ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಿಂದೊಂದಿತ್ತು ಕಾಲ…!

ಕಳೆದು ಹೋದ ಆ ದಿನಗಳು – ಒಂದು ನೆನಪಿನ ಗಾಲಿ

ಬೇಲೂರು ರಾಮಮೂರ್ತಿ


ಈ ಲೇಖನವನ್ನು ನೀವು ಭಾರತದಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿದ್ದರೆ ಖಂಡಿತಾ ಓದಲೇ ಬೇಕು. ಏಕೆಂದರೆ ಈ ಲೇಖನ ತಮಗೆ ತಾವೇ ಸಹಾಯ ಮಾಡಿಕೊಂಡು ಓದಿ ಬೆಳೆಯುತ್ತಾ, ಸರ್ಕಾರದ ಯಾವ ಸಹಾಯವೂ ಇಲ್ಲದೇ, ವೈದ್ಯಕೀಯ ಸೌಲಭ್ಯವೂ ಇಲ್ಲದೇ, ಕೆಲಸವೂ ಸಿಗದೇ ಅಥವಾ ಕೆಲಸ ಇದ್ದರೂ ಸಾಕಷ್ಟು ಉಳಿತಾಯವಿಲ್ಲದೇ, ಪಿತ್ರಾರ್ಜಿತ ಆಸ್ತಿಯೂ ಇಲ್ಲದೇ, ನಮಗೆ ಏನಿದೆಯೋ ಅದರಲ್ಲೇ ಸಂತೃಪ್ತಿ ಪಟ್ಟುಕೊಂಡು ತಮ್ಮ ದೈನಂದಿನ ಸಂಪಾದನೆಯಿಂದಲೇ ಜೀವನ ಸಾಗಿಸುವವರ ಕುರಿತಾದದ್ದು.
1940, 1950,1960, 1970ರ ಆಸುಪಾಸಿನಲ್ಲಿ ಹುಟ್ಟಿ ಬೆಳೆದವರಿಗೆ ಅವರ ಬಾಲ್ಯ ಹೇಗಿತ್ತು ಅಂತ ಒಮ್ಮೆ ಇಣುಕಿನೋಡಿಕೊಂಡರೆ ಇಂದು ಅದು ಬಹಳ ಆಶ್ಚರ್ಯದ ವಿಷಯವಾಗುತ್ತದೆ. ಏಕೆಂದರೆ :
ನಾವು ಹುಟ್ಟುವ ಮೊದಲು ನಮ್ಮ ತಾಯಂದಿರು ತಿಂಗಳಿಗೊಮ್ಮೆ ಹೋಗಿ ಚೆಕಪ್ ಮಾಡಿಸಿಕೊಂಡು ಬರುತ್ತಿರಲಿಲ್ಲ. ಒಬ್ಬರ ಮನೆಯಲ್ಲಿ ಬಸುರಿ ಹೆಂಗಸು ಇದಾಳೆ ಅಂದರೆ ಸುತ್ತ ಮುತ್ತ ಇರೋರಿಗೆಲ್ಲ ಆಸಕ್ತಿ. ಅವಳಿಗೆ ಇಷ್ಟ ಅಂತ ಅನೇಕ ವಿಧದ ತಿಂಡಿಗಳನ್ನು ಮಾಡಿಕೊಡುತ್ತಿದ್ದರು. ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ಹೇಳುತ್ತಿದ್ದರು. ಪ್ರಸವವಾಗುವವರೆಗೂ ಅವರ ಒಂದು ಗಮನ ಬಸುರಿ ಹೆಂಗಸಿನ ಕಡೆಗೆ ಇರುತ್ತಿತ್ತು. ಸುಖವಾದ ಪ್ರಸವವಾಗೋದಕ್ಕೆ ಏನು ಸಹಾಯ ಬೇಕಾದರೂ ಮಾಡೋದಕ್ಕೆ ಸಿದ್ದವಾಗಿರುತ್ತಿದ್ದರು. ಇನ್ನು ಬಸುರಿ ಹೆಂಗಸು ವಿಧವಿಧವಾದ ಮಾತ್ರೆಗಳನ್ನು ನುಂಗುತ್ತಿರಲಿಲ್ಲ. ಸಿರಪ್ಗಳನ್ನು ಕುಡಿಯುತ್ತಿರಲಿಲ್ಲ. ಬಸುರಿ ಅನ್ನೋದನ್ನೇ ಮರೆತು ಮನೆಗೆಲಸಗಳನ್ನೆಲ್ಲ ಮಾಡುತ್ತಿದ್ದಳು. ಆಗೆಲ್ಲ ಯಾವ ನರ್ಸಿಂಗ್ ಹೋಂಗಳಾಗಲೀ, ವಿಶೇಷ ತಜ್ಞರಾಗಲೀ ಇರಲಿಲ್ಲ. ಇನ್ನು ಸ್ಕಾನಿಂಗ್ ಅಂತೂ ಅದರ ಹೆಸರನ್ನೇ ಯಾರೂ ಕೇಳಿರಲಿಲ್ಲ. ಪ್ರಸೂತಿ ತಜ್ಞೆ ಒಬ್ಬಳು ಬರೋಳು. ಮನೆಯಲ್ಲೇ ಹೆರಿಗೆ ಆಗುತ್ತಿತ್ತು. ಕೇವಲ ಐವತ್ತು ನೂರರ ಖರ್ಚಿನಲ್ಲಿ. ಹೀಗೆ ಆಗುತ್ತಿತ್ತು ನಮ್ಮ ಈ ಭೂಮಿಯ ಪಯಣ.
ಯಾವ ತಾಯಿಯೂ ಅವಳ ಯಾವ ವಯಸ್ಸಿನಲ್ಲಿಯೂ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ಅಸಲಿಗೆ ಅವಳದು ಯಾವ ರಕ್ತದ ಗುಂಪು ಅಂತ ಅವಳಿಗೇ ಗೊತ್ತಿರಲಿಲ್ಲ.
ನಾವು ಹುಟ್ಟಿದ ಮೇಲೆ ನಮಗೆ ಯಾವ ರೀತಿಯ ಬೇಬಿ ಫುಡ್ ಆಗಲೀ, ಡಯಾಪರ್ಗಳಾಗಲೀ ಇರಲಿಲ್ಲ. ತಾಯಿ ತನ್ನ ಹಾಲನ್ನು ಸಮೃದ್ದವಾಗಿ ಕೊಡುತ್ತಿದ್ದಳು. ನಾವು ಹುಟ್ಟಿದ ಮೇಲೆ ಬೇಕಾಗುತ್ತೆ ಅಂತ ನಮ್ಮ ತಾಯಿ ತನ್ನ ಹಳೆಯ ಸೀರಗಳನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಇಟ್ಟುಕೊಂಡಿರುತ್ತಿದ್ದಳು. ಮಳೆಗಾಲದ ಹೆರಿಗೆ ಅಂದರೆ ಇಂಥಾ ಬಟ್ಟೆಗಳು ಇನ್ನೂ ಹೆಚ್ಚಿಗೆ ಬೇಕಾಗುತ್ತಿತ್ತು. ನಮಗೆ ಯಾವ ಡ್ರಾಪ್ಸ್ಗಳನ್ನೂ ಹಾಕುತ್ತಿರಲಿಲ್ಲ. ಯಾರೋ ನಮ್ಮನ್ನು ಎತ್ತಿಕೊಳ್ಳೋರು, ಯಾರೋ ಆಡಿಸೋರು. ನಮಗೆಂದು ಯಾವ ಆಟಿಕೆಗಳೂ ಇರಲಿಲ್ಲ. ನಮಗೆ ಯಾವ ಔಷದಿಯನ್ನಾಗಲೀ, ಟಾನಿಕ್ಗಳನ್ನಾಗಲೀ ಕುಡಿಸಿದವರಲ್ಲ. ಆದರೆ ದಿನಾ ಎಣ್ಣೆನೀರು ಹಾಕೋರು. ನಮ್ಮನ್ನು ಸಾಮ್ರಾಣಿ ಹೊಗೆಯಲ್ಲಿ ಒಣಗಿಸುತ್ತಿದ್ದರು. ನಂತರ ನಾವು ಸಮೃಧ್ದವಾಗಿ ನಿದ್ದೆ ಮಾಡುತ್ತಿದ್ದೆವು.

ನಾವು ಬೆಳೆಯುತ್ತಾ ಬಂದಂತೆ ನಮಗೆ ಯಾವ ಆಟದ ಪದಾರ್ಥಗಳೂ ಇರಲಿಲ್ಲ. ಏನು ಸಿಕ್ಕಿದರೆ ಅದರಲ್ಲೇ ಆಡುತ್ತಿದ್ದೆವು. ಡಬ್ಬದ ಮುಚ್ಚಳಕ್ಕೆ ಒಂದು ತೂತು ಮಾಡಿ ಅದಕ್ಕೆ ಒಂದು ದಾರ ಕಟ್ಟಿ ಅದನ್ನು ಗಿರಗರನೆ ತಿರುಗಿಸುವುದೇ ಒಂದು ಖುಷಿಯಾದ ಆಟ. ಜಾತ್ರೆ ಬಂದರೆ ಏನಾದರೂ ಆಟದ ಪದಾರ್ಥಗಳು ಸಿಗುತ್ತಿದ್ದವು. ಅದೂ ದುಡ್ಡಿದ್ದವರ ಮನೆಯಲ್ಲಿ ಮಾತ್ರ. ಇಲ್ಲದ ಮನೆಯ ಮಕ್ಕಳು ಅವರು ಆಡೋದನ್ನೇ ನೋಡುತ್ತಾ ಖುಷಿಪಡಬೇಕು. ಇನ್ನು ಹಳೆಯ ಸೈಕಲ್ ಚಕ್ರದ ಟ್ಯೂಬನ್ನೇ ಆಟದ ಗಾಲಿಯನ್ನಾಗಿ ಮಾಡಿಕೊಂಡು ಆಟವಾಡುತ್ತಿದ್ದೆವು. ಮನೆಯ ಹಿತ್ತಲಿನಲ್ಲಿ ಇರುವ ಯಾವುದಾದರೂ ಗಟ್ಟಿ ಮರದ ಕೊಂಬೆಯನ್ನು ಕಡಿದು ಅದನ್ನು ನೈಸ್ ಮಾಡಿ ಅದನ್ನೇ ಚಿನ್ನಿ ದಾಂಡು ಅಂತ ಮಾಡಿಕೊಂಡು ಆಡುತ್ತಿದ್ದೆವು. ವಾಲಿಬಾಲ್ ಆಡೋಕೆ ನಮಗೆ ಸಿಗುತ್ತಿದ್ದುದು ಚಕ್ಕೋತನೆ ಕಾಯಿ, ದೊಡ್ಲಿ ಕಾಯಿ ಇಂಥವು. ನಮ್ಮ ಮನೆಯಲ್ಲಿ ಆ ಕಾಯಿಗಳು ಇಲ್ಲದೇ ಹೋದರೆ ಯಾರ ಮನೆಯಲ್ಲಿ ಬಿಟ್ಟಿದೆಯೋ ಅವರ ಮನೆಗೆ ಹೋಗಿ ಅವರಿಗೆ ಕಾಣದ ಹಾಗೆ ಕಿತ್ತುಕೊಂಡು ಬರುತ್ತಿದ್ದುದೂ ಉಂಟು.
ಇನ್ನು ಮನೆಯಲ್ಲಿ ಸ್ಕೂಟರಾಗಲೀ, ಕಾರಾಗಲೀ ಇರಲಿಲ್ಲ. ಮನೆಯಲ್ಲಿ ಸೈಕಲ್ ಇದ್ದರೆ ಅವರೇ ಶ್ರೀಮಂತರು. ಅಪರೂಪಕ್ಕೊಮ್ಮೆ ಯಾರದ್ದಾದರೂ ಕಾರಿನಲ್ಲಿ ಕೂತರೆ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಕೂರುತ್ತಿದ್ದೆವು. ( ಅಸಲಿಗೆ ಕಾರುಗಳೇ ಕಮ್ಮಿ ಇನ್ನು ಆಗಿನ ಕಾಲದಲ್ಲಿ ಸೀಟ್ ಬೆಲ್ಟ್ ಎಲ್ಲಿಂದ ಬರಬೇಕು, ಅದನ್ನು ಹಾಕಿಕೊಳ್ಳುವ ಪರಿಪಾಠ ಆಗಿನ್ನೂ ಬಂದಿರಲಿಲ್ಲ ) ಯಾರಾದರೂ ಹೊಸಾ ಕಾರೋ ಇಲ್ಲಾ ಸೆಕೆಂಡ್ ಹ್ಯಾಂಡ್ ಕಾರೋ ತಂದಿದ್ದರೆ ಎಲ್ಲರೂ ಅದನ್ನು ಹೋಗಿ ಕುತೂಹಲದಿಂದ ನೋಡಿಕೊಂಡು ಬರುತ್ತಿದ್ದರು. ಆಯುಧ ಪೂಜೆ ಬರೋದನ್ನೇ ಕಾಯುತ್ತಿದ್ದೆವು. ಏಕೆಂದರೆ ಊರಿನಲ್ಲಿ ಇದ್ದ ಕೆಲವು ಲಾರಿ ಮಾಲೀಕರು ಲಾರಿಗೆ ಸಿಂಗಾರ ಮಾಡಿ ಅದರಲ್ಲಿ ಜನರನ್ನು ಕೂರಿಸಿಕೊಂಡು ಒಂದು ಸುತ್ತು ಬರುತ್ತಿದ್ದರು. ಆಗೆಲ್ಲ ಹಾಗೆ ಲಾರೀಲಿ ಕೂತೋರು ಯಾರ ಲಾರಿ ಒಳ್ಳೇದು ಅಂತ ಕೂಗಿದರೆ ನಾವೆಲ್ಲ ಯಾರ ಲಾರೀಲಿ ಕೂತಿರುತ್ತಿದ್ದೆವೋ ಅವರ ಹೆಸರು ಕೂಗುತ್ತಿದ್ದೆವು. ಅದೊಂದು ಜಾಲೀ ರೈಡು.
ಇನ್ನು ನಮ್ಮ ಆಟಗಳೋ ದೇವರಿಗೇ ಪ್ರೀತಿ. ನಾವೆಲ್ಲ ರಸ್ತೆಯಲ್ಲೇ ಚಿನ್ನಿ ದಾಂಡು, ಗೋಲಿ ಆಟವಾಡುತ್ತಿದ್ದೆವು. ಯಾರೂ ನಮ್ಮನ್ನು ಗದರುತ್ತಿರಲಿಲ್ಲ. ರಸ್ತೆಯಲ್ಲಿ ವಾಹನಗಳೇ ಇರಲಿಲ್ಲ. ಹೀಗಾಗಿ ಇಡೀ ರಸ್ತೆ ನಮಗೇ. ಆಟ ಮುಗಿಸಿ ಮನೆಗೆ ಬಂದ ಮೇಲೆ ಎಷ್ಟೋ ದಿನ ಕೈ ತೊಳೆಯದೇ ತಿಂಡಿ ತಿಂದುಬಿಡುತ್ತಿದ್ದೆವು. ನಮಗೆ ಏನೂ ಆಗಲಿಲ್ಲ. ಎಷ್ಟೊತ್ತು ಆಡಿದರೂ ನಮ್ಮನ್ನು ಮನೇಲಿ ತಂದೆ ತಾಯಿಯರು ಗದರುತ್ತಿರಲಿಲ್ಲ. ಮಕ್ಕಳು ಎಲ್ಲೇ ಇರಲಿ, ಏನೇ ಆಡಿಕೊಳ್ಳಲಿ ಬೀದಿ ದೀಪ ಹತ್ತಿಕೊಳ್ಳೋ ಮೊದಲು ಮನೇಲಿ ಇರಬೇಕು ಅನ್ನೋ ಒಂದು ಅಲಿಖಿತ ಕಾನೂನು ಆಗ ಇತ್ತು. ಆಗೆಲ್ಲ ಸಂಜೆ ಆರುಗಂಟೆಗೆ ಕರಾರುವಾಕ್ಕಾಗಿ ಬೀದಿ ದೀಪಗಳು ಹೊತ್ತಿಕೊಳ್ಳುತ್ತಿದ್ದವು. ಹಾಗೆಯೇ ನಾವು ಆ ಸಮಯಕ್ಕೆ ಸರಿಯಾಗಿ ಮನೆಗೆ ಬಂದುಬಿಡುತ್ತಿದ್ದೆವು. ನಂತರ ಕೈ ಕಾಲು ಮುಖ ತೊಳೆದು ದೇವರಿಗೆ ನಮಸ್ಕರಿಸಿ ಪಾಠ ಓದಿಕೊಳ್ಳಲು ಷರು ಮಾಡುತ್ತಿದ್ದೆವು. ನಾವು ಓದಿಕೊಳ್ಳುವಾಗ ನಮಗೆ ರೇಡಿಯೋ, ಟಿವಿ, ಮುಂತಾದ ಉಪಕರಣಗಳು ಬೇಕಾಗಿರಲಿಲ್ಲ, ಅವುಗಳು ಇರಲೂ ಇಲ್ಲ. ಓದಿಕೊಂಡಾದ ಮೇಲೆ ಊಟ. ನಂತರ ಗಡದ್ದು ನಿದ್ದೆ.
ನಾವು ಹೊರಗಡೆ ಹೋದಾಗ ದುಡ್ಡಿದ್ದ ಹುಡುಗನೊಬ್ಬ ತಂಪಾದ ಪಾನೀಯ ಕೊಂಡರೆ ಅದನ್ನೆ ನಾಲ್ಕು ಜನ ಕುಡಿಯುತ್ತಿದ್ದೆವು. ಒಬ್ಬ ಹುಡುಗ ತಂದಿದ್ದ ಚಪಾತಿಯನ್ನೋ ದೋಸೆಯನ್ನೋ ಇನ್ನೊಬ್ಬರ ತಟ್ಟೆಯ ಚಟ್ನಿಗೋ ಸಾಂಬಾರಿಗೋ ಅದ್ದಿಕೊಂಡು ತಿನ್ನುತ್ತಿದ್ದೆವು.
ಇನ್ನು ಈಗಿನಂತೆ ಆಗ ಚಿಪ್ಸ್, ವೇಪರ್ಸು, ಫೈವ್ ಸ್ಟಾರ್, ಇಂಥವು ಇರಲಿಲ್ಲ. ಏನಿದ್ದರೂ ಶುಂಠಿ ಪೆಪ್ಪರ್ಮಿಂಟು, ನಿಂಬೆಹುಳಿ ಪೆಪ್ಪರ್ ಮಿಂಟು ಮುಂತಾದುವು. ಯಾರ ಮನೆಯಲ್ಲಿಯೂ ಬಿಸ್ಕತ್ ಸ್ಟಾಕ್ ಇರುತ್ತಿರಲಿಲ್ಲ. ಹೀಗಾಗಿ ಮನೆಯಿಂದ ಆಚೆ ಹೋದರೆ ರಸ್ತೆಯ ಮರಗಳಲ್ಲಿ ಬಿಡುತ್ತಿದ್ದ ಸೀಬೆಕಾಯಿ, ನೇರಳೇಹಣ್ಣು, ಟೊಮೇಟೋ ಹಣ್ಣು ಮುಂತಾದುವುಗಳನ್ನು ಸಾಕಷ್ಟು ತಿನ್ನುತ್ತಿದ್ದೆವು. ಇಷ್ಟಾದರೂ ಒಂದು ದಿನವೂ ಹೊಟ್ಟೆ ನೋವೆಂದು ಬಳಲಿದವರಲ್ಲ, ಹೊಟ್ಟೆ ಸರಿಯಿಲ್ಲ ಅಂತ ಕೊರಗಿದವರಲ್ಲ. ಆದರೆ ತಿಂಗಳಿಗೊಮ್ಮೆ ಮಾತ್ರ ನಮ್ಮ ಅಮ್ಮನಿಂದ ತಪ್ಪಿಸಿಕೊಂಡು ಓಡುತ್ತಿದ್ದೆವು. ಏಕೆಂದರೆ ನಮ್ಮ ಹೊಟ್ಟೆ ಕ್ಲೀನ್ ಮಾಡಲು ಅವಳು ನಮಗೆ ಹರಳೆಣ್ಣೆ ಕುಡಿಸಲು ಬರುತ್ತಿದ್ದಳು.
ಜಾತ್ರೆಗೆ ಬರುತ್ತಿದ್ದ ಅಂಗಡಿಗಳಿಂದ ಏನು ಬೇಕೋ ತಿಂಡಿ ತಿನ್ನುತ್ತಿದ್ದೆವು, ಅವರ ಬಳಿ ಇದ್ದ ನೀರನ್ನೇ ಕುಡಿಯುತ್ತಿದ್ದೆವು. ಆಲೆಮನೆಗೆ ಪದೇ ಪದೇ ಹೋಗೋದು ಆಗಿನ ಒಂದು ಪರಿಪಾಠ. ದಿನಾ ಬೇರೆ ಬೇರೆ ಆಲೆಮನೆಗೆ ಹೋಗೋದು. ಅಲ್ಲಿ ಹೋದರೆ ನಾವು ಕುಡಿಯುವಷ್ಟು ಕಬ್ಬಿನ ಹಾಲು ಕೊಡುತ್ತಿದ್ದರು. ಬೆಲ್ಲ ಆಗೋ ಸಮಯ ಅಂದರೆ ಬಿಸಿ ಬಿಸಿ ಬೆಲ್ಲವೂ ಸಿಗುತ್ತಿತ್ತು. ಜೊತೆಗೆ ದಾರಿಯುದ್ದಕ್ಕೂ ತಿನ್ನಲು ಕಬ್ಬು ಕೂಡಾ ಕೊಡುತ್ತಿದ್ದರು. ಆಗೆಲ್ಲ ಕೊಟ್ಟು ತೃಪ್ತಿ ಪಡುವ ಕಾಲ. ಇಷ್ಟೆಲ್ಲ ತಿಂದರೂ ನಾವು ಅಂಥಾ ದಪ್ಪ ಶರೀರದವರಾಗಲಿಲ್ಲ. ಏನೊಂದು ಕಾಹಿಲೆಯೂ ಬರಲಿಲ್ಲ. ಏಕೆಂದರೆ ಸದಾ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಿದ್ದೆವು.
ರಜಾ ಬಂದುಬಿಟ್ಟರೆ ನಮ್ಮನ್ನು ಹಿಡಿಯುವವರೇ ಇರಲಿಲ್ಲ. ಮನೆಯಲ್ಲೂ ನಮ್ಮನ್ನು ತಡೆಯುತ್ತಿರಲಿಲ್ಲ. ಆಗ ನಮ್ಮನ್ನು ಹುಡುಕಲು ಫೋನ್ ಇರಲಿಲ್ಲ, ಮೊಬೈಲ್ ಇರಲಿಲ್ಲ. ಆದರೂ ಮನೆಯವರಿಗೆ ಧೈರ್ಯ ಇತ್ತು. ಬಿಸಿಲು, ಗಾಳಿ, ಮಳೆ ಎನ್ನದೇ ದಿನವಿಡೀ ಆಡಿ ಬರುತ್ತಿದ್ದೆವು. ಆದರೂ ನಮ್ಮ ಆರೋಗ್ಯದಲ್ಲಿ ಏನೂ ಏರುಪೇರಾಗಲಿಲ್ಲ.
ಸ್ನೇಹಿತನನ್ನು ಹುಡುಕಿಕೊಂಡು ಅವರ ಮನೆಗೆ ಯಾವಾಗ ಬೇಕಾದರೂ ಹೋಗಬಹುದಿತ್ತು. ಹಾಗೆ ಹೋದರೆ ಮನೆಯೊಳಗೆ ಕರೆಯೋರು. ತಿಂಡಿ ಸಮಯವಾದರೆ ತಿಂಡಿ ಕೊಡೋರು, ಇಲ್ಲದಿದ್ದರೆ ಬೇರೆ ಏನಾದರೂ ಕೊಡೋರು. ಒಟ್ಟಿನಲ್ಲಿ ಮಕ್ಕಳನ್ನು ಹಾಗೇ ಕಳಿಸುತ್ತಿರಲಿಲ್ಲ. ನಮ್ಮ ಬಗ್ಗೆ ತೀರಾ ಕನಿಕರದಿಂದ ವಿಚಾರಿಸೋರು. ಕಡೆಗೆ ಚನ್ನಾಗಿ ಓದಿ ಮುಂದೆ ಬರಬೇಕು ಅಂತ ತಿಳುವಳಿಕೆ ಹೇಳುತ್ತಿದ್ದರು.
ಮಳೆ ಬಂದರೆ ನಮಗೆ ಖುಷಿ, ಕಾಗದದ ದೋಣಿ ಮಾಡಿ ಚರಂಡಿಯಲ್ಲಿ ತೇಲಿಬಿಟ್ಟು ಅದು ಎಲ್ಲಿಗೆ ಹೋಗುತ್ತದೆ ಅನ್ನುವುದನ್ನೇ ನೋಡಿಕೊಂಡು ಅದರೊಟ್ಟಿಗೇ ಹೋಗುತ್ತಿದ್ದೆವು. ದೊಡ್ಡ ಚರಂಡಿಯಾದರೆ ಸ್ನೇಹಿತರ ಜೊತೆಗೆ ಸ್ವರ್ಧೆ ಬೇರೆ. ಯಾರ ದೋಣಿ ಬೇಗ ಬೇಗ ಸಾಗುತ್ತದೆ ಅಂತ. ಹಳೆಯ ಪೇಪರುಗಳಲ್ಲಿ ದೋಣಿ ಮಾಡೋದು, ಇಂಕು ಕುಡಿಕೆ ಮಾಡೋದು ಆಗಿನ ಒಂದು ಆಟ.
ನಮಗೆ ನಮ್ಮ ತಂದೆ ತಾಯಿಯರು ಯಾವ ಆಟದ ಸಾಮಾನುಗಳನ್ನೂ ಕೊಡಿಸುತ್ತಿರಲಿಲ್ಲ. ಕೊಡಿಸಲು ಪಾಪ ಅವರ ಬಳಿ ದುಡ್ಡು ಇರುತ್ತಿರಲಿಲ್ಲ. ಹಳೇ ಪೇಪರು ಕತ್ತರಿಸಿ ನಾವೇ ಗಾಳಿಪಟ ಮಾಡಿಕೊಳ್ಳುತ್ತಿದ್ದೆವು. ಸ್ವಲ್ಪ ಅಗಲವಾಗಿರುವ ಮರದ ತುಂಡು ಸಿಕ್ಕರೆ ಅದನ್ನೇ ಬ್ಯಾಟ್ ಎಂದು ಪರಿಗಣಿಸಿ ದೊಡ್ಲಿ ಕಾಯಿ, ಹೇರಳೇ ಕಾಯಿಯನ್ನು ಕಿತ್ತು ಅದನ್ನೇ ಬಾಲ್ ಎಂದು ಪರಿಗಣಿಸಿ ಆಡುತ್ತಿದ್ದೆವು.
ನಮ್ಮ ತಂದೆ ತಾಯಿಯರು ಹೆಚ್ಚು ಓದಿದವರಲ್ಲ. ಆದರೆ ಅವರ ತಿಳುವಳಿಕೆಗೇನು ಕಮ್ಮಿ ಇರಲಿಲ್ಲ. ಇನ್ನು ದೂರದ ಊರುಗಳಿಗಾಗಲೀ, ದೇಶಗಳಿಗಾಗಲೀ ಪ್ರವಾಸ ಹೋದವರಲ್ಲ.ಮಕ್ಕಳು ದೊಡ್ಡವರ ಮುಂದೆ ಕೂರುತ್ತಿರಲಿಲ್ಲ. ಕೂತರೂ ಕಾಲ ಮೇಲೆ ಕಾಲು ಹಾಕಿಕೊಂಡು ಕೂರುತ್ತಲೇ ಇರಲಿಲ್ಲ. ಯಾವ ಊರಿನಲ್ಲಿಯೂ ಜಾತಿ ಒಂದು ಸಮಸ್ಯೆಯೇ ಆಗಿರಲಿಲ್ಲ. ಎಲ್ಲರೂ ಎಲ್ಲರನ್ನೂ ಗೌರವಿಸುತ್ತಿದ್ದರು.
ಯಾರಾದರೊಬ್ಬರ ಮನೆಯಲ್ಲಿ ಹಬ್ಬ ವ್ರತ ಅಂತ ಆದರೆ ಬಹುಪಾಲು ಜನರಿಗೆ ಆಹ್ವಾನ ಇರುತ್ತಿತ್ತು. ಹೆಂಗಸರು ಬಂದು ಅಡಿಗೆಗೆ ಸಹಾಯ ಮಾಡುತ್ತಿದ್ದರು. ಗಂಡಸರು ಪೂಜೆಗೆ ಸಹಕರಿಸುತ್ತಿದ್ದರು. ಹೀಗೆ ಒಂದು ಮನೆಯ ಸಂಭ್ರಮವನ್ನೇ ಎಲ್ಲರ ಮನೆಯ ಸಂಭ್ರಮವೆಂದು ಕಾಣುತ್ತಿದ್ದರು. ಇನ್ನು ಯಾರ ಮನೆಯಲ್ಲಿಯಾದರೂ ಸಾವು ಆದರಂತೂ, ಒಂದೊಂದು ಮನೆಗೆ ಒಬ್ಬೊಬ್ಬರಂತೆ ಸಹಾಯಕ್ಕೆ ಬಂದು ನಿಲ್ಲುತ್ತಿದ್ದರು. ಯಾರೊಡನೆಯೂ ಹೇಳಿಸಿಕೊಳ್ಳದೇ ಆ ಸಮಯಕ್ಕೆ ಏನು ಬೇಕೋ ಅದನ್ನು ಮಾಡುತ್ತಿದ್ದರು. ನಾನು ಅದು ಮಾಡಿದೆ ಇದು ಮಾಡಿದೆ ಎಂದು ಒಂದು ಸಾರಿಯೂ ಕೊಚ್ಚಿಕೊಂಡವರಲ್ಲ. ಕೆಲಸವನ್ನು ಹಂಚಿಕೊಂಡು ಮಾಡಿಬಿಡುತ್ತಿದ್ದರು. ಉದಾರತೆ ತುಂಬಾ ಇದ್ದ ದಿನಗಳು ಅವು.
ನಮಗೆ ಪಾಕೆಟ್ ಮನಿ ಎಂದರೆ ಏನೆಂದೇ ಗೊತ್ತಿರಲಿಲ್ಲ. ಅಸಲಿಗೆ ನಾವು ದುಡ್ಡನ್ನೇ ಕಂಡವರಲ್ಲ. ಮಕ್ಕಳಿಗೆ ದುಡ್ಡು ತೋರಿಸುತ್ತಿರಲಿಲ್ಲ. ಹೀಗಾಗಿ ಯಾವುದಾದರೂ ಹುಡುಗನ ಬಳಿ ಹತ್ತು ರೂಪಾಯಿ ನೋಟು ಇದೆ ಅಂದರೆ ಅದೇ ದೊಡ್ಡ ಸುದ್ದಿಯಾಗಿ ಅದರ ಬಗೆಗೆ ವಿಚಾರಣೆಯೂ ನಡೆಯುತ್ತಿತ್ತು. ಹೀಗಾಗಿ ನಮ್ಮ ತಂದೆಯ ಆಸ್ತಿ ಎಷ್ಟು, ಅದು ಎಲ್ಲೆಲ್ಲಿ ಇದೆ, ಅದರಲ್ಲಿ ನಮಗೆ ಎಷ್ಟು ಬರುತ್ತದೆ ಅಂತ ಯೋಚಿಸಿದವರೇ ಅಲ್ಲ. ನಮ್ಮ ತಂದೆ ತಾಯಿಯರಾದರೂ ಅಷ್ಟೆ ಮಕ್ಕಳಿಗೆ ಆಸ್ತಿ ಮಾಡಿಡಬೇಕು ಅಂದುಕೊಂಡವರೇ ಅಲ್ಲ. ಆದರೆ ಒಂದು ಮಾತು ಮಾತ್ರ ನಿಜ, ನಮ್ಮನ್ನು ಚನ್ನಾಗಿ ಬೆಳೆಸಿದರು. ಹೇಗೆ ಬಾಳಬೇಕು ಅಂತ ತೋರಿಸಿಕೊಟ್ಟರು.
ಶಾಲೆಗೆ ಹೋಗುವಾಗಲಾಗಲೀ, ಅಥವಾ ಬೇರೆಲ್ಲಾದರೂ ಹೋಗಬೇಕಾದರಾಗಲೀ ನಾವು ಚಪ್ಪಲಿಯನ್ನು ಕಂಡವರಲ್ಲ, ಷೂ ಎಂದರೆ ಏನೆಂದೇ ಗೊತ್ತಿರಲಿಲ್ಲ. ಎಲ್ಲಿ ಹೋದರೂ ಬರಿಗಾಲೇ, ರಸ್ತೇಲಿ ಕಲ್ಲುಗಳು ಕಾಲಿಗೆ ಒತ್ತುತ್ತಿತ್ತು, ಮುಳ್ಳು ಚುಚ್ಚುತ್ತಿತ್ತು.ಅದು ಸಹಜ ಎನ್ನುವಂತೆ ಮುಳ್ಳು ಕಿತ್ತು ಮತ್ತೆ ಬರಿಗಾಲಲ್ಲಿ ನಡೆಯುತ್ತಿದ್ದೆವು. ಬಿಸಿಲುಗಾಲದಲ್ಲಿ ಶಾಲೆಗೆ ಹೋಗಬೇಕಾದರೆ ಕಟ್ಟಡಗಳ ನೆರಳುಗಳನ್ನು ಅನುಸರಿಸಿಕೊಂಡು ನಡೆಯುತ್ತಿದ್ದೆವು. ಅನಿವಾರ್ಯವಾಗಿ ಬಿಸಿಲಿನಲ್ಲಿ ನಡೆಯಲೇ ಬೇಕಾದ ಸಂದರ್ಭ ಬಂದರೆ ವೇಗವಾಗಿ ಓಡಿಬಿಡುತ್ತಿದ್ದೆವು. ಹೀಗಿದ್ದರೂ ಮನೆಗೆ ಬಂದು ನಮ್ಮ ತಂದೆ ತಾಯಿಯರನ್ನು ನಮಗೆ ಚಪ್ಪಲಿ ಕೊಡಿಸು, ಷೂ ಕೊಡಿಸು ಅಂತ ಪೀಡಿಸುತ್ತಿರಲಿಲ್ಲ. ನಮಗೆ ಯೂನಿಫಾರಂ ಅಂತ ಇರಲಿಲ್ಲ. ನಮ್ಮನ್ನು ಶಾಲೆಗೆ ಕರೆದುಕೊಂಡು ಹೋಗಲು ವಾಹನ ಬರುತ್ತಿರಲಿಲ್ಲ. ಇಂಟರ್ವಲ್ನಲ್ಲಿ ತಿನ್ನಲು ನಮಗೆ ಏನು ತಿಂಡಿಯೂ ಕೊಡುತ್ತಿರಲಿಲ್ಲ. ಶಾಲೆಗೆ ಹೋಗುವಾಗ ತಿಂದುಕೊಂಡು ಹೋಗಬೇಕು, ಶಾಲೆಯಿಂದ ಬಂದ ಮೇಲೆ ಮನೇಲಿ ತಿನ್ನಬೇಕು ಅಷ್ಟೆ. ಇನ್ನು ದಿನನಿತ್ಯ ಹೋಟೆಲು, ಅಂಗಡಿ ಅಂತ ನಮ್ಮ ತಂದೆ ಎಲ್ಲೂ ಕರೆದುಕೊಂಡು ಹೋಗುತ್ತಿರಲಿಲ್ಲ ನಾವೂ ಎಲ್ಲೂ ಹೋಗುತ್ತಿರಲಿಲ್ಲ. ಏಕೆಂದರೆ ದುಡ್ಡು ಇರುತ್ತಿರಲಿಲ್ಲ.
ನಾವು ದಿನಕ್ಕೆ ಹತ್ತು ಸಾರಿ ಕೈ ತೊಳೆಯುತ್ತಿರಲಿಲ್ಲ. ಅಂದ ಮೇಲೆ, ಲೈಫ್ ಬಾಯ್ ಆಗಲೀ ಡೆಟಾಲ್ ಇವುಗಳ ಪರಿಚಯವೇ ಇಲ್ಲ. ನಾವು ಹಲ್ಲು ಉಜ್ಜುತ್ತಿದ್ದುದೇ ನಂಜನಗೂಡಿನ ಹಲ್ಲುಪುಡಿಯಿಂದ. ಅದು ಸಿಹಿ, ಉಪ್ಪು ಎರಡು ರುಚಿಯಲ್ಲಿ ಬರುತ್ತಿತ್ತು. ನಾವು ಬಯಸುತ್ತಿದ್ದುದು ಸಿಹಿಯಾದ ಪುಡಿಯನ್ನೇ. ಟೂತ್ ಪೇಸ್ಟ್ ಆಗಲೀ, ಟೂತ್ ಬ್ರಷ್ ಆಗಲೀ ಅವುಗಳ ಹೆಸರನ್ನೇ ಕೇಳಿದವರಲ್ಲ. ಹೀಗಾದರೂ ನಾವಾಗಲೀ ನಮ್ಮ ಹಿರಿಯರಾಗಲೀ, ಹಲ್ಲು ನೋವು ಎಂದು ಬಳಲಿದವರಲ್ಲ. ಎಲ್ಲೋ ಅಪರೂಪಕ್ಕೆ ಯಾರಾದರೂ ಹಲ್ಲು ನೋವು ಅಂದರೆ ಒಂದು ಲವಂಗ ಹಲ್ಲಿಗೆ ಒತ್ತಿರಿಸಿಟ್ಟುಕೊಂಡುಬಿಡುತ್ತಿದ್ದರು. ಹೀಗಾಗಿ ನಮ್ಮ ಊರಿನಲ್ಲಿ ಹಲ್ಲಿನ ಡಾಕ್ಟರ್ ಇರಲೇ ಇಲ್ಲ.

ನಮ್ಮನ್ನು ನಮ್ಮ ತಾಯಿ ಇವತ್ತು ನಿನಗೆ ತಿಂಡಿ ಏನು ಮಾಡಲಿ, ಊಟಕ್ಕೆ ಏನು ಮಾಡಲಿ ಅಂತ ಕೇಳುತ್ತಿರಲಿಲ್ಲ. ನಾವೂ ಏನು ತಿಂಡಿ ಮಾಡ್ತೀಯ ಅಂತ ಕೇಳುತ್ತಿರಲಿಲ್ಲ. ತಟ್ಟೆಯ ಮುಂದೆ ಕೂತಾಗ ತಟ್ಟೆಗೆ ಏನು ಬೀಳುತ್ತೋ ಅದನ್ನು ಹೊಟ್ಟೆ ತುಂಬಾ ತಿನ್ನುತ್ತಿದ್ದೆವು. ಊಟ ತಿಂಡಿಯ ವಿಚಾರದಲ್ಲಿ ನನಗೆ ಅದು ಸೇರಲ್ಲ ಇದು ಸೇರಲ್ಲ, ಅದು ನನಗೆ ಬೇಡ ಅಂತ ಗೊಣಗೋದು ನಮಗೆ ಗೊತ್ತೇ ಇರಲಿಲ್ಲ. ಇನ್ನು ಊಟ ಮುಗಿಸಿ ಎದ್ದರೆ ನಮ್ಮ ತಟ್ಟೆಯಲ್ಲಿ ಊಟ ಮಾಡಿದ ಗುರುತೇ ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಬಳಿದು ನೆಕ್ಕಿಬಿಡುತ್ತಿದ್ದೆವು. ಇನ್ನು ದೋಸೆ, ಇಡ್ಲಿ, ಚಕ್ಕುಲಿ ಇವುಗಳನ್ನು ಮಾಡಬೇಕಾದರೆ ನಮ್ಮ ಹಿರಿಯರು ಹೇಳಬೇಕು. ಹೀಗಾಗಿ ಇಂದಿನಂತೆ ವಾರಕ್ಕೆ ಎರಡು ಬಾರಿ ದೋಸೆಗೆ, ಇಡ್ಲಿಗೆ ಅಂತ ಮಿಕ್ಸಿ ಸದ್ದು ಮಾಡುತ್ತಿರಲಿಲ್ಲ. ಆಗೆಲ್ಲ ಎಷ್ಟೇ ಆದರೂ ವರಳು ಕಲ್ಲಿನಲ್ಲಿ ಕೂತು ತಿರುವುತ್ತಿದ್ದರು. ಮೆಣಸಿನಪುಡಿ, ಚಟ್ನಿಪುಡಿ ಇವುಗಳನ್ನು ಒರಳಿನಲ್ಲಿ ಕುಟ್ಟಿಕೊಳ್ಳುತ್ತಿದ್ದರು. ಹೀಗಾಗಿ ಆಗಿನ ಹೆಂಗಸರು ತುಂಬಾ ಸ್ಟ್ರಾಂಗು.ಮನೆಯಲ್ಲಿ ಹಿರಿಯರ ಕೆಲಸ ಆಗಬೇಕಾದಾಗ (ವೈದೀಕಗಳು) ಯಾರೂ ಅಡಿಗೆಯವರು ಬರುತ್ತಿರಲಿಲ್ಲ. ಮನೆಯ ಹೆಂಗಸರೇ ಸೇರಿಕೊಂಡು ಮಾಡುತ್ತಿದ್ದರು. ಇಂಥಾ ಸಂದರ್ಭ ಮಕ್ಕಳಿಗೆ ಬಲು ಖುಷಿ. ಏಕೆಂದರೆ ತಿನ್ನೋಕೆ ವಿವಿಧ ಬಗೆಯ ಭಕ್ಷಗಳು ಸಿಗುತ್ತಿದ್ದವು.
ಊರಿನಲ್ಲಿ ಇರುವ ಎಲ್ಲರೂ ಒಬ್ಬರೊಬ್ಬರಿಗೆ ಸ್ನೇಹಿತರು. ದೊಡ್ಡವರಿಗೆ ದೊಡ್ಡವರು, ಹೆಂಗಸರಿಗೆ ಹೆಂಗಸರು, ಮಕ್ಕಳಿಗೆ ಮಕ್ಕಳು ಹೀಗೆ ಸ್ನೇಹ ಹರಿದಾಡುತ್ತಿತ್ತು. ಹೀಗಾಗಿ ನಾವು ಯಾವಾಗ ಬೇಕಂದರೆ ಅವಾಗ ಅವರ ಮನೆಗೆ ಹೋಗುತ್ತಿದ್ದೆವು ಈಗಿನಂತೆ ಫೋನ್ ಮಾಡಿ ಹೋಗುವ ರೀತಿ ಆಗ ಇರಲಿಲ್ಲ. ಅಸಲಿಗೆ ಎಲ್ಲರ ಮನೆಯಲ್ಲೂ ಫೋನೇ ಇರಲಿಲ್ಲವಲ್ಲ. ಸ್ನೇಹಿತರ ತಂದೆ ತಾಯಿಯರನ್ನು ಅತ್ತೆ ಮಾವ ಅಂತ ಕರೀತಾ ಇದ್ದೆವು ( ಅಂಕಲ್ ಆಂಟಿ ಅಲ್ಲ) ಸ್ನೇಹಿತರೊಂದಿಗೆ ಆಡುತ್ತಿದ್ದೆವು. ಆಗ ಅವರು ನಮಗೆ ಏನಾದರೂ ತಿನ್ನಲು ಕೊಟ್ಟೇ ಕೊಡುತ್ತಿದ್ದರು. ಅವರೂ ನಮ್ಮ ಮನೆಗೆ ಬಂದಾಗ ನಮ್ಮ ತಾಯಿ ಕೂಡಾ ಅವರಿಗೆ ಏನಾದರೂ ತಿನ್ನಲು ಕೊಡುತ್ತಿದ್ದರು. ಈಗಿನಂತೆ ಬಿಸ್ಕತ್, ಚಾಕೋಲೇಟ್ ಇವೆಲ್ಲ ಕಾಣದೇ ಬೆಳೆದು ಬಂದೆವು.
ಇಂಥಾ ಆಟ ಅಂತಿಲ್ಲ, ಎಲ್ಲ ಆಟವನ್ನೂ ಆಡುತ್ತಿದ್ದೆವು. ಎಷ್ಟೋ ಸಾರಿ ಹಣ್ಣು ಕೀಳಲು ಮರ ಹತ್ತಿ ಮರದಿಂದ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದೆವು. ಮರದಿಂದ ಕಿತ್ತ ಅಥವಾ ನೆಲದ ಮೇಲೆ ಬಿದ್ದ ಹಣ್ಣುಗಳನ್ನು ಸುಮ್ಮನೇ ನಮ್ಮ ಷರಟಿನಲ್ಲಿ ಒರಸಿಕೊಂಡು ತಿಂದುಬಿಡುತ್ತಿದ್ದೆವು. ಅವುಗಳನ್ನು ತೊಳೆದು ತಿಂದು ಅಭ್ಯಾಸವೇ ನಮಗೆ ಇರಲಿಲ್ಲ. ಒಂದು ದಿನವೂ ಜ್ವರ, ಕೆಮ್ಮು, ನೆಗಡಿ ಅಂತ ಮಲಗಿದವರಲ್ಲ, ಮಾತ್ರೆ, ಔಷಧಿ ತಗೊಂಡವರಲ್ಲ. ಹಲ್ಲು ನೋವೆಂದು ಡಾಕ್ಟರ ಬಳಿ ಹೋದವರಲ್ಲ.
ಎಸ್.ಎಸ್.ಎಲ್.ಸಿ. ಮುಗಿದ ಕೂಡಲೇ ಕೆಲಸದ ಬೇಟೆ. ನಮ್ಮ ಹಿರಿಯರೇ ಎಲ್ಲೋ ಒಂದು ಸರ್ಕಾರೀ ಕಛೇರಿಲಿ ಕೆಲಸ ಕೊಡಿಸಿಬಿಡೋರು. ಇನ್ನೇನು ಒಂದೆರಡು ವರ್ಷ ಕೆಲಸ ಮಾಡಿದೆವು ಅಂದ ಕೂಡಲೇ ಮದುವೆ. ಹುಡುಗಿ, ಬೀಗರ ಮನೆಯ ವಿಚಾರ ಎಲ್ಲ ಅವರ ನಿಧರ್ಾರವೇ. ಮದುವೆಯೂ ಮುಗಿದು ಹೋಗೋದು. ನಂತರ ಮಕ್ಕಳು ಒಂದು ಮನೆ, ನಂತರ ಅವರನ್ನು ಬೆಳೆಸೋದು. ಮನೆಯಲ್ಲಿ ಸಾವು ನೋವು, ಹುಟ್ಟು ನಲಿವು ಈ ಎಲ್ಲ ಬೆಳವಣಿಗೆಗಳಲ್ಲಿ ಬದುಕು ಸಾಗಿಹೋಗೋದು.
ಈಗ ಕಾಲ ಬದಲಾಗಿದೆ ( ಅಂತ ಎಲ್ಲ ಹೇಳ್ತಾರೆ ) ಬದಲಾಗಿರುವುದು ಕಾಲವೋ, ಜನರೋ ಎನ್ನೋದು ಸರಿಯಾಗಿ ಗೊತ್ತಾಗಿಲ್ಲ. ಆ ದಿನಗಳು ಇನ್ನಿಲ್ಲ. ಮಾನವನ ಸಹಜ ಸ್ವಭಾವವೇ ಬದಲಾಗಿದೆ. ರೀತಿನೀತಿಗಳೇ ಬದಲಾಗಿದೆ. ಪರಿಸ್ಥಿತಿಗಳೂ ಬದಲಾಗಿವೆ. ಏನೋ ನಾವು ಆ ಕಾಲದಲ್ಲೂ ಈ ಕಾಲದಲ್ಲೂ ಸಲ್ಲುವವರಾದ್ದರಿಂದ ಆ ದಿನಗಳ ನೆನಪು ಹೀಗೆ ಕಾಡುತ್ತವೆ. ಅದನ್ನ ಹಂಚಿಕೊಳ್ಳಲು ಒಂದು ವಾಹಿನಿ ಸಿಕ್ಕಿದಾಗ ಹೀಗೆ ಎಲ್ಲ ಹರಿದು ಬರುತ್ತದೆ.
ಆಗ ಈಗ
ಮಗು ಹುಟ್ಟುವ ಮೊದಲು ತಾಯಿ ಮಗು ಹುಟ್ಟುವ ಮೊದಲು ತಾಯಿ ಔಷಧಿ, ಮಾತ್ರೆ, ಚೆಕಪ್ ಅಂತ ಡಾಕ್ಟರ ತಿಂಗಳಿಗೊಂದು ಸಾರಿ ಡಾಕ್ಟರ ಬಳಿ ಹೋಗಿ ಹೋಗುತ್ತಲೇ ಇರಲಿಲ್ಲ. ಅವರು ಹೇಳಿದ ಟೆಸ್ಟ್ಗಳನ್ನೆಲ್ಲ ಮಾಡಿಸಿಕೊಳ್ಳಬೇಕು
ಮಗು ಹುಟ್ಟುವ ತನಕ ಮನೆಯ ಆಹಾರ ಮಗು ಹುಟ್ಟುವ ತನಕ ಡಾಕ್ಟರು ಬರೆದುಕೊಡುವ ಬಿಟ್ಟರೆ ಬೇರೆ ಮಾತ್ರೆ, ಟಾನಿಕ್ಕು ಅಂತ ಏನೇನೂ ನೂರೆಂಟು ಮಾತ್ರೆ ಟಾನಿಕ್ಕುಗಳನ್ನು ತಗೋಬೇಕು ತೆಗೆದುಕೊಳ್ಳುತ್ತಿರಲಿಲ್ಲ
ಸಾಧಾರಣ ಸ್ತ್ರೀಯಂತೆ ಎಲ್ಲಾ ಮಾಮೂಲೀ ಬಸುರಿ ಅಂತ ಗೊತ್ತಾದ ತಕ್ಷಣ ಎಲ್ಲ ಕೆಲಸಗಳೂ ಬಂದ್ ಕೆಲಸಗಳನ್ನೂ ಮಾಡುತ್ತಿದ್ದಳು ಅವಳನ್ನು ಏನು ಕೆಲಸ ಮಾಡಲೂ ಬಿಡುವುದಿಲ್ಲ
ಹೆರಿಗೆ ವೇಳೆ ಒಬ್ಬಳು ಸೂಲಗಿತ್ತಿ ಬಂದು ಮೂರು ಜನ ಡಾಕ್ಟರುಗಳು, ಇಬ್ಬರು ನಸರ್ುಗಳು, ಇಬ್ಬರು ತಾಯಿಗೆ ಮನೆಯಲ್ಲೇ ಹೆರಿಗೆ ಮಾಡಿಸುತ್ತಿದ್ದಳು ಆಯಾಗಳು, ಮೂರು ಗಂಟೆಗಳ ಕಾಲ ತರಾತುರಿಯಲ್ಲಿ ಓಡಾಡಿ ಹೆರಿಗೆ ಮಾಡಿಸುತ್ತಾರೆ.
ಅಂದಿನ ದಿನಗಳಲ್ಲಿ ಸೂಲಗಿತ್ತಿಗೆ ಐವತ್ತು ರೂಪಾಯಿ ನಸರ್ಿಂಗ್ ಹೋಂ ಬಿಲ್ಲು ಸಾವಿರಗಟ್ಟಲೆ ಆಗುತ್ತದೆ ಒಂದು ಸೀರೆ ಕೊಟ್ಟರೆ ಸಂತೋಷಪಡುತ್ತಿದ್ದ್ದಳು
ಮಗುವಿಗೆ ತಾಯಿ ಹಾಲು ಬಿಟ್ಟರೆ ಬೇರೆ ಏನೂ ತಾಯಿ ಹಾಲಿನ ಜೊತೆಗೆ ಅದಕ್ಕೂ ಮಾತ್ರೆ, ಟಾನಿಕ್ಕು, ಕೊಡುತ್ತಿರಲಿಲ್ಲ ಡ್ರಾಪ್ಸ್ ಅಂತ ನೂರಾರು ಇದೆ
ಮಗು ಹುಟ್ಟಿದ ಸಮಾಚಾರ ನೆಂಟರಿಗೆಲ್ಲ ಈಗ ಇದು ತುಂಬಾ ಅಪರೂಪ ವಿಚಾರ ತಿಳಿಸಲಾಗುತ್ತಿತ್ತು.
ಮನೆಯ ಯಜಮಾನನಿಗೆ ಅಂಥಾ ಸಂಪಾದನೆ ಹೇರಳವಾಗಿ ದುಡ್ಡಿದೆ. ಅಷ್ಟೇ ಖಚರ್ಿಗೂ ದಾರಿ ಇದೆ ಅಂತ ಇರಲಿಲ್ಲ ಆದರೆ ಮನೆಯಲ್ಲಿ ಬಡತನವಿರಲಿಲ್ಲ.
ರಕ್ತ ಪರೀಕ್ಷೆ ಎನ್ನೋದು ಅಪರೂಪದ ಸಂಗತಿ ಸ್ವಲ್ಪ ಏರುಪೇರಾದರೂ ರಕ್ತ ಪರೀಕ್ಷೆ ಕಡ್ಡಾಯ
ತಾಯಿಗೆ ಪೌಷ್ಠಿಕ ಆಹಾರ ಬಿಟ್ಟರೆ ಬೇರೆ ಏನೂ ಈಗ ಆಹಾರಕ್ಕಿಂತ ಹೆಚ್ಚಾಗಿ ವಿಟಮಿನ್ ಮಾತ್ರೆಗಳು ಕೊಡುತ್ತಿರಲಿಲ್ಲ ಟಾನಿಕ್ಕುಗಳು ಹೆಚ್ಚು
ಮಗುವಿಗೆ ಯಾವ ಪರೀಕ್ಷೆಯನ್ನೂ ಮಾಡಿಸುತ್ತಿರಲಿಲ್ಲ ಈಗ ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಅಂತ ` ನೂರಾರು ಟೆಸ್ಟುಗಳು
ಮಕ್ಕಳಿಗೆ ಯಾವ ಆಟಿಕೆಯೂ ಇರಲಿಲ್ಲ. ದೇವರ ನೂರಾರು ಆಟದ ಪದಾರ್ಥಗಳು ಹೇರಳವಾಗಿ ಇವೆ ಮನೆ ಗಂಟೆ ಸದ್ದು ಮಾಡಿ ಮಗುವನ್ನು ನಗಿಸುತ್ತಿದ್ದರು
 
 

‍ಲೇಖಕರು avadhi

6 July, 2013

7 Comments

  1. ತೇಜಸ್

    ನನ್ನ ಅಪ್ಪನಿಗೆ ಇದನ್ನು ಮೊದಲು ಓದಲು ಹೇಳುತ್ತೇನೆ. ಕಂಡಿತ ಅವರಿಗೆ ತಮ್ಮ ಬಾಲ್ಯದ ಸವಿ ನೆನಪುಗಳು ಆವರಿಸುತ್ತದೆ. ಬರಹ ಸೊಗಸಾಗಿದೆ 🙂

  2. Anonymous

    ತುಂಬಾ ಚೆನ್ನಾಗಿ ಬರೆದಿದೀರಿ ಸರ್…

  3. ವನಮಾಲಾ ವಿ

    ತುಂಬಾ ಚೆನ್ನಾಗಿ ಬರೆದಿದೀರಿ ಸರ್…

  4. Somashekhar

    ಈ ತರಹ nostalgic ಆಗಿ ಯೋಚನೆ ಮಾಡುವುದು ಒಂದು ಹಂತದವರೆಗೆ ಚಂದ. ಆಗಿನ ಕಾಲದಲ್ಲಿ ಹುಟ್ಟಿದ ಮಕ್ಕಳು ಮತ್ತು ಬಾಣಂತಿಯರು ಈಗಿನ ಕಾಲದವರಿಗೆ ಹೋಲಿಸಿದರೆ ಎಷ್ಟು ಜನ survive ಆಗುತ್ತಿದ್ದರು ಎಂದು ನೋಡಿದರೆ ಸತ್ಯದ ಇನ್ನೊಂದು ಮುಖ ಗೊತ್ತಾಗುತ್ತದೆ. ಹಾಗಂತ ಈ ಕಾಲದಲ್ಲಿ ಎಲ್ಲವು ಸರಿ ಇದೆ ಎಂದಲ್ಲ, ಎಲ್ಲ ಕಾಲದಲ್ಲೂ ಅದರದ್ದೇ ಆದ ಒಳಿತು ಕೆಡಕುಗಲಿರುತ್ತವೆ

  5. lalitha siddabasavaiah

    ಒಂದಕ್ಷರವೂ ವ್ಯತ್ಯಾಸವಿಲ್ಲದಂತೆ ನಮ್ಮ ಬಾಲ್ಯವೂ ಥೇಟ್ ಇದೇ…….ರಿವೈಂಡ್ ಮಾಡಿದಂತಾಯ್ತು. ಆದರೆ ಬದಲಾವಣೇ ಬಗ್ಗೆ ನನಗೆ ಅಂಥಾ ಆಕ್ಷೇಪಣೆ ಅಥವಾ ದೂರುಗಳಿಲ್ಲ. ಅದು ಇತ್ತು , ಇದು ಇದೆ ….ಅಷ್ಟೆ .

  6. Chetan

    Sir, vivaravagi barediddira. Ellavu prakruti niyamadanteye nadeyutte. Neev heliddella nijakku chenna. Adannella neeve matthomme madalu saadyave ? Nimma makkalu, mommakkalu, magalu, soseyarige heege madisalu agattha ?

  7. r t sharan

    ”transformation” is law of life…….. aaaaaga adu chanda……….. eeega idu……… munde mattondu….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading