ಹಾಡ್ಲಹಳ್ಳಿ ನಾಗರಾಜ್ ಕಥೆ ‘ಕುಂಭದ್ರೋಣ’

ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಮುಖಾಮುಖಿಯಾಗುವ ಗೋಹತ್ಯೆ, ಗೋ ಸಾಕಾಣಿಕೆಯ ಸಂಕಷ್ಟದ ವಸ್ತುವನ್ನುಳ್ಳ ಕಥೆ…
ಗೋಹತ್ಯೆ ನಿಷೇಧ ಯಾಕೆ ರೈತರಿಗೆ ಪೂರಕವಲ್ಲ ಎಂಬುದಕ್ಕೆ ಈ ಕಥೆ ಒಂದು ಸಶಕ್ತ ನಿದರ್ಶನ…

ಹಾಡ್ಲಹಳ್ಳಿ ನಾಗರಾಜ್

ಅವೆಲ್ಲಿದ್ದವೋ ದೈತ್ಯ ಮೋಡಗಳು ಒಂದೆಡೆ ದಟ್ಟೈಸಿ ಆಕಾಶವೇ ಕಳಚಿ ಬೀಳುತ್ತದೇನೋ ಎಂಬಂತೆ ಭಯ ಮೂಡಿಸಿದವು. ಸತತ ಏಳೆಂಟು ಗಂಟೆ ಎಡೆಬಿಡದೆ ಸುರಿದ ಮಳೆ ಹೊಲದ ಕಡಗುಗಳೆಲ್ಲಾ ತುಂಬಿ ಹೊಲದ ಮೇಲೆ ಹೊಳ್ಳುವಂತೆ ಮಾಡಿತ್ತು.

‘ಏನೋ ಕೇಡಿಗೇ ಹಿಂಗೆ ಹುಯ್ತು ಐತೆ ಈ ಮಳೆ’. ಬಾಗಿಲಲ್ಲಿ ಇಣುಕಿ ನೋಡಿದ ನನ್ನ ಹೆಂಡತಿ ಗೌರಮ್ಮ ಏನೋ ಮುನ್ಸೂಚನೆ ಸಿಕ್ಕವಳಂತೆ ಹೇಳಿದ್ದಳು.

ದಿನ ನಿತ್ಯದ ಕೋಳಿ ಜಗಳ ನಾಯಿ ಜಗಳಕ್ಕೆ ಬೇಸತ್ತಿದ್ದ ನಾವು ಜನತಾ ಮನೆ ಮಂಜೂರು ಮಾಡಿಸಿಕೊಂಡು ಊರೊಳಗಿನ ಹಳೆಯ ಮುರುಕು ಮನೆಯನ್ನು ಬಿಟ್ಟು, ಇಲ್ಲಿ ಹೊಲದೊಳಗೆ ಸಣ್ಣ ಮನೆ ಮಾಡಿಕೊಂಡದ್ದು ಒಳ್ಳೆಯದೇ ಆಗಿತ್ತು. ಊರೊಳಗಿದ್ದಂತೆ ಯಾವ ನಿರ್ಬಂಧವೂ ಇರಲಿಲ್ಲ. ಯಾರದೂ ಅಡೆತಡೆಯಿಲ್ಲ. ನಾಟಿಕೋಳಿ ಸಾಕಣೆಯಿಂದಲೇ ಮನೆಯ ಸಂತೆ ಖರ್ಚು ಕಳೆಯುತ್ತದೆ. ಜತೆಗೆ ಮನೆಗೆ ಹೊಂದಿಕೊಂಡಂತೆ ಹಿಂಬದಿಯಲ್ಲಿ ಗರಿಯ ಚಾಟು ಎಳೆದುಕೊಂಡು ಸಾಕಿದ ಮೂರು ನಾಟಿ ಹಸುಗಳು ಐದಾರು ಲೀಟರ್ ಹಾಲು ಕರೆಯುವುದರ ಜತೆಗೆ ಆರಂಭದ ಕೆಲಸಕ್ಕೂ ನೆರವಾಗುತ್ತದೆ. ಸಂಸಾರ ನಡೆಯುವುದಕ್ಕೇನೂ ತೊಂದರೆಯಿಲ್ಲ.

ಹಿರಿಯ ಮಗ ಚಂದ್ರೇಗೌಡ ಹೈಸ್ಕೂಲ್ ಓದು ಮುಗಿದ ನಂತರ ಈ ಐದಾರು ವರ್ಷಗಳಿಂದ ನಮ್ಮ ನೆರವಿಗೆ ನಿಂತಿದ್ದಾನೆ. ಕಿರಿಯವ ರಘು ಪಿ.ಯು.ಸಿ ಓದಲು ಹಾಸನಕ್ಕೆ ಹೋದವನು ಕಾಲೇಜು ಕೈ ಬಿಟ್ಟು ಪ್ರಿಂಟಿಂಗ್ ಪ್ರೆಸ್‍ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಜತೆಗೆ ಭಜರಂಗದಳ ಅದೂ ಇದು ಅಂತಾ ಓಡಾಡಿಕೊಂಡಿದ್ದಾನೆ. ಮನೆಯಿಂದಲೇ ಓಡಾಡುವ ಅವನು ಬರುವ ತಿಂಗಳ ಸಂಬಳವನ್ನು ಅಮ್ಮನ ಕೈಗೆ ಕೊಡುತ್ತಾನೆ. ನಂತರ ಬಸ್ ಛಾರ್ಜ್‍ಗೆ ಅದಕ್ಕೆ ಇದಕ್ಕೆ ಅಂತಾ ಅದರ ಪಾಲನ್ನು ತಾನೇ ವಾಪಸ್ ಪಡೆದುಕೊಳ್ಳುವುದು ಬೇರೆ ವಿಚಾರ.

‘ಮಕ್ಕಳು ವಯಸ್ಸಿಗೆ ಬಂದರು ಇನ್ನು ಅವರ ಮದುವೆ ಮುಂಜಿ ಎಲ್ಲಾ ಮಾಡಬೇಕು. ಈಗಿನ ವರಮಾನ ಎಲ್ಲಿ ಸಾಲುತ್ತೆ?. ಹೊಟ್ಟೆ ಬಟ್ಟೆಗೆ ನೇರ ಅಷ್ಟೇ’ ಒಂದು ದಿನ ಹೆಂಡತಿ ಹೇಳಿದಾಗ ಯಾವುದೋ ಒಳ್ಳೆ ವಿಚಾರಕ್ಕೆ ಪೀಠಿಕೆ ಹಾಕುತ್ತಿದ್ದಾಳೆ ಎನ್ನಿಸಿತು. ಆಕೆ ಬುದ್ದಿವಂತೆ ವ್ಯವಹಾರ ಜ್ಞಾನವಿದೆ.

ಆಗಲೇ ಎಲ್ಲವನ್ನೂ ತಿಳಿದುಕೊಂಡು ಯೋಜನೆ ಸಿದ್ದಪಡಿಸಿಯೇ ಇದ್ದಳು. ಒಂದು ತಿಂಗಳ ನಂತರ ಸತತ ಓಡಾಡಿದ ನಂತರ ಎರಡು ಹಸು ಹಾಗೂ ಒಂದು ಷೆಡ್ಡಿಗೆ ಅಂತಾ ಬ್ಯಾಂಕಿನಲ್ಲಿ ಒಂದು ಲಕ್ಷ ಸಾಲ ಮಂಜೂರಾಗಿತ್ತು.

ಕೊಂಡಿದ್ದು ಸಿಮೆಂಟ್ ಇಟ್ಟಿಗೆ, ಶೀಟು ಹಾಗೂ ಸಿಮೆಂಟ್ ಅಷ್ಟೆ, ಮನೆಯವರೆಲ್ಲಾ ಸೇರಿಕೊಂಡು ಒಬ್ಬ ಗಾರೆಯವನನ್ನು ಕಟ್ಟಿಕೊಂಡು ಐದು ದನ ಕಟ್ಟುವಂತಾ ಸುಮಾರಾದ ಷೆಡ್ಡನ್ನು ನಿರ್ಮಾಣ ಮಾಡಿದ್ದು ಆಯಿತು.

ನಂತರದಲ್ಲಿ ಕಾಲಿಟ್ಟಿದ್ದೇ ಈ ಅದೃಷ್ಟ ಲಕ್ಷ್ಮೀ ಗೌರಿ! ಸಾಧು ಸ್ವಭಾವದ ಹಸು. ಕರಾವಿನ ಶುರುವಿನಲ್ಲಿ ಬರೊಬ್ಬರಿ ಹತ್ತು ಲೀಟರ್ ಹೊತ್ತಿಗೆ ಕರೆಯುತ್ತದೆ. ಯಾರು ಬೇಕಾದರೂ ಕೆಚ್ಚಲಿಗೆ ಕೈ ಹಾಕಬಹುದು. ಹೊಟ್ಟೆ ತುಂಬ ಮೇವು ಬಿದ್ದರೆ ಆಯಿತು.

ಆದಷ್ಟು ಬೇಗ ಇದೊಂದು ಸಾಲ ತೀರಿಸಿ ಬಿಡಬೇಕು ನಂತರ ಚಂದ್ರೇಗೌಡನ ಮದುವೆ. ಹೆಂಡತಿಯ ಮಾತು ಮನೆಯವರಿಗೆಲ್ಲಾ ಖುಷಿ ಕೊಟ್ಟಿತು.

ಹಗಲಿರುಳು ಎನ್ನದೆ ಹಸುಗಳನ್ನು ನಿಗಾ ಮಾಡಲು ಚಂದ್ರೇಗೌಡ, ಎಲ್ಲದರಲ್ಲೂ ಹಿಡಿತ ಮಾಡುತ್ತಾ ವ್ಯವಹಾರ ತೂಗಿಸಲು ನನ್ನ ಹೆಂಡತಿ ಇರುವಾಗ ಸಾಲ ತೀರಿಸಲು ಯಾವ ಕಷ್ಟ? ಒಂದು ವರ್ಷದ ಕರಾವಿನಲ್ಲೇ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಸಾಲ ತೀರಿದೆ. ಗೌರಿ ಈಗ ಮತ್ತೆ ಎಂಟು ತಿಂಗಳ ತುಂಬು ಗರ್ಭಿಣಿ, ಮುಂದೆಯೂ ಸಂಸಾರ ನಡೆಸುವಲ್ಲಿ ನಮ್ಮ ಕೈ ಹಿಡಿದಾಳು, ಇನ್ನೇನು ನಮ್ಮ ಬದುಕು ಒಂದು ಹದಕ್ಕೆ ಬಂದಂತೆಯೇ, ಈ ಆಲೋಚನೆಯಿಂದಲೇ ನನ್ನ ಮನಸ್ಸು ಮುದಗೊಳ್ಳತೊಡಗಿತ್ತು.

* * *

ಹಿಂದಿನ ದಿನದ ದೈತ್ಯ ಮಳೆಯಿಂದಾಗಿ ಹೊರಗೆ ಕಾಲಿಡುವಂತೆಯೇ ಇಲ್ಲ. ಹೊಲದೊಳಗೆ ಕಾಲಿಟ್ಟರೆ ಹೂಣಿಕೊಳ್ಳುತ್ತದೆ. ಬದುಗಳೊ ಜಾರುಗಪ್ಪೆ! ಒಂದಿನ ಪೂರ್ತಿ ಬಿಸಿಲು ಕಾಯಬೇಕು, ದನ ಈಚೆಗೆ ಹೊರಡಿಸಬೇಕಾದರೆ ಎಂದು ಕೊಳ್ಳುತ್ತಾ ದನಗಳಿಗೆ ಕೊಟ್ಟಿಗೆಯ ಒಳಗೇ ಒಣ ಹುಲ್ಲು ಹಾಕಿ ಬಂದ ಚಂದ್ರೇಗೌಡ.

ದೈನಂದಿನ ಚಟುವಟಿಕೆಯಲ್ಲಿ ಏರುಪೇರಾಗಿತ್ತು. ಮೋಡದ ತೆರೆ ಸರಿದು ಮಧ್ಯಾಹ್ನದ ನಂತರ ಚೆನ್ನಾಗಿ ಬಿಸಿಲೊಡೆಯಿತು. ದನಗಳು ಕೊಟ್ಟಿಯೊಳಗೇ ಇರುವುದರಿಂದ ಚಡಪಡಿಕೆ, ಚಂದ್ರ ಹಸುಗಳನ್ನು ಒಂದ್‍ಗಳಿಗೆ ಕಾಲಾಡಿಸಿಕೊಂಡು ಬರೋಣ ಎನ್ನುತ್ತಾ ಗೌರಮ್ಮ ಕೊಟ್ಟಿಗೆಯ ಕಡೆ ಕಾಲು ಹಾಕಿದಳು. ಬೆಳಿಗ್ಗೆಯಿಂದ ಏನೋ ತಪ್ಪಿ ಹೋದಂತೆ ಚಡಪಡಿಸುತ್ತಿದ್ದ ಚಂದ್ರೇಗೌಡ ತಾಯಿಯನ್ನು ಹಿಂಬಾಲಿಸಿದ.

ಕೊಟ್ಟಿಗೆಯಿಂದ ಹೊರ ಬಿಟ್ಟಿದ್ದೆ ತಡ, ಗೌರಿ ತಾನೇ ಮುಂದಾಗಿ ಮೂಗುದಾರ ಹಗ್ಗ ಜಗ್ಗುತ್ತ ನಡೆಯತೊಡಗಿತು. ಕೆಚ್ಚಲು ತುಂಬಿ ಬಂದದ್ದರಿಂದ ಗೌರಿ ಕಾಲುಗಳನ್ನು ಅಗಲಿಸಿ ಹಾಕುತ್ತಾ ಅತ್ತಿತ್ತಾ ದೇಹ ತೊನೆಯತ್ತ ನಡೆಯುತ್ತಿತ್ತು. ಕಿವಿಯಲ್ಲಿದ್ದ ಇನ್ಸೂರೆನ್ಸ್ ಓಲೆ ಬಿಸಿಲಿನ ಝಳಕ್ಕೆ ಹೊಳೆದಂತೆ ಅನಿಸಿತು. ನಾನು ಆ ದಿವ್ಯ ದೃಶ್ಯವನ್ನು ಮನೆಯೊಳಗಿನಿಂದಲೇ ಕಣ್ತುಂಬಿಕೊಂಡೆ. ಅವರು ಹೋಗಿ ಅರ್ಧ ಗಂಟೆಯೂ ಆಗಿರಲಿಲ್ಲ. ನಾನು ಮನೆಯ ಪಕ್ಕ ಕುಳಿತು ಕುಂಟೆಗೆ ಕೀಲು ಹೊಡೆದು ಸರಿ ಮಾಡುತ್ತಿದ್ದೆ. ಚಂದ್ರೇಗೌಡ ಅವಸರ ಅವಸರವಾಗಿ ಮನೆಯ ಕಡೆ ಓಡಿ ಬರುತ್ತಿದ್ದ. ಮುಖದಲ್ಲಿ ಗಾಬರಿ ತುಂಬಿತ್ತು.

ಗೌರಿ ಬಿದ್ದು ಹೋಗಿದೆ ಏಳ್ತಾ ಇಲ್ಲ. ಬೇಗ ಬನ್ನಿ ಎಂದ. ನನಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆನಿಸಿತು. ಯಾಕೆ? ಏನಾಯ್ತು? ಅವನ ಹಿಂದೆಯೇ ಓಡುತ್ತಾ ಕೇಳಿದೆ. ಸುಮ್ನೆ ಮೆಯ್ತಾ ಹೋಗ್ತಾ ಇದ್ದಿದ್ದು ಹಿಂದಲ ಕಾಲು ಜಾರಿ ಕಡಗಿನೊಳಕ್ಕೆ ಕುಕ್ಕರಿಸಿಕೊಂಡು ಬಿಡ್ತು. ಅಲ್ಲಿಂದ ಏಳ್ತಲೇ ಇಲ್ಲ. ಚಂದ್ರೇಗೌಡನ ಮಾತಿನಲ್ಲಿ ಅಳು ಬೆರೆತಿತ್ತು.

ಆಗಲೇ ಅಕ್ಕಪಕ್ಕದ ಹೊಲದವರು ಮೂರ್ನಾಲ್ಕು ಜನ ಜಮಾಯಿಸಿ ಹಸುವನ್ನು ಅತ್ತಿತ್ತ ಸರಿಸಿ ಕಡಗಿನಿಂದ ಮೇಲೆ ಏಳಿಸಿ ತರಲು ಯತ್ನಿಸುತ್ತಿದ್ದರು. ಗೌರಮ್ಮ ಅಳುತ್ತ ನಿಂತಿದ್ದಳು. ಅಷ್ಟು ಜನ ಶ್ರಮ ಪಟ್ಟು ಎತ್ತಲು ಪ್ರಯತ್ನಿಸಿದ್ದು ಏನೂ ಫಲಕಾರಿಯಾಗುವಂತೆ ತೋರಲಿಲ್ಲ. ಅರ್ಧ ಗಂಟೆಯ ಹೋರಾಟದ ನಂತರ ಎಲ್ಲರೂ ಕೈ ಚೆಲ್ಲಿ ನಿಂತು ಬಿಟ್ಟರು.

‘ಈ ಸಿಂದಿ ದನಗಳದೆಲ್ಲಾ ಇಷ್ಟೆ. ನಾಟಿ ದನಗಳ ಹಂಗಲ್ಲ ಇಷ್ಟ್ ಹೊತ್ತು ಹೋರಾಡಿದ್ರೂ ಏಳ್ಲಿಲ್ವಲ್ಲ. ಇದ್ರ ಸೊಂಟವೇ ಹೋಗಿರಬಹುದು.’ ರಾಜಪ್ಪಣ್ಣ ಹೇಳಿದಾಗ ನನಗೆ ದಿಕ್ಕೆ ತೋಚದಂತಾಗಿತ್ತು.

ಇನ್ನೂ ನಾವೇನೂ ಮಾಡಕಾಗದಿಲ್ಲ. ಸೊಂಟ ಹೋಗಿಲ್ದೆ ಇದ್ರೆ ಅದಾಗೇ ಮನಸ್ಸು ಮಾಡಿ ಏಳ್ಬೇಕು ಅಷ್ಟೇ ಎನ್ನುತ್ತಾ ನಿಂಗಪ್ಪ ಬೀಡಿ ಹಚ್ಚಿದ.

ಸಿಂದಿ ದನಗಳ ದುರಂತದ ಕುರಿತು ಹಿಂದಿನ ಅನುಭವಗಳ ಬಗ್ಗೆ ಮೆಲುಕು ಹಾಕುತ್ತಾ ಎಲ್ಲರೂ ಸುಧಾರಿಸಿಕೊಳ್ಳುತ್ತಿದ್ದರು. ಗೌರಿಯೂ ಸುಧಾರಿಸಿ ಕೊಂಡಂತೆ ತೋರಿತು. ದೇಹವನ್ನು ಹಿಂದೆ ಮುಂದೆ ತೂಗಿ ಏಳುವ ಪ್ರಯತ್ನ ಮಾದುತ್ತಿದ್ದಂತಿತ್ತು.

ಏಳಕ್ಕೆ ಮಾಡ್ತಾ ಐತೆ ಬನ್ನಿ ಬನ್ನಿ ಎನ್ನುತ್ತಾ ರಾಜಪ್ಪಣ್ಣ ನೆಗೆದು ಹೋಗಿ ಬಾಲದ ಗೆಡ್ಡೆ ಹಿಡಿದುಕೊಂಡರು. ಮಿಕ್ಕವರು ಹಸುವಿನ ಸುತ್ತ ಸೇರಿ ಬಲವೆಲ್ಲಾ ಕೊಟ್ಟು ಎತ್ತಿದೆವು. ಕ್ಷಣ ಮಾತ್ರದಲ್ಲಿ ಮಿಂಚಿನ ಸಂಚಾರವಾದಂತಾಯಿತು. ಗೌರಿ ಎದ್ದು ನಿಂತು ನಿಟ್ಟುಸಿರು ಬಿಟ್ಟಿತು.

‘ಹಂಗೆ ಹಿಡ್ಕಂಡಿರಿ. ಮಲಗಕೆ ಬಿಡ್ಬೇಡ ನಿಂತಗಂಡು ಸುಧಾರಿಸಿಕೊಳ್ಳಲಿ ಮತ್ತೆ ಸಡನ್ನಾಗಿ ಮಲಗಿದ್ರೆ ಏಳದಿಲ್ಲ’ ನಿಂಗಪ್ಪನ ನಿರ್ದೇಶನದಂತೆ ಒಂದೈದು ನಿಮಿಷ ಹಿಡಿದು ನಿಲ್ಲಿಸಿದೆವು. ನಿಧಾನಕ್ಕೆ ಹೆಜ್ಜೆ ತೆಗೆಯುತ್ತಾ ಕಡಗಿನಿಂದ ಮೇಲೆ ಬಂದ ಹಸು ಮನೆಯ ದಿಕ್ಕಿಗೆ ತಿರುಗಿ ಬಿರಬಿರನೆ ಹೆಜ್ಜೆ ಹಾಕತೊಡಗಿತು.

ದೇವ್ರು ದೊಡ್ಡವನು ಎನ್ನುತ್ತ ರಾಜಪ್ಪಣ್ಣ ಮೂಡಣ ದಿಕ್ಕಿಗೆ ಕೈ ಮುಗಿದರು. ಕೈತಪ್ಪಿ ಹೋದ ಯಾವುದೋ ಅಮೂಲ್ಯ ವಸ್ತು ಮರಳಿ ದೊರೆತಂತೆ ಮನಸ್ಸು ನಿರಾಳವಾಯಿತು. ಗೌರಿಯೂ ಅಷ್ಟೇ ನವ ಚೈತನ್ಯವನ್ನು ಪಡೆದುಕೊಂಡಂತೆ ಲಗುಬಗೆಯಿಂದ ಹೆಜ್ಜೆ ಹಾಕುತ್ತ ಬಂದು ಕೊಟ್ಟಿಗೆ ಪ್ರವೇಶಿಸಿ ಗೊಂತಿನಲ್ಲಿದ್ದ ಒಣಹುಲ್ಲನ್ನು ಅವಸರವಾಗಿ ತಿನ್ನತೊಡಗಿತು. ಹಿಂಬಾಲಿಸಿ ಬಂದ ಗೌರಮ್ಮ ಕುಡಿಯಲು ನೀರಿಟ್ಟಾಗ ಒಂದು ಬಕೆಟ್ ಪೂರ್ತಿ ಕುಡಿಯಿತು. ಸುಧಾರಿಸಿಕೊಂಡಂತೆ ನಿಡಿದಾದ ಉಸಿರನ್ನು ಹೊರಹಾಕಿತು. ಕಂಟಕವೊಂದು ಕಳೆಯಿತು ಎಂದುಕೊಂಡು ನಾವೂ ನಿರಾಳವಾದೆವು.

ರಾತ್ರಿ ನೆಮ್ಮದಿಯ ನಿದ್ರೆಯಲ್ಲಿ ಕಳೆದ ನಮಗೆ ಬೆಳಗಾದದ್ದೇ ತಿಳಿಯಲಿಲ್ಲ. ದೊಡ್ಡ ತೊಂದರೆಯಿಂದ ಪಾರಾದೆವು ಎಂದು ಕೊಂಡಿದ್ದ ನಮಗೆ ಕಷ್ಟವೆಂಬ ಭೂತ ಬೆನ್ನ ಹಿಂದೆಯೇ ಇದೆ ಎಂಬುದು ತಿಳಿಯಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ.

ಚಂದ್ರೇಗೌಡ ಎದ್ದವನೇ ಕೊಟ್ಟಿಗೆಯ ಕಡೆ ಹೆಜ್ಜೆ ಹಾಕಿದ. ನಾನು ಹಾಗೂ ಗೌರಮ್ಮ ಕುತೂಹಲದಿಂದ ಅವನನ್ನು ಹಿಂಬಾಲಿಸಿದೆವು. ನಾಲ್ಕು ಹಸುಗಳು ಮಾಮೂಲಿನಂತೆ ಎದ್ದು ನಿಂತು ಮೆಲುಕು ಹಾಕುತ್ತಿದ್ದೆವು. ಗೌರಿ ಮಾತ್ರ ಮಲಗಿಯೇ ಇತ್ತು. ನಾವು ಅದರ ಬಳಿ ಹೋದರೂ ಏಳುವ ಸೂಚನೆಯೇನೂ ಕಾಣಲಿಲ್ಲ. ಚಂದ್ರೇಗೌಡ ಓಡಿ ಹೋಗಿ ಕಲಗಚ್ಚು ತಂದು ಅದರ ಮುಂದಿಟ್ಟ. ಆಗಲೂ ಏಳುವ ಸೂಚನೆ ಕಾಣಲಿಲ್ಲ. ಬದಲಿಗೆ ಹಾಗೇ ಮಲಗಿಕೊಂಡೇ ಬಕೆಟಿನೊಳಗೆ ದುಂಡು ಹಾಕಿ ಕಲಗಚ್ಚು ಹೀರತೊಡಗಿತು.

ನನಗೆ ಆತಂಕ ಕಾಡತೊಡಗಿತು. ಮೂವರೂ ಸೇರಿ ಅದನ್ನು ಏಳಿಸಲು ಪ್ರಯತ್ನಿಸಿದೆವು. ಫಲಕಾರಿಯಾಗಲಿಲ್ಲ. ಈಗ ನಿಜಕ್ಕೂ ನಾವು ತೊಂದರೆಯಲ್ಲಿ ಸಿಲುಕಿದ್ದೇವೆ ಎಂಬ ಅರಿವಾಗತೊಡಗಿತು. ಗೌರಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಳು. ನನಗೆ ಏನು ಮಾಡಬೇಕೆಂದೇ ತೋಚದಾಯಿತು. ಏನು ಮಾಡಬೇಕೆಂದು ತಿಳಿಯದೇ ಅತ್ತಿತ್ತ ಓಡಾಡುತ್ತಿದ್ದ ಚಂದ್ರ ಏನೋ ಹೊಳೆದವನಂತೆ ಊರಿನ ಕಡೆ ಓಡುತ್ತಾ ಹೋದ. ಸ್ವಲ್ಪ ಹೊತ್ತಿನಲ್ಲೆ ನಿಂಗಪ್ಪ ಹಾಗೂ ರಾಜಪ್ಪಣ್ಣ ಚಂದ್ರನನ್ನು ಹಿಂಬಾಲಿಸುತ್ತಾ ಅವಸರವಾಗಿ ಕೊಟ್ಟಿಗೆಯ ಕಡೆ ಬಂದು ಹಸುವನ್ನು ಪರಿಶೀಲಿಸಿ ಮುಟ್ಟಿ ತಟ್ಟಿ ನೋಡಿದರು. ನಿಟ್ಟುಸಿರು ಬಿಟ್ಟು ಅವರು ಹಿಂದೆ ಸರಿದು ಗೋಡೆಗೊರಗಿ ನಿಂತಾಗಲೇ ನಮಗೆಲ್ಲಾ ಪರಿಸ್ಥಿತಿ ಅರಿವಾಗಿಹೋಯಿತು. ಮಾತಿಲ್ಲದೇ ಮನೆಯ ಕಡೆ ಹೆಜ್ಜೆ ಹಾಕಿದೆವು. ಗೌರಮ್ಮ ಅಕ್ಷರಶಃ ಅಳುತ್ತಿದ್ದಳು.

ಅಲ್ಲಿ ಕೊಟ್ಟಿಗೆ ಹತ್ರ ಸೇರ್ಕಂಡು ಎಲ್ಲಾ ಏನ್ಮಾಡ್ತಾ ಇದೀರಿ, ಆಗ್ಲೆ ಹತ್ ಗಂಟೆ ಆಯ್ತು. ಹೊಟ್ಟೆ ಕಡೆ ಏನಾರೂ ಮಾಡಿಕೊಡ್ಬೇಕು ಅಂತಾ ಗೊತ್ತಾಗದಿಲ್ವ ಎನ್ನುತ್ತಾ ಮನೆಯಿಂದ ಹೊರಬಂದ ರಘು ತಾಯಿಯ ಕಡೆ ತಿರುಗಿ ರೇಗತೊಡಗಿದ. ಮನೆಗೆ ಆಧಾರವಾಗಿದ್ದ ಗೌರಿ ನೆಲ ಹಿಡಿಯತಲ್ಲ ಎಂದು ನಾವೆಲ್ಲಾ ಕುಸಿದು ಹೋಗುತ್ತಿದ್ದರೆ ಅದರ ಕಾವು ಅವನಿಗೆ ತಟ್ಟಿದಂತೆ ತೋರಲಿಲ್ಲ. ಅಷ್ಟರಲ್ಲಿ ಹೊರಗೆ ನಿಂತ ಇಬ್ಬರು ಹುಡುಗರು ಹುಂ ಬಾ ಬಾ ರಘು ಲೇಟಾಗುತ್ತೆ ಇಲ್ಲಿ ರೊಟ್ಟಿಗೆ ಕಾದರೆ ಅಷ್ಟೇ! ಹತ್ತುವರೆಗೆ ಭಜರಂಗದಳದ ಮೀಟಿಂಗ್ ಬೇರೆ ಇದೆ ಎಂದು ಅವಸರಿಸುತ್ತದ್ದರು.

ಮನೆಯಲ್ಲಿ ಸೂತಕದ ಛಾಯೆ! ಯಾರಿಗೂ ಏನೂ ತಿನ್ನಬೇಕೆನಿಸಲಿಲ್ಲ. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಕುಳಿತು ಕೊಂಡೆವು. ಹೊತ್ತು ತನ್ನ ಪಾಡಿಗೆ ತಾನು ಏರುತ್ತಿತ್ತು. ಚಂದ್ರೇಗೌಡ ಉಳಿದ ನಾಲ್ಕು ಹಸುಗಳನ್ನು ಹೊರಗೆ ಕಟ್ಟಿ ಹುಲ್ಲು ಹಾಕಿ ಬಂದ ಚಡಪಡಿಸುತ್ತಾ ಅತ್ತಿತ್ತ ತಿರುಗುತ್ತಿದ್ದವನು ಮೊಬೈಲ್ ತೆಗೆದುಕೊಂಡು ಯಾರಿಗೋ ಫೋನ್ ಮಾಡಿದ.

ಮಧ್ಯಾಹ್ನ ಎರಡು ಗಂಟೆಯ ವೇಳೆಗೆ ವೆಟರ್ನರಿ ಇನ್ಸೆಪೆಕ್ಟರ್ ಬೊಮ್ಮಯ್ಯನ ಟಿವಿಎಸ್ ಬಂದು ರಸ್ತೆಯಲ್ಲಿ ನಿಂತಿತು. ಚಂದ್ರೇಗೌಡ ಎದ್ದು ಅವನನ್ನು ಕರೆತರಲು ಹೋದ. ನಮಗೆ ಯಾವುದೇ ಭರವಸೆ ಮೂಡಲಿಲ್ಲ. ಅವನಿಗೆ ನೆಟ್ಟಗೆ ಗರ್ಭ ನಿಲ್ಲೋ ಇಂಜೆಕ್ಷನ್ನೇ ಕೊಡಕೆ ಬರದಿಲ್ಲ. ಇವನೇನು ಮಾಡಿಯಾನು ಎಂದು ಗೌರಮ್ಮ ನಿಟ್ಟುಸಿರಿಟ್ಟರು.

ಬೊಮ್ಮಯ್ಯ ಚಂದ್ರನೊಡಗೂಡಿ ಹಸುವನ್ನು ಅತ್ತಿತ್ತ ಹೊರಳಿಸಲು ಯತ್ನಿಸಿ ನೋಡಿದ. ನಂತರ ಬ್ಯಾಗಿನಿಂದ ಇಂಜೆಕ್ಷನ್ ತೆಗೆದು ಚುಚ್ಚಿ ಯಾವುದೋ ಮುಲಾಮು ಸವರಿ ಚಂದ್ರನ ಕೈ ನೋಡುತ್ತಾ ನಿಂತ. ನೂರರ ನೋಟು ಕೈಗೆ ಬಂದ ನಂತರ, ನೋಡಿ ರಾತ್ರಿಯೆಲ್ಲಾ ಏಳದೇ ಹೋದ್ರೆ ಬೆಳಗ್ಗೆ ನನಗೆ ಫೋನ್ ಮಾಡಿ ಅಂದ.

ಬೆಳಿಗ್ಗೆ ಏಳುತ್ತಲೇ ಕೊಟ್ಟಿಗೆಯ ಕಡೆ ಹೋದೆ. ಮನಸ್ಸಿನಲ್ಲಿ ಏನೋ ಒಂದು ಸಣ್ಣ ಆಸೆ! ಗೌರಿ ಎದ್ದು ನಿಂತಿದ್ದರೆ! ಚಂದ್ರ ಆಗಲೇ ಅಲ್ಲಿ ಅಡ್ಡಾಡುತ್ತಿದ್ದ. ನಾಲ್ಕು ಹಸುಗಳು ಕೊಟ್ಟಿಗೆಯ ಹೊರಗೇ ನಿಂತಿದ್ದವು. ರಾತ್ರಿ ಹಾಕಿದ ಹುಲ್ಲಿನ ಮೇಲೆ ಸಗಣಿ ಗಂಜಲ ಹಾಕಿಕೊಂಡು ಮಣ್ಣಿನ ಜೊತೆ ತುಣಿದು ಕಿಚಡಿ ಮಾಡಿಕೊಂಡಿದ್ದವು. ಒಳಗೆ ಗೌರಿ ಕೊಟ್ಟಿಗೆಯ ತುಂಬಾ ಬಿದ್ದುಕೊಂಡಿತ್ತು.

ಹತ್ತು ಗಂಟೆ ಆಯಿತು. ಮೇಲಿನ ರಸ್ತೆಯಲ್ಲಿ ನಿಂತ ಜೀಪೊಂದರಿಂದ ಮೂವರು ಶ್ವೇತವಸ್ತ್ರ ಧಾರಿಗಳು ಇಳಿಯುತ್ತಿದ್ದರು. ಚಂದ್ರೇಗೌಡ ಅವರ ಬಳಿಗೆ ಓಡುತ್ತಾ ಹೋದ. ರಸ್ತೆ ಬಿಟ್ಟು ಬದುವಿನ ಮೇಲೆ ಬರುವಾಗ ಅವರು ಗೊಣಗುತ್ತಿದ್ದದ್ದು ಕೇಳಿಸುತ್ತಿತ್ತು.

ಕೊಟ್ಟಿಗೆಯ ಬಳಿ ಬರುವ ವೇಳೆಗೆ ಅವರ ಪಾಲಿಷ್ ಮಾಡಿದ ಬೂಟು ಹಾಗೂ ಇಸ್ತ್ರಿ ಮಾಡಿದ ಪ್ಯಾಂಟು ಮಣ್ಣು ಅಂಟಿ ಕೊಳೆಯಾಗಿದ್ದವು.ಅವರು ನನ್ನಡೆಗೆ ಅಸಮಾಧಾನದಿಂದ ನೋಡುತ್ತಾ ‘ಏನ್ ಗೌಡ್ರೆ ಮನೆ ಹತ್ರ ಒಂದ್ ಜೀಪ್ ಬರೋ ಹಂಗೆ ರೋಡ್ ಮಾಡ್ಕಳಕಾಗದಿಲ್ವ’ ಎಂದರು. ಅವರ ಮಾತಿಗೆ ಪ್ರತಿಕ್ರಿಯಿಸದೆ ಅವರನ್ನು ನಿರ್ದೇಶಿಸುತ್ತಾ ಸುಮ್ಮನೆ ಕೊಟ್ಟಿಗೆಯೊಳಗೆ ಹೋದೆ.

‘ಹ್ಯಾಗಾಯಿತು? ಎಷ್ಟು ದಿನ ಆಯಿತು? ಎಷ್ಟು ತಿಂಗಳ ಗಬ್ಬ? ಮುಂತಾಗಿ ವಿವರ ಪಡೆಯುತ್ತಾ, ನಮ್ಮ ಸಹಾಯದೊಂದಿಗೆ ಹಸುವನ್ನು ಅತ್ತಿತ್ತ ಹೊರಳಿಸಲು ಯತ್ನಿಸಿ ನಿರಾಶರಾದರು. ಬೇರೆ ಬೇರೆ ತರದ ಸಣ್ಣ ಬಾಟ್ಲಿಗಳಿಂದ ಔಷಧಿ ತೆಗೆದು ಮೂರು ಇಂಜಕ್ಷನ್ ಕೊಟ್ಟಿರ್ತೀವಿ. ಏನೂ ತೊಂದರೆ ಇಲ್ಲಾ ಅಂದ್ರೆ ಬೆಳಗ್ಗೆ ಹೊತ್ತಿಗೆ ಸುಧಾರಿಸುತ್ತೆ. ಇದಕ್ಕಿಂತ ಇನ್ನೇನೂ ಮಾಡಕಾಗಲ್ಲ. ಈ ಇಂಜೆಕ್ಷನ್ ಗೇ ಎಂಟು ನೂರು ಆಗುತ್ತದೆ. ಚಿಕಿತ್ಸೆಯ ಪರಿಣಾಮ ಹಾಗೂ ಅವರ ಬಿಲ್ಲು ಎಲ್ಲಾ ಸೇರಿಸಿ ಹೇಳಿದರು.

ನಮ್ಮಲ್ಲಿ ಆ ಗಳಿಗೆಯಲ್ಲಿ ಮತ್ತೆ ಸಣ್ಣದೊಂದು ಆಸೆ ಸುಳಿದು ಹೋದದ್ದು ಸುಳ್ಳಲ್ಲ. ಎರಡು ದಿನ ಹೊಳವು ಕೊಟ್ಟಿದ್ದ ಆಕಾಶ ಮತ್ತೆ ಮೋಡಗಟ್ಟತೊಡಗಿತ್ತು. ರಾತ್ರಿ ಥಂಡಿ ಗಾಳಿ ಬೀಸ ತೊಡಗಿದಾಗ ನಮ್ಮ ಮನಸುಗಳ ಮೇಲೂ ಮೋಡ ಮುಸುಕಿದ ಅನುಭವವಾಗತೊಡಗಿತು.

ಗೌರಮ್ಮ ಎರಡು ದಿವಸಗಳಿಂದಲೂ ಮೌನಿಯಾಗಿ ಹೋಗಿದ್ದಳು. ‘ಹಸುಗಳು ಎರಡು ದಿನದಿಂದ ಹೊರಗೇ ನಿಂತಿದಾವೆ. ಇನ್ನು ಮಳೆ ಬೇರೆ ಹನಿಯಕೆ ಶುರುವಾದ್ರೆ ದೇವರೇ ಗತಿ ಆ ನಾಟಿ ಹಸುಗಳೇನೋ ಪರ್ವಾಗಿಲ್ಲ. ಇನ್ನೊಂದ್ ಸಿಂಧಿ ಹಸು ತಡಿಯಾದಿಲ್ಲ. ಈಗ್ಲೂ ನಾಕು ಲೀಟರ್ ಹಾಲು ಕೊಡ್ತಾ ಇದ್ದುದು ಈ ಸಾಯಂಕಾಲ ಎರಡು ಲೀಟರ್ ಗೆ ಬಂದಿತೆ’ ಚಂದ್ರ ಆತಂಕದಿಂದ ಚಡಪಡಿಸುತ್ತಿದ್ದ.

ಗಾಬರಿಯಾಗದ್ ಬೇಡ. ಸುಮ್ನಿರಿ. ಹ್ಯಾಗೂ ಒಳ್ಳೆ ಇಂಜೆಕ್ಷನ್ ಹಾಕಿ ಹೋಗಿದ್ದಾರೆ. ಬೆಳಗ್ಗೆ ಹೊತ್ತಿಗೆ ಎಲ್ಲಾ ಸರಿ ಹೋಗಬಹುದು. ದೇವರ ಮ್ಯಾಲ ಭಾರ ಹಾಕಿ ಮಲಗಿ ಎಂದೆ.

ಬೆಳಗ್ಗೆ ದಿನ ನಿತ್ಯಕ್ಕಿಂತ ಮೊದಲೇ ಎಚ್ಚರಗೊಂಡಿದ್ದೆವು. ಏನೋ ಒಳ್ಳೆಯದಾದೀತು ಎಂಬ ಸಣ್ಣ ಆಸೆ ಎಲ್ಲರ ಮನದಲ್ಲೂ ತುಂಬಿಕೊಂಡಿತ್ತು. ಸಣ್ಣಗೆ ಸೋನೆ ಜಿನುಗುತ್ತಿತ್ತು. ಗೌರಮ್ಮ ಹಾಗೂ ಚಂದ್ರ ಕಾತರದಿಂದ ನನಗಿಂತ ಮುಂಚೆಯೇ ಕೊಟ್ಟಿಗೆಯ ಒಳಗೆ ಪ್ರವೇಶಿಸಿದರು. ನಾನು ಕೊಟ್ಟಿಗೆಯೊಳಗೆ ಇಣುಕುವ ವೇಳೆಗೆ ಇಬ್ಬರೂ ನನ್ನಡೆಗೆ ತಿರುಗಿದರು. ಮುಖದಲ್ಲಿನ ಆತಂಕ ಗಮನಿಸಿದಾಗಲೇ ಮತ್ತ್ಯಾವುದೋ ಹೊಸ ತೊಂದರೆಗೆ ಸಿಲುಕಿರುವ ಅರಿವಾಯಿತು.

ಕೊಟ್ಟಿಗೆಯೊಳಗೆ ಪ್ರವೇಶಿಸಿದೆ. ಕೊಟ್ಟಿಗೆಯ ತುಂಬಾ ಶರೀರ ಹರಡಿ ಏಳಲಾರದೇ ಹೆಣಗುತ್ತಿದ್ದ ಗೌರಿ ದೈನ್ಯ ತುಂಬಿದ ನೋಟವೊಂದನ್ನು ನನ್ನಡೆ ಬೀರಿತು. ನಾನೂ ಬಂದದ್ದರಿಂದ ಏನಾದರೂ ಒಳಿದಾದೀತು ಎಂಬ ಆಸೆ ಅದರ ಮನದಲ್ಲಿತ್ತು. ಆದರೆ ನಾನೇನು ಮಾಡಲು ಸಾಧ್ಯವಿತ್ತು. ಅಸಾಯಕತೆಯಿಂದ ಅತ್ತ ಗಮನಿಸತೊಡಗಿದೆ.

ಎಲ್ಲೆಡೆ ಸಗಣಿಯೊಂದಿಗೆ ಬೆರೆತ ಗಂಜಲ ವಿಚಿತ್ರ ವಾಸನೆ ಹೊಡೆಯುತ್ತಿತ್ತು. ಗೌರಿಯ ದೇಹದ ಹಿಂಭಾಗದಲ್ಲಿ ಏನೋ ನೀರು ತುಂಬಿದ ಪ್ಲಾಸ್ಟಿಕ್ ಚೀಲದಂತದ್ದು ಹೊರಬರುತ್ತಿತ್ತು. ‘ಈ ಕಷ್ಟದ್ ಜೊತೆಗೆ ಇದೊಂದು ಬೇರೆ. ಕರ ಹಾಕಂಗೆ ಆಗಿತೆ ಇನ್ನೂ ದಿನ ಬೇರೆ ತುಂಬಿಲ್ಲ. ಏನ್ಮಾಡದೋ ಕಾಣೆ’ ಗೌರಮ್ಮ ಪೇಚಾಡತೊಡಗಿದಳು. ನಾನು ಚಂದ್ರನ ಕಡೆ ತಿರುಗಿ ‘ಬೊಮ್ಮಯ್ಯ ಬರಕೇಳು’ ಎಂದೆ.

ಅರ್ಧ ಗಂಟೆಯ ಬಳಿಕ ಕರುವಿನ ಕಾಲುಗಳು ಹಾಗೂ ತಲೆ ಕಾಣತೊಡಗಿದಾಗ ಬೊಮ್ಮಯ್ಯ, ಚಂದ್ರೇಗೌಡ ಹಾಗೂ ಗೌರಮ್ಮ ಉಪಾಯವಾಗಿ ಕರುವನ್ನು ಹೊರಗೆಳೆದರು. ಇನ್ನೂ ಬಲಿಯದಿದ್ದ ಕರು ಬಟ್ಟೆಯಂತೆ ಅತ್ತಿತ್ತ ಬಳುಕುತ್ತಿತ್ತು.

ದಿನ ತುಂಬದಿದ್ದರಿಂದ ಕರುವಿನ ಶರೀರದ ಮೂಳೆ ಬಲಿತಿರಲಿಲ್ಲ. ವೈದ್ಯರ ಸಲಹೆಯಂತೆ ಯಾವುದೋ ಕ್ಯಾಲ್ಷಿಯಂ ಇಂಜೆಕ್ಷನ್ ತರಿಸಿ ಕೊಟ್ಟದ್ದಾಯಿತು. ಒಂದೆಡೆ ಏಳಲಾರದೇ ಮಲಗಿರುವ ಹಸು! ಇನ್ನೊಂದೆಡೆ ದಿನ ತುಂಬದೆ ಹುಟ್ಟಿದ ಶರೀರ ಬಲಿಯದ ಕರು.

‘ಒಂದ್ ಕಷ್ಟ ಬಗೆಹರಿಸೋಕೆ ಹೋರಾಡುತ್ತಾ ಇದ್ರೆ ಜೊತೆಗೆ ಇನ್ನೊಂದು ಕಷ್ಟ ಬಂದು ಸೇರ್ಕಳ್ತು. ಈ ಕರ ನ್ಮಾಡದು ಈಗ’ ಗೌರಮ್ಮ ಕರುವಿನ ಕಡೆ ನೋಡಿ ಮರುಗತೊಡಗಿದಳು.

‘ಏನ್ಮಾಡಕಾಗುತ್ತೆ ಅಮ್ಮ ಹೆಣ್ಗರು ಹುಟ್ಟಿದೆ. ಬೇರೆ ಯಾವ್ದಾದ್ರೂ ಹಸುವಿನ ಹಾಲು ಹುಯ್ದು ಸಾಕಿ ನಿಮ್ ಅದೃಷ್ಟ ಹ್ಯಾಗಿದೆ ನೋಢಣ. ಕರು ಹಾಕಿ ಹಸುವಿನ ಮೈ ಹಗುರಾಗಿದೆ ಈಗ. ಎದ್ ನಿಂತ್ರೂ ನಿಲ್ಲಬಹುದು’ ಚಂದ್ರೇಗೌಡನೊಂದಿಗೆ ಟಿ.ವಿ.ಎಸ್ ಕಡೆ ಹೆಜ್ಜೆ ಹಾಕುತ್ತಾ ಬೊಮ್ಮಯ್ಯ ಹೇಳುತ್ತಿದ್ದ.

ಕೊಟ್ಟಿಗೆಯ ತುಂಬಾ ಹೆರಿಗೆಯ ನಂತರದ ಗಲೀಜು! ಮೂಗಿಗೆ ಅಡರುವ ವಿಚಿತ್ರ ವಾಸನೆ! ಗೌರಮ್ಮ ಬಕೆಟ್ ಹಾಗೂ ಮಂಕರಿ ತಂದು ಕಸವನ್ನೆಲ್ಲಾ ಬಳಿಯತೊಡಗಿದಳು. ಅವಳಲ್ಲಿದ್ದ ಹೆಂಗಸಿನ ಕರ್ತವ್ಯ ಪ್ರಜ್ಞೆ ಜಾಗೃತವಾಗಿತ್ತು. ಇಬ್ಬರೂ ಸೇರಿ ಕಸವನ್ನೆಲ್ಲಾ ಎತ್ತಿಹಾಕಿ ಕೊಟ್ಟಿಗೆಯನ್ನೆಲ್ಲಾ ತೊಳೆದರೂ ಇನ್ನೂ ವಾಸನೆ ತುಂಬಿಕೊಂಡಿತ್ತು.

‘ಹಸು ಆವತ್ತಿನಿಂದ ಒಂದೇ ಮಗ್ಗುಲಲ್ಲಿ ಮಲಗಿದೆ. ಸಂದಿಗೆ ಗಂಜಲ ಹೋಗಿ ಸೆಲತು ಚರ್ಮ ಕಿತ್ ಬಂದ್ಬುಟ್ಟಾರು’ ಗೌರಮ್ಮ ಆತಂಕಗೊಂಡಿದ್ದಳು. ಚಂದ್ರೇಗೌಡ ಹಿಂದಿರುಗಿ ಬಂದ ನಂತರ ಮೂವರೂ ಸೇರಿ ಹಸುವಿನ ಶರೀರವನ್ನು ಸ್ವಲ್ಪ ಹೊರಳಿಸಿ ಹಿಡಿದು ಹಳೆಯ ಬಟ್ಟೆಯಿಂದ ನೆಲ ರೆಸಿ ಮತ್ತೆ ಮೊದಲಿದ್ದಂತೆಯೇ ಮಲಗಿಸಿದೆವು.

ಮೂಲೆಗೆ ಬಿದ್ದ ಗೌರಿ ಹೆಣ್ಣುಗರು ಹಾಕಿದ ಸುದ್ದಿ ಹರಡಿ ಊರವರೆಲ್ಲಾ ಬಂದು ನೋಡಿ ಕನಿಕರ ವ್ಯಕ್ತಪಡಿಸತೊಡಗಿದರು. ಒಬ್ಬೊಬ್ಬರು ಒಂದೊಂದು ರೀತಿ ಸಲಹೆ ಕೊಡುವವರೇ!

ಹಸು ಅಂತೂ ಏಳುತ್ತೋ ಇಲ್ವೋ ಹೇಗೂ ಕಡೆ ಕಾಲ್ದಲ್ಲಿ ಹೆಣ್ಣಗರು ಹಾಕಿದೆ. ಚೆನ್ನಾಗಿ ಸಾಕಿಕೊಳ್ಳಿ ಅದರ ನೆನಪಿಗಾದ್ರೂ ಇರುತ್ತೆ.

ಹೋಗಿಹೋಗಿ ಮೂಲೆಗೆ ಬಿದ್ವಡ್ತಲ್ಲ…. ಒಂದೇ ಏಟಿಗೆ ಸತ್ತಾದ್ರೂ ಹೋಗಿದ್ರೆ ಕಾಣ್ದಂಗೆ ಆಗಿ ಹೋಗದು. ನಲವತ್ತು ಸಾವಿರ  ಇನ್ಸೂರೆನ್ಸ್ ದುಡ್ಡಾದ್ರೂ ಬರೋದು’

‘ಏನೂ ಮಾಡಕಾಗದಿಲ್ಲ. ಮೈ ಹಗುರಾಗಿದೆ. ಕರುವಿನ ಆಸೆಗೆ ಬೆಳಗ್ಗೆ ಹೊತ್ಗೆ ಎದ್ರೂ ಏಳ್ಬಹ್ದು’

ಇದ್ದಕ್ಕಿದ್ದಂಗೆ ಹಿಂಗ್ ಆಗದು ಅಂದ್ರೆ! ಏನೋ ಕಾಟ ಇರ್ಬಹ್ದು! ಪುರದಮ್ಮಗೆ ಹಂದಿ ಬೇಟೆ ಕೊಡ್ತಿವಿ ಅಂತಾ ಹರಕೆ ಮಾಡ್ಕಳಿ, ಖಂಡಿತಾ ಒಳ್ಳೆದಾಗುತ್ತೆ.

ಜನರ ವಿವಿಧ ರೀತಿಯ ಸಲಹೆ, ಸಾಂತ್ವನದ ಮಾತುಗಳು ಮನಸ್ಸಿನಲ್ಲಿ ಗುಂಯ್ ಗುಡುತ್ತಿದ್ದವು. ಏನಾದರೂ ಒಳ್ಳೆಯದಾಗಬಹುದೆಂಬ ಸಣ್ಣ ಆಸೆಯ ಎಳೆಯೊಂದು ಮನಸ್ಸನ್ನು ಮುದಗೊಳಿಸುತ್ತಿತ್ತು.

ಜಿನುಗುತ್ತಿದ್ದ ಸೋನೆ ಮನಸ್ಸಿಗೆ ರೇಜಿಗೆ ಹುಟ್ಟಿಸುತ್ತಿತ್ತು. ರಾತ್ರಿಯೆಲ್ಲಾ ಮಳೆ ಜಿನುಗುತ್ತಿದ್ದರಿಂದ ಮಣ್ಣು ನೆನೆದು ಕಾಲಿಟ್ಟರೆ ಬೆರಳ ಸಂದಿ ಕೆಸರೂ ತೂರಿ ಬರುತ್ತಿತ್ತು. ರಾತ್ರಿಯೆಲ್ಲಾ ಸೋನೆಗೆ  ಮೈಯೊಡ್ಡಿ ಕೊಟ್ಟಿಗೆಯ ಹೊರಗೇ ನಿಂತ ನಾಲ್ಕು ಹಸುಗಳೂ ಮೈಹಿಡಿ ಮಾಡಿಕೊಂಡು ನಿಂತಿವೆ.

ನಿಂಗಪ್ಪ ಹಾಗೂ ರಾಜಪ್ಪಣ್ಣ ಬೆಳಗಾಗುತ್ತಲೇ ಕುತೂಹಲದಿಂದ ಬಂದಿದ್ದರು. ಸಣ್ಣ ಆಸೆಯೊಂದಿಗೆ ಕೊಟ್ಟಿಗೆಯ ಬಳಿ ಹೋಗಿ ಬಾಗಿಲು ನೂಕುವಾಗ ಯಾಕೋ ಅಳುಕುಂಟಾಯಿತು. ಪರಿಸ್ಥಿತಿಯಲ್ಲಿ ಏನೂ ಬದಲಾವಣೆಯಿಲ್ಲ. ಬಾಗಿಲು ತೆರೆದು ಒಳಬಂದ ನಮ್ಮನ್ನು ಗೌರಿ ದೀನತೆಯಿಂದ ದೃಷ್ಟಿಸಿತು. ಅದಕ್ಕೆ ಒಳಿತು ಮಾಡಲು ನಮ್ಮ ಬಳಿ ಏನೂ ಉಪಾಯ ಇರಲಿಲ್ಲ.

ಎಲ್ಲರನ್ನೂ ಕರಿರಿ, ಒಂದ್ ಸಲ ಹೊರಳಿಸಿ ನಿಲ್ಸಕೆ ನೋಡನ ನಾಕು ದಿನದಿಂದ ಒಂದೇ ಮಗ್ಲಲ್ಲಿ ಮಲಗಿತೆ’ ರಾಜಪ್ಪಣ್ಣ ಹೇಳಿದಾಗ ರಘು ಸೇರಿದಂತೆ ಎಲ್ಲ ಅಲ್ಲಿ ನೆರೆದರು. ಎಲ್ಲರೂ ಸೇರಿ ಶಕ್ತಿ ಕೊಟ್ಟು ನೂಕಿದಾಗ ಹಸು ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡಿತು. ಎಲ್ಲರ ಮುಖದಲ್ಲಿ ಗಾಬರಿ ತುಂಬಿಕೊಂಡಿತು. ಒಂದು ಮೊರದಗಲ ಚರ್ಮವೆಲ್ಲಾ ಉಜ್ಜಿ ಹೋಗಿ ರಕ್ತ ಒಸರುತ್ತಿದೆ. ಇನ್ನೊಂದು ದಿವ್ಸ ಹಿಂಗೇ ಬಿಟ್ರೆ ನೊಣ ಕೂತು ಹುಳ ಆಗುತ್ತೆ’ ಎಂದರು ರಾಜಪ್ಪಣ್ಣ.

ಇಲ್ಲೇ ಕೊಟ್ಟಿಗೆಯೊಳಗೆ ಇಟ್ಟುಕೊಂಡು ಏನ್ಮಾಡ್ತಿರಿ. ಇದಕ್ಕೆ ಏನಾದ್ರೂ ಒಂದು ಗತಿ ಕಾಣಿಸಬೇಕು. ಇದ ಹೇಗಾದ್ರೂ ಹೊರಕ್ಕೆ ಸಾಗಿಸಿ ಕೊಟ್ಟಿಗೆ ಎಲ್ಲಾ ಚೆನ್ನಾಗಿ ತೊಳೆದು ಆ ದನಗಳನ್ನಾದ್ರೂ ಒಳಕ್ಕೆ ಕಟ್ಟಿ. ಇಲ್ದೇ ಹೋದ್ರೆ ಈ ಸೋನೇಲಿ ಹಿಂಗೇ ಬಿಟ್ರೆ ಅವನ್ನೂ ಕಳ್ಕೊಳ್ತಿರಿ ಅಷ್ಟೇ’ ನಿಂಗಪ್ಪನ ನಿರ್ಧಾರದ ಮಾತಿನಲ್ಲಿ ಕಾಳಜಿಯಿತ್ತು.

ಚಂದ್ರೇಗೌಡ ಅವನ ಮಾತನ್ನೇ ಗಮನವಿಟ್ಟು ಕೇಳಿ ಸುಮ್ಮನೇ ತಲೆದೂಗುತ್ತಿದ್ದ. ನಮಗೆಲ್ಲಾ ಮುಂದಿನ ದಾರಿ ಏನು ಎಂಬುದೇ ತೋಚಲಿಲ್ಲ. ಆ ಪರಿಸ್ಥಿತಿಯಲ್ಲಿ ಅಲ್ಲಿ ಹೆಚ್ಚು ಹೊತ್ತು ನಿಲ್ಲಲಾಗದೇ ಮನೆಯ ಕಡೆ ಹೆಜ್ಜೆ ಹಾಕಿದೆವು. ಯಾರಲ್ಲೂ ಆಡಲು ಮಾತೇ ಉಳಿದಂತಿರಲಿಲ್ಲ.

ಗೌರಮ್ಮ ಸೆರಗಿನಲ್ಲಿ ಕಣ್ಣೊರೆಸಿಕೊಳ್ಳುತ್ತಾ ಅಡುಗೆ ಮನೆ ಸೇರಿಕೊಂಡಳು. ರಘು ಪ್ಯಾಂಟ್ ಏರಿಸಿ ಹಾಸನಕ್ಕೆ ಹೊರಡುವ ತಯಾರಿ ಮಾಡತೊಡಗಿದ. ಇದುವರೆಗೆ ಸುಮ್ಮನಿದ್ದ ರಘುಗೆ ತನ್ನ ಸಂಘಟನೆಯ ಸಿದ್ಧಾಂತಗಳ ಬಗ್ಗೆ ಪ್ರಚಾರಕ್ಕೆ ಈ ಸಂದರ್ಭವನ್ನು ಉಪಯೋಗಿಸಿಕೊಳ್ಳದಿದ್ದರೆ ಹ್ಯಾಗೆ? ಎಂದೆನಿಸಿತು.

ಆದರೂ ಒಳಗೇ ಏನೋ ಅಳುಕಿನಿಂದ ಚಡಪಡಿಸುತ್ತಿದ್ದಂತಿತ್ತು. ಈ ಎಲ್ಲಾ ಅನುಭವಸ್ಥರ ಎದುರು ತನ್ನ ಮಾತು ಏನು ನಡೆದೀತು ಎನ್ನಿಸಿದರೂ ಧೈರ್ಯವಹಿಸಿ ಬಾಯಿತೆರೆದ. ತನ್ನ ಸಂಘಟನೆಯ ಸಿದ್ಧಾಂತ, ತಮ್ಮದೇ ಸರ್ಕಾರ ಗೋ ಹತ್ಯಾ ನಿಷೇಧದ ಬಗ್ಗೆ ಹೊರಡಿಸುತ್ತಿರುವ ಕಾನೂನು, ಸರ್ಕಾರದ ಬೆಂಬಲದಿಂದ ಮಠಗಳು, ಅಶಕ್ತ ದನಗಳಿಗಾಗಿ ತೆರೆದಿರುವ ಗೋಶಾಲೆಗಳು ಮುಂತಾಗಿ ಹೇಳ ತೊಡಗಿದೊಡನೆ ರಾಜಪ್ಪಣ್ಣ ತಡೆಯಲಾರದೇ, ‘ಹಂಗಾದ್ರೆ ನೀನೇ ಅದೆಲ್ಲಿಗೆ ಹೊಡ್ಕಂಡ್ ಹೋಗ್ತಿಯೋ ಹೋಗು, ನಾವೆಲ್ಲಾ ಯಾಕೆ ಸುಮ್ನೆ ಪೇಚಾಡ್ಬೇಕು! ಎಂದು ಗದರತೊಡಗಿದರು.

ರಘು ಮುಂದೆ ಮಾತಡದಾದ. ಸಭಾತ್ಯಾಗ ಮಾಡುವವನಂತೆ ಅಲ್ಲಿಂದ ಎದ್ದು ಹೊರ ನಡೆದ. ಗೌರಿ ಮತ್ತೊಮ್ಮೆ ಹೊರಳಾಡಲು ಯತ್ನಿಸಿತು. ಸಾಧ್ಯವಾಗಲಿಲ್ಲ. ನೋವಿನಿಂದ ಮುಲುಕಾಡಿತು. ಕೊನೆಗೊಮ್ಮೆ ನನ್ನೆಡೆಗೆ ತಿರುಗಿ ಅತಿ ವಿನೀತ ದೃಷ್ಟಿ ಬೀರಿತು. ಆ ಮೂಕಪ್ರಾಣಿ ನನ್ನೊಂದಿಗೆ ಏನೋ ಸಂಭಾಷಣೆ ನಡೆಸಲು ಯತ್ನಿಸುತ್ತಿದೆಯೇನೋ  ಎನ್ನಿಸಿತು. ಬಗೆ ಹರಿಯದ  ಈ ನೋವಿನಿಂದ ಬಿಡುಗಡೆ ಹೊಂದಲು ದಯಾಮರಣ ಭಿಕ್ಷೆ ಕೇಳುತ್ತಿರಬಹುದೇ ಎನಿಸಿ ನನ್ನಲ್ಲಿ ವಿಷಾದ ತುಂಬಿಕೊಂಡಿತು.

ಚಂದ್ರೇಗೌಡ ಕ್ಯಾಲೆಂಡರ್ ಹಿಂಭಾಗದಲ್ಲಿ ಬರೆದಿದ್ದ ಯಾವುದೋ ಫೋನ್ ನಂಬರ್ ಗುರುತು ಹಾಕಿಕೊಂಡು ಮೊಬೈಲ್ ಕೈಯಲ್ಲಿ ಹಿಡಿದು ಹೊರನಡೆದ. ನಾನೂ ಎಲ್ಲವನ್ನೂ ನೋಡುತ್ತಾ ಸುಮ್ಮನೇ ಕುಳಿತೇ ಇದ್ದೆ.

ನಿಮಿಷ, ಗಂಟೆ ಕಳೆಯುತ್ತಾ ಹೋದಂತೆ ನನಗೆ ಚಡಪಡಿಕೆ ಹೆಚ್ಚಾಗತೊಡಗಿತು. ‘ಈ ಕಷ್ಟದಿಂದ ಬಿಡುಗಡೆಯೇ ಇಲ್ಲವೇ? ಈ ಪರಿಸ್ಥಿತಿಯ ಅಂತ್ಯ ಹೇಗೆ ? ನಂಬಿದ ಜನರೆಲ್ಲಾ ಕೈಚಲ್ಲಿ ಹೋಗಿದ್ದಾರೆ. ಇನ್ನು ಈ ಕಷ್ಟ ಪರಂಪರೆಯನ್ನು ನೀಗಲು ಬೇರಾವುದೋ ಲೋಕದಿಂದ ಒಬ್ಬ ಅವಧೂತನೇ ಇಳಿದು ಬರಬೇಕಾದೀತೆನೋ’ ಯೋಚಿಸುತ್ತಾ ಹೋದಂತೆ ತಲೆ ಸಿಡಿದು ಹೋಳಾಗುತ್ತಿರುವಂತೆನಿಸತೊಡಗಿತು. ಮೇಲೆ ರಸ್ತೆಯಲ್ಲಿ ಲಗ್ಗೇಜ್ ಆಟೋ ನಿಂತ ಸದ್ದಾಗಿ ಅತ್ತ ತಿರುಗಿದೆ. ನಾಲ್ಕಾರು ಜನ ಉದ್ದನೆಯ ಬಡಿಗೆಗಳನ್ನು ಹೆಗಲ ಮೇಲೆ ಇಟ್ಟುಕೊಂಡು ನಮ್ಮ ಮನೆಯತ್ತಲೇ ಬರುತ್ತಿದ್ದಾರೆ. ಚಂದ್ರೇಗೌಡ ಅವರ ನಿರೀಕ್ಷೆಯಲ್ಲೇ ಇರುವವನಂತೆ ಮನೆಯ ಮುಂದೆ ಹಟ್ಟಿಯಲ್ಲಿ ನಿಂತಿದ್ದಾನೆ. ಗೌರಮ್ಮ ಮಲಗಿದ್ದ ಹಸು ಗೌರಿಗೆ ಕೊನೆಯದಾಗಿ ಎಂಬಂತೆ ಕಲಗಚ್ಚು ಕುಡಿಸಿ ಬಂದವಳೇ ದುಃಖದ ಕಟ್ಟೆಯೊಡೆದು ಬಿಕ್ಕುತ್ತಾ ಬಾಗಿಲು ಹಾಕಿಕೊಂಡಳು.

ಬರುತ್ತಿದ್ದವರನ್ನು ನಿರ್ದೇಶಿಸುತ್ತಾ ದಾದಾ ಕೊಟ್ಟಿಗೆಯ ಕಡೆ ಹೆಜ್ಜೆ ಹಾಕುತ್ತಿದ್ದ.

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Praveen Jagata

    ಪ್ರಸ್ತುತ ಪರಿಸ್ಥಿತಿಯಲ್ಲಿ ನಮ್ಮ ರೃೆತರು ಅನುಭವಿಸುತ್ತಿರುವ ಸನ್ನಿವೇಶವನ್ನು ಕಣ್ಣಿಗೆ ಕಟ್ಟಿ ದ ರಿೀತಿಯಲ್ಲಿ ಹಾಡ್ಲಹಳ್ಳಿ ನಾಗರಾಜ್ ರವರು ಚಿತ್ರಿಸಿದ್ದಾರೆ. ಸರ್ಕಾರದ ಕಾನೂನು ಕಾಯಿದೆಗಳು ಓಟ್ ಬ್ಯಾಂಕ್ ರಾಜಕೀಯಕ್ಕೆ ಮಾತ್ರ .
    ಅಭಿನಂದನೆಗಳು ಸರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: