ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳಿ ತಪ್ಪಿದ ಅಣ್ಣಾ ರೈಲು..

-ನಾ ದಿವಾಕರ

ಆಲದ ಮರದಡಿಯಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎನ್ನಲಾಗುತ್ತದೆ. ಏಕೆಂದರೆ ಆಲದ ಮರದ ಬೇರುಗಳು ಭೂತಳದಲ್ಲಿರುವಂತೆಯೇ ಮರದ ಮೇಲಿನಿಂದಲೂ ಇರುತ್ತದೆ. ತನ್ನ ವ್ಯಾಪ್ತಿಯಲ್ಲಿನ ಇಡೀ ಪ್ರದೇಶವನ್ನು ಕತ್ತಲಾಗಿಸಿ ಸೂರ್ಯನ ಕಿರಣ ತಾಕದಂತೆ ಮಾಡುತ್ತದೆ. ಹಾಗಾಗಿ ಆಲದ ಮರ ಎಷ್ಟೇ ಆಶ್ರಯ ನೀಡಿದರೂ ಒಂದು ರೀತಿಯಲ್ಲಿ ಎಲ್ಲವನ್ನೂ ನುಂಗಿಹಾಕುವ ದೈತ್ಯ ಶಕ್ತಿಯಂತೆ ನಿಲ್ಲುತ್ತದೆ. ಬಹುಶಃ ಜಾಗತೀಕರಣ-ನವ ಉದಾರವಾದವನ್ನು ಈ ನೆಲೆಗಟ್ಟಿನಲ್ಲೇ ವಿಶ್ಲೇಷಿಸಬಹುದು. ಬಂಡವಾಳ ವ್ಯವಸ್ಥೆಯ ಜಾಗತೀಕರಣ ಮತ್ತು ಹಣಕಾಸು ಬಂಡವಾಳದ ಉದಾರವಾದಿ ನೀತಿಗಳು ತನ್ನ ವ್ಯಾಪ್ತಿಯಲ್ಲಿ ಅರಳುವ ಎಲ್ಲವನ್ನೂ ಹೀಗೆಯೇ ಹೊಸಕಿ ಹಾಕುತ್ತಿರುತ್ತದೆ. ಹಾಗಾಗಿಯೇ ಕಳೆದ ಎರಡು ದಶಕಗಳ ಅವಧಿಯಲ್ಲಿ ವಿಶ್ವದಾದ್ಯಂತ ಅನೇಕ ರೀತಿಯ ಜನಾಂದೋಲನಗಳು ನಡೆಯುತ್ತಲೇ ಇದ್ದರೂ ಬಹುತೇಕ ವೈಫಲ್ಯವನ್ನೇ ಕಂಡಿವೆ. ನವ ಉದಾರವಾದದ ಕಬಂಧ ಬಾಹುಗಳನ್ನು ಮೀರಿ ಯಶಸ್ಸು ಕಂಡಿರುವ ಕೆಲವೇ ಹೋರಾಟಗಳ ಯಶಸ್ಸಿಗೆ ಕಾರಣ ಆ ಚಳುವಳಿಗಳ ಸೈದ್ಧಾಂತಿಕ ಬದ್ಧತೆ ಮತ್ತು ತಾತ್ವಿಕ ಚೌಕಟ್ಟು.
ಭಾರತದ ಸಂದರ್ಭದಲ್ಲಿ ಹೇಳುವುದಾದರೆ ಇತ್ತೀಚೆಗೆ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿ, ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮ ಎಂದೇ ಬಿಂಬಿಸಲ್ಪಟ್ಟ ಅಣ್ಣಾ ಹಜಾರೆ ವಿರಚಿತ ಭ್ರಷ್ಟಾಚಾರ ವಿರೋಧಿ ಆಂದೋಲನ ಅಥವಾ ಜನಲೋಕಪಾಲ್ ಆಂದೊಲನ ಇಂದು ಕವಲು ಹಾದಿಯಲ್ಲಿದ್ದರೆ, ಈ ತಾತ್ವಿಕ ಚೌಕಟ್ಟಿನ ಕೊರತೆಯೇ ಕಾರಣ.  ಅಣ್ಣಾ ಮೌನ ವ್ರತದಲ್ಲಿದ್ದಾರೆ. ತಾವು ಹೇಳಬೇಕೆಂದಿರುವುದನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಾರೆ. ಇದೊಂದು ರೀತಿ ವಿಡಂಬನೆ ಎಂದೇ ಹೇಳಬಹುದು. ಅಣ್ಣಾ ಮೌನ ವಹಿಸುವುದಕ್ಕೂ, ಟೀಂ ಅಣ್ಣಾ ವಿಘಟನೆಯತ್ತ ಸಾಗುವುದಕ್ಕೂ ಕಾಕತಾಳೀಯ ಸಂಬಂಧವಿದೆ ಎನ್ನುವಂತೆ ಕೆಲವು ಬೆಳವಣಿಗೆಗಳು ನಡೆದಿವೆ. ಭ್ರಷ್ಟಾಚಾರದ ಮೂಲ ಬೇರುಗಳನ್ನೇ ಅರಿಯದೆ, ಮೇಲ್ಪದರದ ಆಡಳಿತಾತ್ಮಕ ನ್ಯೂನತೆಗಳನ್ನೇ ಬೃಹದಾಕಾರವಾಗಿ ಬಿಂಬಿಸಿ ಮಧ್ಯಮ ವರ್ಗಗಳಲ್ಲಿ ಸಂಚಲನ ಮೂಡಿಸಿದ ಟೀಂ ಅಣ್ಣಾ ತನ್ನ ಪ್ರಥಮ ಹೆಜ್ಜೆಯಲ್ಲೇ ಸೋತಿರುವುದು ಹಿಸ್ಸಾರ್ ಚುನಾವಣೆಗಳಲ್ಲಿ ಸ್ಪಷ್ಟವಾಗಿದೆ.

ಟೀಂ ವರ್ಕ ಇಲ್ಲದ ಟೀಂ ಅಣ್ಣಾ

ಒಂದು ರಾಷ್ಟ್ರಮಟ್ಟದ ಹೋರಾಟ ರೂಪಿಸುವ ಮುನ್ನ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಗುಂಪಿಗೆ ಕೆಲವು ಮೂಲಭೂತ ಗ್ರಹಿಕೆಗಳು ಅತ್ಯವಶ್ಯಕ. ತಾವು ಪ್ರತಿನಿಧಿಸುವ ಜನಸಮುದಾಯಗಳ ಸಾಮಾಜಿಕ-ರಾಜಕೀಯ ಪ್ರಜ್ಞೆಯ ಮಟ್ಟ, ತಾವು ಪ್ರತಿನಿಧಿಸುವ ಸಮಾಜದಲ್ಲಿನ ಆಂತರಿಕ ವೈರುಧ್ಯಗಳು ಮತ್ತು ಚಳುವಳಿಯ ವ್ಯಾಪ್ತಿಗೊಳಗಾಗುವ ಸಾಮಾಜಿಕ ಪರಿಸರದ ಸಮಾಜೋ-ಆಥರ್ಿಕ ಸ್ಥಿತ್ಯಂತರಗಳು. ಈ ಮೂರು ಗ್ರಹೀತಗಳನ್ನು ಸ್ಪಷ್ಟವಾಗಿ ವಿಶ್ಲೇಷಿಸದೆ ಮುನ್ನಡೆದಲ್ಲಿ, ವಿಶೇಷವಾಗಿ ಭಾರತದಂತಹ ಬಹುಮುಖಿ ಸಮಾಜದಲ್ಲಿ, ಯಾವುದೇ ಚಳುವಳಿಗಳಾದರೂ ಮಾರ್ಗದಲ್ಲೇ ಎಡವುತ್ತವೆ. ಹಲವು ಚಳುವಳಿಗಳೂ ಅಂಬಿಗನಿಲ್ಲದ ನಾವೆಯಂತೆ ಸಾಗುತ್ತವೆ , ಅಣ್ಣಾ ತಂಡದ ಮೂಲಭೂತ ಸಮಸ್ಯೆ ಎಂದರೆ ಅದು ನಾವೆಯೇ ಇಲ್ಲದ ಅಂಬಿಗರನ್ನು ನಂಬಿ ಮುನ್ನಡೆಯಲು ಯತ್ನಿಸಿದೆ. ಈ ಅಂಬಿಗರಿಗೆ ಹರಿಗೋಲಾಗಿ ಮಾಧ್ಯಮಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಕಾರ್ಯ ನಿರ್ವಹಿಸಿವೆ. ಹಾಗಾಗಿಯೇ ಹಿಸ್ಸಾರ್ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿದ ಟೀಂ ಅಣ್ಣಾ ತನ್ನ ರಾಜಕೀಯ-ಸಾಂಸ್ಕೃತಿಕ ಪ್ರಮಾದವನ್ನು ಅರಿತೂ ಅರಿಯದಂತೆ ವತರ್ಿಸುತ್ತಿದೆ.
ಇರಲಿ, ಹಿಸ್ಸಾರ್ನಲ್ಲಿ ಕಾಂಗ್ರೆಸ್ ಪಕ್ಷದ ಸೋಲು ಅಣ್ಣಾ ತಂಡವನ್ನು ಭ್ರಮಾಲೋಕದಲ್ಲಿ ತೇಲಿಸುತ್ತಿದೆ. ಭಂಗ ಮಾಡುವ ಅಗತ್ಯವಿಲ್ಲ. ಆದರೆ ತಂಡದ ನಂಬರ್ 2 ನಾಯಕರಾಗಿರುವ ಪ್ರಶಾಂತ್ ಭೂಷಣ್ ಅವರ ಕಾಶ್ಮೀರವನ್ನು ಕುರಿತ ಹೇಳಿಕೆ, ಅವರ ಮೇಲಿನ ಆಕ್ರಮಣ ಮತ್ತು ತದನಂತರದ ಬೆಳವಣಿಗೆಗಳನ್ನು ನೋಡಿದರೆ ಹಜಾರೆ ತಂಡದ ಪ್ರಜಾಸತ್ತಾತ್ಮಕ ನಿಲುವುಗಳ ಬಗ್ಗೆಯೇ ಅನುಮಾನ ಮೂಡುವುದು ಸಹಜ. ಹಿಂದೂ ಮೂಲಭೂತವಾದಿಗಳಿಂದ ಹಲ್ಲೆಗೊಳಗಾದ ಪ್ರಶಾಂತ್ ಭೂಷಣ್, ಕಾಶ್ಮೀರದ ಭವಿಷ್ಯವನ್ನು ಅಲ್ಲಿನ ಜನರೇ ನಿರ್ಧರಿಸಲಿ ಎಂಬ ಅರ್ಥ ಬರುವಂತೆ ನೀಡಿದ ಹೇಳಿಕೆ ಹಿಂದುತ್ವವಾದಿಗಳಿಗೆ ಒಪ್ಪಲಾಗದು. ಸಹಜ, ಸ್ವಾಭಾವಿಕ. ಆದರೆ ಹಜಾರೆ ಏಕೆ ಒಪ್ಪುವುದಿಲ್ಲ. ಕಾಶ್ಮೀರ ಅಥವಾ ಯಾವುದೇ ಭೌಗೋಳಿಕ ಭಾರತದ ಅವಿಭಾಜ್ಯ ಅಂಗ ಎಂದ ಮಾತ್ರಕ್ಕೆ ಆ ಪ್ರದೇಶದ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಅಲ್ಲಿನ ಪ್ರಜೆಗಳಿಂದ ಕಸಿದುಕೊಳ್ಳಲಾಗುವುದಿಲ್ಲ ಅಲ್ಲವೇ ? ಪ್ರಭುತ್ವದ ನಿರ್ಣಯವೇ ಅಂತಿಮ ಎಂದಾದಲ್ಲಿ ಪ್ರಜಾ(?) ಪ್ರಭುತ್ವಕ್ಕೆ ಅರ್ಥ ಏನಿದೆ ? ಸ್ವತಂತ್ರ ಭಾರತದ ಆಳ್ವಿಕರು ಕಳೆದ ಅರವತ್ತು ವರ್ಷಗಳಲ್ಲಿ ಸಮಯಸಾಧಕ ರಾಜಕಾರಣಿಗಳ, ಉಗ್ರವಾದಿಗಳ,  ಮೂಲಭೂತವಾದಿ ಸಂಘಟನೆಗಳ ಅಭಿಪ್ರಾಯಕ್ಕೆ ಕೊಟ್ಟ ಮನ್ನಣೆಯನ್ನು ಕಾಶ್ಮೀರದ ಜನತೆಯ ಅಭಿಪ್ರಾಯಕ್ಕೆ ನೀಡಿದ್ದಲ್ಲಿ ಬಹುಶಃ ಈ ವೇಳೆಗೆ ಕಾಶ್ಮೀರದ ಸಮಸ್ಯೆಯೇ ಇರುತ್ತಿರಲಿಲ್ಲವೇನೋ !
ಆದರೆ ಪ್ರಶಾಂತ್ ಭೂಷಣ್ ಅವರ ಮೇಲಿನ ಹಲ್ಲೆಗಿಂತಲೂ ಅಪಾಯಕಾರಿಯಾಗಿದ್ದುದು ಹಜಾರೆಯವರ ಪ್ರತಿಕ್ರಿಯೆ. ವಾಕ್ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆದಿದೆ ಎಂದ ಮಾತ್ರಕ್ಕೆ ಯಾವುದೇ ವ್ಯಕ್ತಿಯ ಅಭಿಪ್ರಾಯವನ್ನು ಒಪ್ಪಿಕೊಳ್ಳಬೇಕೆಂದಿಲ್ಲ. ಆದರೆ ಒಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಕೇಳಿಬರುತ್ತಿರುವ ಪ್ರತ್ಯೇಕತೆಯ ದನಿಯ ಸೂಕ್ಷ್ಮ ತರಂಗಗಳನ್ನು ಗಮನಿಸಿದಾಗ, ಭಾರತೀಯ ಪ್ರಭುತ್ವ ಅಲ್ಲಿನ ಸ್ಥಳೀಯ ಜನತೆಯ ಅಭಿಪ್ರಾಯವನ್ನು ಕಡೆಗಣಿಸಿರುವುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ಕಾಶ್ಮೀರವನ್ನಾಗಲೀ, ಈಶಾನ್ಯ ರಾಜ್ಯಗಳನ್ನಾಗಲೀ ಭಾವನಾತ್ಮಕ ನೆಲೆಗಟ್ಟಿನಲ್ಲಿ ನೋಡದೆ, ಜನಸಾಮಾನ್ಯರ ಆಂತರಿಕ ಭಾವನೆಗಳ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವುದು ಪ್ರಜಾತಂತ್ರ ವ್ಯವಸ್ಥೆಯ ಆದ್ಯತೆಯಾಗಬೇಕಾಗುತ್ತದೆ. ವಿಪಯರ್ಾಸವೆಂದರೆ ಹಜಾರೆ ಸಹ ಹಿಂದುತ್ವವಾದಿಗಳಂತೆ ಕಾಶ್ಮೀರ ಸಮಸ್ಯೆಯನ್ನು ಭೌಗೋಳಿಕ ಸಮಸ್ಯೆ ಎಂದೇ ಭಾವಿಸಿರುವುದು. ಒಂದು ರಾಷ್ಟ್ರದ ಬಹುಪಾಲು ಜನತೆಯನ್ನು ಪ್ರತಿನಿಧಿಸುವ (ಹಾಗೆಂದು ಅಣ್ಣಾ ತಂಡವನ್ನು ಬಿಂಬಿಸಲಾಗಿದೆ) ನಾಗರಿಕ ಸಮಾಜದ ಒಂದು ಗುಂಪು ತನ್ನ ಮೂಲಭೂತ ಪರಿಕಲ್ಪನೆಯಲ್ಲೇ ಈ ರೀತಿಯ ವೈರುಧ್ಯಗಳನ್ನು ಹೊಂದಿದ್ದರೆ ಹೋರಾಟ ಮುಂದೆ ಸಾಗುವುದಾದರೂ ಹೇಗೆ ?

ಇದರ ನೇರ ಪರಿಣಾಮವೇ ಟೀಂ ಅಣ್ಣಾದಲ್ಲಿ ಉಂಟಾಗಿರುವ ಬಿರುಕು. ಪ್ರಶಾಂತ್ ಭೂಷಣ್ ಮೇಲಿನ ಹಲ್ಲೆಯ ವಿರುದ್ಧ ಹಜಾರೆ ನೆಪಮಾತ್ರಕ್ಕಾದರೂ ಪ್ರತಿಭಟನೆ ನಡೆಸಬಹುದಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಬಹುದಿತ್ತು. ಆದರೆ ಈ ವಿಚಾರ ಮಹತ್ವವನ್ನೇ ಪಡೆಯಲಿಲ್ಲ. ಮತ್ತೊಂದೆಡೆ ಹಿಸ್ಸಾರ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಪ್ರಚಾರ ನಡೆಸುವ ಮೂಲಕ ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ನೆರವಾದ ಕೇಜ್ರಿವಾಲ್ ಅವರ ಕ್ರೇಝಿ ಐಡಿಯಾ ಇಬ್ಬರು ಪ್ರಮುಖ ಸದಸ್ಯರ ನಿರ್ಗಮನಕ್ಕೆ ಕಾರಣವಾಯಿತು. ಈ ರಾಜಕೀಯ ನಿಲುವಿನಿಂದ ಬೇಸತ್ತು ನ್ಯಾ. ಸಂತೋಷ್ ಹೆಗ್ಡೆ ಅಣ್ಣಾ ತಂಡದಿಂದ ದೂರ ಸರಿದಿದ್ದಾರೆ.. ಕೇಂದ್ರ ಸಮಿತಿಯ ಪ್ರಮುಖ ಸದಸ್ಯರಾದ ರಾಜಗೋಪಾಲ್ ಮತ್ತು ರಾಜೇಂದ್ರ ಸಿಂಗ್ ರಾಜೀನಾಮೆ ನೀಡಿದ್ದಾರೆ. ಆದರೂ ಹಜಾರೆ ಈ ಬೆಳವಣಿಗೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಮ್ಮೊಮ್ಮೆ ಮೌನ ವ್ರತವೂ ರಾಜಕಾರಣದ ಒಂದು ಆಯಾಮವಾಗಿಬಿಡುತ್ತದೆ. ಇದು ಒಂದು ನಿದರ್ಶನವಷ್ಟೆ.

ಮತ್ತೊಂದೆಡೆ ಆರೆಸ್ಸೆಸ್ ಪ್ರಮುಖ ಮೋಹನ್ ಭಾಗವತ್ ಇತ್ತೀಚಿನ ಪ್ರತಿಕ್ರಿಯೆಯ ಮೂಲಕ ಸಂಘಪರಿವಾರದ ಸದಸ್ಯರು ಅಣ್ಣಾ ಹಜಾರೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ದೃಢಪಡಿಸಿದ್ದಾರೆ. ರಾಮಲೀಲಾ ಮೈದಾನದ ಕಾರ್ಯಕ್ರಮದಲ್ಲೂ ಸಂಘದ ಸದಸ್ಯರು ಮೇಲ್ವಿಚಾರಣೆ ವಹಿಸಿರುವುದನ್ನು ಮತ್ತೊಬ್ಬ ಆರೆಸ್ಸೆಸ್ ನಾಯಕ ರಾಮ್ ಮಾಧವ್ ದೃಢಪಡಿಸಿದ್ದಾರೆ. ಕೆಲವು ಪುರಾವೆಗಳನ್ನೂ ಒದಗಿಸಿದ್ದಾರೆ. ಆದರೂ ಹಜಾರೆ ಈ ಹೇಳಿಕೆಯನ್ನು ಅಲ್ಲಗಳೆದಿಲ್ಲ.  ನಮ್ಮ ಹೋರಾಟ ಎಲ್ಲ ವರ್ಗದ ಜನರನ್ನೂ ಒಳಗೊಳ್ಳುತ್ತದೆ ಎಂಬ ಕೇಜ್ರಿವಾಲ್ ಅವರ ಕ್ರೇಝಿ ಹೇಳಿಕೆ ಟೀಂ ಅಣ್ಣಾದ ವಿರೋಧಾಭಾಸಗಳನ್ನು ಪ್ರದಶರ್ಿಸಿದರೆ, ಅಣ್ಣಾಜಿಯವರ ಮೌನ ಇಡೀ ಹೋರಾಟದ ದ್ವಂದ್ವವನ್ನು ಪ್ರದಶರ್ಿಸುತ್ತದೆ. ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನೇ ಮಾನ್ಯ ಮಾಡದ ಒಂದು ಚಳುವಳಿ ಭಾರತದಂತಹ ಬೃಹತ್ ಪ್ರಜಾತಂತ್ರ ರಾಷ್ಟ್ರದ ಆಶಯಗಳನ್ನು ಹೇಗೆ ಗ್ರಹಿಸಲು ಸಾಧ್ಯ ? ಇದು ಕೇವಲ ಅಣ್ಣಾ ತಂಡದ ಮುಂದಿರುವ ಪ್ರಶ್ನೆಯಲ್ಲ. ಇಡೀ ಭಾರತೀಯ ಜನತೆಯ ಮುಂದಿರುವ ಪ್ರಶ್ನೆ. ಒಂದು ವ್ಯವಸ್ಥೆಯ ವಿರುದ್ಧ ಹೋರಾಡುವುದೆಂದರೆ ಆ ವ್ಯವಸ್ಥೆಯನ್ನು ಪ್ರತಿನಿಧಿಸುವ ಪ್ರಭುತ್ವ ಮತ್ತು ಪ್ರಭುತ್ವವನ್ನು ನಿಯಂತ್ರಿಸುವ ಆಳುವ ವರ್ಗಗಳ ನೀತಿಗಳನ್ನು, ರಾಜಕೀಯ ನಿಲುವುಗಳನ್ನು ಪ್ರಶ್ನಿಸುವುದೇ ಆಗಿರುತ್ತದೆ. ಇದು ಪ್ರಭುತ್ವವನ್ನು ಕಿತ್ತೊಗೆಯುವ ಉದ್ದೇಶವನ್ನೇ ಹೊಂದಿರಬೇಕಿಲ್ಲ. ಆದರೆ ಹೋರಾಟದ ಮಾರ್ಗದಲ್ಲಿ ಅನಿವಾರ್ಯವಾದರೆ ಹೊಸ ಪ್ರಜಾಸತ್ತಾತ್ಮಕ ಪ್ರಭುತ್ವದ ಸ್ಥಾಪನೆಗಾಗಿ ಶ್ರಮಿಸುವುದು ಅಪರಾಧವೇನಲ್ಲ. ಅರಬ್ ರಾಷ್ಟ್ರಗಳಲ್ಲಿ ಕೊಂಚ ಮಟ್ಟಿಗೆ ಈ ವಿದ್ಯಮಾನವನ್ನು ಕಾಣುತ್ತಿದ್ದೇವೆ. ಆದರೆ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳೆಲ್ಲವನ್ನೂ ಕಡೆಗಣಿಸಿ, ಭ್ರಷ್ಟಾಚಾರವನ್ನೇ ಬೃಹತ್ ಸಮಸ್ಯೆಯಂತೆ ಬಿಂಬಿಸುವ ಮೂಲಕ ಟೀಂ ಅಣ್ಣಾ ತಾನೂ ಹಳಿ ತಪ್ಪಿ ದೇಶದ ಯುವ ಜನತೆಯನ್ನೂ ಹಳಿ ತಪ್ಪಿಸುತ್ತಿದೆ. ಜನಲೋಕ್ಪಾಲ್ ಮಸೂದೆಯೇ ಅಂತಿಮವಲ್ಲ. ನಿಜ. ಆದರೆ ಮುಂದೇನು ಎಂಬ ಪ್ರಶ್ನೆಗೆ ಟೀಂ ಅಣ್ಣಾ ಬಳಿ ಉತ್ತರವೂ ಇಲ್ಲ, ಅಲ್ಲವೇ ?

‍ಲೇಖಕರು avadhi

25 October, 2011

2 Comments

  1. Nagesh. KM

    ನೀವು ಏನನ್ನು ಹೇಳಲು ಪ್ರಯಥ್ನಿಸಿದ್ದೀರೆಂದು ನನಗೆ ಅರ್ಥವಾಗಲಿಲ್ಲ. ಸರಳವಾಗಿ ಬರೆಯಿರಿ ಸ್ವಾಮಿ ??

  2. ದಿವಾಕರ

    Its very simple. For lack of space I have not gone in detail. The movement led by Anna has no ideology, nor any framework nor any specific aim, except exposing the corrupt. But without striking at the root you cannot root out corruption. Besides it is said Ceaser’s wife should be above suspicion, but team anna members are not only facing charges but they are defending their mistakes in the name of larger cause. One may not accept communisst ideology but just see how communist parties utilise the funds for social cause. And the prashant bushan case has made anna a laughing stock. A leader heading movement of this nature should prove his democratic credentials in a better way. Over all this movement will benefit ruling classes more than the massses.That is the essence of this article.

    Divakar.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading