ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಳದಿ ಹೂವಿನ ಭಗವಂತ – ಶಾಂತಾ ನಾಗರಾಜ್

ಶಾಂತಾ ನಾಗರಾಜ್

ನಿನ್ನೆ ತಾನೆ ನಮ್ಮ ಮನೆಯ ಹತ್ತಿರ ಮೆಟ್ರೋ ರೈಲಿನ ಉದ್ಘಾಟನೆಯಾಯಿತು. ಮನುಷ್ಯನ ಈ ಅತ್ಯಾಧುನಿಕ ಸೌಲಭ್ಯಕ್ಕಾಗಿ ಅದೆಷ್ಟೋ ಮರಗಳು ಧರೆಗುರುಳಿ ’ಅಮರ’ವಾದವು. ಅದನ್ನು ಕಂಡು ರೋಸಿಯೋ, ಅಥವಾ ಭೂಮಾತೆಯನ್ನು ಸಂತೈಸಲೋ ನಮ್ಮ ಮನೆಯ ಮುಂದಿರುವ ಹಳದಿಹೂವಿನ ಮರ ಒಮ್ಮೆಲೇ ಲಕ್ಷಾಂತರ ಹೂವುಗಳನ್ನು ಅರಳಿಸಿ, ಪ್ರಕೃತಿದೇವಿಗೆ ಲಕ್ಷಪುಷ್ಪಾರ್ಚನೆ ಮಾಡಲಣಿಯಾಗಿದೆ. ಬೆಳಗಿನಹೊತ್ತು ನಮ್ಮ ಮೊದಲಮಹಡಿಯ ಮೇಲಿನ ತಾರಸಿಯಲ್ಲಿ ನಿಂತರೆ ಅದೆಂಥಾ ದೃಶ್ಯವೈಭವ!!

ಸೂರ್ಯನ ಕಿರಣಗಳಿಗೇ ಪಂಥಾಹ್ವಾನ ನೀಡುತ್ತಿರುವಂತೆ ಶುಭ್ರಹಳದಿಯ ಹೂವುಗಳು!! ಅವುಗಳ ಮೇಲೆ ಝೇಂಕಾರಮಾಡುತ್ತಾ, ಪ್ರತಿ ಹೂವಿನೊಳಗೂ ಇಣುಕಿಬರುವ ಚಿಕ್ಕ, ಮಧ್ಯಮಗಾತ್ರದ, ದೊಡ್ಡ ಜೇನುಗಳ ವೃಂದ! ಸಾಸಿವೆ ಗಾತ್ರದ ಕೀಟದಿಂದ ಹಿಡಿದು ದೊಡ್ಡ ಜೀರುಂಡೆಯವರೆಗೆ ಹತ್ತಾರು ಬಗೆಯ ವಿವಿಧ ಮಧುಮೋಹಿಗಳ ಸಮೂಹ! ಎಲ್ಲರಿಗೂ ಭೂರಿಭೋಜನವಿಲ್ಲಿ!  ಹೊಟ್ಟೆ  ಬಿರಿಯುವಂತೆ ಜೇನು ಕುಡಿದು ಹೂವಿನ ಮೇಲೇ ತೂರಾಡುವ ನರ್ತನ! ಮತ್ತೊಂದು ಹೂವೇ ಇಲ್ಲವೇನೋ ಎಂಬಂತೆ ಒಂದೇ ಹೂವಿಗೆ ಕಚ್ಚಾಡುವ ದಾಯದಿಗಳ ಸಮೂಹ! ಅಲ್ಲೊಂದು ಮನುಷ್ಯನಿಲ್ಲದ ಪ್ರಪಂಚವಿದೆ!! ತನ್ನ ಸುತ್ತಾ ಒಂದು ಪಾತಿಯೂ ಇಲ್ಲದೇ ಬಿದ್ದ ಮಳೆನೀರನ್ನು ಹೀರಿಕೊಳ್ಳದ ಟಾರುರಸ್ತೆಯ ಬದಿಯಲ್ಲಿರುವ ಈ ಮರ ವರ್ಣಮಹೋತ್ಸವವನ್ನಾಚರಿಸುತ್ತಿದೆ.

ಇದರ ಮುಂದೆ ನಿಂತಾಗ  ಜಗತ್ಪ್ರಸಿದ್ಧರಾದ ಭೌತಶಾತ್ರಜ್ಞ ಮಾನ್ಯ ಮಣಿಭೌಮಿಕ್ ಅವರ ’ದೇವರು ಎಂಬ ಸಂಕೇತ ನಾಮ ’ ಪುಸ್ತಕದ ಸಾಲುಗಳು ನೆನಪಾಗುತ್ತವೆ ’ದೇವರೆಂದರೆ ಕಿರೀಟವನ್ನು ತೊಟ್ಟ, ಶಂಕಚಕ್ರಗದಾಧಾರಿಯಾದ ಅಥವಾ ತ್ರಿಶೂಲ ಡಮರುಗಗಳ ಒಡೆಯನಾದ ಯಾರೂ ಅಲ್ಲ. ನಮ್ಮ ಭೂಮಿಯನ್ನೊಳಗೊಂಡ ಈ ಸೂರ್ಯಮಂಡಲದಂಥಾ ಕೋಟಿ ಸೂರ್ಯಮಂಡಲಗಳನ್ನು ಸೃಷ್ಟಿಸಬಲ್ಲ ಶಕ್ತಿಯುಳ್ಳವನು. ಮತ್ತು ಅದೇ ಹೊತ್ತಿನಲ್ಲೇ ಅಣುವಿನಲ್ಲೂ ಅದೇಶಕ್ತಿಯನ್ನು ಆವಾಹಿಸಬಲ್ಲವನು’ ಈ ಪ್ರತಿಹೂವಿನಲ್ಲೂ ಭಗವಂತನಿಲ್ಲವೆಂದು ಯಾರು ಹೇಳಬಲ್ಲರು?  ನಾನಂತೂ ಪ್ರತಿ ಮುಂಜಾನೆ ಇದಕ್ಕೆ ಸಾಕ್ಷಿಯಾಗುತ್ತಿದ್ದೇನೆ.   ನಿಮಗಾಗಿ ಇಗೋ ಇಲ್ಲಿದೆ ಅದರ ಮೂರೇ ಛಾಯಾಚಿತ್ರಗಳು

 


‍ಲೇಖಕರು avadhi

5 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading