ನೀವು ಯಾರೇ ಏಕ್ಟಿವಿಸ್ಟರನ್ನು ಬೇಕಾದರೂ ಮೆಚ್ಚಿಕೊಳ್ಳಿ: ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ

ನಿನ್ನೆಯ ಅವಧಿಯಲ್ಲಿ ಪ್ರಕಟವಾಗಿದ್ದ ದಿನೇಶ್ ಅಮೀನ್ ಮಟ್ಟು ಅವರ ಲೇಖನ  ‘ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು..’ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ತಿರುಮಲೇಶ್ ಇದಕ್ಕೆ ಪ್ರತಿಕ್ರಿಯಿಸಿ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ ಎಂದಿದ್ದರು. ಅದು ಇಲ್ಲಿದೆ.

ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ

k v tirumalesh 3

ಕೆ. ವಿ. ತಿರುಮಲೇಶ್

ಬೊಳುವಾರು ಮಹಮ್ಮದ್ ಕುಂಞ್ಞಿಯವರ ಈಚಿನ ಕೃತಿಗಳನ್ನು ನಾನು ಓದಿಲ್ಲ. ಆದರೆ ಅವರ ಮೊದಲ ಬರಹಗಳನ್ನು ಓದಿದ್ದೇನೆ. “ದೇವರುಗಳ ನಾಡಿನಲ್ಲಿ’’ (?)  (ದೇವರುಗಳ ರಾಜ್ಯದಲ್ಲಿ -Avadhi) ಎಂಬ ಅವರ ಮೊದಲ ಕಥಾಸಂಕಲನದ ಪುಸ್ತಕ ವಿಮರ್ಶೆಯನ್ನು `ಪ್ರಜಾವಾಣಿ’ಗೋಸ್ಕರ ಮಾಡುವ ಅವಕಾಶ ನನಗೆ ಒದಗಿತ್ತು. ಆ ಸಂಕಲನವನ್ನು ನಾನು ತುಂಬಾ ಮೆಚ್ಚಿ ಬರೆದಿದ್ದೆ. ಇದು ಬಹಳ ಹಿಂದೆ: ಕೋಮುವಾದ, ಕೋಮುಸೌಹಾರ್ದ ಮುಂತಾದ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬರುವ ಮೊದಲೇ.

ಬೊಳುವಾರು ಮುಸ್ಲಿಂ ಸಮುದಾಯದ ಕುರಿತು ಹಲವು ವಸ್ತುನಿಷ್ಠ ಮತ್ತು ವಿಚಾರಪೂರ್ಣ ಒಳನೋಟಗಳನ್ನು ಕೊಡುತ್ತ ಬಂದಿದ್ದಾರೆ—ಒಂದು ತರದ criticl insider ಆಗಿ; ಲೇಖಕ ಹಾಗಾಗದಿರಲಾದರೂ ಸಾಧ್ಯವೇ? ಇದಕ್ಕಾಗಿ ಅವರಿಗೆ ಜೀವ ಬೆದರಿಕೆಗಳು ಬಂದಿವೆಯೋ ಇಲ್ಲವೋ ನನಗೆ ತಿಳಿಯದು. ಒಬ್ಬ ವ್ಯಕ್ತಿಗೆ ಜೀವ ಬೆದರಿಕೆಗಳು ಬಂದರೆ ಮಾತ್ರವೇ ಅದು ಅವನ ಕೊಡುಗೆಗೆ ಪ್ರಮಾಣ ಎಂದು ತಿಳಿಯಬೇಕಾಗಿಲ್ಲ. ಅಲ್ಲದೆ ಅಂತರ್ ಸಮುದಾಯದ ಅರಿವು ಹೆಚ್ಚಿಸುವುದರಲ್ಲಿ ಬೊಳುವಾರರ ಕೊಡುಗೆ ಮಹತ್ವದ್ದು ಎಂದು ನಾನು ತಿಳಿದಿದ್ದೇನೆ.

ಇಂದು ಕೋಮುವಾದವನ್ನು ಟೀಕಿಸುವುದಕ್ಕೆ ಜನ ಬೇಕಾಗಿಲ್ಲ; ಅದರ ಸ್ಥಾನದಲ್ಲಿ ಸೌಹಾರ್ದತೆಯನ್ನು ತರುವುದು ಹೇಗೆ ಎಂದು ಯೋಚಿಸುವ, ಮತ್ತು ಕಾರ್ಯಕ್ರಮಗಳನ್ನು ಯೋಜಿಸುವ ಜನ ಬೇಕು. ಜನರ ಮನಃಪರಿವರ್ತನೆಯಿಂದ ಮಾತ್ರವೇ ಇದು ಸಾಧ್ಯ ಎಂದು ನಾನು ತಿಳಿದಿದ್ದೇನೆ. ಅದಲ್ಲ, ಸಂಘರ್ಷದಿಂದ ಮಾತ್ರ ಸಾಧ್ಯ ಎಂದಾದರೆ, ಕೋಮು ಸಂಘರ್ಷ ಬಹುಮಟ್ಟಿಗೆ ಕಡಿಮೆಯಾಗುತ್ತ ಹೋಗಬೇಕಿತ್ತು; ಹಾಗಾಗಿಲ್ಲ. ಯಾಕೆ? ಕೇವಲ ಕಾನೂನು ಏನೂ ಮಾಡಲಾರದು; ಮನಸ್ಸು ಬೇಕು.

ಶೇಕ್ಸ್ ಪಿಯರನ “ದ ಮರ್ಚೆಂಟ್ ಆಫ್ ವೆನಿಸ್”ನಲ್ಲಿ ಪೋರ್ಶಿಯಾ ಹೇಳುವ ಮಾತು ಇದು, ‘The quality of mercy is not strain’d’ ಎಂಬ ಸಂಭಾಷಣೆಯಲ್ಲಿ. ಸಾಹಿತ್ಯದ ಗುಣವೆಂದರೆ—ಕರುಣೆಯನ್ನು, ಕ್ಷಮೆಯನ್ನು, ಅರಿವನ್ನು, ಸೌಹಾರ್ದತೆಯನ್ನು ಹೆಚ್ಚಿಸುವುದು. ಬೊಳುವಾರರನ್ನು ನಾನು ಈ ಅರ್ಥದಲ್ಲಿ ಕಾಣುತ್ತೇನೆ.

ಕೋಮುವಾದದ ವಿರುದ್ಧ ಎಷ್ಟು ಹೋರಾಡಿದ್ದೀರಿ ಎನ್ನುವುದಕ್ಕಿಂತಲೂ ಕೋಮು ಸೌಹಾರ್ದವನ್ನು ನಿಜಕ್ಕೂ ತರುವುದರಲ್ಲಿ ಏನು ಮಾಡಿದ್ದೀರಿ ಎನ್ನುವುದು ಮುಖ್ಯವಲ್ಲವೇ? ಸೌಹಾರ್ದವೆಂದರೆ ವಿಭಿನ್ನ ಸಮುದಾಯಗಳ ಜನರ ನಡುವೆ ಆಗಬೇಕಾದ ಪರಿವರ್ತನೆ. ಕೇವಲ ಬಯ್ಯುವುದರಿಂದ ಇದು ಆಗುವುದಿಲ್ಲ. ಕಾನೂನು ಬೇಕು, ಅದರ ಸರಿಯಾದ ಕಾರ್ಯಗತಿಯೂ ಬೇಕು, ಆದರೆ ಅದಕ್ಕೆ ಜನರ ಸಹಕಾರವೂ ಅಗತ್ಯ. ಸಾಹಿತ್ಯ ಜನರ ಮನಃಪರಿವರ್ತನೆಗೆ ಅಪರೋಕ್ಷವಾಗಿ, ಬಹುಶಃ ನಿಧಾನವಾಗಿ ಕೆಲಸ ಮಾಡುತ್ತದೆ. ಶಿವರಾಮ ಕಾರಂತರ “ಚೋಮನ ದುಡಿ,” ಹ್ಯಾರಿಯೆಟ್್ ಬೀಚರ್ ಸ್ಟೋವ್-ಳ “Uncle Tom’s Cabin,” ಡಿಕೆನ್ಸ್-ನ “Olivr Twist” ಮುಂತಾದ ಸಾಹತ್ಯ ಕೃತಿಗಳ ಕೊಡುಗೆಯನ್ನು ಮನ್ನಿಸದಿರುವುದು ಸಾಧ್ಯವೇ?

ಜಗತ್ತಿನ ಪ್ರಸಿದ್ಧ ಕೃತಿಗಳೊಂದಿಗೆ ಬೊಳುವಾರರ ಕೃತಿಗಳನ್ನು ಇರಿಸಿದ್ದೇನೆ ಎಂದು ಟೀಕಿಸುವುದು ಬೇಡ. ಪ್ರತಿಯೊಂದು ಸಾಹಿತ್ಯ ಕೃತಿಯಲ್ಲೂ ಇಂಥ ಗುಣವಿದೆ ಎನ್ನುವುದು ನನ್ನ ವಿಶ್ವಾಸ.

ಕ್ರಾಂತಿಕಾರಿ ಚೆ ಗವೇರಾ ಅವನು ಪಚ್ಚೆ ಪುಸ್ತಕದಲ್ಲಿ ಅವನು ಬರೆದಿಟ್ಟುಕೊಂಡ ಮೆಚ್ಚಿನ ನಾಲ್ಕು ಮಂದಿ ಕವಿಗಳ ಕವಿತೆಗಳಿದ್ದ ಪಚ್ಚೆ ಪುಸ್ತಕವೊಂದು ಅವನ ಮರಣಾನಂತರ ಸಿಕ್ಕಿತು. ಪಾಬ್ಲೋ ನೆರೂದಾ (ಚಿಲಿ), ನಿಕಲಸ್ ಗ್ವಿಲ್ಲೆನ್ (ಕ್ಯೂಬಾ), ಸೀಸರ್ ವಾಲೆಯೋ (ಪೆರು), ಮತ್ತು ಲಿಯೋನ್ ಫೆಲಿಪ್ (ಸ್ಪೇನ್) ಎಂಬವರ ಕೆಲವು ಕವಿತೆಗಳು ಅದರಲ್ಲಿದ್ದವು. ಈ ಕವಿತೆಗಳಲ್ಲಿ ಹೆಚ್ಚಿನವೂ ಪ್ರೇಮ ಕವಿತೆಗಳಾಗಿದ್ದವು ಎನ್ನುವುದು ಕುತೂಹಲಕರ. ಗನ್-ನ ಜತೆ ಕವಿತೆ? ಆಶ್ಚರ್ಯವಾಗುತ್ತದೆ ಅಲ್ಲವೆ?

ಬೊಳುವಾರು ತಮ್ಮ ವೈಯಕ್ತಿಕ ಸುಖವನ್ನು ನೋಡಿಕೊಂಡು ಹಾಯಾಗಿದ್ದಾರೆ ಎಂದು ಹೇಳುವುದು ಉಚಿತವಲ್ಲ. ಅದು ಅವರನ್ನು ಅವಮಾನಿಸಿದ ಹಾಗೆ. ಬೊಳುವಾರರ ಹೆಸರಿನಲ್ಲಿ ಶ್ರೀ ಅಮೀನ್ ಅವರು ಹಲವು ಸಾಹಿತಿಗಳನ್ನು ಟೀಕಿಸುತ್ತಿದ್ದಾರೆ ಎಂದು ಅನಿಸುತ್ತಿದೆ. ಅವರು ಸಾಹಿತಿಗಳ ಕೊಡುಗೆಯನ್ನು ಸರಿಯಾಗಿ ಅರ್ಥಮಾಡಿಕೊಂಡಿಲ್ಲವೆಂದು ಕಾಣುತ್ತದೆ.

ಸಾಹಿತ್ಯ, ಕಲೆ, ಸಂಗೀತ ಮುಂತಾದವು ಇಲ್ಲದ ಸಮಾಜ ಫಿಲಿಸ್ಟೈನ್ ಆಗುತ್ತದೆ. ಇದೆಲ್ಲ ತಿಳಿದೂ ಅಮೀನರು ಇಂಥ ಮಾತನ್ನು ಯಾಕೆ ಹೇಳಿದರೋ ಗೊತ್ತಾಗುವುದಿಲ್ಲ. ಅವರಲ್ಲಿ ನನ್ನ ಕೋರಿಕೆ ಇಷ್ಟೆ: ನೀವು ಯಾರೇ ಏಕ್ಟಿವಿಸ್ಟರನ್ನು ಬೇಕಾದರೂ ಮೆಚ್ಚಿಕೊಳ್ಳಿ: ನಿಮ್ಮ ಬರಹ ಓದಿ ನಾವೂ ಮೆಚ್ಚಿಕೊಳ್ಳುತ್ತೇವೆ. ಆದರೆ ಅದಕ್ಕೋಸ್ಕರ ಇತರರ ಕೊಡುಗೆಗಳನ್ನು ಲಘುವಾಗಿ ಪರಿಗಣಿಸುವುದು ಬೇಡ.

 

‍ಲೇಖಕರು Admin

January 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Dr. Prabhakar M. Nimbargi

    You are right, sir. ಕೋಮುವಾದದ ವಿರುದ್ಧ ಎಷ್ಟು ಹೋರಾಡಿದ್ದೀರಿ ಎನ್ನುವುದಕ್ಕಿಂತಲೂ ಕೋಮು ಸೌಹಾರ್ದವನ್ನು ನಿಜಕ್ಕೂ ತರುವುದರಲ್ಲಿ ಏನು ಮಾಡಿದ್ದೀರಿ ಎನ್ನುವುದು ಮುಖ್ಯವಲ್ಲವೇ? This is the most essential issue now. One should strive towards this goal.

    ಪ್ರತಿಕ್ರಿಯೆ
  2. ರಾಘವೇಂದ್ರ ಜೋಶಿ

    ಇದೊಂದು ವಿಚಿತ್ರ ಸಂದಿಗ್ಧತೆ. ಈಚಲು ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದರೂ ಕೂಡ, ಅಲ್ಲಿ ಕಳ್ಳು ಕುಡಿಯುವಂಥ ಚಿತ್ರಣ ಮೂಡಿಬರುವ ಅಪಾಯಗಳೇ ಜಾಸ್ತಿ ಇವೆ.

    ಬಹುತೇಕ ಸಲ ನಾವು ಯಾವ ಕ್ಯಾನ್ವಾಸಿನ ಹಿನ್ನೆಲೆಯಲ್ಲಿ ಚಿತ್ರವನ್ನು ಕಟ್ಟಿಕೊಡುತ್ತಿದ್ದೇವೆ ಅನ್ನುವದು ಮುಖ್ಯವಾಗುತ್ತದೆ. ಕೋಮು ಸೌಹಾರ್ದತೆ, ಅದರೊಂದಿಗಿನ ಸಂಘರ್ಷ ಹೇಳುತ್ತಲೇ ಶ್ರೀಯುತ ದಿನೇಶರವರು ಬೋಳುವಾರರ ಹೆಸರನ್ನು ಉದಾಹರಣೆಯಾಗಿ ಅಥವಾ ಯಾವುದೋ ಒಂದು ಮಾತಿನ flowದಲ್ಲಿ ತಂದಿದ್ದಾರೆ. ಬಹುಶಃ ಅಮೀನರು ಸೂಚಿಸಿದ ಇನ್ನಿಬ್ಬರು ಸಜ್ಜನರ ರೀತಿ ಸೌಹಾರ್ದಕ್ಕಾಗಿ ಬೋಳುವಾರರು ನೇರ ಅಥವಾ ಪರೋಕ್ಷ ಸಂಘರ್ಷಕ್ಕೆ ಇಳಿದಿರಲಿಕ್ಕಿಲ್ಲ. ಹಾಗಂತ, ಬೊಳುವಾರರನ್ನು ಸುಖಪುರುಷರೆಂದು ಅನ್ನಲಾಗುವದಿಲ್ಲವಲ್ಲ!

    ನನಗನಿಸುವಂತೆ, ಇದೊಂದು ಅಸಮಂಜಸ ಹೋಲಿಕೆ. ಅಥವಾ ಅಸಮಂಜಸ ಪ್ರಸ್ತಾಪ. ಇಲ್ಲಿ ಒಬ್ಬಬ್ಬರಿಗೆ ಒಂದೊಂದು ಪಾತ್ರಗಳಿವೆ. ರಾಗ ಹುಡುಕುವದು ಸಂಗೀತಗಾರನ ಕೆಲಸ. ರನ್ನು ಗಳಿಸುವದು ತೆಂಡೂಲ್ಕರನ ಕೆಲಸ. ಭವಿಷ್ಯದ ಸಿಹಿ ದಿನಗಳಿಗಾಗಿ ಇವತ್ತು ಕಹಿಗುಳಿಗೆಗಳನ್ನು ನೀಡುವದೇ ವೈದ್ಯನ ಕರ್ತವ್ಯ. ಇದರಾಚೆಗೆ, ಸಂಗೀತದ ತಂತಿ ಬಿಟ್ಟು ಹಾಕಿ ಸೈನ್ಯ ಸೇರಿ ದೇಶ ರಕ್ಷಿಸು-ಅಂತೆಲ್ಲ ಸಂಗೀತಗಾರನಿಂದ ನಿರೀಕ್ಷಿಸುವದು ಯಾಕೋ ಕ್ರೂರವೆನಿಸುತ್ತದೆ.

    ಇಲ್ಲಿ ತಿರುಮಲೇಶರ ಪ್ರತಿಕ್ರಿಯೆ ಉಚಿತವೆನಿಸುತ್ತದೆ. ಮನುಷ್ಯನೊಬ್ಬನ ಕೋಮುಸಂಘರ್ಷದ ಹೋರಾಟಕ್ಕಿಂತ, ಕೋಮು ಸೌಹಾರ್ದದ ಕೊಡುಗೆ ಇವತ್ತು ಹೆಚ್ಚು ಅಪೇಕ್ಷಣೀಯ.
    ಕೊನೆಯದಾಗಿ, ದಿನೇಶರು ಸೌಹಾರ್ದಕ್ಕೆ ಸಂಬಂಧಿಸಿದಂತೆ ಬೋಳುವಾರರ ನೇರ ಕೊಡುಗೆಯನ್ನು ಪ್ರಶ್ನಿಸುವಂತೆ ‘ಸುಖವಾಗಿ ಇರುವವರು’ ಅಂತೆಲ್ಲ ಅವರ ಹೆಸರನ್ನು ಬಳಸಿರಬಹುದೆಂದು ನನಗೆ ಅನಿಸುತ್ತಿಲ್ಲ. ಸುಮ್ಮನೇ ಯಾವುದೋ ಒಂದು flowನಲ್ಲಿ ಹೇಳಿರಬಹುದು. ಆದರೆ ದಿನೇಶರ ಇಡೀ ಬರಹದ ಕ್ಯಾನ್ವಾಸ್ ಬೇರೆ ವಿಷಯಕ್ಕೆ ಸಂಬಂಧಪಟ್ಟಿರುವದರಿಂದ ಮತ್ತು ಆ ವಿಷಯಕ್ಕೆ ಸಂಬಂಧಿಸಿದಂತೆ ಬೊಳುವಾರರ ಕೊಡುಗೆ ಡೈಲ್ಯೂಟ್ ಆದಂತೆ ಬಿಂಬಿತವಾದಂತೆ ಕಾಣಿಸುತ್ತಲಿದೆ..

    -Rj

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: