'ಹಾಗಾದರೆ ಮಾರಿಬಿಡಿ…’ – ಶ್ರೀದೇವಿ ಕೆರೆಮನೆ

ಮಾರಿ ಬಿಡಿ…….

– ಶ್ರೀದೇವಿ ಕೆರೆಮನೆ

ಮಕ್ಕಳಿಗೆ ಹೋಂವರ್ಕ ಮಾಡಿಸುತ್ತಿದ್ದೆ. ಥೂ…!!! ಈ ಪೆನ್ ಸರಿಯಾಗಿ ಬರೆಯೋದೇ ಇಲ್ಲ ಅಮ್ಮ ದೊಡ್ಡ ಮಗ ವರಾತೆ ತೆಗೆದ. ಅಷ್ಟು ಹೇಳುವುದೇ ತಡ ಒಂದು ಕ್ಷಣವೂ ತಡೆಯದಂತೆ ಮಾರಿ ಬಿಡು. ಚಿಕ್ಕವನು ಹೇಳಿ ಆಗಿತ್ತು. ಕೇಳಿದ ತಕ್ಷಣ ಒಮ್ಮೆ ನಗೆ ಉಕ್ಕಿ ಬಂದರೂ ನಂತರ ಯಾಕೋ ಒಂದು ಕ್ಷಣ ಮನಸ್ಸಿಗೆ ಕಸಿವಿಸಿ ಅನ್ನಿಸತೊಡಗಿತು.
ಮೊನ್ನೆ ವಾಟ್ಸ್ ಆಪ್ನಲ್ಲೊಂದೊ ಮೆಸೆಜ್ ಇತ್ತು. ನಿಜಕ್ಕೂ ತಮಾಷೆ ಎನ್ನಿಸಬಹುದಾದ ಮತ್ತು ಅದೇ ಸಮಯಕ್ಕೆ ಅಷ್ಟೇ ಯೋಚನೆ ಮಾಡಬೇಕಾದ ಮೆಸೆಜ್. ಹೊಟ್ಟೆ ತುಂಬಾ ಹಸಿವಾಗುತ್ತಿತ್ತು. ಹೊಟೇಲ್ಗೆ ಹೋಗಿ ಎರಡು ಪ್ಲೇಟ್ ಇಡ್ಲಿ ಸಂಬಾರ್ ಆರ್ಡರ್ ಮಾಡಿದೆ. ಒಂದು ಪ್ಲೇಟ್ ತಿಂದ ಕೂಡಲೇ ಹೊಟ್ಟೆ ತುಂಬಿ ಹೋಯ್ತು. ಏನು ಮಾಡೋದೋ ಗೊತ್ತಾಗಲಿಲ್ಲ. ತಕ್ಷಣ ನೆನಪಾಗಿದ್ದು OLX. ಫೋಟೋ ತೆಗೆದೆ. ಅಪ್ ಲೋಡ್ ಮಾಡಿದೆ . ಐದೇ ನಿಮಿಷದಲ್ಲಿ ಆರ್ಡರ್ ಬಂತು. ಇಡ್ಲಿ ಬೇಕಾದವರು ನನ್ನ ಪಕ್ಕದ ಟೇಬಲ್ಲ್ಲೇ ಇದ್ದರು. ಇಡ್ಲಿ ಮಾರಾಟವಾಯ್ತು. ಅದೇ ಹಣದಲ್ಲಿ ಟೀ ಕೂಡ ಕುಡಿದೆ ಇದು ಆ ಮೆಸೆಜ್ನ ಸಾರಾಂಶ. ಓದಿದ ತಕ್ಷಣ ಒಮ್ಮೆ ನಗು ಬಂತು. ಆದರೂ ಮಾರಾಟದ ಸಂಸ್ಕೃತಿಯನ್ನು ಮನದಲ್ಲಿ ತುಂಬಿಕೊಳ್ಳುತ್ತಿರುವ ಯುವ ಜನತೆಯ ಬಗ್ಗೆ ಒಮ್ಮೆ ಕೂಡ ಭಯವಾಗ ತೊಡಗಿತು.
ಒಂದು ಸಲ ಟೀವಿ ಅಥವಾ ಇತರ ಮಾಧ್ಯಮಗಳತ್ತ ಒಮ್ಮೆ ದೃಷ್ಟಿ ಹಾಯಿಸಿ. ‘ಮಾರಿಬಿಡು’ ಎನ್ನುವುದು ಈಗ ಸ್ಲೋಗನ್ ತರಹ ಕಿವಿಯ ಮೇಲೆ ಬೀಳತೊಡಗಿದೆ. ಅದಕ್ಕೊಂದು ವಯ್ಯಾರದ ಹುಡುಗಿ ಕತ್ತು ಕೊಂಕಿಸುತ್ತ ಬಂದು ಮಾರಾಟದಿಂದಾಗುವ ಲಾಭಗಳ ಬಗ್ಗೆ ಉಲಿಯುವಾಗ ಯಾರಿಗಾದರೂ ಎದುರಿಗಿರುವ ಯಾವುದಾದರೂ ಒಂದು ವಸ್ತುವನ್ನು ಮಾರಿ ನೋಡಬಾರದೇಕೆ ಎಂಬ ಆಸೆ ಒಂದು ಕ್ಷಣ ಹುಟ್ಟದೇ ಇರಲು ಸಾಧ್ಯವೇ ಇಲ್ಲ. ಈಗಂತೂ ಎಲ್ಲವನ್ನೂ ಮಾರಿ ಬಿಡುವುದು ಎಷ್ಟೊಂದು ಸುಲಭ. ಮಾರುವ ಆಪ್ ಗಳು ನಿಮಗೆ ಎಷ್ಟು ಬೇಕೋ ಅಷ್ಟು ದೊರೆಯುತ್ತದೆ. ಮೊಬೈಲ್ನಲ್ಲಿ ಆ ಆಪ್ಗಳನ್ನು ಡೌನ್ಲೋಡ್ ಮಾಡಿಕೊಂಡರಾಯಿತು. ಡೌನ್ಲೋಡ್ ಮಾಡಿಕೊಳ್ಳಲು ಅದೆಷ್ಟು ಹಣ ಕೊಡಬೇಕೇನೋ ಎಂದು ಚಿಂತೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಅವೆಲ್ಲವೂ ಪ್ರೀ ಡೌನ್ಲೋಡೆಡ್ ಆಪ್ಗಳು. ನಿಮ್ಮ ಮೊಬೈಲ್ಗೆ ಆ ಆಪ್ ಬಂದನಂತರ ಅದನ್ನು ಓಪನ್ ಮಾಡಿ ಅದರಲ್ಲಿ ಫೋಟೊ ಕ್ಲಿಕ್ಕಿಸಿ, ಆ ಫೊಟೊವನ್ನು ಅಪ್ಲೋಡ್ ಮಾಡಿಬಿಟ್ಟರೆ ಮುಗಿಯಿತು. ನಿಮ್ಮ ವಸ್ತುವಿಗೊಬ್ಬ ಗಿರಾಕಿ ಲಭ್ಯರಿದ್ದಾರೆ ಎಂದೇ ಅರ್ಥ. ಕೆಲವೇ ಕ್ಷಣ,ನಿಮಿಷ, ತಾಸುಗಳಲ್ಲಿ ಆ ವಸ್ತು ಮಾರಾಟವಾಗುತ್ತದೆ ಎಂಬ ಭರವಸೆಯನ್ನು ನಿಮಗೆ ಆ ಆಪ್ ನೀಡುತ್ತದೆ. ಮತ್ತೂ ಆಶ್ಚರ್ಯಕರ ಸಂಗತಿ ಎಂದರೆ ದಿನದಿಂದ ದಿನಕ್ಕೆ ಇಂತಹ ಆಪ್ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಾರಾಟ ಮಾಡುವ ಹೊಸ ಹೊಸ ವೆಬ್ಸೈಟ್ಗಳು ಸೃಷ್ಟಿಯಾಗುತ್ತಿವೆ ಎಂದರೆ ಅದು ನಿಜಕ್ಕೂ ಲಾಭದಾಯಕ ಎಂದಾಯ್ತು. ಲಾಭದಾಯಕ ಎಂದರೆ ಅದರ ಅರ್ಥ ಅಷ್ಟು ಜನ ಕೊಳ್ಳುವವರು ಮಾರಾಟ ಮಾಡುವವರು ಇದ್ದಾರೆ ಎಂದಾಯ್ತು. ಅಂದರೆ ನಾವೀಗ ಮತ್ತೊಂದು ಕೊಳ್ಳುವ ಮತ್ತು ಅದರ ಜೊತೆ ಜೊತೆಗೇ ಮಾರಾಟ ಮಾಡುವ ಹೊಸ ಯುಗದಲ್ಲಿ ದಾಪುಗಾಲಿಕ್ಕುತ್ತ ಮುಂದುವರೆಯುತ್ತಿದ್ದೇವೆ.

ಇಷ್ಟು ದಿನ ಜಗತ್ತು ಕೊಳ್ಳುಬಾಕ ಸಂಸ್ಕೃತಿಯಲ್ಲಿ ತಲ್ಲೀನವಾಗಿತ್ತು. ಈಗ ಹೊಸದಾಗಿ ಸೇರ್ಪಡೆಗೊಂಡಿರುವ ‘ಮಾರಿ ಬಿಡಿ’ ಸಂಸ್ಕೃತಿಯು ಕೊಳ್ಳುಬಾಕ ಸಂಸ್ಕೃತಿಯ ಮುಂದುವರಿದ ಭಾಗವಾಗಿ ಅಥವಾ ಅದರ ಮತ್ತೊಂದು ಮಗ್ಗುಲಾಗಿ ಗೋಚರವಾಗುತ್ತಿದೆ. ನಮಗೆ ಬೇಕಾಗಿದ್ದು, ಬೇಡವಾಗಿದ್ದು ಎಲ್ಲವನ್ನೂ ಕೊಂಡುಕೊಳ್ಳುತ್ತ ಹೋಗುವುದು ಒಂದು ರೂಢಿಯಾಗಿದೆ. ಜಗತ್ತು ಕಿರಿದಾಗುತ್ತ ಸಾಗಿದಂತೆ ಜಗತ್ತಿನ ಎಲ್ಲವೂ ತೋರು ಬೆರಳ ತುದಿಯಲ್ಲಿ ಸಿಗುವಾಗ ಅದನ್ನು ತಮ್ಮದಾಗಿಸಿಕೊಳ್ಳುವ ಮಾನವ ಸಹಜ ಕುತೂಹಲ ಈ ಕೊಳ್ಳುಬಾಕ ಸಂಸ್ಕೃತಿಯನ್ನು ಪೋಷಿಸುತ್ತ ಸಾಗಿದೆ. ಅದಕ್ಕಿಂತ ಹೆಚ್ಚಾಗಿ ಎಲ್ಲರೂ ಹೊಂದಿರುವುದು ತನ್ನಲ್ಲೇಕಿಲ್ಲ ಎನ್ನುವ ಒಂದು ಅಸಹನೆ ಹಾಗೂ ಯಾರಲ್ಲೂ ಇರದ ವಸ್ತು ತನ್ನಲ್ಲಿದೆ ಎನ್ನುವ ಅಹಂಕಾರ ಈ ಕೊಳ್ಳುಬಾಕತನಕ್ಕೆ ತಾಯಿ. ಮನುಷ್ಯನ ಒಣ ಪ್ರತಿಷ್ಟೆ ಹಾಗೂ ಜಂಬ ಇದರ ಜೊತೆ ಜೊತೆಗೆ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ದುರಾಸೆ ಈ ಕೊಳ್ಳುಬಾಕತನಕ್ಕೆ ಮೂಲ ಕಾರಣ. ಇದರ ಮುಂದಿನ ಹಂತವೇ ಎಲ್ಲವನ್ನೂ ಮಾರಿ ಬಿಡುವ ಮತ್ತು ಮತ್ತೆ ಹೊಸದಾಗಿ ಕೊಂಡುಕೊಳ್ಳುವ ಮನಸ್ಥಿತಿಗೆ ನಮ್ಮನ್ನು ದೂಡುತ್ತಿದೆ. ಇದ್ದದ್ದನ್ನೆಲ್ಲ ಮಾರಿ ಹೊಸ ಹೊಸದನ್ನು ತನ್ನದಾಗಿಸಿಕೊಳ್ಳುವ ವಿಶೇಷ ವಿಕೃತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಶಾಪಿಂಗ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅದರಲ್ಲೂ ಮಹಿಳೆಯರಿಗೆ ಶಾಪಿಂಗ್ ಎನ್ನುವುದು ರಿಲಾಕ್ಸ ಮಾಡಿಕೊಳ್ಳುವ ಒಂದು ವಿಧಾನ ಕೂಡ. ಖುಷಿ ಇರಲಿ, ದುಃಖವೇ ಆಗಲಿ ಶಾಪಿಂಗ್ ನಮ್ಮನ್ನು ಸಮತೋಲನದಲ್ಲಿಡುತ್ತದೆ ಎಂಬುದು ಬಹಳಷ್ಟು ಮಹಿಳೆಯರ ಅಭಿಪ್ರಾಯ. ಹೀಗಾಗಿ ಬಹಳಷ್ಟು ಮಹಿಳೆಯರು ಶಾಪಿಂಗ್ ಹೋಗಲು ಇಷ್ಟಪಡುತ್ತಾರೆ. ಶಾಪಿಂಗ್ಲ್ಲಿ ಕೊಂಡು ಕೊಳ್ಳಲೇಬೇಕೆಂದೇನೂ ಇಲ್ಲ. ಶಾಪಿಂಗ್ ಮಾಲ್ಗಳಲ್ಲಿ ಅಡ್ಡಾಡಿದರೂ ಸಾಕು ಮನಸ್ಸು ಸ್ಥೀಮಿತಕ್ಕೆ ಬರುತ್ತದೆ ಎನ್ನುವುದು ದಿನವಿಡೀ ದುಡಿಯುವ ಬಹಳಷ್ಟು ಮಹಿಳೆಯರ ನಂಬಿಕೆ. ಅದಕ್ಕೆ ಬಹಳಷ್ಟು ಮಾನಸಿಕ ತಜ್ಞರು ಸಹಮತ ವ್ಯಕ್ತಪಡಿಸುತ್ತಾರೆ. ಶಾಪಿಂಗ್ ನಮ್ಮನ್ನು ಡಿಪ್ರೆಶನ್ಗೆ ಹೋಗದಂತೆ ತಡೆಯುತ್ತದಂತೆ. ಆದರೀಗ ಶಾಪಿಂಗ್ ಚಟ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಅದೀಗ ಸರ್ವವ್ಯಾಪಿ. ತಿರುಗಾಡುತ್ತ ಹರಟೆ ಹೊಡೆಯುತ್ತ ನಿಧಾನವಾಗಿ ಶಾಪಿಂಗ್ನ ಮಜ ಅನುಭವಿಸುವುದು ಮಹಿಳೆಯರಿಗಿಷ್ಟವಾದರೆ ಇಷ್ಟವಾದುದ್ದೆಲ್ಲ ನೆನೆದ ತಕ್ಷಣ ತಮ್ಮ ಕೈಲಿರಬೇಕು ಎಂದು ಬಯಸುವ ಆತುರದ ಬುದ್ಧಿಯ ಗಂಡಸರಿಗೆ ಆನ್ಲೈನ್ ಶಾಪಿಂಗ್ ಒಂದು ಕ್ರೇಜ್ ಹುಟ್ಟಿಸುತ್ತಿದೆ. ಹೀಗಾಗಿ ಆನ್ಲೈನ್ ಶಾಪಿಂಗ್ ಈಗ ಕಲ್ಪನೆಗೂ ಮೀರಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಅದೇ ಸಮಯಕ್ಕೆ ಈ ಶಾಪಿಂಗ್ ಹುಚ್ಚು ಮನೆಯನ್ನು ಕಸದ ತೊಟ್ಟಿಯನ್ನಾಗಿಸುತ್ತಿದೆ. ಹೊಸ ವಸ್ತುವನ್ನು ಕೊಳ್ಳಬೇಕೆಂದರೆ ಬೇಕಾದ ಜಾಗಕ್ಕಾಗಿ ಮಾರಲೇಬೇಕಾದ ಅನಿವಾರ್ಯತೆಯಲ್ಲಿ ಆತನಿದ್ದಾನೆ. ಹೀಗಾಗಿ ‘ಮಾರಿ ಬಿಡಿ’ ಎಂಬುದು ಈಗ ಧ್ಯೇಯ ವಾಕ್ಯವಾಗಿ ಬದಲಾಗುತ್ತಿದೆ.
ಈ ಮಾರಾಟದ ಹುಚ್ಚಿಗೊಂದು ಚಾಟಿ ಏಟು ನೀಡುವಂತೆ ಮತ್ತೊಂದು ವಾಟ್ಸ ಆಪ್ ಮೆಸೆಜ್ ಇದೆ. ಯಾರೋ ಈ ಮಾರಾಟದ ಆಪ್ನಲ್ಲಿ ಒಂದು ಹಳೆಯ ಟೂತ್ ಬ್ರಷ್ ಹಾಗೂ ಒಂದು ಪೂತರ್ಿ ಖಾಲಿಯಾದ ಟೂತ್ ಪೇಸ್ಟ್ನ ಸ್ಯಾಚೆಟ್ ಒಂದರ ಫೋಟೋ ಹಾಕಿ ನೂರು ರೂಪಾಯಿಯ ಕಾಂಬೋ ಮಾರಾಟ ಎಂದು , ಅಪ್ಲೋಡ್ ಮಾಡಿದ್ದರು. ಜೊತೆಗೊಂದು ಒಂದು ವರ್ಷದಿಂದ ಇದನ್ನು ಉಪಯೋಗಿಸುತ್ತಿದ್ದೇನೆ. ಬೇರೆ ಊರಿಗೆ ಹೋಗಬೇಕಾದ್ದರಿಂದ ಮಾರಾಟ ಮಾಡುತ್ತಿದ್ದೇನೆ. ಎನ್ನುವ ನಗೆ ಉಕ್ಕಿಸುವ ಅಡಿ ಟಿಪ್ಪಣೆ ಬೇರೆ. ನಮ್ಮ ಮಾರಾಟದ ಹುಚ್ಚಿಗೆ ಇದಕ್ಕಿಂದ ದೊಡ್ಡ ನಿದರ್ಶನ ಬೇರೆ ಬೇಕಿಲ್ಲ.
ಕೆಲವು ದಿನಗಳ ಹಿಂದೆ ಒಬ್ಬ ಸ್ನೇಹಿತ ದಂಪತಿಗಳ ಪ್ರೇಮ ಕಲಹಕ್ಕೆ ಸಾಕ್ಷಿಯಾಗಿದ್ದೆ. ಅದೂ ಕೂಡ ಮಾರಾಟಕ್ಕೇ ಸಂಬಂಧ ಪಟ್ಟಿದ್ದರಿಂದ ಇಲ್ಲಿ ಹೇಳಲೇ ಬೇಕಿದೆ. ಗಂಡನಿಗೆ ಏನೋ ಮನೆಗೆ ಅತ್ಯವಶ್ಯಕವಾದ ವಸ್ತುವನ್ನು ತರಲು ಹೇಳಿದ್ದ ಹೆಂಡತಿಗೆ ಗಂಡ ಅದನ್ನು ಮರೆತು ಬಂದಾಗ ಕೋಪ ತಡೆದುಕೊಳ್ಳಲು ಆಗದೇ ನನ್ನೆದುರಿಗೇ ಜಗಳಕ್ಕೆ ನಿಂತಿದ್ದಳು. ನಾನೋ ಅವರಿಬ್ಬರ ಪ್ರೇಮಕಲಹಕ್ಕೆ ಸಾಕ್ಷಿಯಾಗಿ ನೋಡುತ್ತ ನಿಂತಿದ್ದೆ. ಹೆಂಡತಿಯ ಬೇಸರ, ರೇಗಾಟಕ್ಕೆ ಬೇಸತ್ತ ಗಂಡ, ಪ್ಲೀಸ್, ನನ್ನ ಮೊಬೈಲ್ನಲ್ಲಿ ಯಾವುದಾದರೂ ಮಾರಾಟ ಮಾಡುವ ಆಪ್ ಡೌನ್ಲೋಡ್ ಮಾಡಿಕೊಡು. ಇವಳದ್ದೊಂದು ಫೋಟೋ ತೆಗೆದು ಅಪ್ಲೋಡ್ ಮಾಡುತ್ತೇನೆ. ನೂರು ರೂಪಾಯಿ ಕೊಡುತ್ತೇನೆ ಅಂದರೂ ಸಾಕು ಮಾರಿ ಬಿಡೋದು ಶತಸಿದ್ಧ. ರೇಗಿಸುವ ನಗು ನಗುತ್ತ ಹೇಳಿದ. ಆತನ ಮಾತಿಗೆ ನನಗೂ ಹಾಕ್ಕೊಡವ್ವಾ, ನಂಗೂ ಬ್ಯಾಸರಾಗೆತಿ. ಇಂತವನ ಕೂಡ ಏನಂತಾ ಐದಾರು ವರ್ಷದಿಂದ ಸಂಸಾರ ಮಾಡ್ಕೋತ ಬಂದೀನಿ ಅಂತಾನ ಅರ್ಥ ಆಗೋವಲ್ದು. ಹೇಳಿದ್ದೊಂದೂ ನೆನಪಿರಾಂಗಿಲ್ಲ. ಮನಿಗಿ ಏನ್ ಬೇಕೂ ಅನ್ನೂದೂ ಗೊತ್ತಿರಾಂಗಿಲ್ಲ. ಬರೀ ಪೇಪರ್ರು, ಪುಸ್ತಕ ಹಿಡ್ಕೊಂಡು ಕೂತ್ಕೊಂಡ್ರ ಸಂಸಾರ ನಡಿತೈತಿ ಅಂದ್ಕೊಂಡಾನ. ನನ್ನ ಮಾರ್ತೀನಿ ಅಂದ್ರ ನೂರು ರೂಪೈ ಆದ್ರೂ ಸಿಕ್ತೈತಿ. ಹಂಗೇನಾರೂ ಇವನ ಗುಣ ಹಾಕಿ ಅಪ್ಲೋಡ್ ಮಾಡಿದ್ನಂದ್ರ ಒಬ್ರೂ ಕೇಳಾಂಗಿಲ್ಲ. ನಿಂಗೇನಾದ್ರೂ ಕೆಲ್ಸಕ್ಕ ಬೇಕಂದ್ರ ತಗೊಂಡು ಹೋಗವ್ವಾ ತಾಯಿ. ಉಪಕಾರ ಆಗ್ತೈತಿ. ಎಂದು ಸೇರಿಗೆ ಸವ್ವಾ ಸೇರು ಎಂಬಂತೆ ಪುರುಷಾಹಂಕಾರಕ್ಕೊಂದು ಸವಾಲು ಎನ್ನುವ ಹಾಗೆ ಹೇಳಿದ್ದಳು. ಹೆಂಡತಿಯನ್ನು ಮಾರುತ್ತೇನೆ ಎಂದು ಹೊರಡುವ ಹರಿಶ್ಚಂದ್ರ ವಂಶದ ಗಂಡಸರಿಗೆ ಆ ಮಾತು ತನಗೇ ತಿರುಗಿ ಬಂದರೆ ಸಹಿಸಿಕೊಳ್ಳುವುದು ಎಷ್ಟು ಕಷ್ಟ ಎಂಬುದು ನನಗೆ ಅರಿವಾಗಿದ್ದು ಆಗಲೇ.
ಒಟ್ಟಿನಲ್ಲಿ ಕೊಳ್ಳುವ ಮತ್ತು ಅಷ್ಟೇ ಬೇಗ ಮಾರುವ ಮನಸ್ಥಿತಿಯಲ್ಲಿರುವ ಇಂದಿನ ಸಮಾಜ ಒಂದು ರೀತಿಯಲ್ಲಿ ಸಮೂಹ ಸನ್ನಿಗೆ ಒಳಗಾಗುತ್ತಿದೆ. ಏನೇನೂ ಅವಶ್ಯಕತೆಯಿಲ್ಲದಿದ್ದರೂ ಸುಮ್ಮನೆ ಸಮಯ ಕೊಲ್ಲುವುದಕ್ಕೆಂದೇ ಕೊಳ್ಳುವ ಮತ್ತು ಕೊಂಡಿದ್ದನ್ನು ಅಷ್ಟೇ ಶೀಘ್ರವಾಗಿ ಮಾಡುವ ಒಂದು ವಿಭೃತಿಗೆ ಒಳಗಾಗುತ್ತಿದೆ. ಕೊಂಡ ಮೊಬೈಲ್ನ್ನು, ಬೈಕ್ನ್ನು, ಕಾರನ್ನು ಇಷ್ಟವಾಗಲಿಲ್ಲ ಎಂದು ಒಂದೇ ದಿನಕ್ಕೆ ಮಾರಾಟ ಮಾಡುತ್ತಿರುವ ಒಂದು ಮಾನಸಿಕ ಅಸ್ಥಿರತೆಯನ್ನು ಕಾಣುತ್ತಿದ್ದೇವೆ. ಅದು ಮುಂದೆ ಅವರ ಭವಿಷ್ಯದಲ್ಲೂ ಪ್ರಭಾವ ಬೀರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಪದೇ ಪದೇ ಬದಲಾಯಿಸುವ ಉದ್ಯೋಗ, ಮತ್ತೆ ಮತ್ತೆ ಬದಲಾಯಿಸ ಬಯಸುವ ಜೀವನ ಸಂಗಾತಿಯಿಂದಾಗಿ ಜೀವನ ಹಾಯಿತಪ್ಪಿದ ದೋಣಿಯಂತಾಗಬಹುದಾದ ಅಪಾಯವನ್ನೂ ಮನಗಾಣಿಸಬೇಕಿದೆ.
ಬೇಕಾಗಿದ್ದಷ್ಟನ್ನೇ ಕೊಳ್ಳುವ ಹಾಗೂ ಕೊಂಡಿದ್ದನ್ನು ಕೊನೆಯವರೆಗೂ ಬಳಸುವುದನ್ನು ಮಾನಸಿಕವಾಗಿ ರೂಢಿಸಿಕೊಳ್ಳಬೇಕಿದೆ.

‍ಲೇಖಕರು G

September 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Soory Hardalli

    Good article. To ad with, recently I purchased Kawachi relaxing chair by Naaptol, paying nearly Rs.3,800, which came in couriers. As there are no details of supplier, manufacturer, I had the only point for lodging complaint is support of Naaptol.
    Within a week, cover of the leg area fell down, by a month, a screw fell down as the size of screw was smaller than required. Neck relaxing belt cut off. Thread connecting the sitting area and the frame went in to pieces. Chair’s life is four month.
    I sent mails to Naaptol support, but since three months, nothing happened. They are prolonging. This is a system, that just by delaying, purchaser get irritated and stop the conversation.
    Better not to buy anything from online shops. At lease if you know the seller, you can contact for service/repair.

    ಪ್ರತಿಕ್ರಿಯೆ
  2. me

    ಕೊಂಡ ಮೊಬೈಲ್ನ್ನು, ಬೈಕ್ನ್ನು, ಕಾರನ್ನು ಇಷ್ಟವಾಗಲಿಲ್ಲ ಎಂದು ಒಂದೇ ದಿನಕ್ಕೆ ಮಾರಾಟ ಮಾಡುತ್ತಿರುವ
    khandithaa saadhyavilla..
    really waste, junk article

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: