ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಾರ್ನ್‌ಬಿಲ್‌ಗಳ ಬಿಲ್ಗಳ ಲೋಕದಲ್ಲಿ ಲಕ್ಷ್ಮೀಕಾಂತ ಇಟ್ನಾಳ್

ಲಕ್ಷ್ಮೀಕಾಂತ ಇಟ್ನಾಳ್


ಹುಬ್ಬಳ್ಳಿ ಧಾರವಾಡದಿಂದ ಸೂರ್ಯ ಮುಳುಗುವ ದಿಕ್ಕಿಗೆ ಹಳಿಯಾಳ ಯಲ್ಲಾಪೂರ ಕಡೆಗೆ ಅಂದರೆ ಪಡುವಣಕ್ಕೆ ತೆರಳಿದರೆ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತಾವಳಿಗಳ ಘಟ್ಟಗಳು ದೂರವೇನಿಲ್ಲ. ಅರ್ಧಗಂಟೆಯ ಪಯಣದಲ್ಲೇ ವಿರಳ ಕಾಡು ಅಲ್ಲಲ್ಲಿ ಸಿಗುತ್ತದೆ. ಉಳಿದಂತೆ ಈ ದ್ವಿಪಾದಿಯ ಕಪಿಮುಷ್ಠಿಗೆ ಈಡಾಗಿ, ಈ ಅನಾದಿ, ತನಗೆ ಬೇಕಾದಂತೆ ಹೊಲಿದ ಹಸಿರು ಅಂಗಿಗಳನ್ನೇ ತೊಟ್ಟುಕೊಂಡು ಎರಡೂ ಬದಿಗೆ ಇವನ ಬಂಧನಗಳ ಚೌಕಟ್ಟುಗಳಲ್ಲಿ ಬಂಧಿಯಾಗಿರುವುದಕ್ಕೆ ಸಾಕ್ಷಿಯಾಗುತ್ತ ಸಾಗಬಹುದು. ಕೇವಲ ನೂರು ವರ್ಷಗಳಾಚೆ ಧಾರವಾಡದಿಂದಲೇ ಕಾಡು ಪ್ರಾರಂಭವಾಗುತ್ತಿತ್ತಂತೆ. ಉಳವಿ ತೀರ್ಥಕ್ಷೇತ್ರಕ್ಕೆ ತೆರಳಿದವರಲ್ಲಿ ಮರಳಿದವರೇ ವಿರಳವಂತೆ. ದಟ್ಟ ಕಾನನದ ವನ್ಯ ಮೃಗಗಳನ್ನು ಹೊಂದಿದ ಕಾಡು ಇದಕ್ಕೆ ಕಾರಣ ಇದ್ದಿರಲಿಕ್ಕೆ ಸಾಕು. ಸ್ವಲ್ಪ ಎಕ್ಷಗರೇಶನ್ ಅನಿಸಬಹುದು, ಆದರೆ ತಥ್ಯವೂ ಅಡಗಿದೆ ಅದರಲ್ಲಿ. ಈಗಂತೂ ದಟ್ಟ ಕಾಡು ಉಳಿದಿರುವುದು ದಾಂಡೇಲಿಯ ಸುತ್ತಮುತ್ತ ಅಂದರೆ ಐವತ್ತು ಕಿಮೀಗಳ ನಂತರ. ಆಶ್ಚರ್ಯವೆಂದರೆ ಇಲ್ಲಿಯ ಕಾಡಂಚಿನ ಹೊಲಗದ್ದೆಗಳೆಲ್ಲ ಪ್ರತಿವರ್ಷವೂ ಕಾಡಿನತ್ತ ಹಿಗ್ಗುತ್ತ ಬೆಳೆಯುವ ಗುಣಧರ್ಮಗಳನ್ನು ಹೊಂದಿವೆ, ಎಲ್ಲರೆದುರಲ್ಲೇ. …ಕೆಲವರ ಕಣ್ಗಾವಲಿನಲ್ಲೇ…..ಹೀಗಾಗಿ ಯುದ್ಧದಲ್ಲಿ ಸೋತು ಹಿಂದೆಗೆಯುತ್ತಿರುವ ಶತೃ ಸೈನ್ಯದಂತೆ ಕಾಣುತ್ತದೆ ಕಾಡು,, ಈ ನತದೃಷ್ಟ ಕಾಡು…….. ಆದರೆ ಸೊಲುತ್ತಿರುವುದು ನೀನಲ್ಲ ಕಾಡೇ, ಅವನೇ ಎಂದು ಅವನಿಗೆ ಅರಿವಾಗುವುದರೊಳಗಾಗಿ, ಘಟಿಸಬಹುದಾದ ಅನರ್ಥಗಳೆಲ್ಲ ಘಟಿಸಿ, ತನ್ನ ಚರಮಗೀತೆಯನ್ನು ತಾನೇ ಬರೆದುಕೊಳ್ಳುವಂತಾಗುತ್ತಿದೆಯಲ್ಲವೇ? ಈ ಗ್ರಹದ ಒಡಲಿನಲ್ಲಿ ಈ ತರಹದ ಸೈಕಲ್ಗಳು ಹಿಂದೆ ಅದೆಷ್ಟು ಸಾರಿ ಘಟಿಸಿವೆಯೋ! ಮತ್ತೆ ಹಿಮಯುಗವೆಂಬುದು ಅವರಿಸಿ, ಮಿಲಿಯನ್ ವರುಷಗಳ ನಂತರ ಮತ್ತೆ ಜೀವ ಚಿಗುರುವ ಸೈಕಲ್., ಇಷ್ಟು ಬೇಗ ಮೈಮೆಲೆ ಎಳೆದುಕೊಳ್ಳುತ್ತಿದ್ದೇವೆ ಎಂಬ ಪರಿವೆ, ಅರಿವು ಹೊಂದಿಯೂ ಈ ಅಪಘಾತ ಮಾಡಿಕೊಳ್ಳುತ್ತಿದ್ದೇವಲ್ಲ, ಸ್ವಾರ್ಥ, ಸ್ವೇಚ್ಛೆ, ವಾಂಛೆಗಳು ಗಹಗಹಿಸಿದರೆ ಇನ್ನೇನಾದೀತು ಅಲ್ಲವೇ?
ಈ ಕಾಡುಪ್ರಾಣಿಗಳ ಅಂಗಳಗಳಿಗೇ ಲಗ್ಗೆಯಿಟ್ಟು, ಬೇಲಿಹಾಕಿ, ಬೇಲಿಯಲ್ಲೊಂದು ಕುಣಿಕೆಯಿಟ್ಟು ಅವುಗಳನ್ನು ಕೊಲ್ಲಲಾಗುತ್ತಿದೆ. ಜೀವಚಕ್ರದಲ್ಲಿ ಒಂದು ಇಲ್ಲದಿದ್ದರೆ, ಇನ್ನೊಂದೂ ಇಲ್ಲವೆಂಬ ಸರಳ ಸತ್ಯಕ್ಕೆ ಜಾಣಕುರುಡು ಜಗಕ್ಕೆ. ಕೋಟಿ ಕೋಟಿ ಕುಲಕೋಟಿಗಳಲ್ಲಿ ತಾನಷ್ಟೇ ಬದುಕುವ ಹುಂಬ ಹಂಬಲ ನಮಗೆ. …ಮರದಲ್ಲಿ ಕುಳಿತು….. ಕುಳಿತ ರೆಂಬೆಯನ್ನೇ ಕಡಿದುಕೊಂಡಂತೆ! …….ಅಳಿದುಳಿದ ಕಾಡುಗಳನ್ನು, ಕಾಡಿನ ಸಂಪತ್ತನ್ನು, ವನ್ಯಪ್ರಾಣಿಯನ್ನು, ಜಲಸಂಪತ್ತನ್ನು, ಪಕ್ಷಿಸಂಕುಲಗಳನ್ನು ಉಳಿಸಿಕೊಳ್ಳದೇ ಹೋದರೆ, ಮುಂದಿನ ಪೀಳಿಗೆ ಬದುಕುವುದಾದರೂ ಹೇಗೆ? ಅದೆಷ್ಟೊಂದು ಪ್ರಾಣಿ ಪಕ್ಷಿಗಳು ಅರಣ್ಯ , ಪರಿಸರ ನಾಶದಿಂದ ಈಗಾಗಲೇ ಪ್ರಕೃತಿಯಿಂದ ವಿನಾಶ ಹೊಂದಿ ಮರೆಯಾಗಿವೆ ಎಂಬುದು ತೀರ ನಿರಾಶೆ ಉಂಟುಮಾಡುವ ಸಂಕಟಕರ ಸಂಗತಿ. ಆದರೂ ಇನ್ನೂ ಹಲವಾರು ಆಶಾದಾಯಕ ಸಂಗತಿಗಳಿವೆ. ಎಲ್ಲವೂ ನಾಶವಾಗಿಲ್ಲ ಇನ್ನೂ. ನಾವು ಕಾಪಾಡಿಕೊಳ್ಳುವ ಅತೀ ಪ್ರಮುಖ ಜೀವಜಾಲಗಳು ಇನ್ನೂ ಸಾಕಷ್ಟು ಇವೆ, ಅವುಗಳಲ್ಲಿ ದಾಂಡೇಲಿಯ ಕಾಡಿನಲ್ಲಿ ಅಪರೂಪಕ್ಕೆ ಸಿಗುವ ಹಾರ್ನಬಿಲ್ಗಳ ಒಂದು ಪ್ರಭೇದ ಕೂಡ ಸೇರಿದೆ.
ಇರಲಿ, …ನಾವು ಕೆಲ ಪ್ರಕೃತಿ ಪ್ರೀತಿಯ, ಪಕ್ಷಿಪ್ರೇಮಿ ಗೆಳೆಯರು ಸೇರಿ, ಅಳಿವಿನಂಚಿನಲ್ಲಿರುವ ಅಪರೂಪದ ಹಾರ್ನಬಿಲ್ಗಳನ್ನು ನೋಡಲು ದಾಂಡೇಲಿಯ ಕಾಡಿಗೆ ಹೋಗುವುದೆಂದು ಪೂರ್ವನಿಧರ್ಾರದಂತೆ ಒಂದು ದಿನ ಹೊರಟೆವು. ಅದರಂತೆ, ಗ್ರೇಟ್ ಪೈಡ್ ಹಾರ್ನಬಿಲ್ (ದೊಡ್ಡ ದಾಸಮಂಗಟ್ಟೆ. ಮಲೇರಪ್ಪ) , ಮಲಬಾರ್ ಪೈಡ್ ಹಾರ್ನಬಿಲ್(ಮಂಗಟ್ಟೆ) ಗಳನ್ನು ಕಾಣಲು ದಾಂಡೇಲಿಯ ಕಾಳಿ ನದಿಯ ದಂಡೆಯನ್ನು ತಲುಪಿದೆವು. ಅಲ್ಲಿಂದ ಗಣೇಶಗುಡಿಯತ್ತ ಹೊರಟ ನಮಗೆ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಪ್ರಕೃತಿಯ ಅದ್ಭುತ ರಮ್ಯತೆಯ ವಿರಾಟ ದರ್ಶನವಾಯಿತು. ಕಾಡೆಂದರೆ ಕಾಡೇ,. ಎಷ್ಟೊಂದು ದಟ್ಟ. ಹಸಿರೇ ಎಲ್ಲೆಲ್ಲೂ. ಆಗಸದೆತ್ತರ ಛಾವಣಿ ಹೊದ್ದ ಮರಗಳು ಬೆಟ್ಟಗಳನ್ನು ಏರುತ್ತ, ಹಾರುವ ಬಿಳಿಯ ಮೋಡಗಳನ್ನು ತನ್ನತ್ತ ಸೆಳದುಕೊಂಡು ಶಾಲಿನಂತೆ, ರುಮಾಲಿನಂತೆ ಸುತ್ತಿಕೊಳ್ಳುವ ನೋಟಗಳು ಮರೆಯುವಂತಹವುಗಳಲ್ಲ ಬಿಡಿ. ಕಾನನದ ಮಡಿಕೆಗಳಂತೆ ಕಂಡುಬರುವ ಬೆಟ್ಟಗಳ ಸಾಲು ಸಾಲುಗಳು ಇನ್ನೂ ಇವೆಯಲ್ಲ ಎಂಬ ಸಮಾಧಾನ ಇನ್ನೊಂದೆಡೆ.
