ಓದು ಜನಮೇಜಯ : ಉದಯನ, ವಾಸವದತ್ತೆಯರ ಸ್ವಪ್ನದಲ್ಲಿ

(ಇಲ್ಲಿಯವರೆಗೆ…)

ನ್ಯಾಷನಲ್ ಹೈಸ್ಕೂಲಿನ ನಂತರ ನಾನು ಅಲ್ಲಿಯೇ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದೆ. ಎಸ್ ಎಸ್ ಎಲ್ ಸಿಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡವನು ಪಿಯುಸಿಯಲ್ಲಿ ಯಾವ ಐಚ್ಚಿಕ ವಿಷಯಗಳನ್ನು ತೆಗೆದುಕೊಳ್ಳುತ್ತಾನೆ. ಮುಂದೆ ಒಳ್ಳೆಯ ಉದ್ಯೋಗ ದಕ್ಕಿಸಿಕೊಳ್ಳಲು ಯಾವ ಐಚ್ಚಿಕ ತೆಗೆದುಕೊಳ್ಳುತ್ತಾನೆ ? ಸಹಜವೆಂಬಂತೆ ನನ್ನ ಮಿತ್ರರು ವಿಜ್ಞಾನ ತೆಗೆದುಕೊಂಡರು . ನಮ್ಮ ತಂದೆ ನಾನು ವಿಜ್ಞಾನ ತೆಗೆದುಕೊಳ್ಳಬೇಕೆಂದು ಬಯಸಿದರು . ನಾನು ಕೂಡ ಬೇರಾವ ಯೋಚನೆ ಮಾಡದೆ ವಿಜ್ಞಾನ ಆರಿಸಿಕೊಂಡೆ. ಆಗ ಮೂರೇ ಐಚ್ಚಿಕ ವಿಷಯಗಳ ಪಠ್ಯಕ್ರಮದಲ್ಲಿ ಪಿಸಿಎಂ ಅಥವಾ ಪಿಸಿಬಿ ತೆಗೆದುಕೊಳ್ಳಬಹುದಿತ್ತು.  ಹೆಚ್ಚು ಅಂಕಗಳನ್ನು ಗಳಿಸಲು , ಗಣಿತವೇ ಸೂಕ್ತವೆಂದು ಪಿಸಿಎಂ ಆರಿಸಿಕೊಂಡೆವು ನಾನು , ಮಿತ್ರರು. ಓದು ಆರಂಭವಾಯಿತು.
ಆಗ ನಮಗೆ ಕನ್ನಡ ವಿಷಯಕ್ಕೆ ಎರಡು ಡೀಟೇಲ್ಡ್ ಪಠ್ಯಗಳು, ಎರಡು ನಾನ್ ಡೀಟೇಲ್ಡ್. ನಮಗೆ ಪ್ರತಿಮಾ ನಾಟಕ ಎಂಬ ನಾಟಕ , ಅಕ್ರೂರ ಚರಿತೆ ಎಂಬ ಕಾವ್ಯ ಡೀಟೇಲ್ಡ್ ಪುಸ್ತಕಗಳಾಗಿ ನಿಗದಿಯಾಗಿತ್ತು. ಇವುಗಳಲ್ಲಿ ಪ್ರತಿಮಾ ನಾಟಕ ನನ್ನನ್ನು ಇನ್ನಿಲ್ಲದಂತೆ ಆವರಿಸಿ ಬಿಟ್ಟಿತು. ಅದು ಕಾಳೀದಾಸನಿಗೂ ಮೊದಲಿನವನೆಂಬ ಕೀರ್ತಿ ಇದ್ದ ಭಾಸನ ಸಂಸ್ಕೃತ ನಾಟಕದ ಅನುವಾದ.ಅನುವಾದಕರು ಬಸವಪ್ಪಶಾಸ್ತ್ರಿಗಳು(.? )
“ ಭಾಸೋ ಹಾಸಃ “ ಇದು ಭಾಸನ ಬಗ್ಗೆ ಇರುವ ಪ್ರಸಿದ್ಧ ಪ್ರಶಂಸೆ. ಸಂಸ್ಕೃತ ಸಾಹಿತ್ಯ ದೇವಿಯ ಮುಖದ ಮುಗುಳ್ನಗೆಯೇ ಭಾಸ ಎಂಬ ಕೀರ್ತಿ ಅವನದು.ಭಾಸನಂತಹ ನಾಟಕಕಾರರು ತಮ್ಮ ಪ್ರತಿಭೆಯನ್ನು ಮೆರೆದ ಮೇಲೆ ನಾನು ನಾಟಕಗಳಿರುವಾಗ ತನ್ನಂತಹವನಿಗೆ ಹೇಗೆ ಮಾನ್ಯತೆ ದೊರೆಯಬಹುದು ಎಂದು ಕಾಳಿದಾಸನಿಗೆ ಅನುಮಾನ ಹುಟ್ಟಿಸಿದ ನಾಟಕಕಾರ ಇವನು. ಇವನ ಪ್ರತಿಮಾ ನಾಟಕವೋ ಎಲ್ ಬಸವರಾಜರಂತಹವರಿಂದ ಕಡೆದ ವಜ್ರದಂತಿದೆ ಎಂದು ಪ್ರಶಂಸಿಸಲ್ಪಟ್ಟ ನಾಟಕ. ರಾಮನ ವನವಾಸ ಪ್ರಸಂಗದಿಂದ ಆರಂಭವಾಗುವ ಈ ನಾಟಕ ಧಶರಥನ ದುಃಖ, ಸಾವು . ನಂತರ ಮಾವನ ಮನೆಯಿಂದ ಭರತನ ಆಗಮನ , ಊರಾಚೆಯಲ್ಲಿಯೇ ಇರುವ ಪೂರ್ವಜರ ಪ್ರತಿಮೆಗಳ ಸಾಲಿನಲ್ಲಿ ಧಶರಥನ ಪ್ರತಿಮೆಯೂ ಇರುವುದನ್ನು ನೋಡಿದಾಗ ಮಾತ್ರವೇ ಅವನಿಗೆ ಎಲ್ಲ ಕಥೇಯೂ ತಿಳಿದದ್ದು . ಕೂಡಲೇ ರಾಮನನ್ನು ನೋಡಲು ಕಾಡಿಗೆ ತೆರಳಿ ರಾಮನನ್ನು ಕರೆತರಲು ವಿಫಲನಾಗಿ ಮರಳಿದ್ದು, ತಾಯ ಮೇಲೆ ಸಿಟ್ಟುಗೊಂಡು ಮುಖ ನೋಡದೇ ಹೋದದ್ದು, ನಂತರ ಕೈಕೇಯಿಯಿಂದ ದಶರಥನಿಗೆ ಮಗನ ವಿಯೋಗವಾಗ ಬೇಕೆಂಭ ಶಾಪದ ಕಥೆ ತಿಳಿದು ಅವನ ಕೋಪ ಶಮನವಾದದ್ದು ಇದು ನಾಟಕದ ಕಥೆ. ಇದು ನಮಗೆಲ್ಲ ತಿಳಿದ ಕಥೆಯೇ . ಕೆಲವೇ ವ್ಯತ್ಯಾಸಗಳು ಮಾವನ ಮನೆಯಿಂದ ಹಿಂದಿರುಗುತ್ತಿದ್ದ ಭರತ ಅಯೋಧ್ಯಾ ನಗರದ ಪ್ರವೇಶಕ್ಕೆ ತನ್ನ ವಂಶದ ಪಿತಾಮಹರ ಪ್ರತಿಮೆಗಳ ಜೊತೆಯಲ್ಲಿ ತಂದೆಯ ಪ್ರತಿಮೆಯನ್ನು ನೋಡಿದ ಮೇಲೆಯೇ ದಶರಥನ ಸಾವು ಮತ್ತು ಅದರ ಹಿನ್ನೆಲೆ ತಿಳಿಯಿತು ಮತ್ತು ನಗರದ ೊಳಕ್ಕೆ ಹೆಜ್ಜೆಯಿಡದೆ ಅವನು ರಾಮನನ್ನು ವಾಪಸ್ ಕರೆತರಲು ಹೊರಟ ಎಂಬುದು. ಅದಕ್ಕಾಗಿಯೇ ಈ ನಾಟಕಕ್ಕೆ ಪ್ರತಿಮಾ ನಾಟಕ ಎಂದು ಹೆಸರು. ಕಥೆ ತಿಳಿದದ್ದೇ ಆದರೂ ಅದರ ಪಾತ್ರ ಚಿತ್ರಣ , ಸಂಭಾಷಣಾ ಚಾತುರ್ಯ , ಕಥಾ ಸಂವಿಧಾನ ನನ್ನನ್ನು ಸೆಳೆಯಿತು.

ನಾನು ಈ ನಾಟಕದ ಬಗ್ಗೆ ಹೆಚ್ಚು ತೀಳಿಯಬೇಕೆಂದು ಕಾಲೇಜಿನ ಲೈಬ್ರರಿ ಹೊಕ್ಕೆ. ಈ ಲೈಬ್ರರಿ ಒಂದು ಕಾಲೇಜಿನ ಮಟ್ಟಿಗೆ ಹೇಳುವುದಾದರೆ ಒಳ್ಳೆಯ ಲೈಬ್ರರಿಯೇ. ಅದರಲ್ಲಿ ತಡಕಿದಾಗ ಭಾಸನ ಬಗ್ಗೆ ಏ.ಅರ್ . ಕೃಷ್ಣಶಾಸ್ತ್ರಿಗಳ,” ಭಾಸ ಕವಿ “ ಎಂಬ ದೊಡ್ಡ ಗ್ರಂಥ ದೊರೆಯಿತು. ಅದನ್ನು ಪೂರ್ತಿಯಾಗಿ ಒಂದೇ ಉಸಿರಿನಲ್ಲಿ ಓದಿದೆ. ಆಗ ಭಾಸನ ಇತರ ನಾಟಕಗಳನ್ನೂ ಅಧ್ಯಯನ ಮಾಡಬೇಕೆನ್ನಿಸಿತು. ಸರಿ ಮತ್ತೆ ಹುಡುಕಾಟ. ಕಾಲೇಜು ಲೈಬ್ರರಿಯಲ್ಲಿ ಹಾಗೂ ವರ್ಲ್ಡ್ ಕಲ್ಚರ್ ಲೈಬ್ರರಿಯಲ್ಲಿ ಹುಡುಕಾಡಿದಾಗ ಅವರ ನಾಟಕಗಳ ಕನ್ನಡ ಅನುವಾದಗಳನೇಕವು ಸಿಕ್ಕಿದವು. “ ಭಾಸ ಮಹಾಕವಿ “ ಎಂಬ ಸಿ.ಕೆ ವೆಂಕಟರಾಮಯ್ಯನವರ ಮತ್ತೊಂದು ದೊಡ್ಡ ಪುಸ್ತಕವೂ ಸಿಕ್ಕಿತು. ಅದನ್ನೆಲ್ಲಾ ಓದಿದೆ . ಭಾಸ ನಾಟಕ ಚಕ್ರ ನನ್ನನ್ನು ಮತ್ತಷ್ಟು ಸೆಳೆಯಿತು. ಭಾಸ ರಾಮಾಯಣದ ಆಧಾರದ ಮೇಲೆ ಬರೆದ ಇತರೆರಡು ನಾಟಕಗಳು ಯಜ್ಞಫಲ , ಅಭಿಷೇಕ ನನ್ನನ್ನು ಉಳಿದ ನಾಟಕಗಳಂತೆ ಆಕರ್ಷಿಸದಿದ್ದರೂ ಅವರ ಮಧ್ಯಮ ವ್ಯಾಯೋಗ , ದೂತವಾಕ್ಯ, ಧೂತ ಘಟೋದ್ಘಚ , ಕರ್ಣಭಾರ , ಊರುಭಂಗ ಮೊದಲಾದ ಮಹಾಭಾರತ ಆಧಾರದ ನಾಟಕಗಳು ಇಷ್ಟವಾದುವು. ಪ್ರತಿಜ್ಞಾ ಯೌಗಂಧರಾಯಣ , ಸ್ವಪ್ನವಾಸವದತ್ತ ಗಳು ಮನಸೆಳೆವ ಪ್ರೇಮಕಥೆಗಳು . ಇಂದೂ ನಾನು ಆಗಾಗ್ಗೆ ಓದುವ ನಾಟಕಗಳು. ಸ್ವಪ್ನ ವಾಸದತ್ತ ಒಂದು ಪ್ರೇಮದ ಮತ್ತು ಪ್ರೇಮಕ್ಕಾಗಿ ಮಾಡುವ ತ್ಯಾಗದ ಕಥೆ.. ಉದಯನನೆಂಬ ರಾಜ ತನ್ನ ರಾಜ್ಯವನ್ನು ಕಳೆದುಕೊಂಡು ಬೇರೊಬ್ಬ ರಾಜನ ಬಂಧಿಯಾಗುವುದು . ಅವನನ್ನು ಬಿಡಿಸಿಕೊಳ್ಳುವುದಕ್ಕೆ ಅವನ ಮಂತ್ರಿ ಹೂಡುವತಂತ್ರಗಳು ಅವನ ಘೋಷವತಿಯೆಂಬ ವೀಣೆಯ ವಾದನ ಕೌಶಲ್ಯ ಮತ್ತು ಗಜ ಹೃದಯ ನೈಪುಣ್ಯವನ್ನು ಬಳಸಿಕೊಳ್ಳುವುದು. ಉದಯನ ಯಾವ ರಾಜನ ಬಳಿ ಬಂಧೀತನಾಗಿದ್ದಾನೋ ಆ ರಾಜನ ಕುಮಾರಿಯ ಹೃದಯವನ್ನು ಗೆಲ್ಲುವುದು , ಆಗ ಅವನ ಮೊದಲ ಪತ್ನಿಯೇ ಆ ರಾಜಕುಮಾರಿಯ ಸಖಿಯಾಗಿ ತನ್ನ ಗುರುತನ್ನೂ ಹಾಗೂ ಅಸ್ತಿತ್ವವನ್ನು ಮುಚ್ಚಿಟ್ಟು ಸಹಕರಿಸುವುದು , ಅವಳ ಮನೋವೇದನೆ , ಹೀಗೆ ಸಾಗುವ ಕಥೆ ಭಾಸನ ನಾಟಕ ಪರಿಣತಿಯ ಅತ್ಯುನ್ನತ ಅಭಿವ್ಯಕ್ತಿಯೆಂದು ಕೀರ್ತಿಸಲ್ಪಟ್ಟಿದೆ.
ಈ ರೀತಿ ನನಗೆ ಸಂಸ್ಕೃತ ನಾಟಕಗಳ ರುಚಿ ಹತ್ತಿತು. ಅದಕ್ಕೆ ಏ ಆರ್ ಕೃಷ್ಣಶಾಸ್ತ್ರಿಗಳ , ಸಿಕೆ ವೆಂಕಟರಾಮಯ್ಯನವರ ಕೃತಿಗಳೂ ಕಾರಣ. ನಾನು ಕಾಳಿದಾಸ ಭವಭೂತಿ, ಶ್ರೀ ಹರ್ಷ ಶೂದ್ರಕ , ವಿಶಾಖ ದತ್ತ ಮೊದಲಾದವರ ನಾಟಕಗಳನ್ನೂ ಅಧ್ಯಯನ ಮಾಡಿದೆ. ಅಭಿಜ್ಞಾನ ಶಾಕುಂತಲದ ಒಂದು ಅಧ್ಯಾಯ ಎಸ್ ಎಸ್ ಎಲ್ ಸಿ ಯ ಪಠ್ಯದ ಮೂಲಕ ನಮಗೆ ಪರಿಚಿತವಾಗಿತ್ತು. ಅದನ್ನು ಇಡೀ ಓದಿದ್ದಲ್ಲದೆ ಅವನ ಮಾಳವಿಕಾಗ್ನಿ ಮಿತ್ರ, ವಿಕ್ರಮೋವರ್ಶೀಯ ನಾಟಕಗಳನ್ನು , ಭವಭೂತಿಯ ಉತ್ತರ ರಾಮ ಚರಿತೆ, ಶ್ರೀ ಹರ್ಷನ ನಾಗಾನಂದಗಳನ್ನೂ ಓದಿದೆ. ಅದರಲ್ಲಿಯೂ ನನಗೆ ವಿಶಾಖ ದತ್ತನ ಮುದ್ರಾ ರಾಕ್ಷಸ ( ಚಾಣಕ್ಯ , ಚಂದ್ರಗುಪ್ತ ಮತ್ತು ಅಮಾತ್ಯ ರಾಕ್ಷಸನೆಂಬ ನವನಂದರ ಮಂತ್ರಿಯ ನಡುವಣ ತಂತ್ರ , ಕುತಂತ್ರಗಳ ಮೇಲಾಟ ) ಶೂದ್ರಕನ ಮೃಚ್ಛಕಟಿಕ ( ವಸಂತಸೇನೆ , ಚಾರುದತ್ತರ ಪ್ರೇಮ , ರಾಜನ ವಿರುದ್ಧ ಶೂದ್ರಕನ ದಂಗೆಗಳ ಕಥೆ ) ಇವುಗಳನ್ನು ಎಷ್ಟು ಬಾರಿ ಓದಿದ್ದೇನೆಯೋ ಲೆಕ್ಕ ಸಿಕ್ಕಿಲ್ಲ. ಯಾವಾಗ ಕೈಗೆ ತಗುಲಿದರೂ ಮತ್ತೆ ಓದಿಸಿಕೊಳ್ಳುತ್ತಲೇ ಇರುತ್ತವೆ . ಮೃಚ್ಛಕಟಿಕ , ಅನಭಿಜ್ಞ ಶಾಕುಂತಲದ ರೂಪದಲ್ಲಿ ಕಾಳೀದಾಸನ ನಾಟಕ ಇವುಗಳ ಹೊರತು ಉಳಿದವುಗಳನ್ನು ರಂಗದ ಮೇಲೆ ನೋಡುವ ಭಾಗ್ಯ ದೊರಕಿಲ್ಲ . ನಿಜ . ಆದರೂ ಅವುಗಳ ಆಕರ್ಷಣೆ ಕುಗ್ಗಿಲ್ಲ.
ನಂತರ ನನ್ನ ಮನಸ್ಸು ರಾಮಾಯಣದ ಕಡೆಗೆ ಸೆಳೆಯಲ್ಪಟ್ಟಿತು. ಧಾರ್ಮಿಕ ಗ್ರಂಥವೆಂದು ಪಾರಾಯಣ ಮಾಡುವ ಈ ಕಥೆಗೆ ಹಲವು ರೂಪಗಳಿರುವುದು ನನಗೆ ಚೋದ್ಯವೆನಿಸಿತು. ಬೇರೆ ಬೇರೆ ನಾಟಕಕಾರರು ತಮ ತಮಗೆ ಬೇಕಾದಂತೆ ಅದನ್ನು ನಿರೂಪಿಸಿದ್ದನ್ನು ನೋಡಿ ಅದನ್ನು ಮತ್ತಷ್ಟು ಬಗೆದು ನೋಡುವ ಕುತೂಹಲ ಹುಟ್ಟಿತು. ಆಗ ತಾನೇ ಪ್ರಸಿದ್ಧವಾಗುತ್ತಿದ್ದ ಕುವೆಂಪುರವರ ರಾಮಾಯಣ ದರ್ಶನಂ ಅನ್ನು ಮೊದಲು ಅಧ್ಯಯನ ಮಾಡಿದೆ . ಪ್ರತಿಮಾ ನಾಟಕದ ಕಥೆ , ಪಾತ್ರ ಚಿತ್ರಣದ ಜೊತೆಗೆ ಕುವೆಂಪುರವರು ಮಾಡಿಕೊಂಡ ಮಾರ್ಪಾಟುಗಳನ್ನು ಹೋಲಿಸಿದೆ. ಈಗಲೂ ನನಗೆ ರಾಮಾಯಣ ದರ್ಶನಂ ನ ಹಲವು ಸಾಲುಗಳು ನೆನಪಿನಲ್ಲಿವೆ.
ಆರಡಿಯ ನೈದಿಲೆಯ ನೀಲ ಸಾನ್ನಿಧ್ಯದೊಳ್ ತೇಲಿ ತೇಂಕಾಡುವಾ ಸೊಗಕೆ ಉಳಿದೆಲ್ಲ ಸೊಗಮಂ ಬಿಟ್ಟು ಬೀಸಾಡಿ ಬಂದಳೋ ವಸುಂಧರಾ ನಂದನೆ ಅದಂ ಪಿಡಿದು ಮುಡಿಯೊತ್ತುವನ್ನೆಗಣಂ ಶಾಂತಿಯಿಲ್ಲೆನಗೆ
ಆರ ಕಂಠದ ವಿಪಂಚಿಕಾ ನಾದಮಂ ಕೇಳಿ ಕಿವಿ ತಣಿಯದೋ ಅದನಾಲಿಪನ್ನೆಗಮಣಂ ಶಾಂತಿಯಿಲ್ಲೆನಗೆ,
ಇವು ಭರತ ರಾಮನನ್ನು ನೋಡಲು ತವಕಿಸುತ್ತಿರುವುದನ್ನು ವರ್ಣಿಸುವ ಸಾಲುಗಳು.
ಕುಮಾರ ವ್ಯಾಸ ಹೇಳುತ್ತಾನೆ :
ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ
ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ.-ಎಂದು
ಆದರೆ ನಾನು ರಾಮಾಯಣದ ಕವಿಗಳಲ್ಲಿ ಕೈಗೆ ಸಿಗುವರನೆಲ್ಲಾ ಆಪೋಶನ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಿದೆ.
(ಮುಂದುವರಿಯುವುದು…)

‍ಲೇಖಕರು G

September 17, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. shiva

    swapnavasavadatta andre ondu punch line nenapagutthe
    “Yadi tavadayam swapnaha, dhanyamapratibhodanam” arthath
    “adu kanasagiddare echcharavagadiruvide olithu”

    ಪ್ರತಿಕ್ರಿಯೆ

Trackbacks/Pingbacks

  1. ಓದು ಜನಮೇಜಯ : “ದನವಂ ಕಡಿ ಕಡಿದು (ಜೈನ)ಬಸದಿಗೆಳೆಯುತ್ತಿರ್ಪರ್“ « ಅವಧಿ / Avadhi - [...] ಓದು ಜನಮೇಜಯ : “ದನವಂ ಕಡಿ ಕಡಿದು (ಜೈನ)ಬಸದಿಗೆಳೆಯುತ್ತಿರ್ಪರ್“ September 18, 2014 (ಇಲ್ಲಿಯವರೆಗೆ…) [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: