ಹಾಡ್ಲಹಳ್ಳಿ ನಾಗರಾಜ್ ಅಂಕಣ – ತುರಿಗಜ್ಜಿಯ ನೆಪದಲ್ಲಿ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

5

ಮಠದ ವಾತಾವರಣಕ್ಕೆ ನಿಧಾನಕ್ಕೆ ಒಗ್ಗಿಕೊಳ್ಳ ತೊಡಗಿದ್ದೆ. ನಮ್ಮ ಕಡೆಯ ಹುಡುಗರಾದ ಶಿವರುದ್ರಶೆಟ್ಟಿ, ಬೋರೇಗೌಡ, ತರುವೆ ಪುಟ್ಟೇಗೌಡ ಮುಂತಾದವರು ಆಗಾಗ ವಿಚಾರಿಸಿಕೊಂಡು ಧೈರ್ಯ ತುಂಬುತ್ತಿದ್ದರು.
“ಹೊಟ್ಟೆ ತುಂಬಾ ಮುದ್ದೆ, ಕಣ್ಣು ತುಂಬಾ ನಿದ್ದೆ ಇನ್ನೇನು ಬೇಕು”.

ಸ್ನೇಹಿತರು ಪರಸ್ಪರ ಛೇಡಿಸಿಕೊಳ್ಳುತ್ತಿದ್ದರೂ ಆಗಾಗ ನಾವು ಸಣ್ಣ ಪುಟ್ಟ  ಕಾಯಿಲೆಗಳಿಗೆ ತುತ್ತಾಗಿ ಪರಿತಾಪ ಪಡುವುದೂ ಇತ್ತು. ಜ್ವರ ತಲೆನೋವು, ಶೀತ ನೆಗಡಿ, ಹೊಟ್ಟೆ ನೋವು ಇಂತವೇ ಸಣ್ಣ ಪುಟ್ಟ ಸಮಸ್ಯೆಗಳು. ಪಕ್ಕದ ಕ್ಯಾತ್ಸಂದ್ರದಲ್ಲಿ ಸರ್ಕಾರಿ ಆಸ್ಪತ್ರೆ ಇತ್ತು. ಅಲ್ಲಿ ಆಗ ಡಾ.ತೋಪಯ್ಯ ಎಂಬ ವೈದ್ಯರಿದ್ದರು. ಹಳ್ಳಿಯ ಜನರಿಗಿಂತಾ ಮಠದ ಹುಡುಗರೇ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ‘ಮಾಮೂಲಿ ಗಿರಾಕಿಗಳು’. ತಮಾಷೆಯಾಗಿ ಮಾತಾಡುತ್ತಾ, ಔಷದೋಪಚಾರ ಮಾಡಿ ಕಳಿಸುತ್ತಿದ್ದರಿಂದ ಹುಡುಗರು ಅವರ ಬಳಿ ಖುಷಿಯಿಂದಲೇ ಹೋಗುತ್ತಿದ್ದರು.
ಹೀಗೀರಬೇಕಾದರೆ ಒಮ್ಮೆ ನಮ್ಮಲ್ಲಿ ಹಲವಾರು ಜನರಿಗೆ ತುರಿಗಜ್ಜಿ ಶುರುವಾಯಿತು. ಸಾರು ಮತ್ತು ಮುದ್ದೆ ಮಾಡುವ ದೊಡ್ಡ ದೊಡ್ಡ ತಾಮ್ರದ ಹಂಡೆಗಳು ಕಿಲುಬು ಬಿಟ್ಟುಕೊಂಡು ಹೀಗಾಗಿರಬಹುದು ಎಂದು ಹುಡುಗರು ಮಾತಾಡಿಕೊಳ್ಳುತ್ತಿದ್ದರು.

ದಿನಾ ನಾಲ್ಕೈದು ಸಾವಿರ ಜನಕ್ಕೆ ಈ ಮಠದಲ್ಲಿ ಅನ್ನದಾಸೋಹ ಹೇಗೆ ನಡೆಯುತ್ತೆ? ಇದಕ್ಕೆಲ್ಲಾ ದವಸ ಧಾನ್ಯ ಪೂರೈಕೆ ಹೇಗೆ ಎಂಬ ಬಗ್ಗೆ ಆರಂಭದಲ್ಲಿ ನಮಗೆಲ್ಲಾ ಬಹಳ ಕುತೂಹಲವಿತ್ತು.

ಆ ಕುತೂಹಲ ತಣಿಸಿಕೊಳ್ಳಲು ಮಠದ ಹಿರಿಯ ವಿದ್ಯಾರ್ಥಿಗಳ ಮೊರೆ ಹೋಗುತ್ತಿದ್ದೆವು. ಅವರು ಮಠದ ಇತಿಹಾಸವನ್ನು ಆಕರ್ಷಕವಾಗಿ ಹೇಳುತ್ತಿದ್ದರು.

ಮಠ ಆರಂಭವಾದಾಗ ಹತ್ತಿದ ಒಲೆ ಇಂದಿಗೂ ಆರಿಲ್ಲ….. ಒಮ್ಮೆ ಈಗಿನ ಶಿವಕುಮಾರ ಸ್ವಾಮೀಜಿಗಳಿಗಿಂತ ಹಿಂದೆ ಉದ್ದಾನ ಶಿವಯೋಗಿಗಳು ಇದ್ದಾಗ ಒಂದು ದಿನ ದವಸದ ದಾಸ್ತಾನು ಮುಗಿದು ಹೋಗಿತ್ತಂತೆ. ಬೆಳಗಾಗೆದ್ದು ಮಠದ ಬಡ ಹುಡುಗರ ಹೊಟ್ಟೆ ತುಂಬಿಸುವುದು ಹೇಗೆ? ಎಂದು ಅವರು ಇರುಳೆಲ್ಲಾ ಚಿಂತಾಕ್ರಾಂತರಾಗಿದ್ದರಂತೆ. ಆದರೆ ಮಠದ ಮಹಿಮೆ ಮುಕ್ಕಾಗಲು ಸಿದ್ದಲಿಂಗೇಶ್ವರ ಸ್ವಾಮಿ ಬಿಡುತ್ತಾನೆಯೇ?.

 ಬೆಳಗಾಗೆದ್ದು ನೋಡುವಷ್ಟರ ವೇಳೆಗೆ ಎಲ್ಲೆಡೆ ಸುದ್ದಿ ಹರಡಿ ಬಿಟ್ಟಿದೆ.
ಉದ್ದಾನ ಶಿವಯೋಗಿಗಳಿಗೆ ಬೆಳಗಿನ ಜಾವ ಕನಸಿನಲ್ಲಿ ಸಾಕ್ಷಾತ್‌ ಸಿದ್ದಲಿಂಗೇಶ್ವರ ಸ್ವಾಮಿಯೇ ಬಂದು ‘ಏಕೆ ಚಿಂತಿತನಾಗಿರುವೆ. ಕ್ಯಾತ್ಸಂದ ರೈಲ್ವೆ ನಿಲ್ದಾಣಕ್ಕೆ ಹೋಗಿ ನೋಡು. ರಾತ್ರಿಯೇ ದವಸ ಧಾನ್ಯ ತುಂಬಿದ ಹಲವಾರು ಭೋಗಿಗಳು ಬಂದು ನಿಂತಿವೆ. ತಂದು ಬಡ ಹುಡುಗರ ಹಸಿವು ನೀಗಿಸು. ಮುಂದಿನ ಸುಗ್ಗಿಯ ವೇಳೆಗೆ ಭಕ್ತಾದಿಗಳು ಹಾಗೂ ದಾನಿಗಳ ಕೊಡುಗೆ ಬರುವವರೆಗೂ ದಾಸ್ತಾನು ಸಾಕಾಗುತ್ತದೆ’ ಎಂದು ದೇವವಾಣಿ ಮೊಳಗಿತಂತೆ. ಬೆಳಗಾಗೆದ್ದು ನೋಡಿದರೆ ಅವರ ಕನಸಲ್ಲಿ ಕೇಳಿದ್ದು ನಿಜವಾಗಿತ್ತಂತೆ. ದವಸ ಧಾನ್ಯ ತುಂಬಿದ ಐದಾರು ಭೋಗಿಗಳು ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದವಂತೆ….

ಇಂತಹ ಹಲವಾರು ಪವಾಡಗಳ ಕುರಿತು ಹುಡುಗರು ಮಾತಾಡಿಕೊಳ್ಳುತ್ತಿದ್ದರು.
ಅದು ಹೇಗಾದರೂ ಇರಲಿ, ಮಠದ ಲಕ್ಷಾಂತರ ಭಕ್ತರು, ದಾನಿಗಳು ಸುಗ್ಗಿಯ ಕಾಲದಲ್ಲಿ ದವಸ ಧಾನ್ಯ ದಾನವಾಗಿ ಕೊಡುತ್ತಿದ್ದುದು, ದಾಸ್ತಾನು ಮಳಿಗೆ ತುಂಬಿ ಒಂದು ವರ್ಷದ ಅನ್ನದಾಸೋಹಕ್ಕೆ ಒದಗಿ ಬರುತ್ತಿದ್ದುದಂತೂ ನಿಜವಾಗಿತ್ತು.

ನನ್ನ ಕುತೂಹಲದ ಬಗ್ಗೆ ತಿಳಿದಿದ್ದ ಹಳೆಯ ವಿದ್ಯಾರ್ಥಿಯೊಬ್ಬ ನನ್ನನ್ನು ಮಠದ ಪಾಕಶಾಲೆಗೆ ಒಮ್ಮೆ ಕರೆದುಕೊಂಡು ಹೋಗಿದ್ದ…

ಒಂದೆಡೆ ಸಣ್ಣ ಬೆಟ್ಟದಂತಹ ಅನ್ನದ ರಾಶಿ, ಇನ್ನೊಂದೆಡೆ ಮುದ್ದೆಯ ಪರ್ವತ!
ಒಂದು ಸಣ್ಣ ಹಜಾರದಷ್ಟಗಲದ ತಾಮ್ರದ ಅಗಲ ಬಾಯಿನ ಪಾತ್ರೆ. ಅದರ ಸುತ್ತ ಏಳೆಂಟು ಜನ ಆ ಪಾತ್ರೆಯೊಳಗೆ ಬೇಯುತ್ತಿದ್ದ ಮುದ್ದೆಯೊಳಕ್ಕೆ ಒನಕೆಗಳನ್ನು ನೆಟ್ಟುಕೊಂಡು ತಿರುವುತ್ತಾ ಸುತ್ತು ಬರುತ್ತಿದ್ದಾರೆ!
ಅದರಾಚೆಗೆ ಮೂರಾಳು ಎತ್ತರದ ಮೂರು  ನಾಲ್ಕು ಅಡಿ ವ್ಯಾಸದ ಬಾವಿಯಂತಹಾ ತಾಮ್ರದ ಎರಡು ಪಾತ್ರೆಗಳು. ಅವುಗಳ ಒಳಗೆ ಕುದಿಯುತ್ತಿದ್ದ ಬೆರಕೆ ಕಾಳಿನ ಸಾರನ್ನು ಆ ಪಾತ್ರೆಗೆ ಅಳವಡಿಸಿದ್ದ ಎರಡು ಏಣಿಗಳಲ್ಲಿ ನಾಲ್ಕು ಜನ ಏರಿ ಹೋಗಿ, ಉದ್ದವಾದ ಬಲಿಷ್ಠ ಹಿಡಿಯ ದೊಡ್ಡ ತಾಮ್ರದ ಪಾತ್ರೆಯಂತಹಾ ಸೌಟುಗಳಲ್ಲಿ ತೋಡಿ ತೋಡಿ ಬುಡದಲ್ಲಿ ಸುತ್ತ ಇಟ್ಟಿದ್ದ ಹಂಡೆಗಳಿಗೆ ಸುರಿಯುತ್ತಿದ್ದಾರೆ.

ಎಂದೂ ಇಂತಹಾ ವ್ಯವಸ್ಥೆಯನ್ನು ಕಾಣದ ನಾನು ಕೆಲ ಕಾಲ ಮೈ ಮರೆತು ನಿಂತು ಬಿಟ್ಟಿದ್ದೆ….
ತುರಿಗಜ್ಜೆಗೆ ಪಾತ್ರೆಗಳ ಕಿಲುಬು ಕಾರಣವಾಗಿಬಹುದೆಂದು ಹುಡುಗರು ಮಾತಾಡಿಕೊಂಡಿದ್ದು ಕೇಳಿಸಿಕೊಂಡಾಗ ಇದೆಲ್ಲಾ ಮನಸ್ಸಿನಲ್ಲಿ ಕ್ಷಣ ಕಾಲ ಸುಳಿದು ಹೋಯಿತು.

ಮೊದ ಮೊದಲಿಗೆ ದೇಹದ ಚರ್ಮದ ಮೇಲೆ ಅಲ್ಲಲ್ಲಿ ಕಾಣಿಸಿಕೊಂಡ ಸಣ್ಣ ಸಣ್ಣ ತುರಿಗಜ್ಜೆ ಕ್ರಮೇಣ ಎಲ್ಲೆಡೆ ವ್ಯಾಪಿಸ ತೊಡಗಿದವು. ಅದೂ ದೇಹದ ಸಂದುಗಳು ಅವುಗಳ ನೆಲೆಗೆ ಸುರಕ್ಷಿತ ಸ್ಥಳವೆನಿಸಿಕೊಂಡಿತು. ಹೆಚ್ಚಾಗಿ ತೊಡೆ ಸಂಧಿಯಲ್ಲಿ ಗುಪ್ತ ಅಂಗಗಳನ್ನೂ ಬಿಡದಂತೆ ವ್ಯಾಪಿಸಿಕೊಂಡು ಕಿರಿಕಿರಿ ಮಾಡತೊಡಗಿದವು. ಹೊತ್ತು ಗೊತ್ತೆನ್ನದೆ ತುರಿಕೆಯ ಪ್ರತಾಪ ತೋರಿ ಹಿಂಸಿಸತೊಡಗಿದವು. ತರಗತಿಯಲ್ಲಿದ್ದಾಗ ಸಂದುಗೊಂದುಗಳಲ್ಲಿ ತುರಿಸಿ ಪೀಡಿಸುತ್ತಿದ್ದ  ತುರಿಗಜ್ಜಿಗಳನ್ನು ಕೆರೆದುಕೊಳ್ಳಲಾಗದೇ ಹಾಗೆಯೇ ಬೆಂಚಿನ ಮೇಲೆ ಹೊಣಕಾಡುತ್ತಾ ಮುಜುಗರ ಪಡುತ್ತಿದ್ದೆವು.

ಹೊರ ಬಂದಿದ್ದೇ ತಡ ಕಾಚದೊಳಗೆ ಕೈ ತೂರಿಸಿ ತುರಿಸುತ್ತಿದ್ದ ಎಲ್ಲೆಡೆ ಉಜ್ಜಿ ಉಜ್ಜಿ ಕರೆದುಕೊಳ್ಳುತ್ತಿದ್ದೆವು. ಆಗ ಒಂದು ಬಗೆಯ ನವೆ ಉಂಟಾಗಿ ಒಂದು ತರಹಾ ಹಿತಾನುಭವ ಉಂಟಾಗುತ್ತಿತ್ತು. ಹಾಗಾಗಿ ಕೆರೆತವನ್ನು ನಿಲ್ಲಿಸದೇ ಸತತವಾಗಿ ಉಜ್ಜುತ್ತಾ ಆ ಮುಖೇನ ಉಂಟಾಗುತ್ತಿದ್ದ ಹಿತಾನುಭವ ಅನುಭವಿಸುತ್ತಾ  ಹೋದಂತೆ ನವೆ ತಾರಕಕ್ಕೇರುತ್ತಿತ್ತು. ರಕ್ತ ಒಸರಿ ಬೆರಳುಗಳು ಒದ್ದೆಯಾದಾಗ ಭಯ ಬಿದ್ದು ಕೆರೆತ ನಿಲ್ಲಿಸುತ್ತಿದ್ದೆವು….
ಇನ್ನು ತಡ ಮಾಡುವುದು ಬೇಡ ಎಂದು ಶನಿವಾರ ಮಧ್ಯಾಹ್ನದ ಮೇಲೆ ಕ್ಯಾತ್ಸಂದ್ರ ಆಸ್ಪತ್ರೆಗೆ ಹೋಗುವುದೆಂದು ನಾನು ಹಾಗೂ ಬೋರೇಗೌಡ ನಿರ್ಧರಿಸಿದೆವು. ಜತೆಗೆ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಬೋರೇಗೌಡರ ಊರಿನ ಹುಡುಗ ಸುಬ್ಬೇಗೌಡನೂ ನಮ್ಮೊಂದಿಗೆ ಹೊರಟ.

ಡಾ.ತೋಪಯ್ಯನ ಗೇಲಿ ಮಾಡುವ ಸ್ವಭಾವ ನಮಗೆ ತಿಳಿದೇ ಇತ್ತು. ಕಳೆದ ವಾರವಷ್ಟೇ ನಮ್ಮ ಜಯನಿಲಯದ ರೂಮಿನಲ್ಲಿದ್ದ ಒಬ್ಬ ಕಾಲೇಜು ಹುಡುಗ ಮುಖದ ತುಂಬಾ ಮೊಡವೆಯಾಗಿವೆ ಎಂದು ಹೋಗಿದ್ದಾಗ ‘ಸದಾಶಿವನಿಗೆ ಅದೇ ಚಿಂತೆ’ ಅಂತಾರಲ್ಲ ಹಂಗೆ ಕಾಲೇಜಿಗೆ ಹೋಗೋ ನಿನಗೆ ಓದೋದು ಬಿಟ್ಟು ಯಾವಾಗಲೂ ಅದೇ ಚಿಂತೆ ಅಂತಾ ಕಾಣುತ್ತೆ. ಇದಕ್ಕೆ ಯಾವ ಔಷಧಿ ಕೊಡೋದು…. ಒಂದು ವಾರ ಯಾವುದಾದರೂ ಹುಡುಗಿ ಕರಕೊಂಡು ಎಲ್ಲಾದರೂ ಹೋಗಿ ತಿರುಗಾಡು…. ಮೊಡವೆಯೆಲ್ಲಾ ಮಾಯವಾಗಿ ಹೋಗ್ತಾವೆ’ ಎಂದು ಕಿಚಾಯಿಸಿ ಕೊನೆಯಲ್ಲಿ ಯಾವುದೋ ಮಾತ್ರೆ ಕೊಟ್ಟು ಕಳಿಸಿದ್ದ ವಿಷಯ ಇಡೀ ಜಯನಿಲಯದವರಿಗೆಲ್ಲಾ ತಿಳಿದಿತ್ತು.

ಚಡ್ಡಿಯೊಳಗಿನ ಈ ಪಡಿಪಾಟಲಿಗೆ ತೋಪಯ್ಯ ಇನ್ಯಾವ ಪರಿ ಗೇಲಿ ಮಾಡಿಯಾರೋ ಎಂದು ಮುಜುಗರ ಪಡುತ್ತಲೇ ಬೋರೇಗೌಡನನ್ನು ಮುಂದೆ ಬಿಟ್ಟುಕೊಂಡು ಡಾಕ್ಟರ ಬಳಿಗೆ ಹೋಗಿದ್ದೆವು.

ಬೋರೇಗೌಡನ ಮುಖಾಂತರ ನಮ್ಮ ಕಜ್ಜಿಯ ಅನುಭವಗಳನ್ನೆಲ್ಲಾ ಬಾಯಿ ಬಿಡಿಸಿದ ತೋಪಯ್ಯ ಡಾಕ್ಟರು ‘ಕಜ್ಜಿ ಕೆರೆಯುವಾಗ ಬಹಳ ಒಳ್ಳೆಯ ಹಿತಾನುಭವ ಆಗುತ್ತೆ ಅಲ್ವಾ. ಕಜ್ಜಿ ವಾಸಿ ಮಾಡಿಕೊಂಡು ಅಂತಾ ಸಂತೋಷ ಯಾಕೆ ಹಾಳು ಮಾಡಿಕೊಳ್ತೀರಿ? ಇನ್ನೊಂದಷ್ಟು ಕಾಲ ಇರ್ಲಿ ಬಿಡಿ. ಹಾಗೇ ಕೆರಿತಾ ಖುಷಿ ಪಡಬಹುದಲ್ವಾ’? ಎಂದು ಗೇಲಿ ಮಾಡಿದ್ದರು. ಕೊನೆಗೆ ಕಾಂಪೌಂಡರಿಗೆ ಹೇಳಿ ಒಂದು ಹಳದಿ ಬಣ್ಣದ ಮುಲಾಮುಕೊಡಿಸಿ ‘ಬಟ್ಟೆಯೆಲ್ಲಾ ಬಿಚ್ಚಿ ಹಾಕಿ, ಒಂಚೂರೂ ಜಾಗ ಬಿಡದಂತೆ ಇಡೀ ಮೈಗೆಲ್ಲಾ ತಿಕ್ಕಿಕೊಂಡು ಬಿಸಿಲಿನಲ್ಲಿ ಎರಡು ಗಂಟೆ ನಿಂತು ಚೆನ್ನಾಗಿ ಒಣಗಿಸಿಕೊಂಡು ನಂತರ ಸ್ನಾನ ಮಾಡಿ’ ಎಂದು ಹೇಳಿ ಕಳಿಸಿದ್ದರು.

ಮರುದಿನ ಭಾನುವಾರ.
ನಮ್ಮ ಕಜ್ಜಿ ಸಂಹಾರ ಯಾಗಕ್ಕೆ ಪ್ರಶಸ್ತ ದಿನ. ಬೆಳಗೆ ಹತ್ತೂವರೆಗೆಲ್ಲಾ ಮುದ್ದೆ ಉಂಡು, ಕೈಯಲ್ಲಿ ಮುಲಾಮಿನ ಡಬ್ಬಿಗಳನ್ನು ಹಿಡಿದು ಮೆಟ್ಟಿಲುಗಳನ್ನು ಏರಿ ಸಿದ್ದಲಿಂಗೇಶ್ವರ ಗುಡಿ ದಾಟಿ ಅದರ ನೆತ್ತಿಯ ಬಂಡೆಯ ಬೆಟ್ಟಕ್ಕೆ ಏರಿಕೊಂಡೆವು.

ಸ್ಥಳ ನಿರ್ಜನವಾಗಿ ನಮ್ಮ ಯಾಗಕ್ಕೆ ಬಹಳ ಅನುಕೂಲಕರವಾಗಿತ್ತು. ಆಗಸದಲ್ಲಿ ಸೂರ್ಯ ನಡು ನೆತ್ತಿಯ ಕಡೆಗೆ ಚಲಿಸುತ್ತಿದ್ದ. ನಾವು ಏರಿ ಬಂದಿದ್ದ ಬೆಟ್ಟದ ಇನ್ನೊಂದು ಬದಿಯಲ್ಲಿ  ರಸ್ತೆಯೊಂದು ದೇವರಾಯನ ದುರ್ಗದ ಕಡೆಯಿಂದ ಬಂಡೆಪಾಳ್ಯದ ಕಡೆಗೆ ಹರಿಯುತ್ತಿದ್ದು ಅ ಉರಿ ಬಿಸಲಿನಲ್ಲಿ ಅದೂ ನಿರ್ಜನವಾಗಿತ್ತು.
ನಾವು ಮಠದ ಕಡೆಗೆ ದೂರವಾಗಲೆಂದು ಬೆಟ್ಟದ ಇನ್ನೊಂದು ತುದಿಗೆ ಬಂದು ಬಿಟ್ಟಿದ್ದೆವು. ನಾವು ನಿಂತಿದ್ದ ಜಾಗಕ್ಕೂ ಬೆಟ್ಟದ ಬುಡಕ್ಕೂ ಕೇವಲ ಮೂರು ನಾಲ್ಕು ಆಳು ಆಳ ಅಷ್ಟೇ. ಬುಡದ ಸಮತಟ್ಟಾದ ನೆಲದ ಮೇಲೆ ಬೆಟ್ಟದ ತಣ್ಣೆಳಲು ಹರಡಿಕೊಂಡಿತ್ತು. ಅಲ್ಲಿಂದ ಒಂದೆರಡು ಮೆಟ್ಟಲಂತದ್ದನ್ನು ಇಳಿದರೆ ಅದೇ ರಸ್ತೆ.
ನಾವು ಮೂವರು ಒಂದೊಂದು ಸಣ್ಣ ಸಣ್ಣ ಬಂಡೆಯನ್ನು ಆಯ್ದುಕೊಂಡು, ಅವುಗಳ ಮರೆಗೆ ನಿಂತು ತುರಿಗಜ್ಜಿ ನಿರ್ಮೂಲನಾ ಕಾರ್ಯಕ್ಕೆ ಸಿದ್ಧರಾಗ ತೊಡಗಿದೆವು.

ಅಂಗಿ, ಚಡ್ಡಿ, ಒಳಗಿನ ಕಾಚ ಎಲ್ಲವನ್ನು ಒಂದೊಂದಾಗಿ ಕಳಚಿ ನಿರ್ವಾಣ ಸ್ಥಿತಿ ತಲುಪಿದೆವು. ಈಗ ನಾವು ಬೆಟ್ಟದ ಮೇಲಿನ ಬಯಲಿನಲ್ಲಿ ಸಂಪೂರ್ಣ ಬೆತ್ತಲು. ನಮ್ಮ ಮೈಯನ್ನ ಸಂಪೂರ್ಣ ಬೆತ್ತಲಾಗಿ ಸಾವಕಾಶವಾಗಿ ನೋಡಿಕೊಂಡದ್ದು ಅದುವರೆಗೆ ಇರಲೇ ಇಲ್ಲ. ಶ್ರವಣಬೆಳಗೊಳದ ನೆತ್ತಿಯಲ್ಲಿ ಗಂಭೀರವಾಗಿ ನಿಂತ ಬಾಹುಬಲಿಯ ವಿಗ್ರಹ ನೆನಪಾಗಿ ನಮ್ಮಲ್ಲಿ ನಾವೇ ವಿಸ್ಮಯಗೊಳ್ಳ ತೊಡಗಿದೆವು. ಯಾವ ಸಂದೂ ಬಿಡದೆ, ತೋಪಯ್ಯ ಹೇಳಿದ್ದಂತೆ, ಹಳದಿ ಮುಲಾಮನ್ನು ಮೈ ತುಂಬಾ ಹಚ್ಚಿ, ಉರಿಯುತ್ತಿದ್ದ ಸೂರ್ಯ ಕಿರಣಗಳ ಶಾಖಕ್ಕೆ ಮೈ ಒಡ್ಡಿ ಬಂಡೆಯ ಮರೆಯಲ್ಲಿ ನಿಂತು ತಗ್ಗಿನಲ್ಲಿ ಕಾಣುವ ವಿಶಾಲ ಪರಿಸರವನ್ನು ವೀಕ್ಷಿಸುತ್ತಾ ನಿಂತಿದ್ದೆವು.
ದೂರದಲ್ಲಿ ದೇವರಾಯನದುರ್ಗದ ಕಡೆಯ ರಸ್ತೆಯ ತಿರುವಿನಲ್ಲಿ ಹೆಣ್ಣು ಗಂಡಿನ ಜೋಡಿಯೊಂದು ಪ್ರತ್ಯಕ್ಷವಾಗಿ ನಮ್ಮ ದಿಕ್ಕಿಗೇ ನಡೆದು ಬರತೊಡಗಿದರು.

ನಡೆಯುತ್ತಾ ಸಮೀಪಿಸಿದರು. ಈಗ ನಾವು ನಿಂತಿದ್ದ ಸ್ಥಳದಿಂದ ಅವರ ನೆತ್ತಿ ಕಾಣುವಂತಿತ್ತು. ಗಂಡು ಬಿಳಿಯ ಹೊಸ ಅಂಗಿ, ಪಂಚೆ ಧರಿಸಿದ್ದ ಕೈಯಲ್ಲಿರುವ ಹೊಸ ಎಚ್‌ಎಂಟಿ ವಾಚನ್ನು ತೋರಿಸಿಕೊಳ್ಳುವವನಂತೆ ಎಡಗೈಯ ಮಣಿ ಕಟ್ಟನ್ನು ಆಗಾಗ ತಿರುವುತ್ತಿದ್ದ. ಹೆಗಲ ಮೇಲಿನ ಹೊಸ ಟವಲನ್ನು ಮತ್ತೆ ಮತ್ತೆ ತೆಗೆದು ಹಾಕಿಕೊಳ್ಳುತ್ತಿದ್ದ.
ಹೆಣ್ಣೂಅಷ್ಟೆ. ಹೊಸ ಸೀರೆ ರವಿಕೆ ಧರಿಸಿದ್ದಳು. ಕೈ ತುಂಬಾ ಗಾಜಿನ ಬಳೆ. ಕೊರಳಲ್ಲಿ ತಾಳಿ, ಚೈನು. ಮುಡಿಯಲ್ಲಿ ಹೂವು.

ಹೊಸದಾಗಿ ಮದುವೆಯಾದ ರೈತ ಜೋಡಿ ಎಂಬುದು ಎಂತವರಿಗು ತಿಳಿಯುವಂತಿತ್ತು.

ಬಿಸಿಲಲ್ಲಿ ನಡೆದ ಯುವತಿ ಸೊರಗಿದ್ದಳು. ಸೆರಗಿನಿಂದ ಹಣೆಯ ಬೆವರು ಒರೆಸಿಕೊಳ್ಳುತ್ತಾ, ನಾಲ್ಕು ಹೆಜ್ಜೆ ಮೇಲೆ ತಳಾರದಲ್ಲಿ ಚಾಚಿಕೊಂಡಿದ್ದ ಬೆಟ್ಟದ ನೆರಳನ್ನು ಆಸೆಯಿಂದ ನೋಡಿದಳು.

‘ನಡಿ ಸುಧಾರಿಸಿಕೊಂಡು ಹೋಗೋಣ’ ಎಂದು ಗಂಡು ಬೆಟ್ಟದ ಬುಡದ ನೆರಳಿನ ಕಡೆಗೆ ನಡೆದು ಬಂದ. ಅವಳು ಹಿಂಬಾಲಿಸಿದಳು.

ನೆರಳಿನಲ್ಲಿ ಕುಳಿತ ಗಂಡು ತನ್ನ ಹೊಸ ಟರ್ಕಿ ಟವಲಿನಿಂದ ದೇಹದ ಬೆವರೊರೆಸಿಕೊಳ್ಳತೊಡಗಿದ. ಅವಳೂ ನಾಚುತ್ತಾ ಅವನ ಬಳಿ ತುಸು ಅಂತರದಲ್ಲಿ ಕುಳಿತುಕೊಂಡಳು.

ನೆರಳು ಅವರಿಗೆ ಬಹಳ ಆಪ್ಯಾಯಮಾನವೆನಿಸಿತು. ಅವನು ಹಾಗೆಯೇ ನೆಲಕ್ಕೊರಗಿ ಕೈಯನ್ನು ತಲೆಯಡಿಗಿರಿಸಿ ಆರಾಮವಾಗಿ ಮಲಗಿದ. ಅವಳೂ ಅವನನ್ನು ಅನುಸರಿಸಿದಳು. ಈಗ ಅವರು ಕೇವಲ ಒಂದು ಅಡಿ ಅಂತರದಲ್ಲಿ ಪರಸ್ಪರ ಅಭಿಮುಖರಾಗಿ ಮಲಗಿದ್ದರು.

ನಗುನಗುತ್ತಾ ಪರಿಸ್ಪರರು ಮುಖಾರವಿಂದಗಳನ್ನು ಅವಲೋಕಿಸಿಕೊಂಡರು. ಪಿಸಿ ಪಿಸಿ ಮಾತಾಡಿಕೊಂಡರು. ಕುಸುಕುಸು ನೆಗಾಡಿಕೊಂಡರು. ಅವನು ವಾಚು ಕಟ್ಟಿದ್ದ ಎಡಗೈಯನ್ನು ಅವಳೆಡೆಗೆ ಸರಿಸಿದ. ಆಕೆ ವಾಚನ್ನು ಮುಟ್ಟುವ ನೆಪದಲ್ಲಿ ಕೈಯನ್ನು ಆಸೆಯಿಂದ ಸವರಿದಳು.

ಅವನು ಸೊಂಟವನ್ನು ಮೇಲೆತ್ತಿ ಅರ್ಧ ಕುಳಿತ ಭಂಗಿಯಲ್ಲಿ ಸುತ್ತಲೂ ಕಣ್ಣು ಹಾಯಿಸಿದ. ಸುತ್ತಲ ಪರಿಸರ ಯಥಾ ಪ್ರಕಾರ ನಿರ್ಜನವಾಗಿತ್ತು. ಬಲು ದೂರದಲ್ಲಿ ಕುರಿಗಾಹಿಗಳ ಕೂಗು ಕ್ಷೀಣವಾಗಿ ಕೇಳುತ್ತಿತ್ತು. ಮತ್ತೆ ನೆಲಕ್ಕೆ ಬೆನ್ನು ಹಾಕಿ ಮಲಗಿದ. ಅವಳತ್ತ ತಿರುಗಿ ನಸುನಗುತ್ತಾ ನಯವಾಗಿ ಅವಳ ತೊಡೆಯ ಮೇಲೆ ಹೊಡೆದ. ಅವಳು ಅವನೆಡೆಗೆ ತುಸು ತುಸುವೇ ಸರಿಯ ತೊಡಗಿದಳು.

ಯೌವನಕ್ಕೆ ಹೊಸದಾಗಿ ಕಾಲಿಟ್ಟಿದ್ದ ನಾವು ಕಣ್ಣೆದುರಿಗೇ ಅವರ ಈ ರೀತಿಯ ಕೇಳಿಯನ್ನು ಕಂಡು ವಿಸ್ಮಿತರಾಗಿದ್ದೆವು. ಬಂಡೆಯ ಮರೆಯಲ್ಲಿ ಬೆತ್ತಲೆ ನಿಂತು ಇದನ್ನೆಲ್ಲಾ ತಲ್ಲೀನರಾಗಿ ನೋಡುತ್ತಿದ್ದ ನಾವು ಮೈ ಮನಸ್ಸನ್ನೆಲ್ಲಾ ಬಂಡೆಯಂತಾಗಿಸಿಕೊಂಡಿದ್ದೆವು.
ಮುಂದೇನಾಗುವುದೋ! ಮನಸ್ಸಿನಲ್ಲಿ ಗಾಬರಿಯಾಗ ತೊಡಗಿತು!

ನಮ್ಮೊಂದಿಗೆ ಬಂದಿದ್ದ ಹುಡುಗನನ್ನು ಮರೆತೇ ಬಿಟ್ಟಿದ್ದೆವು. ಗಂಡು ಅವಳ ಬಳಿ ಇನ್ನಷ್ಟು ಸಮೀಪಿಸಿದ. ಕಾಲಂದುಗೆಯನ್ನು ಮೆಲ್ಲಗೆ ಸವರಿ ಗಲ್‌ ಗಲ್‌ ಎಂದು ಮೆಲ್ಲಗೆ ಸದ್ದು ಹೊರಡಿಸಿದ. ಕಾಲಿನವರೆಗೂ ಮುಚ್ಚಿಕೊಂಡಿದ್ದ ಸೀರೆಯ ಅಂಚು ಕೈಗೆ ತಾಕಿತು. ಅಂಚನ್ನು ಹಿಡಿದು ಮೇಲೆ ಮೇಲೆ ಸರಿಸತೊಡಗಿದ. ಯುವತಿ ಸೊಂಟದವರೆಗೂ ನಗ್ನಳಾದಳು…..

ಪಕ್ಕದ ಬಂಡೆಯ ಮರೆಯಲ್ಲಿ ನಿಂತಿದ್ದ ಹುಡುಗ ಭಯದಿಂದ ಕಿಟಾರನೆ ಕಿರುಚಿದ. ನಾವು ವಾಸ್ತವಕ್ಕೆ ಬಂದೆವು. ಬೋರೇಗೌಡ ಎದ್ದು ಓಡಿ ಹೋಗಿ ಹುಡುಗನ ತೆರೆದ ಬಾಯನ್ನು ಮುಚ್ಚಿ ಹಿಡಿದುಕೊಂಡ.
ನಮಗೆ ತಪ್ಪಿತಸ್ಥ ಭಾವನೆ ಕಾಡತೊಡಗಿತು. ಅವರು ಗಡಬಡಿಸಿ ಎದ್ದರು. ನಮ್ಮೆಡೆಗೇನಾದರೂ ಕತ್ತೆತ್ತಿ ನೋಡಿದರೆ ಎದುರಿಸುವುದು ಹೇಗೆ ಎಂದು ತಿಳಿಯದಾಯಿತು. ಅವರು ನಮ್ಮೆಡೆಗೆ ನೋಡಲಿಲ್ಲ. ದುಡದುಡನೆ ರಸ್ತೆಗಿಳಿದು ಬಂಡೆಪಾಳ್ಯದ ದಿಕ್ಕಿಗೆ ನಡೆಯ ತೊಡಗಿದರು.

ಬಟ್ಟೆ ತೊಟ್ಟು ಕೊಂಡ ನಾವು ಯಾವುದೋ ಘನಘೋರ ತಪ್ಪು ಎಸಗಿದವರಂತೆ ಬೆಟ್ಟದ ಇನ್ನೊಂದು ತಗ್ಗಿಗೆ ಇಳಿಯ ತೊಡಗಿದೆವು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

August 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: