‘ಹಾಲುಂಡ ತವರಿಗೆ ಏನೆಂದು ಹರಸಲಿ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಕಥೆಯ ಜಗತ್ತು ವಿವೇಕದ ಜೊತೆಗೆ ಬೆಸೆದುಕೊಂಡು ಭಿನ್ನ ಹುಡುಕಾಟಗಳ ಮೂಲಕವೇ ಕುತೂಹಲಗಳನ್ನು ಜೀವಂತ ವಿಡುತ್ತದೆ. ಕುವೆಂಪು ಅವರ ಕಥೆಗಾರ ಮಂಜಣ್ಣನ ಕುರಿತು ಓದುವಾಗ ನನ್ನ ಊರು ಮನೆ ನನಗೆ ತುಂಬಿ ಕಳಿಸಿದ ಕಥಾ ಚಹರೆಗಳ ಲೋಕವನ್ನು ಈಗ ಹೊಸದಾಗಿ ಮನನ ಮಾಡಿಕೊಳ್ಳುವ ಹಾದಿಯಲ್ಲಿ ಇದ್ದೇನೆ. ಮನೆಯ ಜಗುಲಿಯಲ್ಲಿ ಕೂರಿಸಿಕೊಂಡು ದೊಡ್ಡಪ್ಪ ಹೇಳುತ್ತಿದ್ದ ಕಥೆಯೊಂದು ನೆನಪಿಗೆ ಬಂದು ಕಥೆಗಿರುವ ಮೌಲ್ಯಬಲ ದಕ್ಕಿದಂತಾಯಿತು.

ಒಂದು ಊರಿನಲ್ಲಿ ಒಬ್ಬ ದೊರೆ ಇದ್ನಂತೆ; ಅವನಿಗೆ ಒಬ್ಬಳು ಸತಿ. ಅಗ್ಲು-ಇಳ್ಳು ಶಿಕಾರಿ ಆಡದೆ ಉಚ್ಚಿಡಿಸ್ಕಂಡು ವನ್ಕೋಕ್ತಿದ್ದ. ಅವ್ನಿಂದೆ ನೂರಾರು ಜನ ಕಾಲಾಳುಗಳು. ಅಂಬಿಡುದ್ಮೇಲೆ ಉನ್ಮಾದ ಉಕ್ಕಿ ಸೇವಕ್ರುನ್ನೆಲ್ಲ ತೊರ್ದು ಕಾಡಲ್ಕಂಡು ಓಗೋಂದೋಗೊಂದು ಓದ್ನಂತೆ. ನಡುಗಾಡ್ನಗೆ ಒಂದು ದೊಡ್ಡ ವಟವೃಕ್ಷ, ಅದರ ಕೊಂಬೆ ಮೇಲೆ ಸುಂದರವಾದ ಎಳೆಹುಡ್ಗಿ ಕುಂತಿದ್ಲಂತೆ. ಅರಸ ಕಂಡವನೇ ಯಾರು ನೀನು ಅಂದ್ರೆ ಆ ಹೆಣ್ಣು ನಂದು ದೂರದ ಊರು.

ನಮ್ಮೂರಲ್ಲಿ ಹೆಣ್ಣುಗಳಿಗೆ ಜೌವ್ವನ ಬಂದ್ಮೇಲೆ ಕಣ್ಕಟ್ಟಿ ಕಾಡ್ಗಟ್ತರೆ ಅಂದು ಗೋಳಾಡಿಳಂತೆ. ದೊರೆ ಮರ್ದಗಿದ್ದಳ್ನ ಇಳಿಸ್ಕಂಡು ನೀನು ತಬ್ಲಿ ಆಗಕೆ ನಾನು ಬಿಡಲ್ಲ ಪರಿಣಯವಾಗ್ತೀನಿ ಅಂದು ಕೈಯಿಡ್ದನು ಬಿಡ್ದಂಗೆ ಜತಿಗಾಕ್ಕೆಂಡು ಸೈನಿಕ್ರಿರೋ ಠಾವಿಗ್ಬಂದು ನಾನು ಈ ಕನ್ಯೆಯನ್ನು ಕಲ್ಯಾಣವಾಗ್ತೀನಿ ರಾಜ್ಯ ಸಿಂಗಾರ ಮಾಡಿ ಅರಮನೆ ಬೆಳುಗ್ರಿ ಅಂದ. ಅರಸನ ಆಜ್ಞೆ ಮೀರದೆ ಅವನು ಹೇಳಿದಂತೆಯೇ ಬೀದಿಬೀದಿನು ಬೆಳ್ಗಿ ಲಗ್ನಕ್ಕೆ ಸಿದ್ಧ ಮಾಡಿ ಜನೊಂದು ಜನಾನೆಲ್ಲ ಸೇರ್ಸಿ ದೊಡ್ಡೆಣ್ತಿ ಕಣ್ಣೀರಿನ್ಕಡಿಕೆ ಗ್ಯಾನ್ವೆ ಇಲ್ದಂಗೆ ಮದ್ವೆ ಆಗೇ ಓತಂತೆ.

ರಾಜ  ಒಸೆಂಡ್ತಿ ಜತೆಗೆ ಬಲ್ಚೆನಾಗಿ ಸಂಸಾರ ಮಾಡ್ಕಂಡಿದ್ನಂತೆ. ಇದೇ ಹುಡ್ಗಿ ಒಂದಿನ ದೊರೆ ಮುಂದೆ ಬಿದ್ದು ಒಳ್ಳಾಡಿ ಒಟ್ನೌವು ಅಮ್ತ ಲಬಲಬ ಬಾಯ್ ಬಡ್ಕಂಡು ರಾಜನಿಗೆ ಗಾಬರಿ ಆಗಿ ಮದ್ದು ಕೊಡ್ಸಿರು ನಿಲ್ದೆ ಹಿಂಗೆ ದಿನ್ಬೆಳ್ಗಾದ್ರೆ ಉದರಬೇನೆಯ ರಂಪರಾಮಾಯಣ ತಗ್ದೆ ಕಡೆಗೆ ಸೋತು ದೊರೆ ಮಂತ್ರಿನ ಕರ್ಸಿ ರಾಜ್ಯದಲ್ಲಿ ಸಾರಾಕ್ಸು ರಾಣಿ ಹೊಟ್ಟೆ ಸಂಕಟನ ಯಾರು ಸರಿಯಾದ ಮದ್ದು ಕೊಟ್ಟು ನಿಲ್ಲುಸ್ತಾರೋ ಅವರಿಗೆ ಸಮ ಅರ್ಧ ರಾಜ್ಯ ಪಾಲ್ಕೊಡ್ತೀನಿ ಹೇಳು ಅಂತೆಲ್ಲಾ ಮಾತುಕತೆ ಆಗಿ ಮಂತ್ರಿ ಅಂಗೇ ಸಾರಾಕ್ಸಿನಂತೆ. ಆಮೇಲೆ ಕಿರಿ ರಾಣಿ ದೊಡ್ಡೆಣ್ತಿನು ಅವರ ಮಗುನ್ನು ಅರಮನೆ ಬಿಟ್ಟು ಕಳ್ಸಿರೆ ಇಳ್ಯುತ್ತೆ ಬಾದೆ ಅನ್ನಂಗೆ ನಾಟ್ಕ ಆಡಿ ಪೆದ್ದ ದೊರೆ ಇಬ್ರುನ್ನು ರಾಜ್ಯಬಿಟ್ಟು ಕಳ್ಸೇಬಿಟ್ಟ.

ದೊಡ್ಡ ರಾಣಿ ಕೈಗೆ ಸಾಲ್ದಿರೊ ಮಗುನ್ನ ಕರ್ಕಂಡು ಓಗ್ವಾಗ ಕೆರೆದಂಡೆಗಿರೋ ಅಗುಸ್ರು ಅಸ್ಕಂಡಿರೋ ಇಬ್ರಿಗೂ ಬುತ್ತಿ ಕೊಟ್ಟರಂತೆ. ಅವತ್ನಿಂದ ಅಗುಸ್ರೆ ಮಗ ತಾಯಿನ ಮನೆಗಿಕ್ಕೆಂಡು ಸಾಕ್ತಿರೋ ಸಂಗ್ತಿ ಕಿರಿ ರಕ್ಕಸಿಗೆ ತಿಳ್ದು ಇನ್ನೊಂತರ ಅವ್ತಾರ ಶುರ್ವಾತು. ರಾಜುನ್ನ ಕರ್ದು ಹೇಳಿದಳಂತೆ ಏಳು ಸಮುದ್ರುದಾಸಿಕೆ ಕೀಳು ಸಮುದ್ರ ಅದ್ರು ಗಡ್ಡೆಗೆ ಒಂದು ಆಲುದ್ಮರ ಐತೆ. ಅಲ್ಲಿ ಎಲಿಗೊಬ್ರು ರಾಕ್ಷಸಿಯರು ಅವ್ರೆ. ಅವ್ರಲ್ಲಿ ಯಾರ್ದಾದ್ರು ಒಬ್ರುದು ಕಣ್ಕಿತ್ಕಂಡು ಬಂದು ನನ್ಕೈಗೆ ಕೊಟ್ರೆ ಹೊಟ್ನೌವು ಬಿಡುತ್ತದೆ ಅಂದ್ಲಂತೆ. ಅದುನ್ನು ರಾಜ ಸಾರಾಕುಸ್ದ. ಅಗುಸ್ರು ಮನೆಗೆ ಬೆಳ್ಕಂಡಿದ್ದ ರಾಜನ ದೊಡ್ಮಗ ವೇಷ ಬದ್ಲಾಯಿಸ್ಕಂಡು ಅರಮನೆಗೆ ಬಂದು ಕೇಳ್ದ.

ಒಂದು ತುರಗ ಕೊಡ್ರಿ ನಾನು ಹೋಗಿ ಕಣ್ ತತ್ತೀನಿ ಅಂದ. ರಾಜ ಹಯ ಕೊಟ್ಮೇಲೆ ಅಮ್ಮನ ಸಮ್ಮತಿ ತಗಂಡು ಆಸರೆಯಾದ ಮಡ್ವಾಳ್ರ ಆಶೀರ್ವಾದ ಪಡೆದು ಹೊರಟ. ಓಗೋಂದೋಗೊಂದು ಓದ್ನಂತೆ. ದಾರಿ ಮಧ್ಯದಲ್ಲಿ ಒಂದು ದೊಡ್ಡ ಪಟ್ನ ಸಿಕ್ತು. ಅದರ ಹೆಸರು “ತೊಗ್ಲಾಪುರಿ ಪಟ್ನ” ಅಲ್ಲಿ ದೊರೆ ಮಗ್ಳು ಒಯ್ಕಂಡ ನೀರು ಅಳ್ಳಾಗಿ ಅರ್ದೋಗ್ತಿದ್ವು. ಆ ದೊರೆ ಮಗ್ಳು ಶರತ್ತೇನು ಅಂದ್ರೆ ಯಾವ ರಾಜ್ಯದ ರಾಜಕುವರ ಕುದ್ರೆ ಮೇಲೆ ಬಂದು ಒಂದೇ ಸತಿ ಹಳ್ಳ ದಾಟುಸ್ತನೊ ಅವನನ್ನು ಲಗ್ನ ಆಗದು ಅಂತ.

ಎಲ್ಲೆಲ್ಲೆರೋ ಬಂದು ಹಯ ನೆಗ್ಸಕೋಗಿ ಅಳ್ದಕ್ಬಿದ್ದು ಎದ್ದೋದ್ರಂತೆ. ಅಗುಸ್ರು ಸಾಕ್ಮಗ ಬಂದನೆ ಕುದ್ರೆ ನೆಗುಸ್ದ. ಆ ಪಟ್ನದ ರಾಜಪರಿವಾರದವರು ಇವನನ್ನು ಕುದ್ರೆ ಸಮೇತ ಇಡ್ಕಂಡ್ಬಂದ್ರು. ಬಂದ್ಮೇಲೆ ರಾಜನ ಮಗಳು ಹಾರ ಹಾಕಿಳು. ಸಂಗತಿಯ ಪ್ರವರ ಹೇಳಿಳು. ಇವನು ಒಪ್ಕಂಡು ಬಂದ ಕಾರಣ ಹೇಳಿ ಒಂದು ಮಲ್ಗೆ ಹೂ ಕೊಟ್ಟು ಇದು ಬಾಡಿರೆ ಉಡಿಕ್ಕೆಂಡು ಬಾ ಇಲ್ಲಾ ಅಂದ್ರೆ ನಾನೇ ಬಂದು ಕರ್ಕಂಡೋಗ್ತೀನಿ ಅಂದು ಹೋದ.

ಎಷ್ಟೋ ದೂರ ಸಾಗಿದ್ಮೇಲೆ ನಡಂತ್ರುದಗೆ ಇನ್ನೊಂದು ಪಟ್ನ ಸಿಕ್ತು ಅದ್ರೆಸ್ರು “ಯಲ್ಕಾಪುರಿ ಪಟ್ನ” ಅಲ್ಲು ದೊರೆ, ಮಗಳು, ಹಳ್ಳ, ಶರತ್ತಿನದೇ ಕಥೆ. ಬಂದ ರಾಜಕುಮಾರರು ಪರಾಭವಗೊಂಡು ಇಂದ್ಕೋಗಿದ್ರು. ಇವನು ಬಂದನೇ ಒಂದೇ ಏಟ್ಗೆ ಕುದ್ರೆ ನೆಗ್ಸೇಬಿಟ್ಟ. ಅಲ್ಲಿದ್ದ ಆ ಪಟ್ನದ ರಾಜುನ್ ಕಡೇರು ಇವನನ್ನು ಕರ್ಕಂಡೋಗಿ ಎಲ್ಲಾ ಹೇಳಿದ್ಮೇಲೆ ಆ ಪಟ್ನುದ್ ದೊರೆ ಮಗ್ಳುನ್ನು ಮದ್ವೆ ಆಗಿ ಅವಳಿಗೂ ಒಂದು ಮಲ್ಲೆ ಹೂವ ಕೊಟ್ಟು ಬಾಡ್ಕಂಡ್ರೆ ನನ್ನ ಉಡಿಕ್ಕೆಂಡು ಬಾ ಅಂದು ಮುಂದ್ಕೋದ. ಅಲ್ಲಿಂದ ಏಸೋ ಮೈಲಿ ಸಾಗಿದ್ಮೇಲೆ” ಜೀವ್ದಾಪುರಿ ಪಟ್ನ ಅನ್ನೋ ಇನ್ನೊಂದು ನಗರ ಸಿಕ್ಕಿ ಅಲ್ಲಿ ದೊರೆ ಕುವರಿಯು ಒಯ್ಕಂಡ ನೀರಿನ ಹಳ್ಳ ನೆಗ್ಸಿದ್ ಪರಾಕ್ರಮಿನೆ ಕಲ್ಯಾಣ ಆಗ್ತೀನಿ ಅಂದಿದ್ಲಂತೆ. ಬಂದರೆಲ್ಲ ಹಾರ್ಸಕಾಗ್ದೆ ಸೋತು ಹೋಗಿದ್ರು. ಇವನು ಬಂದನೇ ಹಾರುಸ್ದ, ಕರ್ಕಂಡೋದ್ರು ; ಎಲ್ಲಾ ತಿಳ್ಸಿ ಆ ನಾಡಿನ ಕಿರಿ ಅರಸಿನು ಇವ್ನ್ಗೆಕಟ್ಟಿರು. ಅವಳಿಗೂ ಮಲ್ಲೇ ಹೂ ಕೊಟ್ಟು ಉಳಿದಿಬ್ರಿಗೂ ಹೇಳಿದ್ನೇ ಹೇಳಿ ಹೋದ.

ಎಷ್ಟೋ ಗಾವುದ ದಾಟಿದ ಮೇಲೆ ಏಳು ಸಮುದ್ರ. ಅದ್ರಾಚಿಗೆ ಕೀಳು ಸಮುದ್ರ ಅಲ್ಲಿ ಏಳು ಕರ್ಬಾನುದ್ ಸಾಲು. ಗಡ್ಡೆಗೆ ದೊಡ್ಡ ಆಲುದ್ಮರ. ಮ್ಯಾಕ್ನೋಡ್ಕಂಡೆ ಅತ್ಬೇಕು,ಮ್ಯಾಕ್ನೋಡ್ಕಂಡೇ ಇಳೀಬೇಕು. ಇಳೀವಗ್ಗ ಕೆಳಕ್ನೋಡಿರೆ ಬಿದ್ದು ಸತ್ತೋಗ್ತೀಯ ಅಂತ ಜೀವ್ದಾಪುರಿ ಪಟ್ನದ ದೊರೆ ಮಗ್ಳು ಹೇಳಿದ್ಲು. ಇವ ಹಾಗೆ ಹತ್ತಿ ಎಲೆಗೊಬ್ಬರು ರಾಕ್ಷಸಿಯರಿಂದ ತಪ್ಪಿಸ್ಕಂಡು ಕರ್ಬಾನುದ್ ಸಾಲ್ನಗಿದ್ದ ಕಣ್ಣು ತಗೊಂಡು. ಅಲ್ಲೇ ಕುಡಿನು ಕಿತ್ಕಂಡು ಇಳಿವಾಗ ಇನ್ನೇನು ನೆಲ ಸಿಕ್ತು ಅಮ್ತ ಕೆಳಕ್ನೋಡ್ದ ಅಲ್ಲೇ ಬಿದ್ದು ಜೀವಬಿಟ್ಟ.

ಸಮುದ್ರುದ್ ಗಡ್ಡೆಗಿದ್ದ ಎಲ್ಲ ಹಕ್ಕಿಗಳು ಎಳ್ದಾಡ್ಕಂಡು ತಿಂದಾಕಿವು. ಅಲ್ಲಲ್ಲೆ ಯಲ್ಕ,ತೊಗ್ಲು ಬಿದ್ದಿದ್ದವು. ಮೂರು ಜನ ಹೆಂಡ್ತೇರ್ಗು ಕೊಟ್ಟ ಮಲ್ಲೆ ಹೂವು ಬಾಡ್ಕಂಡ್ವು. ಇವ್ರು ಏನೋ ಆತು ಆಗ್ಬಾರುದ್ದು ಅಂತ ರಥ ತಗಂಡು ಒಳ್ಟ್ರು. ಮೂರು ಜನವೂ ಒಂದೇ ಕಡೆ ಹೋಗ್ತಾ ದಾರೀಲಿ ಸಿಕ್ಕಿ ಮಾತಾಡ್ಕಂಡ್ರು. ಮೂರ್ಜನುದ್ಗಂಡ ಒಬ್ನೇ ಅಂತ ಗೊತ್ತಾಯ್ತು. ಎಲ್ಲಾರೂ ಜತೀಲೆ ಹೋದ್ರು. ಸಮುದ್ರದ ದಂಡೆಗೆ ಬಂದು ನೋಡಿರೆ ಯಲ್ಕ ತೊಗ್ಲು ಕಂಡ್ವು.

ಮೂರ್ಜನನು ಹತ್ರ ಬಂದು “ತೊಗ್ಲಾಪುರಿ”ಪಟ್ನದ ರಾಜನ ಮಗಳು ತೊಗಲು ಜೋಡ್ಸಿಳು; ಯಲ್ಕಾಪುರಿ ಪಟ್ನದ ರಾಜನ ಮಗಳು ಯಲ್ಕ ಜೋಡ್ಸಿಳು; “ಜೀವ್ದಾಪುರಿ ಪಟ್ನದ ರಾಜನ ಮಗಳು ಜೀವ ಕೊಟ್ಲು. ರಾಜಕುಮಾರ ಬದುಕ್ದ. ಮೂರ್ಜನ ಹೆಂಡ್ತೇರ್ನು ಕರ್ಕಂಡು ತನ್ನ ನಾಡಿನ ಕಡೆಗೆ ಬಂದ. ಇಲ್ಲಿ ಅರಸನ ಜೊತೆ ಕಾಡಿನಲ್ಲಿ ಸಿಕ್ಕಿ ಬಂದವಳು ವೇಷ ಮರೆಸಿಕೊಂಡ ರಕ್ಕಸಿ ಅಂತ ತಿಳೀತು. ಅವಳ ಅಂತ್ಯ ಮಾಡಿ ರಾಜನಿಗೆ ಸತ್ಯ ಹೇಳಿ ಅಮ್ಮನನ್ನು ರಾಜ್ಯಕ್ಕೆ ಕರೆಸಿ, ಆಸರೆಯಾದವರನ್ನು ಗೌರವಿಸಿ ಎಲ್ಲರ ಜೊತೆಗೂ ಸುಖವಾಗಿ ಬಾಳಿದ. ಇಂಥವೇ ನೂರಾರು ಕಥೆಗಳನ್ನು ಪ್ರತೀವರ್ಷ ಕಡ್ಲೇಕಾಯಿ ಬಿಡುಸ್ವಾಗ ಇಲ್ಲವೇ ಮಳೆಗಾಲದಲ್ಲಿ ಜಡಿ ಹಿಡ್ದು ಮನೇಲೇ ಇರುವಾಗ ದೊಡ್ಡಪ್ಪ ಹೇಳೋರು.

ಊರೊಳಗೆ ಇರುವ ಹಿರಿಯರೆಲ್ಲ ತಮ್ಮ ಮನೆಯ ಮಕ್ಕಳನ್ನು ಒಟ್ಟಿಗೆ ಕೂರಿಸಿ ಇಂಥಾ ಸಾವಿರಾರು ಜನಪದದ ಕಥೆ, ಒಗಟು,ಒಡಪು, ತ್ರಿಪದಿಗಳನ್ನು ಹೇಳುತ್ತಿದ್ದರು. ಮಾತೆತ್ತಿದರೆ ಅಪರೂಪ ಎಂದು ಅಚ್ಚರಿಗೊಳ್ಳುವಂತಹ ಅನೇಕ ಗಾದೆಗಳನ್ನು ಈಗಲೂ ನಮ್ಮೂರಲ್ಲಿ ಹೇಳುತ್ತಾರೆ. ನಮ್ಮ ಮನೆಯಲ್ಲಿ ದೊಡ್ಡಪ್ಪ ಹೇಳಿದ ಅನೇಕ ಕಥೆಗಳು ಜನಪದದ ಆಂತರ್ಯದ ಮೌಲ್ಯಗಳನ್ನು ಬಿಚ್ಚಿಟ್ಟಿವೆ.

ಕಥೆಗಳು ಬದುಕಿನ ದಾರಿಗಳಲ್ಲಿ ಮಹತ್ತನ್ನು ತೋರಿಸುವ ಶಕ್ತಕಸುವುಗಳು. ಕೆಡುಕಿನ ಪರಿಣಾಮಗಳನ್ನು ಕಥೆಯ ಮೂಲಕವೇ ಕಾಣಿಸುವ ಹಿರಿಯರನ್ನು ಕಳೆದುಕೊಳ್ಳುವ ಅಹಂಕಾರಗಳು ಕೂಡುಕುಟುಂಬಗಳನ್ನು ಒಡೆದು ಎಲ್ಲವೂ ಕುಸಿಯುತ್ತಿವೆ. ಇವತ್ತಿಗೂ ಕೃಷಿಯ ಕೆಲಸಗಳು ನಡೆಯುವಾಗ ನಮ್ಮ ಭಾಗದಲ್ಲಿ ಜನಪದ ಲೋಕದ ಎಲ್ಲಾ ವಿಸ್ಮಯಗಳು ಸೋಜಿಗವಾಗುವಂತೆ ಹೊರಬರುತ್ತವೆ.

ಆಯುಧ ಸಂಸ್ಕೃತಿಯನ್ನು ಅಣಕಿಸುವಂತೆ ಮಾನವತೆಯ ನೆರವಿನ ಇನ್ಫಿನಿಟಿಯೊಂದು ಹಳ್ಳಿಗಳನ್ನು ಕಾಯುವ ವಿಶ್ವಾಸ ಮೂಡುತ್ತದೆ. ಪಂಚಭೂತಗಳನ್ನು ಗೌರವಿಸಿ ಮಾಡುವ ಆಚರಣೆಗಳಂತು ನಮ್ಮ ನೆಲದಲ್ಲಿ ಜೀವಿಸಿವೆ. ಜನಪದದ ಒಳಮುಖ ಹೊರಮುಖವೆರಡನ್ನು ಕಾಣಿಸಿದ ನನ್ನ ಮನೆ ನನ್ನ ಊರು ನನಗೆ ಪ್ರತೀಗಳಿಗೆಯಲ್ಲು ವಿಶೇಷವಾಗಿ ಕಾಣುತ್ತದೆ.

ಯುದ್ದ ಮೋಹ,ಧರ್ಮ ಮೋಹಗಳಿಡಿದು ಪ್ರಪಂಚ ಅಲುಗುತ್ತಿರುವಾಗ ಸಾದತ್ ಹಸನ್ ಮಾಂಟೋ ಬರೆದ ಮೂರು ಸಾಲಿನ ಕಥೆಯೊಂದು ಸದಾ ಎಚ್ಚರದ ಕಡೆಗೇ ನಡೆಸುವಂತೆ ಜೊತೆಗೂಡುತ್ತದೆ. ಗಿರಾಕಿ: ‘ಎಂಥಾ ಕಲಬೆರಕೆ ಪೆಟ್ರೋಲ್ ಕೊಟ್ಟಿದ್ದೀರಿ. ನೀವು ಕೊಟ್ಟ ಕಲಬೆರಕೆ ಪೆಟ್ರೋಲ್ ನಿಂದ ಒಂದು ಅಂಗಡಿಯನ್ನುಸುಡಲಾಗಲಿಲ್ಲ'(ಮಾಂಟೊ). ಹಾಲುಂಡ ತವರು ಆಡಿ ಬೆಳೆದ ಊರು ಕೊಟ್ಟ ಪ್ರಜ್ಞೆಗೆ ರಿಣ ಹೆಚ್ಚಿಸಿಕೊಳ್ಳುತ್ತಾ ಮನಸು ಹಗುರಾದಂತೆನಿಸಿತು.

February 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: