ರಾಷ್ಟ್ರಗೀತೆ ಬರೆದವರ ಬಗ್ಗೆಯೂ ಗೊತ್ತಿಲ್ಲ, ಸರಿಯಾಗಿ ಹಾಡಲೂ ಬರುವದಿಲ್ಲ..

ಡಾ ಎಸ್ ಬಿ ಜೋಗುರ

ಬದುಕು ತೀವ್ರತೆಯ ನಡುವೆ ಸಾಗುವಾಗ ತೀರಾ ಖಾಸಗಿಯಾದ ವಿಷಯಗಳನ್ನು ಕೂಡಾ ಗಮನಿಸಲು ಸಮಯವಿಲ್ಲದಂತಾಗುತ್ತದೆ. ಅತ್ಯಂತ ಗಮನಾರ್ಹ ಮತ್ತು ನೆನಪಿಡಬೇಕಾದ ಸಂಗತಿಗಳು ಕೂಡಾ ಪಾತಾಳ ಸೇರುತ್ತವೆ. ಈಚೆಗೆ ನಾವು 68 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆವು. ನಾವು ಸ್ವಾತಂತ್ರ್ಯ ಹೋರಾಟದಲ್ಲಂತೂ ಧುಮುಕಿದವರಲ್ಲ, ಗುಲಾಮಗಿರಿಯ ನೋವು, ಜೈಲಿನಲ್ಲಿಯ ಹಸಿಬಿಸಿ ರೊಟ್ಟಿಯ ಮೆಲುಕು, ಬೂಟು ಗಾಲಿನ ಒದೆತ, ಭೂಗತನ ತಲ್ಲಣಗಳ ಬಗ್ಗೆ ನಮ್ಮ ತಲೆಮಾರಿನವರಿಗೆ ಯಾವುದೇ ಬಗೆಯ ಬಿಸಿ ಬಿಸಿ ಅನುಭವವಿಲ್ಲ. ಚರ್ಮವನ್ನು ನೀರಿನಲ್ಲಿ ಅದ್ದಿ ಬಾರಿಸುವ ಆ ಕ್ರೌರ್ಯದ ಬಗ್ಗೆಯೂ ನಮಗೆ ತಿಳುವಳಿಕೆಯಿಲ್ಲ. ಹೀಗಿರುವಾಗ ಸಹಜವಾಗಿ ತೀರಾ ಔಪಚಾರಿಕ ಹಿನ್ನೆಲೆಯಲ್ಲಿ ಜಂಡಾ ಹಾರಿಸಿ ಸಾಮೂಹಿಕವಾಗಿ ರಾಷ್ಟ್ರಗೀತೆಯನ್ನು ಗುನುಗುನಿಸಿ ವಂದೇ ಮಾತರಂ ಎಂದು ಜೋರಾಗಿ ಕೂಗಿ ಸಭೆ ವಿಸರ್ಜಿಸಿ ಮನೆಗೆ ತೆರಳಿದರೆ ಅಲ್ಲಿಗೆ ಮುಗಿಯಿತು. ಮತ್ತೆ ನಮ್ಮ ನಮ್ಮ ಲೌಕಿಕ ತಾಪತ್ರಯಗಳ ರಗಳೆ ಆರಂಭವಾಗುತ್ತದೆ. ಎಲ್ಲೂ ಕೂಡಾ ದಿನಾಚರಣೆಯ ಬಗ್ಗೆ ಒಂದು ಧನ್ಯತಾ ಭಾವ ಮೂಡುವುದು ಇಲ್ಲವೇ ಇಲ್ಲ. ಎಲ್ಲವೂ ಕಾಟಾಚಾರ. ನೌಕರರಿಗೆ ಈ ದಿನಾಚರಣೆ ರವಿವಾರ ಬಂದರಂತೂ ಮುಗಿಯಿತು ಅಪಾರ ಪ್ರಮಾಣದ ನಷ್ಟ ಅನುಭವಿಸಿದ ವ್ಯಾಕುಲತೆ ಅವರನ್ನು ಆವರಿಸಿಕೊಂಡು ಬಿಡುತ್ತದೆ. ನಮ್ಮ ಬಾಲ್ಯದ ದಿನಗಳಲ್ಲಿ ಹಾಗಿರಲಿಲ್ಲ. ಅಲ್ಲೊಂದು ಹುರುಪು..ಹುಮ್ಮಸ್ಸು ಇರುತ್ತಿತ್ತು.
ಶಾಲಾ ಮಕ್ಕಳಂತೂ ಭವಿಷ್ಯವನ್ನು ಇವರು ಸರಿಯಾಗಿ ಹೊರಬಲ್ಲರು ಎನ್ನುವ ತೇಜಸ್ಸಿನಲ್ಲಿ ಮೆರವಣಿಗೆ ಸಾಗುತ್ತಿದ್ದರು. ರಾಷ್ಟ್ರಗೀತೆಯ ಬಗೆಗೆ, ಧ್ವಜದ ಬಗೆಗೆ, ಸ್ವಾತಂತ್ರ್ಯ ಹೊರಾಟಗಾರರ ಬಗೆಗೆ ಒಂದು ವಿಶೇಷ ಗೌರವಭಾವನೆ ಇರುತ್ತಿತ್ತು ಸಾಮೂಹಿಕವಾಗಿ ರಾಷ್ಟ್ರಗೀತೆ ಹೇಳುವಾಗಲೂ ಉಚ್ಚಲ, ಉತ್ಕಲ ಇವೆರಡರ ನಡುವಿನ ವ್ಯತ್ಯಾಸವನ್ನು ಗುರುತಿಸಿ ಹೇಳುತ್ತಿದ್ದರು. ತಪ್ಪಾಗಿ ಹೇಳುವಂತಿರಲಿಲ್ಲ. ತಪ್ಪಿದರೆ ಶಿಕ್ಷಕರು ತಿದ್ದಿ ಹೇಳುತ್ತಿದ್ದರು. ಈಗಲೂ ಹಾಗೆ ತಪ್ಪು ಮಾಡಿದಾಗ ತಿದ್ದಿ ಹೇಳುವ ಶಿಕ್ಷಕರು ಇರಬಹುದು ಆದರೆ ಅವರಿಗೀಗ ಮಕ್ಕಳಿಗೆ ಬುದ್ದಿ ಮಾತನ್ನು ಹೇಳಲು ಧೈಯವಂತೂ ಸಾಲುತ್ತಿಲ್ಲ. ಅದರಲ್ಲೂ ವಿಶೇಷವಾಗಿ ಬೈದು ಬುದ್ದಿ ಹೇಳುವ ಧೈರ್ಯವಂತೂ ಬಿಲ್ಕುಲ್ ಇಲ್ಲ.ಬಹುಷ: ನಮ್ಮ ಜೀವಮಾನದಲ್ಲಿಯೇ ಶಾಲೆಗೆ ಹೋಗು ಎಂದರೆ ಆತ್ಮಹತ್ಯೆ ಮಾಡಿಕೊಂಡ ಸಂತಾನವನ್ನು ನಾವು ನೋಡಿರಲಿಲ್ಲ. ಪೆನ್ನು, ಪುಸ್ತಕ ತಂದು ಕೊಡಲಿಲ್ಲ ಎಂದು ನೇಣು ಹಾಕುಕೊಳ್ಳುವ ಸಂತಾನವೂ ನಮಗೆ ಗೊತ್ತಿರಲಿಲ್ಲ. ಶಾಲೆಗೆ ಹೋಗದಿದ್ದರೆ ಕೈಗೆ ಸಿಕ್ಕಿದ್ದರಿಂದ ಥಳಿಸುವ ಅಪ್ಪ ಒಂದೆಡೆ, ಬಾಗಿಸಿ ರಿಬಕ್ ಎಂದು ಗುಮ್ಮುವ ಶಿಕ್ಷಕರು ಇನ್ನೊಂದೆಡೆ. ಛಡಿ ಛಂ ಛಂ ವಿದ್ಯಾ ಘಂ ಘಂ ಎನ್ನುತ್ತಲೇ ಶಿಕ್ಷಿಸುವ, ಶಿಕ್ಷಣ ಕೊಡುವ ಕ್ರಮ ಆಗಿತ್ತು. ಹಾಗಾಗಿಯೇ ನಮ್ಮ ಮುಂದೆ ಅಂದು ಗುರಿ ಇತ್ತು ಹಿಂದೆ ಗುರು ಇದ್ದರು. ಈಗ ಇವೆರಡೂ ಮಸುಕು ಮಸುಕಾಗಿರುವ ಪರಿಣಾಮವೇ ದಾರಿ ತಪಿದ ಸಂತಾನ ನಮ್ಮ ಕಣ್ಣೆದುರಲ್ಲಿಯೇ ಅಪಾರ ಪ್ರಮಾಣದಲ್ಲಿವೆ. ಇವರಿಗೆ ಹೇಳುವ ಧೈರ್ಯ ಹೆತ್ತವರಿಗೂ ಇಲ್ಲ.. ಕಲಿಸುವವರಿಗೂ ಇಲ್ಲ. ಪರಿಣಾಮವಾಗಿ ಒಂದು ದೊಡ್ಡ ಪ್ರಮಾಣದ ಭಂಡ ಸಂತಾನವಂತೂ ನಿರಂತರವಾಗಿ ಸೃಷ್ಟಿಯಾಗುತ್ತಿದೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಗಳಾಗಿ ಅನುಭವಿಸಿದ ನೋವುಗಳನ್ನು ಹಂಚಿಕೊಳ್ಳಲು ನಮ್ಮ ನಡುವೆ ಆ ತಲೆಮಾರು ಕೂಡಾ ಈಗ ಉಳಿದಿಲ್ಲ.ಉಳಿದದ್ದು ಕೇವಲ ಸೈದ್ಧಾಂತಿಕವಾದ ಅಧ್ಯಯನಗಳ ಮೂಲಕ ಸ್ವಾತಂತ್ರ್ಯವನ್ನು ಗ್ರಹಿಸಿದವರು. ಇನ್ನು ಹೀಗೆ ಅಧ್ಯಯನ ಮಾಡಿ ಸ್ವಾತಂತ್ರ್ಯವನ್ನು ಗ್ರಹಿಸಿದವರ ಪ್ರಮಾಣವೂ ಕಡಿಮೆಯೇ..ಹೀಗಿರುವಾಗ ನಮ್ಮ ದೇಶ, ದೇಶ ಪ್ರೇಮ, ರಾಷ್ಟ್ರಗೀತೆ ಇವುಗಳ ಬಗ್ಗೆ ಒಂದು ಅರ್ಥವತ್ತಾದ ಗ್ರಹಿಕೆ ಮೂಡುವದಾದರೂ ಹೇಗೆ..? ಮೊನ್ನೆ ಕನ್ನಡ ಟಿ.ವಿ.ಚಾನೆಲ್ ಒಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಂಗಳೂರಲ್ಲಿ ಸಾರ್ವಜನಿಕರನ್ನು ಸಂಪರ್ಕಿಸಿ ರಾಷ್ಟ್ರಗೀತೆಯ ಬಗ್ಗೆ, ಸ್ವಾತಂತ್ರ್ಯದ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳುತ್ತಿದ್ದರು. ಟಿ.ವಿ. ಮುಂದೆ ಕುಳಿತುಕೊಂಡು ನೆಮ್ಮದಿಯಿಂದ ಒಂದೇ ಒಂದು ಕಾರ್ಯಕ್ರಮವನ್ನು ನೋಡದಷ್ಟು ಜಾಹೀರಾತುಗಳ ಕಿರಿಕಿರಿಯ ನಡುವೆ ಟಿ.ವಿ.ಯಿಂದ ನಾನು ದೂರ ಸರಿದದ್ದೇ ಹೆಚ್ಚು. ಆ ದಿನ ತೀರಾ ಆಕಸ್ಮಿಕವಾಗಿ ಟಿ.ವಿ.ಮುಂದೆ ಕುಳಿತಾಗ ಆ ಕಾರ್ಯಕ್ರಮ ಮೂಡಿ ಬರುತ್ತಿತ್ತು. ಅದನ್ನು ನೋಡಿ ಅತ್ಯಂತ ವಿಶಾದವೆನಿಸಿತು. ಅನೇಕರಿಗೆ ತಪ್ಪದೇ ರಾಷ್ಟ್ರಗೀತೆ ಹಾಡಲು ಬರುತ್ತಿರಲಿಲ್ಲ. ಕೆಲವರಿಗಂತೂ ಅದು ಯಾರು ಬರೆದದ್ದು ಎನ್ನುವದೂ ಗೊತ್ತಿಲ್ಲ.
ವಂದೇ ಮಾತರಂ ಕೃತಿಯನ್ನು ರಚಿಸಿದ್ದು ಯಾರು ಎನ್ನುವ ಪ್ರಶ್ನೆಗೂ ಅಲ್ಲಿ ಸರಿಯಾದ ಉತ್ತರವಿರಲಿಲ್ಲ. ಕೆಲವರಂತೂ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಉಚ್ಚರಿಸುತ್ತಿದ್ದರು. ಒಬ್ಬ ಪುಣ್ಯಾತ್ಮನಂತೂ ನಮಗೆ ಸ್ವಾತಂತ್ರ್ಯ ಸಿಕ್ಕು 16 ವರ್ಷಗಳಾಗಿವೆ ಎಂದ. ದೇಶದ ಪ್ರಧಾನಿ ಸಿದ್ದರಾಮಯ್ಯ ಎಂದ ಭೂಪನೂ ಅಲ್ಲಿದ್ದ. ಇದರರ್ಥ ಈಗಿನ ತಲೆಮಾರಿಗೆ ಈ ದೇಶದ ಬಗೆಗೆ ಅದರ ರಾಷ್ಟ್ರ ಗೀತೆಯ ಬಗೆಗೆ ತೀರಾ ಕನಿಷ್ಟ ತಿಳುವಳಿಕೆಯೂ ಇಲ್ಲ. ಒಬ್ಬ ಅನಕ್ಷರಸ್ಥ ಹೀಗೆ ತಪ್ಪು ತಪ್ಪಾಗಿ ದೇಶದ ಬಗ್ಗೆ ಮಾತನಾಡಿದರೆ ಕ್ಷಮೆ ಇದೆ. ಹೀಗೆ ತಳ ಬುಡವಿಲ್ಲದೇ ತಪ್ಪು ತಪ್ಪಾಗಿ ಉತ್ತರಿಸಿದವರು ಸೋ ಕಾಲ್ಡ್ ಎಜ್ಯುಕೆಟೇಡ್ ಜನರೇ ಎನ್ನುವದು ಇನ್ನೊಂದು ಬಹುದೊಡ್ಡ ವ್ಯಂಗ್ಯ. ನಾವು ಅನೇಕ ಸಂದರ್ಭಗಳಲ್ಲಿ ಈ ದೇಶ ನಮಗೇನು ಕೊಟ್ಟಿದೆ ಎನ್ನುವದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ದೇಶಕ್ಕಾಗಿ ನಾವೇನು ಕೊಟ್ಟಿದ್ದೇವೆ ಎನ್ನುವ ಬಗ್ಗೆ ಯೋಚಿಸಬೇಕು ಎನ್ನುತ್ತೇವೆ. ಹಾಗೆ ಮಹತ್ತರವಾದುದನ್ನು ನಮ್ಮಿಂದ ಕೊಡಲಾಗದಿದ್ದರೂ ತೊಂದರೆಯಿಲ್ಲ ಆದರೆ ಕೊನೆಯ ಪಕ್ಷ ನಮ್ಮ ನಮ್ಮ ದೇಶ, ಸ್ವಾತಂತ್ರ್ಯದ ಹೋರಾಟ, ರಾಷ್ಟ್ರಗೀತೆ, ಧ್ವಜದ ಬಗ್ಗೆಯಾದರೂ ನಮಗೆ ತಿಳಿದಿರಬೇಡವೇ..?
ಕೆಲ ವರ್ಷಗಳ ಹಿಂದೆ ಹೀಗೇ ಕುಳಿತು ಟಿ.ವಿ.ನೋಡುತ್ತಿದ್ದೆ ಅದು ಬಹುಷ: ಗಾಂಧಿ ಜಯಂತಿಯ ಸಂದರ್ಭವಿರಬೇಕು. ಒಂದಷ್ಟು ಲಲನೆಯರನ್ನು ನಿಲ್ಲಿಸಿ ನಿಮಗೆ ಗಾಂಧಿ ಬಗ್ಗೆ ಏನು ಗೊತ್ತಿದೆ ಎಂದು ಕೇಳಿದಾಗ ಅದರಲ್ಲಿ ಒಬ್ಬಾಕೆ ಯಾರು ಪೂಜಾ ಗಾಂಧಿಯಾ..? ಎಂದು ಕೇಳುವ ಮೂಲಕ ಈಗಿನ ತಲೆಮಾರು ಹೇಗೆ ಪಾಲಿಶ್ ಆಗುತ್ತಿದೆಯಲ್ಲ..! ಎನ್ನುವ ಬೇಸರ ಮೂದಿತ್ತು. ಈಗ ಮೊನ್ನೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈಗಿನ ತಲೆಮಾರು ಅದೆಷ್ಟು ಹೈಬ್ರಿಡ್ ಆಗುತ್ತಿದೆ ಎನ್ನುವ ಬಗ್ಗೆ ಖಾತ್ರಿಯಾಯಿತು. ಬಹುಷ: ಇನ್ನೊಂದು ಎರಡು ಮೂರು ದಶಕಗಳ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು ಗ್ಯಾರಂಟಿ. ಆಗ ಟಿ.ವಿ.ಯವರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳುವ ಪ್ರಮೇಯವೇ ಬರುವದಿಲ್ಲ. ಯಾಕೆಂದರೆ ಉತ್ತರ ಗೊತ್ತಿಲ್ಲ ಎನ್ನುವಷ್ಟು ಸ್ಪಷ್ಟವಾಗಿರಬಲ್ಲದು. ಈ ದೇಶದ ಅನೇಕ ನಿವಾಸಿಗಳಿಗೆ ರಾಷ್ಟ್ರ ಗೀತೆಯೂ ಬರಲ್ಲ.. ಅದನ್ನು ಬರೆದವರ ಬಗ್ಗೆಯೂ ಗೊತ್ತಿಲ್ಲ ಎನ್ನುವದಕ್ಕಿಂದ ದೊಡ್ಡ ವ್ಯಂಗ್ಯ ಮತ್ತು ವಿಷಾದ ನನಗೆ ಬೆರೊಂದಿದೆ ಎನಿಸುತ್ತಿಲ್ಲ.

‍ಲೇಖಕರು G

September 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. G Narayana

    Our present day education system doesn’t encourage patriotism or appreciation for our valiant leaders. Sycophancy rules everywhere. It is high time that our children are taught about our TRUE History and Culture and knowledge about our Country.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: