ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರೀಶ ಕೋಳಗುಂದ ಕವಿತೆ- ಕನಸುಗಳು..

ಹರೀಶ ಕೋಳಗುಂದ

ಹುಟ್ಟುತ್ತವೆ ಕನಸುಗಳು
ಒಂದೊಂದಾಗಿ…
ಚೈತ್ರದ ಚಿಗುರಿಗೆ ಹಾತೊರೆದು,
ತಿಂಗಳು ತುಂಬುವ ಮೊದಲೇ…
ಗಾಳಿಗೋಪುರ ಕಟ್ಟುತ್ತವೆ, ದಿಕ್ಕಾಪಾಲಾದ
ಸೂತ್ರಪಟದ ದಾರಿಯಲಿ ಯಾನ ಹೊರಡುತ್ತವೆ.
ಗಿರಕಿ ಹೊಡೆಯುತ್ತವೆ ನೆತ್ತಿ ಚಕ್ರದ ಸುತ್ತ
ನೋಯುತ್ತವೆ, ನರಳುತ್ತವೆ, 
ಕನಲುತ್ತವೆ, ಬಿಕ್ಕುತ್ತವೆ,
ಮಮ್ಮಲ ಮರುಗಿ ಕಣ್ಣೀರಿಡುತ್ತವೆ,
ಮಿಡುಕುತ್ತವೆ ಮಾಗಿಯ ಚಳಿಗೆ ಮೈಯೊಡ್ಡಿ.

ಸವೆದ ಚಪ್ಪಲಿಯೆರಡೂ
ಒಡೆದ ಹಿಮ್ಮಡಿಗೆ ಬುದ್ಧಿ ಹೇಳುತ್ತವೆ.
ಮಿದುಳಿನ ದಾರಿ ಅಳತೆಗೋಲಿಗೆ ದಕ್ಕದು.
ಅಂಚೆಚೀಟಿಗೂ ಗೋಂದು ಸಾಲದು.
ಕ್ಯಾಲೆಂಡರಿನ ಲೆಕ್ಕಪತ್ರವೀಗ 
ಅಳಗುಳ ಮನೆಯಾಟದ ನೀಲನಕಾಶೆ.
ಸೋತ ಕೈ, ಪುಸ್ತಕದ ಹಾಳೆಯ 
ನಡುವೆ ಎಂದೋ ಮಡಚಿಟ್ಟ ಪುಡಿಗಾಸಿಗೆ
ಅನ್ವೇಷಣೆ ನಡೆಸುತ್ತವೆ, ಮೈಯೆಲ್ಲ ಕಣ್ಣಾಗಿ.
ಕನ್ನಡಿಯ ಮುಂದೆ ಕೂತು
ಎಂದೋ ಕಳೆದು ಹೋದ ನಗುವಿನ
ಚಹರೆಯ ತಡಕುತ್ತವೆ.

ಪಡೆದ ಸಾಲು ಡಿಗ್ರಿಗಳ ಶೂನ್ಯ ಸಂಪಾದನೆ
ತೂತು ಜೇಬು ಕಂಡು ಹಲ್ಕಿರಿಯುತ್ತವೆ.
ಹಸಿದ ಹೊಟ್ಟೆ,
“ಥೂ ನಿನ್ನ ಜಲ್ಮಕ್ಕಿಷ್ಟು ಬೆಂಕಿ ಹಾಕ”
ಎಂದು ಕತ್ತಿನ ಪಟ್ಟಿ ಹಿಡಿದು
ದಬಾಯಿಸುತ್ತದೆ.

ಹುಟ್ಟುತ್ತಲೇ ಇವೆ ಕನಸುಗಳು,
ಕನವರಿಸುತ್ತವೆ
ಬುದ್ಧ ನಗೆಗೆ ಕೈ ಚಾಚಿ.
ಮೌನವಾಗುತ್ತವೆ,
ಕಳೆದೇ ಹೋಗುತ್ತವೆ ಸದ್ದಿಲ್ಲದೇ.
ಉರಿಯದ ಒಲೆಯ ಮುಂದೆ ಕೂತು
ತನ್ನ ನಿಟ್ಟುಸಿರ ತಿದಿಯೊತ್ತಿ
ಹಸಿಸೌದೆಗಳ ಹೊಗೆಯ ನಡುವೆ
ಕಣ್ಣೀರಾಗುವ ಅವ್ವನ ಕಂಡು,
ಇರುತ್ತವೆ ಹೀಗೆ,
ಕಂಡೂ ಕಾಣದಂತೆ,
ಬದುಕಿದ್ದೂ ಸತ್ತಂತೆ

‍ಲೇಖಕರು avadhi

31 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading