ಹಿಡಿಸಿದಷ್ಟೆ ಸಾಕು ಹಿತವಾದ ಉಪ್ಪಿಟ್ಟು

ಸುಮಾವೀಣಾ

ಮಂಗಳೂರಿನ ಮತ್ಸ್ಯಾಹಾರ
ಕೊಡಗಿನ ಕಟು ಕಾಫಿನೀರಾ
ಮೈಸೂರಿನ ಇಡ್ಡಲಿ, ದ್ವಾಶಿ, ಬಳ್ಳಾರಿಯ ಅನ್ನದ ರಾಶಿ!
ಕಲುಬುರಗಿಯಲಿ ಕಂದೂರಿ ಬೆಳಗಾವಿಯಲಿ ಬುರಬುರಿ
ಧಾರವಾಡದ ಅವಲಕ್ಕಿ, ಕಾರವಾರದ ತಾಳೆಚಕ್ಕಿ
ವಿಜಾಪುರದ ಬಣಬಣ ರೊಟ್ಟಿ! ನೆನಪಾದರ
ಉರೀತದ ಹೊಟ್ಟೀ!
ಆಂಬೊಡೆ ಉಪ್ಪಿಟ್ಟಿನ ದೇಶ! ನಾನಾವಿಧ ತಿಂಡಿಯ ಕೋಶ
ಹೆರೆತುಪ್ಪ ಕಡುಬಿನ ಬೀಡು! ಎನ್ನದು ಕನ್ನಡ ನಾಡು!

ಇದು ಶ್ರೀಮತಿ ಜೋತ್ಸ್ನಾ ಕಾಮತ್ ಬರೆದಿರುವ ಕನ್ನಡ ನಾಡಿನ ಉಪಹಾರಗಳ ವೈವಿಧ್ಯತೆಯನ್ನು ಹೇಳುವ ವಿನೋದದ ಹಾಡು. ಇಲ್ಲಿ “ಉಪ್ಪಿಟ್ಟಿನ ದೇಶ” ಎಂದಿರುವುದು ಉಪ್ಪಿಟ್ಟು. ಭಾರತ ಉಪಖಂಡದ ಪ್ರಮುಖ ತಿಂಡಿ ಎನ್ನುವ ಅರ್ಥದಲ್ಲೇ.. ಕೇರಳ, ಆಂಧ್ರ, ತಮಿಳುನಾಡು , ಕರ್ನಾಟಕ, ಮಹಾರಾಷ್ಟ್ರ, ಒರಿಸ್ಸಾ ಮತ್ತು ಶ್ರೀಲಂಕಾದ ತಮಿಳಿಗರ ಬೆಳಗಿನ ತಿಂಡಿಯ ಪಟ್ಟಿಯಲ್ಲಿ ಹಾಗೂ ಎಲ್ಲಾ ದಕ್ಷಿಣ ಭಾರತದ ಉಪಹಾರ ಮಂದಿರಗಳ ದರ್ಶಿನಿಗಳ ಪಟ್ಟಿಯಲ್ಲಿ “ಉಪ್ಪಿಟ್ಟು” ಸರ್ವೇ ಸಾಮಾನ್ಯವಾಗಿರುತ್ತದೆ.

ಹುರಿದ ರವೆ, ಅಕ್ಕಿ ತರಿ, ಗೋಧಿ(ಧಲಿಯಾ) ನುಚ್ಚಿನಿಂದ ಮಾಡುವ ತಿಂಡಿ. ಸೂಜಿ, ಸಿಮೊಲಿನ ಎಂಬ ಹೆಸರುಗಳೂ ರವೆಗೆ ಇವೆ. ಸಾಮಾನ್ಯವಾಗಿ ರವೆ ಎಂದು ಕರೆದರೂ ಬನ್ಸಿ ರವೆ, ಮೀಡಿಯಮ್ ರವೆ ಅಥವಾ ಉಪ್ಪಿಟ್ ರವೆ, ಫೇಣಿರವೆ, ಅಥವಾ ಚಿರೋಟಿ ರವೆಗಳು ಇದರ ಬಗೆಗಳು.

ಸಿರಿ ಧಾನ್ಯಗಳಿಂದಲೂ ಉಪ್ಪಿಟ್ಟು ಮಾಡುವುದಿದೆ. ಮರಾಠಿಯಲ್ಲಿ ಉಪೀಟ್, ಕೊಂಕಣಿಯಲ್ಲಿ ರುಲ್ನವ್,ಹಿಂದಿ,ಒಡಿಯ, ಬೆಂಗಾಲಿ,ಗುಜರಾತಿ ಭಾಷೆಗಳಲ್ಲಿ ಉಪ್ಮಾ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುತ್ತಿದೆ. ಉಪ್ಮಾ ಈ ಪದದ ಮೂಲವನ್ನು ತಮಿಳಿನ ಹಿನ್ನೆಲೆಯಲ್ಲಿ ಹೇಳುವುದಾದರೆ ‘ಮಾವು’ ಎಂದರೆ ಹಿಟ್ಟು ಅದರ ಜೊತೆಗೆ ಉಪ್ಪು ಸೇರಿ ಉಪ್ಮಾವು>ಉಪ್ಮಾ ಆಯಿತು ಎನ್ನುತ್ತಾರೆ.

ತೆಲುಗಿನಲ್ಲಿ ಉಪ್ಪಿಂಡಿ ಎನ್ನುತ್ತಾರೆ. ಉಪ್ಪಿಂಡಿ ಎಂದರೆ ತೆಲುಗಿನಲ್ಲಿ ಮೂಲತಃ ವಿಧವೆಯರ ಊಟ ಎಂದರ್ಥವಾಗುತ್ತದೆ. ಅವರು ಆ ಕಾಲದಲ್ಲಿ ಮಸಾಲೆ, ಪದಾರ್ಥಗಳನ್ನು ಸೇವಿಸುವಂತಿರಲಿಲ್ಲ. ಹೊಟ್ಟೆ ತುಂಬಾ ಉಟವನ್ನೂ ಮಾಡುವಂತಿರಲಿಲ್ಲ. ಅವರು ಅಕ್ಕಿಯನ್ನು ನೀರಿನಲ್ಲಿ ತೊಳೆದು ಅದನ್ನು ಒಣಗಿಸಿ ಅದರ ಪುಡಿಯನ್ನು, ಅಂದರೆ ರವೆಯನ್ನು ಉಪ್ಪು ಸೇರಿಸಿ ಕೇವಲ ನೀರಿನಲ್ಲಿ ಬೇಯಿಸಿ ತಿನ್ನುತ್ತಿದ್ದರು.

ಹಿಂದಿನ ಕಾಲದಲ್ಲಿ ವಿಧವೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರಲು ಬಿಡುತ್ತಿರಲಿಲ್ಲ. ಅವರಿಗೆ ಹೇರುತ್ತಿದ್ದ ನಿರ್ಬಂಧಗಳಲ್ಲಿ ಆಹಾರದ್ದೂ ಒಂದು. ಪ್ರಾಪಂಚಿಕ ಆಸಕ್ತಿಗೆ ಅವರು ಒಳಗಾಗದಂತೆ ತಡೆಯುವ ಪ್ರಯತ್ನ ಇದಾಗಿತ್ತು ಎಂಬುದಾಗಿ ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಇದನ್ನು ವಿಶ್ಲೇಷಣೆ ಮಾಡಬಹುದು.

ಕನ್ನಡದಲ್ಲೂ ‘ಉಪ್ಪು’ ಮತ್ತು ‘ಹಿಟ್ಟು’ ಸೇರಿ ಉಪ್ಪಿಟ್ಟಾಗಿದೆ. ಉಪ್ಪಿಟ್ಟನ್ನು ಖಾರಾಭಾತ್ ಎಂದೂ ಕರ್ನಾಟಕದಲ್ಲಿ ಕರೆಯುತ್ತಾರೆ. ಸಿಹಿಯಾಗಿ ಮಾಡಿದರೆ ‘ಕೇಸರಿಭಾತ್’ ಅದೇ ತುಮಕೂರಿನ ‘ಶಿರಾ’ . ಸಿಹಿ, ಖಾರ ಎರಡೂ ಸೇರಿದರೆ ಚೌ ಚೌ ಭಾತ್ ಆಗುತ್ತದೆ ಅಲ್ವೆ! ಯಾರಾದರೂ ಒಕ್ಕೊರಲಿನಿಂದ “ಬೇಡ!” ಎನ್ನುವ ಒಂದು ತಿಂಡಿಯಿದ್ದರೆ ಅದು ಉಪ್ಪಿಟ್ಟೇ! ಯಾರೇ ಆಗಲಿ ರುಚಿಕಟ್ಟಾದ ಉಪ್ಪಿಟ್ಟು ಮಾಡಿ ಎಲ್ಲರನ್ನೂ ಒಮ್ಮೆಗೆ ಒಪ್ಪಿಸಿಬಿಟ್ಟರೆ ಅವರಿಗೆ ಮಿಕ್ಕೆಲ್ಲಾ ಅಡುಗೆ ಮಾಡಲು ಬಂದಂತೆ ಸರಿ !

ದಕ್ಷಿಣ ಬಾರತೀಯ ಪ್ರಮುಖ ಉಪಹಾರ ಉಪ್ಪಿಟ್ಟಿನ ಇತಿಹಾಸಕ್ಕೆ ಬಂದರೆ ಹಲವು ವರ್ಷಗಳ ಹಿಂದೆ ತಮಿಳಿನ ನಾಟಕ ‘ತನಿಕುಡಿತ್ತನಮ್’ ನಲ್ಲಿ ಪ್ರಮುಖ ಪಾತ್ರಧಾರಿ ಉಪ್ಪಿಟ್ಟಿನ ಉಲ್ಲೇಖ ಮಾಡಿದ್ದಿದೆ. ಈ ಉಪ್ಪಿಟ್ಟಿನ ಪಾಲಿಗೆ ಸುವರ್ಣ ವರ್ಷವೆಂದರೆ 2011. 2011 ಜೂನ್ 17ರಂದು ಲಾಸ್ ಏಂಜಲೀಸ್ನಲ್ಲಿ ನಡೆದ ಶೆಫ್ ಮಾಸ್ಟರ್ ಸ್ಪರ್ಧೆಯಲ್ಲಿ ಫ್ಲಾಯಿಡ್ ಕಾರ್ಡೋಸ್ ಎಂಬ ಮುಂಬೈ ಮೂಲದ ವ್ಯಕ್ತಿ ಉಪ್ಪಿಟ್ಟಿನೊಂದಿಗೆ ಅಣಬೆಯನ್ನು ಸೇರಿಸಿ ಮಾಡಿದ ಖಾದ್ಯದಿಂದಲೆ ಪ್ರಶಸ್ತಿ ಪಡೆದದ್ದು, ಒಂದು ಲಕ್ಷ ಡಾಲರ್ ಹಣವನ್ನು ಗೆದ್ದದ್ದು.

ಆ ದಿನಗಳಲ್ಲಿ “ಫಸ್ಟ್ ಪ್ರೈಸ್ ತಗೊಂಡಿರೋ ತಿಂಡಿ ಉಪ್ಪಿಟ್ ಧಾರಾಳವಾಗಿ ತಗೊಳಿ ಎಂದು ಹೇಳುತ್ತಿದ್ದವರಲ್ಲಿ ನಾನೂ ಒಬ್ಬಳು”. 2011 ಆಗಸ್ಟ್ 19. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಕರ್ನಾಟಕ ಮೂಲದ ಗುಜರಾತಿ ನಿವಾಸಿ ರಾಜಲಕ್ಷ್ಮಿಯವರಿಗೆ ಅಮಿತಾಭಚ್ಚನ್ ಅವರು ಕೇಳಿದ ಮೂರನೆ ಪ್ರಶ್ನೆ ಉಪ್ಪಿಟ್ಟಿನ ಕುರಿತಾಗಿಯೇ ಇತ್ತು.

ಎಂಥ ಪ್ರಯೋಗಕ್ಕೂ ಈ ಉಪ್ಪಿಟ್ಟು ಒಗ್ಗಿಕೊಳ್ಳುತ್ತದೆ. ಭಾರತದ ಮಾಸ್ಟರ್ ಶೆಫ್ ಅವತರಣಿಕೆಯಲ್ಲಿ ಸ್ಪರ್ಧಿಯೊಬ್ಬರು ಇದೆ ನಮ್ಮಉಪ್ಪಿಟ್ಟನ್ನು ಸುಶಿ ಮ್ಯಾಟ್ ನಲ್ಲಿ ರೋಲ್ ಮಾಡಿ , ಪ್ರೆಸೆಂಟ್ ಮಾಡಿ ಬಹುಮಾನ ಪಡೆದದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಅತಿಥಿಗಳ, ಮನೆಯವರ, ಮಕ್ಕಳ ನಾಲಗೆ ರುಚಿಯನ್ನು ಹಿಗ್ಗಿಸುವ, ಕುಗ್ಗಿಸುವ ಎರಡೂ ಆಯ್ಕೆ ಉಪ್ಪಿಟ್ಟಲ್ಲೇ ಇದೆ ಎಂದು ನನ್ನನಿಸಿಕೆ.

ಕಾಟಾಚಾರಕ್ಕೆ ಮಾಡಿದರೆ ಹಾಗೇನೆ ಯಾರಿಗೂ ಹಿಡಿಸುವುದಿಲ್ಲ. ಆಸಕ್ತಿಯಿಂದ ತಾಜಾ ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿ ಮಾಡಿದರೆ ರುಚಿಕಟ್ಟಾಗಿಯೇ ಇರುತ್ತದೆ. ಕ್ಯಾರೆಟ್, ಬೀನ್ಸ್, ಬಟಾಣಿಗಳ ಕಲರ್ ಉಪ್ಪಿಟ್ಟನ್ನು ಕಲರ್ ಫುಲ್ ಆಗಿ ಕಾಣುವಂತೆ ಮಾಡುತ್ತದೆ.

ಎಣ್ಣೆ, ಸಾಸಿವೆ, ಕಡಲೆ ಬೇಳೆ, ಉದ್ದಿನಬೇಳೆ, ಈರುಳ್ಳಿ, ಟೊಮ್ಯಾಟೋ, ಹಸಿರುಮೆಣಸಿನಕಾಯಿ, ಶುಂಠಿ, ತಾಜಾ ಕರಿಬೇವು ಮೊದಲಾದ ಮುಖ್ಯ ಸಾಮಾಗ್ರಿಗಳೊಂದಿಗೆ ಕಾಯಿತುರಿ, ಇಲ್ಲವೆ ಕೊಬ್ಬರಿ ತುರಿ, ಇಂಗು, ಸ್ವಲ್ಪ ನಿಂಬೆ ಹುಳಿ, , ಕೊತ್ತಂಬರಿ ಸೊಪ್ಪು, ಸಬ್ಬಸ್ಸಿಗೆಸೊಪ್ಪು, ಉಪ್ಪಿಟ್ಟಿನ ಎಕ್ಸ್ಟ್ರಇಂಗ್ರೀಡಿಯೆಂಟ್ಸ್ ಎನ್ನಬಹುದು. ಆಗ “ಖಾರಾಭಾತ್ ಖಾಲಿ ಭಾತ್ ಆಗುತ್ತದೆ”!.

ವೃತಾಚಾರಣೆ ಮಾಡುವವರ ಮೊದಲ ಆಯ್ಕೆ ಇದೇ ಉಪ್ಪಿಟ್ಟು . ಅನ್ನ ಮೈಲಿಗೆ ಅನ್ನುವುದಕ್ಕೆ ಉಪ್ಪಿಟ್ಟಿಗೆ ಪ್ರಾಶಸ್ತ್ಯ . ಜಿಎಸ್ ಎಸ್ ರವರು ತಮ್ಮದೊಂದು ಲೇಖನದಲ್ಲಿ ಗೊಂಬೆ ಮೇಳದವರು ಪ್ರದರ್ಶನ ಮಾಡುವ ಸಂದರ್ಭದಲ್ಲಿ ಉಪ್ಪಿಟ್ಟನ್ನು ಸೇವಿಸುತ್ತಿದ್ದರು ಎಂದು ಬರೆಯುತ್ತಾರೆ. ಊಟ ಅತಿಯಾದರೆ ಅಜೀರ್ಣ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು , ಮೇಳವನ್ನು ನಿಭಾಯಿಸಲು ಸಾಧ್ಯವಾಗದೆ ಇರಬಹುದು, ನಿದ್ರೆ ಬರುತ್ತದೆ ಎಂಬ ಕಾರಣವೂ ಇಲ್ಲಿದೆ .

ಇನ್ನು “ಉಪವಾಸದ” ಹೆಸರಲ್ಲಿ ಅನ್ನ ಬಿಟ್ಟು ಇನ್ನೆಲ್ಲಾ ಆಹಾರವನ್ನು ಸೇವಿಸುವವರು ಇರುತ್ತಾರೆ. ಅಂಥವರನ್ನು ಕುರಿತ ವಿನೋದದ ಹಾಡು “ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಲ್ಲೋ ಸ್ವಲ್ಪ ತಿಂತಾಳಷ್ಟೆ ಉಪ್ಪಿಟ್ಟು ಅವಲಕ್ಕಿ ಪಾಯಸ” ದಿಢೀರ್ ಮಾಡಬಹುದಾದ ಅತ್ಯಂತ ಪೌಷ್ಟಿಕಾಂಶವುಳ್ಳ ಜೊತೆಗೆ ಬೇಗ ಜೀರ್ಣವಾಗುವ ಬೆಳಗಿನ ಉಪಾಹಾರ ಉಪ್ಪಿಟ್ಟು ಲಘು ಅಹಾರ.

ಇದರಲ್ಲಿ ಪ್ರೋಟೀನ್ 4 g, ಕಾರ್ಬೋಹೈಡ್ರೇಟ್ಸ್ 30.7g, ಫೈಬರ್ 0.3g, ಫ್ಯಾಟ್ 5.8 g ಇರುತ್ತದೆ. ಬಹುಶಃ ಈ ಕಾರಣಕ್ಕೆ ಗೋಧಿ ಉಪ್ಪಿಟ್ಟನ್ನು ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೊಡುತ್ತಾರೆ. ವಿಶ್ವ ಸಂಸ್ಥೆಯ ಮಾನದಂಡಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶ ಭರಿತ ಆಹಾರ ಒದಗಿಸುವುದೂ ಆಗಿದೆ. ಅಲ್ಲಿ ಕೊಡುವ ಉಪ್ಪಿಟ್ಟಿನ ಕುರಿತೇ

ಅಮ್ಮ ನೋಡೆ ಕಣ್ಣಿಟ್ಟು
ನಮ್ಮಯ ಶಾಲೆಯ ಉಪ್ಪಿಟ್ಟು
ನಮ್ಗೆ ಮಾತ್ರ ಇಷ್ಟೇ ಇಷ್ಟು

ಮಿಸ್ಗಳಿಗ್ಮಾತ್ರ ಅಷ್ಟಷ್ಟು ಎಂಬ ಶಿಶು ಪದ್ಯವೂ ಇದೆ. ಒಂದರ್ಥದಲ್ಲಿ ಇದು ನಮ್ಮ ವ್ಯವಸ್ಥೆಯನ್ನು ಅಣಕಿಸುವ ಪದ್ಯ ಎನ್ನಲೂ ಬಹುದು.
ಹಿಂದೆ ಮನೆ ಮಟ್ಟಿಗೆ ಏನೇ ಶುಭ ಕಾರ್ಯವಾದರೂ ಅಲ್ಲಿ ಉಪ್ಪಿಟ್ಟು, ಕೇಸರಿಭಾತ್ ಇದ್ದೇ ಇರಿತ್ತಿತ್ತು. ಹುಡುಗಿ ನೋಡುವ ಶಾಸ್ತ್ರಕ್ಕಂತೂ ಉಪ್ಪಿಟ್ಟೇ ಫಿಕ್ಸ್! ಸವಿದವರು ,ಸರ್ವ್ ಮಾಡಿದವರು ಆ ದಿನಗಳನ್ನು ನೆನಪುಮಾಡಿಕೊಳ್ಳಬಹುದು.

ಈಗಷ್ಟೆ ಬೇರೆ ಬೇರೆ ಖಾದ್ಯಗಳು ಬಂದಿರುವುದು. ಹಾಸ್ಟೆಲ್,ಪಿಜಿಗಳ ಮೆನುವಿನಲ್ಲಂತೂ ವಾರಕ್ಕೊಂದು ದಿವಸ ಉಪ್ಪಿಟ್ಟು ಇದ್ದೇ ಇರುತ್ತದೆ. ಉಪ್ಪಿಟ್ಟಿನ ಬಗ್ಗೆ ಅವಜ್ಞೆ ಬೇಡ .”ಕಾಂಕ್ರೀಟ್!” ಎಂದು ಕರೆದು ಅವಮಾನಿಸುವುದೂ ಬೇಡ. “ಆಧುನಿಕ ಸರ್ವಜ್ಞ” ಡಿ.ವಿ.ಜಿಯವರಿಗೂ ಉಪ್ಪಿಟ್ಟಿನ ಬಗ್ಗೆ ಅಪಾರ ಒಲವಿತ್ತು.

ಒಮ್ಮೆ ಅವರು ದೇವರಾಯನ ದುರ್ಗಕ್ಕೆ ಪ್ರಯಾಣ ಹೊರಟಾಗ ತುಮಕೂರಿನ ಬಳಿ ಕಾರು ಕೆಟ್ಟು ನಿಂತಾಗ ಅಲ್ಲಿಯೇ ಇದ್ದ ಪರಿಚಯಸ್ಥರ ಮನೆಗೆ ಹೋಗಿ ಕಾಫಿ ಕುಡಿದು ಹೊರಡುವಷ್ಟರಲ್ಲಿ ಸ್ನೇಹಿತ ಪದ್ಮನಾಭನ್ ಅವರನ್ನು ಕುರಿತು ಡಿವಿಜಿಯವರು “ಹೀಗ್ ಹೋದ್ರೆ ಹೇಗೆ? ನಾವು ಬರೋವಾಗ ಹೆಂಗಸ್ರು ಅವರೆಕಾಯಿ ಸುಲಿತಿದ್ರು ಅಡುಗೆ ಮನೆ ಸ್ಥಿತಿ ಹೇಗಿದೆ ನೋಡಿ ಹೋಗೋಣ್ವೆ ! ಪಾಪ! ಅವ್ರಿಗ್ ಬೇಜಾರಾಗಲ್ವೆ!” ಎಂದರಂತೆ ಅದಕ್ಕೆ ಪದ್ಮನಾಭನ್ ಅವರು “ಅಯ್ಯೋ !ಅವರೆಕಾಳು ವಾಯು ನಿಮ್ಗಾಗಲ್ಲ” ಎಂದರೆ “: ಅವರೆಕಾಳು ಸೃಷ್ಟಿಸಿದ ಬ್ರಹ್ಮ ಶುಂಠಿ, ಜೀರಿಗೆ , ತುಳಸಿನೂ ಸೃಷ್ಟಿಸಿಲ್ವೆ ಅದಷ್ಟನ್ನು ತೆಗೆದುಕೊಂಡು ಹೊರಟರಾಯ್ತು!” ಎಂದರಂತೆ.

ಈ ಸನ್ನಿವೇಶಕ್ಕಾಗಿಯೇ ಡಿವಿಜಿಯವರು ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ ಅನುವೊಪ್ಪುವುದೊಂದೊಂದು ನಿನಗಮಂತೆಯೆ ನೂರು ನೀತಿ ಸೂತ್ರಗಳಿರಲು ಅನುವನರಿವುದೆ ಜಾಣು ಮಂಕುತಿಮ್ಮ ಎಂಬ ಕಗ್ಗದ ಪದ್ಯವೊಂದನ್ನು ರಚಿಸಿದ್ದಾರೆ.

ಖ್ಯಾತ ಶಿಕ್ಷಣ ತಜ್ಞ ಹೆಚ್. ನರಸಿಂಹಯ್ಯನವರಿಗೆ ಉಪ್ಪಿಟ್ಟೆಂದರೆ ಬಹಳ ಇಷ್ಟವಿತ್ತಂತೆ. ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೋದಾಗ ಅಲ್ಲಿ ಮೂರು ಹೊತ್ತು ಸ್ವಯಂಪಾಕದ ಉಪ್ಪಿಟ್ಟು ತಿಂದು ದಿನ ದೂಡುತ್ತಿದ್ದರಂತೆ. ಇಷ್ಟೆಲ್ಲಾ ಮಹನೀಯರು ಮೆಚ್ಚಿಕೊಂಡ ಉಪ್ಪಿಟ್ಟಿನ ಬಗ್ಗೆ ಅಸಹಿಷ್ಣುತೆ ಏಕೋ ? ಗೊತ್ತಿಲ್ಲ? ಈ ಉಪಹಾರವನ್ನು ರಾಷ್ಟ್ರೀಯ ತಿಂಡಿಯನ್ನಾಗಿ ಮಾಡಬೇಕು ಎಂಬ ಕೂಗು ಕೂಡ ಕೇಳಿ ಬಂದಿತ್ತು.

ಅತ್ಯಂತ ನಯವಾಗಿ ಮೂರೇ ಬೆರಳಲ್ಲಿ ತೆರೆದ ಬಾಯಿಗೆ ಹದವಾದ ಬಿಸಿಯ ಉಪ್ಪಿಟ್ಟನ್ನು ಮೆಲ್ಲಗೆ ಇಳಿಸಿದರೆ ಅದು ಅಲ್ಲೇ ಕರಗಿ ಮತ್ತೊಮ್ಮೆ ಬೇಕೆನಿಸಿ ಬಾಯಿ ತೆರಯುವಂತಾಗಬೇಕು. ಇದು ಉಪ್ಪಿಟ್ಟಿನ ನಿಜವಾದ ಹದ.

ರವೆಯನ್ನು ಹುರಿಯುವಾಗ ತುಪ್ಪದಲ್ಲಿ ಪರಿಮಳ ಬರುವವರೆಗೆ ಹುರಿದರೆ, ಒಗ್ಗರಣೆಗೆ ಇತರ ಸಾಮಾಗ್ರಿಗಳ ಜೊತೆಗೆ ಜೀರಿಗೆ , ಎರಡು ಕಾಳು ಮೆಂತ್ಯ ಸೇರಿಸಿದರೆ ಪರಿಮಳ ಚೆನ್ನಾಗಿ ಬರುತ್ತದೆ. ವಾಂಗಿಭಾತ್ ಪುಡಿ ಇತರೆ ಮಸಾಲಾ ಪುಡಿಗಳನ್ನೂ ಬಳಸಿ ಟ್ರಯಲ್ ನೋಡಬಹುದು. ಆದರೆ ವಿಶಿಷ್ಟ ಉಪಹಾರ ಮಾಡಹೋಗಿ ಪಾಪದವರನ್ನು ಹಾರ(ಬಲಿ) ಕೊಡುವುದು ಬೇಡವೇನೋ!

ಹೆಣ್ಮಕ್ಕಳ ಅವಸರಕ್ಕೆ ಅಪತ್ಭಾಂದವ ಎಂದರೆ ಉಪ್ಪಿಟ್ಟೆ ಸರಿ! ಏನಂತೀರಿ? ಸಮಯವಿದ್ದರೆ ಹಾಗೆ ಹುರಿದ ರವೆಗೆ ಸಕ್ಕರೆ ಹಾಕಿ ತಿರುವಿ ಪಾತ್ರೆಗಳಿಗೆ ಅಂಟಿಕೊಳ್ಳುತಿದೆ ಅನ್ನಿಸಿದರೆ ಸ್ವಲ್ಪ ತುಪ್ಪ ಹಾಕಬಹುದು. ತುಪ್ಪ ಹಾಕುವಾಗ ಕೈ ತುಸು ಜಾರಿದರೆ ತೊಂದರೆ ಇಲ್ಲ! ಏನೂ ಮಾಡ್ಲಿಕ್ಕಾಗಲ್ಲ. ಹಾಗೆ ನಾಲ್ಕೇ ನಾಲ್ಕು ಡ್ರೈಫ್ರೂಟ್ಸ್ ತೆಗೆದು ತುಪ್ಪದಲ್ಲಿ ಹುರಿದು ಹಾಕಿ, ಪರಿಮಳಕ್ಕೆ ಎರಡೇ ಎರಡು ಏಲಕ್ಕಿ ಜಜ್ಜಿ ಹಾಕಿ, ಕಲರ್ ಫೇಡ್ ಆಗಿದೆ ಅನ್ನಿಸಿದರೆ ಚಿಟಿಕೆ ಕೇಸರಿ ಕಲರ್ ಹಾಕಿದರೆ…. ಸಾಕು ! ಕೇಸರಿ ಭಾತ್ ಆಗಿ ಬಿಡುತ್ತದೆ..

ಸಿಹಿ, ಖಾರಎರಡೂ ಸೇರಿದರೆ ಚೌ ಚೌ ಭಾತ್ ಅಲ್ವೆ!. ಇದರ ಜೊತೆಗೆ ಕಾಯಿ ಚಟ್ನಿ, ಗಟ್ಟಿ, ಸಿಹಿಮೊಸರು, ಉಪ್ಪಿನಕಾಯಿ, ಕೆಲವರಿಗೆ ಮಿಕ್ಸಚರ್ ಜೊತೆಗೆ ಸ್ಟ್ರಾಂಗ್ ಫಿಲ್ಟರ್ ಕಾಫಿ ಇದ್ದರೆ ಇನ್ನೂ ಚೆನ್ನಾಗಿರುತ್ತದೆ.

ಒಂದು ಅಳತೆಯ ರವೆಗೆ ದುಪ್ಪಟ್ಟು ನೀರು ಉಪ್ಪಿಟ್ಟಿಗೆ ಸರಿಯಾದ ಹದ. ಖಾರಾ ಭಾತಿಗೆ ಮೀಡಿಯಂ ರವಾವನ್ನೆ , ಕೇಸರಿಭಾತ್ಗೆ ಫೇಣಿ ರವಾವನ್ನೇ ಹಾಕಬೇಕು. ಅದಲು ಬದಲು ಮಾಡಿದರೆ ಅಂದಕೆಟ್ಟು ತಿನ್ನುವವರಿಗೆ ಇದು “ಅವಸರದ ಭಾತ್” ಎಂದು ಬೇಗ ತಿಳಿಯುತ್ತದೆ.
ನನ್ನ ಸಹೋದ್ಯೊಗಿ ಒಬ್ಬರಿಗೆ ಪರಿಚಿತರ ಮನೆಗೆ ಹೊಗುವುದೆಂದರೆ ಬಹಳ ಖುಷಿಯಂತೆ.

ಆದರೆ “ಅವರು ಕೊಡುವ ಉಪ್ಪಿಟ್ಟು ನೆನಪಿಸಿಕೊಂಡು ಹೋಗುವುದನ್ನು ಕಡಿಮೆ ಮಾಡುತ್ತಿದ್ದೇನೆ” ಎಂದು ಹೇಳಿದ್ದು ನೆನಪು. ಅವರನ್ನು ನೋಡಿದಾಗಲಲ್ಲೆ “ಉಪ್ಪಿಟ್ಟ ಮನೆಗೆ ದ್ರೋಹ ಬಗೆಯಬೇಡ, ಇಷ್ಟವಿಲ್ಲದ ಉಪ್ಪಿಟ್ಟು ಕೊಡುವವರ ಮನೆಗೆ ಹೋಗಬೇಡ” ಎಂಬ ಮಾತು ಹೊಳೆಯುತ್ತದೆ.

ಸ್ವಲ್ಪ ರುಚಿ ಹೆಚ್ಚೇ ಬಯಸುವ ಅವರು “ಈರುಳ್ಳಿ ಟೊಮ್ಯಾಟೋ ಎಲ್ಲಾ ಹೆಚ್ಚು ಹಾಕಿದರೆ ಚೆನ್ನಾಗಿರುತ್ತದೆ” ಎನ್ನೋರು. “ಇಲ್ಲ ಇಂಗು, ಫ್ರೆಷ್ ಕಾಯಿ ತುರಿ, ಕಡ್ಲೆ ಬೇಳೆ ಹೆಚ್ಚುಹಾಕಿ ಮಾಡಿದರೂ ಚೆನ್ನಾಗಿರುತ್ತದೆ” ಎಂದರೆ ಮುಖ ಹುಳ್ಳಗೆ ಮಾಡಿಕೊಳ್ಳುತ್ತಿದ್ದರು. ಇನ್ನೊಮ್ಮೆ ಮನೆಯಲ್ಲಿ ವೃತ ಎಂದು ಅವಸರಕ್ಕೆ ಮಾಡಿದ ಉಪ್ಪಿಟ್ಟನ್ನು ತಂದ ಅವರನ್ನು ಸಹೊದ್ಯೋಗಿಗಳೆಲ್ಲಾ “ಉಪ್ಪಿಟ್ಟು ಸಂತ್ರಸ್ತರು” ಎಂದೇ ನೋಡಿದ ದಿನ ನೆನಪಿಗೆ ಬರುತ್ತಿದೆ.

ಸಹೋದ್ಯೋಗಿಗಳೆಲ್ಲಾ “ಚಟ್ನಿ, ಮೊಸರು, ಉಪ್ಪಿನಕಾಯಿ ತಗೊಳ್ಳಿ” ಎಂದರೆ ಆ ಜನ ತೆಗೆದುಕೊಳ್ಳಲಿಲ್ಲ. “ನಾನೇನು ಉಪ್ಪಿಟ್ಟು ಸಾಧುವಲ್ಲ” ಎಂಬಂತೆ ಆತ್ಮ ವಿಶ್ವಾಸದಿಂದ ಪೂರ್ತಿ ಬಾಕ್ಸ್ ತಿಂದಿದ್ದರು. ಕ್ಷಮಿಸಿ ಬಾಕ್ಸನಲ್ಲಿರುವ ಉಪ್ಪಿಟ್ಟನ್ನು ತಿಂದಿದ್ದರು.

“ಉಪ್ಪಿಟ್ಟು ಅವಸರದ ಅಡುಗೆ” ಎಂದೇ ತಿರ್ಮಾನಿಸಬೇಕಿಲ್ಲ! ಸಾಕಷ್ಟು ತಯಾರಿ ಬೇಕು! ಇಲ್ಲವಾದರೆ ಉಪ್ಪಿಟ್ಟು ಖಾಯಂ ಪಾತ್ರೆವಾಸಿಯಾಗುತ್ತದೆ!. ಮಕ್ಕಳು ‘ಕಾಂಕ್ರೀಟ್’ ಮೊದಲಾದ ಉಪನಾಮಗಳಿಂದ ಕರೆದು ತಿನ್ನಲು ನಿರಾಕರಿಸುತ್ತಾರೆ . ನಾವೇ ಮಾಡಿದ ಅದೇ ಉಪ್ಪಿಟ್ಟಿಗೆ ಉಪಾಯದ ಹೆಸರುಗಳನ್ನು ನಾವೇ ನಾಮಕರಣ ಮಾಡಿ ತಿನ್ನಿಸುವುದು ದೊಡ್ಡ ಕೆಲಸ.

ಲಂಚ್ ಬಾಕ್ಸ್ಗೆ ಹಾಕಿದರಂತೂ ಅದು ದಸ್ಟ್ಬಿನ್ ಪಾಲೆ ಬಿಡಿ! ನಾವುಗಳು ಹಿಂದೊಮ್ಮೆ ಮಾಡಿದ್ದನ್ನೆ ನಮ್ಮ ಮಕ್ಕಳೂ ಮಾಡುತ್ತಾರೆ! ಹೌದಲ್ವ! ಕೇವಲ ಹದಿನೈದು ಇಪ್ಪತ್ತು ನಿಮಿಷಗಳಲ್ಲಿ ತಯಾರಿಸಬಹುದಾದ ಉಪ್ಪಿಟ್ ಮಾಡಲೂ ಕೆಲವರಿಗೆ ಸಮಯವಿರುವುದಿಲ್ಲ.

ಅಂಥವರು ಬೇರೆ ಬೇರೆ ಕಂಪೆನಿಗಳ ಇನ್ಸ್ಟಂಟ್ ಉಪ್ಮಾ ಮಿಕ್ಸ್ ತಂದು ಕುದಿಯುವ ನೀರಲ್ಲಿ ಹಾಕಿ ಕುದಿಸಿಕೊಳ್ಳಬಹುದು. ಹಿರಿಯರು ಹಾಸ್ಟೆಲ್ಗೆ ಹೋಗುವ ಮಕ್ಕಳಿಗೆ , ಉದ್ಯೋಗ ನಿಮಿತ್ತ ಹೊರ ಊರುಗಳಿಗೆ ಹೋಗುವವರಿಗೆ ಮನೆಯಲ್ಲಿಯೇ ಮಾಡುತ್ತಿದ್ದ , ಮಾಡುವ ಇನ್ಸ್ಟಂಟ್ ಮಿಕ್ಸ್ಗಳಲ್ಲಿ ಉಪ್ಪಿಟ್ ಮಿಕ್ಸ್ ಕೂಡ ಒಂದು.

ಸಮಾರಂಭಗಳಲ್ಲಿ ಕೆಲವೊಮ್ಮೆ “ಉಪ್ಪಿಟ್ಟು ಯಾರೂ ತಿನ್ನಲ್ಲ” ಎಂದು ಕಡಿಮೆ ಮಾಡಿಸಿ ಅದೃಷ್ಟವಶಾತ್ ಖರ್ಚಾರದರೆ “ಛೆ! ಇನ್ನೂ ಸ್ವಲ್ಪ ಮಾಡಿಸಬಹುದಿತ್ತು “ ಎಂದೋ , “ಉಪ್ಪಿಟ್ ಏನ್ ಮಹಾ ಚೆನ್ನಾಗಿರುತ್ತದೆ?” ಎಂಬ ಒಣ ಪ್ರತಿಷ್ಠೆಯಿಂದಲೋ ರುಚಿಯಾಗಿರುವ ಉಪ್ಪಿಟ್ಟನ್ನೆ ಸ್ವಲ್ಪ ಬಡಿಸಿಕೊಂಡು ಮರುಗುವ ಅದೆಷ್ಟೋ ಪ್ರಸಂಗಳು ಕೆಲವರಿಗಾದರೂ ಎದುರಾಗಿರಬಹುದು. ಏನಿಲ್ಲ ಒಂದೆರಡು ಬಾರಿ ಆ ಉಪ್ಪಿಟ್ಟಿನ ಪರಿಮಳ ಆಘ್ರಾಣಿಸಿದರೆ ಬೇಕೋ? ಬೇಡವೋ? ಎಂದು ತಿಳಿಯುತ್ತದೆ . ಬೇಸರ ಬೇಡ! ಅವಸರವೂ ಬೇಡ! ಒಂದಷ್ಟು ಬಡಿಸಿಕೊಂಡು ವ್ಯರ್ಥಮಾಡುವುದಕ್ಕಿಂತ ಹಿಡಿಸುವಷ್ಟು ಬಡಿಸಿಕೊಳ್ಳಿ. ಉಪ್ಪಿಟ್ಟಿನ ರುಚಿ ಹದವರಿತು ತಮ್ಮದಾಗಿಸಿಕೊಳ್ಳಿ.

‍ಲೇಖಕರು Avadhi

November 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: