹ್ಮಣರ′ ಸಂಸ್ಕ್ರುತಿಯ ಮೌಲ್ಯಗಳು ′ಉನ್ನತ ಸಂಸ್ಕ್ರುತಿಯ′ ಎಂದು ಪರಿಗಣಿತವಾದವು (ನೋಡಿ The Oxford India Srinivas, M N Srinivas, 2009-2012:205-209). ಹೀಗಾಗಿ ಚರ್ಚೆಯ/ವಿರೋಧಧ ನೆಲೆ ಎಲ್ಲಿದೆ ಎಂಬುದನ್ನು ನಾವು ಗುರಿತಿಸಿ ಕೊಳ್ಳ ಬೇಕು (ಹೀಗಾಗಿಯೇ ಮಾಂಸದ ಪಲ್ಯ ′ಹೊಲಸು ಪಲ್ಯ′ವಾಗುತ್ತದೆ).
    ಎರಡನೆಯದಾಗಿ ಹಿಂದಿನ ಪೀಳಿಗೆಯವರ ನಿಲುವುಗಳೊಂದಿಗೆ ನಾವು ಜಾಗತೀಕರಣದ ನಂತರದ ನಿಲುವುಗಳನ್ನು ಹೋಲಿಸಲು ಹಲವು ಕಷ್ಟಗಳಿವೆ. ನಾವು ಪೂರ್ಣವಾಗಿ ಸಂಸ್ಕ್ರುತದ ನೆರಳಿನಿಂದ ಹೊರ ಬರುವ ಮುಂಚೆಯೇ ಇಂಗ್ಲೀಶ್ (ನವಸಾಮ್ರಾಜ್ಯವಾದಿ?) ಹೆಜಮನಿಗೆ ಒಳಗಾಗಿದ್ದೇವೆ. ಈ ಹೆಜಮನಿ (ಪ್ರಭಾವ?) ಪರಿಕಲ್ಪನೆಯನ್ನು ನಾವು ಇಂತಹ ಇಂತಹವರ ವಿರುದ್ಧ ಎಂದು ಬಳಸುವ ಬದಲು ಈ ಗ್ರಹಿಕೆ ಹೀಗಿರ ಬೇಕು.
    Hegemony does not imply conspiracy theory, but a competing complementary set of values and practices, with those in power better able to legitimate themselves and to convert ideas into material power. (Robert Philpson, 1992, Linguistic Imperialism: 74 ಒತ್ತು ನನ್ನದು)
    ಹೀಗಾಗಿ ಈ ಹೆಜಮನಿ ರಾಚನೀಕ ಅಥವಾ structural.
    ಮೂರನೆಯದಾಗಿ ನಾವು ಕನ್ನಡವನ್ನು ಏನೆಂದು ಗ್ರಹಿಸುತ್ತೇವೆ. ಒಂದಲ್ಲ ಒಂದು ದಿನ ಮಾಯವಾಗುವ ಭಾಶೆ ಎಂದೇ? ಹಾಗಿದ್ದಲ್ಲಿ ಈಗ ಎಲ್ಲರೂ/ಬಹಳಶ್ಟ ಜನ ಹೋಗುತ್ತಿರು ದಾರಿ ಸರಿಯಲ್ಲವೇ? ಈ ಪ್ರಶ್ನೆಯೂ ಅಶ್ಟೇ ಮುಖ್ಯ.
    ನಿಜ ಅರ್ಥದಲ್ಲಿ ಈ ಪ್ರಮೇಯದ ಬಗೆಗೆ ಹಾಗೂ ಅದರ ಅಗತ್ಯ/ಪರಿಣಾಮಗಳ ಬಗೆಗೆ ಗಂಭೀರ ಚರ್ಚೆಯೊಂದು (ಹಲವರಿಗೆ ಇದು ಒಂದು ಚರ್ಚೆಯೇ ಅಲ್ಲ) ನಡೆದೇ ಇಲ್ಲ ಎಂದರೂ ಸರಿಯಾದೀತು. ಈ ಅರ್ಥದಲ್ಲಿ ನಿಮ್ಮ ಪ್ರಯತ್ನ ಸರಿ

    • chalapthy

      ನಮಸ್ಕಾರ ಪ್ರದೀಪ್
      ನೀವು ಎತ್ತುತ್ತಿರುವ ಕೇಳ್ವಿಗಳು ನನ್ನವೂ ಕೂಡ. ಬರೆಹ ಕನ್ನಡದ ಈ ಕಶ್ಟಗಳು ಹೊಸಕಾಲದಲ್ಲಿ ಶುರುವಾದದ್ದಕ್ಕೆ ನೂರಕ್ಕೂ ಹೆಚ್ಚು ವರುಶಗಳ ಇತಿಹಾಸವಿರುವುದು ನಿಮಗೂ ತಿಳಿದದ್ದೇ. ಈ ಮೊದಲಿಂದಲೂ ಹೊರ ಹಾಗೂ ಒಳನೋಟದಲ್ಲಿಯೂ ಸಂಸ್ಕ್ರುತ/ಇಂಗ್ಲಿಶ್ ಗಳು ಕನ್ನಡ ತಿಳಿವನ್ನು ಆಳುತ್ತಿವೆಯಾದ್ದರಿಂದ ಕನ್ನಡ ಎಲ್ಲರ ಸೊತ್ತಾಗುವ ದಾರಿಗಳೇ ತಪ್ಪಿಹೋದಂತೆ ಕಾಣುತ್ತಿರಬಹುದೇ? ಕನ್ನಡ ಗುರುತುಗಳನ್ನು ಇಂತಹ ಯಜಮಾನಿಕೆಗಳಿಂದ ಬಿಡಿಸಬೇಕಾದ ಬಿಕ್ಕಟ್ಟಿಗೆ ನಿಮ್ಮ ಸಲಹೆ ಸರಿಯಾಗಿಯೇ ಇದೆ. ಆದರೆ, ನೀವು ಹೇಳುವಂತೆ `ಹಲವರಿಗೆ ಇದು ಚರ್ಚೆಯೇ ಅಲ್ಲ’ ಆಗಿಬಿಟ್ಟಿರುವುದೂ ದಿಟ. ಅಂತಹ ಚಿಂತನೆಗಳಿಗೆ ಈಗಾಗಲೇ ಕಯ್ವಶವಾಗಿರುವ ದಾರಿಗಳು ತಪ್ಪಿಹೋದರೆ ಅವುಗಳ ಮೂಲಕ ಆಗುಮಾಡಿಕೊಂಡಿರುವ ಯಜಮಾನಿಕೆಗಳ ಗತಿಯೇನು ಎನ್ನುವ ಗಿಲ್ಟು ಇರಬೇಕಲ್ಲವೇ? ಇದು ಯಾರೋ ಒಬ್ಬ ವ್ಯಕ್ತಿಯ, ಒಂದು ಜಾತಿಯ ಗುಂಪಿನ ಯಜಮಾನಿಕೆಯ ಕೇಳ್ವಿಯಲ್ಲ. ಈಗ ಹಾಗೆ ಉಳಿದಿಲ್ಲ ಈ ಬಿಕ್ಕಟ್ಟು. ಸಂಸ್ಕ್ರುತ ಇಂಗ್ಲಿಶುಗಳ ಬೆರಕೆಗೆ ಬಿದ್ದಿರುವ ಎಲ್ಲ ಚಿಂತನೆಗಳ ತೊಡಕೂ ಇದಾಗಿರಬಹುದೆ?
      ಹೀಗೇ ಏನೇನೆಲ್ಲಾ ಬಿಚ್ಚಿಕೊಳ್ಳುತ್ತಿವೆ, ತಮ್ಮಂತಹ ಹಲವು ಗೆಳೆಯರು ಎತ್ತಿ ತೋರಿಸುತ್ತಿರುವ ಚರ್ಚೆಯ ಇಕ್ಕಟ್ಟುಗಳನ್ನು ನೋಡುತ್ತಿರುವಾಗ.
      ಓದಿ ಮಾತಾಡಿದ್ದಕ್ಕೆ ನನ್ನಿಗಳು

  5. ಪ್ರದೀಪ್ ಬೆಳಗಲ್

    ಚಲಪತಿಯವರಿಗೆ,
    ಸರ್ ಇಲ್ಲಿಯ ಹಲವು ಕೇಳ್ವಿಗಳಿಗೆ ನನ್ನಲ್ಲಿ ಉತ್ತರವಿಲ್ಲ. ಚರ್ಚೆಯಾದರೂ ನಡೆದರೆ ಅಲ್ಲಿ ತಪ್ಪುಗಳಾದರೆ ಬೇರೆಯವರು ಸರಿ ಏನೆಂದಾದರೂ ಸೂಚಿಸಿಯಾರೂ ಎಂದು ಕೆಲವೊಮ್ಮೆ ಅಂದುಕೊಳ್ಳುತ್ತೇನೆ. ಸೋಜಿಗವೆಂದರೆ ಇಂದಿನ ಅಗತ್ಯಗಳಲ್ಲಿ ಒಂದಾದ ಭಾಶೆ, ಲಿಪಿ ಸುಧಾರಣೆಯ ಬಗೆಗೆ ಅದೂ ಸಹ ದೊಡ್ಡಮಟ್ಟದಲ್ಲಿ ಆಗುತ್ತಿಲ್ಲ. ಹೀಗಾಗಿ, ಈ ಬಗೆಗೆ ಚರ್ಚೆ ಮುಂದುವರೆಯಲಿ ಎಂಬ ಗುರಿಯೊಂದಿಗೆ ನನ್ನ ಅರಿವಿನ ಮಿತಿಯಲ್ಲಿ ನನಗೆ ತೋಚಿದ ಒಂದೆರಡು ಸೂಚನೆಗಳನ್ನು ಇಲ್ಲಿ ಹೇಳುತ್ತನೆ. ಇಲ್ಲಿ ಚರ್ಚೆಯ (ಜಗಳ/ವಾಗ್ವಾದ) ಬಗೆಗಿನ ಮೊದಲ ತೊಂದರೆ ಎಂದರೆ ಯಾವುದಾದರೂ ಜಾತಿ/ವರ್ಗಗಳ ಬಗೆಗೆ ಹೇಳಿದಲ್ಲಿ ಈ ನಿಲುವುಗಳ ಬಗೆಗೆ, ಆ ಗುಂಪುಗಳೊಂದಿಗೆ ಗುರುತಿಸಿಕೊಂಡವರ, ಪರ/ವಿರೋಧದ ತೀವ್ರ ಪ್ರತಿಕ್ರಿಯೆ/ರಿಯಾಕ್ಶನ್. ಇದನ್ನು ಭಾಗಶ ಆದರೂ ನಾವು ″ಟ್ರು ಎಲೈಟ್″ ಅಥವಾ ″ದಿಟ-ಗಣ್ಯ″ ಚಿಂತನೆ ಬಳಸುವ ಮೂಲಕ ಹೋಗಲಾಡಿಸಲು ಆಗಬಹುದೇ?
    ಇತಿಹಾಸಕಾರ ಸುಮಿತ್ ಸರಕಾರ್ ಅವರು ಬಳಸುವ ಈ ಚಿಂತನೆಯನ್ನು ನಾನು ಅರಿತುಕೊಂಡ ರೀತಿ ಹೀಗಿದೆ. ಅಧಿಕಾರಕ್ಕೆ ಹತ್ತಿರ ಇರುವ (ಅಥವಾ ಸಮಾಜದಲ್ಲಿನ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಚಲಾವಣೆಯಲ್ಲಿರುವ ಚಿಂತನೆಗಳನ್ನು ಪ್ರಭಾವಿಸುವ ಶಕ್ತಿಯುಳ್ಳ) ಯಾವುದೇ ವರ್ಗ/ಗುಂಪು ತನ್ನ ಗುಂಪಿನ ಮೌಲ್ಯಗಳನ್ನು/ಒಳಿತನ್ನು ಒಟ್ಟಾರೆ ಸಮಾಜದ ಮೌಲ್ಯಗಳು/ಒಳಿತು ಎಂದು ಅರಿವಿಲ್ಲದೇ ಅಥವಾ ಅಪ್ರಜ್ನಾಪೂರ್ವಕವಾಗಿ ಅಂದುಕೊಳ್ಳುತ್ತದೆ. ಇಲ್ಲಿನ ಗ್ರಹಿಕೆ ಪ್ರಕಾರ ಇದನ್ನು ಅವರು ಅರಿವಿಲ್ಲದೆ ಮಾಡುತ್ತಾರೆ (ಹಾಗೆಯೇ ಇತರರು ಇದನ್ನು ಅರಿವಿಲ್ಲದೆ ಒಪ್ಪಿಕೊಳ್ಳುತ್ತಾರೆ). ಈ ಪರಿಕಲ್ಪನೆಗಳ ಅಡಿಯಲ್ಲಿ ಈ ಆಯ್ಕೆ (ಮೌಲ್ಯ/ಒಳಿತು ಪರಿಕಲ್ಪನೆಗಳ ಆಯ್ಕೆ) ಹಲವು ಮಾಡಬಹುದಾದ ಅಥವಾ ಸಾಧ್ಯ ಆಯ್ಕೆಗಳೊಳಗೆ ಇರುತ್ತದೆ. ಆದರೆ ಇದು ಗುಂಪಿನ ಅಧಿಕಾರ ಮುಂದುವರಿಕೆಗೆ ಪೂರಕವಾಗಿರುತ್ತದೆ (ಬಹುತೇಕ ಇಂತಹುದೇ ಇತಿಹಾಸ ರಚನೆಯ ಚಿಂತನೆಗಳಲ್ಲಿನ ಆಯ್ಕೆಯ ತೊಂದರೆಯ ಬಗೆಗೆ ಅನುದೇವ …ದಲ್ಲಿ ಬಂಜಗೆರೆಯವರು ಇ ಹೆಚ್ ಕಾರ್‌ ಅವರನ್ನು ಉಲ್ಲೇಖಿಸಿ ಹೇಳುತ್ತಾರೆ- ನೋಡಿ ಚರ್ಚೆಗೆ ಅನುದೇವಾ…2007:4-6. ಇಲ್ಲಿ ನಾವು ಸಂಸ್ಕ್ರುತಿಯ ಕೆಲವು ಅಂಶಗಳ ಬಗೆಗಿನ ಆಯ್ಕೆಯಲ್ಲಿ ವಹಿಸಬಹುದಾದ ಸ್ವತಂತ್ರ/ಇರಬಹುದಾದ ತೊಂದರೆಗಳ ಬಗೆಗೆ ಚರ್ಚಿಸುತ್ತಿದ್ದೇವೆ). ಇಂತಹ ಆಯ್ಕೆಯ ಒಟ್ಟಾರೆ ತೊಂದರೆಗಳು ತಕ್ಶಣದಲ್ಲಿಯಲ್ಲದೇ ನಂತರದಲ್ಲಿಯೂ ಕಾಣಿಸಿಕೊಳ್ಳ ಬಹುದು ಎಂದು ತೋರುತ್ತದೆ. ಕನ್ನಡ ಭಾಶೆ, ಲಿಪಿ ನೆಲೆಯಲ್ಲಿ ಇಂತಹ ಆಯ್ಕೆಯ ತೊಂದರೆಗಳ ಬಗೆಗೆ ಮೊದಲು ಗಮನ ಸೆಳೆದು, ಹಾಗೆ ತಮ್ಮ ಹೊಸಹಾದಿಯ ಚಿಂತನೆಗಳ ಮೂಲಕ ತೋರಿಸಿಕೊಟ್ಟವರು ಡಿ ಎನ್ ಎಸ್ ಮತ್ತು ಕೆ ವಿ ಎನ್ ಎಂದು ನನ್ನ ಅನಿಸಿಕೆ. ಹಿಂದೆ ಕನ್ನಡ ಭಾಶೆ, ಲಿಪಿಯ ಬಗೆಗಿನ ನಮ್ಮ ಆಯ್ಕೆಗಳ ತೊಂದರೆಗಳನ್ನು ಈ ಮೂಲಕ ಗುರುತಿಸಲು ನಮಗೆ ಸಾಧ್ಯವಾಯಿತು. ನೆನಪಿರಲಿ ಈ ಭಾಶೆ, ಲಿಪಿಯ ಹಿಂದಿನ ಆಯ್ಕೆ ಕೇವಲ ″ಮೈಸೂರಿನ ಬ್ರಾಹ್ಮಣರ″ ಆಯ್ಕೆಯಶ್ಟೇ ಅಲ್ಲ. ಅದು ಒಟ್ಟಾರೆ ನಮ್ಮ ಆಯ್ಕೆ ಅಥವಾ ಕನ್ನಡಿಗರ ಆಯ್ಕೆಯೂ ಸಹ ಆಗಿತ್ತು.

  6. chalapthy

    ಪ್ರದೀಪ್ ನಮಸ್ಕಾರ
    ನೀವಂದಂತೆ ಇದು ಕನ್ನಡ ತಿಳಿವನ್ನು ಕಟ್ಟುವವರೆಲ್ಲರ ಹೊಣೆ. ಡಿ.ಎನ್.ಎಸ್ ಮತ್ತು ಕೆ.ವಿ.ಎನ್ ತೋರಿಸುತ್ತಿರುವ ಕನ್ನಡ ಚಿಂತನೆಯ ದಾರಿಯ ಕಡೆಗೆ ನಡೆಯುವ ದರ್ದು ಇವತ್ತು ಅಗತ್ಯವಾಗಿದೆ.

  7. ಪ್ರದೀಪ್ ಬೆಳಗಲ್

    ಡಿ ಎನ್ ಶಂಕರ್ ಬಟ್ಟರಿಗೆ 2012ರ ಪಂಪ ಪ್ರಶಸ್ತಿ ಪ್ರಕಟಿಸಲಾಗಿದೆ. ಇದು ಸಂತಸದ ಗಳಿಗೆ. ಜೊತೆಗೆ ಇದು ಲಿಪಿ ಸುಧಾರಣೆಯ ಬಗೆಗೂ ಚರ್ಚೆಗೆ ದಾರಿ ಮಾಡಿಕೊಡಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading