ಜಾನಪದ ಕೃತಿಗಳ ಮೂಲಕ ಹೆಸರು ಮಾಡಿದ್ದ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ ಹಿ ಚಿ ಬೋರಲಿಂಗಯ್ಯನವರ ಮೊದಲ ಕಾದಂಬರಿ- ಆನೆಕಾಡು. ಈ ಕೃತಿಗೆ ಖ್ಯಾತ ವಿಮರ್ಶಕರಾದ ಪ್ರೊ ಎಚ್ ಎಸ್ ರಾಘವೇಂದ್ರರಾವ್ ಅವರು ಬರೆದ ಮುನ್ನುಡಿ ಇಲ್ಲಿದೆ
ಪ್ರೊ. ಬೋರಲಿಂಗಯ್ಯನವರು ತಡವಾಗಿಯಾದರೂ ಒಳ್ಳೆಯ ಕಾದಂಬರಿಯನ್ನು ಕೊಟ್ಟಿದ್ದಾರೆ. ಬರವಣಿಗೆಯು ಒಳಗೊಳ್ಳುವ ಅನುಭವ ವಲಯಗಳು ಮತ್ತು ಅದರಲ್ಲಿ ತೊಡಗಿಕೊಳ್ಳುವ ಸೃಜನಶೀಲತೆಯ ಪರಿ ಬದಲಾದಂತೆ ಬರವಣಿಗೆಯೂ ಹಿಗ್ಗುತ್ತದೆ. ನಮ್ಮದೇ ಸಾಧ್ಯತೆಗಳು ನಮಗೆ ಗೊತ್ತಿರುವುದಿಲ್ಲ. ತಮ್ಮ ಸುಪ್ತಪ್ರಜ್ಞೆಯನ್ನೂ ಬಳಸಿಕೊಂಡು ಲೋಕದಲ್ಲಿ ಅಡಗಿರುವ ಕಥೆಗಳನ್ನು ಕಾಣುವ, ಬೆಲೆಕಟ್ಟುವ, ಭಾಷೆಯಲ್ಲಿ ಕಟ್ಟುವ, ಲೋಕಾನುಭವಕ್ಕೆ ಸಂವಾದಿಯಾಗಿ ಕಾಲ್ಪನಿಕ ಅನುಭವಗಳನ್ನು ರೂಪಿಸಿಕೊಡುವ ಶಕ್ತಿಯು ಅವರಿಗೆ ಇನ್ನಷ್ಟು ಮತ್ತಷ್ಟು ಬರಲೆಂಬ ಹಾರೈಕೆಯೊಂದಿಗೆ ಈ ಮಾತುಗಳನ್ನು ಮುಗಿಸುತ್ತಿದ್ದೇನೆ.
ಎಚ್.ಎಸ್. ರಾಘವೇಂದ್ರ ರಾವ್
ಕಾದಂಬರಿ ಎಂಬ ಪ್ರಕಾರವು ನಿರಂತರವಾಗಿ ಹಿಗ್ಗುತ್ತಿರುವ ಪ್ರಕಾರ. ಅದು ವಿಶ್ವಕೋಶದಂತೆ ಎಲ್ಲವನ್ನೂ ಒಳಗೊಂಡರೂ ಕಲಾಕೃತಿಯಾಗಿಯೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಮಹಾಕಾವ್ಯಕ್ಕೂ ಕಾದಂಬರಿಗೂ ಇರುವ ಕೆಲವೇ ಕೆಲವು ಸಮಾನ ಲಕ್ಷಣಗಳಲ್ಲಿ ಇದೂ ಒಂದು. ಭಾರತದ ಸಂದರ್ಭದಲ್ಲಂತೂ ಕಾದಂಬರಿಯ ಹರಹು ಇನ್ನಷ್ಟು ಹೆಚ್ಚಾಗಿ, ಎಲ್ಲವನ್ನೂ ಒಳಗೊಳ್ಳುತ್ತಾ, ಅದು ನಮ್ಮ ಕಾಲದ ಅತ್ಯಂತ ಮುಖ್ಯ ಸಾಹಿತ್ಯಪ್ರಕಾರವಾಗಿದೆ.
ಈಚಿನ ವರ್ಷಗಳಲ್ಲಿ ಮಾಹಿತಿ, ದೃಷ್ಟಿಕೋನ ಮತ್ತು ವಾಸ್ತವ-ಸಮೀಪವಾದ ವಿವರಗಳನ್ನು ಹೊಂದಿರುವ ‘ಡಾಕ್ಯು-ಫಿಕ್ಷನ್’ ಹೆಚ್ಚು ಪ್ರಚುರವಾಗುತ್ತಿದೆ. ಇದು ಅಪಾರವಾದ ಲೋಕದರ್ಶನ, ಸಂಶೋಧನೆ ಮತ್ತು ಅನುಭವಗಳನ್ನು ಬಯಸುವ ಪ್ರಕಾರ. ನನ್ನ ಹಲವು ಕಾಲದ ಗೆಳೆಯರೂ ಜಾನಪದ ವಿದ್ವಾಂಸರೂ ಕ್ಷೇತ್ರಕಾರ್ಯಪ್ರಿಯರೂ ಆದ ಪ್ರೊ. ಹಿ.ಚಿ. ಬೋರಲಿಂಗಯ್ಯನವರು ಅರವತ್ತು ದಾಟಿದ ಹರೆಯದಲ್ಲಿ ಮೊದಲಿನಿಂದ ಕೊನೆಯವರೆಗೆ ನಮ್ಮ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಕಾದಂಬರಿಯನ್ನು ನಮಗೆ ಕೊಟ್ಟಿದ್ದಾರೆ. ದೂರದ ಅಮೆರಿಕಾದಲ್ಲಿ ಕುಳಿತು, ನೆನಪುಗಳ ಕಾಡಿನಲ್ಲಿ ಓಡಾಡಿ, ಈ ಕಾದಂಬರಿಯನ್ನು ಕಟ್ಟಿದ್ದಾರೆ. ಆದರೆ, ಇಲ್ಲಿರುವುದು ಬಾಲ್ಯದ ನೆನಪುಗಳಲ್ಲ. ಸದ್ಯದ ಸುಡು-ವಾಸ್ತವವನ್ನು ಚಿತ್ರಿಸುವ ಸವಾಲನ್ನು ಎದುರಿಸುವುದು ಬಹಳ ಕಷ್ಟ.
ನಮ್ಮ ದೇಶದಲ್ಲಿ ಪ್ರಕೃತಿ, ಸಮಾಜ, ರಾಜಕಾರಣ ಮತ್ತು ಮನುಷ್ಯ ಸ್ವಭಾವಗಳು ಒಂದರೊಡನೊಂದು ಹೆಣೆದುಕೊಂಡು ಸೃಷ್ಟಿಯಾಗಿರುವ ಸಂಕೀರ್ಣ ವರ್ತಮಾನವು ಸುಲಭವಾಗಿ ಗ್ರಹಿಕೆಗೆ ಸಿಗುವುದಿಲ್ಲ. ಅವುಗಳನ್ನು ನಿಕಟವಾಗಿ ಬಲ್ಲವರಿಗೆ ಸಾಹಿತ್ಯಕ ಸೃಜನಶೀಲತೆಯಿರುವುದಿಲ್ಲ. ಅಂಥ ಶಕ್ತಿಯಿರುವವರು ಸಧ್ಯದ ಆಗುಹೋಗುಗಳಿಂದ ದೂರವೇ ಉಳಿದಿರುತ್ತಾರೆ. ರಾಜಕಾರಣದ ತಾತ್ವಿಕನೆಲೆಗಳ ಚರ್ಚೆಗಳಿಗಿಂತ ಬಹಳ ಭಿನ್ನವಾದ, ಆದರ್ಶ-ವಿದೂರವಾದ ಇಂದಿನ ರಾಜಕೀಯ ಮತ್ತು ಅದನ್ನು ನಿಯಂತ್ರಿಸುತ್ತಿರುವ ಆರ್ಥಿಕ ಶಕ್ತಿಕೇಂದ್ರಗಳು ಆ ಬಗೆಯ ಚರ್ಚೆಯ ನಿಲುಕಿನಾಚೆಗೆ ಉಳಿಯುತ್ತವೆ. ಹೀಗೆ ವರ್ತಮಾನಕ್ಕೆ ಕನ್ನಡಿ ಹಿಡಿಯುವ ಕೆಲಸದಲ್ಲಿ, ಕವಿತೆ, ನಾಟಕಗಳಿಗಿಂತ ಭಿನ್ನವಾದ ಕಾದಂಬರಿ ಪ್ರಕಾರಕ್ಕೆ ಕೆಲವು ಅನುಕೂಲಗಳಿರುವಂತೆಯೇ ಮಿತಿಗಳೂ ಇವೆ.
ಕಾರಂತರ ‘ಗೊಂಡಾರಣ್ಯ’ ಮತ್ತು ಮಾಸ್ತಿಯವರ ‘ಚಿಕವೀರರಾಜೇಂದ್ರ’ಗಳಿಂದ ಹಿಡಿದು, ಭೈರಪ್ಪನವರ ‘ದಾಟು’, ಅನಂತಮೂರ್ತಿಯವರ ‘ಅವಸ್ಥೆ’ ಮುಂತಾದ ಕಾದಂಬರಿಗಳ ಮೂಲಕ ಚಲಿಸಿ ಚಿತ್ತಾಲರ ಕೇಂದ್ರವೃತ್ತಾಂತದವರೆಗೆ ಹಲವು ಕಾದಂಬರಿಗಳು ಈ ಕೆಲಸವನ್ನು ವಿಭಿನ್ನ ನೆಲೆಗಳಲ್ಲಿ ವಿಭಿನ್ನ ಅಜೆಂಡಾಗಳೊಡನೆ ನಿರ್ವಹಿಸಿವೆ. ಕಾರ್ನಾಡರ ‘ತುಘಲಕ’, ಲಂಕೇಶರ ‘ಸಂಕ್ರಾಂತಿ’, ಮೊಕಾಶಿಯವರ ‘ಅವಧೇಶ್ವರಿ’ ಮುಂತಾದ ಕೃತಿಗಳು ಪುರಾಣ, ಇತಿಹಾಸಗಳ ಭಿತ್ತಿಯಲ್ಲಿ ಅಂತಹುದೇ ಕೆಲಸವನ್ನು ಮಾಡಿದವು. ಆದರೆ, ಇವು ಕೂಡ ಇಂದಿನ ‘ಮೌಲ್ಯರಹಿತ ರಾಜಕಾರಣ’ದ ನಾಡಿಮಿಡಿತವನ್ನು ಹಿಡಿಯುವ ದಿಕ್ಕಿನಲ್ಲಿ ಚಲಿಸಲಿಲ್ಲ.
ಆದರೆ, ಇವರಷ್ಟು ಪ್ರತಿಭಾವಂತರಲ್ಲದಿದ್ದರೂ ಸ್ವಾನುಭವದ ಆಕರದಿಂದ ಶಕ್ತಿಪಡೆದ ಕೆ.ಎನ್. ವೆಂಕಟಸುಬ್ಬರಾವ್ (‘ಇಂದ್ರಪ್ರಸ್ಥ’), ಶಿವರಾಮು ಕಾಡನಕುಪ್ಪೆ (‘ವಸುಂಧರೆ’), ಶಶಿಧರ ವಿಶ್ವಾಮಿತ್ರ (‘ಖಿಲ’, ‘ಶಿಥಿಲ’ ಮತ್ತು ‘ಮುಸ್ಸಂಜೆ’) ಮುಂತಾದವರು ಇಂಥ ರಾಜಕೀಯವನ್ನು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಾಗಿದೆ. ಬೋರಲಿಂಗಯ್ಯನವರ ‘ಆನೆ ಕಾಡು’ ಈ ಸಮಸ್ಯೆಯನ್ನು ಕರ್ನಾಟಕ, ಕೇರಳ ಮತ್ತು ತಮಿಳುನಾಡುಗಳಲ್ಲಿ ಹರಡಿಕೊಂಡಿರುವ ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತಿರುವ ಗಿಡಮರಗಳು, ಪ್ರಾಣಿ-ಪಕ್ಷಿಗಳು ಮತ್ತು ಅವುಗಳಂತೆಯೇ ಯಾವುದೇ ಗಡಿಗೆರೆಗಳ ಕಲ್ಪನೆಯೂ ಇಲ್ಲದ ಜೇನುಕುರುಬರ ಸಮುದಾಯಗಳ ಮುಗ್ಧ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ.
ಈ ಕಾದಂಬರಿಯದು ಕಾಡುಗಳ್ಳ ವೀರಪ್ಪನ್ ಸಾವಿನ ನಂತರದ ಕಾಲ. ಮಾಸ್ತಿಯವರ ‘ಕಾಕನಕೋಟೆ’ ನಾಟಕದ ಕುರುಬರಿಗೂ ಇವರಿಗೂ ಶತಮಾನಗಳ ಅಂತರವಿದೆ. ಇವರು ಆಧುನಿಕ ಕಾಲದ ‘ಪ್ರಗತಿ’ ಪರಿಕಲ್ಪನೆಯ ಫಲಾನುಭವಿಗಳೂ ಹೌದು, ಬಲಿಪಶುಗಳೂ ಹೌದು. ಏಕೆಂದರೆ, ಆಧುನಿಕ ಶಿಕ್ಷಣವು ಗಣಪತಿಯಂತಹ ಜನಪರ ನಾಯಕನನ್ನು ಸೃಷ್ಟಿಸಬಲ್ಲುದು ಎಂಬುದನ್ನು ಬೋರಲಿಂಗಯ್ಯನವರು ಒಪ್ಪಿಕೊಳ್ಳುತ್ತಾರೆ. ಆದರೆ, ಆ ಶಿಕ್ಷಣವು ಗ್ರಾಮೀಣ ಮುಗ್ಧತೆಯಿಂದ ದೂರ ಕರೆದೊಯ್ಯವುದೆನ್ನುವುದನ್ನೂ ಆ ಗಣಪತಿಯೇ ಮನಗಾಣುತ್ತಾನೆ. ಅದೇ ಗಣಪತಿ ‘ಎನ್ ಕೌಂಟರ್’ ಸಾವಿನ ಆಚೆ ಈಚೆ ಚಲಿಸುವ ದುರಂತವನ್ನೂ ಕಾದಂಬರಿಯು ಹಿಡಿಯುತ್ತದೆ. ಹೀಗೆ ಮೇಲೆ ನೋಡಲು ಸರಳ ನೇರ ನಿರೂಪಣೆಯಂತೆ ಕಂಡರೂ ಸನ್ನಿವೇಶದ ಸಂಕೀರ್ಣತೆಯು ಕಾದಂಬರಿಯಲ್ಲಿ ವೇದ್ಯವಾಗುತ್ತದೆ.
‘ಆನೆ ಕಾಡು’ ಜೇನುಕುರುಬರ ಸಮುದಾಯ, ಕುಟುಂಬ ಮತ್ತು ವ್ಯಕ್ತಿಗಳ ಅಂತೆಯೇ ಅವರು ಜೀವಿಸುವ ಭೂಪ್ರದೇಶದ ದುರಂತವನ್ನು ನಿರೂಪಿಸುವ ನೇರವಾದ ಕಥನ. ಸರ್ಕಾರ ಮತ್ತು ಹೋರಾಟಗಾರರ ಘೋಷಿತ ಉದ್ದೇಶಗಳು ಒಂದೇ ಎನಿಸಿದರೂ ಅವುಗಳ ನಡುವೆ ಇರುವ ವಿರೋಧಕ್ಕೆ ಕಾದಂಬರಿ ಕನ್ನಡಿ ಹಿಡಿಯುತ್ತದೆ. ಪೀಳಿಗೆಗಳ ಚಲನಶೀಲತೆಯ ಗುಣಾತ್ಮಕ ಮತ್ತು ಋಣಾತ್ಮಕ ಅಂಶಗಳೆರಡನ್ನೂ ಕಾದಂಬರಿಯು ಚಿತ್ರಿಸುತ್ತದೆ.
ನಮ್ಮ ಕಾಲವು ಆರಿಸಿಕೊಂಡಿರುವ ‘ಪ್ರಗತಿ’ಯ ಪರಿಕಲ್ಪನೆಯು ಈಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಗೆ ವಸ್ತುವಾಗಿದೆ. ಇದನ್ನು ಭಾವುಕವಾದ ದೇಶೀವಾದದ ಹಿನ್ನೆಲೆಯಲ್ಲಿ ನೋಡಿ ಆಳುವ ಶಕ್ತಿಗಳ ಸಂಗಡ ಸಂಧಾನ ಮಾಡುವುದು ಈಗ ಜನಪ್ರಿಯವಾಗಿರುವ ಸಾಧ್ಯತೆ.
ಬದಲಾಗಿ ಜಾಗತೀಕರಣಕ್ಕೆ ಕಾರಣವಾಗಿರುವ ಬಂಡವಾಳಶಾಹೀ ಶಕ್ತಿಗಳ ನಿಯಂತ್ರಣದಲ್ಲಿರುವ ತಂತ್ರಜ್ಞಾನದ ದುರ್ಬಳಕೆ ಮತ್ತು ರಾಜಕೀಯ ಪಕ್ಷಗಳ ಆಷಾಢಭೂತಿತನವನ್ನು ಮನಗಂಡು ಅವುಗಳ ಜೊತೆಗೆ ನೇರವಾದ ಸಂಘರ್ಷಕ್ಕೆ ಇಳಿಯುವುದು ಹಾದಿ. ಉಪಭೋಗವನ್ನೇ ಬೋಧಿಸಿ ಕೊಳ್ಳುಬಾಕ ಸಂಸ್ಕೃತಿಯನ್ನು ಸೃಷ್ಟಿಸುವ ವಾಣಿಜ್ಯ-ಮಾಧ್ಯಮಗಳ ಹುನ್ನಾರ ಜನಸಾಮಾನ್ಯರನ್ನೂ ತನ್ನ ಬಲೆಯೊಳಗೆ ಸಿಕ್ಕಿಸಿಕೊಂಡಿದೆ. ಅಲ್ಲದೆ ಹಲವು ಬಗೆಯ ಸೌಕರ್ಯಗಳನ್ನು ನೀಡುವ ತಂತ್ರಜ್ಞಾನದ ಸೂಕ್ತ ಬಳಕೆ ಸಾಧ್ಯವೇ ಹೊರತು ಸಂಪೂರ್ಣ ನಿರಾಕರಣೆಯಲ್ಲ. ಈ ಕಾದಂಬರಿಯಲ್ಲಿ ಬರುವ ಜೇನುಕುರುಬರೂ ಸೇರಿದಂತೆ ನಾವೆಲ್ಲರೂ ಇದಕ್ಕೆ ಮರುಳಾದವರೇ. ಇದು ನಾಗರಿಕತೆಯು ನಡೆಯುವ ಹಾದಿ. ‘ಅನ್ಯ’ದ ಮಧ್ಯಪ್ರವೇಶ ಮತ್ತು ಅತಿಕ್ರಮಣಗಳು ಇಲ್ಲದಿದ್ದರೆ, ಗಿರಿಜನರ ಜೀವನಕ್ರಮವು ಆಧುನಿಕತೆ ಮತ್ತು ದೇಶೀಮೌಲ್ಯಗಳನ್ನು ಉಳಿಸಿಕೊಳ್ಳುವುದು ಅಸಾಧ್ಯವೇನೂ ಅಲ್ಲ. ‘ಆಧುನಿಕತೆ’ ಎಂಬ ಪದದ ನಿಜವಾದ ಅರ್ಥೈಸುವಿಕೆ ನಡೆಯಬೇಕು. ಆ ನೆಲೆಯಲ್ಲಿ ಬಹಳ ಪಾಸಿಟಿವ್ ಆಗಿ ಆಧುನಿಕರಾದ ಗಾಂಧಿ, ಅಂಬೇಡ್ಕರ್ ಮತ್ತು ಕುವೆಂಪು ಅವರು ಗಣಪತಿಯ ಆದರ್ಶಗಳಾಗಿರುವುದು ಆಕಸ್ಮಿಕವೇನೂ ಅಲ್ಲ. ಈ ಕಾದಂಬರಿ ಇಂಥ ವಿಷಯಗಳನ್ನು ನೇರವಾಗಿ ಡಿಬೇಟಿನಂತೆ ಚರ್ಚಿಸದಿದ್ದರೂ ಓದುಗರ ಮನಸ್ಸಿನಲ್ಲಿ ಅಂತಹ ವಾಗ್ವಾದಗಳಿಗೆ ಎಡೆ ಮಾಡಿಕೊಡುತ್ತದೆ.
ಜೇನುಕುರುಬರ ಸಮುದಾಯದ ಚಲನಶೀಲ ನೆಲೆಗಳ ಚಿತ್ರಣ ಈ ಕಾದಂಬರಿಯ ಕೇಂದ್ರಗಳಲ್ಲಿ ಒಂದು. ಹಾಗೆಂದರೂ ಇದು ‘ಹರಕೆಯ ಕುರಿ’ಯಂತೆ ಬಲಿಯಾಗಿಯೋ ಬದಲಾಗಿಯೋ ನಾಶವಾಗುತ್ತಿರುವ ಹಲವು ಸಮುದಾಯಗಳ ಪ್ರತಿನಿಧಿಯಾಗಿದೆ. ಇಂಥ ಸಮುದಾಯಗಳ ಬಗ್ಗೆ ಮಾತನಾಡುವಾಗ ಮಹಾಶ್ವೇತಾದೇವಿ (ಬಂಗಾಳಿ) ಮತ್ತು ಗೋಪಿನಾಥ ಮೊಹಂತಿಯವರ (ಒರಿಯಾ) ಪ್ರಸ್ತಾಪ ಮಾಡದಿರುವುದು ಸಾಧ್ಯವೇ ಇಲ್ಲ. ಮೊಹಂತಿಯವರ ‘ಪರಜ’ ಮತ್ತು ಮಹಾಶ್ವೇತಾ ಅವರ ‘ದೋಪ್ದಿ’ ಮುಂತಾದ ಕೃತಿಗಳು ನಿಜವಾದ ಜಲಚಿಹ್ನೆಗಳು. ಅವುಗಳಿಗೆ ಹೋಲಿಸಿದರೆ ನಮ್ಮ ಕಾರಂತರ ‘ಕುಡಿಯರ ಕೂಸು’ ಪೇಲವವೆನಿಸುತ್ತದೆ. ಇಂಥ ಸಮುದಾಯಗಳ ಚಲನಶೀಲತೆಯನ್ನು ಅವರದೇ ಕಣ್ಣುಗಳಿಂದ ನೋಡುವ ಪ್ರಯತ್ನವು ಕಷ್ಟ. ಹೊರಗಿನವರು ಗ್ರಹಿಸುವುದು ಇನ್ನಷ್ಟು ಕಷ್ಟ. ಅವರಲ್ಲಿಯೇ ಪೀಳಿಗೆಯಿಂದ ಪೀಳಿಗೆಗೆ ಅನುಭವ ಮತ್ತು ಅನಿಸಿಕೆ ಎರಡೂ ಬದಲಾಗುತ್ತವೆ.
ಈ ಕಾದಂಬರಿ ಅಂಥ ಬದಲಾವಣೆಯು ಏಕಮುಖವಲ್ಲವೆಂದೂ ಹೇಳುತ್ತದೆ. ಉದಾಹರಣೆಗೆ, ಕಾದಂಬರಿಯ ಮುಖ್ಯಪಾತ್ರಗಳಾದ ಗಣಪತಿ, ಸೋಮ, ಜಾಜಿ, ಚಂದ್ರ ಮುಂತಾದವರು ನಾಗರಿಕತೆಯ ಪ್ರಲೋಭನವನ್ನು ಮೀರಿಯೂ ಅದರಿಂದ ಪಾಠ ಕಲಿತು, ನಿಸರ್ಗಕ್ಕೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರೆ, ಅವರ ಹಿಂದಿನ ಪೀಳಿಗೆಯ ಗೌರಿ, ಮುಂತಾದವರು ನಾಗರಿಕತೆಗೆ ಮರುಳಾಗಿದ್ದಾರೆ. ಅವರನ್ನು ನಿಂದಿಸುವಂತೆಯೂ ಇಲ್ಲ. ಕಾಕನಕೋಟೆಯ ಮಲ್ಲಿಗೆಗೂ ಆ ಆಕರ್ಷಣೆ ತಪ್ಪಲಿಲ್ಲ. ದ್ವೀಪಸಮವಾದ ಬದುಕು ಯಾವ ಸಮುದಾಯಕ್ಕೂ ಸಾಧ್ಯವಿಲ್ಲ. ಅದರಲ್ಲಿಯೂ ಅವರ ಸುತ್ತ ಹರಡಿಕೊಂಡಿರುವ ನೈಸರ್ಗಿಕ ಸಂಪನ್ಮೂಲಗಳೇ ಅವರ ದುರಂತಕ್ಕೆ ಕಾರಣವಾಗುವ ಶಕ್ತಿಗಳನ್ನು ಆಕರ್ಷಿಸುತ್ತದೆ.
ಇಂಥ ಸಮಸ್ಯೆಯ ಪರಿಹಾರಗಳನ್ನು ಒಬ್ಬ ಕಾದಂಬರಿಕಾರರು ಕೊಡಲಾರರು. ಸಾವಿರಾರು ವರ್ಷಗಳ ಹಿಂದೆಯೇ ಏಕಲವ್ಯನು ಅನುಭವಿಸಿದ ದುರಂತವನ್ನು ಕಟ್ಟಿಕೊಟ್ಟ ‘ಬೆರಳ್ಗೆ ಕೊರಳ್’ ನಾಟಕದ ಕುವೆಂಪು ಕೂಡ ಈ ವಿಷಯದಲ್ಲಿ ಅಸಹಾಯಕರೇ. ಲೇಖಕ ಬಿಕ್ಕಟ್ಟುಗಳು ಮತ್ತು ದುರಂತಗಳನ್ನು ದಾಖಲೆ ಮಾಡಬಲ್ಲ, ಅಷ್ಟೆ. ಜೇನುಕುರುಬರ ಭಾಷೆಯನ್ನು -ಅದು ಇರುವ ಹಾಗೆ- ಬಳಸುವುದು ಕೂಡ ನಮಗೆ ಸಾಧ್ಯವಾಗುವುದಿಲ್ಲ. ಕನ್ನಡದ ಸೃಜನಶೀಲತೆಯು ಅದೆಲ್ಲವನ್ನೂ ಒಳಗೊಳ್ಳುವಷ್ಟು ಮುಕ್ತವಾಗುವ ಹೊತ್ತಿಗೆ ಅಂಥ ಅನುಭವಲೋಕವುಳ್ಳ ಗಿರಿಜನರೇ ಕಾಲವಾಗಿರುತ್ತಾರೆ; ಈ ಕಾದಂಬರಿಯ ದೊಡ್ಡಯ್ಯನ ಹಾಗೆ. ತೇಜಸ್ವಿಯವರ ಮಂದಣ್ಣನನ್ನು ನೆನಪಿಗೆ ತರುವ ದೊಡ್ಡಯ್ಯ ಹಳತು ಹೊಸತರ ನಡುವಿನ ಕೊಂಡಿಯಾಗಿ, ಕಳೆದುಹೋಗುತ್ತಿರುವ ಜ್ಞಾನದ ತಂಗುದಾಣವಾಗಿ ತನ್ನ ತಿಳಿವಳಿಕೆ, ಬದ್ಧತೆ ಮತ್ತು ಮುಗ್ಧತೆಗಳಿಂದ ಗಮನ ಸೆಳೆಯುತ್ತಾನೆ. ಅವನು ಆದಿಮ ವಿವೇಕದ ಸಂಕೇತ. ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ಖಂಡಗಳ ಲಕ್ಷ ಲಕ್ಷ ಮೂಲನಿವಾಸಿಗಳಂತೆ ಇವರಿಗೂ ‘ನೆನಪು’ಗಳಾಗಿ ಉಳಿಯುವ ಅವಕಾಶವೂ ಸಿಗುವುದಿಲ್ಲವೇನೋ! ಮೌಲ್ಯವ್ಯವಸ್ಥೆಗಳ ನಡುವೇ ತಾಕಲಾಟ ಬಂದಾಗ ಬಲಿಷ್ಠನದೇ ಬದುಕು. ಆ ದಿಕ್ಕಿನಲ್ಲಿ ‘ಆನೆ ಕಾಡು’ ಅಳಿದುಳಿದ ನೆನಪುಗಳನ್ನು ಕಟ್ಟಿಕೊಡುವ ಕೆಲಸವನ್ನು ಸಮರ್ಥವಾಗಿ ಮಾಡಿದೆ.
ಸಮುದಾಯದ ಕಥೆಯನ್ನು ಕಟ್ಟಿಕೊಡುವಾಗ ರಕ್ತಮಾಂಸಗಳಿಲ್ಲದ ಕೈಗೊಂಬೆ ಪಾತ್ರಗಳನ್ನು ಕಟ್ಟಿಕೊಡುವ ದಾರಿ ಸೃಜನಶೀಲತೆಗೆ ಹೊಂದಿಕೊಳ್ಳುವುದಿಲ್ಲ. ಈ ಕಾದಂಬರಿ ಜೇನುಕುರುಬರ ಸಮುದಾಯದ ಭಿತ್ತಿಯಲ್ಲಿ ಎರಡು ಕುಟುಂಬಗಳ ಏಳುಬೀಳುಗಳ ಕಥೆಯನ್ನು ಹೇಳುತ್ತದೆ. ಆ ಕುಟುಂಬಗಳ ಪ್ರತಿಯೊಬ್ಬ ವ್ಯಕ್ತಿಗೂ ಭಿನ್ನವಾದ ವಿಶಿಷ್ಟವಾದ ವ್ಯಕ್ತಿತ್ವಗಳನ್ನು ಕೊಡಲಾಗಿದೆ. ಯಾರೂ ಕೂಡ ಮೊದಲೇ ನಿಶ್ಚಿತವಾದ ಸ್ಟೀರಿಯೋಟೈಪುಗಳಲ್ಲ. ಜಾಜಿಯ ಮನಸ್ಸಿನ ಆಧುನಿಕತೆ, ಮುಗ್ಧತೆ, ಪ್ರೇಮ, ಹುಸಿಮುನಿಸು, ಮುನಿಸು, ಆತಂಕ ಮುಂತಾದ ಭಾವಗಳನ್ನು ಬಹಳ ಸಹಜವಾಗಿ ಚಿತ್ರಿಸಲಾಗಿದೆ. ಅವಳ ತಾಯಿ, ತಂದೆ, ಗಂಡ, ಮಾವ, ಅಣ್ಣ ಎಲ್ಲರೂ ಅವಳ ಸ್ವಭಾವದ ಮೂಲನೆಲೆಗಳಿಗೆ ಧಕ್ಕೆ ತರುವುದಿಲ್ಲ. ಆದರೂ ಅವಳು ಸಹಜವಾಗಿಯೇ ಬೆಳೆಯುತ್ತಾಳೆ, ಬದಲಾಗುತ್ತಾಳೆ. ಉಳಿದ ಪಾತ್ರಗಳ ಬಗ್ಗೆಯೂ ಇದೇ ಮಾತನ್ನು ಹೇಳಬಹುದು. ಈ ಕುಟುಂಬಗಳೂ ನಮ್ಮ ಊರು, ಕೇರಿ, ನಗರಗಳ ಕುಟುಂಬಗಳಂತೆಯೇ ಎಂದು ನಮಗೆ ಅನಿಸಿದರೆ, ಅದು ಸಹಜ.
ಈ ಕಾದಂಬರಿಯಲ್ಲಿ ನಿಸರ್ಗ ವರ್ಣನೆ ಮತ್ತು ಅದರ ಸಂರಕ್ಷಣೆ ಎರಡೂ ಭಿನ್ನವಾಗಿಯೇ ಬರುತ್ತವೆ. ದಟ್ಟವಾದ ಕಾಡುಗಳ ನಡುವೆ ಅಡಗಿರುವ ಭೂ-ಹರಹು, ಸಸ್ಯಲೋಕ, ಪ್ರಾಣಿಲೋಕಗಳ ವರ್ಣನೆಗಿಂತ ಅವು ಅಲ್ಲಿ ವಾಸಿಸುವ ಮನುಷ್ಯರೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧವೂ ಮುಖ್ಯವಾಗುತ್ತದೆ. ಆನೆ ‘ಮಾದ’ನಿಗೂ ಅದನ್ನು ಪ್ರೀತಿಸುವ ಸೋಮನಿಗೂ ವ್ಯತ್ಯಾಸವೇ ಇಲ್ಲ. ಅವರಿಬ್ಬರ ಪ್ರಣಯ ವಿವರಗಳನ್ನೂ ಸಮಸಮವಾಗಿಯೇ ವರ್ಣಿಸಲಾಗಿದೆ. `ಮಾದ’ನಿಗೆ ‘ಅಭಿಮನ್ಯು’ವೆಂಬ ಹೊಸ ಹೆಸರು ಕೊಟ್ಟಾಗ, ಅವರೆಲ್ಲರ ಪ್ರತಿಕ್ರಿಯೆ ಬಹಳ ಸಹಜವಾಗಿದೆ. ನಿಸರ್ಗವನ್ನು ಬಳಸುತ್ತಲೇ ಪೊರೆಯುವ, ಪೊರೆಯುತ್ತಲೇ ಬಳಸುವ, ಅದರ ಸಂಗಡ ಜೀವಿಸಲು ಅಗತ್ಯವಾದ ಕೌಶಲ್ಯಗಳನ್ನು ಸಹಜವಾಗಿಯೇ ರೂಪಿಸಿಕೊಂಡಿರುವ ಜೇನುಕುರುಬರು ಬಾಣಗಳಿಂದ ಜೇನುಗಳನ್ನು ಕೆರಳಿಸಿ ಆ ಮೂಲಕ ಕಾಡುಗಳ್ಳರನ್ನು ಸೋಲಿಸುವ ಕೆಲಸವು ಕೇವಲ ಜಾಣತನವಲ್ಲ. ಅದು ನೆಲಮೂಲದ ತಿಳಿವಳಿಕೆಗೂ ಆಧುನಿಕ ತಂತ್ರಜ್ಞಾನಕ್ಕೂ ನಡೆಯುವ ಮುಖಾಮುಖಿ. ದುರಂತವೆಂದರೆ ಈ ಮುಖಾಮುಖಿಯಲ್ಲಿ ಕೊನೆಗೂ ಗೆಲುವು ಸಿಗುವುದು ಆಧುನಿಕತೆಗೆ. ಜೇನುಕುರುಬರ ಗೆಲುವು ಆಕಸ್ಮಿಕ ಮತ್ತು ತಾತ್ಕಾಲಿಕ. ಇಲ್ಲಿ ಕೆಲವು ಕಡೆ ನಿಸರ್ಗದ ಬಗ್ಗೆ ಉಪನ್ಯಾಸದಂತಹ ವಾದಸರಣಿಯನ್ನು ಮಂಡಿಸುವ ಉಮೇದನ್ನು ನಿಯಂತ್ರಿಸಲು ಕಾದಂಬರಿಕಾರರಿಗೆ ಸಾಧ್ಯವಾಗಿಲ್ಲ.
ಕಾದಂಬರಿಯ ಸಾಕಷ್ಟು ಭಾಗವು ಅರಣ್ಯ ಇಲಾಖೆಯ ಅಧಿಕಾರವರ್ಗ, ಕೇರಳಮೂಲದ ಕಾಡುಗಳ್ಳರು, ಅವರ ಪಿತೂರಿಗಳು, ‘ಹನಿ ಟ್ರಾಪಿಂಗ್’ ಮುಂತಾದ ಸಂಗತಿಗಳ ‘ರೋಚಕ’ವಾದ ನಿರೂಪಣೆಗೆ ಮೀಸಲಾಗಿದೆ. ಈ ಕಾಲದಲ್ಲಿಯೂ ‘ಗಿರಿವನಪ್ರಿಯ’ರಾದ ಕೆಲವರಾದರೂ ಆಧಿಕಾರಿಗಳು ಇರುವರೆಂಬ ಮತ್ತು ಅವರ ಪ್ರಾಮಾಣಿಕ ಪ್ರಯತ್ನಗಳನ್ನು ರಾಜಕಾರಣಿ-ಮೇಲಧಿಕಾರಿ-ಕಾಡುಗಳ್ಳರ ಒಳಒಪ್ಪಂದಗಳು ವಿಫಲಗೊಳಿಸುತ್ತವೆಂಬ ಸತ್ಯವನ್ನು, ಹುಸಿಯಾದ ಸುಖಾಂತಗಳಿಲ್ಲದೆ ನಿರೂಪಿಸಲಾಗಿದೆ. ಪ್ರಾಮಾಣಿಕವಾದ ಪ್ರತಿಭಟನೆಯೂ ನಿಷ್ಫಲವೇ ಆಗುತ್ತದೆ. ಇದು ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿ.
ಅರಣ್ಯಾಧಿಕಾರಿಯಾದ ಬಸವರಾಜನ ಪಾತ್ರವು ಸಂಕೀರ್ಣವಾಗಿದೆ. ಅವನ ಸ್ವಭಾವದಲ್ಲಿ ಆಗುವ ಬದಲಾವಣೆಗಳು ಮತ್ತು ಅವನ ಸಾವು ಅನುಕಂಪ ಹುಟ್ಟಿಸುತ್ತದೆ. ಈಗಾಗಲೇ ಹೇಳಿದಂತೆ ಆನೆಗಳ ಮೈಸೂರು ಯಾತ್ರೆಯೆಂಬ ಪ್ರಹಸನವು ಗಂಡಹೆಂಡಿರ ನಡುವೆ ಒಡಕು ತರುವುದರಿಂದ ಹಿಡಿದು ಗಣಪತಿಯ ಚಟುವಟಿಕೆಗಳವರೆಗೆ ಬಹಳ ಸಂಕೀರ್ಣವಾದ ಪರಿಣಾಮಗಳಿಗೆ ಕಾರಣವಾಗುತ್ತದೆ. ಅಲ್ಲಿನ ಅಧಿಕಾರಶಾಹಿಯ ವರ್ತನೆ, ಮಾವುತರಿಗೆ ಆಗುವ ದಿಗ್ಭ್ರಮೆ, ಜೇನುಕುರುಬರ ಪಡಿಪಾಟಲು ಮುಂತಾದವು ಎಲ್ಲ ಕ್ಷೇತ್ರಗಳಲ್ಲೂ ಕಲಾವಿದರಿಗಿಂತ ಕಲೆಯ ‘ಮ್ಯಾನೇಜರ್’ಗಳಿಗೆ ಹೆಚ್ಚು ಮನ್ನಣೆ ಸಿಗುವ ಪರಿಸ್ಥಿತಿಯನ್ನೇ ಹೇಳುತ್ತವೆ.
ಖೆಡ್ಡಾ ಈ ಕಾದಂಬರಿಯ ಕೇಂದ್ರ ರೂಪಕ. ಆನೆಗಳು, ಮಾವುತರು, ಕಾಡು, ಸಮುದಾಯಗಳು ಎಲ್ಲರೂ ದುಷ್ಟ ಶಕ್ತಿಗಳು ಒಡ್ಡಿದ ಖೆಡ್ಡಾದಲ್ಲಿ ಬಿದ್ದು ಗಾಯಾಳುಗಳಾಗುವವರೇ. ಆದರೆ, ನಿಜವಾದ ಖೆಡ್ಡಾ ನಡೆಯದಂತೆ ಮಾಡುವುದೇ ಕಾಡುಗಳ್ಳರ ಹುನ್ನಾರವಾಗಿರುತ್ತದೆ. ಖೆಡ್ಡಾ ನಡೆಯುವುದು ಕೂಡ ಆನೆಗಳ ಮೇಲೆ ಮಾಡುವ ಅತಿಕ್ರಮಣವೇ. ಹಾಗಾಗಿ ಆನೆಗಳ ಸ್ವಾತಂತ್ರ್ಯ ಮತ್ತು ಜೇನುಕುರುಬರ ಸ್ವಾತಂತ್ರ್ಯ ಎರಡನ್ನೂ ಕಸಿದುಕೊಳ್ಳುವ ಹಕ್ಕು ಸರ್ಕಾರವೂ ಸೇರಿದಂತೆ ಯಾರಿಗೂ ಇಲ್ಲ.
ಹಲವು ಕಾದಂಬರಿಗಳಲ್ಲಿ ಆಗುವಂತೆ ಇಲ್ಲಿಯೂ ಲೇಖಕನು ನಿರೂಪಕನಾಗಿ ಮಾತ್ರ ಇರುತ್ತಾನೆ. ಅವನ ಲೋಕದರ್ಶನವು ಘಟನೆಗಳ ಮೂಲಕವೋ ಅಥವಾ ಅಲ್ಲಿಲ್ಲಿ ಮಾಡಿಕೊಳ್ಳುವ ‘ಕಾಮೆಂಟು’ಗಳ ಮೂಲಕವೋ ಕಾಣಿಸಿಕೊಳ್ಳಬೇಕು. ಹೀಗಾದಾಗ, ಸ್ವವಿಮರ್ಶೆಯು ಹಿಂದೆ ಸರಿದು, ಅನ್ಯವಿಮರ್ಶೆಯು ಮುನ್ನೆಲೆಗೆ ಬರುತ್ತದೆ. ನಿಜಕ್ಕೂ ನೋಡಿದರೆ, ನಾವೆಲ್ಲರೂ ಈ ವ್ಯವಸ್ಥೆಯ ಫಲಾನುಭವಿಗಳೇ ಆಗಿದ್ದೇವೆ. ನಮ್ಮ ನಮ್ಮ ‘ಸುರಕ್ಷಿತ ವಲಯ’ಗಳಲ್ಲಿದ್ದು ಲೋಕವಿಮರ್ಶೆಯಲ್ಲಿ ತೊಡಗುತ್ತೇವೆ. ನಾಗರಿಕತೆಯ ಓಟವನ್ನು ತಡೆಹಿಡಿಯುವ ದಿಟವಾದ ಶಕ್ತಿಯಾಗಲೀ ಅಪೇಕ್ಷೆಯಾಗಲೀ ನಮಗೆ ಇಲ್ಲ. ಆದ್ದರಿಂದಲೇ ಕಲೆಯೆನ್ನುವ ಪ್ರಕ್ರಿಯೆಯ ಬಗ್ಗೆ ಅಂಥ ಗೌರವ ಹುಟ್ಟುವುದಿಲ್ಲ. ಕಲಾವಿದರು ಐಕಾನುಗಳಾಗುವುದು ದುರಂತವೆನ್ನಿಸುತ್ತದೆ. ಇವು ಈ ಕಾದಂಬರಿಗೆ ಸಂಬಂಧಪಟ್ಟ ಮಾತುಗಳಲ್ಲವಾದರೂ ಈ ಚರ್ಚೆಯಲ್ಲಿ ಪ್ರಸ್ತುತವೆನಿಸುತ್ತಿದೆ.
ಪ್ರೊ. ಬೋರಲಿಂಗಯ್ಯನವರು ತಡವಾಗಿಯಾದರೂ ಒಳ್ಳೆಯ ಕಾದಂಬರಿಯನ್ನು ಕೊಟ್ಟಿದ್ದಾರೆ. ಬರವಣಿಗೆಯು ಒಳಗೊಳ್ಳುವ ಅನುಭವ ವಲಯಗಳು ಮತ್ತು ಅದರಲ್ಲಿ ತೊಡಗಿಕೊಳ್ಳುವ ಸೃಜನಶೀಲತೆಯ ಪರಿ ಬದಲಾದಂತೆ ಬರವಣಿಗೆಯೂ ಹಿಗ್ಗುತ್ತದೆ. ನಮ್ಮದೇ ಸಾಧ್ಯತೆಗಳು ನಮಗೆ ಗೊತ್ತಿರುವುದಿಲ್ಲ. ತಮ್ಮ ಸುಪ್ತಪ್ರಜ್ಞೆಯನ್ನೂ ಬಳಸಿಕೊಂಡು ಲೋಕದಲ್ಲಿ ಅಡಗಿರುವ ಕಥೆಗಳನ್ನು ಕಾಣುವ, ಬೆಲೆಕಟ್ಟುವ, ಭಾಷೆಯಲ್ಲಿ ಕಟ್ಟುವ, ಲೋಕಾನುಭವಕ್ಕೆ ಸಂವಾದಿಯಾಗಿ ಕಾಲ್ಪನಿಕ ಅನುಭವಗಳನ್ನು ರೂಪಿಸಿಕೊಡುವ ಶಕ್ತಿಯು ಅವರಿಗೆ ಇನ್ನಷ್ಟು ಮತ್ತಷ್ಟು ಬರಲೆಂಬ ಹಾರೈಕೆಯೊಂದಿಗೆ ಈ ಮಾತುಗಳನ್ನು ಮುಗಿಸುತ್ತಿದ್ದೇನೆ. ನನಗೆ ಈ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಗೆಳೆಯರಿಗೆ ನಾನು ಕೃತಜ್ಞನಾಗಿದ್ದೇನೆ.





0 Comments