ಈ ನದಿಯ ಅಗಾಧ ಕಪ್ಪು ಜಲಧಾರೆ ಪಶ್ಚಿಮ ಘಟ್ಟಗಳ ಆಕಾಶದೆತ್ತರ ಹಚ್ಚ ಹಸಿರಿನ ಮರಗಳ ಕಾಡಿನ ಮಧ್ಯ ಹರಿಯುತ್ತ ಕಲಾವಿದನೊಬ್ಬನ ಕುಂಚದಲ್ಲಿ ಮೂಡಿದ ಚಿತ್ರದಂತೆ ನಯನ ಮನೋಹರ. ನೂರಾರು ಹಳ್ಳ ತೊರೆಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುವ ನದಿ ಜುಳು ಜುಳು ಹರಿಯುತ್ತ, ಕಲ್ಲು ಬಂಡೆಗಳಲ್ಲಿ ಜಾರುತ್ತ, ಅಲ್ಲಲ್ಲಿ ಚಿಕ್ಕ ಜಲಪಾತದಂತೆ ಧುಮ್ಮಿಕ್ಕಿ ಭೋರ್ಗರೆಯುತ್ತ, ಗಿರಣಿಯ ಸಪ್ಪಳದೊಂದಿಗೆ, ಗೊಗ್ಗರು ದನಿಯಲ್ಲೊಮ್ಮೆ, ಮುಲುಗುತ್ತೊಮ್ಮೆ, ನಲಿವುತ್ತೊಮ್ಮೆ, ಹಲುಬುತ್ತೊಮ್ಮೆ, ಪುಟಿಯುತ್ತೊಮ್ಮೆ, ಜಿಗಿಯುತ್ತೊಮ್ಮೆ, ಕರೆಯುತ್ತೊಮ್ಮೆ, ಹಾಡುತ್ತೊಮ್ಮೆ, ಹಲವೆಡೆ ಪ್ರಶಾಂತವಾಗಿ, ಇನ್ನು ಕೆಲವೆಡೆ ನೊರೆನೊರೆಯಾಗಿ, ತಿರುವಿನಲ್ಲಿ ತೊರೆಯಾಗಿ, ಹರಿವಿನಲ್ಲಿ ಹೊಳೆಯಾಗಿ, ವಿಶಾಲವಾಗಿ, ಮಿರಮಿರ ಮಿಂಚುವ ಮೈಯಲ್ಲಿ ನೂರು ಕಾಲುಗಳಲ್ಲಿ ಓಡುತ್ತಿದೆ. ಈ ನದಿ ತೊರೆಗಳ ಸಂಗೀತವೇ ಸಂಗೀತ. ಬಂಡೆಗಳಲ್ಲಿ ಹಾಗೂ ಇಳಿಜಾರುಗಳಲ್ಲಿ ಹರಿಯುವಾಗ ಬಿಳಿಯ ರೇಶ್ಮೆ ಸೀರೆಯ ನುನುಪಿನ ಹೊಳಪಲ್ಲಿ ಮಿರುಗುತ್ತ, ಗಾಳಿಗೆ ಹಾರುತ್ತಿರುವ ಸೆರಗಿನ ಹಾಗೆ, ಇನ್ನೊಮ್ಮೆ ಬಿಳಿ ನೊರೆ ನೊರೆಯ ಮೋಡಗಳ ತುಣುಕುಗಳು ರಾಫ್ಟಿಂಗ್ ಮಾಡುತ್ತಿವೆಯೇನೋ ಅನ್ನಿಸಿದರೆ ಅಶ್ಚರ್ಯವಿಲ್ಲ. ಟಿಸಿಲಾಗಿ ಒಡೆದು ಹರಿದಲ್ಲಿ ನದಿಯ ಮಡಿಲಲ್ಲಿ ಅಲ್ಲಲ್ಲಿ ನಡುಗಡ್ಡೆಗಳು ನಿಮರ್ಾಣಗೊಂಡಿವೆ. ಇಂತಹ ಪರಿಸರ, ಪಕ್ಷಿಗಳ ಬದುಕಿಗೆ, ವಂಶಾಭಿವೃದ್ಧಿಗೆ ಅತ್ಯಂತ ಪೂರಕ ಸ್ಥಳ. ಹೀಗಾಗಿ ಇಡೀ ಪಶ್ಚಿಮ ಘಟ್ಟವೇ ಒಂದು ವಿಶಾಲ ‘ಹಸಿರು ಪಕ್ಷಿಧಾಮ’. ನದಿಯ ಇಕ್ಕೆಲಗಳ ಗಗನಚುಂಬಿ ಮರಗಳು ಅಪಾರವಾದ ಹಾಗೂ ಅಪರೂಪವಾದ ಪಕ್ಷಿ ಸಂಕುಲಕ್ಕೆ ಆಶ್ರಯತಾಣವಾಗಿವೆ. ಅವುಗಳಲ್ಲಿ ಅಪರೂಪದ ‘ಗ್ರೇಟ್ ಇಂಡಿಯನ್ ಪೈಡ್ ಹಾರ್ನಬಿಲ್’ಗಳು, ‘ಮಲಬಾರ್ ಪೈಡ್ ಹಾರ್ನಬಿಲ್’ಗಳು ಪ್ರಮುಖವಾದವು.

ಭಾರತ ಭೂಭಾಗದಲ್ಲಿ ಕನರ್ಾಟಕದ ಪಶ್ಚಿಮ ಘಟ್ಟಗಳ ಅಣಶಿ, ಕುಳಗಿ ದಟ್ಟ ಅರಣ್ಯದಲ್ಲಿ, ಕೇರಳದ ವೈನಾಡ್ ಸಹ್ಯಾದ್ರಿ ಪರ್ವತ ಶ್ರೇಣಿಗಳು, ಹಿಮಾಲಯದ ತಪ್ಪಲು, ಹಾಗೂ ನೇಪಾಳ, ಭೂತಾನ್, ಬಮರ್ಾ, ಥೈಲ್ಯಾಂಡ್, ಮಲೇಶಿಯಾ, ಇಂಡೋನೇಷಿಯಾ, ಹಾಗೂ ಸುಮಾತ್ರಾ ದೇಶಗಳಲ್ಲೂ ಇದರ ಪ್ರಭೇದ ಕಾಣಸಿಗುತ್ತವೆ. ಜಗತ್ತಿನ ಹದಿನಾಲ್ಕು ಪ್ರಬೇಧಗಳಲ್ಲಿ ನಾಲ್ಕು ದಾಂಡೇಲಿಯ ಕಾಡುಗಳಲ್ಲಿ ಕಂಡುಬರುತ್ತವೆ. ಅವು, ಇಂಡಿಯನ್ ಗ್ರೇ ಹಾರ್ನಬಿಲ್, ಮಲಬಾರ ಗ್ರೇ ಹಾರ್ನಬಿಲ್, ಮಲಬಾರ್ ಪೈಡ್ ಹಾರ್ನಬಿಲ್, ಗ್ರೇಟ್( ಇಂಡಿಯನ್) ಪೈಡ್ ಹಾರ್ನಬಿಲ್ಗಳು .
ದಾಂಡೇಲಿ ಸುತ್ತಲಿನ ದಟ್ಟ ಅರಣ್ಯದಲ್ಲಿ ಕಾಣಸಿಗುವ ಈ ಅಪರೂಪದ ಹಾರ್ನಬಿಲ್ಗಳಿಗಾಗಿ ನಮ್ಮೆಲ್ಲರ ಕಣ್ಣುಗಳು ಹುಡುಕುತ್ತಿದ್ದಾಗ, ನದಿಯ ದಂಡೆಯ ಎತ್ತರದ ಮರಗಳಲ್ಲೊಂದರಲ್ಲಿ ಹಳದಿ ಬಣ್ಣದ ಕ್ಯಾಸ್ಕ (ಕೊಕ್ಕಿನ ಮೇಲ್ಭಾಗದ ಟೊಪ್ಪಿಗೆ)ನೊಂದಿಗೆ, ಬಿಳಿಯ ಕತ್ತನ್ನು ಹೊಂದಿದ, ರೆಕ್ಕೆಗಳ ಮೇಲೆ ಬಿಳಿ ಗೆರೆಯನ್ನು ಹೊಂದಿದ ಉದ್ದನೆಯ ದೊಡ್ಡದಾದ ಕೊಕ್ಕಿನ, ಬಿಳಿ ಬಣ್ಣ ಬಾಲದ ಪುಕ್ಕಗಳ ಹಾರ್ನಬಿಲ್ ಒಬ್ಬರ ಕಣ್ಣಿಗೆ ಬೀಳುತ್ತಲೇ ಆ ಮರದ ಕಡೆಗೆ ಸಾವಕಾಶವಾಗಿ, ಅದರತ್ತ ಹೋಗಿ ನೋಡಿದೆವು. ಅಲ್ಲಿಗೆ ಹೋಗುತ್ತಲೇ ದೊಡ್ಡ ಸಪ್ಪಳದೊಂದಿಗೆ ಹಾರುತ್ತ ಹೋಗಿ ಇನ್ನೊಂದು ಮರದ ಮೇಲೆ ಹೋಗಿ ಕುಳಿತಿತು. ಅದರ ರೆಕ್ಕೆಗಳ ಅಂಚುಗಳು ಬೆರಳುಗಳು ಪಸರಿಸಿದಂತಿದ್ದವು. ಹಾಗೂ ಆ ಅಂಚುಗಳು ಬಿಳಿಯಾಗಿದ್ದು ಸುಂದರವಾಗಿ ಕಾಣುವ, ‘ಗ್ರೇಟ್ ಪೈಡ್ ಹಾರ್ನಬಿಲ್’.  ಗಾಳಿಯಲ್ಲಿ ತೇಲುತ್ತ ಹಾರಿ ಹೋಗುತ್ತಿದ್ದುದನ್ನು ಮೈಮರೆತು ನೋಡಿದೆವು. ಆ ಮರದ ಹತ್ತಿರ ಹೋದ ತಂಡಕ್ಕೆ ಕುಳಿತಿರುವ ಮತ್ತೊಂದು ಹಾರ್ನಬಿಲ್ ಕಂಡು ಬಂದಿತು.
ಒಡೆದ ದನಿಯಲ್ಲಿ ತುಸು ಕರ್ಕಶವೆನ್ನುವಷ್ಟು ಕೂಗುತ್ತಿದ್ದವು. ಒಂದು ಟೊಂಗೆಯಿಂದ ಇನ್ನೊಂದು ಟೊಂಗೆಗೆ ಜಿಗಿಯುತ್ತಿದ್ದವು. ಕುಟುಂಬ ಪದ್ಧತಿಯನ್ನು ಪಾಲಿಸುತ್ತವೆ ಹಕ್ಕಿಗಳೂ ಕೂಡ. ಅದರ ಎರಡು ಮರಿಗಳೂ ಕೂಡ ಅದೇ ಮರದಲ್ಲಿ ಕುಳಿತಿದ್ದವು. ತಾಯಿ ಹಾರ್ನಬಿಲ್, ಸುಮಾರು 40-45 ಸೆ.ಮೀನಷ್ಟಿರುವ ತನ್ನ ಮರಿಗೆ ಬಾಯಿಯಲ್ಲಿ ನುಂಗಿದ ಹಣ್ಣುಗಳನ್ನು ಹೊರಕ್ಕೆ ತಂದುಕೊಂಡು ಅದಕ್ಕೆ ಗುಟುಕು ತಿನ್ನಿಸುವುದನ್ನು ದುರ್ಬೀನಿನಿಂದ ಕಂಡು ಆನಂದಿಸಿದೆವು. ಆಲ, ಅರಳಿ, ಬಸರಿ, ಅತ್ತಿ, ಬೂರುಗ ಮತ್ತಿತರ ಕಾಡು ಮರಗಳ ಹಣ್ಣುಗಳೇ ಹಾರ್ನಬಿಲ್ಗಳಿಗೆ ಮುಖ್ಯ ಆಹಾರ, ಅಲ್ಲದೇ ಅವುಗಳು ಮೀನು, ಹಾವು, ಹಲ್ಲಿ, ಓತಿಕ್ಯಾತಗಳಲ್ಲದೇ ಸಣ್ಣಪುಟ್ಟ ಕೀಟ ಮತ್ತು ಪ್ರಾಣಿಗಳನ್ನು ಆಹಾರವಾಗಿ ಬೇಟೆಯಾಡುತ್ತವೆ. ಒಂದು ಸಲ ತಾಯಿ ತನ್ನ ಮರಿಗಳಿಗೆ ಮೂರು ಓತಿಕ್ಯಾತಗಳನ್ನು ಬಾಯಿಂದ ಹೊರತಂದು ತಿನ್ನಿಸಿದ್ದನ್ನು ಕಣ್ಣಾರೆ ಕಂಡಿದ್ದೇನೆ ಎಂದು ತಂಡದ ಸದಸ್ಯರೊಬ್ಬರು ಹೇಳಿದಾಗ, ಆಶ್ಚರ್ಯವೆನಿಸಿತು.
ಮಲಬಾರ್ ಪೈಡ ಹಾರ್ನಬಿಲ್ 50 ವರ್ಷಗಳವರೆಗೆ ಬದುಕಿದ ಉದಾಹರಣೆ ಇದೆ. ಇದು ತನ್ನ ದೇಹದ ನೀರಿನ ಬಹುತೇಕ ಬೇಡಿಕೆಯನ್ನು ತಾನು ತಿನ್ನುವ ‘ಫಿಗ್’ ಜಾತಿಯ ಹಣ್ಣುಗಳಿಂದ ಪೂರೈಸಿಕೊಳ್ಳುತ್ತದೆ. ಇದು ನಮ್ಮ ಕೇರಳ ಹಾಗೂ ಅರುಣಾಚಲ ಪ್ರದೇಶಗಳ ರಾಜ್ಯ ಪಕ್ಷಿಯೂ ಹೌದು.
ಈ ಹಾರ್ನಬಿಲ್ಗಳದೇ ಒಂದು ರೋಚಕ ಜಗತ್ತು. ತಾಯಿ ಹಾರ್ನಬಿಲ್ ಸಂತಾನೋತ್ಪತ್ತಿ ಮಾಡುವ ಸಂದರ್ಭದಲ್ಲಿ ಕ್ಯಾನೋಪಿಗಳಿಲ್ಲದ, ಸಾಕಷ್ಟು ಎತ್ರರವಾದ ಹಾಗೂ ಸ್ವಲ್ಪ ಮೃದು ಬೊಡ್ಡೆಯ ಮರವನ್ನು ಹುಡುಕಿ ಅದರಲ್ಲಿ ಪೊಟರೆಯೊಂದನ್ನು ಮಾಡಿ, ಆ ಪೊಟರೆಯ ಒಳಗೆ ಪ್ರವೇಶಿಸಿದ ಹೆಣ್ಣು ಆ ಪೊಟರೆಯ ಬಾಗಿಲನ ಹೊರಗೆ ಕೊಕ್ಕು ಹೊರಚಾಚುವಷ್ಟು ಬಿಟ್ಟು ತನ್ನ ದೇಹದ ವಿಸರ್ಜನೆ ಹಾಗು ಜೊಲ್ಲು ಬಳಸಿ ಹದವಾಗಿ ಕಾಂಕ್ರೀಟಿನಂತೆ ಮಿಕ್ಷಮಾಡಿ ಆ ಮರದ ಪೊಟರೆಯ ಬಾಗಿಲಿಗೆ ಮೆತ್ತುತ್ತದೆ. ಅದರಲ್ಲಿ ನಂತರ ತನ್ನ ಗರಿಗಳನ್ನು ಉದುರಿಸಿ, ಮೃದುವಾದ ಬೆಡ್ ಮಾಡಿ ಅದರ ಮೇಲೆ ತತ್ತಿಗಳನ್ನು ಇಡುತ್ತದೆ. ಗಂಡು ಹೊರಗಿನಿಂದ ಪೊಟರೆಯನ್ನು ಕಾಯುತ್ತದೆ ಹಾಗೂ ಹೊರಗಿನಿಂದ ಅದಕ್ಕೆ ಆಹಾರವನ್ನು ಅರಸಿ ತಂದು ತಿನ್ನಿಸುತ್ತದೆ. ಅದರ ಮರಿಗಳು ತತ್ತಿಯನ್ನು ಒಡೆದು ಹೊರಬರಲು 38-40 ದಿನ ಬೇಕು.
ತಂಡದ ಸ್ಥಳೀಯ ಹವ್ಯಾಸಿ ಪಕ್ಷಿಪ್ರೇಮಿ ಸದಸ್ಯರೊಬ್ಬರು ಇಂತಹ ಒಂದು ಜೊತೆ ಹಕ್ಕಿಗಳು ನದಿಯ ದಂಡೆಯ ಮರವೊಂದರಲ್ಲಿ ಮರಿಗಳನ್ನು ಮಾಡಿದ್ದುದನ್ನು ಗಮನಿಸಿ, ನಂತರ ಹೊರಬರಬೇಕಾದರೆ ಹೆಣ್ಣು ಹಕ್ಕಿ ಆ ಮಣ್ಣಿನ ಗೋಡೆಯನ್ನು ಒಡೆದು ಮರಿಗಳೊಂದಿಗೆ ಹೊರಬರುವುದನ್ನೇ ದಿನವೂ ನಿಗಾ ವಹಿಸಿ ಕಾಯುತ್ತಿದ್ದರೂ, ಇವರ ಕಣ್ಣು ತಪ್ಪಿಸಿ ಅವುಗಳು ಕೇವಲ ನಾಲ್ಕು ದಿನಗಳ ಮೊದಲು ಗೂಡಿನಿಂದ ಹೊರಜಗತ್ತಿಗೆ ಹಾರಿ ಹೋಗಿರುವುದನ್ನು ನಂತರದಲ್ಲಿ ನೋಡಿದ್ದರು. ಹೀಗಾಗಿ ಅವುಗಳು ಗೂಡಿನಿಂದ ಹೊರಬರುವ ಆ ಪ್ರಕ್ರಿಯೆಯ ನೋಟದಿಂದ ವಂಚಿತರಾಗಿದ್ದರು. ಆ ಒಡೆದ ಮಣ್ಣಿನ ಗೂಡಿನ ಸ್ಯಾಂಪಲ್ ತರಲು ತನ್ನ ಸಹಚರರೊಬ್ಬರನ್ನು ಬೋಟ್ನೊಂದಿಗೆ ಕಳುಹಿಸಿದರು. ನೋಡನೋಡುತ್ತಲೇ ಆತ ನದಿಯ ಆಚೆಗಿನ ದಡ ತಲುಪಿ ಎತ್ತರದ ಮರವನ್ನೇರಿ, ನೆಲದಿಂದ ಸುಮಾರು 70-80 ಅಡಿ ಎತ್ತರದಲ್ಲಿ ಕಟ್ಟಿದ ಪೊಟರೆಯ ಬಾಗಿಲಿನ ಗೋಡೆಯ ಮಣ್ಣಿನ ಸ್ಯಾಂಪಲ್ ತಂದ. ಕುತೂಹಲದಿಂದ ನೋಡಲಾಗಿ ಆ ಮಣ್ಣಿನ ಗೋಡೆ ಸುಟ್ಟ ಇಟ್ಟಿಗೆಯ ತರಹ ಹಗುರವಾಗಿತ್ತು. ಹಾಗೂ ಅದರಲ್ಲಿ ಒಣಗಿದ ಗರಿ ಗರಿ ಹುಲ್ಲು ಗಟ್ಟಿಗೊಳ್ಳಲು ಸರಳಿನ ತರಹ ಹೆಣೆದಂತಿತ್ತು ಹಾಗೂ ಆ ಗೋಡೆಯ ದಪ್ಪ ಒಂದೂವರೆ ಇಂಚಿನಷ್ಟು ಇರುವುದನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿದೆವು. ಈ ಗೋಡೆಯ ಪದಾರ್ಥ ಮಣ್ಣಿಗಿಂತ ಹಗುರವಾಗಿದ್ದು ಆ ಹೆಣ್ಣು ಹಕ್ಕಿಯ ವಿಸರ್ಜನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಅವಲೋಕಿಸಿದಾಗ, ಅದರಲ್ಲಿ ಹಣ್ಣುಗಳ ಸಣ್ಣ ಸಣ್ಣ ಬೀಜಗಳಿರುವುದನ್ನೂ ಸೂಕ್ಷ್ಮವಾಗಿ ಗಮನಿಸಿದೆವು.. ನಮ್ಮ ಹಳ್ಳಿ ಮನೆಗಳಲ್ಲಿ ಜಿಗುಟು ಹಾಳು ಮಣ್ಣಿಗೆ ಭತ್ತದ ಹುಲ್ಲು ಅಥವಾ ಖಡ್ಡವೆಂದು ಕರೆಯುವ ವಿಶೇಷ ತರಹದ ಹುಲ್ಲನ್ನು ಕತ್ತರಿಸಿ ಹದಮಾಡಿ ಅದನ್ನು ಗೋಡೆಗಳಿಗೆ ಪ್ಲಾಸ್ಟರ್ ತರಹ ಉಪಯೋಗಿಸುವುದು ನೆನಪಿಗೆ ಬಂದಿತು

ಹಾರ್ನಬಿಲ್ ಅತ್ಯಂತ ಪರಿಸರ ಸ್ನೇಹಿ ಪಕ್ಷಿ. ಪೊಟರೆಯಲ್ಲಿ ಮಲ ವಿಸಜರ್ಿಸದೇ ಪಿಚಕಾರಿಯ ಹಾಗೆ ಹೊರಚಿಮ್ಮಿಸುತ್ತದೆ.. ಹಾಗೂ ಮರಿಹಕ್ಕಿಗಳೂ ಕೂಡ ಎರಡು ವಾರಗಳಲ್ಲಿ ಹೀಗೆ ಮಾಡಲು ಕಲಿಯುತ್ತವೆ. ಪಕ್ಷಿಗಳಿಗೆ ಪ್ರಕೃತಿ ದತ್ತವಾದ ಶತೃಗಳಿಗೆ ಕಡಿಮೆ ಏನಿಲ್ಲ. ಹಾವು, ಗಿಡುಗ ಮುಂತಾದವುಗಳಿಗೆ ಇತರೆ ಪ್ರಾಣಿ ಪಕ್ಷಿಗಳ ತತ್ತಿಗಳೆಂದರೆ ತುಂಬ ಇಷ್ಟ. ಹೀಗಾಗಿ ಪೊಟರೆಯಲ್ಲಿ ಮಲ ಮೂತ್ರ ವಿಸಜರ್ಿಸಿದಲ್ಲಿ ಅದರ ವಾಸನೆಯಿಂದ ಶತೃಗಳಿಗೆ ತನ್ನ ಇರುವಿನ ಸುಳಿವನ್ನು ನೀಡಿದಂತಾಗುವುದರಿಂದ, ಅದನ್ನು ತಪ್ಪಿಸಲು ಅದು ಹೀಗೆ ಮಾಡುತ್ತವೆ. ಮರಿಗಳಿಗೆ ಹಾಗೂ ತಾಯಿ ಪಕ್ಷಿಗೆ ಆಹಾರ ಒದಗಿಸುವಾಗ ಪೊಟರೆಯ ಅಂಚಿಗೆ ತಾಗಿದ ಆಹಾರವನ್ನು ಗಂಡು ಎಷ್ಟೂ ಸುಳಿವಿಲ್ಲದಂತೆ ತನ್ನ ಚುಂಚಿನಿಂದ ಸ್ವಚ್ಛಗೊಳಿಸುತ್ತದೆ. ಸ್ವಚ್ಛವಾಗದ್ದನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ ಆ ಜಾಗವನ್ನು ಸ್ವಚ್ಛಗೊಳಿಸಿ, ಶತೃಗಳಿಗೆ ಯಾವ ಸುಳಿವು ಸಿಗದಂತೆ ಎಚ್ಚರವಹಿಸ್ಮತ್ತದೆ. ಹೀಗೆ ಸಂತಾನೊತ್ಪತ್ತಿ ಮಾಡಿಕೊಳ್ಳುವ ಈ ಪಕ್ಷಿಗಳು ಮರಿಗಳು ದೊಡ್ಡದಾದ ಮೇಲೆ ತಾಯಿ ಹಕ್ಕಿ ಆ ಪೊಟರೆಯ ಗೋಡೆಯಿಂದ ಹೊರಗೆ ಬರಲು ಸಾಕಾಗುವಷ್ಟು ದೊಡ್ಡದಾಗಿ ಒಡೆದು ಹೊರಬಂದ ಮೇಲೆ ಮರಿಗಳು ಮತ್ತೆ ಆ ಪೊಟರೆಗೆ ತಮ್ಮ ದೇಹದ ವಿಸರ್ಜನೆಯಿಂದ ಗೋಡೆ ನಿಮರ್ಿಸಿಕೊಳ್ಳುತ್ತವೆ ಹಾಗೂ ರೆಕ್ಕೆ ಮೂಡಿದ ನಂತರ ಪೊಟರೆಯಿಂದ ಹೊರಬರುತ್ತವೆ. ಒಮ್ಮೆ ಪೊಟರೆಯಿಂದ ಮರಿಗಳೊಂದಿಗೆ ಹೊರಬರುವ ಹಕ್ಕಿಗಳು ಮತ್ತೆ ಆ ಪೊಟರೆಗೆ ಬರದೇ ಮರದ ಎತ್ತರದ ರೆಂಬೆಗಳಲ್ಲಿ ಮರಿಗಳಿಗೆ ಆಹಾರ ಪೂರೈಸುತ್ತ ಜತನವಾಗಿ ಅವುಗಳಿಗೆ ಹಾರಲು ಬರುವವರೆಗೂ ಆಹಾರವನ್ನು ತಂದು ತಿನ್ನಿಸುತ್ತವೆ. ಈ ಸಂದರ್ಭದಲ್ಲಿ ಹೆಣ್ಣು ಗಂಡು ಕೂಡಿಯೇ ಆಹಾರ ಅರಸುವ ಹಂತಕ್ಕೆ ಬಂದಿರುತ್ತವೆ. ಬ್ರೀಡಿಂಗ್ ಸೀಸನ್ನಲ್ಲಿ 3.5 ಕಿಮೀಗಳಷ್ಟು ಕ್ಷೇತ್ರದಲ್ಲಿ ಸುತ್ತುಹಾಕದರೆ, ಉಳಿದ ಅವಧಿಗಳಲ್ಲಿ ಸುಮಾರು ಹದಿನಾಲ್ಕು ಕಿಮೀಗಳಷ್ಟು ದೂರದ ಸುತ್ತುವಲಯದಲ್ಲಿ ಆಹಾರಕ್ಕಾಗಿ ಸುತ್ತುತ್ತವೆ.
ದೊಡ್ಡದಾದ ನೋಡಲು ಸುಂದರವಾಗಿ ಕಾಣುವ ಹಳದಿ ಬಣ್ಣದ ಕೊಕ್ಕನ್ನು ಮನರಂಜನೆಗಾಗಿ ಜನ ಅದರಲ್ಲೂ ಬುಡಕಟ್ಟು ಜನ ಇಂತಹ ಪಕ್ಷಿಯನ್ನು ಮಾಂಸಕ್ಕಾಗಿ ಬೇಟೆಯಾಡುವುದೂ ಅಲ್ಲದೇ ಅದರ ಕೊಕ್ಕನ್ನು ಶೇಖರಿಸಿ ಅಲಂಕಾರಕ್ಕಾಗಿ ಇಟ್ಟುಕೊಳ್ಳುತ್ತಾರೆ! ಆದರೆ ಅವರಿಗೆ ಇನ್ನೊಂದು ವಿಷಯ ಗೊತ್ತಿರುವುದಿಲ್ಲ. ಸಂತಾನೋತ್ಪತ್ತಿಯ ಸಮಯದಲ್ಲಿ ಪೊಟರೆಯಲ್ಲಿ ಇರುವ ಹೆಣ್ಣು ಹಾರ್ನಬಿಲ್ ಹಾಗೂ ಮರಿಗಳಿಗೆ ಆಹಾರ ಅರಸುತ್ತ ಗಂಡು ಹಾರ್ನಬಿಲ್ ಒಮ್ಮೊಮ್ಮೆ ಜನವಸತಿಯ ಇರುವ ಪ್ರದೇಶಕ್ಕೂ ಬರುತ್ತದೆ. ಹಾಗೆ ಬಂದಾಗ ಬೇಟೆಗಾರರಿಗೆ ಬಲಿಯಾಗಲೂಬಹುದು. ಆದರೆ ಗಂಡು ಸತ್ತರೆ ಪೊಟರೆಯಲ್ಲಿ ಗರಿಗಳನ್ನು ಉದುರಿಸಿದ ಹೆಣ್ಣು ತನ್ನ ಮರಿಗಳೊಂದಿಗೆ ಆಹಾರಕ್ಕಾಗಿ ಕಾಯತ್ತ ಕಾಯುತ್ತ ಅಲ್ಲಿಯೇ ಮರಿಗಳೊಂದಿಗೆ ಸತ್ತುಹೋಗುತ್ತದೆ. ಇದರಿಂದ ಅದರ ಸಂತತಿ ನಶಿಸಿ ಹೋಗುತ್ತದೆ. ಇದರ ಅರಿವಿಲ್ಲದ ಜನಕ್ಕೆ ಜಾಗೃತಿ ಮೂಡಿಸುವುದು ನಾಗರೀಕ ಸಮಾಜದ ಕರ್ತವ್ಯ. ಮನುಷ್ಯನ ದುರಾಶೆಗೆ ಸಿಲುಕಿ ಕಾಡಿನ ನಾಶ ಒಂದೆಡೆಯಾದರೆ, ಬೇಟೆಗಾರರ ಕಾಟಿದಿಂದ ಇವುಗಳ ಸಂಕುಲ ನಶಿಸಿ ಹೋಗುತ್ತಿರುವುದು ಮತ್ತೊಂದು ಆತಂಕ. ಜನಕ್ಕೆ ಸೂಕ್ತ ತಿಳುವಳಿಕೆ ಕೊಡುವ ಕೆಲಸವಾಗಬೇಕಿದೆ. ಸ್ಕೂಲು,,ಕಾಲೇಜು, ಮಹಿಳಾಮಂಡಳಗಳು, ಹೋಡರ್ಿಂಗ್ಗಳು ಇತ್ಯಾದಿಗಳಿಂದ ಇದರ ಆತಂಕಕರ ಸಂಗತಿಯನ್ನು ಅವರೆಲ್ಲರಿಗೆ ಮನಗಾಣಿಸಬೇಕಿದೆ. ಪ್ರಯತ್ನಗಳು ಆಗುತ್ತಿಲ್ಲವೆಂದಲ್ಲ, ಅದರೆ ಆಗಬೇಕಾದ ಪ್ರಮಾಣದಲ್ಲಿ, ವೇಗದಲ್ಲಿ ಆಗುತ್ತಿಲ್ಲವೆನಿಸುತ್ತದೆ.
ಸಮಾಧಾನಕರ ಅಂಶವೆಂದರೆ, ಅಳವಿನಂಚಿಗೆ ಬಂದಿರುವ ಜೀವ ಚಕ್ರದ ಕೊಂಡಿಯಲ್ಲಿ ಇವುಗಳ ಮಹತ್ವವನ್ನು ಕುರಿತು ನಾಡಿನ ಮಾಧ್ಯಮಗಳಲ್ಲಿ ಬಂದ ವಿವರಣಾತ್ಮಕ ಲೇಖನಗಳು ಸಕರ್ಾರದ ಕಣ್ಣು ತೆರೆಸಿತು. ಕೂಡಲೇ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ ಇವುಗಳ ವಿನಾಶವನ್ನು ತಡೆಯುವ ದಿಶೆಯಲ್ಲಿ ದಾಂಡೇಲಿ ಸುತ್ತಲಿನ ಈ ಪಕ್ಷಿಗಳು ಇರುವ ಕ್ಷೇತ್ರಗಳನ್ನು ಗುರುತಿಸಿ, ಸುಮಾರು ಐವತ್ತು ಚ.ಕಿ.ಮೀ ಪ್ರದೇಶವನ್ನು ಹಾರ್ನಬಿಲ್ ಸಂರಕ್ಷಿತ ವಲಯ ವೆಂದು 31 ಮೇ, 2011 ರಂದು ಘೋಷಿಸಿದೆ. ಇದರಿಂದ ಇದರ ಬೇಟೆಗೆ ಕಡಿವಾಣ ಬಿದ್ದಿದೆ, ಈ ಪಕ್ಷಿಗಳು ಬದುಕಲು ಬೇಕಾದ ಹಣ್ಣಿನ ಮರಗಳು, ಸಂತಾನೋತ್ಪತ್ತಿಗಾಗಿ ಸೂಕ್ತವಾದ ಜಾತಿಯ ಮರಗಳನ್ನು ಈ ಅಭಯಾರಣ್ಯದಲ್ಲಿ ಬೆಳೆಯುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಮಾನವನ ಕಾರ್ಬನ್ ಫುಟ್ಪ್ರಿಂಟ್ಸ್ಗಳನ್ನು ಇವುಗಳಿಂದ ದೂರವಿಡಲು ಹಲವಾರು ಉಪಕ್ರಮಗಳು ಜಾರಿಯಾಗಬೇಕಿರುವುದು ಈಗಿನ ತುತರ್ು ಅವಶ್ಯಕತೆ. ಇದರಿಂದ ಕಾಡಿನ ಪರಿಸರವು ಸಂರಕ್ಷಿಸಲ್ಪಟ್ಟು (ಇಕೋ ಸಿಸ್ಟಂ) ಪಕ್ಷಿ ಸಂಕುಲಕ್ಕಷ್ಟೇ ಅಲ್ಲದೇ ವನ್ಯಜೀವಿಗಳ ಉಳಿವಿಗೆ ಸಹಾಯಕವಾಗಲಿದೆ. ಹುಲಿ ಸಂರಕ್ಷಣಾ ವಲಯದಲ್ಲಿಯೂ ಬರುವ (ಒವರ್ ಲ್ಯಾಪ್) ಈ ಹಾರ್ನಬಿಲ್ ಸಂರಕ್ಷಿತ ವಲಯ ಈ ಪಕ್ಷಿಗಳಲ್ಲದೇ ಎಲ್ಲ ಬಗೆಯ ಕಾಡಿನ ಸಂತತಿ, ಪರಿಸರ ಉಳಿಯಲು ಸಹಾಯಕವಾಗುತ್ತದೆ.
ಸಂಜೆಯಾಗುತ್ತಲೇ ಸಾಕಷ್ಟು ಸಂಖೈಯಲ್ಲಿ ಗೂಡುಗಳಿಗೆ ಮರಳುತ್ತಿರುವ ಕಪ್ಪು ಕತ್ತಿನ ಭಾಗವನ್ನು ನೋಡಿ ಅವು ಮಲಬಾರ ಪೈಡ್ ಹಾರ್ನಬಿಲ್ಗಳೆಂದು ಗುರುತು ಹಿಡಿದು ಸಂತೋಷಪಟ್ಟೆವು. ಆಕಾರದಲ್ಲಿ ಗ್ರೇಟ್ ಪೈಡ್ ಹಾರ್ನಬಿಲ್ಗಿಂತ ಚಿಕ್ಕದಿರುತ್ತವೆ, ಇವು ಸುಮಾರು ಒಂದೂವರೆಯಿಂದ ಎರಡು ಫೂಟು ಉದ್ದವಿದ್ದರೆ, ಗ್ರೇಟ್ ಪೈಡ್ ಹಾರ್ನಬಿಲ್ ಹಾರುವಾಗ ಎರಡೂವರೆಯಿಂದ ನಾಲ್ಕು ಫೂಟುಗಳವರೆಗೆ ಅಗಲ ಕಾಣಿಸುತ್ತವೆ. ಹಾಗೂ ಇವು ಅಪರೂಪದಲ್ಲಿ ಅಪರೂಪವಾಗಿ ಕಂಡುಬರುತ್ತವೆ. ಕಾಳಿಯಲ್ಲಿ ಹೆರಾನ್ (ಬಕಪಕ್ಷಿ) , ನೀರುಕಾಗೆ, ನೀರುಗೋಳಿ, ಇಗ್ರೆಟ್, ಬ್ರಾಹ್ಮಿಣಿ ಕೈಟ್ (ಗರುಡ) , ಲೆಸ್ಸರ್ ಹಂಟಿಂಗ್ ಈಗಲ್, ರಿವರ್ ಟರ್ನಗಳನ್ನು ಸಾಕಷ್ಟು ಸಂಖೈಯಲ್ಲಿ ನೋಡಿದ್ದಾಯ್ತು. ಸಂಜೆಯಾಗುತ್ತಲಿತ್ತು. ಕಾಡಿನಲ್ಲೆಲ್ಲ ಕತ್ತಲು ಆವರಿಸತೊಡಗಿತ್ತು. ವಿಹಂಗಮಿಗಳ ಲೋಕದಲ್ಲಿ ಯಕ್ಷರಂತೆ ವಿಹರಿಸಿದ ಮನಸ್ಸುಗಳಿಂದ ಸಂತೃಪ್ತರಾಗಿ ಹಾರ್ನಬಿಲ್ಗಳ ಲೋಕಕ್ಕೆ ಗುಡ್ ಬೈ ಹೇಳಿ ಧಾರವಾಡದತ್ತ ಮರಳಿದೆವು. ಹಾಗೆಯೇ ಮತ್ತೊಮ್ಮೆ ಹಾರ್ನಬಿಲ್ಗಳನ್ನು ನೋಡಬೇಕೆಂಬ ಹೆಬ್ಬಯಕೆ ಮನದಲ್ಲಿ ಕುಡಿಯೊಡೆಯುತ್ತಲಿತ್ತು. ಪಕ್ಷಿ ಪ್ರಪಂಚದ ಸೆಳೆತವೇ ಹಾಗಲ್ಲವೇ!
 

‍ಲೇಖಕರು G

30 April, 2015

8 Comments

  1. Anil Talikoti

    ಹಾರ್ನಬಿಲ್ ಬಗ್ಗೆ ಮಾಹಿತಿ , ನಿಮ್ಮ ಕಾಳಜಿ ಅರ್ಥಪೂರ್ಣವಾಗಿದೆ -ಲೇಖನ ತುಂಬಾ ಇಷ್ಟವಾಯಿತು

  2. ಲಕ್ಷ್ಮೀಕಾಂತ ಇಟ್ನಾಳ

    ಅನಿಲ್ ಜಿ, ನಮಸ್ಕಾರ. ತಮ್ಮ ಮೆಚ್ಚುಗೆಗೆ ಧನ್ಯ ಸರ್…

  3. ಲಕ್ಷ್ಮೀಕಾಂತ ಇಟ್ನಾಳ

    ಮಿತ್ರರೆ, ಬರಹದಲ್ಲಿ ಉಪಯೋಗಿಸಿದ ಚಿತ್ರಗಳು ಅಂತರ್ಜಾಲದ ಮಿತ್ರರುಗಳಿಂದ. ಅವರಿಗೆ ನನ್ನ ಕೃತಜ್ಞತೆಗಳು

  4. Vithal Katti

    ದಾಂಡೇಲಿಗೆ ಹಲವು ಸಲ ಭೇಟಿ ನೀಡಿದ್ದೇನೆ.ಹಾರ್ನಬಿಲ್ ಗಳ ಬಗ್ಗೆ ಯೋಚಿಸಿರಲಿಲ್ಲ. ಮತ್ತೆ ಯಾವಾಗಲಾದರೂ ಆಕಡೆ ಬಂದರೆ ಖಂಡಿತವಾಗಿಯೂ ಅವುಗಳನ್ನು ವೀಕ್ಷಿಸುತ್ತೇನೆ. ತುಂಬಾ ಉಪಯುಕ್ತ ವಿವರಣೆ. ಧನ್ಯವಾದಗಳು, ಮಿತ್ರ.

  5. ಲಕ್ಷ್ಮೀಕಾಂತ ಇಟ್ನಾಳ

    ವಿಠಲ್ ಕಟ್ಟಿಯವರೆ, ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ದಾಂಡೇಲಿಯಲ್ಲಿ ಟಿಂಬರ್ ಡಿಪೋ ಎಂಬ ಅರಣ್ಯ ಉತ್ಪನ್ನಗಳನ್ನು ಇಡುವ, ಹಾಗೂ ಅರಣ್ಯ ಇಲಾಖೆಯ ಕಚೇರಿಗಳು ಇರುವ ಅರಣ್ಯಭಾಗದಲ್ಲಿ ಹಾರ್ನಬಿಲ್ ಗಳ ರೂಸ್ಟ್ ಗಳು(ಪಕ್ಷಿಗಳು ಖಾಯಂ ಬಂದುಹೋಗುವ ಎತ್ತರ ಮರಗಳ ರೆಂಬೆಗಳು) ಸಾಕಷ್ಟು ಇವೆ. ಬೆಳಗಿನ ಇಲ್ಲವೆ ಸಂಜೆ ಇವುಗಳನ್ನು ಖಂಡಿತವಾಗಿಯೂ ಅಲ್ಲಿಯೂ ನೋಡಬಹುದು. ಏಕೆಂದರೆ ಪಕ್ಷಿಗಳು ಒಂದು ನಿಶ್ಷಿತ ದಾರಿಯಲ್ಲಿ ನಿತ್ಯವೂ ಸುತ್ತುವಲಯದಲ್ಲಿ ಪಯಣಿಸಿ, ಮರಳುವ ಅಭ್ಯಾಸವನ್ನು ಹೊಂದಿರುತ್ತವೆ. ವಂದನೆಗಳು

  6. Hanumanth Ananth Patil

    ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
    ಹಾರ್ನಬಿಲ್‌ಗಳ ಲೋಕ ಅದ್ಭುತ ಅನುಭವ ನೀಡಿದ ಒಂದು ಸಚಿತ್ರ ಬರಹ, ನಿಮ್ಮ ಬರಹದ ಅಬಿವ್ಯಕ್ತಿ ಕ್ರಮ ಎಷ್ಟು ದಟ್ಟವಾಗಿದೆಯೆಂದರೆ ನಿಮ್ಮ ಬರಹದ ಜೊತೆ ಜೊತೆಗೆ ನಾವೂ ಸಹ ದಾಂಡೇಲಿ ಅಭಯಾರಣ್ಯದಲ್ಲಿ ಸುತ್ತಿದ ಹಾರ್ನಬಿಲ್‌ಗಳನ್ನು ಕಣ್ಣಾರೆ ಕಂಡಂತಾಯಿತು. ನಾನೂ ಸಹ 1992–93 ನೇ ಸಾಲಿನಲ್ಲಿ ಸಿರ್ಸಿ, ಹಳಿಯಾಳ ಮತ್ತು ದಾಂಡೆಲಿ ಮಾರ್ಗವಾಗಿ ಕೆಲ ಸಲ ಪಯಣಿಸಿದ್ದೆ ಅದರೆ ಅವುಗಳ ದರ್ಶನವಾಗಿರಲಿಲ್ಲ, ದಟ್ಟ ಕಾನನಗಳಲ್ಲಿ ಜೀವಿಸುವ ಅವು ನನಗಾಗಿ ರಸ್ತೆ ಬದಿಗೆ ಬರಲು ಸಾಧ್ಯವೆ, ಒಂದೊಳ್ಳೆಯ ಅನುಬವ ನೀಡಿದ ಲೇಖನ.

  7. ಲಕ್ಷ್ಮೀಕಾಂತ ಇಟ್ನಾಳ

    ಹನುಮಂತ ಅನಂತ ಪಾಟೀಲರವರೇ ವಂದನೆಗಳು. ತಮ್ಮ ಪ್ರತಿಕ್ರಿಯೆಗೆ ಧನ್ಯವಾದ. ಹಾರ್ನಬಿಲ್ ಗಳು ತಾವು ಹೇಳಿದಂತೆ ಅವು ದಟ್ಟ ಕಾಡಿನಲ್ಲಿ ಎರಡರಿಂದ ನಾಲ್ಕೆಂಟು ಗುಂಪಲ್ಲಿ ಕಂಡು ಬರುತ್ತವೆ. ತುಂಬಾ ಪೇಶನ್ಸ್ ನಿಂದ ಅವುಗಳ ದಾರಿಗಳಲ್ಲಿ, ಎತ್ತರದ ಮರಗಳ ಸಮೀಪದಲ್ಲಿ , ಬರ್ಡ್ ವಾಚಿಂಗ್ ಟ್ರ್ಯಾಕ್ ಎಂದು ಅರಣ್ಯ ಇಲಾಖೆಯವರು ಅರಣ್ಯಗಳಲ್ಲಿ ಅಲ್ಲಲ್ಲಿ ಗುರುತು ಮಾಡಿ,, ವಾಚಿಂಗ್ ಪಾಯಿಂಟ್ ಮಾಡಿರುವರು. ಅಂತಹ ಸ್ಥಳಗಳಲ್ಲಿ ನುರಿತ ಬರ್ಡ್ ವಾಚರ್ಸ್ ಗಳೊಂದಿಗೆ ಹೋದರೆ ಅವುಗಳನ್ನು ನೋಡುವುದು ಖಂಡಿತ ಸಾಧ್ಯ. ಕೆಲವು ತಿಂಗಳು ದಾಂಡೇಲಿಯ ಟಿಂಬರ್ ಡಿಪೋ ದ ಸುತ್ತಮುತ್ತಲೂ ಕೂಡ ಕಾಣಬರುತ್ತವೆ. ತಮ್ಮ ಪ್ರತಿಕ್ರಿಯೆಗೆ ವಂದನೆಗಳು ಸರ್

  8. Anonymous

    Nice arrival on Hornbill along with concern towards the nature

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading