ಹಂಗಾಮ ಕಾರ್ನರ್ ನಲ್ಲಿ ಕತೆಯ ಬಾಜೂ ಕೂತು…

ಅದೊಂದು ಮಾತಲ್ಲೇ ಅವಳ ಅಂತಃ ಕರಣ

ಹಾಲುಂಡ ತವರಿಗೆ ಏನೆಂದು ಹಾಡಲೆ
ಹೊಳೆ ದಂಡೆಲಿರುವ ಕರಕಿಯ ಕುಡಿಯಂಗೆ
ಹಬ್ಬಲೇ ಅವರ ರಸಬಳ್ಳಿ
ಒರಿಯಾ ಲೇಖಕ ಗೋದಾವರೀಶ್ ಮಹಾಪಾತ್ರ ಅವರ ನೀಲಾ ಮೇಡಂ ಎಂಬ ಕಥೆಯನ್ನು ಓದಿಕೊಳ್ಳುವಾಗ, ತವರಿನ ಕುರಿತ ಹೆಣ್ಣಿನ ಈ ಎದೆಯಾಳದ ಹಂಬಲ ಮರುದನಿಸಿದಂತಾಗುವುದು ಸುಳ್ಳಲ್ಲ . ಅದೊಂದು ಪುಟ್ಟ ಕಥೆ. ನೀಲಾ ಮೇಡಂ ನಾಯಕಿ. ಅವಳನ್ನು ದುರಂತ ಬೆಂಬತ್ತಿಯೇ ಬಂದಿದೆ.
ಅದನ್ನು ಮೀರಿಯು  ನಮ್ಮೊಳಗೊಂದು ಕಲರವವನ್ನು ತಂದು  ಸುರಿಯುವುದು  ಅವಳ ಅಂತಃ  ಶಕ್ತಿ .ನೀಲಾ ಮೇಡಂ . ಶಾಲಾ  ಶಿಕ್ಷಕಿಯಾಗಿದ್ದುದರಿಂದ  ಅಕೆಗೆ ಆ ಹೆಸರು ಕೂತಿತು. ಆದರೆ ಇದು ಗತವೈಭವ. ಇಂದು ಆಕೆ ಶಿಕ್ಷಕಿಯಲ್ಲ. ಅಗಸಗಿತ್ತಿ.
ಶಿಕ್ಷಕಿಯಾಗಿದ್ದವಳು ಅಗಸಗಿತ್ತಿಯಾದುದು ಹೇಗೆ?   ಈ ಕಥೆಗಿಂತ ಮುಂಚಿನ   ವಿವರಗಳು ಅವಳ  ಕರುಣ ಕಥೆಯನ್ನು ಕಣ್ಣೆದುರು ಹಿಡಿಯುತ್ತವೆ . ಆ ಪುಟ್ಟ  ಬ್ರಾಹ್ಮಣ   ಕುಟುಂಬದಲ್ಲಿ ಅವರು ಮೂವರೇ . ನೀಲಾ ಅವಳ ತಮ್ಮ ಮತ್ತು  ಅವರ ತಂದೆ. ತಾಯಿಯನ್ನು ಅಷ್ಟು  ಚಿಕ್ಕ ವಯಸ್ಸಲ್ಲೇ ಕಳೆದುಕೊಂಡ  ಆ ಮಕ್ಕಳನ್ನು  ತಾಯಿಯಾಗಿಯೂ  ನೋಡಿಕೊಳ್ಳಬೇಕಾದ  ಹೊಣೆ ತಂದೆಯ ಮೇಲೆ . ಪುಟ್ಟ ಹುಡುಗಿ ನೀಲಾ  ಇನ್ನೂ ಜಗತ್ತು ಅರಿಯುವ ಮೊದಲೇ  ವಧುವಾಗಿ ಹಸೆಮಣೆಯೇರಬೇಕಾಯಿತು.
ಹಾಗೆ ಮದುವೆಯಾದ ಆರು ತಿಂಗಳಿಗೇ ವೈಧವ್ಯವೂ ಬಂದುಬಿಟ್ಟಿತು. ಮರಳಿ ತವರಿಗೆ ಬಂದ ಲಮಗಳ ಕೈ ಬಿಡಲಿಲ್ಲ ತಂದೆ. ಓದಿಸಿದರು . ಒಂದು ಶಾಲೆಯ ಶಿಕ್ಷಕಿಯನ್ನಾಗಿಮಾಡಿದರು . ಅನಂತರ ತಂದೆಯೂ ಹೋಗಿಬಿಟ್ಟರು. ಈಗ ತಮ್ಮನ ಜವಬ್ದಾರಿ ನೀಲಾ ಹೆಗಲಿಗೆ . ಅವನನ್ನು  ಒಳ್ಳೆಯ ಮನುಷ್ಯನಾಗಿ ಮಾಡಬೇಕೆಂಬ ಗುರಿ.
ಈ ಮಧ್ಯೆ ನೀಲಾ ಮೇಡಂ ವಯೋಸಹಜ  ಆಕರ್ಷಣೆಯಿಂದಾಗಿ , ನಾಟಕದಲ್ಲಿ ಅರ್ಜುನನ ಪಾತ್ರ ವಹಿಸಿದ್ದ ಮದನ್ ಸೇಠಿ ಎಂಬ ತರುಣನ  ಮೋಹದಲ್ಲಿ ಬಿದ್ದಿದ್ದಳು. ಆತ ಎರಡು ಹಳ್ಳಿಗಳ  ಅಗಸ ಅವನಿಗಾಗಿ ನೀಲಾ  ಎಲ್ಲವನ್ನೂ ಬಿಟ್ಟು ಓಡಿದಳು. ಈಗ ಆಕೆಯ ಬಳಿ ನೀಲಾ ಮೇಡಂ ಎಂಬ ಹೆಸರೊಂದೇ ಉಳಿಯಿತು. ಶಿಕ್ಷಕಿಯ ಕೆಲಸ ಹೋಯಿತು. ಊರವರ ಪ್ರೀತಿಯನ್ನು  ಕಳೆದುಕೊಂಡಾಯಿತು.
ಅದೆಲ್ಲ ಹಾಗಿರಲಿ, ಎಲ್ಲರನ್ನೂ ಎದುರು ಹಾಕಿಕೊಂಡು ಆದ ಮದುವೆಯಿಂದಾದರೂ  ಸುಖ ಸಿಕ್ಕಿತೇ ಎಂದರೆ ಅದೂ ಇಲ್ಲದಂತಾಯಿತು. ಎರಡೇ ತಿಂಗಳು. ಅವನು ಕುಡಿಯುವ ಚಟಕ್ಕೆ ಬಿದ್ದ. ಜಗಳವೆಂಬುವುದು ನಿತ್ಯದ ಅಭ್ಯಾಸವಾಯಿತು. ನೀಲಾ ಪೂರ್ಣ ಪ್ರಮಾಣದಲ್ಲಿ  ಅಗಸಗಿತ್ತಿಯಾಗಿ ಬಟ್ಟೆಯಗಂಟು ಹೊತ್ತು ಕೆರೆಯ ಕಡೆ ಹೋ.
ಗುವುದು ಶುರುವಾಯಿತು.
ಹೀಗೆ ಅವಳ ಬದುಕು ಸಾಗುತ್ತಿರುವಾಗಲೇ  ಪ್ರೇಮದ ಆವೇಶದಲ್ಲಿ  ಅಂದು ಅವಳು ದೂರ ಮಾಡಿ ಬಂದಿದ್ದ  ತಮ್ಮನ ಮನೆಯಲ್ಲಿ ಮದುವೆಯ  ಸಡಗರವೆದ್ದಿದೆ. ಸೊಸೆಯಾಗುವವಳ ಸೀರೆಯನ್ನು  ನೀಲಾಳ ನೆರೆಮನೆಯ ಸೊಸೆ ಒಗೆಯಲು  ತಂದಿದ್ದಾಳೆ. ಅದನ್ನು  ತಾನು ಒಗೆಯುವುದಾಗಿ ಆಸೆಯಿಂದ ಕೇಳಿ ತೆಗೆದು ಕೊಳ್ಳುವ ನೀಲಾ , ತನ್ನ ತಮ್ಮನ ಮನೆಗೆ ಬಾರದ ಹೊರತು ಸೀರೆಯನ್ನು  ಹಿಂತಿರುಗಿಸಲಾರೆ ಎಂದು ಹಠ ಮಾಡುತ್ತಾಳೆ.
ಅವಳ  ಈ ಹಠ  ಆಕೆ ಹುಟ್ಟಿದ್ದ ಗ್ರಾಮದಲ್ಲಿ ಮತ್ತು ಆಕೆ ಶಿಕ್ಷಕಿಯಾಗಿದ್ದ ಹಳ್ಳಿಯಲ್ಲಿ ಕೋಲಾಹಲಕ್ಕೆ ಕಾರಣವಾಗುತ್ತದೆ.
ಇದೆಲ್ಲದರ ನಡುವೆಯೇ ಅಕ್ಕನ ಮನೆಗೆ ಹೋಗಬೇಕೆ  ಬೇಡವೇ ಎಂಬ ಗೊಂದಲದಲ್ಲೇ ಅವಳ  ತಮ್ಮ ತಮಗರಿವಿಲ್ಲದೆ ಬಂದುಬಿಡುತ್ತಾನೆ . ಅಕ್ಕಾ ಅನ್ನುತ್ತಾನೆ. ಅಷ್ಟು ಸಾಕಾಗುತ್ತದೆ ಅವಳಿಗೆ ಕಣ್ಣೀರಾಗುತ್ತಾಳೆ. ತಮ್ಮನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಅನಂತರ ನಾನಂತೂ ಓಡಿ ಬಂದೆ, ನೀನೂ ನನ್ನ ಹಿಂದೆ ಬರೋದು ಸರಿಯಲ್ಲ  ಹೊರಟುಬಿಡು  ಎಂದು ಕಳಿಸಿಬಿಡುತ್ತಾಳೆ.
ಇದೊಂದು ಮಾತಲ್ಲೇ ಅವಳ ಅಂತಃ ಕರಣದ ಹೊಳಹು ಇದೆ ಮತ್ತು ಆ ಹೊಳಹು ಎಲ್ಲ ಹುಡುಗಿಯರ ಅಂತಃ ಕರಣದ  ಬೆಳಕನ್ನೂ ಲೇಪಿಸಿಕೊಂಡದ್ದಾಗಿದೆ

‍ಲೇಖಕರು avadhi

November 27, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: