’ಹರಕೆ ತೀರಿಸುವಾಸೆ, ಬೇಗ ಒಲಿದುಬಿಡು…’ – ಹೇಮಲತಾ

ಹೇಮ ಲತಾ

ರೂಹು ಕೇಡು ಹೆಸರಿನ
ಅರಿವು ಅಗತ್ಯವಿರದೆ
ನಿತ್ಯ ಬೆಳಕಲ್ಲಿ ಅರಳುತ್ತೆ
ಸಮಷ್ಟಿ ಚೇತನ
ನಿನ್ನ ಬಗ್ಗೆ ನನಗಿಷ್ಟೇ
ತಿಳಿಯೋದು ಅರುಣ

***

ಭೂಮಿ ದೂರವಾದಂಗೆ
ದಿಗಂತ ಕರೆದಂಗೆ
ಭಾಸವಾಗುತ್ತಿದೆ ಎಂದೇ
ಸೂರ್ಯ ಅಲ್ಲೇ ಇರೋದು ಅಂದರು
ಕಣ್ಣ ಕೆಂಡ ತಣ್ಣಗಾಯ್ತು

***

ಅಷ್ಟು ಸುಲಭಕ್ಕೆ ಸಹಜಕ್ಕೆ
ಒಂದಾಗೋಲ್ಲ
ಪ್ರಕಾರ ಸೂರ್ಯ
ಅಳುಮುಂಜಿ ಮಳೆ
ಹಾಗಾದರೆ
ಹುಟ್ಟೋದು ಕಾಮನಬಿಲ್ಲೇ

***

ಅಪ್ಪಟ ಗಂಡಸಿನಂತೆ
ಮಧ್ಯಾನವೆಲ್ಲ ಉರಿದುರಿದು ಸುಡುವ ನನ್ನ ಸೂರ್ಯ
ಸಂಜೆ ಮತ್ತು ಮುಂಜಾವು ನಾಚಿ
ಕೆಂಪಾಗಿ ಮಧು
ಸುರಿಯುತ್ತಾನೆ
ಮೋಡ ಕವಿದರೆ
ಮುನಿಸಿಕೊಂಡ ಮಗುವಾಗುತ್ತಾನೆ
ಮಳೆ ಹೊಡೆದರೆ
ಅತ್ತು ಹೆಣ್ಣಾಗುತ್ತಾನೆ

***

ಚಂದ್ರನ ಕೊಂದೇ
ಸೂರ್ಯ ಹುಟ್ಟಿದ
ಇಬ್ಬನಿ ಕುಡಿದೆ
ಜಗನಿಯಾಮಕ ತಂಪಾದ

***

ಅಳಿದುಳಿದ ಉಸಿರ
ನಿನ್ನ ಹೆಸರಿಗೆ ಮುಡಿಪು ಕಟ್ಟಿದ್ದೇನೆ
ಹರಕೆ ತೀರಿಸುವಾಸೆ
ಬೇಗ ಒಲಿದುಬಿಡು

***

ತೊಟ್ಟು ಕಳಚಿದ ಪಾರಿಜಾತಕ್ಕೆ
ಗಾಳಿ ಜೊತೆ ಮಾಡಿ
ನಿನ್ನ ಹೆಸರ ವಿಳಾಸ ನೀಡಿ
ಮೆಲ್ಲಗೆ ಪಿಸುಗುಟ್ಟು
ಸಣ್ಣಗೆ ತಾಕೀತು ಮಾಡುತ್ತೇನೆ
ಯಾವುದೇ ಕಾರಣಕ್ಕೂ
ಗುರಿ ತಪ್ಪಬಾರದು

***

ನೀರ ಮೇಲೆ ಬೆರಳು
ಬರೆದ ನಿನ್ನ ಹೆಸರ
ಹೇಳದೆ ಕೇಳದೆ
ಅಲೆಗಳು
ಕೊಂಡೋಯ್ದಿವೆ

***

ನಿನ್ನ ಹೆಸರ
ಸಿಹಿಗೆ ಇರುವೆ ಮುತ್ತಿವೆ
ನನಗೂ ಪಾಲು ಬೇಕು

***

ದೇವರೇ ,ನಿನ್ನ ಮುಡಿಗೇರದೆ
ಅವನ ಪಾದದಲಂಕಾರಕ್ಕೆ ಎಂದು
ಹೂವ ಕೂಯ್ದರೆ ಕೋಪಗೊಂಡು
ನೀ ಶಾಪ ನೀಡಲ್ಲ ತಾನೇ ?

***

ಆಡದ ಪದಗಳು
ಪದ್ಯವಾದವು
ಕೈಜಾರಿದ ಕನಸುಗಳು
ಕಾವ್ಯವಾದವು
 

‍ಲೇಖಕರು G

September 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. GURURAJ KATRIGUPPE

    nijavada ‘kavya’ odida anubhava, dhanyavadagalu hemalatha ge,,,,,

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: