ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹನುಮಕ್ಕ ಇನ್ನಿಲ್ಲವೆಂಬ ಕಡು ದುಃಖದ ಸಂಗತಿ..

ಹನುಮಕ್ಕ ನಮ್ಮನ್ನು ಬಿಟ್ಟು ಹೋದಳೆಂಬ ಸುದ್ದಿ ಬಂದಿದೆ. ರಂಗಭೂಮಿಯ ಅಪ್ಪಟ ಕಲಾವಿದೆ. ಬದುಕಿನ ತಿರುವುಗಳಲ್ಲಿ ಒಂದೆಡೆ ಮಿದುಳಿನ ಆಘಾತಕ್ಕೆ ಒಳಗಾಗಿ ಚಿಕಿತ್ಸೆಗಳಿಗೆ ಈಡಾಗಿ ಸ್ವಲ್ಪ ಚೇತರಿಕೆ ಕಂಡಿದ್ದಳು. ಮುಖಕ್ಕೆ ಬಣ್ಣ ಹಚ್ಚಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಕಾಣುತ್ತದೆ. ಇಂದು ಮರಳಿ ಬಾರದ ಲೋಕಕ್ಕೆ ತೆರಳಿದಳು.

ನಾನು ಹನುಮಕ್ಕಳ ಕೆಲವು ನಾಟಕಗಳನ್ನು ನೋಡಿದ್ದೇನೆ. ಅದನ್ನು ಜೀವಿಸುವವಳು.

೨೦೨೧ ಅಕ್ಟೋಬರ್ ತಿಂಗಳಲ್ಲಿ ಕಲಬುರಗಿಯಲ್ಲಿ ಹತ್ತು ದಿನಗಳ ಕಾಲ ಶೂಟಿಂಗ್ ನಲ್ಲಿ ಜೊತೆಗೆ ಇದ್ದೆವು.

ಮಾತಂಗಿ ದೀವಟಿಗೆ ಚಿತ್ರದಲ್ಲಿ ಸಹ ಕಲಾವಿದನಾಗಿ ಅವಳ ಪ್ರತಿಭೆಯನ್ನು ಗಮನಿಸಿರುವೆ. ನಿರ್ದೇಶಕ ಕೊಟ್ಟ ಸೂಚನೆಗಳನ್ನು ಚಾಚುತಪ್ಪದೇ ಒಂದೇ ಟೇಕಿಗೆ ಅಭಿನಯಿಸಿ ತೋರುತ್ತಿದ್ದಳು. ಸಹಜಾಭಿನಯ, ಸಂಭಾಷಣೆ ಯಲ್ಲಿ ದೇಸಿಯತೆ, ಏರಿಳಿತಗಳ ಮೂಲಕ ಪಾತ್ರದ ಭಾವ ಜಗತ್ತನ್ನು ಕಟ್ಟಿ ಕೊಡುತ್ತಿದ್ದಳು.

ಆಗಾಗ ಎಲೆ ಅಡಿಕೆ ತಿನ್ನುವ ಹನುಮಕ್ಕ ನಮಗಿಬ್ಬರಿಗೂ ಸ್ಪಾಟ್ ನಲ್ಲಿ ಆಫ್ ಟೈಮ್ ಇದ್ದಾಗ,

“ಅಣ್ಣ ಬಾ… ಎಲಿ ಅಡಿಕೆ ತಿನ್ನೋಣು…”ಎಂದು ಚಂಚಿ ನೀಡಿ ಹರಟುತ್ತ ಎಲೆ ಅಡಿಕೆ ತಿನ್ನುತ್ತಾ ರಂಗಭೂಮಿ ಕುರಿತು ಹರಟುತ್ತಿದ್ದೇವು.

“ಎಣ್ಣಾ ನಿನ್ನ ಜೋಡಿ ಪಾತ್ರ ಮಾಡೋದು ನನಗ ಭಾಳ ಖುಷಿ ನೋಡು”… ಆಕೆ ಧಾರಾಳತನದ ಮನಸ್ಸು ತೋರಿದಾಗ,

“ಅಯ್ಯಾ ಬಿಡ ಹನುಮಕ್ಕ, ನಿನ್ನ ಮುಂದ ನಾ ಯಾವ ಲೆಕ್ಕ… ನೀನು ಅಭಿನಯವನ್ನು ಕಲಿತು ಕರಗತ ಮಾಡಿಕೊಂಡೋಳು… ನಾನೊಬ್ಬ ನಾಟಕಕಾರ ಅಷ್ಟ… ” ನಾನು ಅಂದರೆ,

“ಅದೇನ ಇರಲಿ… ನಮ್ಮಿಬ್ಬರ ಪಾತ್ರಗಳು ಮಾತ್ರ ಒಪ್ಯಾವು ನೋಡ… ನಾವಿಬ್ಬರೂ ಥೇಟ್ ಹಂಗ ಕಾಣತೀವಿ ಅಂತ”… ಅಂತನ್ನುತ್ತ ಎಲೆ ಅಡಿಕೆ ಮೆಲ್ಲುತ್ತಿದ್ದಳು.

ಖರೆಗು ಎಲ್ಲರೂ ನಾವಿಬ್ಬರೂ ಸಮತಾ ದೇಶಮಾನೆಯವರ ತಾಯಿ ತಂದೆ ತರಾನೆ ಕಾಣತೀವಿ ಅಂತಿದ್ದರು.

ಹನುಮಕ್ಕ ಬದುಕಿನ ಜಂಜಾಟದಲ್ಲಿ ತನ್ನ ಪ್ರಕೃತಿ ಬಗ್ಗೆ ಕಾಳಜಿ ತಗೊಂಡಿದ್ದಳೋ ಇಲ್ಲವೋ!? ಗೊತ್ತಿಲ್ಲ. ಅದು ಕಾಡುವ ಪ್ರಶ್ನೆ. ಮಿದುಳಿಗೆ ಹೊಡೆದ ಸ್ಟ್ರೋಕ್ ಕೊನೆಗೂ ಅವಳನ್ನು ಕರೆದುಕೊಂಡೇ ಹೋಯಿತು.

ಹನುಮಕ್ಕಳ ನಿಧನ ದುಃಖ ತಂದಿದೆ. ನಿಜ.

ನೀನು ಮತ್ತು ನಿನ್ನ ಅಭಿನಯ ಕಲೆ ನಮ್ಮಗಳೆದೆಯಲ್ಲಿ, ಸ್ಮೃತಿಯಲ್ಲಿ ಸದಾ ಕಾಲ ಇರುತ್ತದೆ.

ನಿನಗೆ ಅಂತಿಮ ನಮನಗಳು

‍ಲೇಖಕರು Admin

3 October, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading