ಅರಕಲಗೂಡು ಜಯಕುಮಾರ್
ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಪದ್ಮಶ್ರೀ ಗಿರೀಶ್ ಫ್ರಾನ್ಸ್ ನಲ್ಲಿ ಜುಲೈ 19ರಿಂದ ಆರಂಭವಾಗಲಿರುವ ಐಪಿಸಿ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತ ತಂಡದ ಧ್ವಜ ಹಿಡಿಯುವ ಗೌರವ ನೀಡಲಾಗಿದೆ. ಫ್ರಾನ್ಸ್ ದೇಶದ ಲಿಯೋನ್ ನಲ್ಲಿ ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಆಯೋಜಿಸಿರುವ ವಿಶ್ವ ಚಾಂಪಿಯನ್ ಶಿಪ್ ಗೆ ಭಾರತದಿಂದ 10ಮಂದಿ ಕ್ರೀಡಾಪಟುಗಳನ್ನು ಕಳುಹಿಸಲಾಗಿದೆ. ಈ ಕ್ರೀಡಾಕೂಟ ಜುಲೈ 19 ರಿಂದ ಜುಲೈ 28ರ ವರೆಗೆ ನಡೆಯಲಿದೆ. ಅರ್ಹತ ಸುತ್ತಿನಲ್ಲಿ ಅವಕಾಶ ಪಡೆದ ಎ ದರ್ಜೆಯ ಕ್ರೀಡಾಪುಟುಗಳ ಪಟ್ಟಿಯಲ್ಲಿ ಪದ್ಮಶ್ರೀ ಎಚ್ ಎನ್ ಗಿರೀಶ್ ಮೊದಲ ಸ್ಥಾನದಲ್ಲಿದ್ದಾರೆ. ಪುರುಷರ ಹೈ ಜಂಪ್ ಖಿ-42 ವಿಭಾಗದಲ್ಲಿ ಗಿರೀಶ್ ವಿಶ್ವ ಚಾಂಪಿಯನ್ ಗೆ ಸೆಣಸಲಿದ್ದಾರೆ. ಲಂಡನ್ ನಲ್ಲಿ ನಡೆದ ಪ್ಯಾರಾಲಿಂಪಿಕ್ ನಲ್ಲಿ 1.74ಮೀ ಎತ್ತರ ಜಿಗಿಯುವ ಮೂಲಕ ವಿಶ್ವದ ನಂ. 2 ಸ್ಥಾನ ಪಡೆದಿದ್ದ ಗಿರೀಶ ಈಗ ವಿಶ್ವದ ನಂ.1 ಸ್ಥಾನಕ್ಕೇರುವ ಸಾಧನೆಯ ಹಂಬಲದಲ್ಲಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಫ್ರಾನ್ಸ್ ನಿಂದ ಮಾತನಾಡಿದ ಗಿರೀಶ ಉದ್ಘಾಟನಾ ಕಾರ್ಯಕ್ರಮದ ಪಥಸಂಚಲನದಲ್ಲಿ ಭಾರತ ದೇಶದ ಧ್ವಜ ಹಿಡಿದು ಮುನ್ನಡೆಸುವ ಅವಕಾಶ ನನಗೆ ಸಿಕ್ಕಿರುವುದನ್ನು ಸದಾ ಕಾಲಕ್ಕೂ ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತೇನೆ, ಇಂಥಹ ಅವಕಾಶ ಕಲ್ಪಿಸಿದ ನನ್ನ ದೇಶಕ್ಕೆ ಕೃತಜ್ಞನಾಗಿರುತ್ತೇನೆ, ಇಲ್ಲಿಯ ವಾತಾವರಣ ಬಿಸಿ ಇದೆ, ಆದರೆ ಕ್ರೀಡಾಪಟುಗಳಿಗೆ ಸೂಕ್ತವಾದ ಹವೆ ಇದೆ, ಇನ್ನೂ ಕರ್ನಾಟಕದಲ್ಲಿಯೇ ಇದ್ದೇನೆ ಎಂಬ ಭಾವನೆ ಉಂಟಾಗುತ್ತಿದೆ. ಈ ಹಿಂದೆ ಹಲವಾರು ಬಾರಿ ವಿದೇಶಗಳಲ್ಲಿ ಆಡಿದ ಪಂದ್ಯಗಳಲ್ಲಿ ಉತ್ತಮ ಸಾಧನೆ ತೋರಿದ ಅನುಭವ ಇರುವುದರಿಂದ ಇಲ್ಲಿಯೂ ವಿಶ್ವ ಚಾಂಪಿಯನ್ ಆಗುವ ಪ್ರಯತ್ನ ಮಾಡುತ್ತೇನೆ ಎಂದರು.

ಇಲ್ಲಿಗೆ ಜುಲೈ 12ರಂದೇ ಆಗಮಿಸಿದ್ದು ಉತ್ತಮ ವಾಸ್ತವ್ಯ ದಕ್ಕಿದೆ ಮತ್ತು ಅಭ್ಯಾಸಕ್ಕೂ ಒಳ್ಳೆಯ ಅವಕಾಶ ಕಲ್ಪಿಸಲಾಗಿದೆ, ಲಂಡನ್ ಒಲಿಂಪಿಕ್ಸ್ ಗೆ ಕೋಚ್ ಆಗಿದ್ದ ಸತ್ಯನಾರಾಯಣ ಇಲ್ಲಿಯೂ ನನಗೆ ಕೋಚ್ ಆಗಿ ಜೊತೆಯಲ್ಲಿದ್ದಾರೆ, ಜುಲೈ 20ರಂದು ಸಂಜೆ 4.30ಕ್ಕೆ ನನ್ನ ಪಂದ್ಯ ನಿಗದಿಯಾಗಿದೆ, ಆಗ ಭಾರತದಲ್ಲಿ ಸರಿ ಸುಮಾರು 8.30ಆಗಿರುತ್ತದೆ, ನನ್ನನ್ನು ಪ್ರೋತ್ಸಾಹಿಸಿದ ಸಮಸ್ತರು ಮತ್ತು ಕ್ರೀಡಾಪ್ರೇಮಿಗಳಿಗೆ ನಿರಾಸೆಯಾಗದಂತೆ ಸ್ಪರ್ಧೆಯಲ್ಲಿ ಗೆಲ್ಲುತ್ತೇನೆ ಎನ್ನುವ ಆತ್ಮ ವಿಶ್ವಾಸವಿದೆ, ವಿಶೇಷವಾಗಿ ನನ್ನ ತವರು ಜಿಲ್ಲೆಯ ಜನತೆ ತೋರಿದ ಗೌರವ ಮತ್ತು ಪ್ರೀತಿಗೆ ನಾನು ಅಬಾರಿಯಾಗಿರುತ್ತೇನೆ ಎಂದು ಗಿರೀಶ್ ನುಡಿದರು. ಈ ಸ್ಪರ್ಧೆಯಲ್ಲಿ 99 ರಾಷ್ಟ್ರಗಳ 1100ಅಥ್ಲೀಟ್ ಗಳು 207ಪದಕಗಳಿಗೆ ಸೆಣಸಲಿದ್ದಾರೆ. 2012ರ ಪ್ಯಾರಾಲಿಂಪಿಕ್ ನಂತರ ನಡೆಯುತ್ತಿರುವ ವಿಶ್ವ ಮಟ್ಟದ ಪ್ರಮುಖ ಕ್ರೀಡಾ ಕೂಟವಾಗಿದ್ದು, ಇಲ್ಲಿ ಗೆಲುವು ಸಾಧಿಸಿದವರು ವಿಶ್ವ ಚಾಂಪಿಯನ್ ಆಗಲಿದ್ದಾರೆ. ಲಂಡನ್ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿದವರು ಮತ್ತು ಅರ್ಹತಾ ಸುತ್ತು ತಲುಪಿದವರು ಇಲ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪಣಕ್ಕಿಡಲಿದ್ದು ಜಿದ್ದಾ ಜಿದ್ದಿಯ ಸ್ಪರ್ಧೆ ಜರುಗಲಿದೆ. ನಂತರವಷ್ಟೇ ವಿಶ್ವ ಚಾಂಪಿಯನ್ ಪಟ್ಟವನ್ನು ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಘೋಷಿಸಲಿದೆ. ಜುಲೈ 20ರಿಂದ ಆರಂಭವಾಗುವ ಕ್ರೀಡಾಕೂಟದಲ್ಲಿ ಭಾರತದಿಂದ 10ಮಂದಿಯ ತಂಡ ಪಾಲ್ಗೊಂಡಿದೆ. ಜುಲೈ 20ರಿಂದ ಆರಂಭವಾಗುವ ಕಾರ್ಯಕ್ರಮಗಳನ್ನು ಬಿಬಿಸಿ ಸ್ಪೋರ್ಟ್ಸ್ ಚಾನೆಲ್ ನಲ್ಲಿ ವೀಕ್ಷಿಸ ಬಹುದಾಗಿದೆ.






ಗಿರಿಶ್ ಸಾಧನೆ ನಮ್ಮ ಹೆಮ್ಮೆ.
ಗಿರೀಶ್ ಹಾರ್ದಿಕ ಅಭಿನಂದನೆಗಳು
ಶುಭವಾಗಲಿ
ಹಿಮಾಲಯ ಮೀರಿದ್ದೀರಿ, ಥೇಮ್ಸ್ ಅನ್ನು ಈಜಿದ್ದೀರಿ, ಈಗ ಐಫೆಲ್ ಟವರ್ ಹಾರಿ, ಶುಭವಾಗಲಿ
we are very proud to girish he is a hassan golden boy