ಎ ಪಿ ಮಾಲತಿ ಕಾದಂಬರಿ ‘ಹೊಳೆಬಾಗಿಲು’- ಬಿಸಿಲಿನ ರಂಗು ತುಂಬಿ ಅರಳಿದೆ ಸಂಜೆಮಲ್ಲಿಗೆಯಂತೆ…

ಉತ್ತರ ಕನ್ನಡದ ಭಟ್ಕಳದಲ್ಲಿ ಜನಿಸಿದ ಎ ಪಿ ಮಾಲತಿ ಈವರೆಗೆ ಇಪ್ಪತ್ತು ಕಾದ೦ಬರಿಗಳು ಹಾಗೂ ಎರಡು ಕಥಾಸ೦ಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಜೀವಮಾನದ ಸಾಹಿತ್ಯ ಸಾಧನೆಗೆ ರಾಜ್ಯ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ. ಸುಖದ ಹಾದಿ- ಚಿ೦ತನ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ಗ್ರಾಮೀಣ ಮಹಿಳೆಯರು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಹುಮಾನ ಸಿಕ್ಕಿದೆ.

ಕರಾವಳಿ ಲೇಖಕಿ ವಾಚಕಿಯರ ಸ೦ಘದ ಪ್ರಥಮ ಲೇಖಕಿ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ಪುತ್ತೂರು ಹನ್ನೊ೦ದನೇ ತಾಲೂಕು ಸಮ್ಮೇಳನದ ಸಮ್ಮೇಳನಾಧ್ಯಕ್ಷೆ. ೨೦೦೫ರಲ್ಲಿ. ದ.ಕ. ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಯಾಗಿದ್ದರು.

2

ಹೊಳೆ ಬದಿಯ ಬಿದಿರು ಮೆಳೆಗಳ ಆಚೆ ದೊಡ್ಡ ಹಳೆ ಮಾವಿನ ಮರ. ಹೆಚ್ಚೇನೂ ಎತ್ತರವಿಲ್ಲ. ಅದನ್ನು ಏರಿ ಕುಳಿತಿದ್ದಾರೆ ಇಬ್ಬರು ಮಕ್ಕಳು. ಇಬ್ಬರ ದೃಷ್ಟಿ ಹೊಳೆಯ ಹರಿಯುವ ನೀರಿನ ಮೇಲಿದೆ. ಸಂತೋಷ, ಆತಂಕ ಗಡಿಬಿಡಿಯಲ್ಲಿ ಎಳೆ ಮುಖ ಸಂಜೆ ಬಿಸಿಲಿನಲ್ಲಿ ಹೊಳೆಯುತ್ತಿದೆ. ಮುಗ್ಧ ಚೆಲುವು ಇಡೀ ಪ್ರಕೃತಿಯ ಸೌಂದರ್ಯವನ್ನೇ ಅವರಲ್ಲೇ ತುಂಬಿಸಿ ಇಟ್ಟಿದೆಯೋ ಎನ್ನುವಂತೆ ಸಣ್ಣಗೆ ಅರಳುವ ನಗು ಸಂಜೆ ಮಲ್ಲಿಗೆಯಂತೆ ಅರಳಿಕೊಳುತ್ತಿದೆ.

ಆ ಎರಡು ಮಕ್ಕಳೂ ಪ್ರತಿ ಶನಿವಾರ ಮಾವಿನ ಮರದಡಿ ಬರುತ್ತಾರೆ. ಶನಿವಾರವೆಂದರೆ ಇಬ್ಬರಿಗೂ ಖುಷಿ, ಮರದ ಬಳಿ ನಿಲ್ಲುತ್ತಾರೆ. ತಮ್ಮಿಂದ ಸಾಧ್ಯವಾದಷ್ಟು ಎತ್ತರಕ್ಕೆ ಕಾಲು ಚೊಟ್ಟೆ ಮಾಡುತ್ತ ಹತ್ತುತ್ತಾರೆ. ಮೆತ್ತಗೇ! ಮೆಲ್ಲ ಮೆಲ್ಲ ಅನ್ನುತ್ತ ಹತ್ತುವುದನ್ನು ಕಂಡರೆ ಮರದ ಗೆಲ್ಲುಗಳು ಇವರಿಗಾಗಿಯೇ ಬಾಗಿವೆ ಎನ್ನುವಂತಿವೆ. ಸವುಳಿ, ಗೊದ್ದ ಇದ್ದರೂ ಇರುವೆ, ಜೇಡರ ಬಲೆ ಸಿಕ್ಕರೂ ಎಂತ ಹೆದರಿಕೆನೂ ಇಲ್ಲ.

ಈ ದಿನವೂ ಬಂದಿದ್ದಾರೆ. ಮರದಡಿ ಬಿದ್ದ ಒಣ ಎಲೆ, ಕಸಕಡ್ಡಿ, ಚೂರುಪಾರು ಕೈಯ್ಯಿಂದ ಸರಿಸಿ ಮರ ಹತ್ತಿದ್ದಾರೆ ಉತ್ಸಾಹದಲ್ಲಿ. ಆ ಮಕ್ಕಳ ಎಳೆ ಮೋರೆಯಲ್ಲಿ ಸಂಜೆ ಐದರ ಬಿಸಿಲಿನ ರಂಗು ತುಂಬಿ ಅರಳಿದೆ ಸಂಜೆಮಲ್ಲಿಗೆಯಂತೆ. ‘ಮೇಲೆ ಬರ್ತಾ ಇದ್ದ್ಯಾ ನಾಣಿ?’ ಕೇಳುತ್ತಾಳೆ ಮೊದಲು ಮರ ಹತ್ತಿದ ಹುಡುಗಿ. ಅವಳಿನ್ನೂ ಹನ್ನೊಂದರ ಬಾಲೆ. ಹೆಸರು ಗೌರಿ. ಬೆಳ್ಳಗೆ ಗುಂಡು ಗುಂಡು ಶರೀರ.

‘ಬಂದೆ ಅಕ್ಕಾ, ಇನ್ನು ನನ್ನ ಕೈಲಿ ಆಗ್ತಿಲ್ಲೆ’ ಬಾಗಿದ ಕೆಳಗಿನ ಗೆಲ್ಲಿನ ಮೇಲೆ ಅಂಡು ಊರಿ ಕಾಲುಗಳನ್ನು ಕೆಳಗೆ ಇಳಿಬಿಟ್ಟು ಉಫ಼್ ಎನ್ನುತ್ತಾನೆ ಹುಡುಗ. ಎಂಟು ವರ್ಷ ಮೀರದ ಅವನೂ ಸಣ್ಣವನೇ. ಗೌರಿಯ ತದ್ರೂಪ. ಹೆಸರು ನಾರಾಯಣ. ಮನೆ ಮಂದಿಯ ಮುದ್ದಿನ ನಾಣಿ. ಚಡ್ಡಿ ಒಂದೇ ಮೈಮೇಲೆ. ‘ಒಂದು ಬೈರಾಸು ಹೊದ್ದುಕೊಂಡು ಹೋಗೋ’ ಆಯಿ ಹೇಳಿದ್ದು ಎಲ್ಲಿ ಕೇಳುತ್ತಾನೆ? ಅವಸರ ಒಂದೇ. ದೋಣಿ ಸಾಸ್ತಾನದಿಂದ ಬೇಗ ಬಂದರೆ ಅದನ್ನು ನೋಡುವುದೇ ಸಂಭ್ರಮ. ಅಲ್ಲಾ, ದೋಣಿಯಿಂದ ಇಳಿಯುವವರನ್ನು?

ಹುಡುಗಿ ಅದಕ್ಕಿಂತ ಮೇಲಿನ ಗೆಲ್ಲಿಗೆ ಆರಾಮದಿಂದ ಮೈ ವರೆಸಿಕೊಳ್ಳುವಾಗ ನಾಣಿ ಕುತ್ತಿಗೆ ಎತ್ತಿ ಕೇಳುತ್ತಾನೆ, ‘ಅಕ್ಕ ದೋಣಿ ಕಾಣ್ತಾ ಇದ್ದಾ?’

‘ಇನ್ನೂ ಇಲ್ಲೆ. ಇಂದು ನಾವು ಬೇಗ ಮನೆಯಿಂದ ಹೊರಟದ್ದು ಅಲ್ಲದಾ? ಸುಮ್ಮನೆ ಕೂತ್ಕೋ’

ಒಂಚೂರು ಬೇಗವೇ ಹೊರಟದ್ದು. ದೋಣಿ ಕಾಣ್ತಾ ಇಲ್ಲ. ಎಲ್ಲಿ ತಡ ಆಯಿತೋ. ಅಕ್ಕ ಹೇಳುವುದು ಬರಿ ಸುಳ್ಳು. ತನಗೆ ಅವಳಿಗಿಂತ ಇನ್ನೂ ಮೇಲೆ ಹತ್ತುವುದು ಸಾಧ್ಯ ಇದ್ದರೆ ಅನ್ನಿಸಿ ಮುಖ ಚಿಕ್ಕದಾಗಿ ಅಳು ಬಂದುಬಿಟ್ಟಿತು. ಕಳೆದವಾರ ಅಪ್ಪಯ್ಯ ಸಾಸ್ತಾನದಿಂದ ವಿಶ್ವದ ಭೂಪಟ ತಂದಿದ್ದ. ಏಳೆಂಟು ಪುಟಗಳ ಚೆಂದದ ಭೂಪಟ. ಅದರಲ್ಲಿ ಯಾವ ಯಾವ ಊರುಗಳಿವೆ ಗೊತ್ತಾಗುತ್ತದೆಯಂತೆ. ಅಜ್ಜಯ್ಯ ಊರುಗಳಲ್ಲ ದೇಶಗಳು ಎಂದಿದ್ದ. ಸುಶೀಲಾ ಚಿಕ್ಕಿ ನಮ್ಮ ದೇಶ ಯಾವುದೆಂದು ತೋರಿಸಿದ್ದಳು.

ಆ ದೇಶದಲ್ಲಿ ಹುಡುಕಿದರೂ ನಮ್ಮ ಹೊಳೆಬಾಗಿಲು ಮನೆ ಕಾಣಲೇ ಇಲ್ಲ. ಎಂತ ಭೂಪಟವೋ. ಬರಿ ಲೊಟ್ಟೆ. ಅಪ್ಪಯ್ಯ ಬೇರೆ ತರ್ತೇನೆ ಎಂದಿದ್ದ, ಅದರಲ್ಲಿ ಗಂಗೊಳ್ಳಿ ಹೊಳೆ, ಸೌಪರ್ಣಿಕಾ ನದಿ ಎಲ್ಲಾ ಕಾಣ್ತದಂತೆ. ಹಾಗೆ ಕಂಡರೆ ತಾನು ಇನ್ನೂ ಊಂಚು ಮರ ಏರಿ ಅಕ್ಕನಂತೆ ಹೊಳೆಯನ್ನು ದೂರ ದೂರಕ್ಕೆ ನೋಡಬಹುದು. ಬೇಗ ದೊಡ್ಡವನೂ ಆಗಬೇಕು. ಈ ಮರಕ್ಕಿಂತ ಎತ್ತರೆತ್ತರಕ್ಕೆ ಬೆಳೆಯಬೇಕು.

ಈ ಕಲ್ಪನೆಯಲ್ಲಿ ಮರದ ಎತ್ತರಕ್ಕೂ ಒಮ್ಮೆ ನೋಡಿದ. ಅವರು ಹತ್ತಿದ ಆ ಮಾವಿನಮರ ಸುಬ್ಬಪ್ಪಯ್ಯನವರ ಹೊಳೆ ದಡದಲ್ಲಿ ಕಾಲದಿಂದಲೂ ಇದೆ. ಬೇಸಿಗೆ ಕಾಲದಲ್ಲಿ ಉಪ್ಪಿನಕಾಯಿಗೆ ಯೋಗ್ಯವಾದ ಜೀರಿಗೆ ಪರಿಮಳದ ಸೊನೆ ಮಾವಿನಮಿಡಿಯ ಮರ. ವರ್ಷಕ್ಕೆ ಬೇಕಾಗುವಷ್ಟು ಉಪ್ಪಿನಕಾಯಿಗೆ ಕುಯ್ಯಿಸಿದ ನಂತರವೂ ಅದರ ಹುಳಿ ಸಿಹಿ ಮಿಶ್ರಿತ ಹಣ್ಣುಗಳು ಸಾಕು ಸಾಕೆನಿಸುವಷ್ಟು ಉದುರಿ ಬೀಳುತ್ತಿದ್ದವು. ಕುದುರುವಿನ ಆಳುಕಾಳು ಮಕ್ಕಳು ಬೆಳಿಗ್ಗೆಯೇ ದೌಡಾಯಿಸುತ್ತಾರೆ ಹಣ್ಣು ಹೆಕ್ಕಲು.

ಆ ಕಾಲ ಕಳೆದ ಮೇಲೆ ಅತ್ತ ನರ ಮನುಷ್ಯರ ಸುಳಿವಿಲ್ಲ. ಕುರುಚಲು ಕಾಡು, ಜೊಂಡು ಬಳ್ಳಿಗಳು, ಉದುರಿದ ಹಳೆ ಗೆಲ್ಲುಗಳು. ಮರದಡಿ ಹೋಗಲೇ ಹೆದರಿಕೆ. ಆದರೆ ಎಲ್ಲ ಕಾಲದಲ್ಲೂ ಆ ಮರದ ತುದಿಗೆ ಏರಿದರೆ ಸುತ್ತಲೂ ಸೌಪರ್ಣಿಕಾ ನದಿ ಗಂಗೊಳ್ಳಿಗೆ ಸೇರಿ ಅದರಿಂದಾಚೆ ಗೆರೆಯಂತೆ ಎಳೆಯಲ್ಪಟ್ಟ ಅರಬ್ಬೀ ಸಮುದ್ರ ಕಾಣಬಹುದು.

ಸಂಜೆ ಐದರ ಬಿಸಿಲಿನಲ್ಲಿ ದೂರ ಕ್ಷಿತಿಜದ ಆಚೆ ಕೆಂಪಾಗಿ ಹೊಳೆಯುವ ದುಂಡಗಿನ ಸೂರ್ಯ, ನೀರಿನ ಅಲೆಯುದ್ದಕ್ಕೂ ರಕ್ತಕೆಂಪಿನ ಗಾಢ ನೆರಳು, ಬಿಳಿಯ ಮೋಡಗಳ ಮಾಲೆಯಲ್ಲಿ ಕಪ್ಪು ಕೆಂಪಿನ ರಂಗೋಲಿ ಬರೆದಂತೆ ಹಾರುವ ಬೆಳ್ಳಕ್ಕಿ ಸಾಲುಗಳು, ವಿವಿಧ ಹಕ್ಕಿ ಪಕ್ಕಿಗಳು ರೆಕ್ಕೆ ಬಿಡಿಸು ತಮ್ಮ ಗುರಿಯತ್ತ ಹಾರುವ ಧಾವಂತ. ಅದೋ ಹೊಳೆಯಲ್ಲಿ ತೇಲಿ ಬರುವ ಹಾಯಿ ದೋಣಿಗಳು. ರಸ್ತೆಗಳಿಲ್ಲದ ಕಡೆ ಜನರನ್ನು ಅವರವರ ಹೊಳೆ ದಡಕ್ಕೆ ಮುಟ್ಟಿಸುವ ದೋಣಿಗಳು. ನೀರಿನಲ್ಲಿ ಚಪ್ ಚಪ್ ಸದ್ದಿನ ಜೊತೆಗೆ ಬೀಸುವ ತಂಗಾಳಿ. ನೋಡುವುದೇ ಖುಷಿ.

ಇದೇ ಕನಸಿನಲ್ಲಿ ಇದ್ದಾಗಲೇ ಮರದ ಕೆಳಗೆ ಚುರ್ ಚುರ್ ಸದ್ದು. ಕೆಳಗೆ ಬಾಗಿದ ನಾಣಿ ಉದ್ಘರಿಸಿದ, ‘ಅಕ್ಕಾ, ಅಲ್ನೋಡೆ ಟುಣು ಟುಣು ಓಡ್ತಾ ಇವೆ ಎರಡು ಬಿಳಿ ಮೊಲಗಳು ಕೆಳಗಿಳಿದು ಹೋಗಿ ಹಿಡಿಯಲಾ?’

ಗೌರಿ ಕಣ್ಣು ಪೂರಾ ಇವನ ಮೇಲೆ. ನಿನ್ನೆ ಮೊನ್ನೆ ಇದ್ದ ಚೋಟುದ್ದದ ಮಗು ಎಷ್ಟು ಬೇಗ ದೊಡ್ಡವನಾದ? ಅವನ ಕುತೂಹಲದ ಕಣ್ಣಿಗೆ ಕಂಡದ್ದೆಲ್ಲ ಬೇಕು. ಮೊಲಗಳು ಓಡುತ್ತಿವೆ ಹೌದು. ಅವನ್ನು ಹಿಡಿಯುವುದು ಸಾಧ್ಯವಾ? ಕೆಲ ಸಮಯದ ಹಿಂದೆ ತಾನು ಅವನೂ ಗದ್ದೆ ಹುಣಿಯಲ್ಲಿ ಒಂದು ಮೊಲವನ್ನು ಬೆಳಗಿನಿಂದ ಅಟ್ಟಾಡಿಸಿ ಹಿಡಿಯಲು ಓಡಿದ್ದೇ ಓಡಿದ್ದು. ಕಳ್ಳ ಜಾತೀದು. ಕೈಗೆ ಸಿಕ್ಕಿತು ಎನ್ನುವಾಗ ಭಲ್ಲೆಯಲ್ಲಿ ನುಗ್ಗಿ ಮಂಗಮಾಯ. ಆಯಾಸದಿಂದ ಅತ್ತದ್ದು ತಾನು, ಪುಟ್ಟ ತಮ್ಮ, ‘ಅಳಬೇಡ ಅಕ್ಕ, ಇನ್ನೊಂದು ದಿನ ನಾನೇ ಹಿಡಿದುಕೊಡ್ತೆ.’ ಹಿಡಿದು ಪಂಜರದಲ್ಲಿ ಸಾಕುವ ಉಮೇದು ತಮಗೆ.

ಅಪ್ಪಯ್ಯ, ‘ನಮ್ಮ ಸಣ್ಣ ಕಾಡಿನಲ್ಲಿ ಅವು ಸ್ವಚ್ಚಂದವಾಗಿ ಓಡಿಯಾಡ್ತಾ ಇರಲಿ. ನಮಗೂ ಖುಷಿ. ನಿಮ್ಮನ್ನು ಹೀಗೆ ಕಟ್ಟಿ ಹಾಕಲಾ?’ ಕೇಳಿದ್ದ. ಒಮ್ಮೆ ಒಂದು ಮೊಲ ಪಾರಿಜಾತ ಮರದ ಕೆಳಗೆ ಹೇಗೋ ಕೈಗೆ ಸಿಕ್ಕಿಬಿಟ್ಟಿತ್ತು. ಅದನ್ನು ಹಿಡಿದು ಮನೆ ಅಂಗಳಕ್ಕೆ ತಂದಾಗ ನಾಯಿ ಮೋತಿ ನಮ್ಮ ಮೈಮೇಲೆ ಹಾರಿ ಅದು ಕೈಯ್ಯಿಂದ ಜಾರಿ, ಬಚ್ಚಲು ಸಂದಿಗೆ ಓಡಿ ಗುಡ್ಡೆ ಬದಿಗೆ ಕಾಣದಾಗಿ ಅಮ್ಮಮ್ಮೋ! ಮೋತಿ ಮೇಲೆ ತಮಗೆ ಸಿಟ್ಟು ಬಂದಿತ್ತು. ಕೆಟ್ಟ ನಾಯಿ. ಹೊಡೆವಷ್ಟು ಸಿಟ್ಟು ಮಾಡಿದ್ದೆವಲ್ಲ. ತ್ಸೂ, ಆಗ ಅಜ್ಜಮ್ಮ ಸಮಾಧಾನದಲ್ಲಿ, ‘ಪ್ರಕೃತಿಯಲ್ಲಿ ಒಂದಕ್ಕೊಂದು ವೈರಿಗಳು. ಹಾವು ಮುಂಗುಸಿಯಂತೆ ಕಚ್ಚಾಟ. ಕೆಲ ಸಮಂಯ ಜೊತೆಗಿದ್ದರೆ ಅವು ಒಪ್ಪಕ್ಕಗಳೇ!’ ಎನ್ನಲಿಲ್ಲವೇ?

‘ಹೋಗ್ಲಿ ಬಿಡೋ, ಹೊಳೆ ಸುಮ್ಮನೆ ಹರೀತಾ ಇದೆ. ಪೇರಳೆ ಹಣ್ಣು ತಿಂತೀಯಾ?’

ದಾರಿಯಲ್ಲಿ ಬರುವಾಗಲೇ ಮುರುಗಲ ಗಿಡದ ಬದಿಗೆ ಬೆಳೆದು ನಿಂತ ಪೇರಳೆ ಗಿಡದ ಕೆಳಗೆ ಕೆಲವು ಬೆಳೆದ ಹಣ್ಣುಗಳು ಬಿದ್ದಿದ್ದವು. ಅವನ್ನು ಹೆಕ್ಕುವಾಗ, ‘ನೀನೂ ಒಂದೆರಡು ಹೆಕ್ಕಿ ಚಡ್ಡಿ ಕಿಸೆಗೆ ಹಾಕಿಕೋ ನಾಣಿ. ಮರದ ಮೇಲೆ ಕೂತು ತಿನ್ನಲಕ್ಕು’ ಎಂದಿದ್ದಳು. ನಾಣಿ ಉಡಾಫ಼ೆ ಮಾಡಿದ್ದ. ಈಗ ನೋಡಿದರೆ ಒಂದೇ ಹಣ್ಣಿದೆ ಅವಳ ಬಳಿ. 

ಉಳಿದದ್ದು ಮರದ ಕೆಳಗಿದೆ ಕಾಬಾಳೆ ಎಲೆಯಲ್ಲಿ. ತನ್ನದು ಎಂಜಲು ಹಣ್ಣು. ಭಾಗ ಮಾಡುವುದು ಹೇಗೆ? ‘ಗುಬ್ಬಿ ಎಂಜಲು ಅರ್ಧ ಮಾಡಿ ಕೊಡಲಾ?’ ಕೇಳಿದಳು. ಅವಳುಟ್ಟ ಉದ್ದದ ಪರಕಾರದ (ಉದ್ದ ಲಂಗ). ತುದಿಗೆ ಎಂಜಲು ಮಾಡದ ಭಾಗ ಇಟ್ಟು ಹಲ್ಲಿನಿಂದ ಕಚ್ಚಿ ಎರಡು ಭಾಗ ಮಾಡಿ  ದೊಡ್ಡ ತುಂಡನ್ನು ಅವನು ಮೇಲೆ ನೀಡಿದ ಕೈಗೆ ಬೀಳುವಂತೆ ಎಸೆದಳು.

ಎಸೆದುದನ್ನು ಕೆಳಗೆ  ಬೀಳದಂತೆ ಹಿಡಿಯುವ ಕಲೆಯಲ್ಲಿ ನಾಣಿ ನಿಸ್ಸೀಮ. ‘ನೀನು ಒಳ್ಳೆಯವಳು ಅಕ್ಕಾ’ ಮುಖ ಅರಳಿಸಿ ಹಣ್ಣು ತಿನ್ನುತ್ತ ಮರದ ಗೆಲ್ಲಿನಲ್ಲಿ ಇಳಿಬಿಟ್ಟ ಕಾಲುಗಳನ್ನು ಆಚೀಚೆ ತಿರುಗಿಸಿದ. ಅವನ ಎಡ ಪಾದದ ಮೇಲೆ ಇನ್ನೂ ಸುಡುಮಣ್ಣಿನ ಬೂದಿಗೆ ಬಿದ್ದು ಬೆಂದು ಕಪ್ಪಗಾದ ಮಾಸದ ಕಲೆ ನೋಡಿದರೆ ಗೌರಿಗೆ ಸಂಕಟ. ಅಯ್ಯೋ, ಗೆಣಸು ಬೆಂದು ಹೋದಂತೆ ಹೇಗೆ ಬೆಂದು ಬಿಟ್ಟಿತ್ತು ಆ ಪುಟ್ಟ ಪಾದ? ಈಗ್ಗೆ ಎಷ್ಟೋ ಸಮಯದ ಹಿಂದೆ, ವಾರ ದಿನದ ಲೆಕ್ಕ ತಿಳಿಯದು.

ಪ್ರತಿದಿನ ಅಜ್ಜಯ್ಯ ಮನಸ್ಸಿಗೆ ತಾಕುವಂತೆ ರಾಮಾಯಣದ ಲವಕುಶರ ಕಥೆ ಹೇಳುತ್ತಿದ್ದರು. ಅದರ ಪ್ರಭಾವ. ನಾಣಿಗೂ ಬಿಲ್ಲುಬಾಣ ಬಿಡುವ ಉಮೇದು. ಸರಿ, ಕೆಲಸದ ಲಿಂಗಪ್ಪ ಬಿದಿರಿನ ಬಿಲ್ಲುಬಾಣ ಮಾಡಿಕೊಟ್ಟದ್ದೇ ಬಾಳೆಸಸಿ, ದಾಸವಾಳದ ಗಿಡ, ಮರ, ಬಾಗಿಲು ಗೋಡೆ ಕೇಳಬೇಕೇ? ವೀರಾವೇಶದಲ್ಲಿ ಬಾಣ ಬಿಟ್ಟದ್ದೇ ಬಿಟ್ಟದ್ದು.

| ಇನ್ನು ನಾಳೆಗೆ |

‍ಲೇಖಕರು Admin

July 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: