ಸಂತೋಷ್ ಅನಂತಪುರ
ನಿತ್ಯ ಬದುಕಿನಲ್ಲಿ, ಹಲವು ವ್ಯತ್ಯಸ್ತ ಸ್ತರದ ಸಂಬಂಧಗಳನ್ನು ಎದುರುಗೊಂಡು ನಾವು ದಾಟಿಕೊಂಡು ಹೋಗುತ್ತಿರುತ್ತೇವೆ. ಅದು ಸಂಸಾರದಲ್ಲಿರಬಹುದು, ಬಂಧು-ಬಳಗದಲ್ಲಿರಬಹುದು, ಸಮಾಜದಲ್ಲಿರಬಹುದುಅಥವಾ ನಮ್ಮ ವೃತ್ತಿ ಜೀವನದಲ್ಲಿಯೂ ಇರಬಹುದು. ಹೀಗೆ ನಾವು ಹಾದು ಹೋಗುವಾಗ, ಅನುಭವಿಸಬೇಕಾಗುವ, ಪ್ರತಿಕ್ರಿಯಿಸಬೇಕಾಗುವ ಜರೂರುಗಳು ಹಲವು. ಮುಗಮ್ಮನೆ ಇರಲಾಗದೆ, ಥಟ್ಟನೆ ಏನನ್ನೂಹೇಳಲಾಗದೆ ಬರುವ ಸಂದರ್ಭಗಳೂ ಹತ್ತು ಹಲವು. ಸಂಬಂಧಗಳು ಯಾವತ್ತೂ ಹಸಿರಾಗಿರಬೇಕು ಜೊತೆಗೆ ಮಜುಬೂತ್ ಆಗಿಯೂ ಇರಬೇಕಾದುದು ಧರ್ಮ. ಇವೇ ಸಂಬಂಧಗಳಲ್ಲವೇ ಮುಂದೆ ನಮ್ಮ-ನಿಮ್ಮ ಬದುಕಿನ ಏರಿಳಿತಗಳನ್ನು ಅಳೆಯುವ , ಗ್ರಹಿಸುವ, ಸಾರುವ ಮಾಪಕಗಳು ? ಹೀಗಿರುವಾಗ ನಮ್ಮ ಜೀವನದಲ್ಲಿ ಹೆಣೆಯಬೇಕಿರುವ ಸಂಬಂಧಗಳ ಚಾಪೆ ಗಟ್ಟಿಮುಟ್ಟಾಗಿಯೂ, ಅಂದವಾಗಿಯೂ ಇರಬೇಕಾದರೆ,ನಾವು ಆರಿಸಿಕೊಳ್ಳುವ ಕಚ್ಛಾವಸ್ತುಗಳು ಚೆನ್ನಾಗಿರಬೇಕು. ಗಮನಿಸಿ, ನಾವೆಲ್ಲಿಂದ ಅವೆಲ್ಲವುಗಳನ್ನು ಆಯ್ದುಕೊಂಡೆವು ಎನ್ನುವುದೂ ಕೂಡಾ ಅಷ್ಟೇ ಮುಖ್ಯವಾಗುತ್ತದೆ. ಕಾರಣ ಅವು ನಮ್ಮ ಅಸ್ತಿತ್ವವನ್ನು ಸಾರಿ ಹೇಳುವುದರಿಂದ ! ಹೀಗಿರುವಾಗ ನಾವು ನಡೆಯಬೇಕಾದ ದಾರಿ, ಸವೆಯಬೇಕಾದ ಬದುಕು, ಅನುಸರಿಸಬೇಕಾದ ಕ್ರಮ ಎಂತಹವು ಎನ್ನುವುದೂ ಮುಖ್ಯವಾಗುತ್ತದೆ.
ಸಹಜವಾಗಿ ನಮ್ಮ ನಿಮ್ಮ ಬದುಕಿನೊಳಗೆ ಅಡಿಯಿಡುವ ಕೆಲವು ಆತೀ ಸಾಮಾನ್ಯ ಪ್ರಮುಖ ಬಂಧಗಳು ಒಂದಷ್ಟು ಹಾಲಾಹಲವನ್ನು ಸೃಷ್ಟಿಸುವುದಿದೆ. ಹಾಸ್ಯದ ಹೊನಲನ್ನು ಹರಿಸಿ ಒಂದು ಉದಾಹರಣೆ ಹೇಳುವುದಾದರೆ; ಬಸವಳಿದು ಮಲಗಿದ್ದ ದಂಪತಿಯು ಸಿಹಿ ನಿದ್ರೆಯಲ್ಲಿದ್ದಾಗ, ಮೊಬೈಲ್ ಬಡಿದ ರೀತಿಗೆ ಬೆಚ್ಚಿ ಬಿದ್ದು ಎದ್ದ ಪತ್ನಿ ಮೊದಲು ಅದು ತನ್ನ ಮೊಬೈಲ್ ಅಲ್ಲವೆಂದು ಖಾತ್ರಿಯಾಗಿಸಿಕೊಂಡು ಹೊರಳಿ ನೋಡಿದರೆ , ಪತಿ ಮಹಾಶಯನ ಮೊಬೈಲ್ ಮಿನುಗುತ್ತಿತ್ತು. ಅದೇನೆಂದು ಎತ್ತಿಕೊಂಡು ನಿದ್ದೆ ಕಣ್ನಿಂದ ಅದನ್ನು ಓದಲು…ಕೆಂಡಾಮಂಡಲವಾದ ಆಕೆ ಮಲಗಿದ್ದ ಪತಿ ಮಹಾಶಯನನ್ನು ಬಡಿದೆಬ್ಬಿಸಿ, ಈ ಅಪರಾತ್ರಿಯಲ್ಲಿ ನಿಮಗೆ ‘ಬ್ಯೂಟಿಫುಲ್ ‘ ಎಂದು ಸಂದೇಶ ಕಳುಹಿಸುವ ಆ ಅಪ್ಸರೆ ಯಾರೆಂದು ನನಗೆ ಈಗಲೇ ತಿಳಿಯಬೇಕು ಎಂದು ಒಂದೇ ಸಮ ವರಾತ ಹಿಡಿದಾಗ…ಏನು, ಎತ್ತ ಎಂದು ಏನು ಅರಿಯದ ಪಾಪದ ಗಂಡ ಎಂಬ ಪ್ರಾಣಿ ಅದೇನೆಂದು ತನ್ನ ಮೊಬೈಲ್ ಅನ್ನು ಪರೀಕ್ಷಿಸಿದಾಗ ಅಲ್ಲಿ ಮೂಡಿ ಬಂದದ್ದನ್ನು ನೋಡಿ ನಗಬೇಕೋ, ಅಳಬೇಕೋ ಎಂದರಿಯದೆ, ಪತ್ನಿಗೆ ಹೇಳಿದ, ಅಲ್ಲಾ ಕಣೇ, ಈ ಸುಟ್ಟ ಮುಖಕ್ಕೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ‘ಬ್ಯೂಟಿಫುಲ್ ‘ ಹೇಳೋದೇ ಇಲ್ಲ ಅನ್ನೋದು ನಿನಗೆ ಗೊತ್ತಿರುವ ವಿಚಾರ. ಅಂತಹದ್ದರಲ್ಲಿ ಚಾರ್ಜ್ ಗೆ ಹಾಕಿದ ಮೊಬೈಲ್ ‘ಬ್ಯಾಟರಿಫುಲ್’ ಎಂದು ತೋರಿಸಿದ್ದನ್ನು ಹೀಗೆ ಅಪವೇಳೆಯಲ್ಲಿ ಅಪಾರ್ಥ ಮಾಡಿಕೊಳ್ಳುವುದೇ…? ಎಂದು ಛೇಡಿಸಿದಾಗ ತಪ್ಪಿನ ಅರಿವಾದ ಬಾಳ ಸಂಗಾತಿಗೆ ತುಸು ವಿಶ್ರಾಂತಿ ! ಸಂಶಯ, ಅಪನಂಬಿಕೆಯು ಸಂಬಂಧದೊಳಗೆ ನುಗ್ಗಿ ಮಾಡಿದ ಅವಾಂತರವಿದು.
ಅದನ್ನು ಒಂದು ದೃಷ್ಟಿ ಕೋನದಿಂದ ನೋಡಿದರೆ ಪೊಸೆಸ್ಸಿವ್ನೆಸ್ಸ್ ಅಂತಲೂ, ಅಸುರಕ್ಷತೆ ಅಂತಲೂ ಕರೆಯಬಹುದು. ಬಂಧಗಳು ಹಿಂದಿನಂತೆ ಇಂದು ಆಪ್ಯಾಯಮಾನವಾಗಿಲ್ಲ. ಯಾಕಾಗಿಅವುಗಳು ಚಿದಂಬರ ರಹಸ್ಯವಾಗಿ ಬಿಡುತ್ತವೆ ? ಎನ್ನುವ ಸಹಜ ಪ್ರಶ್ನೆಯ ಸತ್ಯ ದರ್ಶನವು ಎಲ್ಲಾ ವಯೋಮಾನದವರಿಗೂ ಆಗಿರುತ್ತದೆ. ಸಮಾಜದಲ್ಲಿ, ಸಂಸಾರದ ಹಲವು ಬಂಧಗಳತ್ತ, ವೃತ್ತಿಯಲ್ಲಿ ಕಾಣುವ ಹಲವು ಮುಖಗಳತ್ತ ನಾವು ಮುಖ ತಿರುವಿ ಹೋಗುವುದೇಕೆ ? ಅಥವಾ ಆ ಮುಖಗಳು ನಮ್ಮತ್ತ ಮುಖ ತಿರುಗಿಸುವುದಾದರೂ ಯಾಕೆ ? ನಾವೆಲ್ಲಿ ಎಡವಿದ್ದೇವೆ..? ಏನು ಎಡವಟ್ಟು ಮಾಡಿಕೊಂಡಿದ್ದೇವೆ..? ಎಂದು ಅದರ ಬೆನ್ನು ಹಿಡಿದು ಹೊರಟರೆ ಕಾಣ ಸಿಗುವ ಒಂದಿಷ್ಟು ಅಂಶಗಳು ಹೀಗಿವೆ; ೧) ವೃತಾ ಕಾರಣ ವ್ಯಕ್ತಿಯ ಬಗ್ಗೆ ಅಸಹನೆ ೨) ಬಿಡಲಾಗದ ಅಹಂ ೩) ಕೀಳರಿಮೆ ಅಥವಾ ಮೇಲರಿಮೆ ೪) ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗುವುದು ೫) ಮುಕ್ತವಾಗಿ ಹಂಚಿಕೊಳ್ಳಲಾಗದಿರುವುದು ೬) ಹೋಲಿಸಿಕೊಳ್ಳುವ ಗುಣ ೭) ಕಳೆದುಕೊಂಡ ಸ್ಪಂದನಶೀಲತೆ ೮) ಮರೆತು ಹೋದ ಬಂಧದ ಉದ್ದೇಶ ೯) ಕ್ಷಮಾ ಗುಣ ಹೀನತೆ ೧೦) ಕಣ್ಮರೆಯಾದ ಮುಂದಾಲೋಚನೆ / ದೂರದೃಷ್ಟಿ. ಒಮ್ಮೆ ಕಣ್ಣು ಮುಚ್ಚಿ ಅಂತರಂಗಕ್ಕೆ ಒಂದು ಸುತ್ತು ಹಾಕಿ ಬನ್ನಿ. ನಮ್ಮೊಳಗೆ ಈ ಗುಣ ವಿಶೇಷಣಗಳು ಯಾವುದಾದರೂ ಇವೆಯೇ ಎಂದು ಹುಡುಕಿ. ಉತ್ತರ ನಿಮ್ಮೊಳಗೇ ಇದೆ !
ವೃತ್ತಿ ರಂಗದ ಮುಂಚೂಣಿಯಲ್ಲಿರುವ ವ್ಯಕ್ತಿ ಸಾಂಸಾರಿಕ ಜೀವನದಲ್ಲಿ ಕುಸಿಯುವುದನ್ನು ನೋಡಿದರೆ ನಿಮಗನಿಸುವುದಿಲ್ಲವೆ ಪ್ರಸಕ್ತ ಪೀಳಿಗೆಯು ಅನುಭವಿಸುತ್ತಿರುವ ಕೆಲವೊಂದು ಮಾರಕ ರೋದನಗಳು ಅದೆಷ್ಟು ಭಯಾನಕ ಎಂದು ? Rat Race ನ ಹಿಂದೆ ಬಿದ್ದಿರುವ ಈ ವರ್ಗವು ಬೇರೇನನ್ನೂ ಯೋಚಿಸದೆ ತನ್ನ ಬದುಕಿನ ಸಾರ್ಥಕ ಉದ್ದೇಶವೇ ಹುಚ್ಚರಂತೆ ಸ್ಪರ್ದಾ ಕಣದಲ್ಲಿ ಓಡುವುದು ಮಾತ್ರ ಎನ್ನುವಂತೆ ಡೆದುಕೊಳ್ಳುವುದನ್ನು ಗಮನಿಸಿದರೆ, ಅವರ ಮನಸ್ಥಿತಿ ನಮ್ಮ ಅರಿವಿಗೆ ಬರಬಹುದು. ವೃತ್ತಿ ರಂಗದಲ್ಲಿ ಕಂಡ ಅದೇ ಯಶಸ್ಸು, ಸಂಸಾರ ವರ್ತುಲಕ್ಕೆ ಬಂದಾಗ ಕಕ್ಕಾಬಿಕ್ಕಿ. ಎಂತಹ ಐ. ಐ. ಟಿ ಅಥವಾ ಐ. ಐ. ಎಂ ಚಿನ್ನದ ಪದಕ ವಿಜೇತನೂ, ಪಿ.ಎಚ್ ಡಿ, ಎಮ್.ಫಿಲ್ ಗಳೂ ಇಲ್ಲಿ ಮಾತ್ರ ನಪಾಸು. ಇದೊಂದು ಯೋಚಿಸಬೇಕಾದ ವಿಷಯವಲ್ಲವೇ..? ಸರಳವಾಗಿ ಹೇಳಬೇಕಾದರೆ, ವೃತ್ತಿ ಜೀವನಕ್ಕೆ ಕೊಡುವ ಪ್ರಾಮುಖ್ಯತೆಯನ್ನು ಖಾಸಗಿ ಬದುಕಿನಲ್ಲಿ ಕೊಡಲಾಗದಿರುವುದು. ಹಾಗೆ ಕೊಡಲಾಗಾದಿದ್ದಲ್ಲಿ ಖಾಸಗಿ ಬದುಕಿನ ಕೆಲವೊಂದು ಖುಶಿಯಿಂದಲೂ ದೂರವಿರಬೇಕಾಗುತ್ತದೆ. ಉದಾಹರಣೆಗೆ, ಇಬ್ಬರೂ ದುಡಿಯುವ ಕುಟುಂಬದಲ್ಲಿ ಕಾಣುವ ಒಂದು ಸಾಮಾನ್ಯ ರೋಗವೆಂದರೆ, ಮಗುವನ್ನು ಹೆತ್ತು ಡೇ ಕೇರ್ ಗೋ, ತಮ್ಮ ಅಪ್ಪ-ಅಮ್ಮ, ಅತ್ತೆ-ಮಾವನಿಗೋ ಮುಂದಿನ ಜವಾಬ್ದಾರಿಯನ್ನು ವಹಿಸಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸುವುದು. ಕನಿಷ್ಟ ಎರಡು ವರ್ಷದವರೆಗಾದರೂ ಆ ಮಗುವಿಗೆ ಒಂದು ತಾಯಿಯ ಪ್ರೇಮ, ಕಾಳಜಿ, ಪ್ರೀತಿ ಸಿಗದಿದ್ದಲ್ಲಿ ಆ ‘ಹೆಣ್ಣಿ’ ಗೆ ತಾಯಿತನವಾದರೂ ಯಾಕೆ..?
ಆ ಮಗುವಿಗೆ ಈ ದುಷ್ಟ ಲೋಕವನ್ನು ನೋಡುವ ‘ಭಾಗ್ಯ’ವಾದರೂ ಬೇಕೇ ? ಕೇವಲ ಹೆತ್ತ ಮಾತ್ರಕ್ಕೆ ತಾಯಿಯೋ, ಅಪ್ಪ ಎಂದು ಕರೆಸಿಕೊಂಡ ಮಾತ್ರಕ್ಕೆ ಅಪ್ಪನೋ ಆಗುವುದಿದ್ದರೆ ಅಪ್ಪ-ಅಮ್ಮ ಎಂಬ ಸರಕುಗಳು ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳಲ್ಲಿ, ವಿಧಗಳಲ್ಲಿ ಪ್ಯಾಕೇಜ್ ನೊಂದಿಗೆ, ಮೇಡ್ ಇನ್ ಎಂಬ ಟ್ಯಾಗ್ ನೊಂದಿಗೆ ಲಭ್ಯವಿರುತ್ತಿತ್ತು…! ಇಂತವರಿಗೆ ಮಕ್ಕಳಾದರು ಯಾಕೆ ಸ್ವಾಮಿ ….? ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುತ್ತೇವಲ್ಲ ಅದಕ್ಕೆ ಹಾಕಿ ಮೊದಲು ಕಡಿವಾಣ. ಜವಾಬ್ದಾರಿಯಿಂದ ನುಣಿಚಿಕೊಳ್ಳುವುದನ್ನು ಮೊದಲು ಬಿಡಿ. ಅತೀ ಆಂಬಿಶಿಯಸ್ ಆದರೆ ನೋವನ್ನು ಅನುಭವಿಸಲು ತಯಾರಾಗಿ. ಅದೃಷ್ಟದ ಮರೀಚಿಕೆಯ ಬೆನ್ನಟ್ಟುವುದನ್ನು ನಿಲ್ಲಿಸಿ. ಕೊನೆಗೊಮ್ಮೆ ಅದು ನಿಮ್ಮ ಮನೆಯ ಹೊಸ್ತಿಲಲ್ಲಿ ನಿಮಗಾಗಿ ಕಾಯುತ್ತಾ ಜೀವತ್ತೆತ್ತ ‘ಅದೃಷ್ಟ’ ವನ್ನು ನೀವು ಎದುರಿಸಬೇಕಾಗಿ ಬರಬಹುದು. ಯೋಚಿಸಿ, ವೃತ್ತಿ ರಂಗದಲ್ಲಿನ ಹತ್ತು ಹಲವು ಸಮಸ್ಯೆಗಳನ್ನು, ಅಡೆ ತಡೆಗಳನ್ನು ಸುಲಲಿತವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗುವ ಜೀವಕ್ಕೆ ಸಂಸಾರದೊಳಗಿನ ಸಣ್ಣ ಗಂಟನ್ನು ಬಿಡಿಸಲು ವಿಫಲವಾಗುವುದು ಯಾಕೆ…? ತಾಳ್ಮೆ ಕಳೆದುಕೊಳ್ಳುವುದು, ಅಸಹನೆ, ಹೋಲಿಸುವ ಗುಣ, ಬಿಡದ ಅಹಂ, ಮಹತ್ವಾಕಾಂಕ್ಷೆ, ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು… ಒಂದಾ ಎರಡೋ…ಇವೆಲ್ಲವೂ ನಮ್ಮನ್ನು ನಾವಾಗಿರಲು ಬಿಡದೆ, ನಮ್ಮತನವನ್ನು ಒಪ್ಪಿಕೊಂಡು ಸಹಜತೆಯನ್ನು ಅಪ್ಪಿಕೊಳ್ಳದಂತೆ ಮಾಡಿ ಬಿಡುತ್ತವೆ. ಹಾಗಾಗಿ ವೃತ್ತಿ ರಂಗದ ಯಶಸ್ಸು ಸಂಸಾರದಲ್ಲಿ ಮಾಯವಾಗಿ ಬಿಡುತ್ತದೆ.
ಸ್ವರ್ಗವಾಗಬೇಕಿದ್ದ ಬಾಳ ನೌಕೆ ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗುತ್ತದೆ. ಒಂದಿಷ್ಟು ತಾಳ್ಮೆ ವಹಿಸಿ, ಅಹಂ ಅನ್ನು ಬದಿಗಿರಿಸಿ ಆಕೆಯ ಮಾತಿಗೆ ಈತನೋ, ಈತನ ಮಾತಿಗೆ ಆಕೆಯೋ ಸ್ಪಂದಿಸಿದ್ದರೆ, ಒಟ್ಟಾಗಿ ಒಂದು ಸುಂದರ ಕನಸನ್ನು ಹೆಣೆದು ಅದನ್ನು ಸವಿಯುವಲ್ಲಿ ಕಾರ್ಯ ಮಗ್ನರಾಗಿದಿದ್ದರೆ ಆಗಲಿರುವ ಅಚಾತುರ್ಯಗಳಿಂದ ಕಳಚಿಕೊಳ್ಳಬಹುದಿತ್ತು ಅಲ್ಲವೇ..? ಕೆಲವೊಮ್ಮೆ ಹಿರಿತನಗಳು ಬಂಧಗಳ ನಡುವೆ ಕಂದಕವನ್ನು ಸೃಷ್ಟಿಸುವುದಿದೆ. ಹಿಂದೆಲ್ಲಾ ಅಪ್ಪ-ಮಕ್ಕಳ ನಡುವೆ, ಹಿರಿಯ- ಕಿರಿಯರ ನಡುವೆ ಅಂತರವಿರುತ್ತಿತ್ತು. ಹಿರಿತನ ಎನ್ನುವುದು ಕೆಲವೊಮ್ಮೆ ಶಾಪವಾಗಿಯೂ ಪರಿಣಮಿಸುತ್ತಿತ್ತು. ಮುಕ್ತವಾಗಿ ಬೆರೆಯುವ, ವಿಚಾರವನ್ನು ಹಂಚಿಕೊಳ್ಳುವ ಸ್ವಾತಂತ್ರತೆ ಅಲ್ಲಿರಲಿಲ್ಲ. ‘ ನಾನು’ ಎನ್ನುವುದು ಸದಾ ಜೊತೆ ಬಿಡದ ಬೇತಾಳನಂತೆ ಬೆನ್ನಿಗೆ ಬಿದ್ದಿರುತ್ತಿತ್ತು. ಹಾಗಾಗಿ ಕಿರಿಯ ಜೀವಗಳು ತಮ್ಮ ವಿಚಾರವನ್ನು ಹಂಚಿಕೊಳ್ಳಲು ಇತರ ಸಮಾನ ಮನಸ್ಕರನ್ನು ಹುಡುಕಿಕೊಂಡು ಹೋಗುತ್ತಿದ್ದರು. ಪರಸ್ಪರ ಅರಿತು ಬೆರೆಯುವ, ಬೆಳೆಯುವ ಸುವರ್ಣ ಅವಕಾಶವನ್ನು ಕಳೆದುಕೊಂಡ ಆ ಒಂದು ಪೀಳಿಗೆ ಈಗಲೂ ಇಲ್ಲವೆಂದಲ್ಲ, ಇದೆ. ಆದರೆ ಪ್ರಮಾಣ ಕಡಿಮೆ. ತನ್ನ ಅಣತಿಯಂತೆ ನಡೆಯುವ ಸರಕುಗಳನ್ನು ಬಯಸುವ ಯಾವುದೇ ಜೀವಕ್ಕೆ ನಿಜಾರ್ಥದಲ್ಲಿ ಈ ಬದುಕು ಹೇಳಿ ಮಾಡಿಸಿದ್ದಲ್ಲ. ಅಂಕೆ ಮೀರಿ, ಗೆರೆ ದಾಟಿ ಬೆರೆಯಿರಿ, ಕಲೆಯಿರಿ. ಆಗಲೇ ಸಂಬಂಧ ಎಂದರೆ ಏನೆಂದು ಅರ್ಥವಾಗುವುದೇ ಹೊರತು, ಕುಳಿತಲ್ಲಿಗೆ ಎಲ್ಲವೂ ಬರಬೇಕೆಂಬ ಮನಸ್ಥಿತಿ ಇದ್ದರೆ, ಆ ಮನಸ್ಸನ್ನು ಮತ್ತು ಆ ಸ್ಥಿತಿಯನ್ನು ಶಾಶ್ವತವಾಗಿಹಿಡಿದುಕೊಂಡೇ ಕೂರಬೇಕಾದೀತು ! ನೋಡಿ, ಇಲ್ಲಿ ಒಂದು ಉತ್ತಮ ಬಂಧ ಬೆಸೆಯದಿರಲು ಕಾರಣ ನಮ್ಮ ಅಹಂ ಮತ್ತು ಹಿರಿತನ.
ಅದೇ ಆ ಜೀವ ಮುಕ್ತ ಮನಸ್ಸಿನಿಂದ ಆ ಬಂಧವನ್ನು ಸ್ವೀಕರಿಸಿದ್ದರೆ ಒಂದಷ್ಟು ಉತ್ತಮ ಬೆಸುಗೆ ಏರ್ಪಡುತ್ತಿತ್ತು ಅಲ್ಲವೇ..!? ಅಷ್ಟಕ್ಕೂ ಆ ಎಲ್ಲಾ ಸಂಕೀರ್ಣತೆಗಳಿಂದ ನಾವು ಏನನ್ನು ಗಳಿಸುತ್ತೇವೆ…? ‘ಮುಕ್ತತೆ’ ಅಂದ ಕೂಡಲೇ ಮೈ ಪರಚಿಕೊಳ್ಳುವ ನಮ್ಮ ಮನಸ್ಥಿತಿಯು ಮುಂದಿನ ಹಾಲಾಹಲಕ್ಕೆ ಕಾರಣವಾಗುವುದರ ಜೊತೆಗೆ ಹಲವು ಉತ್ತಮ ಅವಕಾಶಗಳಿಂದಲೂ ವಂಚಿತರಾಗುವಂತೆ ಮಾಡುತ್ತದೆ. ಮಕ್ಕಳೊಡನೆಯೋ ಇತರ ಬಂಧಗಳೊಡನೆಯೋ, ಯಾವುದೇ ರಂಗದಲ್ಲಾಗಲಿ ಮುಕ್ತವಾಗಿ ಹಂಚಿಕೊಳ್ಳಬೇಕಾದದ್ದನ್ನು ಹಂಚಿಕೊಳ್ಳಲು ಹಿಂಜರಿಕೆಯೇಕೆ..? ಹೇಳುವುದೇ ಇದ್ದರೆ ನೇರವಾಗಿ ಹೇಳಿಬಿಡಿ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆಯ ತಂತ್ರ ಬೇಡ. ಹೇಳುವಾಗ ವಿಷಯವನ್ನು ಉದ್ದೇಶಪೂರ್ವಕಾಗಿ ಹೆಕ್ಕಿ ತೆಗೆದು ಅದನ್ನು ಸಂಕೀರ್ಣಗೊಳಿಸಿ, ಗಂಭೀರವಾಗಿಸಿ ಆರಂಭಿಸುವ ಪ್ರಸ್ತಾವನೆಯ ಜೊತೆಗೆ, ಒಂದೋ ತನ್ನನ್ನು ಋಣಾತ್ಮಕವಾಗಿಯೋ, ಅಥವಾ ಗುಣಾತ್ಮಕಾವಾಗಿಯೋ ಚಿತ್ರಿಸಿಕೊಂಡು ಉದ್ದೇಶವನ್ನು ತಲುಪಿಸುವ ತಂತ್ರವಿದೆಯಲ್ಲಾ ಅದು ಬಹಳ ಕೀಳು ಮಟ್ಟದ್ದು. ಅಷ್ಟಕ್ಕೂ ಆ ಮಟ್ಟಕ್ಕೆ ಇಳಿಯಲು ಕಾರಣವೇನು ಎಂದು ನೀವು ಯೋಚಿಸಿದ್ದೀರಾ..? ನಿಮ್ಮೆದೆಯೊಳಗೆ ಅವಲಕ್ಕಿ ಕುಟ್ಟುವುದರಿಂದ ತಾನೇ ನೀವು ಆ ತಂತ್ರಕ್ಕೆ ಮೊರೆ ಹೋಗಿದ್ದು…? ನಮ್ಮೊಳಗೊಬ್ಬನಾಗಿರುವ ಆ ಮನಸ್ಸಾಕ್ಷಿಯನ್ನು ಕೇಳಿ ನೋಡಿ..! ಅದು ನೀವು ಮಾಡುವುದು ಎಷ್ಟು ಸರಿ ಎಂದು ಹೇಳುತ್ತದೆ.
ಆದರೂ ನೀವು ಮತ್ತೆ ಅದನ್ನೇ ಮಾಡುತ್ತೀರಿ ಯಾಕೆ…? ಸತ್ಯವನ್ನು ಎದುರಿಸುವ ಧೈರ್ಯವಿಲ್ಲದ ಕಾರಣವಲ್ಲವೇ ! ಅತಿ ಹತ್ತಿರದ ಸಂಬಂಧಗಳೇ ಈ ಮಟ್ಟಕ್ಕೀಳಿದರೆ ಇನ್ನುಳಿದವು ಯಾವ ಮಟ್ಟಕ್ಕೆ ಹೋದಾವು ಎಂದು ಇನ್ನೊಂದು ಬದಿಯಲ್ಲಿರುವ ಬಂಧ ಚಿಂತಿಸುತ್ತಿರುವ ಕಲ್ಪನೆ ನಿಮಗಿದೆಯೇ…? ತಕ್ಷಣದ ಪರಿಹಾರಕ್ಕಾಗಿ ನೀವು ಕಂಡುಕೊಂಡ ಮಾರ್ಗವು ಮುಂದೆ ನಿಮ್ಮ ಸಂಬಂಧವನ್ನು ಹಳಿ ತಪ್ಪುವಂತೆ ಮಾಡುವುದಿಲ್ಲವೆ0ದು ಏನು ಖಾತ್ರಿ…!? ಇದ್ದದನ್ನು ಇದ್ದ ಹಾಗೆ ಹೇಳಲೂ ಒಂದು ಮುಕ್ತ ಮನಸ್ಸು ಮತ್ತು ತುಸು ಧೈರ್ಯ ಬೇಕು. ತಾನು ಮಾಡುವುದು ಒಂದು ದೃಷ್ಟಿಯಲ್ಲಿ ಸರಿಯಲ್ಲದಿದ್ದರೂ, ಅದನ್ನು ಮುಕ್ತವಾಗಿ ಹಂಚಿಕೊಂಡು, ಪರಿಸ್ಥಿತಿಯನ್ನು ವಿವರಿಸಿ ಹೇಳಿದರೆ ಯಾರು ಬೇಡ ಅಂತಾರೆ..? ಅದನ್ನು ಹಾಗೆ ಮಾಡಲಾಗದಿದ್ದುದಕ್ಕೆ ತಾನೇ ಪಲಾಯನ ತಂತ್ರವನ್ನು ಕಂಡುಕೊಂಡಿದ್ದು. ಮನುಷ್ಯನಿಗೆ ಬಧ್ಧತೆ ಬಹಳ ಮುಖ್ಯ. ಗಾಳಿ ಬಂದ ಕಡೆ ತೂರುವ ಮನಸ್ಥಿತಿಯು ಹೆಚ್ಚು ದಿನ ಸಂಬಂಧವನ್ನು ಹಸಿರಾಗಿಡುವುದಿಲ್ಲ. ತೂತಾದ ಮಡಕೆಗೆ ಒಂದೋ ಎರಡೋ ಬಾರಿ ತೇಪೆ ಹಾಕಬಹುದು ಆದರೂ ಸೋರುವುದು ನಿಂತಿಲ್ಲ ಅಂದರೆ ಪುನ: ತೇಪೆ ಹಾಕುವ ಬದಲು ಅದನ್ನು ಎಸೆದು ಹೊಸ ಮಡಕೆಯನ್ನು ಕೊಳ್ಳುವುದಲ್ಲವೇ ಉಚಿತ..! ಅಂತಹ ಒಂದು ಬಧ್ಡತೆಯೇ ಇಲ್ಲವೆಂದ ಮೇಲೆ ಅಂತವರ ಜೊತೆ ಸಖ್ಯ ಬೆಳೆಸುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಈ ವಿಷಯದಲ್ಲಿ ಅದು ಎಷ್ಟೇ ಹತ್ತಿರದ ಸಂಬಧವಾದರೂ ಸರಿ ನಾವು ಒಂದಿಷ್ಟು ಕಠಿಣ ನಿರ್ಧಾರಗಳನ್ನು ತಳೆಯಲೇಬೇಕು.
ಇಲ್ಲವಾದಲ್ಲಿ we are taken for a granted ಆಗಿ ಬಿಡುತ್ತೇವೆ. ಅದು ಬೇಕೇ..? ಬಂಧಗಳ ನಡುವೆ ಜರಗುವ ಈ ಎಲ್ಲಾ ವ್ಯವಹಾರಗಳು ಮುಖವಾಡದ ಕ್ರಿಯೆಗಳಾದರೆ, ಸಂಬಂಧಗಳಿಗೇ ಅರ್ಥ ಹುಡುಕಿಕೊಂಡು ಹೋಗಬೇಕಾದ ಸಮಯ ಬಂದೀತು. ಇದನ್ನೆಲ್ಲಾ ನಾವು ನಿತ್ಯ ಅನುಭವಿಸುತ್ತಿದ್ದೇವೆಂದು ನಿಮಗೂ ತೋಚುತ್ತೀರಬಹುದು….! ಮುಖ್ಯವಾಗಿ ನಿಮ್ಮನ್ನು ನೀವು ನಂಬಿ. ಪ್ರಕೃತಿಯಲ್ಲಿರುವ ಉತ್ತಮ ಗುಣಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಿ. ಇತರರ ನೋವಿನಲ್ಲಿ ಖಡ್ಡಾಯವಾಗಿ ಪಾಲ್ಗೊಳ್ಳಿ. ಎಲ್ಲಕ್ಕಿಂತ ಮಿಗಿಲಾಗಿ ‘ ನಾನು, ನನ್ನದು, ನನಗೆ ‘ಎನ್ನುವುದರಿಂದ ದೂರವಿರಿ. ಇದೇ ಅಪಘಾತಕ್ಕೆ ಮೂಲ ಕಾರಣ. ಅಷ್ಟಕ್ಕೂ ಅದನ್ನು ಕಟ್ಟಿಕೊಂಡು ನೀವು ಗಳಿಸುವುದಾದರೂ ಏನನ್ನು..? ಅಷ್ಟಕ್ಕೂ ಈ ‘ನಾನು’ ಯಾರು ? ಮತ್ತು ಅದಕ್ಕೆ ಉತ್ತರಿಸುವುದು ಎಷ್ಟುಕಷ್ಟವೆಂದು ನೀವು ಎಂದಾದರೂ ಯೋಚಿಸಿದ್ದೀರೆ…? ಹೆಸರೊಂದನ್ನಿಟ್ಟುಕೊಂಡು, ಷರ್ಟು-ಪ್ಯಾಂಟು ತೊಟ್ಟುಕೊಂಡು ನಾನು ‘ಇವನು’ ಎಂದು ಸೂಚಿಸಿದರೆ, ಅದು ‘ನೀನೇ’ ಏನು…? ಯೋಚಿಸಿ…. ! ವಯಸ್ಸಿನ, ಹುದ್ದೆಯ, ಅಂತಸ್ತಿನ ಹಂಗಿಗೆ ಜೋತು ಬೀಳದೆ ಮುಕ್ತವಾಗಿ ಬೇರೆಯಬೇಕು. ಹೃದಯ ಮನಸ್ಸುಗಳು ಕಲೆಯಬೆಕು. ಮೊತ್ತದಲ್ಲಿ ಬದುಕಲ್ಲೊಂದಿಷ್ಟು ಬಧ್ಧತೆ ಇರಬೇಕು, ಒಬ್ಬರನ್ನೊಬ್ಬರು ನಂಬಬೇಕು, ಮುಕ್ತ ಮನಸ್ಸುಗಳು ನಲಿಯಬೇಕು. ಹಾಗಿದ್ದಲ್ಲಿ ಮಾತ್ರ ಸಂಬಂಧವು ಸುಲಲಿತವಾಗಿ ಹರಿಯಲು ಸಾಧ್ಯ. ಪ್ರಯತ್ನಿಸಿ ನೋಡಿ, ನಿಮ್ಮ ಭಾವನೆಯನ್ನು ಅಭಿವ್ಯಕ್ತಿಸಲು ಯಾವ ದೊಣ್ಣೆ ನಾಯಕನ ಅಪ್ಪಣೆಗೆ ಕಾಯುತ್ತಿರಿ ಹೇಳಿ..? ತಡವೇಕೆ …?
ನಿಮ್ಮ ಬದುಕು, ನಿಮ್ಮ ಹೃದಯ, ನಿಮ್ಮ ಮನಸ್ಸು, ಧಾರಾಳವಾಗಿ ಅಭಿವ್ಯಕ್ತಿಸಿ. ರಾಗ-ವೈರಾಗ್ಯಗಳು ಸಾಮಾನ್ಯ. ವೈರಾಗ್ಯದಲ್ಲೂ ರಾಗ ವಿರುವುದನ್ನು ಮರೆಯಬೇಡಿ ! ನಮ್ಮ ನೇರಕ್ಕೆ ನಾವು ನೋಡುವ ಬದಲು ಇತರರ ದೃಷ್ಟಿಯಲ್ಲಿ ನೋಡುವುದನ್ನು ಮೊದಲು ಕಲಿಯಿರಿ. ಉಳಿದಂತೆ ಇನ್ನೆಲ್ಲವೂ ನಿಮ್ಮ ಬಳಿ ಓಡೋಡಿ ಬರುತ್ತವೆ. ಆರಿಸಿ ಉಳಿಸಿಕೊಳ್ಳುವ ಕೆಲಸ ಮಾತ್ರ ನಿಮ್ಮದು. ಹಾಗಂತಸಂಪೂರ್ಣ ‘ಅಹಂ’ ಅನ್ನು ಬಿಟ್ಟು ವೇದಾಂತಿಯಾಗುವುದೂ ಸಲ್ಲ. ಕಚ್ಚಲು ಬಂದರೆ ಭುಸುಗುಟ್ಟಲಾದರೂ,ಅಸ್ತಿತ್ವವನ್ನು ಉಳಿಸಿಕೊಳ್ಳಲಾದರೂ ಅಲ್ಪ ಅಹಂ ಅನ್ನು ಇರಿಸಿಕೊಳ್ಳಿ. ಒಂದಿಷ್ಟು, ಖುಷಿ,ನೆಮ್ಮದಿ,ಸಂತೋಷವನ್ನು ಹಂಚಿಕೊಳ್ಳಲು, ಕಣ್ಣು ತುಂಬಾ ನಿದ್ರೆ ಮಾಡಲು, ಹೊಟ್ಟೆ ತುಂಬಾ ಊಟ ಮಾಡಲು ಯಾಕೆ ಮೀನ, ಮೇಷ ಎಣಿಸುತ್ತೀರಿ…? ಬಂಧವನ್ನು ಹಸಿರಾಗಿಡಲು ಇಂದು ನಮ್ಮ ನಡು ವೆ ಹಲವುಸಾಧನಗಳಿವೆ. ಮುಕ್ತವಾಗಿ ಅವುಗಳ ಮೂಲಕ ಭಾವನೆಗಳನ್ನು ಹರಿಯಬಿಡಿ. ಮೊತ್ತ ಮೊದಲು ‘ನಾನು ‘ಎಂಬ ವ್ಯವಹಾರದಿಂದ ದೂರವಿರಿ. ಒಟ್ಟಿನಲ್ಲಿ ನಮ್ಮ ಅಸ್ಮಿತೆ, ಭಾಷೆ, ಸಂಸ್ಕೃತಿ, ಆಹಾರವು ಹೇಗೆ ನಮಗೆ ತುಂಬಾ ಆಪ್ಯಾಯಮಾನಾವೆನಿಸುತ್ತದೋ, ಅದೇ ರೀತಿ ಪರಸ್ಪರರ ನಡುವಿನ ಸಂಬಂಧವೂ ಹಾಗೆ ಅನಿಸಬೇಕು. ಸಂಬಂಧವೆಂಬ ಸುಂದರ ‘ ಸ್ವಪ್ನ’ ಗಳಿಗೆ ಬೇಲಿ ಹಾಕದೆ ಆದಷ್ಟು ಬೇಗ ಅವುಗಳಿಗೆ ‘ಶ್ರೀ’ ಕಾರ ಹಾಕಿ. ನಮ್ಮ ಬದುಕಲ್ಲಿ ಅವುಗಳು ‘ ತೇಜಸ್ವಿ’ ಯಾಗಿರಲೆಂದು ‘ ಗುರು’ ವಿನ ಬಳಿ ಕೇಳಿಕೊಳ್ಳಿ. ಆವಾಗ ‘ ಜಯ’ ವುಳ್ಳ ‘ಭಾಗ್ಯ’ ದ ಬಾಗಿಲು ತನ್ನಿಂತಾನಾಗಿಯೇ ತೆರೆಯುತ್ತದೆ. ಸಂಬಂಧವೆಂಬ ಜೀವನದಲ್ಲಿ ‘ಸಂಗೀತ’ ಸುಧೆಯು, ‘ಚೈತ್ರ’ ಮಾಸದ ಕೋಗಿಲೆಯ ಇಂಚರದಂತಿರಲಿ. ಎಲ್ಲಕ್ಕಿಂತ ಮಿಗಿಲಾಗಿ ಧರ್ಮ-ಕರ್ಮವನ್ನರಿತು, ಹಮ್ಮನ್ನು ಅಳಿಸುವಲ್ಲಿ ಯಶಸ್ವಿಯಾದರೆ, ನಿಮ್ಮ ಬದುಕಿನ ಹೊಲದಲ್ಲಿ ಸಂಬಂಧವೆಂಬ ಪೈರು ಯಾವತ್ತೂ ನಳ ನಳಿಸುತ್ತಿರುತ್ತದೆ. ಸತ್ಯಂ, ಶಿವಂ, ಸುಂದರಂ…!!








I am reminded of one incidence quoted in Readers Digest several decades earlier. A husband and wife, both mathematicians, had a very bitter quarrel once. Husband said, ‘We have become two ends of the diameter of a big circle. No use in staying together.’ The wife coolly replied, ‘We can still be close, provided the diameter becomes zero.’
Addendum to my above quote, the funniest thing about Readers Digest at present is that the readers can not, simply can’t, digest it price!