ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಮನೆ ಅಂಕಣ- ಹೃದಯದ ಒಳಗಿನ ಬಣ್ಣ ಕಪ್ಪಾಗಿರಬಾರದೂ ಅಷ್ಟೇ… .

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

6

ನಾ ಮಾಡುವ ಪಾತ್ರಗಳು… ಹಿಡಂಬಿ… ಶೂರ್ಪನಖಿ… ಶಾಕಿಣಿ… ಢಾಕಿಣಿ… ಎನ್ನುತ್ತಾ…

ಆ ಪುಟ್ಟ ಕೊಠಡಿಯಲ್ಲಿ ಒಮ್ಮೆಲೇ ಬೆಳಕು ಪ್ರವಹಿಸಿತು… ಹರಿದು ಹರಡಿತು…

ಕೊಠಡಿಯ ಒಂದು ಮಗ್ಗುಲಿಲ್ಲದ್ದ ಕುರ್ಚಿಯ ಕಡೆಗೆ ಕೈ ತೋರಿದೆ. ಆಕೆ ಬಂದು ತುದಿ ಕುರ್ಚಿಯಲ್ಲಿ ಮುದುಡಿ ಕೂತರು…

ಸುಮ್ಮನೆ… ಮೌನ… ತಲೆ ಕೆಳಗಾಕಿ ಕೂತರು ಆಕೆ… ಹಾಗೇ ಒಮ್ಮೆ ನೋಡಿದೆ ನಾನು… ಏನು ಮಾತಾಡಬೇಕೆಂದು ನನಗೂ ಗೊತ್ತಾಗಲಿಲ್ಲ… ನಾನೂ ‘ಮೌನ’ ವಹಿಸಿದ್ದೆ… ಆದರೆ ಮನ ಲೆಕ್ಕಾಚಾರ ಹಾಕುತಿತ್ತು… ಇವಳು ನನಗೆ ಸರಿಹೊಂದುವಳ… ನಮ್ಮ ಮನೆಗೆ ಆಗುವವಳಾ… ಏನೇನೋ ಗುಣಕಾರ – ಭಾಗಾಕಾರಗಳು…

ಆಕೆಯ ಮನವೂ ಹೀಗೆ ಮಾತಾಡಿಕೊಳ್ಳುತ್ತಿರಬೇಕು ಎಂದುಕೊಂಡೆ… ಆಕೆಯ ಮನದೊಳಗೆ ಯಾವುದೇ ಲೆಕ್ಕಾಚಾರಗಳೂ ಕಂಡುಬರಲಿಲ್ಲ.

ಮೌನ… ಮೌನ… ಮೌನ… ಇಡೀ ಕೊಠಡಿಯೇ ಮೌನವಾಗಿತ್ತು….

ಎಷ್ಟೊತ್ತು ಮೌನವಾಗಿ ಕುಳಿತುಕೊಳ್ಳುವುದು…

ನಾನೇ ಮಾತು ಪ್ರಾರಂಭಿಸಿದೆ…

‘ಮಾತಾಡಿ… ಏನಾದ್ರೂ ಮಾತಾಡಿ’ ನೆಂದೆ. ಮೆಳ್ಳಗಣ್ಣಿನ ಹುಡುಗಿ ಕತ್ತನ್ನು ಮೇಲೆತ್ತಿ ಸುಮ್ಮನೆ ನಕ್ಕಳು.

ನಾನು ಕೆಣಕಿದೆ… ‘ಮೂಗಿಯಾ ನೀವು’… ಎಂದೆ. ಮತ್ತೆ ನಕ್ಕಳು… ನಾನು ಮತ್ತೆ ಕೆಣಕಿದೆ… ‘ಏನು ನೀವು ಲಾಫಿಂಗ್ ಗ್ಯಾಸ್ನೇನಾದರೂ ಕುಡುದು ಬಂದಿದ್ದೀರಾ…’ ಎಂದು ನಾನೂ ನಕ್ಕೆ… ಅವಳಿಗೆ ಅರ್ಥವಾಗಲಿಲ್ಲವೆಂದು ಕಾಣುತ್ತೆ… ಮತ್ತೆ ನಕ್ಕು ಪ್ರಶ್ನಾರ್ಥವಾಗಿ ನನ್ನತ್ತ ನೋಡಿದಳು.

‘ಏನಿಲ್ಲ ಬಿಡಿ’ ಎಂದು ನಾನು ಆಕೆ ಕೆಲಸ ಮಾಡುವ ಊರು ‘ಆದಿವಾಲ’ದ ಬಗ್ಗೆ ಕೇಳಿದೆ, ಆನಂತರ ಅವರ ಊರು ಮೈಲಿನಹಳ್ಳಿಯ ಬಗ್ಗೆ ಕೇಳಿದೆ. ಅವರು ಓದಿದ ಸ್ಕೂಲ್ ಬಗ್ಗೆ ಕೇಳಿದೆ. ಎಲ್ಲದಕ್ಕೂ ಚುಟುಕಾದ ಉತ್ತರಗಳೇ.

ಎಷ್ಟೇ ಆಗಲಿ ಶಿಕ್ಷಕರಲ್ಲವೇ… ಕೇಳಿದ ಪ್ರಶ್ನೆಗಷ್ಟೇ ಉತ್ತರ ಅಲ್ವೇ… ದುಸ್ರಾ ಮಾತಾಡೋಂಗಿಲ್ಲ…!!!

ನಾನೂ ಹಾಗೂ ಹೀಗೂ ಮಾತಿಗೆಳೆದು… ‘ನನ್ನ ಮದುವೆ ಆಗೋದಕ್ಕೆ ನಿಮಗೆ ಒಪ್ಪಿಗೆಯಾ’ ಎಂದೆ. ಏನೂ ಹೇಳಲಿಲ್ಲ… ಮೌನವೇ ಉತ್ತರ… ಮತ್ತೆ ಅದೇ ಪ್ರಶ್ನೆ ಹಾಕಿದೆ… ಆಕೆ ತಲೆ ಎತ್ತಿ ಕತ್ತನ್ನು ಮೇಲೆ ಕೆಳಗೆ ಮಾಡಿ ಒಪ್ಪಿಗೆ ಸೂಚಿಸಿದಳು.

ನನಗ್ಯಾಕೋ ಆ ಮನೆ ಇಷ್ಟವಾಗಿತ್ತು… ಬಾಯಿತುಂಬಾ ಮಾತಾಡುವ ಆಕೆಯ ತಾಯಿ… ಅವರ ಮುಗ್ಧತೆ… ಸಾಧಾರಣ ಉದ್ಯೋಗಿಯಾಗಿದ್ದ ಆಕೆಯ ತಂದೆ ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿರುವುದು… ಮಗನನ್ನು ದೊಡ್ಡ ಉದ್ಯೋಗಸ್ಥನನ್ನಾಗಿ ಮಾಡಿರುವುದು… ಎಲ್ಲಾ ಹೆಣ್ಣು ಮಕ್ಕಳು ಚೆನ್ನಾಗಿ ಓದಿ ಉದ್ಯೋಗಿಗಳಾಗಿರುವುದು… ನನ್ನಂಥ ಹಳ್ಳಿಯಿಂದ ಬಂದವರು…

ಹೈ ಫೈ ಅಲ್ಲದ ಸಾಮಾನ್ಯ ಕುಟುಂಬ… ಬಡತನದಲ್ಲೇ ಬೆಳೆದು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ ನೆಲೆ ಕಾಣುತ್ತಿರುವ… ಪುಟ್ಟದೊಂದು ಗೂಡಿನಲ್ಲಿರುವ ತುಂಬು ಕುಟುಂಬ… ನನ್ನ ಕುಟುಂಬತೆಯೇ… ನಮ್ಮದೂ ಸಹ ಏಳು ಬೀಳುಗಳ ಹಾದಿ ಸವೆಸುತ್ತಾ ನೆಲೆಗಾಗಿ ಪರದಾಡುತ್ತಾ ಇದ್ದ ಬದುಕು…

ನನ್ನ ತಂದೆಯ ಮನೆತನ ನನ್ನ ತಾಯಿಯ ಮನೆತನಗಳು ಶ್ರೀಮಂತ ಮನೆತನಗಳು…. ನನ್ನ ತಂದೆಯದು ಮೇಷ್ಟ್ರಗಿರಿ… ಅಲ್ಪಸ್ವಲ್ಪ ಜಮೀನೂ ಇತ್ತು ನಮಗೆ… ಆದರೆ ನಾವು ಅನುಭವಿಸಿದ ಕಷ್ಟಗಳು ಉಂಡ ನೋವುಗಳು ಒಂದಾ ಎರಡಾ… ಕಂಡ ಅಪಮಾನಗಳು… ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟಗಳು ಹಲವಾರು… ಶ್ರೀಮಂತರ ನಡುವೆ ಶ್ರೀಮಂತರು ಸಹಜೀವನ ನಡೆಸಿಬಿಡಬಹುದು. ಬಡವರ ನಡುವೆ ಬಡವ ಬದುಕಿ ಬಿಡಬಹುದು…. ಆದರೆ ಶ್ರೀಮಂತರ ಕುಟುಂಬಗಳ ನಡುವೆ ಅದೇ ಕುಟುಂಬಕ್ಕೆ ಸೇರಿದ ಬಡವ ಬದುಕುವುದಿದೆಯಲ್ಲ. … ಆ ಪರಿಸ್ಥಿತಿ… ಅದನ್ನು ಅನುಭವಿಸಿದವರಿಗೇ ಗೊತ್ತು… ಆ ತಿರಸ್ಕಾರ… ಆ ಅವಮಾನ… ಆ ಅಪಮಾನ… ಆ ಅಸಡ್ಡೆ… ಆ ಅಸಮಾನತೆ… ಓಹ್…

ನನ್ನದೇ ಮನೆಯ ವಾತಾವರಣವನ್ನು-ಪರಿಸ್ಥಿತಿಯನ್ನು ಆ ಮನೆಯಲ್ಲಿ ನಾನು ಕಂಡೆ-ಹಾಗಾಗಿ ಆ ಮನೆ ನನಗೆ ಇಷ್ಟವಾಯಿತು ಕಣ್ರೀ.

ಸಾಮಾಜಿಕವಾಗಿ ಮೇಲ್ಜಾತಿಯಲ್ಲಿರುವ ಬಡ ಹಾಗೂ ಅತ್ಯಂತ ಬಡ ಕುಟುಂಬಗಳು ಸಹ ಕೆಳಜಾತಿಗಳು ಅಂತ ನಾವೇನು ಕರೆಯುತ್ತೇವೆ ಅವರುಗಳು ಅನುಭವಿಸುವ ಯಾತನೆಗಳನ್ನು… ಹಸಿವನ್ನು… ನೋವುಗಳನ್ನು ಅನುಭವಿಸುತ್ತಿರುತ್ತಾರೆ. ಸಾಮಾಜಿಕವಾಗಿ ಮೇಲ್ಮಟ್ಟ ಅನ್ನುವುದು. ಮತ್ತೆ ಅದರಿಂದ ಸಿಗಬಹುದಾದ ಅಲ್ಪಪ್ರಮಾಣದ ಮನ್ನಣೆ… ಆದರಣೆ ಸ್ವಲ್ಪ ಪ್ರಮಾಣದ ಸಮಾನತೆ ಇಷ್ಟೇ…. ಸಾಮಾಜಿಕ ವರ್ಗದಲ್ಲಿ ಕೆಳಹಂತದಲ್ಲಿರುವವರಿಗೆ ಸಿಗಬಹುದಾದದ್ದು ಇಷ್ಟೇ. ಕಾಡುವ ಬಡತನಕ್ಕೆ ಜಾತಿ ಭೇದವಿಲ್ಲ.

ನನ್ನ ಕುಟುಂಬವೂ ಇಂತಹದನ್ನೆಲ್ಲ ಅನುಭವಿಸಿತ್ತು… ಅನುಭವಿಸುತ್ತಿತ್ತು… ನನ್ನದೇ ಕುಟುಂಬದಂತೆ ಕಾಣುತ್ತಿದ್ದ ಆ ಹುಡುಗಿಯ ಕುಟುಂಬ ಇದ್ದದ್ದರಿಂದ ನನಗೆ ಆ ಮನೆ ಇಷ್ಟವಾಗಿತ್ತು… ಮದುವೆಯಾದರೆ ಇಂತಹ ಮನೆಯ ಹೆಣ್ಣನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದೆ… ಆ ಮನೆಯ ಹಾಲ್‌ನಲ್ಲಿ ಕುಳಿತಾಗಲೇ ತೀರ್ಮಾನ ಮಾಡಿದ್ದೆ…

ಹರಿದ ಬಾಳು ಹಸನಾಗಲು ಹೋರಾಟವೇ ದಾರಿ…

ಸಾಧನೆಯ ಹಾದಿಯಲ್ಲಿ ಕಡು ಕೆಂಡಗಳುಂಟು

ಬಡತನದ ಬದುಕಲ್ಲಿ ಸುಂಟರಗಾಳಿಯಂತಾ ಸಂಕಟಗಳುಂಟು.

ಇಂತೆಲ್ಲಾ ಸ್ಥಿತಿಯನ್ನು ಆ ಮನೆಯೂ ಅನುಭವಿಸಿದ್ದುದು ನನಗೆ ಡಾಳಾಗಿ ಕಾಣುತ್ತಿತ್ತು. ಆ ಮನೆಯ ಹೆಣ್ಣು ಮಗಳು ಆ ಎಲ್ಲಾ ಸ್ಥಿತಿಗಳನ್ನು ಅನುಭವಿಸಿರುತ್ತಾಳೆ ಅಲ್ಲವೇ? ನಮ್ಮ ಮನೆಯ ಪರಿಸ್ಥಿತಿಯೂ ಹಾಗೆ ಇತ್ತು… ನನ್ನದೂ ಅದೇ ಸಂಕಷ್ಟಗಳಲ್ಲವೇ… ನನ್ನ ಕುಟುಂಬ ಆ ಕುಟುಂಬಕ್ಕಿಂತ ಸ್ವಲ್ಪ ಮೇಲ್ಪಟ್ಟದಲ್ಲಿತ್ತೀನೋ… ಏಕೆಂದರೆ ನನ್ನ ಕುಟುಂಬದ ಸುತ್ತಾಮುತ್ತಾ ಇದ್ದವರು ಸ್ವಲ್ಪಮಟ್ಟಿಗೆ ಶ್ರೀಮಂತರೇ… ಅವರ ಕುಟುಂಬದ ಸಂಬಂಧಿಕರು ರೈತಾಪಿ ಹಾಗೂ ಕೃಷಿ ಬದುಕಿನವರು. ಅವರ ಆರ್ಥಿಕ ಮೂಲವು ಅಷ್ಟಕಷ್ಟೆ. ಆದರೆ ನಮ್ಮದು ಸ್ಥಿತಿವಂತರ ಮನೆಯೇನಲ್ಲಾ… ಹಾಗಾಗಿ ನನಗೆ ಆ ಮನೆ… ಆ ಮನೆಯ ಹುಡುಗಿ ಇಷ್ಟವಾದಳು… ಮೇಲಾಗಿ ಆಕೆ ವಿದ್ಯಾವಂತೆ ಹಾಗೂ ಉದ್ಯೋಗಸ್ಥೆ. ನಗರದಲ್ಲಿ ಬದುಕಲು ಒಬ್ಬರ ಸಂಪಾದನೆ ಸಾಕಾಗದು… ಇದನ್ನೆಲ್ಲಾ ಆಲೋಚಿಸಿದ್ದ ನಾನು ಆಕೆಯನ್ನು ನನ್ನವಳನ್ನಾಗಿ ಮಾಡಿಕೊಳ್ಳಲು ಸಿದ್ಧನಿದ್ದೆ…

‘ಏನೂ ಮಾತಾಡೋದಿಲ್ವೆ…’ ನಾನು ಮತ್ತೇ ಮೌನ ಮುರಿದೆ. ಆಕೆ ಮೌನವಾಗಿ ಕುಳಿತಿದ್ದವಳು ನನ್ನತ್ತ ನೋಡಿ ‘ನಿಮಗೆ ನಾನು ಒಪ್ಪಿಗೆಯಾಗಿದ್ದೇನಾ’ ಕೇಳಿದಳು. ನಾನು ನೇರವಾಗಿ ಯಾವ ಎರಡು ಮಾತಿಲ್ಲದೆ ‘ಹೂಂ’ ಎಂದೆ. ಅವಳು ‘ಅಲ್ಲಾ ನೀವೂ ತುಂಬಾ ಬೆಳ್ಳಗಿದ್ದೀರಾ… ಚೆಂದವಾಗಿದ್ದೀರಾ…’ ಎಂದಳು… ನಾನು ಬಹಳ ಸೀರಿಯಸ್ಸಾಗಿ ಒಂದು ಮಾತು ಹೇಳಿದೆ.

‘ದೇಹದ ಮೇಲಿನ ಬಣ್ಣ ಕಪ್ಪಾಗಿದ್ರೂ ಪರವಾಗಿಲ್ಲಾ… ಹೃದಯದ ಒಳಗಿನ ಬಣ್ಣ ಕಪ್ಪಾಗಿರಬಾರದೂ ಅಷ್ಟೇ… ಹಾಗೆಯೇ ಅಂದ ಚಂದಗಳೂ ಸಹ’ ಎಂದೆ.

‘ಯಪ್ಪಾ…’ ಎಂದ ಅವಳು ‘ಎಂತಾ ಮಾತು… ನನಗೆ ಇಷ್ಟ ಆಯಿತು’ ಎಂದಳು… ನಾನು ಮತ್ತೆ ಕೆಣಕಿದೆ ‘ಏನು ನನ್ನ ಮಾತು ಮಾತ್ರ ಇಷ್ಟಾನಾ… ಅಥ್ವಾ ನಾನೂ ಸಹಾನಾ…’ ಎಂದು ಆ ಮೆಳ್ಳಗಣ್ಣಿಯ ಕಡೆ ತುಂಟ ನಗೆ ನಕ್ಕೆ. ಅವಳು ನಗುತ್ತಾ ‘ನಿಮ್ಮ ಮಾತು ಮತ್ತು ನೀವೂ ಎರಡೂ ಇಷ್ಟಾನೇ’ ಎಂದು ಉಲಿದಳು… ಮತ್ತೆ ಅವಳೇ ಮಾತು ಮುಂದುವರಿಸಿ ‘ನೀವು ನಾಟ್ಕ ಎಲ್ಲಾ ಮಾಡ್ತೀರಂತೆ… ನಾಟ್ಕದಲ್ಲಿ… ಏನು ಭೀಷ್ಮ… ದ್ರೋಣ ಇಂತಹ ಪಾತ್ರಗಳನ್ನು ಮಾಡುತ್ತೀರಾ’ ಎಂದಳು… ‘ಯಾಕ್ರೀ… ನಾನೇನು ಅಷ್ಟು ಮುದಕರ್ ತರ ಕಾಣ್ತೀನಾ…’ ಎಂದು ನಾನೆನ್ನಲು ‘ಅಲ್ಲಾ ನೀವು ಗಡ್ಡ ಬಿಟ್ಟಿದ್ದೀರೆಲ್ಲ… ಅದಕ್ಕೆ ಕೇಳ್ದೆ’ ಎಂದಳು. ಯಾಕೆ ನಿಮಗೆ ನಾನು ನಾಟ್ಕ ಮಾಡುವುದು ಇಷ್ಟ ಆಗಲ್ವಾ ನಾನು ಪ್ರಶ್ನಿಸಿದೆ… ಅದಕ್ಕೆ ಆಕೆ ‘ಮಾಡಿ ಮಾಡಿ ನನಗೆ ಕಲಾವಿದರು… ನಾಟ್ಕ ಅದೆಲ್ಲ ಇಷ್ಟ. ನಾವೂ ಸ್ಕೂಲಲ್ಲಿ ಸಣ್ಣ ಸಣ್ಣ ನಾಟ್ಕ… ಅದೂ ಇದೂ ಎಲ್ಲಾ ಮಾಡ್ಸಿದ್ದೊ ಸ್ಕೂಲ್ ಡೇನಲ್ಲಿ’ ಎಂದು ಮಾತು ಮುಂದುವರಿಸಿ… ‘ಮತ್ತೆ ಎಂಥಾ ಪಾತ್ರಗಳನ್ನು ಮಾಡುತ್ತೀರಾ ಎನ್ನುತ್ತಾ ‘ಕೃಷ್ಣ, ರಾಮ, ದುರ್ಯೋಧನ, ಕರ್ಣ, ರಾವಣ, ಅರ್ಜುನ, ಭೀಮಾ ಇಂಥಾ ಪಾತ್ರಗಳನ್ನು ಮಾಡುತ್ತೀರ’ ಎಂದಳು.

ಇಲ್ಲ ಇಲ್ಲ… ನಾನು ಅಂಥಾ ಪಾತ್ರಗಳನ್ನೆಲ್ಲಾ ಮಾಡಲ್ಲಾ… ನಾನು ಮಾಡುವ ಪಾತ್ರಗಳು… ‘ಹಿಡಂಬಿ… ಶೂರ್ಪನಖಿ… ಶಾಕಿಣಿ… ಢಾಕಿಣಿ’ ಎನ್ನುತ್ತಾ ಅವಳೆಡೆಗೆ ತುಂಟ ನೋಟ ಬೀರಿದೆ.

ಆ ಹುಡುಗಿಯೂ ನಕ್ಕಳು… ನಾನು ನಕ್ಕೆ… ಅವಳ ಮೆಳ್ಳಗಣ್ಣಿನಲ್ಲೂ ನಗೆಯಿತ್ತು.

ರೂಮಾಚೆಯಿಂದ ಭಾವಾಜಿಯವರ ಧ್ವನಿ ‘ಸ್ವಾಮ್ಯೋರಾ… ಮಾತಾಯಿತೋ… ಇಬ್ರೂ ಇವತ್ತೇ ಎಲ್ಲಾ ಮಾತುಗಳನ್ನು ಮುಗಿಸೋರಂಗೆ ಕಾಣ್ತೀರಾ’ ಎನ್ನುತ್ತಾ ಒಳಬಂದರು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

10 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading