ಹಿರಿಯರ ಸದನದಲ್ಲಿ ಬೆಂಡು ಬತ್ತಾಸಿಗೆ ರಂಪಾಟ!

ಮೀಡಿಯಾ ಮತ್ತು ರಾಜಕಾರಣಿಗಳ ಕೈಗೆ ಏನನ್ನೇ ಕೊಟ್ಟರೂ ಅದನ್ನವರು ತಮ್ಮ ಮಟ್ಟಕ್ಕೆ ಎಳೆದು ತಗ್ಗಿಸಿಕೊಳ್ಳಲು ಸಮರ್ಥರು. ಕರ್ನಾಟಕ ವಿಧಾನಮಂಡಲದಲ್ಲಿ ಹಿರಿಯರ ಸದನ ವಿಧಾನ ಪರಿಷತ್ತಿಗೆ ಒಂದು ಹಿರಿಮೆ ಇದೆ; ಚರಿತ್ರೆ ಇದೆ. ಸರಕಾರದ ನೀತಿ ಹಾಗೂ ಉದ್ದೇಶಗಳನ್ನು ಮೌಲ್ಯಮಾಪನ ಮಾಡಿ ಜನರ ಅಭಿಪ್ರಾಯವನ್ನು ಸರ್ಕಾರದ ತನಕ ತಲುಪಿಸುವ ಮಹತ್ತರವಾದ ಸಾಂವಿಧಾನಿಕ ಜವಾಬ್ದಾರಿಯೂ ಇದೆ.

ಚರಿತ್ರೆ ಗೊತ್ತಿರದ ರಾಜಕಾರಣಿಗಳು ಮತ್ತು ತಮಗೆ ಗೊತ್ತಿರುವುದು ಮಾತ್ರ ಚರಿತ್ರೆ ಎಂದುಕೊಂಡಿರುವ ಮಾಧ್ಯಮಗಳು ಸೇರಿಕೊಂಡು ಈಗ ವಿಧಾನಪರಿಷತ್ತಿನಲ್ಲಿ ಅಧ್ಯಕ್ಷಪೀಠವನ್ನು ‘ಬೆಂಡು ಬತ್ತಾಸಿನ’ ದರ್ಜೆಗಿಳಿಸಲು ಶ್ರಮಪಡುತ್ತಿವೆ. 2010ರ ಜುಲೈ 5ರಿಂದ ವಿಧಾನ ಪರಿಷತ್ತಿನ ಉಪಸಭಾಪತಿಗಳಾಗಿ ಅಧ್ಯಕ್ಷೀಯ ಪೀಠದಲ್ಲಿ ಕುಳಿತಿರುವ ಡಿ. ಎಚ್. ಶಂಕರಮೂರ್ತಿಯವರನ್ನು ಅಲ್ಲಿಂದ ಕೆಳಗಿಳಿಸಲು ತಿರುಗಣೆ ತಂತ್ರಗಳು ಆರಂಭವಾಗಿವೆ. 2018,  ಜೂನ್ ತನಕ ಸದಸ್ಯಾವಧಿ ಉಳಿದಿರುವ ಡಿ. ಎಚ್. ಶಂಕರಮೂರ್ತಿ ಅವರು ಬಿಜೆಪಿಗೆ ಸೇರಿದವರಾಗಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಆ ಸ್ಥಾನದ ಮೇಲೆ ಕಾಂಗ್ರೆಸ್ಸಿಗೆ ಕಣ್ಣಿತ್ತು. ಆದರೆ, ದುರದ್ರಷ್ಟವಶಾತ್, ಮೊನ್ನೆ ಮೊನ್ನೆಯ ತನಕವೂ ಅವರಿಗೆ ಅಗತ್ಯ ಸಂಖ್ಯಾಬಲದ ಕೊರತೆ ಇತ್ತು.

ಸಾಮಾನ್ಯವಾಗಿ, ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲದ, ಸಮರ್ಥ-ಸಂತುಲಿತ ವ್ಯಕ್ತಿಗಳನ್ನು ಈ ಸೀಟಿಗೇರಿಸುವುದು ವಾಡಿಕೆ. ಹೊರನೋಟಕ್ಕಾದರೂ ಚಿಲ್ಲರೆ ಪಕ್ಷ ರಾಜಕೀಯದಿಂದ ಮೇಲೆದ್ದು ನಿರ್ಧಾರಗಳನ್ನು ಕೈಗೊಳ್ಳಬೇಕಾಗುವ ಸೀಟದು. ಡಿ.ಬಿ. ಕಲ್ಮಣಕರ್, ಬಿ. ಎಲ್. ಶಂಕರ್, ವಿ. ಆರ್. ಸುದರ್ಶನ್… ಹೀಗೆ ಆ ಸ್ಥಾನದ ಗೌರವವನ್ನು ಉಳಿಸಿಕೊಂಡು ಬಂದ ಸಮಕಾಲೀನ ರಾಜಕಾರಣಿಗಳ ಪಟ್ಟಿಯನ್ನು ಕೊಡಬಹುದು. ಮೊನ್ನೆ ಮೊನ್ನೆಯ ತನಕ ಶಂಕರಮೂರ್ತಿಯವರೂ ಇದಕ್ಕೆ ಚ್ಯುತಿ ಮಾಡಿಲ್ಲ.

ಆದರೆ ಈಗ ಕಾಂಗ್ರೆಸ್ಸಿನಲ್ಲಿ ಆ ಸ್ಥಾನವನ್ನು ಶಂಕರಮೂರ್ತಿಯವರಿಂದ ಕಸಿದುಕೊಳ್ಳುವ ಗಡಿಬಿಡಿ ಶುರುವಾಗಿದೆ. ಜೆಡಿಎಸ್ ಮರ್ಜಿಯನ್ನು ಆಧರಿಸಿದ ತಮ್ಮ ಈ ತೆಳು ಮೇಲುಗೈಯನ್ನೇ ನಂಬಿರುವ ಕಾಂಗ್ರೆಸ್ ತನ್ನ 7 ಮಂದಿ ಶಾಸಕರ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟೀಸು ನೀಡಿದೆ. ಇದನ್ನು ರಾಜಕೀಯ ದ್ರಷ್ಟಿಯಿಂದ ಹೀಗೆ ಅರ್ಥೈಸಿಕೊಳ್ಳಬಹುದು:

1. ಇನ್ನೊಂದು ವರ್ಷದೊಳಗೆ ಚುನಾವಣೆಗಳಿರುವುದರಿಂದ, ಕಾಂಗ್ರೆಸ್ಸಿಗೆ ತನ್ನ ಸಾಮರ್ಥ್ಯದ ಬಗ್ಗೆ ಖಾಚಿತ್ಯ ಇಲ್ಲದಿರುವುದರಿಂದ ಹೇಗಾದರೂ ಮೇಲ್ಮನೆ ಅಧ್ಯಕ್ಷತೆ ಗಿಟ್ಟಿಸಿಕೊಂಡರೆ ಮುಂದೆ ಯಾವುದಕ್ಕೂ ಅನುಕೂಲ ಆದೀತೆಂಬ ಹುನ್ನಾರ.

2. ಬಿಜೆಪಿಗೆ ಕೂಡ ಈಗ ಬೀಸುವ ದೊಣ್ಣೆ ತಪ್ಪಿದರೆ ಮುಂದೆ ಚುನಾವಣೆಯಲ್ಲಿ ಫಲಿತಾಂಶ ಹೇಗೇ ಬಂದರೂ ತಮ್ಮದೊಂದು ಜನ ಆಯಕಟ್ಟಿನ ಜಾಗದಲ್ಲಿ ಉಳಿಯುತ್ತಾರೆಂಬ ಆಸೆ.

75 (ಸದ್ಯ 73) ಸದಸ್ಯಬಲದ ಮೇಲ್ಮನೆಯಲ್ಲಿ ಈಗ ಬಹುಮತಕ್ಕೆ 37 ಮತಗಳು ಬೇಕಿವೆ. ಕಾಂಗ್ರೆಸ್ ಬಳಿ 33, ಬಿಜೆಪಿ ಬಳಿ ಅಧ್ಯಕ್ಷರದೂ ಸೇರಿ 23 ಮತಗಳಿವೆ. ಇನ್ನುಳಿದ 11 ಜೆಡಿಎಸ್, 6 ಪಕ್ಷೇತರರನ್ನು ನೆನೆದುಕೊಂಡು ಎರಡೂ ಪಕ್ಷಗಳು ಮಂಡಿಗೆ ತಿನ್ನುತ್ತಿವೆ.

ಬಿಜೆಪಿಯಲ್ಲೇನು ಬೇಯುತ್ತಿದೆ?

ಪ್ರಜಾತಾಂತ್ರಿಕ ದ್ರಷ್ಟಿಯಿಂದ ಕಂಡರೆ, ಪಕ್ಷಾತೀತವಾಗಿ ನಿಲ್ಲಬೇಕಾದ ಸದನಾಧ್ಯಕ್ಷ ಪೀಠವೊಂದು ಸಂಖ್ಯೆಗಳ ರಾಜಕಾರಣಕ್ಕೆ ಈಡಾಗಿ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿರುವ ಬೇಸರದ ಸನ್ನಿವೇಶ ಇದು. ಎರಡೂ ಪಕ್ಷಗಳು ತಮ್ಮ ತಮ್ಮ ಪರವಾಗಿರುವ ಸನ್ನಿವೇಶಗಳನ್ನು ಲೆಕ್ಕಾಚಾರ ಮಾಡಿಕೊಂಡು ತಂತ್ರ ಹೆಣೆಯುತ್ತಿವೆ. ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲು ಜೆಡಿಎಸ್ ಕಡೆ ಮುಖಮಾಡಿ ನಿಂತಿದ್ದರೆ ಬಿಜೆಪಿಯಂತೂ ಶುದ್ಧ ಲೆಕ್ಕಾಚಾರಕ್ಕಿಳಿದುಬಿಟ್ಟಿದೆ. 133ನೇ ವಿಧಾನ ಪರಿಷತ್ ಅಧಿವೇಶನ ನಡೆಯಲಿರುವುದು ಜೂನ್ 5ರಿಂದ 16ರ ತನಕ. ಅಂದರೆ ಬರೇ 10 ದಿನದ ಕಲಾಪ. ನಿಯಮಗಳ ಪ್ರಕಾರ ಅವಿಶ್ವಾಸ ನೋಟೀಸಿಗೆ 14 ದಿನಗಳ ನೋಟೀಸು ಅವಧಿ ಇದೆ. ಹಾಗಾಗಿ ಈ ಅಧಿವೇಶನದಲ್ಲಿ ಆ ವಿಚಾರ ಕಲಾಪದಲ್ಲಿ ಅಳವಡಿಕೆ ಆಗಬೇಕೇ – ಬೇಡವೇ ಎಂದು ನಿರ್ಧರಿಸುವ ಅಧಿಕಾರ ಇರುವುದು ಸ್ವತಃ ಶಂಕರಮೂರ್ತಿಗಳ ಕೈಯಲ್ಲೇ. ಇನ್ನೊಂದೆಡೆ, ಯಾವುದಕ್ಕೂ ಇರಲಿ ಎಂದು ಹಳೆಯದೊಂದು ಪ್ರಯಾಣ ಭತ್ತೆ ದುರುಪಯೋಗ ಪ್ರಕರಣದಲ್ಲಿ ಎಂಟು ಮಂದಿ ಸದಸ್ಯರಿಗೆ ನೋಟೀಸನ್ನೂ ಶಂಕರಮೂರ್ತಿಗಳೇ ಜಾರಿ ಮಾಡಿದ್ದಾರೆ. ಅಂದರೆ, ಆಳುವ ಪಕ್ಷದ ಅವಿಶ್ವಾಸ ಮಂಡನೆ ಆದಾಗ  ಅಧಿಕಾರ ಬಿಟ್ಟೇಳುವ ಮೂಲಕ ಅಧ್ಯಕ್ಷ ಸೀಟಿನ ಘನತೆ ಉಳಿಸುವ ಬದಲು ಅಂಕಿ-ಸಂಖ್ಯೆಗಳ ಆಧಾರದಲ್ಲಿಸೋಲು-ಗೆಲುವು ನಿರ್ಧರಿಸಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ.

ಕಾಂಗ್ರೆಸ್ಸೇನು ಮಾಡಬಹುದು?

ಜೆಡಿಎಸ್ ಮನಸ್ಸು ಮಾಡಿದರೆ, ಕಾಂಗ್ರೆಸ್ಸು ಈ ಸೀಟು ಕದನವನ್ನು ಗೆಲ್ಲಲೂ ಬಹುದು. ಆದರೆ, ಅಲ್ಲಿ ಆ ಸೀಟಿಗೆ ಬರುವವರು ಯಾರು?  ಶಾಸಕರಿಂದ ಆಯ್ಕೆ ಆದ ಮೋಟಮ್ಮ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಆದ ಎಸ್. ಆರ್. ಪಾಟೀಲ್ ಮತ್ತು ನಾಮ ನಿರ್ದೇಶಿತ ಸದಸ್ಯ ಉಗ್ರಪ್ಪ ಅವರ ಹೆಸರುಗಳು ಚಾಲ್ತಿಯಲ್ಲಿದ್ದಂತಿದೆ. ಮೂವರೂ ರಾಜಕೀಯ ಮಹತ್ವಾಕಾಂಕ್ಷೆ ಇರುವ, ಈಗಾಗಲೇ ಹಲವು ಸ್ಥಾನಗಳನ್ನು ಅಲಂಕರಿಸಿರುವ ಸದಸ್ಯರು.

ಹಿರಿಯರ ಸದನದಲ್ಲಿ ಅತ್ಯಂತ ಹಿರಿಯ ಕಾಂಗ್ರೆಸ್ ಸದಸ್ಯರಲ್ಲಿ ಒಬ್ಬರು ಕೆ. ಪ್ರತಾಪಚಂದ್ರ ಶೆಟ್ಟಿ. ವೀರಪ್ಪ ಮೋಯಿಲಿ, ಎಚ್. ಕೆ. ಪಾಟೀಲ್ ಮೊದಲಾದ ಹಳೆಯ ತಲೆಮಾರಿನವರ ಸಮಕಾಲೀನರಾಗಿರುವ, ಸದನಪಟುತ್ವಕ್ಕೆ ಸಂಬಂಧಿಸಿ ಬಹಳ ಒಳ್ಳೆಯ ದಾಖಲೆ ಇರುವ, ಬಾಯಿಬಿಟ್ಟು ಕೇಳಿರದ ಕಾರಣ 30ವರ್ಷಗಳ ಜನಪ್ರತಿನಿಧಿ ಬದುಕಿನಲ್ಲಿ ಈವತ್ತಿನ ತನಕ ಯಾವುದೇ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸದ, ಎರಡು ಬಾರಿ ಸಚಿವ ಹುದ್ದೆಯನ್ನು ಬಾಯಿಮುಚ್ಚಿ ತ್ಯಾಗ ಮಾಡಿದ ಅತ್ಯಂತ ಹಿರಿಯ ಸದಸ್ಯರವರು. ಮೊನ್ನೆಯಷ್ಟೇ ಆಯ್ಕೆ ಆಗಿ, 2022ರ ತನಕ ಸದಸ್ಯಾವಧಿ ಇರುವ ಪ್ರತಾಪಚಂದ್ರ ಶೆಟ್ಟಿ ಹೆಚ್ಚಿನಂಶ ಹಿರಿಯರ ಸದನದ ಅಧ್ಯಕ್ಷತೆಗೆ ಅತ್ಯಂತ ಸೂಕ್ತ, ಸಂತುಲಿತ ಆಯ್ಕೆ. ಆದರೆ, ಲಾಬಿ ಮಾಡುವ ಅಭ್ಯಾಸ ಇರದ ಅವರನ್ನು ಪರಿಗಣಿಸುವ ಮೂಲಕ, ಅಧ್ಯಕ್ಷ ಪೀಠಕ್ಕೆ ತಾನು ಮಂಡಿಸಿರುವ ಹಕ್ಕನ್ನು ಕಾಂಗ್ರೆಸ್ ಸಮರ್ಥಿಸಿಕೊಂಡೀತೇ ಎಂಬುದನ್ನು ಕಾದು ನೋಡಬೇಕಿದೆ.

‍ಲೇಖಕರು avadhi

June 5, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: