ನಾ ದಿವಾಕರ್
ಭಾರತದ ಆಡಳಿತ ವ್ಯವಸ್ಥೆಯಲ್ಲಿ ಒಂದು ವಿಶಿಷ್ಟ ಪರಂಪರೆ ಇದೆ. ಯಾವುದೇ ಸಮಾಜ ಘಾತುಕ ಘಟನೆಗಳು ಸಂಭವಿಸಿದರೂ ಆಡಳಿತಾರೂಢ ಪಕ್ಷಗಳು ಕೂಡಲೇ ವಿಷಾದ ವ್ಯಕ್ತಪಡಿಸಿ ಕಠಿಣ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡುತ್ತವೆ. ವಿರೋಧ ಪಕ್ಷಗಳು ತಮ್ಮ ಆಳ್ವಿಕೆಯಲ್ಲಿ ಇದೇ ಪ್ರಮಾದಗಳನ್ನು ಮಾಡಿದ್ದರೂ ಅವೆಲ್ಲವನ್ನೂ ಮರೆಮಾಚಿ ತಾವು ಬಹಳ ಸಾಚಾ, ಪ್ರಾಮಾಣಿಕ, ಸತ್ಯವಂತರೆಂದು ತೋರ್ಪಡಿಸಲು ಆಡಳಿತಾರೂಢ ಪಕ್ಷವನ್ನು ನಿಂದಿಸಲಾರಂಭಿಸುತ್ತವೆ. ಬೇಹುಗಾರಿಕೆಯ ವೈಫಲ್ಯ, ಗೂಢಚಾರಿಕೆಯ ವೈಫಲ್ಯ, ಪೊಲೀಸ್ ವೈಫಲ್ಯ, ಸರ್ಕಾರದ ಮೃದು ಧೋರಣೆ, ಆಳುವ ಪಕ್ಷದ ನಿಷ್ಕ್ರಿಯತೆ ಹೀಗೆ ಆರೋಪಗಳ ಸರಮಾಲೆಯನ್ನೇ ಪೋಣಿಸಲಾಗುತ್ತದೆ. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಘಟನೆಯ ಹಿನ್ನೆಲೆ, ಚಾರಿತ್ರಿಕ ಕಾರಣಗಳು ಮತ್ತು ವಸ್ತುನಿಷ್ಠ ಸಾಂದರ್ಭಿಕ ವಿಶ್ಲೇಷಣೆಗಿಂತಲೂ ರಂಜನೀಯ ವರದಿಗಳು ಪ್ರಕಟವಾಗುತ್ತವೆ. ಆಳುವ ವರ್ಗಗಳ ಸಾಫಲ್ಯ ವೈಫಲ್ಯಗಳನ್ನು ಒರೆಹಚ್ಚಿನೋಡುವ ಭರದಲ್ಲಿ ವಾಸ್ತವ ಸನ್ನಿವೇಶಗಳನ್ನೂ ಬದಿಗೊತ್ತಿ ಚರ್ಚೆಗಳನ್ನು ನಡೆಸಲಾಗುತ್ತದೆ. ಟಿವಿ ವಾಹಿನಿಗಳಲ್ಲಿ ಕ್ಷಣಾರ್ಧದಲ್ಲಿ ಶತಮಾನಗಳ ವಿಶ್ಲೇಷಣೆ ಮಾಡುವ ತಜ್ಞರು-ವಿಶ್ಲೇಷಕರು ತಮ್ಮದೇ ಆದ ತರ್ಕಗಳನ್ನು ಮಂಡಿಸುವ ಮೂಲಕ ಚರ್ಚೆಗೆ ನ್ಯಾಯ ಒದಗಿಸಲು ಯತ್ನಿಸುತ್ತಾರೆ.
ಈ ಪರಂಪರೆಯ ಹಿನ್ನೆಲೆಯಲ್ಲೇ ಭಾರತದಲ್ಲಿ ನಿಯತಕಾಲಿಕವಾಗಿ ವಿಧ್ವಂಸಕ ಕೃತ್ಯಗಳು ಸಂಭವಿಸುತ್ತಲೇ ಇರುತ್ತವೆ. ಗೋಧ್ರಾ, ಗುಜರಾತ್ ಹತ್ಯಾಕಾಂಡ, 26/11ರ ದಾಳಿ, ಮಲೆಗಾಂವ್, ಸಂಜೋತ, ದಾಂತೆವಾಡ, ಸಂಜೋತಾ ಎಕ್ಸ್ಪ್ರೆಸ್, ಅಜ್ಮೇರ್ ದರ್ಗಾ ಹೀಗೆ ವಿಧ್ವಂಸಕ ಕೃತ್ಯಗಳು ಸಂಭವಿಸುತ್ತಲೇ ಇರುತ್ತವೆ. ನಕ್ಸಲರ ಅಟ್ಟಹಾಸ, ಭಯೊತ್ಪಾದಕರ ರುದ್ರತಾಂಡವ, ಭಜರಂಗಿಗಳ ದಾಂಧಲೆ, ಸಂಘಪರಿವಾರದ ಕೋಮು ದಳ್ಳುರಿ, ದಲಿತರ ಮೇಲಿನ ಆಕ್ರಮಣ, ದಲಿತರ ಮಾರಣ ಹೋಮ, ಮಹಿಳೆಯರ ಮೇಲೆ ದೌರ್ಜನ್ಯ, ಹಸುಳೆಯ ಮೇಲೆ ಅತ್ಯಾಚಾರ ಇವೇ ಮುಂತಾದ ಸುದ್ದಿಗಳು ನಿತ್ಯ ಸುದ್ದಿಗಳಾದಾಗ, ಪತ್ರಿಕೆಗಳಲ್ಲಿ ಹೆಡ್ಲೈನ್ಸ್ಗಳಾದಾಗ, ವಿದ್ಯುನ್ಮಾನ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಗಳಾದಾಗ ಈ ದೇಶದ ಆಳ್ವಿಕರ ಸುಪ್ರಜ್ಞೆ ಜಾಗೃತವಾಗುತ್ತವೆ. ಪ್ರಜೆಗಳಲ್ಲಿ ಮೂಡಬಹುದಾದ ಆತಂಕಗಳನ್ನು ನಿವಾರಿಸಲು ಕೂಡಲೇ ರಾಜಕೀಯ ನಾಯಕರುಗಳ ದಂಡು ಘಟನೆಯ ಸ್ಥಳಕ್ಕೆ ಧಾವಿಸುತ್ತದೆ. ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಆಶ್ವಾಸನೆಗಳು ಭರಪೂರವಾಗಿ ಹರಿಯುತ್ತವೆ. ನೊಂದ , ಬಾಧಿತ ಪ್ರಜೆಗಳಿಗೆ ಸಾಂತ್ವನ ಹೇಳಲಾಗುತ್ತದೆ. ಮಡಿದವರಿಗೆ ಭಾವಪೂರ್ಣ ಶ್ರದ್ಧಾಂಜಲಿ, ಮಡಿದವರು ಕಾನೂನುಪಾಲಕರಾದರೆ ಹುತಾತ್ಮ ಪಟ್ಟ, ಮಡಿದವರ ಕುಟುಂಬದವರಿಗೆ ಮತ್ತು ಉಳಿದು ಗಾಯಗೊಂಡವರಿಗೆ ಪರಿಹಾರ ಧನ ಇಷ್ಟರಲ್ಲೇ ಆಡಳಿತ ವ್ಯವಸ್ಥೆ ತೃಪ್ತಿಪಡುತ್ತದೆ. ನಂತರ ಎಲ್ಲವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಮುಂದೊಂದು ದಿನ ಇಂತಹುದೇ ಘಟನೆ ಸಂಭವಿಸುವವರೆಗೂ ಪರಿಸ್ಥಿತಿ ಮಾಮೂಲಿಯಾಗಿರುತ್ತದೆ.
2010ರಲ್ಲಿ ಛತ್ತಿಸ್ಘಡದ ದಾಂತೆವಾಡ ಗ್ರಾಮದಲ್ಲಿ ಮಾವೋವಾದಿಗಳು ನಡೆಸಿದ ಆಕ್ರಮಣದಲ್ಲಿ 70 ಪೊಲೀಸರ ಹತ್ಯೆಯಾದ ನಂತರ ಕೆಲ ಕಾಲ ಸರ್ಕಾರದ ಆಪರೇಷನ್ ಗ್ರೀನ್ ಹಂಟ್ ಕಾರ್ಯಾಚರಣೆಯ ಕಾರಣ ಮಾವೋವಾದಿಗಳು ಹಿಮ್ಮೆಟ್ಟಿದ್ದರು. ಮಾವೋವಾದಿಗಳ ನಾಯಕರ ಹತ್ಯೆಯ ಪರಿಣಾಮವಾಗಿ ಸಂಘಟನಾತ್ಮಕ ಹಿನ್ನಡೆ ಅನುಭವಿಸಿದ್ದ ನಕ್ಸಲೀಯರು ತಮ್ಮ ಹಿಂಸಾತ್ಮಕ ಕೃತ್ಯಗಳಿಗೆ ಕೆಲಕಾಲ ವಿಶ್ರಾಂತಿ ನೀಡಿದ್ದರು. ಈ ತಾತ್ಕಾಲಿಕ ವಿಶ್ರಾಂತಿಯನ್ನೇ ಶಾಶ್ವತ ಸೋಲು ಎಂದು ಪರಿಗಣಿಸುವ ರೀತಿಯಲ್ಲಿ ಕೇಂದ್ರ ಸರ್ಕಾರ ಮಾವೋವಾದದ ಸಮಸ್ಯೆಯ ನಿವಾರಣೆಯ ಬಗ್ಗೆ ಕಿಂಚಿತ್ತೂ ಚಿಂತಿಸದೆ ಮೌನ ವಹಿಸಿತ್ತು. ಪರಿಣಾಮ ಛತ್ತಿಸ್ಘಡದಲ್ಲಿ ಮಾವೋವಾದಿಗಳು ಮತ್ತೊಮ್ಮೆ ತಮ್ಮ ಶೌರ್ಯ, ಸಾಹಸ, ಪರಾಕ್ರಮಗಳನ್ನು (ಈ ಪದಗಳು ಮಾವೋವಾದಿಗಳ ಸಂದರ್ಭದಲ್ಲಿ ಬಳಸಲು ಯೋಗ್ಯವೇ ಎಂಬ ಪ್ರಶ್ನೆ ಇದ್ದೇ ಇರುತ್ತದೆ ) ಮೆರೆದಿದ್ದಾರೆ.
ಛತ್ತಿಸ್ಘಡದ ಬಸ್ತರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ನಕ್ಸಲರು ನಡೆಸಿದ ಬರ್ಬರ ದಾಳಿಯಲ್ಲಿ 25ಕ್ಕೂ ಹೆಚ್ಚು ಜನರು ಸತ್ತು ಹಲವರು ಗಾಯಗೊಂಡಿದ್ದರು. ಮಾವೋವಾದಿಗಳನ್ನು ಎದುರಿಸಲು ಛತ್ತಿಸ್ಘಡದಲ್ಲಿ ಸಲ್ವಾಜುಡಂ ಎಂಬ ಪ್ರಜೆಗಳ ಸೇನೆಯನ್ನು ಕಟ್ಟುವ ಮೂಲಕ ಜನರ ಕೈಗೆ ಬಂದೂಕು ನೀಡಿ ರಾಜ್ಯವನ್ನು ಹಿಂಸೆಯ ಅಖಾಡ ಮಾಡಿದ್ದ ಕಾಂಗ್ರೆಸ್ ಪಕ್ಷದ ಮಹೇಂದ್ರ ಕರ್ಮ ಮೃತಪಟ್ಟವರಲ್ಲಿ ಒಬ್ಬರಾಗಿದ್ದಾರೆ. ಮಾಜಿ ಕೇಂದ್ರ ಸಚಿವ ವಿ ಸಿ ಶುಕ್ಲ ಇತ್ತೀಚೆಗೆ ಅಸುನೀಗಿದ್ದಾರೆ. ಪರಿವರ್ತನಾ ರ್ಯಾಲಿಯಿಂದ ಹಿಂದಿರುಗುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಠಾತ್ ದಾಳಿ ನಡೆಸಿರುವ ಮಾವೋವಾದಿಗಳು ಸ್ಥಳದಲ್ಲೇ 17 ಜನರ ಹತ್ಯೆ ಮಾಡಿದ್ದು ಹಲವರನ್ನು ಅಪಹರಿಸಿದ್ದರು. ಅಧಿಕೃತ ಮೂಲಗಳ ಪ್ರಕಾರ ನೂರಕ್ಕೂ ಹೆಚ್ಚು ಮಾವೋವಾದಿ ಕಾರ್ಯಕರ್ತರು ದಾಳಿಯಲ್ಲಿ ಭಾಗಿಯಾಗಿದ್ದು ಸಲ್ವಾಜುಡಂ ಸೃಷ್ಟಿಸಿದ ಮಹೇಂದ್ರ ಕರ್ಮ ವಿರುದ್ಧ ಸೇಡು ತೀರಿಸಿಕೊಂಡಿದ್ದರು. ಇದೀಗ ಪುನಃ ನಕ್ಸಲ್ ಪಡೆ ರೈಲು ಪ್ರಯಾಣಿಕರ ಮೇಲೆ ದಾಳಿ ನಡೆಸಿ ತನ್ನ ಹಿಂಸಾಕೃತ್ಯವನ್ನು ಮಂದುವರೆಸಿದೆ. ಬಿಹಾರದ ಜುಮಾಯಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಮಾವೋವಾದಿಗಳು ರೈಲು ಪ್ರಯಾಣಿಕರ ಮೇಲೆ ದಾಳಿ ನಡೆಸಿ ಮೂವರನ್ನು ಕೊಂದು ಆರು ಜನರನ್ನು ಗಾಯಗೊಳಿಸಿದ್ದಾರೆ. ಧನಬಾದ್-ಪಾಟ್ನಾ ನಡುವೆ ಇರುವ ಅರಣ್ಯ ಪ್ರದೇಶದಲ್ಲಿನ ಸುರಂಗ ಮಾರ್ಗವನ್ನು ಪ್ರವೇಶಿಸುತ್ತಿದ್ದ ಹಾಗೆಯೇ ತಮ್ಮ ದಾಳಿ ನಡೆಸಿದ ಮಾವೋವಾದಿಗಳು ಪ್ರಯಾಣಿಕರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದ್ದೇ ಅಲ್ಲದೆ ಪ್ರಯಾಣಿಕರ ಹಲವು ವಸ್ತುಗಳನ್ನೂ ಅಪಹರಿಸಿದ್ದಾರೆ ಎನ್ನಲಾಗಿದೆ. 200ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿದ ನಕ್ಸಲರು ಕಾವಲು ಕಾಯುತ್ತಿದ್ದ ರೈಲ್ವೆ ರಕ್ಷಣಾ ದಳದ ಸಿಬ್ಬಂದಿಯ ಬಳಿ ಇದ್ದ 47 ರೈಫಲ್ಗಳನ್ನು ಅಪಹರಿಸಿದ್ದಾರೆ. ಸ್ಲೀಪರ್ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದವರೇ ಹೆಚ್ಚಿನ ಆಕ್ರಮಣಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಪ್ರಭುತ್ವದ ವಿರುದ್ಧ ತಮ್ಮ ಹೋರಾಟ ನಡೆಸುತ್ತಿರುವ ಮಾವೋವಾದಿಗಳ ಮೂಲ ಉದ್ದೇಶ ದೇಶದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿ ಮೂಲಭೂತವಾಗಿ ಜನಪರ ಆಡಳಿತವನ್ನು ಸ್ಥಾಪಿಸುವುದೇ ಆಗಿದೆ. ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ಬಗೆಹರಿಸಿ ದೇಶದ ಅಮೂಲ್ಯ ಸಂಪತ್ತನ್ನು ರಕ್ಷಿಸಲು ಪಣ ತೊಟ್ಟಿರುವ ನಕ್ಸಲರ ಮೂಲ ಉದ್ದೇಶ ಜನಸಾಮಾನ್ಯರ ಅಭ್ಯುದಯವೇ ಆಗಿದೆ. ಆದರೆ ಮಾವೋವಾದಿಗಳು ಅನುಸರಿಸುತ್ತಿರುವ ಹೋರಾಟದ ಮಾರ್ಗ ಮತ್ತು ಧೋರಣೆಯನ್ನು ಗಮನಿಸಿದರೆ ಜನಸಾಮಾನ್ಯರ ಒಳಿತಿಗಿಂತಲೂ ತಮ್ಮ ಅಸ್ತಿತ್ವವನ್ನು ನಿರೂಪಿಸುವ ನಿಟ್ಟಿನಲ್ಲೇ ಹೆಚ್ಚು ಗಮನ ನೀಡುತ್ತಿರುವಂತಿದೆ. ಪ್ರಭುತ್ವದ ವಿರುದ್ಧ ಹೋರಾಡುವ ಶಕ್ತಿಗಳು ಆಡಳಿತ ಯಂತ್ರವನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತವೇ ಹೊರತು ತಮ್ಮ ದೈನಂದಿನ ಜೀವನದ ಜಂಜಾಟದಲ್ಲಿರುವ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡುವುದಿಲ್ಲ. ರೈಲು ಪ್ರಯಾಣಿಕರ ಮೇಲೆ ದಾಳಿ ನಡೆಸಿ ವಸ್ತುಗಳ ಲೂಟಿ ಮಾಡುವುದು ದರೋಡೆಕೋರರ ಲಕ್ಷಣವಾಗುತ್ತದೆಯೇ ಹೊರತು ಕ್ರಾಂತಿಕಾರಿಗಳ ಲಕ್ಷಣವಾಗುವುದಿಲ್ಲ. ಕ್ರಾಂತಿಕಾರಿಗಳ ಉದ್ದೇಶ ವ್ಯವಸ್ಥೆಯ ಪರಿವರ್ತನೆಯಾಗಿರಬೇಕೇ ಹೊರತು ವ್ಯವಸ್ಥೆಯ ವಿನಾಶವಲ್ಲ. ಈ ಸತ್ಯವನ್ನು ಗ್ರಹಿಸದೆ ಹೋದರೆ ಮಾವೋವಾದ ತನ್ನ ಮೊನಚನ್ನು ಕಳೆದುಕೊಂಡು ಜನಬೆಂಬಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಾನವನ ಜೀವಕ್ಕಿಂತಲೂ ಅಮೂಲ್ಯವಾದುದು ಬೇರೇನಿಲ್ಲ. ಇದನ್ನು ಪ್ರಭುತ್ವದಷ್ಟೇ ಮಾವೋವಾದಿಗಳೂ ಗ್ರಹಿಸುವುದು ಅಗತ್ಯ.
ಮಾವೋವಾದಿಗಳು ಪ್ರತಿನಿಧಿಸುತ್ತಿರುವ ಆದಿವಾಸಿಗಳು ಈ ಹಿಂಸಾತ್ಮಕ ಹೋರಾಟಗಳಿಂದ ಎಷ್ಟರ ಮಟ್ಟಿಗೆ ಪ್ರಯೋಜನ ಪಡೆದಿವೆ ಎಂಬ ಮೂರ್ತ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇಡೀ ದಂಡಕಾರಣ್ಯ ಪ್ರದೇಶವನ್ನು ಮತ್ತು ಐದು ರಾಜ್ಯಗಳ 220 ಜಿಲ್ಲೆಗಳನ್ನು ಆಕ್ರಮಿಸಿಕೊಂಡಿರುವ ಮಾವೋವಾದಿಗಳು ಯಾವುದೇ ಪ್ರಜಾತಾಂತ್ರಿಕ ನಿಯಮಗಳನ್ನು ಪಾಲಿಸದೆ ತಮ್ಮ ಶಸ್ತ್ರಾಸ್ತ್ರ ಬಲದ ಮೂಲಕವೇ ಕ್ರಾಂತಿ ಸಾಧಿಸಲು ಹೊರಟಿದ್ದಾರೆ. ಪ್ರಭುತ್ವದ ವಿರುದ್ಧ ಸಮರ ಸಾರಿರುವ ಮಾವೋವಾದಿಗಳು ತಮ್ಮ ಸಾಮಾಜಿಕ ತಳಹದಿಯನ್ನು ವಿಸ್ತರಿಸುವ ಬದಲು ಯುದ್ಧ ಸಾಮಥ್ರ್ಯವನ್ನು ವಿಸ್ತರಿಸುತ್ತಿರುವುದು ದುರದೃಷ್ಟಕರ. ಆದಿವಾಸಿಗಳು ಕಾರ್ಪೋರೇಟ್ ಉದ್ಯಮಿಗಳ ಲಾಭಕೋರತನಕ್ಕೆ ಬಲಿಯಾಗುತ್ತಿರುವುದು ಅಲ್ಲಗಳೆಯಲಾಗದ ಸತ್ಯ. ತಮ್ಮ ಮೂಲ ನೆಲ, ಜಲ ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸಿಕೊಂಡು, ತಮ್ಮ ಜೀವನಾಧಾರವಾದ ಕಸುಬುಗಳನ್ನು ಮುಂದುವರೆಸಿಕೊಂಡು ಹೋಗುವ ಸಂವಿಧಾನಿಕ ಹಕ್ಕು ಆದಿವಾಸಿಗಳಿಗೆ ಖಂಡಿತವಾಗಿಯೂ ಇದೆ.
ಗಣಿಗಾರಿಕೆ, ವಿಶೇಷ ಆರ್ಥಿಕ ವಲಯಗಳ ನೆಪದಲ್ಲಿ ಅರಣ್ಯ ಸಂಪತ್ತನ್ನು ವಿನಾಶದ ಅಂಚಿಗೆ ಕೊಂಡೊಯ್ಯುತ್ತಿರುವ ಕಾರ್ಪೋರೇಟ್ ಉದ್ಯಮಿಗಳು ಮತ್ತು ರಾಜಕೀಯ ಹಿತಾಸಕ್ತಿಗಳ ವಿರುದ್ಧ ಪ್ರಜಾಸತ್ತಾತ್ಮಕ ಹೋರಾಟ ನಡೆಸುವ ಸಂವಿಧಾನಿಕ ಹಕ್ಕೂ ಆದಿವಾಸಿಗಳಿಗಿರುತ್ತದೆ. ಆದರೆ ಇಂತಹ ಹೋರಾಟಗಳಿಗೆ ನಾಯಕತ್ವ ವಹಿಸುವ ಮಾವೋವಾದಿಗಳು ಅನುಸರಿಸಬೇಕಾದ ಮಾರ್ಗ ಯಾವುದು? ಪ್ರಭುತ್ವವನ್ನು ಎದುರಿಸುವ ಮೂಲಕ ಆದಿವಾಸಿಗಳನ್ನೂ ಪ್ರಭುತ್ವದ ಕೆಂಗಣ್ಣಿಗೆ ಗುರಿ ಮಾಡುವ ಮೂಲಕ ಸಾಧಿಸುವುದಾದರೂ ಏನು ? ಕಾರ್ಪೋರೇಟ್ ಉದ್ಯಮಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಆಳುವ ವರ್ಗಗಳು ಮಾವೋವಾದಿಗಳನ್ನು ಮಣಿಸುವ ನಿಟ್ಟಿನಲ್ಲಿ ಆದಿವಾಸಿಗಳ ಮೇಲೂ ಆಕ್ರಮಣ ಮಾಡುತ್ತಿರುವಾಗ ಮಾವೋವಾದಿಗಳ ತಂತ್ರಗಾರಿಕೆ ಹೇಗಿರಬೇಕು ? ಈ ಮೂರ್ತ ಪ್ರಶ್ನೆಗಳಿಗೆ ಸಿಪಿಐ(ಮಾವೋವಾದಿ) ಪಕ್ಷವು ನೈತಿಕ ಹೊಣೆಗಾರಿಕೆಯಿಂದ ಉತ್ತರಿಸಬೇಕಾಗಿದೆ.
ಒರಿಸ್ಸಾ, ಛತ್ತಿಸ್ಘಡ್, ಝಾರ್ಖಂಡ್ ರಾಜ್ಯಗಳ ಅರಣ್ಯಗಳಲ್ಲಿ ನೆಲೆಸಿರುವ ಆದಿವಾಸಿಗಳ ಸ್ಥಿತಿ ಇತ್ತ ಪುಲಿ ಅತ್ತ ದರಿ ಎಂಬಂತಾಗಿದೆ. ಸಶಸ್ತ್ರ ಪೊಲೀಸ್ ಪಡೆಗಳಿಂದ ರಕ್ಷಿಸಿಕೊಳ್ಳಲು ಅಡಗುತಾಣಗಳಲ್ಲಿ ಅವಿತಿರುವ ಆದಿವಾಸಿಗಳನ್ನು ಪೊಲೀಸರು ಮಾವೋವಾದಿಗಳ ಬೆಂಬಲಿಗರೆಂದು ಹೇಳಿ ಬಂಧಿಸುವುದು ನಿತ್ಯ ಸುದ್ದಿಯಾಗಿಹೋಗಿದೆ. ಒರಿಸ್ಸಾದ ಜಾಜ್ಪುರ್ ಜಿಲ್ಲೆಯಲ್ಲಿ ಟಾಟಾ ಉಕ್ಕು ಕಾರ್ಖಾನೆ ಮತ್ತು ಕಾರಿಡಾರ್ ರಸ್ತೆ ನಿರ್ಮಾಣವನ್ನು ವಿರೋಧಿಸುತ್ತಿರುವ ಜನಸಾಮಾನ್ಯರು ಮತ್ತೊಮ್ಮೆ ಪೊಲೀಸ್ ದಾಳಿ ನಡೆದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇಂತಹ ಅಭಿವೃದ್ಧಿ(?) ಯೋಜನೆಗಳ ವಿರುದ್ಧ ಹೋರಾಡುವವರನ್ನೆಲ್ಲಾ ಮಾವೋವಾದಿಗಳ ಬೆಂಬಲಿಗರೆಂದು ಬಂಧಿಸಿ, ಚಿತ್ರಹಿಂಸೆಗೊಳಪಡಿಸುವ ಪೊಲೀಸ್ ಕಾರ್ಯಾಚರಣೆಯಿಂದ ಸಾಮಾನ್ಯ ಜನತೆ ಬೇಸತ್ತು ಹೋಗಿದ್ದಾರೆ. ಆಪರೇಷನ್ ಗ್ರೀನ್ ಹಂಟ್ ಒಂದು ಉದಾಹರಣೆ. ಮತ್ತೊಂದೆಡೆ ಯಾವುದೇ ರಾಜಕೀಯ ವೇದಿಕೆ ಇಲ್ಲದೆ ತಮ್ಮ ಹೋರಾಟಕ್ಕೆ ಬೆಂಲಬ ಸೂಚಿಸುವ ರಾಜಕೀಯ ಪಕ್ಷಗಳ ಹುಡುಕಾಟದಲ್ಲಿ ತೊಡಗಿರುವ ಆದಿವಾಸಿಗಳಿಗೆ ಮಾವೋವಾದಿಗಳು ಮಾತ್ರ ಕಾಣುತ್ತಿದ್ದಾರೆ. ಬೂಷ್ವರ್ ರಾಜಕೀಯ ಪಕ್ಷಗಳು ಈ ಜನಪರ ಹೋರಾಟಗಳಿಗೆ ಸ್ಪೂರ್ತಿಯ ಸೆಲೆ ಒದಗಿಸಲು ವಿಫಲವಾದ ಸಂದರ್ಭದಲ್ಲಿ, ಇಂತಹ ಹೋರಾಟಗಾರರಿಗೆ ರಾಜಕೀಯ ವೇದಿಕೆಯನ್ನು ಕಲ್ಪಿಸಿ, ಪ್ರಜಾಸತ್ತಾತ್ಮಕ ಚಳುವಳಿಯನ್ನು ರೂಪಿಸುವುದು ಮಾವೋ ಅವರ ಮೂಲ ಸಿದ್ದಾಂತವಾಗಿತ್ತು. ಅಲ್ಲಿ ಹಿಂಸೆ ಅನಿವಾರ್ಯವಾಗಿರದೆ ಒಂದು ಅಸ್ತ್ರವಾಗಿತ್ತು. ಆದರೆ ಮಾವೋವಾದಿಗಳ ಆಶಯ ಭಿನ್ನವಾಗಿಯೇ ಇದೆ. ಲಾಲ್ಘಡ್ ಜನತೆಯ ಹೋರಾಟದಲ್ಲಿ ಪ್ರವೇಶಿಸಿದ ನಂತರ ಮಾವೋವಾದಿಗಳು ಸೃಷ್ಟಿಸಿರುವ ಭೀಕರ ಲೋಕ ಕಣ್ಣ ಮುಂದಿದೆ. ಹಾಗಾದಲ್ಲಿ ಮಾವೋವಾದಿಗಳ ಮೂಲ ಸಿದ್ಧಾಂತವೇನು?
ಪ್ರಭುತ್ವದ ವಿರುದ್ಧ ಸಮರ ಸಾರಲು ತಮ್ಮ ಬತ್ತಳಿಕೆಯಲ್ಲಿರುವ ಶಸ್ತ್ರಗಳನ್ನೆಲ್ಲಾ ಬಳಸುತ್ತಿರುವ ಮಾವೋವಾದಿಗಳು ಜನತೆಯ ಪ್ರಜಾಸತ್ತಾತ್ಮಕ ಆಶಯಗಳಿಗೇಕೆ ಸ್ಪಂದಿಸುತ್ತಿಲ್ಲ. ಕರ್ನಾಟಕದ ಪಾವಗಡ, ಶೃಂಗೇರಿ, ಚಿಕ್ಕಮಗಳೂರು ಮುಂತಾದ ಪ್ರದೇಶಗಳಲ್ಲೂ ಬೀಡು ಬಿಟ್ಟಿರುವ ಮಾವೋವಾದಿಗಳು ಕರ್ನಾಟಕದ ಜನತೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನೇಕೆ ಕೈಗೆತ್ತಿಕೊಳ್ಳುತ್ತಿಲ್ಲ. ಅರಣ್ಯಗಳಲ್ಲಿ ಬಂದೂಕು ಹಿಡಿದು ಬಂದೂಕಿನ ನಳಿಗೆಯಿಂದಲೇ ಕ್ರಾಂತಿ ಸಾಧಿಸುವ ಮಾವೋವಾದಿಗಳ ರಾಜಕೀಯ ಸಿದ್ಧಾಂತಕ್ಕೆ ಜನಸಮುದಾಯಗಳ ಸಂಪೂರ್ಣ ಸಹಮತ ಇದೆಯೇ ಎಂಬ ಅಂಶವನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತೀಯ ಜನತೆ ದೇಶದ ಸಂವಿಧಾನದಲ್ಲಿ, ಪ್ರಜಾಸತ್ತೆಯಲ್ಲಿ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸುತ್ತಿರುವುದು ಸರ್ವವಿಧಿತ. ಈ ನಿಟ್ಟಿನಲ್ಲಿ ಕಂಡುಬರುವ ಹಲವಾರು ನ್ಯೂನತೆಗಳನ್ನು ಸರಿಪಡಿಸುವ ದಾರ್ಶನಿಕತೆಯನ್ನೂ ಹಲವಾರು ಪ್ರಜಾ ಹೋರಾಟಗಳು ಪ್ರದರ್ಶಿಸಿವೆ. ಜನತೆಯ ಹಿತಾಸಕ್ತಿಗಳ ವಿರುದ್ಧವಾಗಿ ನಡೆದುಕೊಳ್ಳುವ ಯಾವುದೇ ರಾಜಕೀಯ ಪಕ್ಷಗಳನ್ನೂ ಮತದಾರರು ನಿರ್ಣಾಯಕವಾಗಿ ಸೋಲಿಸಿದ್ದಾರೆ.
ಹಾಗೆಂದ ಮಾತ್ರಕ್ಕೆ ಭಾರತೀಯ ಪ್ರಜಾತಂತ್ರ ಪರಿಪೂರ್ಣತೆಯನ್ನು ಸಾಧಿಸಿದೆ ಎಂತಲ್ಲ. ಕ್ರಮಿಸಬೇಕಾದ ಹಾದಿ ಸಾಕಷ್ಟಿದೆ. ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು, ಎಲ್ಲ ಜಾತಿಯ ಬಡವರು, ಕೃಷಿ ಕಾರ್ಮಿಕರು ಹೀಗೆ ಎಲ್ಲ ಜನಸಮುದಾಯಗಳು ಸಮಸ್ಯೆಗಳ ಸುಳಿಯಲ್ಲಿ ಮುಳುಗುತ್ತಿವೆ. ಈ ಸಂದರ್ಭದಲ್ಲಿ ಜನತೆಯನ್ನು ಒಂದು ಸಮ ಸಮಾಜದ ನಿರ್ಮಾಣದತ್ತ ಕೊಂಡೊಯ್ಯುವ ಗುರುತರ ಹೊಣೆಗಾರಿಕೆ ನಾಗರಿಕ ಸಮಾಜದ್ದಾಗಿದೆ. ಈ ನಾಗರಿಕ ಸಮಾಜದ ಒಂದು ಭಾಗವಾಗಿ ಮಾವೋವಾದಿಗಳೂ ತಮ್ಮದೇ ಆದ ಸೈದ್ಧಾಂತಿಕ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಹೋರಾಟ ಕೇವಲ ಹಿಂಸೆ-ಪ್ರತಿಹಿಂಸೆಯಲ್ಲೇ ಪರ್ಯವಸಾನ ಹೊಂದುತ್ತಿದೆ. ಅಂತ್ಯವಿಲ್ಲದ ನರಮೇಧಗಳಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇತ್ತ ಆದಿವಾಸಿಗಳ ಸಮಸ್ಯೆಗಳೂ ಪರಿಹಾರವಾಗುತ್ತಿಲ್ಲ, ಅತ್ತ ಸಂಪತ್ತಿನ ಲೂಟಿಯೂ ನಿಲ್ಲುತ್ತಿಲ್ಲ. ಏಕೆಂದರೆ ಮಾವೋವಾದಿಗಳ ಹೋರಾಟ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವಲ್ಲಿ ವಿಫಲವಾಗಿದೆ. ಇದು ಮಾವೋವಾದದ ವೈಫಲ್ಯವೋ ಮಾವೋವಾದಿ ಪಕ್ಷದ ನ್ಯೂನತೆಯೋ ಇತಿಹಾಸವೇ ನಿರ್ಧರಿಸುತ್ತದೆ.








Good one sir!