ಯುಗಾದಿಗೆ ರಾಗಿ ಮುದ್ದೆ ಉಳ್ಳಿಕಾಳು ಬಸ್ಸಾರು
ಈ ಯುಗಾದಿಗೆ ನಮ್ಮನೆಗೆ ಬನ್ನಿ, ಬಿಸೀ ರಾಗಿ ಮುದ್ದೆ, ಕಮ್ಮಗಿರೋ ಉಳ್ಳಿಕಾಳು ಬಸ್ಸಾರು ಊಟ ಮಾಡ್ಕೊಂಡು ಹೋಗಿವಿರಂತೆ. ‘ಅಯ್ಯೋ ನಿಮಗೇನ್ರೀ ಬಂತು ಹೊತ್ತು, ವರ್ಷಕ್ಕೊಂದು ಹಬ್ಬದಲ್ಲೂ ಡಯಟ್ ಮಾಡ್ತೀರೇನ್ರೀ’ ಅಂತ ಪ್ರಶ್ನೆ ಕೇಳ್ತೀರಾ? ಡಯಟ್ಟು ಇಲ್ಲ ಗಿಯಟ್ಟು ಇಲ್ಲ, ಜೊತೆಗೆ ಒಬ್ಬಟ್ಟೂ ಇಲ್ಲ. ಅಸಲು ವಿಷಯ ಏನಂದ್ರೆ ನಮ್ಮನೆಯಲ್ಲಿ ಯುಗಾದಿ ಹಬ್ಬ ಮಾಡೋಹಾಗಿಲ್ಲ. ಅದು ಹಿಂದಿನಿಂದಲೂ ನಡೆದು ಬಂದಿರೋ ಸಂಪ್ರದಾಯ. ಹಬ್ಬದ ದಿನ ಹೊಸಬಟ್ಟೆ ತೊಡೋ ಹಾಗಿಲ್ಲ, ಒಲೆ ಮೇಲೆ ಹೆಂಚು ಇಡೋ ಹಾಗಿಲ್ಲ, ಒಗ್ಗರಣೆ ಹಾಕೋ ಹಾಗಿಲ್ಲ, ಮಾವಿನಸೊಪ್ಪು ತೋರಣ ಕಟ್ಟೊ ಹಾಗಿಲ್ಲ, ಬೇವು-ಬೆಲ್ಲ ತಿನ್ನೋ ಹಾಗಿಲ್ಲ. ಆರ್ಡಿನರಿ ಸ್ನಾನ ಮಾಡಬಹುದು, ಆದರೆ ಎಣ್ಣೆ ಸ್ನಾನಕ್ಕೆ ಅವಕಾಶವಿಲ್ಲ. ಮನೆಗೆ ಸುಣ್ಣ-ಬಣ್ಣ ಬಳಿಯಂಗಿಲ್ಲ, ಪೊರಕೇಲಿ ಕಸ ಹೊಡೀಬಹುದೇ ಹೊರತು ನೀರು ಹಾಕಿ ಸಾರಿಸುವಂತಿಲ್ಲ.ಈ ಕಟ್ನಿಟ್ಟು ಹಬ್ಬದ ದಿವಸ ಅಷ್ಟೇ ಅಲ್ಲ, ಅದರ ಹಿಂದೆ-ಮುಂದೆ ಹದಿನೈದು ದಿವಸ ಈ ‘ಉಗಾದಿ ಕಫಾಯ’ ಜಾರೀಲಿರುತ್ತೆ. ಹಬ್ಬ ಕಳೆದು ಒಂಭತ್ತು ದಿವಸಕ್ಕೆ ಬರೋ ರಾಮನವಮಿ ಮಾಡಬಹುದು. ನಮ್ಮ ತಾತನ ಬುಡಕಟ್ಟಿನ ಎಲ್ಲಾ ಗಂಡುಮಕ್ಕಳ ಮನೆಯಲ್ಲೂ ಇದೇ ಸ್ಥಿತಿ. ಹೆಣ್ಣು ಮಕ್ಕಳು ತಮ್ಮ ಗಂಡನಮನೆಯಲ್ಲಿ ಹಬ್ಬ ಮಾಡಲು ಅಭ್ಯಂತರವಿಲ್ಲ.
ಅದಕ್ಕಾಗಿಯೇ ಹೇಳಿದ್ದು, ಹಬ್ಬಕ್ಕೆ ನಮ್ಮ ಮನೆಯಲ್ಲಿ ರಾಗಿಮುದ್ದೆ ಉಳ್ಳಿಕಾಳು ಬಸ್ಸಾರು ಅಂತ. ಒಂದು ವರ್ಷ ಏನಾಯಿತೆಂದರೆ, ಹಬ್ಬದ ದಿನ ಮದ್ಯಾಹ್ನದ ಹೊತ್ತು. ಆಗಿನ್ನೂ ನಮಗೆ ಮಕ್ಕಳಾಗಿರಲಿಲ್ಲ. ನಾವು ಗಂಡ ಹೆಂಡತಿ ನಡುಮನೇಲಿ ಕುಂತು ಮುದ್ದೆ ಊಟ ಮಾಡ್ತಾ ಇದ್ವಿ. ಪರಿಚಯದ ದಂಪತಿಗಳು ಅಚಾನಕ್ ಆಗಿ ಬಂದರು. ಅವರಿಗೆ ನಮ್ಮ ಸಂಪ್ರದಾಯ ಗೊತ್ತಿರಲಿಲ್ಲ. ನೋಡುತ್ತಾರೆ, ನಾವಿಬ್ಬರೂ ರಾಗಿ ಮುದ್ದೆ ಉಣ್ತಾ ಕುಂತಿದ್ದಿವಿ, ಬರ್ರಿ ಊಟ ಮಾಡ್ರಿ ಅಂತ ಅವರನ್ನೂ ಕರೆದೆವು. ಅವರಿಗೆ ಗಾಬರಿ, ಇಬ್ಬರ ಮುಖದಲ್ಲೂ ಅನುಕಂಪ ಎದ್ದು ಕಾಣ್ತಾ ಇದೆ. ದೂರದ ಬೆಟ್ಟ ಸಿನಿಮಾದಲ್ಲಿ ಮನೇಲಿ ರೇಶನ್ ಇಲ್ದೆ ರಾಜಕುಮಾರ್-ಭಾರತಿ ಬರೀ ತೆಂಗಿನ ಕಾಯಿ ತಿಂತಾರಲ್ಲ ಆ ಸೀನ್ ಅವರಿಗೆ ಜ್ಞಾಪಕ ಬಂದಿರಬೇಕು. ತಡೆಯಲಾರದೆ. ‘ಇದೇನು ವರ್ಷಕ್ಕೊಂದ್ ಹಬ್ಬುದ್ದಿನ ಹಿಟ್ಟುಣ್ತಾ ಇದೀರಲ್ಲ’ ಅಂತ ಕೇಳಿಯೇಬಿಟ್ಟರು. ಹೆಚ್ಚು ಸತಾಯಿಸುವುದು ಬೇಡ ಅಂತ ನೈಜಸ್ತಿತಿ ವಿವರಿಸಿದೆವು. ಆಗ ನಿಸೂರಾದರು. ‘ನಿಮ್ಮನೇಲಿ ಮಾಡದೇ ಇದ್ರೇನು ನಾವೆಲ್ಲಾ ಸತ್ತೊಗಿದಿವಾ ಏಳ್ರಿ ಹೋಗನ ನಮ್ಮನೆಗೆ’ ಅಂತ ದಬಾಯಿಸಿದರು. ‘ಇವತ್ ಬ್ಯಾಡ ನಾಳೆ ಬತ್ತಿವಿ’ ಅಂತಂದು ಕಣ್ಣು ಹೊಡೆದೆ. ವಿಷಯ ಅರ್ಥವಾಗಿ ಪಕಾರನೆ ನಕ್ಕರು. ಪ್ರತಿ ವರ್ಷ ಹಬ್ಬದ ದಿನ ಇಂಥಾದ್ದು ನಡೀತಾನೇ ಇರುತ್ತೆ.
ನಮ್ಮ ಮುತ್ತಾತನವರ ಕಾಲದಲ್ಲಿ ಹಬ್ಬ ಮಾಡುತ್ತಿದ್ದರಂತೆ, ಆದರೆ ನಮ್ಮ ತಾತನ ಕಾಲದಲ್ಲಾದ ಒಂದು ಅಶುಭದಿಂದ ಹಬ್ಬ ನಿಂತುಹೋಗಿದೆ. ನೆಲಮಂಗಲ ತಾಲ್ಲೂಕು ಮರಳಕುಂಟೆ ನಮ್ಮ ತಾತನ ಊರು. ದೊಡ್ಡ ಕುಟುಂಬ. ನನಗೆ ಇಬ್ಬರು ಅಜ್ಜಿಯಂದಿರು, ಅರ್ಥಾತ್ ನಮ್ಮಜ್ಜನಿಗೆ ಇಬ್ಬರು ಹೆಂಡತಿಯರು. ಆರು ಜನ ಗಂಡುಮಕ್ಕಳು, ಆರು ಜನ ಹೆಣ್ಣುಮಕ್ಕಳು. ಗಂಡುಮಕ್ಕಳಲ್ಲಿ ನಮ್ಮಪ್ಪ ಮೂರನೆಯವರು. ಎಲ್ಲಾ ಹಬ್ಬಗಳನ್ನೂ ಭರ್ಜರಿಯಾಗಿ ಆಚರಿಸುತ್ತಿದ್ದರಂತೆ. ಅದರಲ್ಲೂ ಯುಗಾದಿ ಒಂದು ಕೈ ಮೇಲೆ.
ಹಬ್ಬ ನಿಂತುಹೋದ ಘಟನೆ ಯಾವ ವರ್ಷ ಆಯಿತು ಎಂದು ಯಾರಿಗೂ ಸರಿಯಾಗಿ ನೆನಪಿಲ್ಲ. ಆದರೆ ಆ ಸಮಯಕ್ಕಾಗಲೇ ನನ್ನಪ್ಪನ ಸಹಿತ ನನ್ನ ಹಲವು ದೊಡಪ್ಪ-ಚಿಗಪ್ಪ ಹಾಗೂ ಅತ್ತೆಯಂದಿರಿಗೆ ಮದುವೆಯಾಗಿ ಸೊಸೆಯಂದಿರೂ, ಅಳಿಯಂದಿರೂ, ಮೊಮ್ಮಕ್ಕಳೂ ಬಂದು ಮನೆಯ ಸದಸ್ಯರ ಸಂಖ್ಯೆ ಉಬ್ಬಿತ್ತು. ನಮ್ಮಮ್ಮ ಹೇಳುವ ಪ್ರಕಾರ ಆವತ್ತು ಏನಾಯಿತೆಂದರೆ? ಮೊದಲ ಕೋಳಿ ಕೂಗಿಗೇ ಎದ್ದು ಒಲೆ ಮೇಲೆ ಬೇಳೆ ಹಾಕಿದ್ದರೆ ಎಷ್ಟು ಹೊತ್ತಾದರೂ ಅವು ಬೇಯಲೇ ಇಲ್ಲವಂತೆ, ಬೆಳಕರಿದರೂ ಕೊಟ್ಟಿಗೆಯಲ್ಲಿನ ದನಕರುಗಳು ಏಳಲೇ ಇಲ್ಲವಂತೆ, ಮಾವಿನ ಸೊಪ್ಪು ಬೇವಿನ ಸೊಪ್ಪು ತರಲು ಹೋದ ಆಳುಗಳು ವಾಪಸು ಬರಲೇ ಇಲ್ಲವಂತೆ. ಇದರಿಂದ ಕಂಗಾಲಾದ ನಮ್ಮ ತಾತ ಹಬ್ಬ ಆಚರಿಸುವುದನ್ನು ನಿಲ್ಲಿಸಿದರಂತೆ.
ನಾವು ದೊಡ್ಡವರಾದ ಮೇಲೆ ಇದರ ಹಿಂದಿನ ಸತ್ಯಾಸತ್ಯತೆಯನ್ನು ಕೆದಕಲು ಹೊರಟಾಗ ಯಾರೂ ಪ್ರೋತ್ಸಾಹಿಸಲಿಲ್ಲ. ಅದಕ್ಕೂ ಸಹ ಒಂದು ಅಹಿತಕರ ಘಟನೆ ನಡೆದಿದ್ದೇ ಕಾರಣ. ನಮ್ಮ ಚಿಗಪ್ಪ ಒಬ್ಬರು ಮೇಸ್ಟರು. ಅವರೂ ತುಂಬಾ ವರ್ಷ ಇದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು. ಆದರೆ ಮಕ್ಕಳು ಮೆಜಾರಿಟಿಗೆ ಬಂದ ಮೇಲೆ ಈ ಸಂಪ್ರದಾಯಗಳನ್ನೆಲ್ಲಾ ಹೀಯಾಳಿಸಿ ‘ನೀವೂ ಮೇಸ್ಟ್ರಾಗಿ ಇಂಥದ್ದನ್ನೆಲ್ಲಾ ಮಾಡಿದ್ರೆ ಮಕ್ಕಳಿಗೆ ಅದೇನ್ ಪಾಠ ಮಾಡ್ತಿರಿ’ ಅಂತಾ ದಬಾಯಿಸಿ ‘ಅದೇನಾಗುತ್ತೋ ನೋಡೇಬಿಡೋಣ’ ಅಂತ ಹಬ್ಬ ಮಾಡಲು ತೀರ್ಮಾನಿಸಿದರಂತೆ. ಮಕ್ಕಳಿಗೆದುರು ಮಾತಾಡಲಾರದೆ ನಮ್ಮ ಚಿಗಪ್ಪನೂ ಸುಮ್ಮನಾದರು.
ಅದು ಬಹುಶಃ 1980ನೇ ಇಸವಿ ಇರಬೇಕು. ಬೆಳಿಗ್ಗೆ ಎದ್ದು ನಮ್ಮ ಚಿಕ್ಕಮ್ಮ ಬೇಳೆಕಾಳು ಅಳತೆ ಮಾಡಲು ಸೇರು ತರುವಂತೆ ತಮ್ಮ ಮೂರನೇ ಮಗ ಶಂಕರನಿಗೆ ಹೇಳಿದರಂತೆ. ಅವನಾಗ ಪಿಯುಸಿ ಓದುತ್ತಿದ್ದ. ಅವನು ಹೋಗಿ ಸೇರನ್ನು ಇಟ್ಟಿದ್ದ ಗೂಡಿಗೆ ಕೈಹಾಕಿದ ತಕ್ಷಣ ಅಮ್ಮಾ ಅಂತ ಕಿರುಚಿದನಂತೆ. ಎಲ್ಲರೂ ಗಾಬರಿಯಾಗಿ ಬಂದು ನೋಡಿದರೆ ಮುಂಗೈ ಮೇಲೆ ರಕ್ತದ ಕಲೆ, ಏನೋ ಕಚ್ಚಿದ ಗುರುತು. ಅದೇ ಸಮಯಕ್ಕೆ ಗೂಡಿನಲ್ಲಿ ಸರಸರ ಸದ್ದಾಗಿ ಹಾವೊಂದು ಹೊರಬಂದು ಹೆಡೆ ಎತ್ತಿಕೊಂಡು ಮಡಕೆಸಾಲುಗಳಲ್ಲಿ ತೂರಿ ಹೊರಗೆ ಹೋಯಿತಂತೆ. ಎಷ್ಟೇ ಪ್ರಯತ್ನಿಸಿದರೂ ಅವನು ಉಳಿಯಲಿಲ್ಲ. ಅದಾದ ನಂತರ ನಮ್ಮ ಮನೆತನದಲ್ಲಿ ಎಲ್ಲರೂ ಭಯಬಿದ್ದರು. ಇನ್ನೂ ಹೆಚ್ಚಿನ ಕಟ್ಟುಪಾಡುಗಳಾದವು. ಈಗ ನಮ್ಮ ಚಿಗಪ್ಪ-ದೊಡಪ್ಪನ ಮಕ್ಕಳು, ಮೊಮ್ಮಕ್ಕಳು ಹಲವು ಕಡೆ ವಾಸಿಸುತ್ತಿದ್ದಾರೆ, ಆದರೆ ಹಬ್ಬ ಮಾತ್ರ ಮಾಡುವುದಿಲ್ಲ.
ನಾನು ಜಾತಿಮೀರಿ ಮದುವೆಯಾದ ಮೇಲೆ ಹಬ್ಬ ಮಾಡುವ ಮನಸ್ಸಾದರೂ ನನ್ನ ಸಂಗಾತಿ ಹಿಂದೇಟು ಹಾಕಿದಳು. ಹಿರಿಯರ ಸಂಪ್ರದಾಯ ಬಿಡಬಾರದೆಂಬ ಭಯವೋ, ಅತ್ತೆಯನ್ನು ಬುಟ್ಟಿಗೆ ಹಾಕಿಕೊಳ್ಳುವ ಹುನ್ನಾರವೋ!! ಗೊತ್ತಿಲ್ಲ. ಅಂತೂ ಹಬ್ಬ ಮಾಡುವುದು ಬೇಡ ಎಂದು ತೀರ್ಮಾನಿಸಿದೆವು. ನಾನಂತೂ ಖರ್ಚು ಉಳಿಯಿತಲ್ಲಾ ಅಂತ ಸಂತೋಷದಿಂದಲೇ ಒಪ್ಪಿಕೊಂಡೆ. ಅಲ್ಲದೆ ‘ಖಾರದ’ ರುಚಿಕಂಡ ನಾಲಗೆ ಒಬ್ಬಟ್ಟನ್ನು ಮೆಲ್ಲಲು ಹಿಂಜರಿದಿದ್ದೂ ಒಂದು ಕಾರಣ. ಐದಾರು ವರ್ಷಗಳ ಈಚೆಗಂತೂ ನಾವು ಯಾವ ಹಬ್ಬಗಳನ್ನೂ ಖಾಯಶ್ ಪಟ್ಟು ಮಾಡುತ್ತಲೇ ಇಲ್ಲ. ಯಾರಾದರೂ ಕರೆದರೆ ಹೋಗಿ ಪಟ್ಟಾಗಿ ಉಂಡುಕೊಂಡು ಬರುತ್ತೇವೆ. ಮಕ್ಕಳ ಹುಟ್ಟುಹಬ್ಬಗಳನ್ನು ಗ್ರ್ಯಾಂಡಾಗಿ ಆಚರಿಸಿ ಆವತ್ತೇ ಎರಡೆರಡು ಜತೆ ಹೊಸ ಬಟ್ಟೆ ತರುವುದರಿಂದ ಅವು ಹಬ್ಬಕ್ಕೆ ಬಟ್ಟೆ ಕೊಡ್ಸು ಅಂತ ಪೀಡಿಸಿದ್ದೇ ಇಲ್ಲ. ‘ವರ್ಷಕ್ಕೊಮ್ಮೆ ಯುಗಾದಿಗೆ ಹೊಸ ಬಟ್ಟೆ’ ಅನ್ನೋ ಮಾತೇ ಈಗಿಲ್ಲ.
ಅದರೆ ನಾನು ಹುಡುಗನಾಗಿದ್ದಾಗ ತುಂಬಾ ದುಗುಡ ಅನುಭವಿಸಿದ್ದೆ. ನಾವು ನಮ್ಮ ತಾತನ ಊರಿನಿಂದ ಜಮೀನು ಮಾರಿ ಈಗಿನ ಹೊಸಪಾಳ್ಯಕ್ಕೆ ಹೋದಾಗ ನಾನು ಸಣ್ಣ ಹುಡುಗ. ಆ ಹೊಸಪಾಳ್ಯ ಎಂಬ ಊರಿನಲ್ಲೋ ಯುಗಾದಿ ಸಂಭ್ರಮ ಇಡೀ ಸೀಮೆಗಾಗಿ ಮಿಗೋದು. ಭರ್ಜರಿ ಹದಿನೈದು ದಿನ ಹಬ್ಬವೇ ಹಬ್ಬ. ಸಾರಿಸೋದು, ಗುಡಿಸೋದು, ಮನೆ ಬಳಿಯೋದು, ಕೆಮ್ಮಣ್ಣು-ಸುಣ್ಣ ಕಲಸಿ ಮನೆ ಮುಂದಲ ಗೋಡೆಗಳಿಗೆ ಪಟ್ಟೆ ಹಾಕೋದು. ಜವಳಿ ಖರೀದಿ ಮಾಡೋದು, ಅವುನ್ನ ಹೊಲಿಸೋದು ಇವೆಲ್ಲಾ ವಾರಕ್ಕೆ ಮುಂಚೆಯೇ ಶುರು. ಹಬ್ಬದ ದಿನ ಉಡುದಾರ ಮೊದಲುಗೊಂಡು ಮೈಮೇಲಿನ ಎಲ್ಲ ಬಟ್ಟೆಗಳೂ ಹೊಸವೇ. ಮದ್ಯಾಹ್ನದ ಹೊತ್ತಿಗೆ ಒಬ್ಬಟ್ಟಿನೂಟ ಉಂಡುಬಿಟ್ಟರೆ ನಂತರ ಆಟವೇ ಆಟ. ಹುಡುಗರೆಲ್ಲಾ ಇಸ್ಪೀಟಿನೆಲೆ ಹಿಡಿದರೆ ಹೆಂಗಸರು ಚೌಕಾಬಾರ, ಹುಣಸೆಬಿತ್ತ, ಐದು-ಒಂದು, ಪತ್ತಮಣೆ ಆಡುತ್ತಾ ಕಾಲಕಳೆಯುತ್ತಿದ್ದರು. ಊರಲ್ಲಿ ನಮ್ಮದೊಂದೇ ಮನೆಯಲ್ಲಿ ಹಬ್ಬವಿರುತ್ತಿರಲಿಲ್ಲ. ಹಾಗಾಗಿ ಬೇಜಾರಾಗೋದು. ಜಾತಿ ಕಟ್ಟಳೆಯಿಂದಾಗಿ ನಾವು ಬೇರೆಯವರ ಮನೆಗಳಲ್ಲಿ ಒಬ್ಬಟ್ಟನ್ನೂ ತಿನ್ನುವಂತಿರಲಿಲ್ಲ. ಬಹುಶಃ ನಮ್ಮ ತಾತ ತುಂಬು ಸಂಸಾರಕ್ಕೆ ಬಟ್ಟೆ-ಬರೆ, ಬೆಲ್ಲ-ಬೇಳೆಕಾಳು ತರುವ ತಲೆನೋವು ತಪ್ಪಿಸಿಕೊಳ್ಳಲು ಹಬ್ಬ ನಿಲ್ಲಿಸುವ ಹುನ್ನಾರ ಹೂಡಿರಬಹುದೇ ಎಂದು ನಾವು ಅಣ್ಣ-ತಮ್ಮಂದಿರು ತಮಾಷೆ ಮಾಡುತ್ತಿದ್ದೆವು. ಆದರೆ ನಮ್ಮಮ್ಮ ಬಯ್ದು ಸುಮ್ಮನಿರಿಸುತ್ತಿತ್ತು.
‘ಜಗತ್ತಿನ ಎಲ್ಲ ಹಿಂದೂಗಳೂ ಯುಗಾದಿ ಹಬ್ಬ ಮಾಡ್ತರೆ ಅದೇನ್ ನಿಮ್ಮದೇ ಸ್ಪೆಷಲ್ಲು’ ಅಂತ ಕೆಲ ಸ್ನೇಹಿತರು ಕಿಚಾಯಿಸುತ್ತಾರೆ. ಆದರೆ ನಾವಷ್ಟೇ ಅಲ್ಲ, ನಮ್ಮ ಮಧುಗಿರಿ ತಾಲ್ಲೂಕಿನ ಶಂಭೋನಹಳ್ಳಿ ಗ್ರಾಮದಲ್ಲಿ ಇಡೀ ಊರೇ ಹಬ್ಬ ಮಾಡುವುದಿಲ್ಲ. ಅವರೂ ಏನೋ ಸಾಂಪ್ರದಾಯಿಕ ಕಾರಣಗಳನ್ನು ನೀಡುತ್ತಾರೆ. ರಾಜ್ಯದ, ದೇಶದ ಇತರೆಡೆಗಳಲ್ಲೂ ನಮ್ಮ ಹಾಗೂ ಶಂಭೋನಹಳ್ಳಿ ತರದವರು ಬೇಕಾದಷ್ಟು ಇರಬಹುದು. ಹಳ್ಳಿಗಳ ಒಳಹೊಕ್ಕು ವಿವರಗಳಲ್ಲಿ ನೋಡಿದರೆ ಇಂಥಾ ಕಟ್ಟುಪಾಡುಗಳು ಸಾಕಷ್ಟಿವೆ. ಅದೆಲ್ಲಾ ಇರಲಿ, ಅವಧಿ ಓದುಗರಾದ ನೀವು ಹಬ್ಬದ ದಿವಸ ಬಿಡುವು ಮಾಡಿಕೊಂಡು ಅಂಗೇ ಅಡ್ಡಾಡಕೊಂಡು ತುಮಕೂರಿನಲ್ಲಿರೋ ನಮ್ಮನೆ ಕಡೆ ಬನ್ನಿ. ಒಳ್ಳೆ ಕೆಂಪುರಾಗಿ ಮುದ್ದೆ, ಒಗ್ಗರಣೆ ಇಲ್ಲದ ಉಳ್ಳಿಕಾಳು ಬಸ್ಸಾರು ಉಂಡ್ಕಂಡು ಹೋಗಿವಿರಂತೆ.









ಆಶ್ಚರ್ಯಕರವಾಗಿದೆ ಸಂಪ್ರದಾಯ. ಆದ್ರು ಬಿಸಿ ಬಿಸಿ ರಾಗಿಮುದ್ದೆ – ಉಳ್ಳಿಕಾಳು ಬಸ್ಸಾರು ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಅದಕ್ಕಿಂತ ಮೃಷ್ಟಾನ್ನ ಭೋಜನ ಯಾವುದಿದೆ?
ಹರಿ ಅವರೇ, ಬಾಯಲ್ಲಿ ನೀರೂರಿಸಿಕೊಂಡು ಸುಮ್ಮನಿರಬಾರದು, ಹೊರಟು ಬಂದುಬಿಡಿ.
ಚೆನ್ನಾಗಿದೆ ಮಲ್ಲಿಕ್ ನಿಮ್ಮ ಹಬ್ಬದ ಆಚರಣೆ!