ಪಿ ಮಹಮ್ಮದ್ ಮೂಲಕ
ಹಾಸ್ಯಪ್ರಜ್ಞೆ ಎಂಬ ಅತ್ಯಮೂಲ್ಯ ಐಟಮ್ಮಿನ ಕುರಿತು ‘ಕೊರವಂಜಿ’ ಪತ್ರಿಕೆಯನ್ನು ಇಪ್ಪತ್ತೈದು ವರ್ಷಗಳ ಕಾಲ ನಡೆಸಿದ ಅನುಭವದ ಆಧಾರದಲ್ಲಿ ರಾಶಿ(ಡಾ ಶಿವರಾಂ) ಹೀಗೆ ಬರೆಯುತ್ತಾರೆ..
“..ಒಂದು ಆಶ್ಚರ್ಯದ ಸಂಗತಿಯನ್ನು ಗಮನಿಸಿದ್ದೇನೆ. ಶಿಕ್ಷಣಕ್ಕೂ ಮತ್ತು ಹಾಸ್ಯಪ್ರಜ್ಞೆಗೂ ಯಾವುದೆ ಸಂಬಂಧವಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಿರುವ ಬುದ್ಧಿವಂತ ಜನ; ಆದರೆ ಅವರಿಗೆ ನವಿರಾದ ಹಾಸ್ಯ ಅರ್ಥವಾಗಲ್ಲ. ಅದೇ ವೇಳೆ ಅಷ್ಟೇನೂ ಉನ್ನತ ಶಿಕ್ಷಣ ಪಡೆಯದ ಕಂಡಕ್ಟರು, ಸಣ್ಣ ವ್ಯಾಪಾರಸ್ಥರು, ಗೃಹಿಣಿಯರು ಮತ್ತು ಸಾಧಾರಣ ಗುಮಾಸ್ತರು ಮುಂತಾದವರು ಹಾಸ್ಯ ಚಟಾಕಿಯನ್ನು ಥಟ್ಟನೆ ಅರ್ಥ ಮಾಡಿಕೊಳ್ಳುತ್ತಾರೆ….”
“….ಉನ್ನತ ಶಿಕ್ಷಣ ಹಾಸ್ಯಪ್ರಜ್ಞೆಯನ್ನು ಬೆಳೆಸುವುದಿಲ್ಲ. ಅದೊಂದು ಹುಟ್ಟುತ್ತಲೇ ನಮ್ಮ ಜೊತೆಯಲ್ಲಿ ಬರುವ ಗುಣ ಇರಬಹುದು. ಶಿಕ್ಷಣ ಅದನ್ನು ಸ್ವಲ್ಪ ಮಟ್ಟಿಗೆ ಅರಳುವಂತೆ ಮಾಡಬಹುದೇನೋ. ಆದರೆ ಅದನ್ನು ಹುಟ್ಟಿಸಲಾರದು. ಕ್ಷುಲ್ಲಕ ನಗೆಹನಿಗಳಿಗೆ ಛಾವಣಿ ಹಾರಿಹೋಗುವಂತೆ ನಗುವ, ಆದರೆ ನವಿರಾದ ಹಾಸ್ಯಕ್ಕೆ ಸ್ಪಂದಿಸಲು ವಿಫಲರಾಗುವ ಮೇಲ್ವರ್ಗದ ಮಂದಿಯನ್ನು ಕಂಡಿದ್ದೇನೆ. ಹತ್ತು-ಹನ್ನೆರಡು ವರ್ಷ ಪ್ರಾಯದ ಹುಡುಗ ಹುಡುಗಿಯರು ಸೂಕ್ಷ್ಮ ಹಾಸ್ಯಕ್ಕೆ ಸ್ವಯಂಪ್ರೇರಿತರಾಗಿ ಮುಕ್ತವಾಗಿ ನಗುವುದನ್ನೂ ನೋಡಿದ್ದೇನೆ.
ಕುರುಡರು ಕುರುಡರನ್ನು ಕುರುಡರಿಗಾಗಿ ಆಳುವ ಪ್ರಜಾಪ್ರಭುತ್ವದಲ್ಲಿ ಹಾಸ್ಯ ಒಂದು ಅತ್ಯಾವಶ್ಯಕ ವಸ್ತು. ಹಾಸ್ಯ ಚೆಲ್ಲುವ ಬೆಳಕು ಕುರುಡರಿಗೆ ಮುಂದಿನ ದಾರಿಯನ್ನು ಗುರುತಿಸಲು ಸಹಕಾರಿಯಾಗಬಹುದು. ನಮ್ಮನಾಯಕರನ್ನು ಪರಿಹಾಸ್ಯ ಕೆಣಕಿದಂತೆ ಬೇರೆ ಯಾವುದೂ ಕೆಣಕಲಾರದು. ಅವರನ್ನು ಹಾಸ್ಯ ಮಾಡುವ ಮೂಲಕ ಮಾತ್ರ ಈ ಕುರುಡು ನಾಯಕರಿಗೆ ಸತ್ಯದ ದರ್ಶನ ಮಾಡಲು ಸಾಧ್ಯ. ಹಾಗಾಗಿ ಪ್ರಜಾತಂತ್ರಕ್ಕೆ ಹಾಸ್ಯ ಬೇಕು..”





0 Comments