ನಿನ್ನೆಯ ಅವಧಿಯಲ್ಲಿ ಪ್ರಕಟವಾಗಿದ್ದ ದಿನೇಶ್ ಅಮೀನ್ ಮಟ್ಟು ಅವರ ಲೇಖನ ‘ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..’ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.
ತಿರುಮಲೇಶ್ ಇದಕ್ಕೆ ಪ್ರತಿಕ್ರಿಯಿಸಿ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದಿದ್ದರು. ಅದು ಇಲ್ಲಿದೆ.
ಇದಕ್ಕೆ ಬಿ ಎಸ್ ಲಿಂಗರಾಜು ಪ್ರತಿಕ್ರಿಯೆ ಹಾಗೂ ಕೆ ವಿ ತಿರುಮಲೇಶ್ ಕೊಟ್ಟಿರುವ ಉತ್ತರ ಇಲ್ಲಿದೆ. ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ
ಓರ್ವ ಸಾಹಿತಿ ಓದುಗನಿಗೆ ತಲುಪಬೇಕಾದರೆ ಪದಗಳ ಪೋಣಿಸುವಿಕೆಯ ಪಾಂಡಿತ್ಯ ಬೇಕಾ ಅಥವಾ ತಾನು ಏನು ಹೇಳುತ್ತಿದ್ದೇನೆ ಎಂಬುದರ ಧ್ವನಿಯನ್ನು ಪದಗಳ ಮೂಲಕ ಓದುಗನಿಗೆ ತಲುಪಬೇಕಾ ಎಂಬ ಸಾರ್ವಕಾಲಿಕ ಪ್ರಶ್ನೆಯೊಂದಿದೆ.
ದಿನೇಶ್ ರವರು ಶ್ರೀನಿವಾಸ ಕಾರ್ಕಳ ಮತ್ತು ಸುರೇಶ್ ಭಟ್ ಬಾಕ್ರಬೈಲು ಆವರ ಬಗ್ಗೆ ಬರೆಯುವಾಗ ಬಳಸಿದ ಬೊಳುವಾರ ಪಾತ್ರದ ಬಗ್ಗೆ ತಿರುಮಲೇಶ್ ರವರು ಶೇಕ್ಸ್ಪಿಯರ್ ನನ್ನು ಎಳೆದು ತಂದು ಒಂದು ಸೈದ್ಧಾಂತಿಕ ಮುಖಾಮುಖಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕೋಮುವಾದದ ನಿರ್ಮೂಲನೆ ಮಾಡಲು ಸಂಘರ್ಷಕ್ಕಿಂತ ಸೌಹಾರ್ದತೆ ಮೂಡಿಸುವ ಕೆಲಸ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಬೊಳುವಾರರು ವೈಯಕ್ತಿಕ ಸುಖ ನೋಡಿಕೊಂಡು ಸುಖವಾಗಿದ್ದಾರೆ ಎಂಬ ದಿನೇಶರ ಮಾತುಗಳ ಹಿಂದಿನ ಧ್ವನಿ ನನಗೆ ಕೇಳಿಸಿದ್ದು ಹೀಗೆ.. ಪುಸ್ತಕಗಳಲ್ಲಿ ಬರೆಯುವುದು ಒಂದಾದರೆ, ನಾವು ಸಾಹಿತ್ಯದಲ್ಲಿ ಪ್ರತಿಪಾದಿಸಿದ ಸೌಹಾರ್ದತೆಗೆ ಧಕ್ಕೆ ಬಂದಾಗ ಮತ್ತೊಂದು ಕೃತಿ ರಚಿಸುವುದೋ ಅಥವಾ ಅ ಸೌಹಾರ್ದತೆ ಉಳಿಸಿಕೊಳ್ಳಲು ಅನಿವಾರ್ಯವಾದರೆ ಸಂಘರ್ಷಕ್ಕೆ ಬೇಕಾದರೂ ಇಳಿಯಲು ಸಿದ್ಧವಾಗಿರುವುದೋ ಎಂದು ಹೇಳುತ್ತಿದ್ದಾರೆ ಎನಿಸಿತು.
ಕೋಮುವಾದ ಎಂದಾಗ ನಮಗೆ ನೆನಪಾಗುವುದು ಪ್ರಯೋಗಶಾಲೆಯಾದ ದಕ್ಷಿಣ ಕನ್ನಡ. ಅಲ್ಲಿ ಕೋಮು ಸೌಹಾರ್ದತೆ ಕಾಪಾಡಿಕೊಳ್ಳಲು ಸಾಹಿತ್ಯದಷ್ಟೇ ಸಂಘರ್ಷದ ಅನಿವಾರ್ಯತೆಯೂ ಇದೆ. ಸಂಘರ್ಷವೆಂದರೆ ಅದು ತಲವಾರು, ಬಂದೂಕು, ಚಾಕು ಹಿಡಿಯುವುದಲ್ಲ.
ಬಹುಶಃ ತಿರುಮಲೇಶ್ ರವರಿಗೂ ಗೊತ್ತಿರಬಹುದಾದ ಶಹಜಾದೆ 2001 ಕಾರ್ಯಕ್ರಮವನ್ನು ಇಲ್ಲಿ ಪ್ರಸ್ತಾಪಿಸುವುದು ಉತ್ತಮ ಎನಿಸುತ್ತಿದೆ. ಏಕೆಂದರೆ ದಿನೇಶ್ ರವರ ಇಡೀ ಬರಹದಲ್ಲಿ ಕಾಣಿಸಿದ್ದು ಅಥವಾ ಮಂಗಳೂರಿನಲ್ಲಿ ನಡೆದ ಜನನುಡಿಯಲ್ಲಿ ಇಡೀ ಕಾರ್ಯಕ್ರಮದಲ್ಲಿ ನನಗೆ ಆನುರಣಿಸಿದ್ದು ಆ ಶಹಜಾದೆ 2001 ನೆನಪು. ತಿರುಮಲೇಶ್ ರವರ ಇಡೀ ಪ್ರತಿಕ್ರಿಯೆಗೆ ಉತ್ತರವೂ ಅದೇ ಶಹಜಾದೆ 2001.
1994ರಲ್ಲಿ ಬೋಸ್ನಿಯಾದ ರಾಜಧಾನಿ ಸರಹೇವೋದ ಮೇಲೆ ಬಾಂಬುಗಳ ಸುರಿಮಳೆಯಾಗುತ್ತಿದ್ದಾಗ ಆಮ್ಸ್ಟರ್ಡಾಮಿನ ರಂಗಕರ್ಮಿಗಳ ಒಂದು ತಂಡ ಸರಹೇವೋದ ಹಾಗೂ ಯುರೋಪಿನ ಎಲ್ಲ ನಗರಗಳ ರಂಗಮಂದಿರಗಳಲ್ಲಿ ಯುದ್ಧ ಮುಗಿಯುವವರೆಗೂ ಪ್ರತಿ ಶುಕ್ರವಾರ ಏಕಕಾಲದಲ್ಲಿ ಗಟ್ಟಿಯಾಗಿ ಓದುವುದಕ್ಕಾಗಿ ಯುರೋಪಿನ ವಿಭಿನ್ನ ಲೇಖಕರಿಂದ ಕತೆಗಳನ್ನು ಆಹ್ವಾನಿಸಿತು.
ಅದು ವಿನಾಶದ ವಿರುದ್ಧ ಕತೆ ಹೇಳುವ ಕಲೆಯನ್ನು, ನಿಜವಾದ ಸಾವಿನ ವಿರುದ್ಧ ಕಾಲ್ಪನಿಕ ಬದುಕನ್ನು ಎತ್ತಿಕಟ್ಟಿದಂಥ ಕಾರ್ಯಕ್ರಮ. ಅದರಿಂದ ಎಷ್ಟು ಜೀವ ಉಳಿದವೋ ಗೊತ್ತಿಲ್ಲ. ಆದರೆ ಆ ಕಾರ್ಯಕ್ರಮಕ್ಕೆ ಸ್ಫೂರ್ತಿ ಒದಗಿಸಿದ ಪುಸ್ತಕ ಒಂದು ಸಾವಿರದೊಂದು ರಾತ್ರಿಗಳು. ರಂಗಕರ್ಮಿಗಳ ತಂಡ ಆ ಕಾರ್ಯಕ್ರಮಕ್ಕೆ ನೀಡಿದ ಶೀರ್ಷಿಕೆ: ಶಹಜಾದೆ 2001.
–ಬಿ ಎಸ್ ಲಿಂಗರಾಜು
ಶೇಕ್ಸ್ ಪಿಯರನ್ನ ನಾನು ಎಳೆದು ತಂದಿಲ್ಲ ಲಿಂಗರಾಜು ಅವರೇ! ಇದೆಂಥಾ ಮಾತು! ಅವನು ಮತ್ತು ನನ್ನ ಪ್ರತಿಕ್ರಿಯೆಯಲ್ಲಿ ಹೆಸರಿಸಿದ ಹಲವರು (ಬೊಳುವಾರು ಕೂಡ) ನನ್ನೊಳಗೇ ಇದ್ದಾರೆ, ನನ್ನ ಮನೋಭೂಮಿಕೆಯ ಭಾಗವಾಗಿ. ಅದಲ್ಲವೆಂದಾದರೆ ನಾನು ಓದಿ ಕಲಿತದ್ದಕ್ಕೆ, ಹಲವಾರು ವರ್ಷ ಕಲಿಸಿದ್ದಕ್ಕೆ ಏನು ಪ್ರಯೋಜನ? ಮುತಾಲಿಕರ ಸೇನೆ ಹೆಣ್ಣುಮಕ್ಕಳನ್ನು ಬಾರಿನಿಂದ ಹೊರಕ್ಕೆಳೆದು ಹಾಕಿದಾಗ, ಅದರ ವಿರುದ್ಡವೂ ಬರೆದಿದ್ದೆ.
ಸ್ತ್ಫೀಯರ ಕುರಿತು ನಿಮಗೆ ಅಷ್ಟೊಂದು ಕಾಳಜಿಯಿದ್ದರೆ ಅವರಿಗೋಸ್ಕರ ಶಿಕ್ಷಣ ಸಂಸ್ಥೆ ನಡೆಸಿ, ಹಾಸ್ಟೆಲ್ ಕಟ್ಟಿಸಿ ಎಂದಿದ್ದೆ.
ನನ್ನ ಮಾತು ನಿಮಗೆ ಅಗತ್ಯವಿಲ್ಲ ಎಂದು ಗೊತ್ತಾಯಿತು.
`ಹಾಗಿದ್ದರೆ ಯಾರೂ ಮಾತಾಡುವುದು ಬೇಡವೆ?’ ಈ ಉದ್ಧರೆಣೆ ಕೂಡ ಶೇಕ್ಸ್ ಪಿಯರನದು! (ರೋಮಿಯೋ ಎಂಡ್ ಜೂಲಿಯೆಟ್)
ನಿಮಗೆ ಯಶಸ್ಸು ಬಂದರೆ ನನಗೆ ಸಂತೋಷವೇ. ನೀವು ಸೋಲುವುದನ್ನು ಯಾರೂ ಬಯಸುವುದಿಲ್ಲ. ಆದರೆ ನಿಮ್ಮ ಗುರಿ ಸ್ಪಷ್ಟವಿರಲಿ, ಹಾಗೂ ಇಂಕ್ಲೂಸಿವ್ ಮತ್ತು ಪಾಸಿಟಿವ್ ಆಗಿರಲಿ ಎಂದು ಹಾರೈಸುವೆ.
-ಕೆ.ವಿ. ತಿರುಮಲೇಶ್
'ಹಾಗಿದ್ದರೆ ಯಾರೂ ಮಾತಾಡುವುದು ಬೇಡವೆ?'




ನೆಮ್ಮದಿಯುತ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಮಾತನಾಡಬೇಕು…
ನನ್ನ ಪ್ರತಿಕ್ರಿಯೆಗೆ ಉತ್ತರಿಸಿದ್ದಕ್ಕೆ ಧನ್ಯವಾದಗಳು. ನನ್ನ ಪ್ರತಿಕ್ರಿಯೆಯಲ್ಲಿ ಮುಖ್ಯವಾಗಿರುವುದು ಬರೆದು ಬರೆದು ಪ್ರತಿಕ್ರಿಯಿಸುವುದರಲ್ಲಿಯೇ ಜವಬ್ದಾರಿಯನ್ನು ಸೀಮಿತವಾಗಿಬಿಡುವುದಕ್ಕೆ ನನ್ನ ಆಕ್ಷೇಪವಿರುವುದು. ಅನಿವಾರ್ಯವಾದರೆ ಬೀದಿಗೂ ಬರಬೇಕು. ಮುತಾಲಿಕರ ಸೇನೆಯ ಕೆಲಸಗಳ ವಿರುದ್ಧ ಬರೆದರಷ್ಟೇ ಸಾಕೆ ಎಂಬುದಷ್ಟೇ ನನ್ನ ಆಕ್ಷೇಪ. ಕಾನೂನು ಒಂದರಿಂದ ಮಾತ್ರ ಸೌಹಾರ್ದ ನೆಲಸುವುದಿಲ್ಲ ಎಂಬ ಮಾತು ಪೂರ್ಣ ಸತ್ಯವಲ್ಲ ಎಂಬುದ ನಿಜ. ಆದರೆ ಪ್ರಜಾಪ್ರಭುತ್ವದಲ್ಲಿ ಅದು ಒಂದು ಮಾರ್ಗವಲ್ಲ. ಸಂಘರ್ಷವಿಲ್ಲದೆ ಇಡೀ ಜಗತ್ತಿನಲ್ಲೇ ಇಡೀ ಸಮಾಜಕ್ಕೆ ಹಿತ ಎನಿಸುವುದು ಯಾವುದು ಬಂದಿದೆ ಹೇಳಿ. ಬರೆಯುವುದರಿಂದಲೇ ಸೌಹಾರ್ದತೆ ನೆಲಸುವುದಾದರೆ ಇಷ್ಟೊತ್ತಿಗೆ ನಮ್ಮದು ಸೌಹಾರ್ದಯುತ ಸಮಾಜ ಆಗಿಬಿಡುತ್ತಿತ್ತು. ಈ ಅಸಹಿಷ್ಣುತೆ ಎಂಬುದೇ ಇರುತ್ತಿರಲಿಲ್ಲ. ಸಂಘರ್ಷ ಮಾತ್ರವೇ ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸಬಲ್ಲುದು ಎಂಬ ಅಂಧಾನುಕರಣೆಯೂ ನಮ್ಮದಲ್ಲ. ಪ್ರತಿರೋಧ ಎಂಬುದು ಅಗತ್ಯ. ಬರವಣಿಗೆ ಜೊತೆಗೆ ಸಂಘರ್ಷವೂ ಮುಖ್ಯ. ಯಾವ ಸಂದರ್ಭದಲ್ಲಿ ಯಾವುದನ್ನು ಬಳಸಬೇಕು ಎಂಬ ವಿವೇಚನೆ ಮುಖ್ಯ ಎಂಬುದು ನನ್ನ ತಿಳಿವಳಿಕೆ.
ನೀವು ಉದಾಹರಣೆ ನೀಡಿದ ಮುತಾಲಿಕರ ಸೈನ್ಯದ ಕೆಲಸದ ಬಗ್ಗೆಯೇ ತೆಗೆದುಕೊಳ್ಳೋಣ. ಸ್ತ್ರೀಯರ ಬಗ್ಗೆ ಗೌರವ ಇದ್ದರೆ ಅವರು ಪಬ್ಗೆ ನುಗ್ಗುತ್ತಲೇ ಇರಲಿಲ್ಲ. ಪಬ್ ಸಂಸ್ಕೃತಿ ಬಗ್ಗೆ ಹೋರಾಟ ನಡೆಸುತ್ತಿದ್ದರು. ಆದರೆ ಪಬ್ ಇರಬೇಕು, ಆದರೆ ಸ್ತ್ರೀಯರು ಮಾತ್ರ ಅಲ್ಲಿಗೆ ಹೋಗುವಂತಿಲ್ಲ ಎಂಬುದು ಅವರ ನಿಲುವು. ಇನ್ನು ಅವರು ಹಾಸ್ಟೆಲ್ ಕಟ್ಟಿಸಿದರೆ ಗತಿ ಏನಾಗಬಹುದು ?. ಇಂತಹ ವೇಳೆ ಬರವಣಿಗೆಯ ಪ್ರತಿರೋಧ ಬೇಕೋ ಅಥವಾ ಪ್ರತಿಭಟನೆಯ ಪ್ರತಿರೋಧ ಬೇಕೋ ಎಂಬ ಆಯ್ಕೆ ಮುಖ್ಯ. ನೀವು ಬರವಣಿಗೆ ಪ್ರತಿರೋಧ ತೋರಿದ್ದೀರಿ. ಅಲ್ಲಿಗೆ ಮುತಾಲಿಕರ ಸೈನ್ಯ ಸುಮ್ಮ,ನಾಯಿತೇ. ಅವರು ತಮ್ಮ ಕೆಲಸ ಮುಂದುವರಿಸಿದರು. ಆದರೆ ನೀವು ಸುಮ್ಮನಾದಿರಿ. ಹೀಗಾಗಿ ಬರವಣಿಗೆಯ ಪ್ರತಿರೋಧ ದುರ್ಬಲ ಎನಿಸಿದಾಗ ಮುಂದಿನ ಹಂತ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗ ನೀವೂ ಕೂಡ ಆ ಮುಂದಿನ ಹಂತದಲ್ಲಿ ಕೂಡಿಕೊಳ್ಳಬೇಕು ಎಂಬುದು ನನ್ನ ಪ್ರತಿಕ್ರಿಯೆಯ ಆಶಯ.
ಸರಳವಾಗಿ ಹೇಳಬೇಕೆಂದರೆ ಜ್ವರಕ್ಕೆ ಇಂಜೆಕ್ಷನ್, ಒಂದಷ್ಟು ಅಂಟಿಬಯೋಟಿಕ್ ಸಾಕಾಗಬಹುದು. ಆದರೆ ಕ್ಯಾನ್ಸರ್ಗೆ ಆಪರೇಷನ್ ಅಥವಾ ತೀವ್ರ ಚಿಕಿತ್ಸೆ ಜೊತೆಗೆ ಇಂಜೆಕ್ಷನ್, ಅಂಟಿಬಯೋಟಿಕ್ ಎಲ್ಲವೂ ಬೇಕಾಗುತ್ತದೆ. ಕೋಮುವಾದ ಕೇವಲ ಜ್ವರವಾಗಿ ಉಳಿದಿಲ್ಲ. ಕ್ಯಾನ್ಸರ್ ಆಗಿ ಬೆಳೆದಿದೆ. ಅದಕ್ಕೆ ಕೇವಲ ಇಂಜೆಕ್ಷನ್, ಅಂಟಿಬಯೋಟಿಕ್ ಮಾತ್ರ ಸಾಲುವುದಿಲ್ಲ.
ನನ್ನಂತವರ ಯಶಸ್ಸು ನಿಮಗೆ ಸಂತೋಷ ತರಲೇ ಬೇಕು. ಯಾಕೆ ಗೊತ್ತ ನೀವೂ ಕೂಡ ಭಾರತವನ್ನು ನನ್ನಂತೆ ಪ್ರೇಮಿಸುವ ಭಾರತೀಯ ಎಂಬುದು. ನನ್ನ ಗೆಲುವು ಈ ಭಾರತದ ಗೆಲುವು. ನಮ್ಮ ಗುರಿ ಸ್ಪಷ್ಟವಾಗಿ ಪಾಸಿಟಿವ್ ಆಗಿಯೇ ಇದೆ, ಮುಂದೆಯೋ ಇರಲಿದೆ.
ಪ್ರತಿಯೊಬ್ಬರೂ ಮಾತನಾಡಲೇಬೇಕು. ಆದರೆ ಮಾತನಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿಬಿಡಬಾರದು. ನಮ್ಮ ಹೊಣೆಗಾರಿಕೆ ಮಾತಿಗಿಂತಲೂ, ಬರವಣಿಗೆಗಿಂತಲೂ ಬಹು ವಿಶಾಲವಾಗಿದೆ ಎಂಬು ನಾನು ನನ್ನಂತಹವರು ನಂಬಿದ್ದೇವೆ. ನಮ್ಮ ನಂಬಿಕೆ ಎಂದಿಗೂ ಹುಸಿಯಾಗುವುದಿಲ್ಲ. ಯಾಕೆಂದರೆ ನಮ್ಮ ನಂಬಿಕೆ ಕೇವಲ ನಮ್ಮದಲ್ಲ.
ಪ್ರಿಯ ಲಿಂಗರಾಜು
ನಿಮ್ಮ ಜತೆ ಮಾತು ಸಾಧ್ಯವಾದುದೇ ಒಂದು ಸಮಾಧಾನ. ನನ್ನ ಮಾತಿನಿಂದ ಯಾರು ಬದಲಾಗುತ್ತಾರೋ ಇಲ್ಲವೋ ನನಗೆ ತಿಳಿಯದು. ನನ್ನ ಮಾತಿನ ಬಗ್ಗೆ ನನಗಂಥ ಭ್ರಮೆಯಿಲ್ಲ. ಆದರೆ ಮಾತು ಸೋತಲ್ಲಿ ಜಗಳ ಸುರುವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ವಾದ, ವೈಚಾರಿಕತೆ ಇಲ್ಲದಾಗ ಮನುಷ್ಯ `ದೈಹಿಕ’ವಾಗುತ್ತಾನೆ–ಎಂದರೆ ಆಕ್ರಮಣಕಾರಿ ಆಗುತ್ತಾನೆ! ಆದರೆ ಮಾತನ್ನು ಕೂಡ ಜಗಳಕ್ಕೆ ಬಳಸಬಹುದು. ಈಗ ನಡೆಯುತ್ತಿರುವುದು ಅದೇ. ಮುತಾಲಿಕರ ಆಕ್ರಮಣಕಾರಿ ಕ್ರಿಯೆಗಳ ವಿರುದ್ಧ ನಾನು ಬರೆದಾಗ ನನ್ನನ್ನು ಈಮೇಲ್ ಮೂಲಕ ಹಳಿದವರೂ ಇದ್ದರು. ಅದು ಅವರ ಅರಿವಿನ ಕೊರತೆ. ಆದರೆ ಈ ಮುತಾಲಿಕ, ಬಾಲಗಂಗಾಧರರಂಥ ವ್ಯಕ್ತಿಗಳಿಗೂ ಸುಧಾರಣೆಗೆ ಅವಕಾಶ ಸಿಗಬೇಕು. ಅವರ ಜತೆ ಕೂಡ ಮಾತಾಡುವುದು ಸಾಧ್ಯವಾಗಬೇಕು. ಯಾಕೆಂದರೆ ಅವರನ್ನೆಲ್ಲ ಹಿಡಿದು ಜೇಲಿಗೆ ತಳ್ಳುವುದರಿಂದ, ಅಥವಾ ಕೊಲ್ಲುವುದರಿಂದ–ಅದು ಸಾಧ್ಯವೂ ಇಲ್ಲ–ಪರಿಸ್ಥಿತಿ ತಿಳಿಯಾಗುವುದಿಲ್ಲ.
ಕೇವಲ ಬರೆಯುವುದರಿಂದ ಮಾತ್ರವೂ ಬದಲಾವಣೆ ಆಗುವುದಿಲ್ಲ ಎಂದಿರಿ; ಒಪ್ಪುವ ಮಾತು. ಆದರೆ ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಪ್ರವರ್ತಿಸಬಹುದಲ್ಲವೇ? ಬೊಳುವಾರರ ಕೊಡುಗೆ ಬಗ್ಗೆ ನಾನು ಈಗಾಗಲೇ ಹೇಳಿದ್ದೇನೆ. ಅದು ಮುಖ್ಯವೆಂದು ನಿಮಗೆ ಅನಿಸುವುದಿಲ್ಲವೇ? ನನ್ನ ಮಟ್ಟಿಗೆ ಅವರ ಬರಹಗಳು ಮೊತ್ತ ಮೊದಲಿಗೆ ಮುಸ್ಲಿಂ ಸಮುದಾಯವನ್ನು ಕನ್ನಡದ ಓದುಗರಿಗೆ ಆಪ್ತವಾಗಿ ಮಾಡಿದವು. ನಂತರ ನೋಡಿ, ಮುಸ್ಲಿಂ ಸಮಾಜದ ಕುರಿತು ಮುಸ್ಲಿಂ ಲೇಖಕರೇ ಅದೆಷ್ಟು ಬರೆಯುತ್ತ ಬಂದಿದ್ದಾರೆ!
ಇನ್ನು ನನ್ನ ಕುರಿತೂ ಈ ಪ್ರಶ್ನೆ ಎತ್ತಿದ್ದೀರಿ. ನಾನು ಓದು, ಬರಹ, ಮತ್ತು ಇತ್ತೀಚಿನ ವರೆಗೆ ಅಧ್ಯಾಪನ ವೃತ್ತಿಯಲ್ಲಿ ನನ್ನನ್ನು ತೊಡಗಿಸಿಕೊಂಡ ವ್ಯಕ್ತಿ. ನನ್ನಿಂದ ಅಷ್ಟು ಮಾತ್ರವೇ ಸಾಧ್ಯವಾದುದು. ಇದೊಂದು ನನ್ನ ಮಿತಿಯೆಂದು ನೀವು ತಿಳಿದುಕೊಂಡರೆ ಸಾಕು. ಕ್ಷಮೆಯಿರಲಿ. ಅಷ್ಟಕ್ಕೆ ನಾನೇನೂ ಸುಖಲೋಲುಪನೂ ಅಲ್ಲ. ಬೊಳುವಾರು ಕೂಡ ಸುಖಲೋಲುಪರೆಂದು ನಾನು ಭಾವಿಸುವುದಿಲ್ಲ. ಬಹುಶಃ ಸುಖಲೋಲುಪನಾದ ಯಾವ ಲೇಖಕನೂ ಇಲ್ಲ.
ಮತ್ತು ನಾನಂದೂ ರಚನಾತ್ಮಕ ಕಾರ್ಯಗಳಿಗೆ ಅಡ್ಡಿಬರುವವನಲ್ಲ. ಅವುಗಳನ್ನು ಪ್ರೋತ್ಸಾಹಿಸುವವನೇ. ರಚನಾತ್ಮಕ ಕಾರ್ಯಗಳಲ್ಲಿ ನನ್ನ ಪ್ರಯಾರಿಟಿ ಶಿಕ್ಷಣ, ಆರೋಗ್ಯ, ಮಾನಸಿಕ ನೆಮ್ಮದಿ ಮುಂತಾದವು.
*
ಇನ್ನು ಕೋಮುವಾದದ ಕುರಿತಾದ ನಮ್ಮ ಪರಿಭಾಷೆಯನ್ನೇ ಬದಲಿಸಬೇಕಾಗಿದೆ ಎಂದು ನನಗನಿಸುತ್ತದೆ. ಹೋರಾಟ, ಸಂಘರ್ಷ ಇತ್ಯಾದಿ ಪದಗಳು ಜನರಿಗೆ ಭಯ ಹುಟ್ಟಿಸುವಂಥವು. ಪಬ್ಲಿಕ್ ಪರ್ಸೆಪ್ಶನ್ ಎಂಬುದೊಂದಿದೆಯಲ್ಲ? ಚೆ ಗವೇರಾ ಬೊಲೀವಿಯಾದಲ್ಲಿ ಹೋರಾಟಕ್ಕೆ ಹೋದಾಗ ಅಲ್ಲಿ ಅವನಿಗೆ ಜನಬೆಂಬಲ ಸಿಗಲಿಲ್ಲ. ಯಾಕೆಂದರೆ ಜನ ಭಯಪಟ್ಟರು–ಆವರಿಗೆ ಅದಕ್ಕಿಂತ ಸರ್ವಾಧಿಕಾರವೇ ಒಳ್ಳೆಯದೆನಿಸಿತು!
ಸಮಾನ ಮನಸ್ಕರನ್ನು ಸಭೆ ಸೇರಿಸಿ ಮಾತಾಡುವುದರಿಂದಲೂ ಉಪಯೋಗವಿಲ್ಲ ಅನಿಸುತ್ತದೆ: ಮಾತಾಡಬೇಕಾದ್ದು ಭಿನ್ನ ಮನಸ್ಕರೊಂದಿಗೆ.
ಈ ಕುರಿತು ಯುವಕರಾದ ನೀವು ಯೋಚಿಸಬೇಕು ಎನ್ನುವುದು ನನ್ನ ಅನಿಸಿಕೆ.
ಇರಲಿ. ಈ ವಿಷಯದಲ್ಲಿ ನನಗಿನ್ನು ಹೇಳುವುದಕ್ಕೇನೂ ಇಲ್ಲ.
ಕೆ.ವಿ. ತಿರುಮಲೇಶ್
ಮಾತು ಮುಗಿದಾಗ ಹಗಳ ಶುರುವಾಗುತ್ತದೆ ಎಂಬ ನಿಮ್ಮ ಅನುಭವದ ಮಾತು. ನನ್ನ ಅನುಭವಕ್ಕೂ ಬಂದಿದೆ. ಸಾಮಾನ್ಯವಾಗಿ ಜಗಳಕ್ಕೂ ಸಂಘರ್ಷಕ್ಕೂ ವ್ಯತ್ಯಾಸವಿದೆ. ನೀವು ಜಗಳ ಮತ್ತು ಸಂಘರ್ಷ ಎರಡನ್ನೂ ಒಂದೇ ಅರ್ಥದಲ್ಲಿ ಬಳಸಿದ್ದಕ್ಕೆ ಅಥವಾ ಎರಡು ಒಂದೇ ಅರ್ಥ ಮೂಡುವ ರೀತಿಯಲ್ಲಿ ಬಳಸಿದ್ದೀರಿ. ಇದು ಪ್ರಜ್ಞಾಪೂರ್ವಕವಲ್ಲವೆಂದು ಭಾವಿಸುತ್ತೇನೆ.
ಕ್ಯೂಬಾದಲ್ಲಿ ಗೆದ್ದ ಚೆ ಬೋಲಿವಿಯಾದಲ್ಲಿ ಜನಬೆಂಬಲ ಸಿಗದ್ದಕ್ಕೆ ಜನರ ಭಯ ಕಾರಣ ಎಂಬ ನಿಮ್ಮ ಮಾತು ಅನುಭವದ್ದೋ ಬರೀ ಓದಿನದ್ದೋ ನನಗೆ ತಿಳಿಯುತ್ತಿಲ್ಲ. ಜನಬೆಂಬಲ ದಿಢೀರ್ ಸಿಗುವುದಿಲ್ಲ. ಏಕೆಂದರೆ ಆ ಹೋರಾಟಗಳು ಜಾತಿ, ಧರ್ಮದಂತಹ ಭಾವಾನಾತ್ಮಕವಾದವುಗಳಲ್ಲ. ಬೋಲಿವಿಯಾದ ಜನರು ಅಂದು ಚೆ ಹೋದಾಗ ಭಯಪಟ್ಟು ಸವರ್ಾಧಿಕಾರವೆ ಇರಲಿ ಎಂದರು. ಅದು ಇತಿಹಾಸ. ಆದರೆ ಇಂದು ಬೋಲಿವಿಯಾದಲ್ಲಿ ಚೆ ಹೀರೋ. ಇಂದಿನ ಬೋಲಿವಿಯಾದ ಜನ ಆರಿಸಿಕೊಂಡಿರುವ ಸಕರ್ಾರ ಅದೇ ಚೆ ಅಂದು ಹೇಳಿದ್ದ ನಿಲುವುಗಳಿರುವ ಜನನಾಯಕರನ್ನು.
ಫಿಡೆಲ್ ಕ್ಯಾಸ್ಟ್ರೋರವರ ಪ್ರಸಿದ್ಧ ಮಾತೊಂದಿದೆ. “History Will Absolve Me”
ಕ್ಷಮಿಸಿ, ಇನ್ನೊಂದು ಬಾರಿ ಮಾತಾಡುತ್ತಿದ್ದೇನೆ. ಯಾಕೆಂದರೆ ಅನಾಮಿಕರ ಪತ್ರ ಓದಿ ಹಿಸ್ಟರಿಯನ್ನು ಕೂಡ ಜನ ಹೇಗೆ ತಪ್ಪಾಗಿ ಓದುತ್ತಾರೆ ಎನ್ನುವುದು ಗೊತ್ತಾಗುತ್ತಿದೆ. ಕಮ್ಯೂನಿಸಮಿನ ಕಾಲ ಇದಲ್ಲ. ಸರ್ವಾಧಿಕಾರಕ್ಕೆ ಇಂದು ಆಸ್ಪದವಿಲ್ಲ. ಜನ ತಪ್ಪು ಮಾಡಿದರೆ ಅವರನ್ನು ಕಾನೂನು ರೀತ್ಯಾ ಶಿಕ್ಷಿಸಬೇಕು–ಶಿಕ್ಷೆ ಕೂಡ ದಂಡನೆಯಲ್ಲ, ಸುಧಾರಣೆ ಎನ್ನುತ್ತದೆ ಅಧುನಿಕ ಚಿಂತನೆ. ಇಂದು ಜನರ ಮನಃಪರಿವರ್ತನೆಯೊಂದೇ ದಾರಿ; ಅದನ್ನು ನಾನು ಅರಿವು ಎಂದು ಕರೆಯಬಹುದು; ನೀವು `ಸಂಘರ್ಷ’ ಎನ್ನುತ್ತೀರಿ. ಇದಕ್ಕೇ ಪರಿಭಾಷೆಯನ್ನು ಬದಲಾಯಿಸಬೇಕು ಎಂದು ನಾನು ಅನ್ನುವುದು. `ಸಂಘರ್ಷ’, `ಹೋರಾಟ’ ಹಳೆಯ ಚಿಂತನೆಯ ಪರಿಭಾಷೆ–ಕಮ್ಯೂನಿಸಮಿನದು. ಪ್ರಜಾಪ್ರಭುತ್ವದಲ್ಲಿ ಅದಕ್ಕೆ ಸ್ಥಾನವಿಲ್ಲ. ಆದರೆ ಅದರಲ್ಲಿ ನಂಬಿಕೆಯಿರುವವರು ಇದ್ದಾರೆ ಎನ್ನುವುದು ನನಗೆ ಗೊತ್ತಿದೆ; ಅಷ್ಟೇ ಏಕೆ, ಸಾಯುಧ ಕ್ರಾಂತಿಯಲ್ಲಿ ವಿಶ್ವಾಸವಿರುವವರೂ ಇದ್ದಾರೆ. ಭಾರತದ ಸಮಸ್ಯೆಯೆಂದರೆ ಪೂರ್ಣ ಪ್ರಮಾಣದ ಸಾಮಾಜಿಕ ಕ್ರಾಂತಿಯಾಗುವ ಮೊದಲೇ ನಮಗೆ ಸ್ವಾತಂತ್ರ್ಯ ಬಂತು, ಹಾಗೂ ನಾವು ಗಣತಂತ್ರವನ್ನು ಆರಿಸಿಕೊಂಡೆವು. ಗಣತಂತ್ರದ ದಾರಿ ನಿಧಾನವಾದುದು, ಹಾಗೂ ಅಹಿಂಸಾತ್ಮಕ.
ಇದರಲ್ಲಿ ಚೆಗಾಗಲಿ, ಕ್ಯಾಸ್ಟ್ರೋಗಾಗಲಿ–ಅಂಥ ಯಾರಿಗೇ ಆಗಲಿ ಸ್ಥಾನವಿಲ್ಲ. ಹಿಂದಣ ನಮ್ಮ ಹೀರೋಗಳನ್ನು ನಾವು ಗೌರವಿಸಬಹುದು, ಆದರೆ ನಮ್ಮ ಕಾನೂನು ಮೀರಿ ಅನುಸರಿಸಲಾರೆವು. ಇತಿಹಾಸ ಬದಲಾಗುತ್ತಲೇ ಇದೆ–ಅದರ ಜತೆ ಮಾನವಿಕ ಮೌಲ್ಯಗಳು, ಚಿಂತನೆಗಳು ಸಹಾ. ಈ ಬದಲಾವಣೆಗೆ ಯಾರೊಬ್ಬ ವ್ಯಕ್ತಿಯೂ ಮೂಲವಲ್ಲ, ಇದರ ಮೂಲ ಹುಡುಕಿದರೆ ಸಿಗುವಂಥದೂ ಅಲ್ಲ. ಮತಧರ್ಮಗಳ ನರಳಾಟಕ್ಕೆ, ಉದ್ವಿಗ್ನತೆಗೆ ಕಾರಣ ಅವು ಹೊಸತನಕ್ಕೆ ಹೊಂದಿಕೊಳ್ಫಲಾರದೆ ಇರುವುದೇ.
ಇರಲಿ. ಐಡಿಯಾಲಜಿಯನ್ನು ಎದುರಿಸುವುದು ಕಷ್ಟ; ಆದ್ದರಿಂದ ವಾದಿಸಿ ಉಪಯೋಗವಿಲ್ಲ.
ಕೆ.ವಿ. ತಿರುಮಲೇಶ್
ನಾನಿಲ್ಲಿ ಯಾವ ಕಮ್ಯುನಿಸಂ ಅನ್ನೂ ಹೇಳುತ್ತಿಲ್ಲ, ಐಡಿಯಾಲಜಿಯನ್ನೂ ಹೇಳುತ್ತಿಲ್ಲ. ನೀವು ಪ್ರಸ್ತಾಪಿಸಿದ ಚೆ, ಬೋಲಿವಿಯಾ ಇಂದು ಹೇಗಿದೆ ಎಂಬುದನ್ನು ತಿಳಿಸಿದ್ದೇನೆ. ಕಮ್ಯುನಿಸಂಗೆ ಕಾಲದ ಮಿತಿ ಇಲ್ಲ. ಸಂಘರ್ಷ ಎನ್ನುವುದು ಕಮ್ಯುನಿಸಂನ ಕೊಡುಗೆ ಅಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಸಂಘರ್ಷದಿಂದಲೇ ಎನ್ನುವುದನ್ನು ನೀವು ಮುಚ್ಚಿಡಲಾಗದು. ಸವರ್ಾಧಿಕಾರವನ್ನು ಬಯಸಲು ನಾವು ಮೂರ್ಖರಲ್ಲ.
ಹೋರಾಟ, ಸಂಘರ್ಷ ಹಳೆಯದು, ಕಮ್ಯುನಿಸಂ ಎಂಬ ನಿಮ್ಮ ಚಿಂತನೆ ಸಂಪೂರ್ಣ ಪೂವರ್ಾಗ್ರಹದಿಂದ ಕೂಡಿದೆ. ಕಮ್ಯುನಿಸಂ ಎಂಬ ಪರಿಕಲ್ಪನೆ ಮೂಡುವ ಮೊದಲಿನಿಂದಲೂ ಸಂಘರ್ಷ ಇದೆ. ಶೋಷಣೆ ಇರುವವರೆಗೂ ಇರಲಿದೆ. ಹೋರಾಟಕ್ಕೂ ಕಮ್ಯುನಿಸಂಗೂ ತಳಕು ಹಾಕಿ ಹೋರಾಟ ಎಂದರೆ ಕಮ್ಯುನಿಸಂ ಎಂದು ಹೇಳುತ್ತಾ ಒಂದು ವಿಭಜನೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೀರಿ.
ಅನ್ನಕ್ಕಾಗಿ ಹೋರಾಟ ನಡೆಸುವ ವ್ಯಕ್ತಿ ಆತ ಕಮ್ಯುನಿಸ್ಟನಾಗಿರುತ್ತಾನೆಯೇ, ಇಂದು ಹಾಲಿನ ದರ 4 ರೂ. ಹೆಚ್ಚಾಗಿದೆ. ಇದರ ವಿರುದ್ಧ ದನಿ ಎತ್ತಿದರೆ ಅದು ಕಮ್ಯುನಿಸ್ಟರ ಹೋರಾಟವಾಗುತ್ತದೆಯೇ. ಜಾತಿ ದೌರ್ಜನ್ಯದ ವಿರುದ್ಧ ಬೀದಿಗಿಳಿಯಲು ಆತ ಕಮ್ಯುನಿಸ್ಟ್ ಆಗಿರಬೇಕೆ. ನೀವೇ ಹೇಳಿದ ಮುತಾಲಿಕ ಸೈನ್ಯ ಮಾಡಿದ ಕೆಲಸದ ವಿರುದ್ಧ ನಿಮ್ಮ ಬರವಣಿಗೆ ಕೂಡ ಹೋರಾಟವಲ್ಲವೆ. ಮನಪರಿವರ್ತನೆ ಕೂಡ ಒಂದು ಸಾತ್ವಿಕ ಹೋರಾಟ. ಗಾಂಧೀಜಿ ನಡೆಸಿದ ಉಪವಾಸ ಸತ್ಯಾಗ್ರಹ ಕೂಡ ಬ್ರಿಟಿಷರ ವಿರುದ್ಧದ ಸಂಘರ್ಷವಲ್ಲವೇ. ಸಂಘರ್ಷ ಎಂದರೆ ಜಟ್ಟಿಕಾಳಗ ಎಂದರ್ಥವಲ್ಲ. ಪ್ರಜಾಪ್ರಭುತ್ವದ ಪರದೆಯೊಳಗೆ ನಿಮ್ಮ ಅರಾಜಕತಾವಾದಕ್ಕೆ ನೆಲೆ ಕಲ್ಪಿಸಿಕೊಳ್ಳದಿರಿ. ಜಗತ್ತಿನಲ್ಲೇ ಇನ್ನೂ ಕಮ್ಯುನಿಸಂ ಇದೆ. ಆದರೆ ಅರಾಜಕತೆ ಇಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತೇನೆ.
ನಿಮ್ಮಲ್ಲಿ ಒಂದು ಐಡಿಯಾಲಜಿ ಇದ್ದರೆ ಇನ್ನೊಂದು ಐಡಿಯಾಲಜಿಯನ್ನು ಸೋಲಿಸುವುದು ಕಷ್ಟವೇನಲ್ಲ, ಅದು ಮೊದಲ ಐಡಿಯಾಲಜಿಗಿಂತ ಹೆಚ್ಚು ಜನಪರವಾಗಿರಬೇಕಷ್ಟೆ.
ನಿಮ್ಮಿಂದ ನಾನು ಕಲಿಯುವುದು ಬಹಳಷ್ಟಿದೆ, ಲಿಂಗರಾಜು ಅವರೇ. ಥ್ಯಾಂಕ್ಸ್.
ಕೆ.ವಿ. ತಿರುಮಲೇಶ್
ಕ್ಷಮಿಸಿ, ನಾನು ನಿಮಗೆ ಕಲಿಸುವಷ್ಟು ದೊಡ್ಡವನಲ್ಲ. ತಿಳಿದವನೂ ಅಲ್ಲ. ಪ್ರತಿಯೊಬ್ಬರೂ ಸಾಯುವವರೆಗೂ ಕಲಿಯುತ್ತಲೇ ಇರಬೇಕು ಎಂದು ನಿಮ್ಮಂತಹವರೇ ನಮಗೆ ಹೇಳಿಕೊಟ್ಟಿದ್ದಾರೆ. ಅಭಿಪ್ರಾಯ ಭೇದ ಇದ್ದರೇನು, ನೀವು ನಮಗೆ ಗುರುಗಳ ಸಮಾನ. ನಿಮ್ಮ ಜೊತೆ ಸಂವಾದಿಸಲು ಅವಕಾಸ ಸಿಕ್ಕಿದ್ದೇ ದೊಡ್ಡದು
ಜಗತ್ತು ಹೀಗೆ ಕೊಡು-ಕೊಳ್ಳುತ್ತ ಇದ್ದರೆ ಎಷ್ಟು ಒಳ್ಳೇದು! ನಿಮ್ಮ ಮಾತು ಓದಿ (ಅದಕ್ಕಾಗಿಯೇ ಈ ಪುಟ ತೆರೆದೆ) ಈ ಇಳಿವಯಸ್ಸಿನಲ್ಲೂ ನನಗೆ ಸಂತೋಷವಾಯಿತು, ಲಿಂಗರಾಜ್–ನಾನು ಪ್ರೀತಿಸುವ ಈ ಜಗತ್ತನ್ನು ನನ್ನಂತೆಯೇ ಪ್ರೀತಿಸುವ ಇತರರ
ಕೈಯಲ್ಲಿರಿಸಿ ಹೋಗಬಹುದಲ್ಲ ಎಂದು; ಯಾಕೆಂದರೆ ಬದುಕಿನ ಕೊನೆ ತಲಪುತ್ತ ನಾನು ಬಹಳ ಖಿನ್ನನಾಗಿದ್ದೇನೆ. ನನ್ನ ಕೊನೆ ಬಂತು ಎಂದಲ್ಲ, ಇಷ್ಟು ವರ್ಷಗಳಲ್ಲಿ ನಾನು ಏನೂ ಮಾಡಲಾಗಲಿಲ್ಲವಲ್ಲ ಎಂದು. ಇರಲಿ. Let be ಅನ್ನುತ್ತಾನೆ ಹ್ಯಾಮ್ಲೆಟ್ ಕೊನೆಯಲ್ಲಿ!
ನಿಮ್ಮ
ಕೆ.ವಿ.ತಿರುಮಲೇಶ್
ನಾನು ನನ್ನ ಬದುಕನ್ನು ಪ್ರೀತಿಸುವಂತೆ ನಿಮ್ಮ ಬದುಕು, ಇತರರ ಬದುಕನ್ನು ಪ್ರೀತಿಸವವನು. ಅಂತಹ ಜಗತ್ತು ಬರಲಿ ಎಂಬ ಹಂಬಲದಿ ಬೀದಿಗಿಳಿದಿರುವವನು. ಹಿಂಸೆಯ ಫಲಿತಾಂಶ ಹಿಂಸೆಯೇ ಆಗಿರುತ್ತದೆ. ಅನ್ಯಾಯ, ಶೋಷಣೆ ನಡೆದಾಗ ಈ ಪ್ರಜಾಪ್ರಭುತ್ವದೊಳಗೆ ಏನೆಲ್ಲಾ ಮಾಡಲು ಸಾಧ್ಯವೋ ಅವೆಲ್ಲವನ್ನು ಮಾಡಬಯಸುವವನು. ಜಗತ್ತೆಲ್ಲಾ ಹಿಂಸೆಯಿಂದಿರುವಾಗ ನಾನೊಬ್ಬ ಹೇಗೆ ಸುಖದಿಂದಿರಲಾಗುವುದು. ಜಗತ್ತನ್ನು ಹೊರತುಪಡಿಸಿ ನಾನಿಲ್ಲ. ಜಗತ್ತನ್ನು ಪ್ರೀತಿಸುವ ಒಂದು ತಲೆಮಾರಿನ ಜವಾಬ್ದಾರಿಯನ್ನು ಹೊರಲು ಈ ತಲೆಮಾರಿನ ಹೆಗಲು ಸಿದ್ಧವಿದೆ.
ನಿಮ್ಮ, ಬದುಕಿನ ಪ್ರೀತಿ ನಮ್ಮೊಂದಿಗೆ ಮುಂದುವರಿಯಲಿದೆ.
– ಪ್ರೀತಿಯಿಂದ ಲಿಂಗರಾಜು