
ಹಿರಿಯ ಚಿಂತಕ, ಸಂಶೋದಕ ಎಂ ಎಂ ಕಲಬುರ್ಗಿ ಅವರ ಮೇಲೆ ಇಂದು ಮುಂಜಾನೆ ಅವರ ಮನೆಯಲ್ಲಿ ಅಪರಿಚಿತನಿಂದ ಗುಂಡಿನ ದಾಳಿ ಆಗಿದ್ದು ಕಲಬುರ್ಗಿಯವರು ಮೃತ ಪಟ್ಟಿದ್ದಾರೆ.
೭೬ ವರ್ಷಗಳ ಕಲಬುರ್ಗಿಯವರ ಮೇಲೆ ಧಾರವಾಡದಲ್ಲಿ ನಡೆದ ಗುಂಡಿನ ದಾಳಿ ಎಲ್ಲರನ್ನೂ ಆಘಾತಕ್ಕೊಳಪಡಿಸಿದೆ.
ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ೧೯೩೮ ನವಂಬರ ೨೮ರಂದು ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುಬ್ಬೆವಾಡ ಗ್ರಾಮದಲ್ಲಿ ಜನಿಸಿದರು. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಮುಂತಾದ ಹತ್ತು ಹಲವು ಕ್ಷೇತ್ರಗಳಲ್ಲಿ ಅವರ ಕಾರ್ಯಕ್ಷೇತ್ರ ಹರಡಿಕೊಂಡಿದ್ದವು.
1968 ರಲ್ಲಿ, ಅವರು ಸಲ್ಲಿಸಿದ, ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಬಂತು. 1962 ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು 1966 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕರಾಗಿ ನೇಮಕವಾದರು. 1998-2001 ರ ಕಾಲಾವಧಿಯಲ್ಲಿ ಕಲಬುರ್ಗಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿದ್ದರು. ಅಲ್ಲಿಯೂ ಅನೇಕ ಮಹತ್ವದ ಯೋಜನೆಗಳನ್ನು ಆಗುಮಾಡಿದ ಕಲಬುರ್ಗಿಯವರು ನಿವೃತ್ತಿಯ ನಂತರವೂ ಸಂಶೋಧನಾ ಚಟುವಟಿಕೆಗಳಲ್ಲಿಯೇ ಮಗ್ನರಾಗಿದ್ದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದರು.
ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಂಶೋಧನೆಯು ಕಲಬುರ್ಗಿಯವರ ಪ್ರಧಾನ ಆಸಕ್ತಿಯಾಗಿದೆ. ಅವರು ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೀಖನಗಳನ್ನೂ ಪ್ರಕಟಿಸಿದ್ದಾರೆ.
ಸಂಶೋಧನೆ
- ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, 1973
- ಮಾರ್ಗ’ – ನಾಲ್ಕು ಸಂಪುಟಗಳು 1988-2004
- ಐತಿಹಾಸಿಕ’, 1984
ಕೆಲವು ಸಂಶೋಧನ ಗ್ರಂಥಗಳು
- ಮಾರ್ಗ (೧,೨,೩,೪)
- ಕನ್ನಡ ಹಸ್ತಪ್ರತಿ ಶಾಸ್ತ್ರ
- ಕನ್ನಡ ಗ್ರಂಥ ಸಂಪಾದನ ಶಾಸ್ತ್ರ
- ಕನ್ನಡ ಸಂಶೋಧನ ಶಾಸ್ತ್ರ
- ಕನ್ನಡ ನಾಮವಿಜ್ಞಾನ
- ಧಾರವಾಡ ಜಿಲ್ಲೆಯ ಶಾಸನಸೂಚಿ
- ಮಹಾರಾಷ್ಟ್ರದ ಕನ್ನಡ ಶಾಸನಗಳು
- ಶಾಸನಗಳಲ್ಲಿ ಶಿವಶರಣರು
- ಶಬ್ದಮಣಿದರ್ಪಣ ಸಂಗ್ರಹ
- ಕನ್ನಡ ಕೈಫಿಯತ್ತುಗಳು
- ಕೆಳದಿ ಸಂಸ್ಥಾನ ಸಮಗ್ರ ಅಧ್ಯಯನ
- ಸ್ವಾದಿ ಅರಸು ಮನೆತನ
- ಸಾರಂಗಶ್ರೀ
ಶಾಸನಶಾಸ್ತ್ರ
ಅ. ಶಾಸನ ವ್ಯಾಸಂಗ, ಭಾಗ 1 ಮತ್ತು ಭಾಗ 2, 1974, 1975 ಆ. ಶಾಸನ ವ್ಯಾಸಂಗ: ಸಮಾಧಿ, ಬಲಿದಾನ, ವೀರಮರಣ ಸ್ಮಾರಕಗಳು, 1980 ಇ. ಶಾಸನ ಸಂಪದ, 1968 ಈ. ಧಾರವಾಡ ಜಿಲ್ಲೆಯ ಶಾಸನಸೂಚಿ, 1975
ವಿವಿಧ ಶೈಕ್ಷಣಿಕ ಶಿಸ್ತುಗಳನ್ನು ಕುರಿತ ಗ್ರಂಥಗಳು
- ಕನ್ನಡ ಗ್ರಂಥಸಂಪಾದನಶಾಸ್ತ್ರ, 1972
- ಕನ್ನಡ ಹಸ್ತಪ್ರತಿಶಾಸ್ತ್ರ
- ಕನ್ನಡ ಸಂಶೋಧನಶಾಸ್ತ್ರ
- ಕನ್ನಡ ಸ್ಥಳನಾಮವಿಜ್ಞಾನ
ಗ್ರಂಥಸಂಪಾದನೆ
ಕಲಬುರ್ಗಿಯವರು 30 ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
- ಶಿವಯೋಗ ಪ್ರದೀಪಿಕಾ, 1976
- ಕೊಂಡಗುಳಿ ಕೇಶಿರಾಜನ ಕೃತಿಗಳು, 1978
- ಬಸವಣ್ಣನ ಟೀಕಿನ ವಚನಗಳು. 1978
- ಸಿರುಮನಾಯಕನ ಸಾಂಗತ್ಯ, 1983.
ಜಾನಪದ
- ಜಾನಪದ ಮಾರ್ಗ, 1995
- ಉತ್ತರ ಕರ್ನಾಟಕದ ಜನಪದ ಸಾಹಿತ್ಯ, 1978
ಸೃಜನಶೀಲ ಬರೆಹಗಳು
- ನೀರು ನೀರಡಿಸಿತ್ತು (ಕವನಗಳು)
- ಕೆಟ್ಟಿತ್ತು ಕಲ್ಯಾಣ, (ನಾಟಕ)
ಕಲಬುರ್ಗಿಯವರ ಮರಣಕ್ಕೆ ’ಅವಧಿ’ಯ ಆಘಾತ ಮತ್ತು ಕಂಬನಿ.





ನಡೆಯಬಾರದ ದುರ್ಘಟನೆ ಇದು. ಪರಮಾತ್ಮ ಅವರ ಆತ್ಮಕ್ಕೆ ಶಾ೦ತಿಯನ್ನೀಯಲಿ.
Shocking
ಯಾವದೇ ವಿರೋಧವಿದ್ದರೂ ನೇರವಾಗಿ ಚರ್ಚೆಯ ಮೂಲಕ ಬಗೆಹರಿಸಿಕೊಳ್ಬಹುದಾಗಿತ್ತು. ವಯೋವೃದ್ಧರೂ ಜ್ಞಾನವೃದ್ಧರೂ ಆಗಿದ್ದ ಕಲಬುರ್ಗಿಯವರ ಹತ್ಯೆ ಮುಖ ಹೇಡಿಗಳ ಕೃತ್ಯವಾಗಿದ್ದು,ಹಂತಕರನ್ನು ಬರೀ ಬಂಧಿಸುವದಲ್ಲದೆ ಶೀಘ್ರ ವಾಗಿ ತೀವ್ರ ಶಿಕ್ಷೆಗೆ ಒಳಪಡಿಸಬೇಕು.
ಕರ್ನಾಟಕದಲ್ಲಿ ವಿಚಾರವಂತರಿಗೆ ಉಳಿಗಾಲವಿಲ್ಲ ಎನ್ನಲು ಕಲಬುರ್ಗಿಯವರ ಹತ್ಯೆಯೇ ನಿದರ್ಶನ. ಪನ್ಸಾರೆ ಆಯಿತು, ಧಬೋಲ್ಕರ್ ಆಯಿತು ಈಗ ಕಲಬುರ್ಗಿ. ತಮಿಳುನಾಡಿನ ಪೆರುಮಾಳ್ ಮುರುಗನ್ ತಮ್ಮೊಳಗಿನ ಸಾಹಿತಿಯನ್ನು ಸ್ವತಃ ಮೃತರೆಂದು ಘೋಷಿಸಿದ್ದರು. ಈಗ ಕರ್ನಾಟಕದ ವೈಚಾರಿಕ ಜಗತ್ತಿನ ಒಬ್ಬ ಕಣ್ಮಣಿಯನ್ನು ಪಾಪಿಗಳು ಹತ್ಯೆಗೈದಿದ್ದಾರೆ. ಹಂತಕರಿಗೆ ಶಿಕ್ಷೆಯಾಗುವುದು ಬಿಡುವುದು ನ್ಯಾಯಾಂಗಕ್ಕೆ ಬಿಟ್ಟ ವಿಚಾರ. ಇದರ ತಾರ್ಕಿಕ ಅಂತ್ಯ ಕಾಣುವವೇಳೆಗೆ ಇನ್ನೆಷ್ಟು ಕಲಬರ್ಗಿಗಳ ಹೆಣ ಉರುಳುವುದೋ ? ಆದರೆ ವೈಚಾರಿಕತೆಯನ್ನು, ವೈಜ್ಞಾನಿಕ ಮನೋಭಾವವನ್ನು ಕೊಲ್ಲುವ ಮನಸ್ಸುಗಳಿಗೆ ಶಿಕ್ಷೆಯಾಗಲೇ ಬೇಕು. ಇದು ನ್ಯಾಯಾಂಗದ ಕಟಕಟೆಯಲ್ಲಿ ಆಗುವುದಲ್ಲ. ಸಾರ್ವಜನಿಕರ ಬೌದ್ಧಿಕ ನೆಲೆಯಲ್ಲಿ ಆಗಲೇಬೇಕಾದ ತುರ್ತು ಕೆಲಸ. ಛೆ ನಾವೆಂತಹ ಅನಾಗರಿಕ ಸಮಾಜದಲ್ಲಿದ್ದೇವೆ. ಒಬ್ಬ ಭೂಮಾಲಿಕ ಕಾರ್ಮಿಕನೊಬ್ಬನ ಕೈಕತ್ತರಿಸಿ ತಲೆ ಎತ್ತಿ ತಿರುಗುತ್ತಾನೆ. ಮತ್ತೊಂದೆಡೆ ವಿಚಾರವಂತ ಸಾಹಿತಿಯೊಬ್ಬರ ಕಗ್ಗೊಲೆಯಾಗುತ್ತದೆ.
No words can in brief describe the effect of the heinous crime. It is a great shock. It is not only an act against the society, it is a crime against intellectuals. Guns may rupture the brain, but can never and never silence the grey matter in it. My sincere & heartfelt condolences to all the family members of Prof. Kalaburagi.
ಇದು ಬಹಳ ಅನ್ಯಾಯ. ಸಹಜವಾಗಿ ಸಾತ್ವಿಕರಾಗಿದ್ದ ಕನ್ನಡಿಗರಿಂದ ಅರಗಿಸಿಕೊಳ್ಳಲಾಗದ ಸತ್ಯ. ಒಬ್ಬ ನಿಷ್ಟಾವಂತ ಸಾಹಿತಿಗೆ ಇಂಥ ಅಂತ್ಯ …! ಇದು ದುರಂತ . ಈ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು . ಇನ್ನಾದರೂ ಮನಸ್ಸುಗಳು ವಿಕಾರಗೊಳ್ಳದಂತ ಹಾದಿಯಲ್ಲಿ ಮನುಕುಲ ಸಾಗಲಿ. ಅಗಲಿದ ಸಾಹಿತಿಗೆ ನೋವಿನ ನಮನಗಳು .
ಹೀಗೆ ಕೊಲೆ ಮಾಡುವವರಿಗೆ ಗಲ್ಲು ಶಿಕ್ಶೆ ಇರಬೇಕೆ ಬೇಡವೆ ಎಂಬುವುದನ್ನು ಮಾನವ ಹಕ್ಕು ಹೋರಾಟಗಾರರು, ಕಾನೂನು ಆಯೋಗ ಮತ್ತು ನ್ಯಾಯಾಲಯ ಈಗಲೇ ಎಡ-ಬಲ’ಗಡೆಯ ಪಂತದಿಂದಾಚೆಗೆ ವಾಸ್ತವದ ಬಿಂಬದ ಮೂಲಕ ಸ್ಪಶ್ಟಪಡಿಸಬೇಕು, ಮತ್ತು ಹೋರಾಟದ ಹಾದಿಯನ್ನು ನಿಲುವನ್ನು ದ್ರುಡಪಡಿಸಬೇಕು!
ಅತ್ಯಂತ ಆಘಾತಕರ ಸಂಗತಿ.
ಅವರಂತೆ ನಿಷ್ಟುರವಾಗಿ ಸತ್ಯ ನುಡಿಯುವ ಸಂಶೋಧಕರು ವಿರಳ.
ಸತ್ಯದ ಕಗ್ಗೊಲೆಗಾಗಿ ಕಂಬನಿ ಮಿಡಿಯಬೇಕಿದೆ.
ಕಲಬುರಗಿಯವರ ಕೊಲೆ ಒಂದು ಹೀನಾಯ ಕ್ರತ್ಯ. ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕಠಿಣ ಶಿಕ್ಷೆ ಎಂದರೆ ಅಪರಾಧಿಗಳಿಗೆ ಪಶ್ಚಾತ್ತಾಪ ಮತ್ತು ಈ ರೀತಿ ಯೋಚಿಸುವವರಿಗೆ ಕಾನೂನು ಕ್ರಮ ವಹಿಸುತ್ತದೆ ಎಂಬ ಎಚ್ಚರಿಕೆ ನೀಡುವಂತಿರಬೇಕು. ಆದರೆ ಅದು ಮರಣದಂಡನೆ ಖಂಡಿತ ಆಗಿರಬಾರದು.
ಕಾನೂನು ಬದ್ಧವಾಗಿಯೇ ಆಗಲಿ, ಕಾನೂನು ಬಾಹಿರವಾಗಿಯೇ ಆಗಲಿ ಒಬ್ಬ ಮನುಷ್ಯನನ್ನು ಕೊಲ್ಲುವುದನ್ನು ಒಪ್ಪಲಾಗದು.