
ಆರ್ ಜಿ ಹಳ್ಳಿ ನಾಗರಾಜ್
*ಭಾನುವಾರ ಸಾಯಂಕಾಲ ಬೆಂಗಳೂರು ಒಳಗೊಂಡಂತೆ ರಾಜ್ಯದ ಹಲವೆಡೆ ಮಳೆ. ಮಂಡ್ಯ ಬಳಿಯ ‘ಹಳೆ ಬೂದನೂರು’ ಹೋಗಲು ಮೈಸೂರು ಬಸ್ಸು ಹತ್ತಿದೆ. ಅತಿಯಾದ ಟ್ರಾಫಿಕ್… ರಾತ್ರಿ ೯ ಗಂಟೆಗೆ ಮದ್ದೂರು ತಲುಪಿದ್ದೆ. ಕಂಡಕ್ಟರ್ ಬಳಿ ಕೇಳಿಕೊಂಡೆ: ‘ಹಳೆ ಬೂದನೂರು ಇಳಿಯಬೇಕು. Request Stop ಕೊಟ್ಟರೆ ಉಪಕಾರವಾಗುತ್ತೆ’.
*ನನ್ನ ಮನವಿ ಪರಸ್ಕರಿಸಿ ಬೂದನೂರಿನಿಂದ ಸ್ವಲ್ಪ ದೂರದಲ್ಲಿ ಬಸ್ ನಿಲ್ಲಿಸಿದರು. ಕಂಡಕ್ಟರ್ ಉಪಕಾರಕ್ಕೆ ಥ್ಯಾಂಕ್ಸ್ ಹೇಳಿ ಇಳಿದೆ. ತುಂತುರು ಮಳೆ ಹನಿಯುತ್ತಿತ್ತು. ಗವ್ವೆನ್ನುವ ಕತ್ತಲು. ರಸ್ತೆ ಎರಡೂ ಕಡೆ ಬೆಳಕು ಚೆಲ್ಲುತ್ತ ವಾಹನಗಳು ರಭಸವಾಗಿ ಓಡುತ್ತಿದ್ದವು. ಕಷ್ಟಪಟ್ಟು ರಸ್ತೆ ದಾಟಿದೆ.
*ಎರಡು ದಶಕಗಳ ಹಿಂದೆ ಬರಡಾಗಿದ್ದ ನೆಲದಲ್ಲಿ ಗೆಳೆಯ ಪುಟ್ಟಸ್ವಾಮಿ ಪ್ರಾಯೋಗಿಕವಾಗಿ ನೆಟ್ಟ ಸುಮಾರು ೫೦೦ ತೇಗದ ಮರಗಳು ಮುಗಿಲೆತ್ತರಕ್ಕೆ ಬೆಳೆದು ಯೌವನ ಸೂಸುತ್ತಿದ್ದು…. ಜೊತೆಗೆ ವಿವಿಧ ಬೆಳೆಗಳ ಪ್ರಯೋಗದಲ್ಲಿ ಏಳುಬೀಳುಗಳನ್ನು ಕಂಡು ಈಗ ನೋಡುವಂತಿರುವ ತೋಟದ ಭೇಟಿ ನನ್ನ ಉದ್ದೇಶವಾಗಿತ್ತು.
*ಹಳ್ಳಿಗಳೆಂದರೆ ಸರ್ಕಾರಕ್ಕೆ ಎಂಥಾ ನಿರ್ಲಕ್ಷ್ಯ ಇದೆ ಎನ್ನುವುದಕ್ಕೆ ಒಂದು ಸಾವಿರಕ್ಕೂ ಹೆಚ್ಚಿನ ಮನೆಗಳ ಆ ಊರಿನಲ್ಲಿ ಇಡೀ ದಿನ (ರಾತ್ರಿಯೂ) ವಿದ್ಯುತ್ ಇಲ್ಲದ್ದು ಸಾಕ್ಷಿಯಾಗಿತ್ತು. ಕತ್ತಲಲ್ಲೆ ಅಂದಾಜು ರಸ್ತೆ, ಮನೆ ಹುಡುಕುತ್ತ ಎದುರು ಸಿಕ್ಕವರೊಬ್ಬರನ್ನು ವಿಚಾರಿಸಿ ಗೆಳೆಯನ ಮನೆ ತಲುಪಿದಾಗ ೯.೨೦ರ ಸಮಯ.
*ಮಧ್ಯರಾತ್ರಿವರೆಗೂ ಏನೆಲ್ಲಾ ಹರಟಿದೆವು. ಕೃಷಿಯ ಕಷ್ಟ, ಕೆಲಸಗಾರರ ಕೊರತೆ, ಬೆಳೆಗಳಿಗೆ ಸಿಕ್ಕದ ಬೆಲೆ, ದುಬಾರಿ ವೆಚ್ಚ, ಹಳ್ಳಿಗಳ ಅಭಿವೃದ್ಧಿಯ ನಿರ್ಲಕ್ಷ್ಯ, ರಾಜಕಾರಣ, ಪತ್ರಿಕಾ ಬರಹಗಳು, ಈಚಿನ ಹೊಸ ಓದು, ಮಂಡ್ಯ ಜಿಲ್ಲೆಯ ಮರ್ಯಾದೆ ಹತ್ಯೆ… ಮಾರನೇ ದಿನದ ಅಂತರಜಾತಿಯ ಮದುವೆ ಸಮಾವೇಶ… ಒಂದೇ ಎರಡೇ….
*ಬೆಳಗ್ಗೆ ಗೆಳೆಯನ ಜೊತೆ ತೋಟಕ್ಕೆ ಭೇಟಿ. ಬೂದನೂರು ಸುತ್ತಲೂ ಹಸಿರಿನ ಗದ್ದೆ, ತರಕಾರಿ ಬೆಳೆ, ತೋಟಗಳು ಮನಸ್ಸನ್ನು ಅರಳಿಸಿದವು. ಎರಡು ದಶಕದ ಹಿಂದೆ ಪುಟ್ಟಸ್ವಾಮಿಯ ಬಟಾಬಯಲು ಹೊಲ ಕಂಡಿದ್ದ ನನಗೆ ಈಗ ಕಂಡ ದೃಶ್ಯವೇ ಬೇರೆ. ಸುತ್ತೆಲ್ಲ ಹಸಿರು… ಅಲ್ಲಿ ತೇಗದ ಮರ, ಅಡಕೆ, ಬಾಳೆ, ಮಲ್ಲಿಕಾ ಮಾವು, ವಿವಿಧ ತರಕಾರಿ ಬೆಳೆ, ದನಕರುಗಳಿಗೆ ವಿಶೇಷವಾಗಿ ಬೆಳೆದ ಹುಲ್ಲು,… ಇದನ್ನು ಆಗುಮಾಡಲು ಸಾಧಕ ರೈತರ ಭೇಟಿಗೆ ಊರೂರು ಅಲೆದದ್ದು ಗೊತ್ತಿತ್ತು. ಇದೆಲ್ಲ ಏಕ್ ದಂ ಪವಾಡದಂತೆ ಆಗಿದ್ದಲ್ಲ. ಒಂದು ವಿಶೇಷ ಅಂದರೆ ರಾಸಾಯನಿಕ ಬಳಸದೆ “ನೈಸರ್ಗಿಕ ಸಹಜ ಕೃಷಿ”ಯಲ್ಲಿ ಬೆಳೆದ ವೈವಿಧ್ಯ ಬೆಳೆ ಅವು.
*ಸಮೀಪದಲ್ಲೆ ನವಿಲುಗಳ ಹಾಡಿನ ಗಾನ, ತೋಟದಲ್ಲಿನ ಕುಟೀರ, ಕೆಲಸದವರಿಗೆ ಹಾಗೂ ತನಗೆ ತಂಗಲು (ಓದಿ ಬರೆಯಲು ಪುಸ್ತಕ ಸಂಗ್ರಹದ) ಮನೆ, ಅಲ್ಲಲ್ಲೇ ಬಿದ್ದ ವ್ಯವಸಾಯದ ಪರಿಕರ, ಎರೆಹುಳು ಗೊಬ್ಬರದ ತೊಟ್ಟಿಗಳು, ನಾಟಿ ಹಾಗೂ ಸೀಮೆ ಹಸುಗಳು, ಅವುಗಳ ಕರುಗಳು, ನಾಟಿ ಹೋರಿಗಳು, ಮೇಕೆಗಳು… ದೈನಿಕ ೨೫ ಲೀಟರ್ ಹಸುಗಳ ಹಾಲು ಮಾರಾಟದ ವ್ಯವಸ್ಥೆ … ಎಲ್ಲಾ ಸಾಧನೆಗೆ ಈ ಗೆಳೆಯ ಹಾಕಿದ ಪರಿಶ್ರಮ, ಸಾಧಿಸುವ ಆತ್ಮವಿಶ್ವಾಸ ಎದ್ದು ಕಾಣುತ್ತದೆ.
😊 ಮುಂದಿನ ದಿನಗಳಲ್ಲಿ ಅವನ ಕನಸು ದೊಡ್ಡದಿದೆ. ದಿನಕ್ಕೆ ೧೦೦ ಲೀಟರ್ ಹಾಲು ಉತ್ಪತ್ತಿ, ನೂರು ಕುರಿ ಸಾಕಾಣಿಕೆ, ನಾಟಿ ಹಸು, ಹೋರಿಗಳ ಹೆಚ್ಚಿಸುವಿಕೆ, ಏಕದಳ, ದ್ವಿದಳ ಧಾನ್ಯಗಳನ್ನು ಕಾಲಕ್ಕೆ ತಕ್ಕಂತೆ ಬೆಳೆಯುವುದು….
ಜೊತೆಗೆ ಇದಕ್ಕೆಲ್ಲ ಮೂರ್ನಾಲ್ಕು ವರ್ಷಗಳಿಂದ ಸಹಕಾರಿಯಾಗಿ ನಿಂದ ಹಿರಿಯ ಮಗ ವಿಕ್ಕಿಯ ಮದುವೆಯನ್ನು ಬರುವ ವರ್ಷ ತೋಟದ ಮನೆಯಲ್ಲೆ ಕುವೆಂಪು ಅವರು ಹೇಳಿದ ಮಂತ್ರಮಾಂಗಲ್ಯರೀತಿ ನೆರವೇರಿಸುವುದು… ಇತ್ಯಾದಿ ಸೇರಿದೆ. ( ವಿಕ್ಕಿ, ವಿನ್ನಿ short nameನ “ವಿಕಾಸ್ – ವಿನ್ಯಾಸ್” – ಅವಳಿಗಳು. ವಿನ್ನಿ ಬೆಂಗಳೂರಲ್ಲಿ ಕೆಲಸದಲ್ಲಿದ್ದಾನೆ.)
*’ಒಂದು ಹುಲ್ಲಿನ ಕ್ರಾಂತಿ’ಯ ಪುಕುವೋಕ, ನಮ್ಮವರೇ ಆದ ತೇಜಸ್ವಿ, ಸ್ವಾಮಿ ಆನಂದ, ಕಳವೆ ಮೊದಲಾದವರ ಕೃತಿ ಓದಿದ್ದು, ತನಗೂ ಆಗಿರುವ ಭಿನ್ನ ಅನುಭವ ವಿವರಿಸುತ್ತಾನೆ.
*ತನ್ನ ಮೂವರು ಖಾಯಂ ಕೆಲಸದ ಆಳುಗಳು ಹಾಗೂ ಇತರರು ತನ್ನಷ್ಟೇ ಸಮಾನರು. ಜಾತಿ ಪಂಥ ಇಲ್ಲ. ಎಲ್ಲರದ್ದೂ ಊಟದ ತಟ್ಟೆ, ಲೋಟ ಒಂದೇ. ಈ ಸಮಾನತೆ, ಅಲ್ಲಿನ ವಾತಾವರಣ ಮಾನವೀಯವಾಗಿದೆ.
ಮುಗಿಸುವ ಮುನ್ನ: ಬೂದನೂರು ಪುಟ್ಟಸ್ವಾಮಿ ಎಂಬತ್ತರ ದಶಕದ ಕೊನೆಯಲ್ಲಿ ಬರೆದ “ದೊಡ್ಡವ್ವ” ಕತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಸಂಕಲನದಲ್ಲಿ ಪ್ರಕಟವಾಗಿದೆ. (ಸಂಪಾದಕ : ಡಾ. ರಾಜಶೇಖರ ನೀರಮಾನ್ವಿ). ಬಿಡಿ ವೈಚಾರಿಕ ಲೇಖನ ಶೂದ್ರ, ಅನ್ವೇಷಣೆ, ಅಗ್ನಿ ಮೊದಲಾದ ಪತ್ರಿಕೆಯಲ್ಲಿ ಪ್ರಕಟವಾಗಿವೆ.
* ಗೆಳೆಯ ಪ್ರೀತಿಯ ಪುಟ್ಟುಗೆ ಶುಭವಾಗಲಿ. ಆಸಕ್ತರ ಸಂಪರ್ಕಕ್ಕೆ : 98452 06671.










ಇದು ಬೇಸಾಯ,,,,, ಕುರಿಕೋಳಿ…ದನಕರ…ಅಲ್ಲೇ ಹುಲ್ಲುಸೊಪ್ಪು…ಬಣವೆ… ಕೊಟ್ಟಿಗೆ… ರೊಪ್ಪ…. ಎತ್ತುಗಾಡಿ,ಈಗ ಟ್ರಾಕ್ಟ್ರು…..ತಿಪ್ಪೆ,ಗೊಬ್ಬರ…. ಮಾವು ತೆಂಗು ಕಂಗು…. ಮನೆ , ಹಿಂಗಿದ್ರೇನೇ ಅದು ಬೇಸಾಯಗಾರನ ಬದುಕು. ಫೋಟೋ ನೋಡೋಕೆ ಚೆಂದ… ಆದರೆ ಅಲ್ಲಿ ನಿತ್ಯದ ಬದುಕು ಶ್ರಮದ್ದು. ಯಾವ ರಿಯಾಯಿತಿಯನ್ನು ಕೇಳೋ ಹಂಗಿಲ್ಲ. ಮೈ ಬಗ್ಗಿಸಿ ದುಡಿಬೇಕು. ಒಂದೇ ಮಂತ್ರ.