ಹಾಸ್ಯ ಪ್ರಹಸನಗಳು ಆಶ್ಲೀಲವಾಗುತ್ತಿವೆ..

 ಗೊರೂರು ಶಿವೇಶ್

ಕೋಲ ರಂಗನಾಥರಾವ್ ನನ್ನ ಹಿರಿಯ ಗೆಳೆಯರು. ತೆಲುಗಿನಿಂದ ಅನೇಕ ಕಥೆ, ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದರು. ಆಗಿನ ಪ್ರಖ್ಯಾತ ವಾರಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವೂ ಕೂಡ. ಹಳ್ಳಿ ಮೈಸೂರಿನಲ್ಲಿ ನಾನು ಅಧ್ಯಾಪಕನಾಗಿದ್ದ ಸಂದರ್ಭದಲ್ಲಿ ನಮ್ಮ ಕಾಲೇಜಿನ ಪಕ್ಕದಲ್ಲೆ ಇದ್ದ ಹೇಮಾವತಿ ಜಲಾಶಯದ ಕಛೇರಿಗೆ ಆಡಿಟಿಂಗ್‌ಗೆ ಬಂದಿದ್ದ ಅವರು ಒಂದು ಸಂಜೆ ನಮ್ಮ ಕಾಲೇಜಿಗೆ ಬಂದು ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡುವುದಾಗಿ ತಿಳಿಸಿದರು.

ಲಾವಣಿ, ಮ್ಯಾಜಿಕ್, ಏಕಪಾತ್ರಾಭಿನಯ, ಕಿರುನಾಟಕಗಳನ್ನು ಅಭಿನಯಿಸುವವರು ಶಾಲೆಗಳಿಗೆ ಬಂದು ಪ್ರದರ್ಶನ ನೀಡಿ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ದೇಣಿಗೆಯನ್ನು ಪಡೆದುಹೋಗುವುದು ಮಾಮೂಲು. ಆದರೆ ಹಾಸ್ಯ ಕಾರ್ಯಕ್ರಮ ಎಂದಾಗ ವಿಶೇಷವೆನ್ನಿಸಿದ್ದು ಸಹಜ.

ಸ್ವಲ್ಪ ದಡೂತಿದೇಹದ ಅವರು ತಮ್ಮನ್ನು ಲೇವಡಿ ಮಾಡಿಕೊಳ್ಳುತ್ತಲೆ ಕಾರ್ಯಕ್ರಮ ಆರಂಭಿಸಿದರು. ನಡುನಡುವೆ ಪ್ಯಾಂಟನ್ನು ಮೇಲೇಳೆಯುತ್ತಿದ್ದನ್ನು ಕಂಡು ವಿದ್ಯಾರ್ಥಿಗಳು ಮುಸುಮುಸು ನಗುತ್ತಿದ್ದರು. ಅದನ್ನು ಅವರು ಗಮನಿಸಿರಬೇಕು. “ನೋಡಿ, ಪದೆ ಪದೆ ಪ್ಯಾಂಟ್ ಹಿಡಿದು ಮೇಲೆತ್ತುತ್ತಿರುತ್ತೇನೆ. ಇದನ್ನು ನೋಡಿ ಹಿಂದಿನ ಸಭೆಯಲ್ಲಿ ಮಹಿಳೆ ಒಬ್ಬರು ಸಾರ್ ನೀವು ಪದೆ ಪದೆ ಪ್ಯಾಂಟ್ ಮೇಲೆತ್ತಬೇಡಿ. ಇಲ್ಲಿರುವವರಿಗೆ ಮುಜುಗರ ಆಗುತ್ತೆ ಅಂದರು. ಅದಕ್ಕೆ ನಾನೆಂದೆ, ಬಿಟ್ರೆ ಇನ್ನು ಮುಜುಗರವಾಗುತ್ತೆ.”

ಜಾರ್ಜ್ ಬರ್ನಾಡಾಷಾರವರ ಪ್ರಸಿದ್ಧ ಜೋಕೊಂದನ್ನು ತಮಗೆ ಅನ್ವಯಿಸಿ ನುಡಿದಿದ್ದರೂ ಅವರು. ಅಂದು ಹೇಳಿದ್ದ ಅನೇಕ ತಮಾಷೆ ಪ್ರಸಂಗಗಳು ವಿದ್ಯಾರ್ಥಿಗಳಿಗೆ ಕಚಗುಳಿ ಇಟ್ಟು ನಗಿಸಿದ್ದವೂ ಕೂಡಾ. ಅದರಲ್ಲಿ ನನಗೆ ನೆನಪಿರುವುದೆಂದರೆ ಕಾಗುಣಿತ ವ್ಯತ್ಯಾಸದಿಂದಾಗವ ಪ್ರಮಾದಗಳು. ಆಸ್ಪತ್ರೆಯೊಂದರಲ್ಲಿ ನಾಯಿ ಕಡಿದವರಿಗೆ ಇಲಿ ಔಷಧಿ ನೀಡಲಾಗುವುದು ಎಂದು ಗೋಡೆಯ ಮೇಲೆ ಬರೆಯಲಾಗಿತ್ತು.

ಗಾಬರಿಯಾಗಿ ವಿಚಾರಿಸಿದರೆ ನಾಯಿಕಡಿದವರಿಗೆ ಇಲ್ಲಿ ಔಷಧಿ ಹಾಕಲಾಗುವುದು ಎಂಬುದು ಆ ರೀತಿಯಾಗಿದೆ ಎಂಬ ಉತ್ತರ ಬಂತು. ಇಂಥ ಅನೇಕ ಹಾಸ್ಯ ಪ್ರಸಂಗಗನ್ನು ಹೇಳಿ ರಂಜಿಸಿದರು.

ಮುಂದೆ ನನ್ನ ಸಹೋದರನ ಜೊತೆ ಅವರು ಅನೇಕ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮುಂದೆ ಇಂಥ ಕಾರ್ಯಕ್ರಮಗಳನ್ನು ತಮ್ಮ ವಿಶಿಷ್ಟ ಪ್ರಸ್ತುತತೆಯ ಮೂಲಕ ಜನಪ್ರಿಯತೆಯ ಹಾದಿಗೆ ತಿರುಗಿಸಿದವರು ಪ್ರಾಣೇಶ್ ಮತ್ತು ಕೃಷ್ಣೇಗೌಡರು. ಹದಿನೈದು ವರ್ಷಗಳ ಹಿಂದೆ ಪ್ರಾಣೇಶ್ ಶಿವರಾತ್ರಿಯ ಜಾಗರಣೆ ಸಂದರ್ಭದಲ್ಲಿ ಹೇಳಿದ್ದ ಜೋಕ್‌ಗಳು ಪ್ರಸಂಗಾವದಾನತೆಯಿಂದ ಖುಷಿ ನೀಡಿತ್ತು.

ಕಾರ್ಯಕ್ರಮಕ್ಕೆ ಹಳ್ಳಿಗೆ ಹೋದ ಅವರಿಗೆ ಮೊದಲಿಗೆ ರಟ್ಟು ಪೇಪರ್ ನೀಡಿ ಆ ದಿನ ನಡೆದ ರಂಗೋಲಿ ಸ್ಪರ್ಧೆಗೆ ತೀರ್ಪುಗಾರರಾಗಿ ನೇಮಿಸುತ್ತಾರೆ ಕಾರ್ಯಕ್ರಮದ ಆಯೋಜಕರು. ಮುಂದೆ ಮಧ್ಯರಾತ್ರಿಗೆ ಇತರೆ ಕಾರ್ಯಕ್ರಮಗಳು ಕಾರ್ಯಕ್ರಮ ಆರಂಭವಾದರೂ ಇವರ ಸರದಿ ಬರದೆ ಕುಳಿತಿದ್ದ ಜನ ತಂದಿದ್ದ ಚಾಪೆಯ ಮೇಲೆ ನಿದ್ರೆಗೆ ಜಾರುತ್ತಾರೆ. ಕೊನೆಗೆ ಬೆಳಗಿನ ಜಾವ ಅವರಿಗೆ ಅವಕಾಶ ದೊರೆತು ಮಾತನಾಡಲು ತಯಾರಾಗುತ್ತಾರೆ.

ಸಾರ್ ಅದಕ್ಕೆ ಮುನ್ನ ಪ್ರಾರ್ಥನೆ ಎಂದಾಗ ಮುದುಕಿಯೊಬ್ಬಳು ವೇದಿಕೆಗೆ ಹಾಜರಾಗಿ ಹಾಡಲಾರಂಭಿಸುತ್ತಾಳೆ. ಒಂದು ದಳದ ಕಮಲದಲ್ಲಿ ಮೂಡಿಬಂದ ಲಿಂಗವೆ, ಸತ್ಯಪ್ರಾಣ ಲಿಂಗವೆ ಎಂದು ರಾಗ ಎಳೆದು ಓಂ ನಮ ಶಿವಾಯ ಎಂದೊಡನೆ ಮಲಗಿದವರೆಲ್ಲ ಎದ್ದು ದನಿಗೂಡಿಸುತ್ತಾರೆ. ಎರಡು ದಳದ ಕಮಲದಲ್ಲಿ ಎದ್ದು ಬಂದ ಲಿಂಗವೆ ಸತ್ಯ ಪ್ರಾಣ ಲಿಂಗವೆ ಎನ್ನಲು ಮತ್ತೆ ಓಂ ನಮ ಶಿವಾಯ ಜನ ದನಿಗೂಡಿಸುತ್ತಾರೆ.

ಹಾಡು ಮುಂದುವರಿಯುತ್ತಾ ಹೋದಂತೆ ಇದು ಸದ್ಯಕ್ಕೆ ಮುಗಿಯದು ಎಂದು ಆ ಮುದುಕಿಯ ಬಳಿ ಅವ್ವಾ ಇನ್ನೂ ಎಷ್ಟು ದಳಗಳಿವೆ ಎಂದಾಗ ನೂರಾ ಎಂಟು ಆಕೆಯಿಂದ ಉತ್ತರ ಬರುತ್ತದೆ.

ಜನಸಾಮಾನ್ಯರ ನಡುವೆ ಸಂಭವಿಸುವ ಘಟನೆಗಳಿಗೆ ಹಾಸ್ಯದ ಲೇಪನ ಹಚ್ಚಿ ಪ್ರಸ್ತುತಪಡಿಸುವ ಅವರ ಹಾಸ್ಯ ಪ್ರಸಂಗಗಳು ಜನಮೆಚ್ಚುಗೆ ಗಳಿಸಿದ್ದಂತೆ ಕರ್ನಾಟಕದ ಎಲ್ಲೆಡೆಯಿಂದಲೂ ಅವರಿಗೆ ಬೇಡಿಕೆ. ತಮ್ಮ ಹಾಸ್ಯಪ್ರಸಂಗಗಳ ಜೊತೆಗೆ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆ, ಜ್ಞಾನ ಮತ್ತು ತಿಳುವಳಿಕೆ ಕುರಿತಾಗಿನ ಮಾತುಗಳು ಮಕ್ಕಳಲ್ಲಿ ಹೆಚ್ಚಿಸಬೇಕಾದ ಸಾಹಿತ್ಯಾಭಿರುಚಿ…

ಹೀಗೆ ಜನ ಅವರ ಮಾತುಗಳ ಕಡೆ ವೀಕ್ಷಕರ ಆಸಕ್ತಿ ವಹಿಸಿದ್ದಂತೆ ಎಲ್ಲಾ ಚಾನೆಲ್‌ಗಳು ದಿನದ ಒಂದಲ್ಲ ಒಂದು ಸಮಯದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾರಭಿಸಿದ್ದು ಅವರ ಜನಪ್ರಿಯತೆಯ ದ್ಯೋತಕ. ಅದೇ ಸಮಯಕ್ಕೆ ಅಧ್ಯಾಪಕರಾದ ಕೃಷ್ಣೇಗೌಡರು ಜನಪದರ ಅಗಾಧ ತಿಳುವಳಿಕೆ, ಕರ್ತೃತ್ವ ಶಕ್ತಿ, ಅವರ ಹುದುಗಿರುವ ಅಪಾರ ಪ್ರತಿಭೆ, ಅವರೇ ರಚಿಸಿ ಹಾಡಿದ ಅಣಕವಾಡುಗಳನ್ನು ಪ್ರಸ್ತುತಪಡಿಸಿ ಜನಪದರ ಜಾಣ್ಮೆಯನ್ನು ಪರಿಚಯಿಸಿ ಅವು ಅಷ್ಟೇ ಜನಪ್ರಿಯವಾದವು.

ರಿಚರ್ಡ್ ಲೂಯಿಸ್, ಆನಂದ್, ಸುಧಾ ಬರಗೂರು ಮುಂತಾದವರ ಜೊತೆಗಿನ ಹರಟೆ, ಹಾಸ್ಯಸಂಜೆಗಳು ಅದೆಷ್ಟು ಜನಪ್ರಿಯವಾದವೆಂದರೆ ಮುಂದೆ ಜನ ಸೇರಿಸಬೇಕಾದರೆ ಹಾಸ್ಯಸಂಜೆಗಳು ಅನಿವಾರ್ಯವೆನ್ನುವಷ್ಟರಮಟ್ಟಿಗೆ ಖ್ಯಾತಿ ಬೆಳೆಯಿತು. ಎಲ್ಲಾ ಕಲಾವಿದರು ಚಲನಚಿತ್ರ ನಟರಿಗೂ ಮಿಕ್ಕಿ ಸ್ಟಾರ್ ವ್ಯಾಲ್ಯು ಪಡೆದರು. ಯಾವುದೇ ಕವಿ, ಲೇಖಕ ಕಲಾವಿದರಿಗೂ ಮಿಕ್ಕಿ ಜನ ಸಾಮಾನ್ಯರಲ್ಲಿ ಕೃಷ್ಣೆಗೌಡ ಪ್ರಾಣೇಶ್ ಬೆಳೆಸಿದ ಕನ್ನಡಾಭಿರುಚಿ ದೊಡ್ಡದು.

ಶಾಲಾ ಸಮಾರಂಭಗಳಲ್ಲಿ ಈ ಹಿಂದೆ ಆಡುತ್ತಿದ್ದ ಕಿರುನಾಟಕಗಳು ಮಾಯವಾಗಿ ಸಂಪೂರ್ಣ ನೃತ್ಯಗಳೆ ತುಂಬಿ ಹೋದ ಸಂದರ್ಭದಲ್ಲಿ ಜೀ ವಾಹಿನಿಯೂ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಕಿರುನಾಟಕ, ಪ್ರಸಂಗಗಳನ್ನು ಪ್ರಸ್ತುತಪಡಿಸುತ್ತಿದ್ದಂತೆ ಜನರ ಗಮನ ಸೆಳೆದುದ್ದಲ್ಲದೆ ಅಲ್ಲಿನ ಅನೇಕ ಬಾಲಪ್ರತಿಭೆಗಳು ಜನಾಧಾರಣೆ ಗಳಿಸಿದರು.

ಅದರ ಮುಂದಿನ ಭಾಗವಾಗಿ ಬಂದದ್ದೇ ಕಾಮಿಡಿ ಕಿಲಾಡಿಗಳು. ಅದರ ಮೂಲಕ ಕೆ.ಆರ್.ಪೇಟೆ ಶಿವರಾಜ್, ಗೋವಿಂದೇಗೌಡ, ನಯನ, ಹಿತೇಶ್ ಮುಂತಾದವರು ಬೆಳಕಿಗೆ ಬಂದರು.

ಅಲ್ಲದೆ ಎರಡನೆ ಸರಣಿಯೂ ಅಷ್ಟೆ ಜನಪ್ರಿಯತೆ ಸಾಗಿ ಮಡೆನೂರು ಮನು, ಚನ್ನರಾಯಪಟ್ಟಣದ ವಾಣಿ, ಕುಂದಾಪುರದ ಸೂರ್ಯ, ಬೆಳಗಾವಿ ಅಪ್ಪಣ್ಣ, ಚಿತ್ರದುರ್ಗದ ಬರ‍್ಕತ್ ಅಲಿ, ವಿಜಯಪುರದ ಶಿವಾನಂದ ಮುಂತಾದವರು ಮಿಂಚಿದರು.

ಮೂರನೇ ಸರಣಿ ಈಗ ಆರಂಭವಾಗಿದ್ದು ಬೆಳ್ತಂಗಡಿಯ ಪ್ರವೀಣ್ ಜೈನ್, ದಾವಣಗೆರೆಯ ಚಂದ್ರಶೇಖರ್, ಕಾರವಾರದ ಚಂದ್ರಶೇಖರ ಸಿದ್ದಿ, ಬಾಗಲಕೋಟೆಯ ದಾನಪ್ಪ, ಮಂಡ್ಯದ ದೀಪಿಕ, ವೆಣೂರಿನ ದಿವ್ಯ ಅಂಚನ್, ಚಿಕ್ಕಮಗಳೂರಿನ ಗಜೇಂದ್ರ, ಬೆಂಗಳೂರಿನ ಕಾರ್ತಿಕ್ ಮತ್ತು ಜಗದೀಶ್ ಹಾಸನದ ಸಂತೋಷ್ ಕುಮಾರ್ ಜನರ ಗಮನ ಸೆಳೆಯುತ್ತಿದ್ದಾರೆ.

ವಿಶೇಷವೆಂದರೆ ಸೀಸನ್ ಒಂದರ ವಿಜೇತ ಕೆ.ಆರ್. ಪೇಟೆ ಶಿವರಾಜ್ ಬಾಲ್ಯ ಹಾಗೂ ಯೌವನ ಕಳೆದದ್ದು ಹಾಸನ ತಾಲೂಕಿನ ಗೊರೂರಿನಲ್ಲಾದರೆ ೨ನೇ ಸೀಸನ್ ವಿಜೇತ ಮಡೆನೂರು ಮನು ಹಾಸನ ತಾಲ್ಲೂಕಿನ ಶಾಂತಿ ಗ್ರಾಮದ ಸಮೀಪದ ಮಡೆನೂರಿನವರು. ಈ ಬಾರಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಸಂತೋಷ್‌ಕುಮಾರ್ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನವರಾಗಿದ್ದು ಅಂತಿಮ ಹಂತಕ್ಕೆ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳು ಇವೆ.

ಇತ್ತೀಚಿನ ದಿನಗಳಲ್ಲಿ ವೀಕೆಂಡ್ ರಿಯಾಲಿಟಿ ಷೋಗಳಲ್ಲಿ ಜನಪ್ರಿಯತೆಯ ಪಟ್ಟ ಪಡೆದಿರುವ ಕಾರ್ಯಕ್ರಮಗಳೆಂದರೆ ಕಾಮಿಡಿ ಕಿಲಾಡಿಗಳು. ಅಚ್ಚರಿಯ ವಿಷಯ ಏನೆಂದರೆ ಇತರೆ ಚಾನೆಲ್‌ಗಳಲ್ಲಿ ಜನಪ್ರಿಯ ಸಿನಿಮಾಗಳು, ಸೂಪರ್‌ಸ್ಟಾರ್ ಪಟ್ಟ ಪಡೆದ ನಟರುಗಳು ನಡೆಸಿಕೊಡುವ ಇತರೆ ರಿಯಾಲಿಟಿ ಶೋಗಳು ಟಿ.ಆರ್.ಪಿ.ಯಲ್ಲಿ ಕಾಮಿಡಿ ಕಿಲಾಡಿಗಳನ್ನು ಹಿಂದೂಡಲು ಸಾಧ್ಯವಾಗಿಲ್ಲ.

ಡ್ರಾಮಾ ಜ್ಯೂನಿಯರ್ಸ್ ನಿಂದ ಆರಂಭವಾದ ಈ ಜನಪ್ರಿಯತೆ ಇಲ್ಲಿಯವರೆಗೂ ಮುಂದುವರಿದಿದೆ. ಅಷ್ಟೆ ಏಕೆ ? ಉಳಿದ ಚಾನೆಲ್‌ಗಳೂ ಕೂಡಾ ಈ ಕಾಮಿಡಿ ವರಸೆಯನ್ನು ಮುಂದುವರೆಸಿ ತಮ್ಮ ಚಾನಲ್‌ಗಳಲ್ಲೂ ಅದೇ ರೀತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.

ದುರಾದೃಷ್ಟವೆಂದರೆ ಈ ಪ್ರಹಸನಗಳು ಸಭ್ಯತೆಯ ಗೆರೆದಾಟಿ ಕ್ಯಾಚ್ ಆಫೀಸರ್, ಡಣಡಣಗಳ ತಾಣವಾಗುತ್ತಿರುವುದು. ಅಕ್ಕ-ಪಕ್ಕದ ಹೆಂಡತಿಯರ ಮೇಲೆ ಕಣ್ಣು ಹಾಕುವ ಗಂಡಂದಿರು, ಸಲಿಂಗಿಗಳ ಕಾಟವನ್ನು ಅತಿಯಾಗಿ ವಿಜೃಂಭಿಸಿ ಪ್ರತಿ ಎಪಿಸೋಡಲ್ಲಿ ಅದೇ ಕಾಮಿಡಿ ಎನ್ನುವ ರೀತಿಯಲ್ಲಿ ತರಲಾಗುತ್ತಿದೆ. ರಂಗದ ಮೇಲೆ ನಡೆಯುವ ಕಾಮಿಡಿ ಹೆಸರಿನ ಚಟುವಟಿಕೆಗಳು ಕುಟುಂಬ ವರ್ಗದವರೆಲ್ಲರೂ ನೋಡಲು ಮುಜುಗರವನ್ನುಂಟು ಮಾಡುತ್ತಿದೆ.

ಹಾಸ್ಯದ ಹೆಸರಿನ ಅಪಹಾಸ್ಯ ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಕಡಿತಗೊಳಿಸದಿದ್ದರೆ ಜನ ಚಾನೆಲ್ ಬದಲಾಯಿಸಿ ಮನರಂಜನೆಗೆ ಬೇರೊಂದು ಮಾರ್ಗವನ್ನು ಹುಡುಕಲಾರಂಭಿಸುವ ಮೊದಲು ಆಯೋಜಕರು ಎಚ್ಚೆತ್ತುಕೊಳ್ಳಬೇಕಾಗಿದೆ.

‍ಲೇಖಕರು avadhi

November 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Parameshwarappa Kudari

    ಉತ್ತಮ ಹಾಗೂ ಸಕಾಲಿಕ ಲೇಖನ ಸರ್, ಧನ್ಯವಾದಗಳು

    ಪ್ರತಿಕ್ರಿಯೆ
  2. T S SHRAVANA KUMARI

    ಲೇಖನದ ಕಡೆಯ ಮಾತುಗಳು ಸತ್ಯಸ್ಯ ಸತ್ಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: