ಆಹಾರ ಕೊರತೆಯ, ಅಪೌಷ್ಠಿಕತೆಯ ರೋಗಗ್ರಸ್ಥ ಭಾರತ ನಮಗೆ ಬೇಡ
– ಪವನಗಂಗಾಧರ
ನಮ್ಮ ದೇಶದಲ್ಲಿ ಯಾವುದೇ ನಿರ್ಗತಿಕ ಚಿಕ್ಕ ಮಗು ಅಥವಾ ಒಬ್ಬ ವ್ಯಕ್ತಿ ಅಥವಾ ಒಬ್ಬ ಮಹಿಳೆ ಪ್ರತಿ ಹೊತ್ತು ಹಸಿವು ನೀಗಿಸಿಕೊಂಡು ಸಮಾದಾನವಾಗಿ ಮಲಗಲು ಸಾದ್ಯವೇ? ಯಾವುದೇ ನಿರಾಶ್ರಿತ ವ್ಯಕ್ತಿ ಎಂದಾದರು ಬೆಚ್ಚನೆ ಹೊದಿಕೆಯೊಂದಿಗೆ ಒಂದು ಸೂರಿನಡಿಯಲ್ಲಿ ಮಲಗಲು ಸಾದ್ಯವೆ? ಯಾವದೇ ಬಡ ರೋಗಿ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆದು ಸಮೃದ್ದವಾಗಿ ಜೀವನ ನಡೆಸಲು ಸಾದ್ಯವೆ? ಯಾವದೇ ಬಡ ತಂದೆ-ತಾಯಿ ತಮ್ಮ ಮಕ್ಕಳನ್ನು ದುಡಿಯಲು ಕಳಿಸದೆ ಶಾಲೆಗೆ ಕಳಿಸಲು ಸಾದ್ಯವೆ? ಯಾವುದೇ ಸೌಲಭ್ಯ ಪಡೆಯದ ಸಾವಿರಾರು ಅನಾತ ಮಕ್ಕಳು ಇದ್ದಾರೆ, ನೂರಾರು ನಿರಾಶ್ರಿತ ಕುಟುಂಬಗಳು ಇವೆ, ಸೂಕ್ತ ಚಿಕಿತ್ಸೆ ದೊರೆಯದೆ ಲಕ್ಕವಿಲ್ಲದಷ್ಟು ರೋಗಿಗಳು ಪ್ರತಿ ದಿವಸ ದೇಶದ ಯಾವುದೇ ಮೂಲೆಯಲ್ಲಾದರು ಸಾಯುತ್ತಲೇ ಇದ್ದಾರೆ. ಇಂತಹ ಯಾವುದೇ ಸಮಸ್ಯೆ ಇಲ್ಲವಿದ್ದರೆ, ನಮ್ಮ ಸ್ವತಂತ್ರ ಭಾರತದ ಕನಸು ನನಸಾಗಿರತಿತ್ತು. ಅನೇಕ ಸ್ವತಂತ್ರ ಹೋರಾಟಗಾರರ ಬಯಕೆ ಆಗಿದ್ದ ಸಮೃದ್ದ ಬಾರತ ನಿರ್ಮಾಣವಾಗಿದೆ ಎಂದು ನಂಬಬಹುದಿತ್ತು. ಆದರೆ ದುರದೃಷ್ಟವಷಾತ್ ಪ್ರಸಕ್ತ ಭಾರತ ಇಂತಹ ಸಾಮಾನ್ಯ ಮೂಲಭೂತ ಸಮಸ್ಯೆಗಳಿಂದಲೂ ಕೂಡ ಮುಕ್ತವಾಗಿಲ್ಲ.
ಈ ಹಿಂದೆ ಸ್ವತಂತ್ರ ಬಂದ ಎರಡು-ಮೂರು ದಶಕಗಳವರೆಗೂ ಸಾಮಾನ್ಯ ಜನ ಒಂದೊತ್ತಿನ ಊಟಕ್ಕೂ ಪರದಾಡಬೇಕಿತ್ತು. ಈಗಲೂ ಹಳ್ಳಿಗಳಲ್ಲಿ ಹಿರಿಯರು ಬರಗಾಲದ ಸಂದರ್ಭದಲ್ಲಿ ಹಳ್ಳ-ಕೊಳ್ಳಗಳಲ್ಲಿ ಸಿಗುವ ಈಚಲು ಮರದ ಗಡ್ಡೆ ಅಥವಾ ಇನ್ನಾವುದೋ ಸೊಪ್ಪು ತಿಂದು ಬದುಕಿದ ದಾರುಣ ಬದುಕನ್ನು ನೆನೆಯುತ್ತಾರೆ. ಅದೇ ಜನ, ಆಗಿನ ಕಾಲಕ್ಕೆ ಹೋಲಿಸಿಕೊಂಡರೆ ಈಗಿನ ಪೀಳಿಗೆ ತುಂಬಾ ಅದೃಷ್ಟಶಾಲಿ ಎಂದಲ್ಲಾ ಹೇಳುತ್ತಾರೆ. ಇಷ್ಟೆಲ್ಲಾ ಹೇಳಿದರೂ ಪ್ರಸಕ್ತ ಸಂದರ್ಭದ ನೈಜ ಸ್ಥಿತಿ ನೆನೆದಾಗ ಮಾತ್ರವೇ ಇಂದಿನ ಪೀಳಿಗೆ ಮತ್ತು ಮುಂದಿನ ಪೀಳಿಗೆಯ ಬಗ್ಗೆ ಆತಂಕ ಮೂಡುತ್ತದೆ. ಇತಿಹಾಸದಲ್ಲಿ ಮಹಿಳೆ ಅನೇಕ ಸೌಲಭ್ಯಗಳಿಂದ ವಂಚಿತಳಾಗಿ ಮಾನವೀಯ ಜೀವನದಿಂದ ದೂರವಾಗಿದ್ದ ಕಾಲಘಟ್ಟ ನಡೆದುಹೋಗಿತ್ತು. ಆದರೆ ಈಗಲೂ ಕೂಡ ಕೆಲವು ಸಮುದಾಯಗಳ ಮಹಿಳೆ ಅನೇಕ ಮೂಲಭೂತ ಅವಶ್ಯಕತೆಗಳಿಂದ ವಂಚಿತಳಾಗಿದ್ದಾಳೆಎಂದರೆ ನಂಬಲೇಬೇಕು. ಮಕ್ಕಳನ್ನು ಹೇರುವ ತಾಯಿಯೇ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. ಅತಿ ಮುಖ್ಯವಾಗಿ ಆಹಾರದ ಸಮಸ್ಯೆಯನ್ನು ಎದುರಿಸುತ್ತಿದ್ದಾಳೆ. ಒಂದು ವೇಳೆ ಆಹಾರ ದೊರೆತರೂ, ಅದರಲ್ಲಿ ಪೌಷ್ಠಿಕತೆಯ ಕೊರತೆಯಿದೆ.
ಪ್ರಪಂಚದ ಅತ್ಯಂತ ಆರೋಗ್ಯಕರ ವ್ಯಕ್ತಿಗಳು ನಮ್ಮ ದೇಶದಲ್ಲಿಯೇ ಇದ್ದಾರೆ. ದುರಂತವೆಂದರೆ ದೇಶದ ಪ್ರತಿ ಎರಡು ಮಕ್ಕಳಲ್ಲಿನ ಒಂದು ಮಗು ಆಹಾರದ ಕೊರತೆಯನ್ನು ಎದುರಿಸುತ್ತಿದ್ದು, ದೇಹದ ಮತ್ತು ಬುದ್ದಿಶಕ್ತಿಯ ಬೆಳವಣಿಗೆಗೆ ಅಗತ್ಯವಿರುವ ಪೋಶಕಾಂಶಗಳ ಕೊರತೆಯನ್ನು ಎದುರಿಸುತ್ತಿದೆ. ಹಾಗೆಯೆ ಪ್ರತಿ ಮೂರು ಮಹಿಳೆಯರಲ್ಲಿನ ಇಬ್ಬರು ಮಹಿಳೆಯರು ಅನಿಮಿಯಾಗೆ ತುತ್ತಾಗಿದ್ದಾರೆ. ನಮಗಿಂತಲೂ ಬಡವಾಗಿರುವ ದೇಶಗಳು ಸಮರ್ಥವಾಗಿ ಹಸಿವು ಮತ್ತು ಅಪೌಷ್ಠಿಕತೆಯನ್ನು ಎದುರಿಸತ್ತಿವೆ. ನಮ್ಮ ದೇಶದಲ್ಲಿ ನೂರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಆಹಾರದ ಕೊರತೆ ನೀಗಿಸಲು ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಉದ್ದೇಶದಿಂದಲೇ ರೂಪಿಸುತ್ತಿವೆ. ಆದರೆ ಈ ಯೋಜನೆಗಳ ಹಣವೆಲ್ಲಾ ಮಾನವೀಯತೆಯ ಜೀವ ಕಳೆದುಕೊಂಡ ಹೆಣಗಳ ಪಾಲಾಗುತ್ತಿದೆ. ಈ ಯೋಜನೆಗಳು ಬ್ರಷ್ಟಾಚಾರದ ಮಹಾಮಾರಿಗೆ ಸಿಲುಕಿ ಮಾಯವಾಗುತ್ತಿವೆ. ಇಲ್ಲಿ ಪೌಷ್ಠಕ ಆಹಾರವಿಲ್ಲದೆ ಮಕ್ಕಳು ಬಡವಾಗುತ್ತಿವೆ ಮತ್ತು ಅಪೌಷ್ಠಿಕ ಬಡಕಲು ದೇಹದ ಮುಂದಿನ ಇದೇ ಪೀಳಿಗೆ ಭವ್ಯ ಭಾರತನ್ನು ಕಟ್ಟಲು ಹೋಗುತ್ತಿದೆ. ಇದೇ ಪ್ರಸಕ್ತ ನಮ್ಮ ದೇಶದ ವಿಪರ್ಯಾಸದ ಸ್ಥಿತಿ.
ಹಲವು ಆಹಾರದ ಯೋಜನೆಗಳು ನಮ್ಮ ದೇಶದಲ್ಲಿ ರೂಪಿತವಾಗಿವೆ. ಇಂತಹ ಮದ್ಯಾಹ್ನದ ಬಿಸಿಯೂಟ ಯೋಜನೆಯಿಂದಲೇ ಇಡೀ ದೇಶದ ಸುಮಾರು ೧೪೦ ಮಿಲಿಯನ್ ಪ್ರಾಥಮಿಕ ಶಿಕ್ಷಣದ ಮಕ್ಕಳಿಗೆ ಉಚಿತ ಊಟ ನೀಡಲಾಗುತ್ತಿದೆ. ಆದರೆ ಈ ಮದ್ಯಾಹ್ನದ ಬಿಸಿಯೂಟ ಎಷ್ಟು ಪೌಷ್ಠಿಕತೆಯಂದ ಕೂಡಿದೆ ಎಂಬುದು ಮಾತ್ರ ಪ್ರಶ್ನಾರ್ಹ. ಅಧಿಕೃತ ಸಮೀಕ್ಷೆಯ ಪ್ರಕಾರವೆ ಕಳೆದ ಒಂದು ದಶಕದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯನ್ನು ಕೇವಲ ಶೇ.೪೭ರಿಂದ ಶೇ.೪೬ಕ್ಕೆ ಇಳಿಸಲಾಗಿದೆ. ಅಂದರೆ ನಮ್ಮ ದೇಶದ ಸರ್ಕಾರದ ದಶಕದಲ್ಲಿನ ಸಾಧನೆ ಕೇವಲ ಒಂದು ಪರ್ಸೆಂಟ್ ಅಪೌಷ್ಠಿಕತೆಯ ಸಮಸ್ಯೆಯನ್ನು ಇಳಿಸಿದ್ದು. ಈ ರೀತಿಯ ಮಹತ್ತರ ಸಾಧನೆಗಳನ್ನು ಮಾಡುವುದಕ್ಕಾಗಿಯೆ ನಮ್ಮ ಸರ್ಕಾರಗಳು ಯೋಜನೆಗಳನ್ನು ರೂಪಿಸುತ್ತವೆ. ಇಂತಹ ಯೋಜನೆಗಳಿಂದಲೇ ನಿರ್ಗತಿಕರ ಸಮಸ್ಯೆಗಳು ದೂರವಾಗುತ್ತವೆ?
ಇಡೀ ಪ್ರಪಂಚದ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಮತ್ತು ಮಹಿಳೆಯರ ಪ್ರಮಾಣಲ್ಲಿ ಶೇ. ೪೩ರಷ್ಟು ನಮ್ಮ ದೇಶದಲ್ಲಿಯೇ ಇದ್ದಾರೆ. ಅಂದರೆ ಪ್ರಪಂಚದಲ್ಲಿಯೇ ಬಹುಪಾಲು ಅಪೌಷ್ಟಿಕತೆಯಿಂದ ಇರುವವರು ನಮ್ಮ ದೇಶದ ಜನತೆ. ಈ ರೀತಿ ಆಹಾರದ ಕೊರತೆ ಬರಲು, ಸಿಗುವ ಆಹಾರ ಅಪೌಷ್ಠಿಕತೆಯಿಂದ ಕೂಡಿರಲು ಹಲವು ಕಾರಣಗಳು ಇವೆ. ಈ ಕಾರಣಗಳು ಬಹುತೇಕ ಸರ್ಕಾರಗಳು ರೂಪಿಸುವ ನೀತಿಗಳು ಮತ್ತು ಅವುಗಳ ಜನ ವಿರೋದಿ ಕ್ರಮಗಳೇ ಆಗಿವೆ. ಅನ್ನ ಬೆಳೆಯುವ ರೈತನ ಪರವಾದ ಯಾವ ಕಾನೂನು, ನೀತಿಗಳು ಇವೆ? ಫಲವತ್ತಾದ ಭೂಮಿಯನ್ನು ರೈತನದಿಂದ ವಶಪಡಿಸಿಕೊಳ್ಳುತ್ತಿರವಾಗ, ಇದನ್ನು ವಿರೋದಿಸಿ ಪ್ರತಿಭಟನೆ ಮಾಡುವ ರೈತನಿಗೇ ಗುಂಡು ಹಾರಿಸುವ ಸರ್ಕಾರಗಳ ಈ ಕ್ರಮಗಳು ಮತ್ತು ನೀತಿಗಳು ರೈತ ಪರ ಎಂದು ಹೇಳಲು ಸಾದ್ಯವೇ? ಇದಕ್ಕೆ ನಮ್ಮ ರಾಜ್ಯದ ಹಾವೇರಿಯಲ್ಲಾದ ಘಟನೆ, ಸಿಂಗೂರಿನಲ್ಲಾದ ಸಾವುಗಳು, ಅಷ್ಟೇಕೆ ಕೆಲವೇ ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಾದ ರೈತರ ಹೋರಾಟದಂತಹ ನೂರಾರು ಉದಾಹರಣೆಗಳು ನಮ್ಮ ಸ್ವತಂತ್ರ ಭಾರದಲ್ಲಿ ಕಾಣುತ್ತವೆ. ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಹೆಚ್ಚು ಹಣ ವಿನಿಯೋಗ ಮಾಡಲು ತಯಾರಿಲ್ಲ. ರೈತರ ಸಾಲ ಮನ್ನಾ ಮಾಡಲು ರೆಡಿಯಿಲ್ಲ. ಆದರೆ ಕಾರ್ಪೋರೇಟ್ ವಲಯದ ಮಿನಿ ಕಂಪನಿಗಳಿಂದ ಹಿಡಿದು ಬೃಹತ್ ಕಂಪನಿಗಳವರೆಗೆ ಲೆಕ್ಕವಿಲ್ಲದಷ್ಟು ತೆರಿಗೆ ವಿನಾಯಿತಿ ನೀಡಲು ಮಾತ್ರ ಸರ್ಕಾರಗಳು ತುದಿಗಾಲಲ್ಲಿ ನಿಂತಿವೆ. ಆದರೆ ರೈತ ಪರವಾದ ನಿಲುವು ಮಾತ್ರ ತಾಳುವುದಿಲ್ಲ. ಈಗಾಗಲೇ ದೇಶದ ಗಮನ ಸೆಳೆದಿರುವ ಭ್ರಷ್ಟಾಚಾರ ಇಷ್ಟು ಬೃಹತ್ತಾಗಿ ಬೆಳೆಯಲು ಈ ಕಾರ್ಪೊರೇಟ್ ವಲಯವು ಕೂಡ ಮುಖ್ಯ ಕಾರಣವೆಂದು ಹಲವು ಗಣ್ಯರು ಹೇಳುತ್ತಿದ್ದಾರೆ. ಅಂದರೆ ಸರ್ಕಾರಗಳು ಇಗಲಾದರೂ ಎಚ್ಚೆತ್ತುಕೊಂಡು ಭಾರತದಲ್ಲಿ ಸ್ವಲ್ಪಮಟ್ಟಿಗೆ ಕಾರ್ಪೊರೇಟ್ ಕಡೆ ಇರುವ ದಿಕ್ಕನ್ನು ಬದಲಾಯಿಸಿ ರೈತ ಪರವಾದ, ಕೃಷಿ ಪರವಾದ ಮತ್ತು ಸಾಮಾನ್ಯ ಜನರ ಪರವಾದ ನಿಲುವನ್ನು ತಾಳಬೇಕು. ಏಕೆಂದರೆ ಹಸಿವಾದಾಗ ಹಸಿವು ನೀಗಿಸುವುದು ಆಹಾರ ಬೆಳೆಯುವ ರೈತನೇ ಹೊರತು ಯಾವದೋ ಕಂಪನಿ ಕಂಡುಹಿಡುಯುವ ಸಾಫ್ಟ್‌ವೇರ್ ಅಲ್ಲ. ಅದಕ್ಕಾಗಿಯೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು ಅಥವಾ ರೈತ-ಕೃಷಿ ಪರ ನಿಲುವುಗಳನ್ನು ತಾಳದೆ ಮಲಗಿರುವ ಸರ್ಕಾರಗಳನ್ನು ಜನರೆ ಬಡಿದೆಬ್ಬರಿಸಬೇಕು. ಒಟ್ಟಾರೆ ಮುಂದೊಂದು ದಿನ ಆಹಾರದ ಕೊರತೆಯನ್ನು ದೇಶದ ಜನತೆ ಎದುರಿಸಬಾರದು. ಈಗಿರುವ ಅಪೌಷ್ಠಿಕತೆಯನ್ನೂ ಸಹ ಸಮರ್ಥವಾಗಿ ಎದುರಿಸಬೇಕು. ಆಗ ಮಾತ್ರವೇ ಭವ್ಯ ಭಾರತ ನಿರ್ಮಾಣವಾಗುತ್ತದೆ. ಇಲ್ಲವಾದರೆ ಮುಂದೆ ರೋಗ ಪೀಡಿತ ಭಾರತ ನಿರ್ಮಾಣವಾಗುವುದಂತೂ ಖಚಿತ. ಅಹಾರ ಕೊರತೆಯ, ಅಪೌಷ್ಠಿಕತೆಯ ರೋಗಗ್ರಸ್ಥ ಭಾರತ ನಮಗೇಕೆ ಬೇಕು? ಬೇಡವೇ ಬೇಡ.






0 Comments