ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಡದವ್ವಗ ಬೈಯೋ ಅಧಿಕಾರಿಲ್ಲೇನ?

ಅವ್ವ ಮತ್ತು ಸೈಕಲ್

ನಾಗೇಶ ತಳವಾರ

ಸೈಕಲ್ ಸ್ವಚ್ಛ ಮಾಡತ್ತಿದ್ದೆ, ‘ಯಾವಾಗ ನೋಡಿದರೂ ಸೈಕಲ್ ಒರಸತಾ ಇರೋದೆ. ಬಾ ಇಲ್ಲಿ ಜರಾ ಕೆಲಸ ಐತಿ’ ಅಂತ ಅವ್ವ ಕರೆದಳು. ಜೋತು ಮಾರಿ ಮಾಡಕೊಂಡು ಅವಳೆದರು ನಿಂತೆ. ಏನೇನೋ ಹೇಳದಳು. ‘ಹೂಂ, ಹೂಂ’ ಅಂತ ತಲೆ ಅಲ್ಲಾಡಿಸಿ, ಹೇಳಿದ್ದನ್ನ ತಂದ ಕೊಟ್ಟು ಮತ್ತೇ ಸೈಕಲ್ ಒರೆಸುತ್ತಾ ಕುಳಿತೆ. ಅದರ ಒಂದೊಂದು ಅಂಗಾಂಗಳೆನೆಲ್ಲ ತಿಕ್ಕಿ ಪಳಪಳ ಹೊಳೆಯುವಂತೆ ಮಾಡತ್ತಿದ್ದೆ. ಇದು ದಿನದ ಬಹುಮುಖ್ಯ ಕಾಯಕವಾಗಿತ್ತು ನನಗೆ. ನಾಲ್ಕೈದು ವರ್ಷಗಳ ನನ್ನ ಅಳು, ಜಗಳ, ಆಗಾಗ ಊಟ ಬಿಡುತ್ತಿದ್ದಿದರ ಫಲವಾಗಿ ಸಿಕ್ಕ ಕಾರಣಕ್ಕೆ ಮತ್ತು ಅದರ ಮೇಲಿನ ಪ್ರೀತಿಗೆ ಮೂರೊತ್ತು ಅದರ ಜೊತೆಗೇನೆ ಕಾಲ ಕಳಿತಿದ್ದೆ. ಆಗ ಹತ್ತನೆ ಕ್ಲಾಸ್ ಓದುತ್ತಿದ್ದ ನಾನು, ಸೈಕಲ್ ಮೇಲೆ ಶಾಲೆಗೆ ಹೋಗುವಾಗ ಎಲಿಲ್ಲದ ಖುಷಿ. ಆದರೆ ಕ್ಲಾಸ್ ಒಳಗೆ ಕುಳಿತಾಗ ಮಾತ್ರ ಭಯವಾಗತಿತ್ತು. ಯಾರಾದರೂ ಅದಕ್ಕೆ ಏನಾದರೂ ಮಾಡದ್ರೆ ಹೇಗೆ ಎನ್ನುವ ಆತಂಕ. ಒಂದೊಂದು ಕ್ಲಾಸ್ ಮುಗಿದಾಗಲು ಹೊರ ಬಂದು ಸೈಕಲ್ ನೋಡಿ ಹೋಗತ್ತಿದ್ದೆ. ಯಾವದೋ ಕಾರಣಕ್ಕೆ ಅವ್ವನ ಜೊತೆ ಜಗಳ ಮಾಡಿದ್ದೆ. ಅವಳು ಕೆಲಸಕ್ಕೆ ಹೋದ ಬಳಿಕ ಯಾರಿಗೂ ಹೇಳದೆ ಸೈಕಲ್ ಹತ್ತಿ ಬಿಜಾಪುರ ಕಡೆ ಮುಖ ಮಾಡಿ ಹೊರಟೆ. ನಮ್ಮೂರಿನಿಂದ 65 ಕೀ.ಮಿ ಪಯಣ. ಕಿಸೆಯಲ್ಲಿ ಒಂದು ರೂಪಾಯಿ ಇಲ್ಲ. ಹಸಿವು ಬೇರೆ ಆಗತಿತ್ತು. ರಣರಣ ಬಿಸಿಲು, ಹೋಗಿ ಬರುವ ಗಾಡಿಗಳನ್ನ ಬಿಟ್ರೆ ಬೇರೆ ಏನು ಕಾಣುತಿಲ್ಲ. ಹಾಗೇ ಮುಂದೆ ಹೋಗುತ್ತಿದ್ದಾಗ ಬಿಜಾಪುರಕ್ಕೆ 45 ಕೀ.ಮಿ ಅಂತ ಕಲ್ಲಿನ ಮೇಲೆ ಬರೆದಿದ್ದು ನೋಡಿ ಹೆದರಿಕೆಯಾಯಿತು. ಅಳಲು ಶುರು ಮಾಡಿದೆ. ತಿರುಗಿ ಮನೆಗೆ ಹೋಗೋಣವೆಂದರೆ ಸೈಕಲ್ ತುಳಿಯುವ ಹಾಗೇ ಇರಲಿಲ್ಲ. ನನ್ನ ಹಣೆಬರಹಕ್ಕೆ ಅದರ ಚೈನ್ ಕಟ್ಟಾಗಿತ್ತು. ಏನು ಮಾಡೋದು ಅಂತ ತಿಳಿಯದೆ ಒಂದು ಗಿಡದ ಕೆಳಗೆ ಅಳುತ್ತಾ ಕುಳಿತಲ್ಲೇ ನಿಂದೆಗೆ ಜಾರಿದೆ.

ಎಲ್ಲರಂತೆ ಸುಂದರವಾದ ಸಂಸಾರದ ಕನಸು ಹೊತ್ತು ಹಗಲು ರಾತ್ರಿ ದುಡಿಯುತ್ತಿದ್ದಳು. ಮಗಳಿಗೆ ತಾಯಿ ಆಸರೆ ತಾಯಿಗೆ ಮಗಳ ಆಸರೆ. ಒಟ್ಟಿನಲ್ಲಿ ಇಬ್ಬ್ರು ದುಡಿತ್ತಿದ್ದರು. ನಾಲ್ಕು ಮಕ್ಕಳು ಬೇರೆ. ಯಾವ ಕಷ್ಟಕ್ಕೊ ಆಗದೇ ಇಟ್ಟಕೊಂಡವಳ ಮನೆಗೆ ಬಂದು ಹೋಗುವ ಹಾಗೇ ಬಂದು ಹೋಗತ್ತಿದ್ದ ಗಂಡನ ಮೇಲಿನ ಸಿಟ್ಟಿಗೆ ಎಷ್ಟು ಸಾರಿ ಒಬ್ಬಳೇ ಅತ್ತಿದ್ದಳೋ ಅವಳಿಗೆ ಗೊತ್ತು. ನಿದ್ರೆಯಲ್ಲಿ ನನಗೆ ಕೊಟ್ಟು ಹೋದ ಹತ್ತೂ, ಇಪ್ಪತ್ತೂ ರೂಪಾಯಿ ನೋಟನ್ನ ಗೆಳಯರಿಗೆಲ್ಲ ತೋರಿಸುತ್ತಾ ‘ನೋಡ ನಮ್ಮ ಬಾಬಾ ನನಗ ಎಷ್ಟ ರೊಕ್ಕ ಕೊಟ್ಟಾನಂತ’ ತೋರಿಸತಾ ಕುಣಿತ್ತಿದೆ. ಕಿಸೆಲಿ ಇಟ್ಟಕೊಂಡ ನೋಟನ್ನ ಎಲ್ಲಾದರೂ ಬಿದ್ದೈತೇನಂತ ತಗದ ತಗದ ನೋಡತ್ತಿದ್ದೆ. ಅವ್ವನಿಗೂ ಆಯಿಗೂ ಜಗಳ ಆದಾಗ ‘ಇದಿ ಗಟ್ಟ ಬಿದ್ದಂಗ್ ಬಿದ್ದಾಳ ಈ ರಂಡಿ ನನಗ, ಮನಿ ಬಿಟ್ಟಾರ ಹೋಗ ನಿನ್ನಕಳವಲಿ. ನಾಯ್ಯಾಕ ಮಾಡೇನು ನಾಯ್ಯಾಕ ಬಿಟ್ಟೇನು ಅಂತಾಳ ಏನ ಗಂಡ ಕುಂದ್ರಿಸಿ ಹಾಕೊರಂಗ್’ ಅಂತ ಆಯಿ ಅವ್ವಗ ಬೈತ್ತಿದ್ದ್ರ ಅಸಾಹಾಯಕತೆಯಿಂದ ಅವ್ವ ಅಳತ್ತಿದ್ದಳು. ರಾಜಕ್ಕಗ ಎಲ್ಲಾ ತಿಳಿತಿತ್ತು. ನನಗ ಸ್ವಲ್ಪ ಸ್ವಲ್ಪ ತಿಳಿತಿತ್ತು. ಜಯಾ, ರೇಣು ತುಂಬಾ ಚಿಕ್ಕೊರು. ಅಕ್ಕನ ತೊಡಿ ಮ್ಯಾಲ ಮಲಗಿ ಅಳತಿದ್ದವಿ. ಆಜು ಬಾಜು ಮಂದಿ ಬಂದು ಏನೇನು ಹೇಳಿ, ‘ನೀವ ಹಿಂಗ್ ಮಾಡಕತ್ತರ ಹೆಂಗ್, ನೋಡ ಪಾಪ ಆ ಹುಡುಗ್ರು ಹೆಂಗ್ ಅಳಕತ್ತಾವ’ ಅಂತ, ಆಯಿಗೂ ಅವ್ವಗೂ ಹೇಳೋರು. ಆಗ ಸುಮ್ಮನಾದ ಇವರು ಮತ್ತ ಬೈದಾಡತ್ತಿದ್ದರು.

‘ನೋಡ ನಿಮ್ಮ ಅಪ್ಪ ಚಲೋ ಇದ್ದನಂದರ ನಂಗ್ಯಾಕ ಇಂತ ಗತಿ ಬರತಿತ್ತ, ಯಾರೂ ಇಲ್ಲಂತ ಮಾತ ಮಾತಿಗಿ ಮನಿ ಬಿಟ್ಟ ಹೋಗ ಅಂತಾಳ. ನೀವರ್ ಚೆಂದ ಕೆಲಿರಿ’ ಅಂತ ಅವ್ವ ಅಳತಾ ಹೇಳತ್ತಿದ್ದಳು. ‘ನನಗರ ಯಾರ ಅದಾರ, ಇಕಿನ ಬಿಟ್ರ, ಚೆಂದಾಗ ಮಾಡಕೊಂಡು ತಿನೋಣ ಅಂತ ಎಷ್ಟ ಸಾರಿ ಹೇಳಲ್ವಾ ನಾ ಅರ’ ಅಂತ ಆಯಿ ಮಂದಿ ಮುಂದ ಹೇಳತಿದ್ದಳು. ಸಂಜಿತನಕ ದುಡಿದ ಬರತಿದ್ದ ಅವ್ವ ಮಗಳು ಜಗಳ ಮಾಡಿದ ರಾತ್ರಿ ಊಟ ಮಾಡದ ಹಂಗ್ ಮಲಗತಿದ್ದ್ರು. ಎರಡ ದಿನ ಹೋಗಿರಲ್ಲಾ ಮತ್ತ ಇಬ್ಬ್ರೂ ಹಂಗ್, ಹಿಂಗ್ ಅಂತ ಮಾತಾಡತಾ ಇರೋರು. ದೋಸ್ತರ ಕೊಡ ಜಗಳ ಮಾಡದರ್ ಆಡಿಂಗಿಲ್ಲ, ಮಾತಾಡಗಿಂಲ್ಲ, ಚಾಳಿ ಟೂ ಅಂತ ಹೇಳಿ ಬೇರೆ ಗುಂಪ ಕಟ್ಟತ್ತಿದ್ದವಿ. ಅವ್ವ ಆಯಿ ಮಾತಡಕತ್ತಿದ್ದ ನೋಡಿ ನಗತಿದ್ದ್ಯಾ. ಎರಡ ಕೊಲಿ ಮನಿಯಲ್ಲಿ ಒಟ್ಟ ಆರ ಜನರಿದ್ದವಿ. ಮುಂದ ಇರೂ ಜಾಗಕ್ಕ ಪತ್ರೆ, ರಟ್ಟು ಹಾಕಿ ಮಳೆ ನೀರು ಒಳಗ ಬರದಂಗ ಮಾಡಿದ್ದ್ರೂ ಜೋರು ಮಳೆ ಬಂತ್ತಂದ್ರ ಇಡಿ ಮನೆಯಲ್ಲಾ ನೀರ. ‘ಅಲ್ಲಿ ಬುಟ್ಟಿ ಇಡು, ಇಲ್ಲಿ ಬಗೊಣಿ ಇಡು, ಹಾಸಿಗೆ ಆ ಕಡೆ ಸರಸು’ ಅಂತ ಅವ್ವ ಹೇಳತಿದ್ದಳು. ‘ಹಾಳಾದ್ದ ಮಳಿ ಯಾಕರ್ ಬರತಾದ’ ಅಂತ ನಾ ಬೈತಿದ್ದ್ರ, ಆಯಿ ಅಡ್ಡ ಬಂದ ‘ಮಳಿ ಬರಲಿಲ್ಲ ಅಂದ್ರ ಹೊಟ್ಟಿಗೇನ ಮಾಡತಿ, ಮ್ಯಾಲನಂವ್ ಕೊಟ್ರ ನೀ ಕುಂತ್ ಊಣಾಕ ಬರತದ್ ಇಲ್ಲಂದ್ರ ಏನ್ ಮಾಡತಿ’ ಅನ್ನೊಳು. ‘ಹೆಂಗ್?’ ಅಂತ ಕೇಳದರ್ ‘ನಿಮ್ಮ ಮಾಸ್ತ್ರ ಏನೂ ಹೇಳಿಕೊಡಂಗಿಲ್ಲೇನ?’ ಅಂತ ನನಗ ಕೇಳೋಳು.

ಚಿಮಿಣಿ ಬೆಳಕನಾಗ ಒಲಿ ಮುಂದ ರೊಟ್ಟಿ ಮಾಡತಾ ಕುಂದ್ರತಿದ್ದ ಅವ್ವನ ಮುಖ ಎಷ್ಟ ಚಲೋ ಕಾಣತಿತ್ತು. ಮಬ್ಬು ಬೆಳಕಿನಲ್ಲಿ ಅವಳ ಕಣ್ಣೊಳಗ ಅಡಗಿ ಕುಳಿತಿರುವ ಆಸೆ, ಕನಸು ಒಲಿಯ ಜಳಕ್ಕ ಬೆವರ ಹನಿಯಾಗಿ ಒಡೆದು ನಲಕ್ಕ ಬಿಳತಿತ್ತು. ನಮಗಾಗಿ ಎಷ್ಟೇಲ್ಲ ಕಷ್ಟ ಪಡತಿದ್ದಳು. ಓದಸತ್ತಿದ್ದಳು. ಅಕಿನ ಆಸೆ ಕನಸಿಗೆ ನಾವ ಆಸರ್. ಒಂದ ಸಾರಿ ಅವ್ವಗ, ‘ಬಾಬಾ ಯಾಕ್ ನಮ್ಮ ಜೋಡ ಇರಲ್ಲ, ಎರಡದ ದಿನ ಬರತಾನ ಇರತಾನ ಹೋಗತಾನ ಯಾಕ ಅವ್ವ ?’ ಅಂತಾ ಕೇಳದೆ, ‘ಮುಕಳಿ ತುಂಬಾ ಸಾಲಾ ಮಾಡ್ಯಾನ, ಕೊಟ್ಟೊರ ಸುಮ್ಮ ಬಿಡತಾರೇನ ಒದ್ದ ಕೇಳತಾರ, ಹಡ್ಸು ಹೆಂಗ್ಸರ್ ಮಾಡಂಗಿಲ್ ಹಂಗ್ ಮಾಡತದ, ಅದರದೇನ ಕೇಳತಿ. ನಾಲ್ಕ ದಿನ ತಮ್ಮನ ಮನ್ಯಾಗ, ತಂಗಿ ಮನ್ಯಾಗ ಇರೋದ, ಅಲ್ಲಿ ಇಲ್ಲಿ ಮತ್ತ ನೆವ ಹೇಳಿ, ರೊಕ್ಕ ತಂದ ಅವರಿಗಿಷ್ಟ ಕೊಟ್ಟೆ ಇವರಿಗಿಷ್ಟ ಕೊಟ್ಟೆ ಮಾಡಕೊಂಡ ತಿರಗತಾದ. ಇಂತಾವೆಲ್ಲ ಸಂಸಾರ ಮಾಡಕೊಂಡು ತಿನುವಲ್ಲ, ನೀನು ನಿಮ್ಮ ಅಂವಾ ಕೊಡೂ ರೊಕ್ಕಾ ತಗೊಂಡು ಕುಂದ್ರತಿ. ಏಕೊ ಸುಳಿಮಗ್ನ ಅಂತ ಕೇಳಕ್ಕ ಬರಲ್ಲಾ ನಿನಗ ?’ ಅಂತ ಅವನ ಜತಿಗಿ ನನಗೂ ಬೈದಿದ್ದೆ ಬೈದಿದ್ದು.

ಸೈಕಲ್ಗಾಗಿ ದಿನಾ ಅಳತಿದ್ದ ನಾ, ಹೈಸ್ಕೊಲ್ಗ ಕಾಲಿಡುತಿದ್ದಂತೆ ಅದ್ರ ಮ್ಯಾಲಿನ ಆಸೆ ಇನ್ನಷ್ಟು ಹೆಚ್ಚಾಗತಾ ಬಂತು. ಅದಕಾಗಿ ಮನಿಲಿ ದಿನಾ ಜಗಳಾಡತಿದ್ದೆ, ಹೊಡಿಸಿಕೊಳ್ಳತಿದ್ದೆ, ಕೈ ಕಾಲ ಕಟ್ಟಿ ಬಿಸಲಲ್ಲಿ ಹಾಕದ್ರೂ ಸೈಕಲ್ ಮ್ಯಾಲಿನ ವ್ಯಾಮೋಹ ಕಡಿಮೆಯಾಗಲಿಲ್ಲ. ‘ಅಂಗಡಿಗೆ ಹೋಗ ಬಾ’, ಸೈಕಲ್ ಬೇಕ. ‘ನೀರ ತುಂಬು’, ಸೈಕಲ್ ಬೇಕ. ‘ಶಾಲೆಗೆ ಹೋಗ ಬಾ’, ಸೈಕಲ್ ಬೇಕ. ಹೀಗ್ ಮನಿಲಿ ಏನ್ ಹೇಳಿದರೂ ನನ್ನ ಮಾತಿನ ಮುಂದ್ ‘ಸೈಕಲ್ ಬೇಕ ‘ ಎನ್ನುವ ರಾಗ ತಗದ ಅಳತ್ತಿದ್ದಾಗ ‘ಹೆಂಗ್ಸ್ರಂಗ್ ಹೆಂಗ್ ಅಳತದ ನೋಡ್ ಗಂಡ್ಸ್ಂತ ಯಾವದ್ ತಿರಿವಿಹಾಕ್ಯಾದನ್, ಸಾಣದಿದ್ದಾಗೂ ಹಿಂಗ್ ಮಾಡತಿತ್ತು. ಹದನಾಕ್ ಹದಿನೈದ ವರ್ಷದ ಮಗಾ ಆಗೈತಿ ಇಗೂ ಬುಳುಬುಳು ಅಳತದ್’ ಅಂತ ಆಯಿ ಬೈಯೋಳ. ಅವಳ ಕಂಡ್ರ ಮನ್ಯಾಗ ಎಲ್ಲ್ರಿಗೂ ಹೆದರಿಕಿ ಇತ್ತು, ಸುಮ್ನ ಬೈಸಕೊಂಡ್, ಚಡ್ಡಿಗಿ ಉಡದಾರ ಸೇರಸಗೊತ್ತ, ಅಳಕೊತ್ತಾ ಶಾಲೆಗೆ ಹೋಗತ್ತಿದ್ದೆ. ಮನ್ಯಾಗ ಅಲ್ಲಿ ಇಲ್ಲಿ ಇರೂ ಒಂದೆರಡ ರೂಪಾಯಿ ತಗೊಂಡು ಬಾಡಗಿ ಸೈಕಲ್ ತಂದ ಊರೆಲ್ಲಾ ತಿರಗಿ, ಓಣಿ ಸಂದಿಯೊಳಗ ಹಾಸಕೊಂಡ ಹೊರಟ್ರ ಮುದುಕಿಯರ ಮಂಗಳಾರತಿ ಶುರುವಾತಿತ್ತು. ‘ಹಾಂಟ್ಯಾ, ಮುದಕರ್ ತದಕರ್ ಅದಾರಂತ ಕಬರಿಲ್ಲ, ಅಪ್ಪ ಗುಡಿ ಕಟ್ಟದ್ರ ಮಗಾ ಕಳಸಾ ಇಡತಾನ್’ ಅಂತ ಬೈಯೋರ. ಅದನ್ನ ಕೇಳಸಗೊಂಡ್ ಪಿಚ್ಚರ್ದೊಳಗಿನ ಹೀರೋ ಗಾಡಿ ಜಿಗಸಂಗ್ ಸೈಕಲ್ ಜಿಗಿಸಿ, ಬಿದ್ದು ಗಾಯ ಮಾಡಕೊಂಡ ಕೈ ಕಾಲಿಗೆ ಉಗಳ ಹಚ್ಚಿದ ಕಾಗದ ಹಚ್ಚಿ, ಬಾಡಗಿ ತಂದ್ ಸೈಕಲ್ ಟೈಂಗಿಂತ ತುಸು ಲೇಟಾಗಿ ಕೊಟ್ಟ ಅವನಿಂದ ಉಗುಳಿಸಿಕೊಂಡ ಬರುವಾಗ, ‘ಹುಚ್ಚಸೂಳಿ ಮಗಾ ಒಂದ ಹತ್ತ ಇಪ್ಪಿತ್ತ ನಿಮಿಷಾ ತಡಾದ್ರ ಒಂದ ರೂಪಾಯಿ ಕೇಳತಾನ’ ಅಂತ ಅಂಗಡಿಯವನಿಗೆ ಬೈಯುತ್ತಾ ಗೆಳಯರಿಯೊಂದಿಗೆ ಇರತಿದ್ದ ನನಗೆ ಸ್ವಂತ ಸೈಕಲ್ದೇ ಚಿಂತೆ.

ರಾಜಕ್ಕ ಎಲಿಗೇ ಹೋದ್ರೂ ನಾ ಅವಳ ಕೊಡ ಹೋಗ ಬೇಕ. ದಿನಾ ಸಂಜೆ ಅಕ್ಕ ಮತ್ತ್ ಅಕಿನ ಗಳತಿರೆಲ್ಲ ಸೇರಿ ನೀರ ತರಲಾಕ ಬಾವಿಗ ಹೋಗೋರು. ಅಕಿ ಕೊಡ ನಾನು ಬಾಡಗಿ ಸೈಕಲ್ ತಗೊಂಡ ಹೋಗಾಂವ್. ನಾಲ್ಕೈದ ಗೆಳಯರ ಜತಿ ಮಲ್ಲು ಮಾಮಾ ಬಾವಿ ಹತ್ರ ನಿಲ್ಲತಿದ್ದ. ‘ಅಕ್ಕಾ ಮಾಮಾ ನಿಂತಾನ ನೋಡ’ ಅಂದ್ರ, ‘ಸುಮ್ಮ ಇರು, ಇಲ್ಲಂದ್ರ ಅವ್ವಗ ಹೇಳತಿನಿ’ ಅಂತ ಹೆದರಸತ್ತಿದ್ದಳು. ಆಯಿಗೂ ನಾವು ಅವ್ವ ಅಂತಿದ್ದವಿ. ಅಕಿನ ಗೆಳತಿಯರಿಗೆ ಮಾತನಾಡಸದಂಗ್ ಮಾಡಿ ದೊಡ್ಡವ್ವ, ‘ಅಕ್ಕ ಮನೆಲಿ ಅದಾರೇನ ಅಂತ ಕೇಳತಿದ್ದ’ ಮಾಮಗ ನಾ ‘ಇಲ್ಲ’ ಅಂದ ಬಿಡತ್ತಿದ್ದೆ. ದಾರಿಯಲ್ಲಿ ಅಕ್ಕನಿಗೂ ನನಗ ಜಗಳ… ‘ನಾಗ್ಯಾ, ನಾಗ್ಯಾ’ ಅಂತ ಮನಿಗೆ ಬಂದವನೆ ಅಕ್ಕಗ ಕಾಡಸತಿದ್ದ ಮಾಮಾ, ‘ನೀ ಹೊರಗ ಹೋಗಲೇ’ ಅಂತ ಹೇಳುತಿದ್ದಂತೆ ಅಕ್ಕ ಜೋರ ಬಾಯಿ ಮಾಡಿ ‘ನೀ ಹೋದ್ರ ನೋಡ ಅವ್ವನ ಮುಂದ ಹೇಳಿ ಹೊಡಸತಿನಿ’ ಅನ್ನಾಕಿ. ಇವರಿಬ್ಬರ ನಡವ ನಾ ಸಾಯಿತಿದ್ದೆ. ರಾಜಕ್ಕಗೂ ಮಲ್ಲು ಮಾಮಾನಿಗೂ ಲಗ್ನಾ ಗಟ್ಟಿಯಾಗಿತ್ತು. ದಿನಾ ಬರೋದು ಮಾತಾಡಸೋದು, ಅಕಿ ಮಾತ್ರ ಹುಂ ಇಲ್ಲ, ಹಾಂ ಇಲ್ಲ. ಮಾಮನ ಬಾಯಿಂದ ಪದೆ ಪದೆ ಕೇಳತಿದ್ದ ಮಾತಂದ್ರ, ‘ಒಂದ ಪಪ್ಪಿ ಕೊಡೆ’ ಅಂತ ಅಕ್ಕನಗ ಕೇಳೋದು, ಅಕಿ ಮುಖ ಕೆಳಗ ಮಾಡಿ ನಗವಳು. ಹತ್ತಿರ ಹೋಗತ್ತಿದ್ದಂತೆ ಅಳತಿದ್ದಳು. ಇಬ್ಬರ ಮುಖ ನೋಡಿ ನಾ ನಗುದೇ ನಗುದು. ಅರ್ಧ ತಾಸಿನ ಬಾಡಗಿ ಸೈಕಲ್ ನೆನಪಾಗಿ ಅಂಗಡಿ ಮುಂದ ಹೇಳದೆ, ಕೇಳದೆ ಇಟ್ಟ ಜಿಗದ ಬಿಡತ್ತಿದೆ.

ಸುರೇಶ ಮಾಮಾ, ಮಲ್ಲು ಮಾಮಾ ಮದುವಿಯಾಗಿ ಒಂದ ವರ್ಷಕ್ಕ ಧಾರವಾಡಕ್ಕ ಹೊರಟ್ರು. ಅಕ್ಕನ ಜೊಡಿ ಜಗಳಾತಗದಿದ್ದು, ನೀರ ತಂದಿದ್ದು, ಆಟ ಆಡಿದ್ದು, ಒಂದ ಸಾರಿ ಮನಿಯೊಳಗ ಹಾಕಿ ಕೀಲಿ ಹಾಕೊಂಡ ಹೊರಗ ಹೋಗಿ ಕಾಡಿಸಿದ್ದು ನೆನಪಾಗಿ ಅಳತಿದ್ದಾಗ, ‘ಯಾಕ ಅಳತಿ, ನಾ ಎಲ್ಲೂ ಹೋಗಲ್ಲ, ನೀನು ಧಾರವಾಡಕ್ಕ ಬರುವಂತಿ’ ಅಂತ್ತಿದ್ದರೂ ಅವಳಿಗೆ ಗೊತ್ತಿಲ್ಲದ ಅವಳ ಕಣ್ಣ ತ್ವದಿತ್ತು. ಜಯಾ, ರೇಣು ಕೂಡಾ ಅಳತ್ತಿದ್ದರು. ಅವ್ವ ಅವಾಗ ಅವಾಗ ಧಾರವಾಡಕ್ಕ ಹೋಗಿ ಬರುವದಕ್ಕ ಶುರು ಮಾಡದಳು. ಅಕಿಗಿ ನಾ ಹೋದಾಗೊಮ್ಮಿ ‘ಸೈಕಲ್ ತಗೊಂಡ ಬಾ’ ಅಂತ ಹೇಳತಿದ್ದರೂ ತರತಿರಲಿಲ್ಲ. ಅದ್ ಬಾಡಗಿ ಸೈಕಲ್ ತಂದ ಓಣಿಯಾಗೆಲ್ಲ ಓಡಿಸಿ ಎಲ್ಲರಿಂದ ಬೈಸಕೊಳ್ಳೋದು ನಡಿತಾನೇ ಇತ್ತು. ಡಬ್ಬಿಯೊಳಗಿನ ರೊಕ್ಕ ಕಳ್ಳತನ ಮಾಡಿದಕ್ಕ ಹೊಡಿಸಿಕೊಂಡು ಊಟ ಬಿಡೋದು ಮುಂದವರದಿತ್ತು. ಮತ್ತೇ ಒಂದು ದಿನ ಅವ್ವ ಧಾರವಾಡಕ್ಕೆ ಹೋಗಕ್ಕ ತಯಾರಿಯಾಗಿದ್ದಳು. ‘ಈ ಸಾರಿ ಸೈಕಲ್ ತರತಿನಿ ಏನ ಬುಡ್ಡಾ’ ಅಂತ ಹೇಳದಳು. ನಾ ಅಳು ಮಾರಿ ಮಾಡಕೊಂಡು ‘ನೀ ಬರಿ ಸುಳ್ಳ ಹೇಳತಿ, ಎಷ್ಟ ಸಾರಿ ಹೋಗಿ ಬಂದ್ರು ತಂದಿಲ್ಲ’ ಅಂದಿದ್ದಕ್ಕ, ‘ಇಲ್ಲ ಈ ಸಾರಿ ತರತಿನಿ’ ಅಂತ ಹೇಳಿ ಹೋದಳು. ಅವಳು ಬರುವಿಗಾಗಿ ನಾ ಬಕಪಕ್ಷಿಂತೆ ಕಾಯಿತಾ ಕುಳಿತೆ…

ಸ್ಕೊಲ್, ಬಾಡಗಿ ಸೈಕಲ್ ತಂದ ಓಡಿಸೊದು, ಆಟ, ಜಗಳ ಇವಿಷ್ಟೇ ನನ್ನ ಕೆಲಸಾ ಆಗಿತ್ತು. ನನ್ನ ಕನಸಿನ, ಪ್ರೀತಿಯ ಸೈಕಲ್ ತಗೊಂಡು ಬರುವ ಮಾತನ್ನ ಅವ್ವ, ಆಯಿ ಹೋಗುವ ಕೆಲಸದ ಮನೆಯವರ ಫೋನಿಗೆ ಮಾಡಿ ಹೇಳಿದ್ದಳಂತ ಆಯಿ ಬಂದು ನನಗೆ ಹೇಳತಿದ್ದಂತೆ ಕುಣಿದಾಡಿ ಬಿಟ್ಟೆ. ಹೇಗಿರಬಹುದು, ಬಣ್ಣ ಯಾವುದು, ಯಾವ ಕಂಪನಿದು ಅನ್ನುವ ಕೂತುಹಲ ಶುರುವಾತು. ಇಡಿ ಓಣಿ ಗೆಳೆಯರಿಗೆಲ್ಲ ಹೇಳಿ, ‘ಮಕ್ಕಳೆ ನಾಳಿಂದ ನಂದ್ ಹೊಸ ಸೈಕಲ್ ಬರತದ, ನಮ್ಮವ್ವ ಧಾರವಾಡದಿಂದ ತರಕತ್ತಾಳಂತ’ ಅಂತ ಹೇಳಿ ಕಿಸಿಕಿಸಿ ನಗತಿದ್ದೆ ಜೋರ ಮಳೆ ಬರಕಾತಿತ್ತು, ಪ್ಯಾಂಟಿಗಿ ಹಾಕಿದ ಊಡದಾರಕ್ಕ ಟೊಂಕನಾಗ ಕುಂದ್ರದ ಫ್ಯಾಂಟ ಕಳಗ ಇಳಿತಿತ್ತು, ಅಂಗಿಯ ಗುಂಡಿ ಹೇರಾ ಪೇರಾ ಬೇರೆ, ಪ್ಯಾರಗಾನಿನ ಹವಾಯಿ ಚಪ್ಪಲಿಗೆ ಪಚ್ಚಕ್ ಪಚ್ಚಕ್ ಅಂತ ರಾಡಿ ಸಿಡಸಕೊತ್ತಾ, ತ್ರಿಕೆ ಅಂತ ಕರಿತಿದ್ದ, ನನಗಿಂತ ಸಣ್ಣ ಹುಡಗ, ಮತ್ತ ನನ್ನ ಕೊಡಾ ಬಾಳ ಇರತಿದ್ದ ಅವನನ್ನ ಕರಕೊಂಡು ಓಡಿ ಓಡಿ ಬಂದ ಬಸ್ಸ ಸ್ಟ್ಯಾಂಡ್ ಒಳಗಿನ ಒಂದು ಸಣ್ಣ ಪಾನ ಶಾಪ್ ಡಬ್ಬಿ ಅಂಗಡಿ ಮ್ಯಾಲ ಕುಂತ್ ಹಾಳ ಮಾತ ಮಾತಾಡತ ಧಾರವಾಡದ ಬಸ್ಸಿಗಾಗಿ ಎದರ ನೋಡತಾ ಇದ್ದವಿ. ಮೈ ತುಂಬ ಬಳದಿದ್ದ ರಾಡಿನೆಲ್ಲ ಒರಿಸಿಕೊಳತಾ, ಆಗಾಗ ಸೂರತ್ತಿದ್ದ ಸಿಂಬಳಾನ ಅಲ್ಲೇ ಅಂಗಡಿಗೆ ಬಳಿತಾ, ಆ ಹುಡುಗನಿಗೆ ತ್ರಿಕೆ ಅಂತ ಕಾಡಸತ್ತಿದೆ. ಪಾಪ ಅದು ‘ಹಂಗ ಕರಿಬ್ಯಾಡ’ ಅನ್ನವನು. ಆ ಹೆಸರಿಟ್ಟವನು ನಾನೇ. ಮಲ್ಲು ಅನ್ನುವ ಅವನ ಹೆಸ್ರಿಗೆ ಮೂರ ಕುಂಡಿ ಅಂತ ಸೇರಿಸಿ ಮೂರ ಕುಂಡಿ ಮಲ್ಯಾ ಎಂದ ಹೊಸ ಹೆಸರ ಮಾಡಿದ್ದೆ. ಅದನ್ನೆ ಅವನಿಗೆ ಶಾರ್ಟ್’ ಆಗಿ ತ್ರಿಕೆ ಅಂತದ್ದೆ. ಇದರ ಮಧ್ಯ ಓಡಿ ಹೋಗಿ ಬಸ್ಸ ಸ್ಟ್ಯಾಂಡ್ ಒಳಗ ಬರುವ ಎಲ್ಲ ಬಸ್ಸಿನ ಬೋರ್ಡ್ ನೋಡೋದು, ಬರೋದು ಕುಂದ್ರೋದು ಮಾಡತಾನೇ ಇದ್ದವಿ ಧಾರವಾಡ ಅನ್ನುವ ಹೆಸರಿನ ಬಸ್ಸೆ ಬರುವಲ್ಲದು.

ಪೂರಾ ತ್ವೈಸಗೊಂಡ ನಮಗೆ ನಡುಕ ಶುರುವಾಗಿತ್ತು. ಸೂಳಿಮಗಂದ ಬಸ್ಸೇ ಬರುವಲ್ಲಂತ ಬೈತಾ ಕುಳಿತಿರುವಾಗ ಹುಬ್ಬಳಿ, ಗುಲ್ಬರ್ಗ ಅನ್ನುವ ಹೆಸರಿನ ಕೆಂಪು ಮೂತಿಯ ಬಸ್ಸು ಬರ್ರ್ ಅಂತ ರಾಡಿ ಸಿಡಸಕೊತ್ತಾ ಬಂದ ಬಿಟ್ಟತು. ಮಂಗ್ಯಾ ಜಿಗದಂಗ್ ಒಂದೇ ಸಲಕ್ಕ ಜಿಗದ ಅದ್ರ ಹಿಂದ ಓಡಿ ಹೋಗಿ ನೋಡದ್ರ ಬಸ್ಸಿನ ಮ್ಯಾಲ ಸೈಕಲ್ ಕಟ್ಟಿದ್ದು ಕಾಣತು. ಬಾಳ ಖುಷಿಯಾಗಿ ಇರೂ ಮೂವತ್ತೂ ಹಲ್ಲ ತಕ್ಕೊಂಡು ಅವ್ವ ಇಳಿದ ಬರೋದನ್ನ ನೋಡತಾ ನಿಂತಿರುವಾಗ, ಕಿಡಿಕಿ ಒಳಗನಿಂದ ನನಗ್ ನೋಡದ ಅವ್ವ, ‘ಎ ಬುಡ್ಡಾ ಈ ಬ್ಯಾಗ್ ಹಿಡಕೊಳ್ಳ ಬಾ’ ಎಂದ ಕರಿತಿದ್ದಂತೆ ಕಳಗ ಇಳಿಯವರ ನಡಬರ ತೂರಕೊಂಡ ಒಳಗ ಹೋಕ್ಕ ಬಿಟ್ಟೆ. ಹಮಾಲಿಯವನಿಗೆ ಹೇಳಿ ಸೈಕಲ್ ಕಳಗ ಇಳಿಸುತಿದ್ದಂತೆ ಅದನ್ನ ನೋಡದವನೆ ಕುಲುಕುಲು ನಕ್ಕಿದ್ದೆ ನಕ್ಕಿದ್ದು. ಮಳಿಗಿ ಅವ್ವ ಬಸ್ಸ್ ಸ್ಟ್ಯಾಂಡನಾಗ ಕುಳಿತಿದ್ದಳು. ಓಡಿ ಹೋಗಿ ಸೈಕಲ್ ಕೀ ಕೇಳಿದೆ. ‘ಬಾ ಇಲ್ಲಿ, ತೆಲೆ ನೋಡು ಎಷ್ಟ ಹಸಿ ಮಾಡಿಕೊಂಡಿ, ಮೊದಲ ನೀನಗ ಮಳಿ ನೀರಂದ್ರ ಆಗಿ ಬರಲ್ಲಾ, ನಗಡಿ ಬ್ಯಾರೆ ಬರತದ’ ಎಂದ ಹೇಳಿ ಸೆರಗಿನಿಂದ ತೆಲೆನ ಗಸಗಸ ಅಂತ ತಿಕ್ಕದಳು. ನನಗ ಮಾತ್ರ ಯಾವಾಗ ಸೈಕಲ್ ಕೀ ತಗದ ಅದನ್ನು ಓಡಸಲಿ ಅಂತ ಕುಣಿತಿರುವಾಗ, ‘ನೋಡ ಬುಡ್ಡಾ ಸೈಕಲ್ ತಗೊಂಡ ಅಲ್ಲಿ ಇಲ್ಲಿ ಹೋಗಿ ಏನರ ಮಾಡಕೊಬ್ಯಾಡ. ಶಾಲಿಗಿ ಹೋಗುವಾಗ, ಬರುವಾಗ ರೋಡ ಕಳಗ ಹೋಗ. ಮೊದಲ ಅದಕ ಪೂಜೆ ಮಾಡಿ ಹತ್ತ, ಈಗ ಅದರ ಮ್ಯಾಲ ಹತ್ತಿ ಹೋಗಬ್ಯಾಡ’ ಅಂತ ಹೇಳಿ ಕೀ ಕ್ಪಟ್ಟಳು.

ಮನಿಗಿ ಬಂದವನೆ ಕುಂಕಮ, ಇಬೂತಿ ಕಲಿಸಿ ಇಡಿ ಸೈಕಲ್ ತುಂಬಾ ಹಚ್ಚಿ, ದೊಡ್ಡದೊಂದು ಹಾರ ಹಾಕಿ, ನಾಲ್ಕ ನಿಂಬಿಹಣ್ಣ ಗಾಲಿಗಿಟ್ಟು, ಎರಡ ಊದಿನಕಡ್ಡಿ ಹಚ್ಚಿ ಪೂಜೆ ಮಾಡತಿದ್ರ ಇಡಿ ಓಣಿಯ ಗೆಳೆರೆೆಲ್ಲ ಸಕ್ಕರಿಗಿ ಇರಬಿ ಮುತ್ತಿಕೊಳ್ಳುವಂಗ ನನ್ನ ಸೈಕಲ್ ಸುತ್ತಾ ನಿಂತ ಬಿಟ್ಟಿದ್ರು. ನಾ ಮಾಡಿರೂ ಪೂಜೆ ನೋಡಿ ಅವ್ವ ನಕ್ಕಳು…ನಗುತ್ತಿದ್ದಳು… ಒಮ್ಮಿಲೇ ಎಚ್ಚರಾಗತದ ಗಿಡದ ಕೆಳಗ ಮಲಗಿನಿ. ಸೂರ್ಯ ತನ್ನ ದಿನದ ಕೆಲಸ ಮುಗಿಸಿ ಹೊರಡಕ್ಕ ತರಾತುರಿಯಲ್ಲಿದ್ದ, ಮಾಡದೊಳಗಿನ ಚಂದ್ರ ತನ್ನ ಕೆಲಸಕ್ಕ ಬರಕ್ಕ ತಯಾರಾಗತ್ತಿದ್ದ, ಸಾಲ ಸಾಲ ಹಕ್ಕಿಗಳ ಕೂಹೂ ಕೂಹೂ ಕಲರವ ಕೇಳತಿದ್ದ ನನಗ ಹೆದರಿಕೆ ಆಗಿ ನನ್ನೆದೆ ಬಡಿತ ಜೋರಾಗಿ ಹೊಡದಕೊಳ್ಳತಿತ್ತು. ಕಣ್ಣೀರು ಕಪಾಳ ದಾಟಿ ತೊಡಿ ಮ್ಯಾಲ ಬಿಳತಿತ್ತು. ಗೂಡ ಬಿಟ್ಟ ಹಕ್ಕಿ ಹಂಗ್ ನನ್ನ ಪರಸ್ಥಿತಿ ಆಗಿತ್ತ. ಅವ್ವ…ಅವ್ವಅವ್ವ… ಎಂದ ಅಳುತ್ತಾ ಮನೆ ಕಡೆ ದಾರಿ ಹಿಡಿದ ಹೊರಟೆ. ಹೊಲದ ಕೆಲಸ ಮುಗಿಸಕೊಂಡು ಬರೂ ಮಂದಿಯಲ್ಲ ಯಾಕೂ ತಮ್ಮಾ ಯಾಕ ಅಳಾಕತ್ತಿ, ಎಲ್ಲಿಯಂವ ನೀ ಎಂದ ಕೇಳವರಿಗೆಲ್ಲ ಅಳುತ್ತಲೇ ನನ್ನ ಪರಸ್ಥಿತಿ ಹೇಳತ್ತಿದ್ದೆ. ಪಾಪ ಹುಡಗ ಅನ್ನೂರೊ, ‘ಹಂಗೆಲ್ಲ ಅವ್ವ ಬೈದಾಳಂತ ಹಿಂಗ್ ಮನಿ ಬಿಟ್ಟ ಬರತಾರೇನೂ ಹುಚ್ಚಾ, ಹಡದವ್ವಗ ಬೈಯೋ ಅಧಿಕಾರಿಲ್ಲೇನ? ನೀ ಇಲ್ಲಿ ಅಳಕತ್ತಿ ಅಕಿ ಅಲ್ಲಿ ಅಳತಿರತಾಳ. ಹುಚ್ಚ ಹುಡಗಾ ಹೋಗ ಜಲ್ದಿ ಮನಿ ಸೇರ’ ಅಂತ ಕೆಲವರ ಹೇಳೋರು. ಕತ್ತಲ ಆವರಿಸಿಕೊಳ್ಳುತ್ತಾ ಹೋಯಿತು.

ನನ್ನ ತುಳಿತಕ್ಕ ಸಿಕ್ಕ ಸೈಕಲ್ ಚೈನ್ ಕಟ್ಟ್ ಆಗಿ ಹೋಗಿತ್ತು. ಹೋಗೂ ಬರೂ ಗಾಡಿಗಳ ಬಳಕಿನಾಗ ಅಳತಾ ನನ್ನ ಹೆಜ್ಜೆಗಳಿಗೆ ನಾನೇ ಹೆದರತಾ ಹೋಗುವಷ್ಟರಲ್ಲಿ ರಾತ್ರಿ ಹತ್ತು ಗಂಟೆಯಾಗಿತ್ತು. ನಾ ಬರುದನ್ನು ಕಂಡ ಅವ್ವ ಓಡೋಡಿ ಬಂದ ‘ಯಾಕೋ ಬುಡ್ಡಾ ಹಿಂಗ್ಯಾಕ ಮಾಡಿದೊ ಮಗನೆ’ ಅಂತಾ ತಬ್ಬಕೊಂಡು ಅಳಕ್ಕೆ ಸುರು ಮಾಡದಳು. ಆಯಿ, ತಂಗಿರು, ಓಣಿ ಮಂದಿಯಲ್ಲ ಸೇರಿ ತಲೆ ಸವರುತ್ತಾ, ಗಲ್ಲ ಮುಟತಾ, ‘ಯಾಕೋ ನಾಗು, ನಿಮ್ಮವ್ವ ಏನ್ರೆ ಅಂತಾಳ ಅದಕ್ಕ ಹಿಂಗ ಮಾಡಿ ಎಲ್ಲರಿಗೂ ಎಷ್ಟ ಗಾಬರಿ ಮಾಡಿದ್ದೂ ಮರಾಯಾ. ಅಳಕೊತ್ತಾ ಇಡಿ ಊರೆಲ್ಲ ತಿರಗಿ ನನ್ನ ಮಗ ಎಲ್ಲ್ಯಾನ್ರೂ ಅಂತ ಎಲ್ಲರಿಗೂ ಕೇಳಿ, ಕೇಳಿ, ಅತತ್ತ ಕಣ್ಣ ನೋಡ ಹೆಂಗ್ ಆಗ್ಯಾವ, ನಿಮ್ಮ ಆಯಿರಂತೂ ಮಾತಡಕ್ಕ ತಯಾರಿಲ್ಲ. ಮುದುಕಿ ಮುಖ ನೋಡ ಒಂದ ಸಾರಿ’ ಎಂದು ಒಬ್ಬರಾದ ಮ್ಯಾಲ ಒಬ್ಬ್ರು ಹೇಳತ್ತಿದ್ದರ ಬಾಯಿ ಬಿಚ್ಚದೆ ತುಕಡಿಸುತ್ತಿದ್ದೆ.ನಡೆದ ಸುಸ್ತಾಗಿ ಆಯಿ ತೊಡೆಯ ಮೇಲೆ ನಿದ್ದೆಗೆ ಜಾರತಿದ್ದ ನನಗ, ‘ನಾ ಏನೂ ಅಂದಿಲ್ಲ ಯವ್ವಾ, ಇರೊದೊಂದ ಗಂಡ್ಸ ಮಗ, ನಮ್ಮ ಹಣಿ ಬರಕ್ಕ ಮಂದಿ ಮನಿ ಮುಸರಿ ತೊಳೆಯೋದ ಹತ್ತೈತಿ. ನೀಯಾರ ಚಂದ ಸಾಲಿ ಕಲಿ ನಿಮ್ಮ ಅಪ್ಪನಂಗ ಆಗಬ್ಯಾಡಂತ ಇಷ್ಟೇ ಅಂದನಿ’ ಅಂತ ಹೇಳುತ್ತಿತ್ತು ಅವ್ವನ ಅಳವ ಧ್ವನಿ…

‍ಲೇಖಕರು avadhi

3 March, 2014

1 Comment

  1. Kavya Nagarakatte

    ನಾಗೇಶ್, ನಿನ್ನ ಬರಹ ಓದಿ ತುಂಬಾ ಸಂತಸವಾಯಿತು. ಕಾಲೇಜಿನಲ್ಲಿದ್ದಾಗ ನೀನು ಇಷ್ಟು ಚೆನ್ನಾಗಿ ಬರೆಯಬಲ್ಲೆ ಅಂತ ಗೊತ್ತೇ ಇರಲಿಲ್ಲ. ಯಾವುದೇ ನೆವ ಹೇಳದೇ ದಿನವೂ ತಪ್ಪದೇ ನಾಟಕದ ರಿಹರ್ಸಲ್ ಗೆ ಬರುತ್ತಿದ್ದುದರಿಂದ ನೀನು ಪ್ರಾಮಾಣಿಕ ಅನ್ನುವುದು ಮಾತ್ರ ಮನವರಿಕೆಯಾಗಿತ್ತು. ಆ ಗುಣವೇ ನಿನ್ನೊಳಗಿನ ಬರಹಗಾರನನ್ನು ಈ ಲೇಖನ ಬರೆಯಲು ಪ್ರೇರೇಪಿಸಿದೆ. ಇದು ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ.
    ಕನ್ನಡದ ಹಿರಿಯ ಗದ್ಯ ಬರಹಗಾರರೆಲ್ಲರ ಬರಹಗಳನ್ನು ಓದು. ಅಂದರೆ ನಿನಗಿರುವ ಅನುಭವಗಳ ಜೊತೆಗೆ ನಿನ್ನ ಬರಹಗಳಿಗೆ ಮೊನಚು ಬರುತ್ತದೆ. ಕಥೆಗಳನ್ನು ಬರೆಯಲು ಶುರುಮಾಡು. ಈ ಲೇಖನದ ಭಾಷೆ ಮತ್ತು ಫಾರ್ಮ್ ಎರಡೂ open ಆಗಿವೆ. ಎಲ್ಲಿಯೂ ಅನಗತ್ಯ cliche ಗಳಿಲ್ಲ, ಅತಿಭಾವುಕ ವರ್ಣನೆಗಳೂ ಇಲ್ಲ, ಅದಕ್ಕೇ ಇಷ್ಟವಾಯಿತು. ಹೀಗೆಯೇ ಬರೆಯುತ್ತ ಹೋದರೆ ಖಂಡಿತ ನಿನ್ನಿಂದ ಒಳ್ಳೆಯ ಕಥೆ- ಕಾದಂಬರಿಗಳನ್ನು ಅಪೇಕ್ಷಿಸಬಹುದು. ಕುಂವಿ ಅವರ ಕೃತಿಗಳನ್ನು ಕೂಡಲೆ ಓದಲು ಶುರುಮಾಡು. ಒಳ್ಳೆಯದಾಗಲಿ- ನಿನ್ನ ಕಾವ್ಯಕ್ಕ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading